ರೈತ ಹೋರಾಟ 50 ದಿನಗಳನ್ನು ದಾಟಿದರೂ ಪ್ರತಿಭಟನಾಕಾರರ ಹುಮ್ಮಸ್ಸು ಕೊಂಚವು ತಗ್ಗಿಲ್ಲ. ಸಿಂಘು, ಟಿಕ್ರಿ, ಶಹಜಾನ್‌ಪುರ್, ಗಾಝಿಪುರ್ ಮತ್ತು ಚಿಲ್ಲಾ ಗಡಿಗಳಲ್ಲಿ ಪ್ರತಿಭಟನಾಕಾರರ ಜೊತೆಗೆ ಬಂದು ಸೇರಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೇವೆ ಮಾಡಲು ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಈಗಾಗಲೇ ಪ್ರತಿಭಟನಾ ಸ್ಥಳಗಳಲ್ಲಿ ಅನೇಕ ಮಂದಿ ಕಟ್ಟಿಂಗ್, ಶೇವಿಂಗ್ ಮಾಡುವವರು ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಡುವೆಯೇ ಪಂಜಾಬ್‌ನ ಲೂದಿಯಾನದಿಂದ ಯುವಕರೊಬ್ಬರು ಆಗಮಿಸಿದ್ದು, ಪ್ರತಿಭಟನಾ ನಿರತ ರೈತರಿಗೆ ಕುಂಡಲ್ ಸೇವೆ ನೀಡುತ್ತಿದ್ದಾರೆ.
ಹೌದು, ಸಿಖ್ ಜನಾಂಗದಲ್ಲಿ ಮೀಸೆ ಮತ್ತು ದಾಡಿಗೆ ವಿಶೇಷ ಸ್ಥಾನವಿದೆ. ಅವುಗಳನ್ನು ಆದಷ್ಟು ಸುಂದರವಾಗಿರಿಸಿಕೊಳ್ಳಲು ಈ ಸಮುದಾಯದವರು ಆಸಕ್ತಿ ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮೀಸೆ ಮತ್ತು ದಾಡಿಯನ್ನು ಸುಂದರಗೊಳಿಸುವ, ಅವುಗಳನ್ನು ಗುಂಗುರು (ರಿಂಕಲ್) ಮಾಡುವ ಅನೇಕ ಅಂಗಡಿಗಳು ಎಲ್ಲೆಡೆ ಇರುತ್ತವೆ. ಇಂತಹದ್ದೇ ಒಂದು ಅಂಗಡಿ ನಡೆಸುತ್ತಿದ್ದ ಲೂದಿಯಾನದ ಯುವಕ ಗುರ್‌ಜಾನ್ ಸಿಂಗ್, ಕಳೆದೆರಡು ದಿನಗಳಿಂದ ಸಿಂಘು ಗಡಿಯಲ್ಲಿ ಉಚಿತ ಕುಂಡಲ್ ಸೇವೆ ನೀಡುತ್ತಿದ್ದಾರೆ.
ಬ್ಯೂಟಿ ಪಾರ್ಲರ್‌ಗಳಲ್ಲಿ ಹೇಗೆ ತಲೆ ಕೂದಲನ್ನು ಗುಂಗುರುಗೊಳಿಸಲಾಗುತ್ತದೆಯೋ ಅದೇ ವಿಧಾನವನ್ನು ದಾಡಿ ಮತ್ತು ಮೀಸೆಗೂ ಬಳಸಲಾಗುತ್ತದೆ. ಮೀಸೆಯನ್ನು ಮತ್ತಷ್ಟು ತಿರುಚಿ ಕೆಲವು ರಾಸಾಯನಿಕಗಳನ್ನು ಬಳಸಿ ಅದಕ್ಕೆ ಕ್ಲಿಪ್ ಮತ್ತು ಮರದ ಚಿಕ್ಕ ತುಂಡನ್ನು ಹಾಕಿ ಬಂಧಿಸಲಾಗುತ್ತದೆ. ಇದೇ ರೀತಿ ದಾಡಿಯ ಕೂದಲನ್ನು ಹಲವಾರು ವಿಶೇಷ ಕ್ಲಿಪ್ ಮತ್ತು ಹೇರ್‌ಪೀನ್‌ಗಳನ್ನು ಬಳಸಿ, ರಾಸಾಯನಿಕ ಹಾಕಿ ಗಂಟು ಕಟ್ಟಲಾಗುತ್ತದೆ. ಬಳಿಕ ಒಂದು ಗಂಟೆಯ ನಂತರ ಕ್ಲಿಪ್‌ಗಳನ್ನು ತೆಗೆದು ಮೀಸೆ ಮತ್ತು ದಾಡಿಯನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ರೀತಿಯಲ್ಲಿ ಒಂದು ಗಂಟೆ ಇರಿಸಿದ ಬಳಿಕ ಮೀಸೆ ಮತ್ತು ದಾಡಿಗೆ ಹೊಸ ರೂಪ ಬರುತ್ತದೆ. ಇದನ್ನು ಕುಂಡಲ್ ಎಂದು ಕರೆಯಲಾಗುತ್ತದೆ.
ಲೂದಿಯಾನದಲ್ಲಿ ಈ ಕೆಲಸಕ್ಕೆ ಒಬ್ಬರಿಗೆ 600 ರಿಂದ 500 ರೂಪಾಯಿ ಚಾರ್ಜ್ ಮಾಡುತ್ತಿದ್ದ ಗುರ್‌ಜಾನ್ ಸಿಂಗ್ ಇಲ್ಲಿ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಯುವಕ ಗುರ್‌ಜಾನ್ ಸಿಂಗ್, ʼಊರಿನಲ್ಲಿ ನಾನು ಮೆನ್ಸ್ ಪಾರ್ಲರ್ ಇಟ್ಟುಕೊಂಡಿದ್ದೇನೆ. ಅಲ್ಲಿ ಪ್ರತಿ ದಿನ ಸಾವಿರಾರು ರೂಪಾಯಿ ಸಂಪಾದಿಸುತ್ತಿದೆ. ಆದರೆ, ಸರ್ಕಾರ ಜಾರಿಗೊಳಿಸಿದ ಈ ಕಾನೂನುಗಳಿಂದ ನನ್ನ ಜನರೆಲ್ಲಾ ಊರು ಬಿಟ್ಟು ಈ ಊರಿಗೆ ಬಂದು ಕುಳಿತಿದ್ದಾರೆ. ಹಾಗಾಗಿ ನನಗೆ ಊರಿನಲ್ಲಿ ಕೆಲಸವಿಲ್ಲದಂತಾಯಿತುʼ ಎಂದಿದ್ದಾರೆ.
ಜನರೆಲ್ಲ ಇಲ್ಲಿ ಬಂದ ಮೇಲೆ ನಾನು ಅಲ್ಲಿದ್ದು ಮಾಡುವುದೇನು..? ಅದೇ ಕೆಲಸ ಇಲ್ಲಿ ಮಾಡಿದರೇ ಆಗದೆ ಎನ್ನಿಸಿತು. ಅದಕ್ಕೆ ನಾನು ನನ್ನ ಅಂಗಡಿಯನ್ನು ಇಲ್ಲಿಗೆ ಬದಲಾಯಿಸಿದ್ದೇನೆ. ಹೊಟ್ಟೆ ಪಾಡಿಗೆ ಈ ಕೆಲಸ ಮಾಡುತ್ತಿದ್ದೆ. ಇಲ್ಲಿ ಹಣವಿಲ್ಲದಿದ್ದರೂ ಹೊಟ್ಟೆಗೆ ಊಟ ದೊರೆಯುತ್ತಿದೆ. ಹಾಗಾಗಿ ನನ್ನಿಂದ ಆಗುವ ಈ ಸೇವೆಯನ್ನು ನಾನು ಮಾಡುತ್ತಿದ್ದೇನೆ. ಇನ್ನೆನಿದ್ದರೂ ನನ್ನವರು ನನ್ನ ಊರಿಗೆ ಬರುವವರೆಗೆ ನಾನು ಇಲ್ಲಿಯೇ ಇರುತ್ತೇನೆ. ಈ ಹೋರಾಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಸರ್ಕಾರ ನಮ್ಮ ಮಾತು ಕೇಳಲೇಬೇಕುʼ ಎಂದು ಹೇಳುತ್ತಾರೆ ಗುರ್‌ಜಾನ್ ಸಿಂಗ್.
ಹೋರಾಟಗಳು ದಿನೇ-ದಿನೇ ತಮ್ಮ ಹುಮ್ಮಸ್ಸು ಕಳೆದುಕೊಂಡು ತಣ್ಣಗಾಗುವುದನ್ನು ನಾವು ನೋಡಿದ್ದೇವೆ. ಆದರೆ, ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಈ ರೈತ ಹೋರಾಟ ಹೊಸತನಕ್ಕೆ ಸಾಕ್ಷಿಯಾಗಿದೆ. ದಿನೇ ದಿನೇ ಇದು ರಂಗೇರುತ್ತಿದೆ.
ಇದನ್ನೂ ಓದಿ: ಮೃದು ಧೋರಣೆ ತಳೆಯಿರಿ ಎಂದ ಕೇಂದ್ರ: ರೈತರೊಂದಿಗಿನ 9ನೇ ಸುತ್ತಿನ ಮಾತುಕತೆ ವಿಫಲ