ಕೊರೊನಾ ವೈರಸ್ ಎಂಬ ಇದುವರೆಗೂ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಿದ್ಯಮಾನ, ಜನರು ಇದುವರೆಗೆ ಪಾಲಿಸಿಕೊಂಡು ಬಂದಿದ್ದ ತಮ್ಮ ಸಾಮಾಜಿಕ ಅಭ್ಯಾಸಗಳನ್ನು ಮತ್ತು ರೂಢಿಗಳನ್ನು ಮರುಪರಿಶೀಲಿಸಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಇವುಗಳಲ್ಲಿ ಒಂದು ಅಪರಾಧಕ್ಕೆ ಸಂಬಂಧಿಸಿದ ನಮ್ಮ ಧೋರಣೆಗಳು.
ಇತ್ತೀಚೆಗೆ ಜಯರಾಜ್ ಮತ್ತು ಬೆನಿಕ್ಸ್ (ತಂದೆ ಮತ್ತು ಮಗ), ತೂತುಕುಡಿಯ ಸಾತಾನ್‌ಕುಳಂ ಪೋಲಿಸ್ ಸ್ಟೇಷನ್‌ನ ರಘು ಗಣೇಶ್ ಮತ್ತು ಬಾಲಕೃಷ್ಣನ್ ಎಂಬ ಸಬ್ ಇನ್ಸ್ಪೆಕ್ಟರ್‌ಗಳ ಹಿಂಸೆ ಮತ್ತು ಥಳಿತದಿಂದ ಸಾವಿಗೀಡಾದರು. ಸಹಜವಾಗಿಯೇ ತಮಿಳುನಾಡಿನ ಸಿಐಡಿ, ಈ ಪೊಲೀಸರನ್ನು ಬಂಧಿಸಿತು; ಹೈಕೋರ್ಟಿನ ಮಧುರೈ ಬೆಂಚು ಪ್ರಕರಣದ ಕುರಿತು ತನಿಖೆ ನಡೆಸಲು ಆದೇಶಿಸಿತು ಮತ್ತು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಿಬಿಐಗೆ ತಿಳಿಸಲಾಯಿತು.
ಇದರಲ್ಲಿ ಯಾವುದು ಅಸಹಜ ಎಂದರೆ ‘ಅಪರಾಧ’ವೆಂದು ಪರಿಗಣಿಸಲಾದ ಆ ಕೃತ್ಯ. ಕೊಲೆಗೀಡಾದ ಈ ಇಬ್ಬರು ತಮ್ಮ ಸಣ್ಣ ಅಂಗಡಿಯ ಕದ ಮುಚ್ಚುವಲ್ಲಿ ಅರ್ಧ ಗಂಟೆ ತಡ ಮಾಡಿದ್ದರು. ಕೊರೊನಾಕ್ಕೆ ಸಂಬಂಧಿಸಿದ ನಿರ್ಬಂಧದಂತೆ ವ್ಯಾಪಾರ ವಹಿವಾಟುಗಳು ಇಂತಿಷ್ಟೇ ಹೊತ್ತು ಮಾತ್ರ ನಿಗದಿಪಡಿಸಿರುವುದರಿಂದ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು ಈ ಸಂಗತಿಯನ್ನು ನಿಯಮಗಳ ಉಲ್ಲಂಘನೆಯೆಂದು ಪರಿಗಣಿಸಿದ್ದರು. ಇದರಿಂದಾಗಿ ಕೊಲೆಗಾರರು ಮತ್ತು ಕೊಲ್ಲಲ್ಪಟ್ಟವರೂ ಸೇರಿ ಒಟ್ಟು ನಾಲ್ಕು ಮಂದಿ ಮತ್ತು ಅವರ ಕುಟುಂಬಗಳು ದುರಂತವನ್ನು ಕಾಣಬೇಕಾಯಿತು.

ಪೊಲೀಸರ ಈ ಹೇಯ ಕ್ರೌರ್ಯವನ್ನು ಯಾವುದೇ ನಾಗರಿಕ ಸಮಾಜ ಸಮರ್ಥಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ಬಾಗಿಲು ತಡವಾಗಿ ಮುಚ್ಚಿದ ಸಂಗತಿಗೆ ಸಂಬಂಧಿಸಿದಂತೆ ಅಪರಾಧದ ಪರಿಕಲ್ಪನೆಯನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಸಮಾಜಶಾಸ್ತ್ರಜ್ಞ, ಎಮಿಲಿ ಡೆರ್‍ಖೈಮ್, ದಶಕಗಳ ಹಿಂದೆಯೇ ಯಾವುದನ್ನು ಸಾಂಪ್ರದಾಯಿಕ ನ್ಯಾಯ ತೀರ್ಮಾನದ ಮೂಲಕ ಅಪರಾಧ ಅಥವಾ ಅಪರಾಧವಿರಬಹುದು ಎಂದು ಪರಿಗಣಿಸಲಾಗುತ್ತದೋ ಅದರ ಹಿಂದೆ ಮೊತ್ತಮೊದಲನೆಯದಾಗಿ, ಅಂತಹ ದೊಡ್ಡ ಸಂಗತಿಯೇ ಇಲ್ಲದಿರಬಹುದು ಎಂದು ಹೇಳಿದ್ದರು.
ಅವರು ತಮ್ಮ ಕೃತಿ ‘ದಿ ರೂಲ್ಸ್ ಆಫ್ ಸೋಷಿಯಲಾಜಿಕಲ್ ಮೆಥಡ್‌ನಲ್ಲಿ (1) “ಕೇವಲ ಸಂತರೇ ಇರುವಂತಹ ಸಮಾಜವನ್ನು ಕಲ್ಪಿಸಿಕೊಳ್ಳಿ, ಆದರ್ಶ ಜನರೇ ತುಂಬಿರುವ ಪರಿಪೂರ್ಣ ಪರಿಸರ. ನಿಜವಾದ ಅರ್ಥದಲ್ಲಿ ಅಪರಾಧಗಳು ಅಲ್ಲಿನವರಿಗೆ ಅರಿಯದ ವಿಚಾರ. ಆದರೆ ಸಾಮಾನ್ಯ ಮನುಷ್ಯರ ಮಟ್ಟಿಗೆ ಕ್ಷುಲ್ಲಕವೆನಿಸುವ ತಪ್ಪುಗಳೂ ಅಲ್ಲಿ ದೊಡ್ಡ ಪ್ರಮಾದಗಳಂತೆ ಕಾಣುತ್ತವೆ. ಆದರೆ ಆಗಲೂ ಸಮಾಜ ನ್ಯಾಯ ತೀರ್ಮಾನ ಮಾಡುವ ಮತ್ತು ಶಿಕ್ಷಿಸುವ ಅಧಿಕಾರ ಹೊಂದಿದ್ದರೆ, ಈ ಕೃತ್ಯಗಳನ್ನು ಅದು ಅಪರಾಧ ಎಂದು ವ್ಯಾಖ್ಯಾನಿಸುತ್ತದೆ ಮತ್ತು ಇವುಗಳನ್ನು ಹಾಗೆಯೇ ನೋಡುತ್ತದೆ.”
ಈ ವಿಚಿತ್ರ ಘಟನೆ ಕೇವಲ ಒಂದು ಅಪವಾದವಾಗಿದ್ದರೆ ಈ ಪ್ರಶ್ನೆ ಅಷ್ಟೊಂದು ತುರ್ತಿನದ್ದಾಗಿರುತ್ತಿರಲಿಲ್ಲ. ಇನ್ನೂ ಹಲವು ಘಟನೆಗಳು ನಮ್ಮ ಮುಂದಿವೆ, ಗುಂಪು ಹತ್ಯೆ, ವ್ಯಕ್ತಿ ಸ್ವಾತಂತ್ಯ್ರವನ್ನು ನಿರಾಕರಿಸುವ ಖಾಪ್ ಪಂಚಾಯತ್‌ಗಳು, ಅಂಧಶ್ರದ್ಧೆಯುಳ್ಳ ಸಂಸ್ಥೆಗಳು ಹೊರಡಿಸುವ ಫತ್ವಾಗಳು, ಮಾಧ್ಯಮಗಳು ನಡೆಸುವ ವಿಚಾರಣೆಗಳು, ಭಿನ್ನ ನಿಲುವನ್ನು ಹೊಂದಿರುವವರಿಗೆ ದೇಶದ್ರೋಹಿಗಳ ಹಣೆಪಟ್ಟಿ ಹಚ್ಚುವ ವಿವಿಧ ಸೈದ್ಧಾಂತಿಕ ಸಂಘಟನೆಗಳು ಹೆಚ್ಚುತ್ತಿರುವುದು ಗಂಭೀರ ವಿಶ್ಲೇಷಣೆಯತ್ತ ನಮ್ಮನ್ನು ಸೆಳೆಯುತ್ತದೆ. ಇವುಗಳಲ್ಲಿ ಯಾವೊಂದನ್ನೂ ನಾವು ಸಮರ್ಥಿಸುವುದು ಸಾಧ್ಯವಿಲ್ಲ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿಲ್ಲದೇ ಇದ್ದಲ್ಲಿ ಮತ್ತು ಅದು ತನ್ನ ಸಂವಿಧಾನದ ನಿಯಮಗಳಿಗೆ ಬದ್ಧವಾಗಿರದೇ ಇದ್ದಲ್ಲಿ ಇಂಥವುಗಳನ್ನು ಸಮರ್ಥಿಸುವ ಪ್ರಯತ್ನಕ್ಕೆ ಅವಕಾಶವಿತ್ತು. ಆದರೆ ವೈವಿಧ್ಯಮಯ ಜನರು, ಸಂಸ್ಕೃತಿ, ಭಾಷೆ ಮತ್ತು ನಂಬಿಕೆಗಳು ನ್ಯಾಯ(ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ), ಸ್ವಾತಂತ್ಯ್ರ (ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆ), ಮತ್ತು ಸಮಾನತೆಯನ್ನು (ಸ್ಥಾನಮಾನ ಮತ್ತು ಅವಕಾಶ) ಖಾತ್ರಿಗೊಳಿಸುವ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರಕಟಿಸುವ ಮೂಲಕ ಒಂದು ದೇಶವಾಗಿ ಬೆಸೆದುಕೊಂಡಿವೆ.

ಸಂವಿಧಾನದ ಈ ಪ್ರಸ್ತಾವನೆ ಅದರ ಎಲ್ಲ ಅರ್ಥದಲ್ಲೂ ‘ಸಂಪೂರ್ಣ’ವಾಗಿದೆ. ಆದರೆ ಮೇಲೆ ಹೇಳಲಾದ ಅಪರಾಧದ ವಿವಾದಾಸ್ಪದ ವ್ಯಾಖ್ಯೆಯು ಸಂವಿಧಾನದಲ್ಲಿ ಛಾಪಿಸಲಾದ ಮೌಲ್ಯಗಳಿಗೆ ಸಂವಾದಿಯಾಗಿಲ್ಲ ಎಂಬುದು ವಿಷಾದನೀಯ. ನಾನು ಈ ಹಿನ್ನಲೆಯಲ್ಲಿ ಎರಡು ಬೇರೆ ಬೇರೆಯಾದ, ಆದರೆ ಮೂಲಭೂತವಾಗಿ ಬೆಸೆದುಕೊಂಡಿರುವ ಪ್ರಕರಣಗಳನ್ನು ನಿಮ್ಮ ಮುಂದಿಡುತ್ತೇನೆ.
ಇವುಗಳಲ್ಲಿ ಮೊದಲನೆಯದು ಡಿಎನ್‌ಟಿ(DNT)ಗೆ ಸಂಬಂಧಿಸಿದ್ದರೆ ಎರಡನೆಯದು ಯುಎಪಿಎ(UAPA)ಗೆ ಸಂಬಂಧಿಸಿದ್ದಾಗಿದೆ. ಡಿಎನ್‌ಟಿಯ ವಿಸ್ತೃತ ರೂಪ ಡಿನೋಟಿಫೈಡ್ ಮತ್ತು ಅಲೆಮಾರಿ ಬುಡಕಟ್ಟು ಎಂಬುದಾಗಿದೆ. ಅಪರಾಧದ ಕುರಿತ ನಮ್ಮ ವಸಾಹತುಶಾಹಿ ಆಡಳಿತಗಾರರ ಈ ಮಹಾ ತಪ್ಪುಗ್ರಹಿಕೆಗೆ 150 ವರ್ಷಗಳು ಸಮೀಪಿಸುತ್ತಿದ್ದಂತೆ ಇದನ್ನು ತೆರೆದಿಡುವುದು ಅಗತ್ಯವಾಗಿದೆ.
1820 ರ ಸಂದರ್ಭದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳು ರಾಜ್ಯಗಳಿಂದ ಪ್ರತ್ಯೇಕವಾದ ಆದರೆ ಇನ್ನೂ ಶಸ್ತಾಸ್ತ್ರಗಳನ್ನು ಹೊಂದಿರುವ ಸಣ್ಣ ಅಲೆಮಾರಿ ಗುಂಪುಗಳ ಸೈನಿಕರನ್ನು ಕುರಿತು ಆತಂಕಿತರಾದರು. ಇವರನ್ನು ಶಸ್ತಾಸ್ತ್ರರಹಿತರಾಗಿಸಲು ಮತ್ತು ಇವರಿಂದ ಒದಗಬಹುದಾದ ಅಪಾಯಗಳನ್ನು ಇಲ್ಲವಾಗಿಸಲು ಆಡಳಿತವು ‘ಕಣ್ಗಾವಲು ಮತ್ತು ಸಮೀಕ್ಷಾ’ಯೋಜನೆಯನ್ನು ಆರಂಭಿಸಿತು. ಮೂಲತಃ ಸೈನಿಕ ತರಬೇತಿ ಪಡೆದಿದ್ದ ವಿಲಿಯಂ ಹೆನ್ರಿ ಸ್ಲೀಮನ್, (1788-1856) ಅವರನ್ನು ಯೋಜನೆಯ ಮುಖ್ಯಸ್ಥನನ್ನಾಗಿ ನೇಮಿಸಲಾಯಿತು. ನಂತರದ ಕೆಲವು ದಶಕಗಳ ಕಾಲ ಸ್ಲೀಮನ್ ಮಧ್ಯ ಭಾರತದಲ್ಲಿ ನಡೆದ ಸಶಸ್ತ್ರ ಕಾದಾಟದ ದಾಖಲೆಗಳನ್ನು ನಿಖರವಾಗಿ ಇಟ್ಟುಕೊಂಡ. ಮತ್ತು ಅವುಗಳಲ್ಲಿ ಪಾಲ್ಗೊಂಡ ಜನರ ಪಟ್ಟಿಯನ್ನು ಜಾತಿಗನುಗುಣವಾಗಿ ಸಿದ್ಧಪಡಿಸಿದ.
1870ರಲ್ಲಿ, ಅಂದರೆ 150 ವರ್ಷಗಳ ಹಿಂದೆ ಆಗಷ್ಟೇ ಭಾರತಕ್ಕೆ ವೈಸ್‌ರಾಯ್ ಆಗಿ ಕಳುಹಿಸಲಾಗಿದ್ದ ಲಾರ್ಡ್ ಮೇಯೋ, ಈ ಕುರಿತು ಕಾನೂನು ರೂಪಿಸುವ ನಿಟ್ಟಿನಲ್ಲಿ ಮುಂದಾದ ಮತ್ತು 1871 ಅಕ್ಟೋಬರ್‌ನಲ್ಲಿ ಮೊತ್ತಮೊದಲನೆಯ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’(ಸಿಟಿಎ) ಅನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಈ ಹಿಂದೆ ಸ್ಲೀಮನ್ ಸಿದ್ಧಪಡಿಸಿದ್ದ ಪಟ್ಟಿಯಿಂದ ತೆಗೆದುಕೊಂಡ ಜಾತಿ ಮತ್ತು ಸಮುದಾಯಗಳ ಹೆಸರುಗಳನ್ನು ಲಗತ್ತಿಸಲಾಯಿತು.
ಅಪರಾಧವನ್ನು ಆನುವಂಶಿಕವಾದ ವೃತ್ತಿಯನ್ನಾಗಿ ಪರಿಭಾವಿಸಿಕೊಂಡ 1871 ರಲ್ಲಿ ಜಾರಿಗೆ ತಂದ ಸಿಟಿಎಯ ಮೂಲಭೂತ ತಿಳುವಳಿಕೆಯೇ ದೋಷಪೂರ್ಣವಾಗಿದೆ. ಇದೂ ಕೂಡಾ ಹಿಂಸಾತ್ಮಕ ಸಂಘರ್ಷ ಕುರಿತು ಸ್ಲೀಮನ್‌ನ ತಪ್ಪು ಗ್ರಹಿಕೆ ಮತ್ತು ಅವನು ಪುಸ್ತಕಗಳ ಮೂಲಕ ಬ್ರಿಟಿಷ್ ಓದುಗರ ಮನಸ್ಸಲ್ಲಿ ಯಶಸ್ವಿಯಾಗಿ ಹರಿಯಬಿಟ್ಟ ‘ಥಗ್ಗೀ’ಯ (ಪಾತಕಿ) ಮಿತ್ ಅನ್ನು ಆಧರಿಸಿದೆ.

ಮೊದಲ ಸಿಟಿಎ ಹಲವು ಪರಿಷ್ಕರಣೆಗಳಿಗೆ ಒಳಗಾಯಿತು. ಇದರ ಕೊನೆಯ ತಿದ್ದುಪಡಿ ನಡೆದದ್ದು 1924ರಲ್ಲಿ. ಪ್ರತೀ ತಿದ್ದಪಡಿಯಲ್ಲಿಯೂ ನೋಟಿಫೈಡ್ ಜಾತಿ ಮತ್ತು ಸಮುದಾಯಗಳ ಪಟ್ಟಿ ವಿಸ್ತೃತಗೊಳ್ಳುತ್ತಾ ಹೋಯಿತು. ಇದರಿಂದಾಗಿ ಯಾರೆಲ್ಲ ಈ ಪಟ್ಟಿಯೊಳಗೆ ಬರುತ್ತಾರೋ ಅವರು ಏನನ್ನಾದರೂ ಮಾಡಲಿ, ಮಾಡದೇ ಇರಲಿ, ಕಾನೂನಿನ ಕಣ್ಣಲ್ಲಿ ಅವರನ್ನು ಅಪರಾಧಿಗಳೆಂದು ಅಥವಾ ಅಪರಾಧ ಮಾಡಬಹುದಾದವರೆಂದು ಕಾಣಲು ಶುರುವಾಯಿತು.
ಇವರ ಓಡಾಟದ ಮೇಲೆ ನಿರ್ಬಂಧ ಹೇರಲಾಯಿತು. ದೂರ ಪ್ರಯಾಣವನ್ನು ತಡೆಹಿಡಿಯಲಾಯಿತು. ಇವರಲ್ಲಿ ಬಹುದೊಡ್ಡ ಸಂಖ್ಯೆಯ ಜನರನ್ನು ಸುಧಾರಣಾ ಶಿಬಿರಗಳಲ್ಲಿ(ಒಂದರ್ಥದಲ್ಲಿ ಜೈಲುಗಳು) ಕೂಡಿಹಾಕಲಾಯಿತು. ರೈಲ್ವೆ ಹಳಿಗಳು, ಅಣೆಕಟ್ಟುಗಳು, ಸಾರ್ವಜನಿಕ ಕಟ್ಟಡಗಳ ನಿರ್ಮಾಣದಲ್ಲಿ ಇವರನ್ನು ವೇತನವಿಲ್ಲದೆ ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳಲಾಯಿತು. ಮಕ್ಕಳು, ಮಹಿಳೆಯರೂ ಈ ಶಿಕ್ಷೆಗೆ ಹೊರತಾಗಲಿಲ್ಲ.
ನೋಟಿಫೈಡ್ ಸಮುದಾಯಗಳನ್ನು ಹೀನಾಯವಾಗಿ ನಡೆಸಿಕೊಳ್ಳುವುದರ ಬಗ್ಗೆ ಕ್ರೋಧ ಎಷ್ಟಿತ್ತೆಂದರೆ ಸಿಟಿಎ ಜಾರಿಯಾದ ನಾಲ್ಕು ತಿಂಗಳ ಬಳಿಕ ಫೆಬ್ರವರಿ 1872 ರಲ್ಲಿ ಅಂಡಮಾನಿನಲ್ಲಿ ಬಂಧಿಯಾಗಿದ್ದ ಶೇರ್ ಅಲಿ ಅಫ್ರಿದಿಯಿಂದ ಲಾರ್ಡ್ ಮೇಯೋನ ಹತ್ಯೆಯಾಗುತ್ತದೆ. ಅಫ್ರಿದಿಯನ್ನು ಮಾರ್ಚ್ 1873 ರಂದು ಗಲ್ಲಿಗೇರಿಸಲಾಗುತ್ತದೆ. 1873 ರ ಹೊತ್ತಿಗೆ ಸ್ಲೀಮನ್, ಮೇಯೋ, ಅಫ್ರಿದಿ ಯಾರೂ ಇಲ್ಲದಿದ್ದರೂ ದಶಕಗಳ ಕಾಲ, ಪೀಳಿಗೆಯಿಂದ ಪೀಳಿಗೆಯವರೆಗೆ ಲಕ್ಷಾಂತರ ನೋಟಿಫೈಡ್ ಸಮುದಾಯಗಳು ತಮ್ಮ ನಿರ್ಬಂಧಿತ ವಸತಿ ಪ್ರದೇಶಗಳಲ್ಲಿ ತೊಳಲಾಡುವುದು ಮುಂದುವರೆಯಿತು.
ಭಾರತ ಸ್ವತಂತ್ರವಾದಾಗಲೂ ಅವರನ್ನು ಕೂಡಲೇ ಬಿಡುಗಡೆಗೊಳಿಸಲಿಲ್ಲ. ನಂತರ ಸುಮಾರು ಐದು ವರ್ಷಗಳ ಬಳಿಕ ಆಗಸ್ಟ್ 1952 ರಲ್ಲಿ ಜವಹರಲಾಲ್ ನೆಹರು ಅವರು ಇವರನ್ನು ಡಿನೋಟಿಫೈ ಮಾಡಿ ಸಿಟಿಎ ಬದಲಿಗೆ ‘ಹ್ಯಾಬಿಚುವಲ್ ಅಫೆಂರ‍್ಸ್ ಆಕ್ಟ್’ ತರಲು ನಿರ್ಧರಿಸಿದರು. 1871 ರ ಸಿಟಿಎಗೆ ಮೊದಲು ಈ ಸಮುದಾಯಗಳು ಅಲೆಮಾರಿಗಳಾಗಿದ್ದವರು. 1952 ರಿಂದ ಇವರನ್ನು ಡಿನೋಟಿಫೈಡ್ ಮತ್ತು ಅಮೆಮಾರಿ ಸಮುದಾಯಗಳೆಂದು(ಡಿಎನ್‌ಟಿ) ಕರೆಯಲಾಯಿತು.
ಆದರೆ ಇವರನ್ನು ಅಂಟಿಕೊಂಡಿರುವ ಪೂರ್ವಾಗ್ರಹಗಳು ಮತ್ತು ಕಳಂಕಗಳು ಇನ್ನೂ ಮುಂದುವರೆದಿವೆ. ಎಸ್‌ಸಿ, ಎಸ್‌ಟಿ ಪಟ್ಟಿಗೆ ಇವರನ್ನು ಸೇರಿಸಿಕೊಳ್ಳುವ ಕೆಲಸ ಸ್ವಲ್ಪಮಟ್ಟಿಗೆ ಆಗಿದೆ. ಭೂಮಿರಹಿತವಾಗಿ, ಜೀವನೋಪಾಯದ ಇತರ ದಾರಿಗಳೂ ಇಲ್ಲವಾಗಿ ಮೂಲಭೂತವಾದ ಕನಿಷ್ಠ ಮನುಷ್ಯ ಅಸ್ತಿತ್ವವನ್ನು ವ್ಯಾಖ್ಯಾನಿಸುವ ಸೂಚಕಗಳ ಮಟ್ಟಕ್ಕಿಂತ ತುಂಬಾ ಕೆಳಮಟ್ಟದಲ್ಲಿ ಇವರು ಜೀವಿಸುತ್ತಿದ್ದಾರೆ. ಭಾರತದಲ್ಲಿ 2020 ರ ಹೊತ್ತಿಗೆ ಅವರ ಅಂದಾಜು ಸಂಖ್ಯೆ 14 ಕೋಟಿಯಷ್ಟಿದೆ. ಅಪರಾಧ ಕುರಿತ ತಪ್ಪಾದ ಗ್ರಹಿಕೆಯಿಂದ ಉಂಟಾದ ಬಹುದೊಡ್ಡ ಮನುಷ್ಯ ನಿರ್ಮಿತ ದುರಂತಕ್ಕೆ ಇವರು ಸಾಕ್ಷಿಯಾಗಿ ನಿಲ್ಲುತ್ತಾರೆ.
ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ(ಯುಎಪಿಎ) ಸದುದ್ದೇಶದೊಂದಿಗೆ ಮತ್ತು ಉತ್ತಮ ಅಂತಾರಾಷ್ಟ್ರೀಯ ನಡವಳಿಕೆಯಾಗಿ ಆರಂಭವಾಯಿತು. ಅಲ್-ಕೈದಾ ಅಮೆರಿಕಾದಲ್ಲಿ ನಡೆಸಿದ 9/11 ದಾಳಿಗೆ ಪ್ರತಿಕ್ರಿಯೆಯಾಗಿ ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳ ಭಯೋತ್ಪಾದನಾ ವಿರೋಧಿ ನಡೆಗಳಿಗೆ ಕಾನೂನಾತ್ಮಕ ಬೆಂಬಲ ನೀಡುವ ಅಗತ್ಯವನ್ನು ಮನಗಂಡು 2001 ರಲ್ಲಿ ಸೂಕ್ತ ಕಾನೂನುಗಳನ್ನು ರೂಪಿಸಲು ಸದಸ್ಯ ರಾಷ್ಟ್ರಗಳ ಬಳಿ ಮನವಿ ಮಾಡಿಕೊಂಡಿತು.
ಇದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಹಲವು ನಿರ್ಣಯಗಳ ಬಳಿಕ ಮತ್ತು ಅದರಲ್ಲೂ ಮುಖ್ಯವಾಗಿ 2008 ರ ಯುಎನ್ ಸೆಕ್ಯುರಿಟಿ ಕೌನ್ಸಿಲ್ ರೆಸೊಲ್ಯೂಷನ್ 1822 ರ ಬಳಿಕ ಭಾರತ ಯುಎಪಿಎಯನ್ನು ರೂಪಿಸಿತು. 2019 ರಲ್ಲಿ ಇದರ ತಿದ್ದುಪಡಿ ಸಂಸತ್ತಿನ ಮೂಲಕ ಆಗಸ್ಟ್‌ನಲ್ಲಿ ಅನುಮೋದನೆಗೊಂಡಿತು. ಈ ಹಿಂದೆ ಸಂಘಟನೆಗಳಿಗೆ ಮಾತ್ರ ಅನ್ವಯಿಸುವಂತಿದ್ದ ಇದರ ಸೆಕ್ಷನ್ 35 ಅನ್ನು, ಈ ತಿದ್ದುಪಡಿಯಲ್ಲಿ ವ್ಯಕ್ತಿಗಳಿಗೂ ಅನ್ವಯಿಸುವಂತೆ ಮಾಡಲಾಯಿತು.
ಈ ಮರುವ್ಯಾಖ್ಯಾನದ ಫಲಿತಾಂಶ ಈಗ ನಮ್ಮ ಮುಂದೆ ಇದೆ. ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ 26 ವರ್ಷದ ಫೋಟೋ ಜರ್ನಲಿಸ್ಟ್ ಮಸ್ರತ್ ಜಹ್ರಾಳನ್ನು ಈ ಕಾಯ್ದೆಯಡಿ ಬಂಧಿಸಲಾಯಿತು. ದೆಹಲಿಯಲ್ಲಿ ಮೀರನ್ ಹೈದರ್, ಸಫೂರಾ ಜರ್ಗರ್, ಜಾಮಿಯಾದ ಇನ್ನೂ ಎಳೆಯ ಹುಡುಗರು ಹಾಗೂ ಜೆಎನ್‌ಯುನ ಉಮರ್ ಖಾಲಿದ್‌ರನ್ನು ಬಂಧಿಸಿದ್ದು ಇದೇ ಕಾಯ್ದೆಯಡಿ. ಅಸ್ಸಾಂನಲ್ಲಿ ಅಖಿಲ್ ಗೊಗೊಯ್ ಡಿಸೆಂಬರ್ 2019ರಿಂದ ಜೈಲಿನಲ್ಲಿದ್ದಾರೆ.

ಕಳೆದ ವರ್ಷ ಪುಣೆಯಲ್ಲಿ ನಡೆದ ಸಭೆಯಲ್ಲಿ ಹಿಂಸೆಗೆ ಪ್ರಚೋದನೆ ನೀಡಿದರೆಂಬ ಕಾರಣವೊಡ್ಡಿ ಈ ಕರಾಳ ಕಾನೂನಿನಡಿಯಲ್ಲಿ ಭಾರತದ ಅನೇಕ ಮಹತ್ವದ ಚಿಂತಕರನ್ನು ಬಂಧಿಸಲಾಗಿದೆ. ಇವರಲ್ಲಿ ಗೌತಮ್ ನವ್ಲಖಾ ಮತ್ತು ಆನಂದ ತೇಲ್ತುಂಬ್ಡೆಯವರೂ ಸೇರಿದ್ದಾರೆ. ಇದನ್ನು ನಾನು ಬರೆಯುತ್ತಿದ್ದಂತೆಯೇ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹನಿ ಬಾಬು ಮುಸಲಿರ‍್ವಿತ್ತಿಲ್ ತಾರಯಿಲ್ ಅವರನ್ನು ಇದೇ ಕಾನೂನಿನಡಿಯಲ್ಲಿ ಬಂಧಿಸಿರುವುದು ದಿನಪತ್ರಿಕೆಗಳಲ್ಲಿ ಸದ್ದು ಮಾಡುತ್ತಿದೆ. ಎಐಎಸ್‌ಎನ(ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್) ದೆಹಲಿಯ ಅಧ್ಯಕ್ಷ ಕವಲ್‌ಪ್ರೀತ್ ಕೌರ್ ಅವರನ್ನೂ ವಿಚಾರಣೆಗೊಳಪಡಿಸಲಾಗಿದೆ. ಇದು ಯಎಪಿಎ ಅಡಿಯಲ್ಲಿ ಬಂಧಿತರಾದವರ ಸಂಪೂರ್ಣ ಪಟ್ಟಿಯಲ್ಲ.
ಯುಎಪಿಎ, ಇದಕ್ಕೆ ಪೂರಕವಾದ ನ್ಯಾಯಾಂಗ ವ್ಯವಸ್ಥೆ ಸೇರಿಕೊಂಡು ಪ್ರಭುತ್ವಕ್ಕೆ ಕಸಿವಿಸಿಯೊಡ್ಡುವ ಪ್ರಶ್ನೆಗಳನ್ನು ಕೇಳುವವರ ವಿರುದ್ಧ ಬಳಸುವ, ಚಿಂತನೆಗಳನ್ನು ಮತ್ತು ವಿಚಾರಗಳನ್ನು ದಮನಮಾಡುವ ಮಾರಕ ಆಯುಧವಾಗಿಬಿಟ್ಟಿದೆ. 2014-19 ರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಚಿಂತಕರಾದ ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರ ಹತ್ಯೆ ಬೃಹತ್ ಪ್ರಮಾಣದ ಸಾರ್ವಜನಿಕ ಪ್ರತಿಭಟನೆಯನ್ನು ಹುಟುಹಾಕಿತ್ತು. ಆದರೆ ಯುಎಪಿಎಯ ಅಡಿ ಬಂಧಿಸಿರುವ ಪ್ರಕರಣಗಳ ವಿರುದ್ಧ ಇದೇ ಪ್ರಮಾಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ; ಮತ್ತು ಯುಎಪಿಎ ಕಾನೂನಿನ ಸ್ವರೂಪದ ಕಾರಣದಿಂದ ಅದು ಆಗುವುದೂ ಇಲ್ಲ.
ಭಯೋತ್ಪಾದಕ ಚಟುವಟಿಕೆಗಳ ಮತ್ತು ದೇಶದ್ರೋಹದ ಆರೋಪಗಳು ಪ್ರಭುತ್ವದಿಂದ ಹೊರಿಸಲ್ಪಟ್ಟಾಗ ಸಂಪೂರ್ಣ ಮುಗ್ಧ ವ್ಯಕ್ತಿಗಳ ಸುತ್ತಲೂ ಒಂದು ಬಗೆಯ ಸಾರ್ವಜನಿಕ ಸಂದೇಹದ ವಾತಾವರಣ ಸೃಷ್ಟಿಯಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರಭುತ್ವ, ಸ್ವತಂತ್ರವಾಗಿ ಚಿಂತಿಸುವುದು, ಭಿನ್ನ ಯೋಚನೆ ಹೊಂದಿರುವುದು, ಸಾರ್ವಜನಿಕ ವಿಚಾರಗಳ ಕುರಿತಾದ ಸರ್ಕಾರದ ನಡೆಯ ಬಗ್ಗೆ ಸಮ್ಮತಿ ಇಲ್ಲದಿರುವುದನ್ನು ಅಪರಾಧವಾಗಿ ಮಾರ್ಪಡಿಸಿದೆ. ಈ ಹಿಂದೆ ಸಂಪೂರ್ಣವಾಗಿ ಮುಗ್ಧರಾಗಿದ್ದ ಸಮುದಾಯಗಳನ್ನು ಅಪರಾಧ ಎಸಗುವವರೆಂಬ ಸಂದೇಹದ ವಲಯದಲ್ಲೇ ಇರಿಸಿದಂತೆ ಇಂದಿನ ಪ್ರಭುತ್ವ ಭಿನ್ನ ದನಿಗಳನ್ನು ಭಯೋತ್ಪಾದನೆ ಹಾಗೂ ದೇಶದ್ರೋಹವೆಂಬ ಹಣೆಪಟ್ಟಿ ಹಚ್ಚಿ ಕೂರಿಸಿದೆ. ಆಳುವ ಸರ್ಕಾರಗಳು ಅವು ಸಂಘಟಿತವಾಗಿರುವ ಸ್ವರೂಪದಿಂದಲೇ ಸದಾ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಾನೂನನ್ನು ತಮಗೆ ಬೇಕಾದಂತೆ ತಿರುಚುತ್ತವೆ.
ಆದರೆ ಇದು ಸಂವಿಧಾನ ಮತ್ತು ಅದು ಖಾತರಿಗೊಳಿಸುವ ಮೂಲಭೂತ ಹಕ್ಕುಗಳನ್ನು ಈ ಪ್ರಕ್ರಿಯೆಯಲ್ಲಿ ಮೂಲೆಗುಂಪಾಗಿಸುತ್ತದೆೆ. ಆದಾಗ್ಯೂ, ಇದನ್ನು ಸರಿಯಾದ ಐತಿಹಾಸಿಕ ಅನುಕ್ರಮಣಿಕೆಯಲ್ಲಿ ಇರಿಸಿ ಹೇಳುವುದಾದರೆ, ಸರ್ಕಾರಗಳು ಸಂವಿಧಾನದ ಕೂಸುಗಳು. ಯಾವಾಗ ಆಳುವ ಸರ್ಕಾರಗಳು ಸಂವಿಧಾನವನ್ನು ಎತ್ತಿಹಿಡಿಯುವ ಜನತೆಗೆ ಅದು ಕೊಡಮಾಡುವ ಹಕ್ಕುಗಳನ್ನು ಗೌರವಿಸುವ ಮೂಲಕ ಇವುಗಳನ್ನು ಬಲಪಡಿಸುವ ಅಗತ್ಯವನ್ನು ಬೇಕೆಂದೇ ಕಡೆಗಣಿಸುತ್ತಾ ಬರುತ್ತವೋ ಅವು ಜನತೆ, ಸಂವಿಧಾನ ಮತ್ತು ಇವುಗಳ ಕೂಸಾದ ಸರ್ಕಾರ ಇವುಗಳ ನಡುವಣ ಚಾರಿತ್ರಿಕ ಸಂಬಂಧವನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಸೋಲುತ್ತವೆ. ಈ ಭಿನ್ನದನಿಗಳ ದಮನ, ಅಂತಿಮವಾಗಿ ಯಾರು ಪ್ರಜಾಪ್ರಭುತ್ವದ ನೆಲೆಗಟ್ಟನ್ನೇ ಛಿದ್ರ ಮಾಡಲು ಯತ್ನಿಸುತ್ತಿದ್ದಾರೋ ಅವರನ್ನೇ ಛಿದ್ರವಾಗಿಸುತ್ತದೆ.
–ಜಿ.ಎನ್.ದೇವಿ
(ಭಾರತದ ಪ್ರಸಿದ್ಧ ಚಿಂತಕರಲ್ಲಿ ಒಬ್ಬರಾದ ಜಿ.ಎನ್. ದೇವಿ ಅವರು, ಪೀಪಲ್ ಲಿಂಗ್ಯುಸ್ಟಿಕ್ಸ್ ಸರ್ವೇ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರು ಮರಾಠಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿಂತನೆಗಳನ್ನು ಬರಹಗಳ ಮೂಲಕ ಮೂಡಿಸುತ್ತಾರೆ. ಚಳವಳಿಗಳ ಸಂಗಾತಿಯಾಗಿರುವ ಜಿ. ಎನ್. ದೇವಿ ದಕ್ಷಿಣಾಯನ ಚಳವಳಿಯ ಸಂಚಾಲಕರು ಕೂಡ.)

ಉಲ್ಲೇಖ:
(1) Emile Durkheim, The Rules of Sociological Method, Sarah A. Solovay and John H. Mueller (trans) and George E. C. Catlin (ed.), New York, The Free Press, 1938, p. 51
ಓದಿ:


