ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ಮಾಡುತ್ತಿರುವ ಪ್ರತಿಭಟನೆಯನ್ನು 2024 ರವರೆಗೆ ಮುಂದುವರೆಸಲು ರೈತರು ಶಕ್ತರಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಭಾನುವಾರ ಹೇಳಿದ್ದಾರೆ. ಜೊತೆಗೆ ಇದನ್ನು “ಸೈದ್ಧಾಂತಿಕ ಕ್ರಾಂತಿ” ಎಂದು ಬಣ್ಣಿಸಿದ್ದಾರೆ.
ನಾಗ್ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನು ಖಾತರಿಯಾಗಬೇಕು ಎಂದು ಹೇಳಿದ್ದಾರೆ.
ರೈತರು ಇನ್ನೂ ಎಷ್ಟು ದಿನ ಪ್ರತಿಭಟನೆ ಮಾಡಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟಿಕಾಯತ್, “ನಾವು ಮೇ 2024 ರವರೆಗೂ ಪ್ರತಿಭಟನೆ ಮಾಡಲು ಸಿದ್ಧರಿದ್ದೇವೆ. ಮೂರು ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಗೆ ಸರ್ಕಾರ ಕಾನೂನು ಖಾತರಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ರೈತಹೋರಾಟ: ರೈತರ ಮೀಸೆ, ದಾಡಿ ಚೆಂದಗೊಳಿಸಲು ಕುಂಡಲ್ ಸೇವೆಗೆ ಮುಂದಾದ ಗುರ್‌ಜಾನ್ ಸಿಂಗ್..!
“ಇದು ದೆಹಲಿಯಿಂದ ಪ್ರಾರಂಭವಾದ ರೈತರ ಸೈದ್ಧಾಂತಿಕ ಕ್ರಾಂತಿಯಾಗಿದೆ. ಇದು ವಿಫಲವಾಗುವುದಿಲ್ಲ. ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯುವವರೆಗೆ ನಾವು ಹಿಂತಿರುಗಲು ನಮ್ಮ ಹಳ್ಳಿಗಳ ರೈತರು ಬಯಸುವುದಿಲ್ಲ. ಮಸೂದೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಸರ್ಕಾರದ ನಿಲುವು ಅಚಲವಾಗಿದೆ. ಈ ಆಂದೋಲನ ದೀರ್ಘಕಾಲ ಮುಂದುವರಿಯಲಿದೆ” ಎಂದು ಹೇಳಿದರು.
“ದೇಶದ ವಿರೋಧ ಪಕ್ಷಗಳು ದುರ್ಬಲವಾಗಿವೆ. ಅದಕ್ಕಾಗಿಯೇ ರೈತರು ಕೇಂದ್ರದ ಹೊಸ ಕಾನೂನುಗಳ ವಿರುದ್ಧ ಈ ಆಂದೋಲನವನ್ನು ಪ್ರಾರಂಭಿಸಬೇಕಾಯಿತು” ಎಂದು ಆರೋಪಿಸಿದರು.
ಇದನ್ನೂ ಓದಿ: ತಪ್ಪೊಪ್ಪಿಕೊಂಡು ಕಾಯ್ದೆ ಹಿಂಪಡೆಯಿರಿ: ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರಿಂದ ಪ್ರಧಾನಿಗೆ ಪತ್ರ
ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ 2020 ರ ನವೆಂಬರ್ 26 ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾನೂನುಗಳು ಕಾರ್ಪೊರೇಟ್‌ಗಳ ಪರವಾಗಿದ್ದು, ಇದು ಕನಿಷ್ಟ ಬೆಂಬಲ ಬೆಲೆ ಮತ್ತು ಮಂಡಿ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ ಎಂದು ರೈತರು ಆರೋಪಿಸಿದ್ದಾರೆ.
ಜನವರಿ 12 ರಂದು ಸುಪ್ರೀಂ ಕೋರ್ಟ್ ಮೂರು ಹೊಸ ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಆದೇಶ ಹೊರಡಿಸಿತ್ತು. ರೈತರ ಸಮಸ್ಯೆಯನ್ನು ಪರಿಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಿತು. ಆದರೆ ಹೋರಾಟ ನಿರತ ರೈತರು ಈ ಸಮಿತಿಯ ಭಾಗವಾಗುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಹೋರಾಟ ನಿರತ ರೈತರ ಸೇವೆಗಾಗಿ ವಿದೇಶಿ ಕೆಲಸದ ಅವಕಾಶ ತೊರೆದ ಯುವಕ..!


