ಅತ್ಯಾಚಾರ ಯತ್ನ ವಿಫಲವಾದ ನಂತರ ಆರು ವರ್ಷದ ಬಾಲಕಿಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ, ಆಕೆಯ ಗುರುತನ್ನು ಮರೆಮಾಚುವ ಸಲುವಾಗಿ ತಲೆಯನ್ನು ಕಲ್ಲಿನಿಂದ ಜಜ್ಜಿಹಾಕಲಾಗಿದೆ ಎಂದು ಆಗ್ರಾ ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ.
ಬಿಡಾಡಿ ದನಗಳಿಂದ ಬೆಳೆಗಳನ್ನು ರಕ್ಷಿಸಲು ನೇಮಿಸಿಕೊಂಡಿದ್ದ 43 ವರ್ಷದ ಖಾಸಗಿ ಕಾವಲುಗಾರನನ್ನು ಬಾಲಕಿಯನ್ನು ಕೊಂದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ಕಾವಲುಗಾರ ರಾಜವೀರ್ ಸಿಂಗ್ ಮೊದಲು ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಆತ ಯಶಸ್ವಿಯಾಗದಿದ್ದಾಗ, ಹೊಲದಲ್ಲಿನ ನೀರಿನ ತೊಟ್ಟಿಯಲ್ಲಿ ಬಾಲಕಿಯನ್ನು ಮುಳುಗಿಸಿ ಕೊಲೆ ಮಾಡಿದ್ದಾನೆ.
ಡಿಸೆಂಬರ್ 30ರಂದು ಆಗ್ರಾ ಜಿಲ್ಲೆಯ ಎತ್ಮಾದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಆರು ವರ್ಷದ ಬಾಲಕಿಯ ಶವ ಪತ್ತೆಯಾಗಿತ್ತು. ತಂದೆಯ ದೂರಿನಂತೆ, ಎತ್ಮಾದ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನಗರ) ಸೂರಜ್ ಕುಮಾರ್ ರೈ ಸುದ್ದಿಗಾರರಿಗೆ ತಿಳಿಸಿದರು.
ರಾಜ್ವೀರ್ ಸಿಂಗ್ ಸ್ವಲ್ಪ ಸಮಯದವರೆಗೆ ಹುಡುಗಿಯನ್ನು ಪತ್ತೆಹಚ್ಚಲು ಗ್ರಾಮಸ್ಥರಿಗೆ ಸಹಾಯ ಮಾಡುವಂತೆ ನಟಿಸಿದ್ದಾನೆ. ಆದರೆ, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಬಾಲಕಿಯೊಂದಿಗೆ ಕೊನೆಯದಾಗಿ ಆತ ಕಾಣಿಸಿಕೊಂಡಿದ್ದಾಗಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ, ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಗದ್ದೆಯಲ್ಲಿ ಬಾಲಕಿಯನ್ನು ಹಿಡಿದು ಅತ್ಯಾಚಾರಕ್ಕೆ ಪ್ರಯತ್ನಿಸಿರುವುದಾಗಿ ಪೊಲೀಸರ ವಿಚಾರಣೆಯ ಸಮಯದಲ್ಲಿ ರಾಜವೀರ್ ಸಿಂಗ್ ತಪ್ಪು ಒಪ್ಪಿಕೊಂಡಿದ್ದಾನೆ. ಅತ್ಯಾಚಾರ ಯತ್ನ ವಿಫಲವಾದ ನಂತರ ಅವನು ಬಾಲಕಿಯನ್ನು ಗದ್ದೆಯ ನೀರಿನ ಟ್ಯಾಂಕಿನಲ್ಲಿ ಮುಳುಗಿಸಿದ್ದಾನೆ. ಗುರುತು ಸಿಗಬಾರದು ಎಂಬ ಕಾರಣಕ್ಕೆ ತಲೆಯ ಮೇಲೆ ಕಲ್ಲು ಹಾಕಿದ್ದಾನೆ ಎಂದು ರೈ ಮಾಹಿತಿ ನೀಡಿದರು.
ರಾಜವೀರ್ ಸಿಂಗ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಆತನ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ; ಪೋಕ್ಸೊ ಪ್ರಕರಣದಲ್ಲಿ ಅಮಾನವೀಯ ವರ್ತನೆ: ನ್ಯಾಯಾಧೀಶರಿಗೆ ತರಬೇತಿ ಪಡೆಯಲು ಸೂಚಿಸಿದ ಹೈಕೋರ್ಟ್


