ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 9ನೇ ಸುತ್ತಿನ ಮಾತುಕತೆಯ ನಡೆಯುವುದೋ ಇಲ್ಲವೋ ಎಂಬ ಗೊಂದಲದ ನಡುವೆಯೇ ವಿಜ್ಞಾನ್ ಭವನದಲ್ಲಿ ಹೋರಾಟ ನಿರತ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಸಭೆ ನಡೆಯಿತು.
ಸರ್ಕಾರದ ಪ್ರತಿನಿಧಿಗಳಾಗಿ ರೈಲ್ವೆ ಹಾಗೂ ಆಹಾರ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಮತ್ತು ವಾಣಿಜ್ಯ ರಾಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಸಭೆಯಲ್ಲಿ ಪಾಲ್ಗೊಂಡಿದ್ದರು. ರೈತರ ಪ್ರತಿನಿಧಿಗಳಾಗಿ 40 ಸಂಘಟನೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಕೆಎಫ್‌ಸಿ ಎಂದರೆ ಏನು ಗೊತ್ತಾ…? ನಮ್ಮ ರೈತರು ಹೇಳುತ್ತಾರೆ ಕೇಳಿ..!
ಕೃಷಿ ಸಚಿವ ತೋಮರ್ ಮಾತುಕತೆಗೆ ಚಾಲನೆ ನೀಡಿ, “ನೀವು ಸರ್ಕಾರ ಪಟ್ಟು ಹಿಡಿದಿದೆ, ಇದನ್ನು ಅಹಂಕಾರದ ವಿಷಯವನ್ನಾಗಿ ಮಾಡಿಕೊಂಡಿದೆ ಎಂದು ಹೇಳುತ್ತೀರಿ. ಆದರೆ ನಾವು ನಿಮ್ಮ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದೇವೆ. ಕಾಯ್ದೆ ಹಿಂಪಡೆಯುವ ಒಂದು ಬೇಡಿಕೆಗೆ ಅಂಟಿಕೊಳ್ಳುವ ಬದಲು ಸ್ವಲ್ಪ ಮೃದು ಧೋರಣೆ ತಳೆಯಬಾರದೇಕೆ?” ಎಂದು ರೈತ ಮುಖಂಡರಿಗೆ ಕೇಳಿದ್ದಾಗಿ ಸಭೆಯಲ್ಲಿ ಪಾಲ್ಗೊಂಡ ನಾಯಕರು ಮಾಧ್ಯಮಗಳಿಗೆ ತಿಳಿಸಿದರು.
ಸಭೆಯಲ್ಲಿ ಸಚಿವ ತೋಮರ್, ಸುಪ್ರೀಂ ಕೋರ್ಟ್ ತಜ್ಞರ ಸಮಿತಿ ರಚಿಸಿ ಎಂದು ನೀಡಿದ ಆದೇಶವನ್ನು ಸ್ವಾಗತಿಸಿ, “ನಾವು ಸಮಿತಿ ಎದುರು ನಮ್ಮ ವಾದವನ್ನು ಮಂಡಿಸುತ್ತೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!
ಜ.19ರಂದು ಕರೆಯಲಾಗಿರುವ ಈ ತಜ್ಞರ ಸಮಿತಿ ಸಭೆಯಲ್ಲಿ ರೈತ ಮುಖಂಡರು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಸಮಿತಿಯ ಸದಸ್ಯರು ಈಗಾಗಲೇ ಕಾಯ್ದೆ ಪರವಾಗಿರುವುದಾಗಿ ತಮ್ಮ ಹೇಳಿಕೆಗಳಿಂದ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾವು ಸಮಿತಿಯ ಬದಲು ಸರ್ಕಾರದೊಂದಿಗೇ ಮಾತುಕತೆ ಮುಂದುವರೆಸಲು ಸಿದ್ಧರಿದ್ದೇವೆ ಎಂದು ರೈತ ನಾಯಕರು ತಿಳಿಸಿದ್ದಾರೆ.
ರೈತ ಹೋರಾಟದ ಬಗ್ಗೆ ಕಾಳಜಿ ತೋರಿ, ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ಈಗಾಗಲೇ ಭೂಪಿಂದರ್ ಸಿಂಗ್ ಮಾನ್ ಹೊರಬಂದಿದ್ದು, ಇನ್ನೊಬ್ಬ ಸದಸ್ಯರು ಹೊರಬರುವ ನಿರೀಕ್ಷೆ ಇದೆ ಎಂದು ರೈತ ಸಂಘಟನೆಗಳ ನಾಯಕರು ಹೇಳಿದ್ದಾರೆ.
ಈ ಸಭೆಯಲ್ಲಿ ರೈತ ಮುಖಂಡರು ಯಾವುದೇ ರೀತಿಯಲ್ಲೂ ಸರ್ಕಾರದ ಮನವಿಗಳಿಗೆ ಸ್ಪಂದಿಸದೇ ಸಭೆ ಅಂತ್ಯಗೊಂಡಿತು.
ಇದನ್ನೂ ಓದಿ: ರೈತರ ಪ್ರತಿರೋಧದ ಹಿನ್ನೆಲೆ: ಸುಪ್ರೀಂ ಸಮಿತಿಯಿಂದ ಸ್ವಯಂ ಹೊರನಡೆದ ಭೂಪಿಂದರ್ ಮನ್