Homeಮುಖಪುಟಮೂಲ ನಿವಾಸಿಗಳೆಂಬ ಜನಾಂಗ ಪ್ರಪಂಚದಲ್ಲಿ ಬಹುತೇಕ ಎಲ್ಲೂ ಇಲ್ಲ: ಡೇವಿಡ್ ರೈಶ್

ಮೂಲ ನಿವಾಸಿಗಳೆಂಬ ಜನಾಂಗ ಪ್ರಪಂಚದಲ್ಲಿ ಬಹುತೇಕ ಎಲ್ಲೂ ಇಲ್ಲ: ಡೇವಿಡ್ ರೈಶ್

ಮಾನವನ ಆದಿಯ ಹುಡುಕಾಟದಲ್ಲಿ ಡಿಎನ್‌ಎ ಪಾತ್ರದ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ, ‘Who We Are and How We Got Here’ ಪುಸ್ತಕದ ಕತೃ, ಪ್ರೊ. ಡೇವಿಡ್ ರೈಶ್ ಅವರೊಂದಿಗೆ, ಭಾರತದ ಪ್ರಖ್ಯಾತ ಚಿಂತಕ ಜಿ ಎನ್ ದೇವಿ ಅವರು ನಡೆಸಿದ ಸಂವಾದದ ಸಂಗ್ರಹ ರೂಪ ಇದು.

- Advertisement -
- Advertisement -

ಮೂಲ ನಿವಾಸಿಗಳೆಂಬ ಜನಾಂಗ ಪ್ರಪಂಚದಲ್ಲಿ ಬಹುತೇಕ ಎಲ್ಲೂ ಇಲ್ಲ ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಮತ್ತು ಹೊವಾರ್ಡ್ ಹ್ಯೂಗ್ಸ್ ಮೆಡಿಕಲ್ ಇನ್ಸ್ಟಿಟ್ಯೂಟ್‌ನ ಪ್ರಾಧ್ಯಾಪಕ ಮತ್ತು ಸಂಶೋಧಕ ಪ್ರೊ. ಡೇವಿಡ್ ರೈಶ್ ಹೇಳುತ್ತಾರೆ

ಮಾನವದ ಆದಿಯ ಹುಡುಕಾಟದಲ್ಲಿ ವಂಶವಾಹಿ ತಿಳಿವಳಿಕೆ ಹೊಸ ಆಯಾಮಗಳನ್ನು, ಹೊಸ ಹೊಳಹುಗಳನ್ನು ನೀಡುತ್ತಿದೆ. “ಶ್ರೇಷ್ಠ-ಶುದ್ಧ” ಜನಾಂಗದ ಕಲ್ಪನೆಗೆ ಈ ಹೊಸ ತಿಳಿವಳಿಕೆ ನೀಡುತ್ತಿರುವ ಪೆಟ್ಟು ಹಲವು ನಂಬಿಕೆಗಳನ್ನು ಅಳ್ಳಾಡಿಸಿದೆ.

ಕಳೆದ ವಾರ ಟೋನಿ ಜೋಸೆಫ್ ಅವರ ‘ಅರ‍್ಲಿ ಇಂಡಿಯನ್ಸ್’ ಪುಸ್ತಕದ ಆಯ್ದ ಭಾಗದ ಅನುವಾದವನ್ನು ನ್ಯಾಯಪಥ ಪ್ರಕಟಿಸಿತ್ತು. ಹರ್ಷಕುಮಾರ್ ಕುಗ್ವೆ ಕೂಡ ತಮ್ಮ ಬರಹದಲ್ಲಿ ಈ ಚರ್ಚೆಗೆ ಪ್ರವೇಶಿಕೆ ಒದಗಿಸಿಕೊಟ್ಟಿದ್ದರು.

ಇದರ ಮುಂದುವರೆದ ಭಾಗವಾಗಿ ಮಾನವನ ಆದಿಯ ಹುಡುಕಾಟದಲ್ಲಿ ಡಿಎನ್‌ಎ ಪಾತ್ರದ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ, ‘Who We Are and How We Got Here’ ಪುಸ್ತಕದ ಕತೃ, ಪ್ರೊ. ಡೇವಿಡ್ ರೈಶ್ ಅವರೊಂದಿಗೆ, ಭಾರತದ ಪ್ರಖ್ಯಾತ ಚಿಂತಕ ಜಿ ಎನ್ ದೇವಿ ಅವರು ನಡೆಸಿದ ಸಂವಾದದ ಸಂಗ್ರಹ ರೂಪ ಇದು. ಇದು ಎರಡು ಭಾಗಗಳಲ್ಲಿ ಪ್ರಕಟವಾಗಲಿದೆ.

ಗಣೇಶ್ ದೇವಿ: ನಿಮ್ಮ ಸಮಯ ನೀಡಿದ್ದಕ್ಕೆ ಧನ್ಯವಾದಗಳು ಪ್ರೊ. ರೈಶ್. ಸಾವಿರಾರು ಮೈಲಿ ದೂರ ಇದ್ದರೂ ನಿಮ್ಮ ಜೊತೆ ಮಾತಾಡ್ತಿರೋದಕ್ಕೆ ಸಂತೋಷ ಆಗ್ತಿದೆ. ನಿಮ್ಮ ಕೃತಿ, Who We Are and How We Got Here (ನಾವು ಯಾರು? ನಾವಿಲ್ಲಿಗೆ ಹೇಗೆ ತಲುಪಿದೆವು?) ದಿ ಹಿಂದೂ ಪತ್ರಿಕೆಯ ಮೂಲಕ ನನ್ನ ಗಮನ ಸೆಳೆಯಿತು. ಆ ಪುಸ್ತಕದ ವಿಮರ್ಶೆ ಎರಡು ಕಂತುಗಳಲ್ಲಿ ಪ್ರಕಟವಾಯಿತು. ಬಹಳ ಧನಾತ್ಮಕ ಅಭಿಪ್ರಾಯದ ವಿಮರ್ಶೆ ಅದು. ತಕ್ಷಣವೇ ನಾನೊಂದು ಪ್ರತಿ ತರಿಸಿಕೊಂಡೆ. ಅದು ಓದಿಯಾದ ಮೇಲೆ, ನೀವು ಅದರಲ್ಲಿ ಪ್ರಸ್ತುತ ಪಡಿಸಿರುವ ವಾಸ್ತವಾಂಶ, ವೈಚಾರಿಕ ಹರಹು ಮತ್ತು ಚಿಂತನೆಗಳ ಉದ್ದಗಲದ ಬಗ್ಗೆ ವಿಸ್ಮಯ ಪಡುವುದು ಮುಂದುವರಿದೇ ಇದೆ.

ಈ ಸಂಭಾಷಣೆಯನ್ನು ಭಾರತದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಗೆಳೆಯರೊಂದಿಗೂ ಹಂಚಿಕೊಳ್ಳಬಯಸಿದ್ದೇನೆ. ಕಳೆದ ಮೂರು ದಶಕಗಳಿಂದ ಅಗಾಧ ಪ್ರಮಾಣದಲ್ಲಿ  ಚರಿತ್ರೆಯನ್ನು ತಿರುಚಿ ಅದರ ವಿಕೃತ ಪ್ರಸ್ತುತಿಯಾಗುತ್ತಿರುವುದಕ್ಕೆ ಭಾರತದ ಬುದ್ಧಿಜೀವಿಗಳು ಸಾಕ್ಷಿಯಾಗಿದ್ದಾರೆ. ಈ ತಿರುಚುವಿಕೆಯ ವಿಕೃತಿಯ ಪ್ರಮುಖ ಉಪಾಯವೆಂದರೆ ವೈಭವೀಕೃತ ಸಂಸ್ಕೃತದ ಸ್ಥಾನಮಾನ ಮತ್ತು  ಈ ಭಾಷೆಯನ್ನು ಈ ದೇಶಕ್ಕೆ ತಂದ ಪ್ರಾಚೀನ ‘ಆರ್ಯ’ರೆಂಬವರ ವೈಭವೀಕರಣದ ಬಗ್ಗೆ.

ನಿಮ್ಮ ಕೃತಿಯ ಆರಂಭದಲ್ಲೇ ಹಿಟ್ಲರನ  ಶ್ರೇಷ್ಠ ಜನಾಂಗದ ಪರಿಕಲ್ಪನೆ  ಮತ್ತು ಇದರಿಂದ ಉಳಿದ ಜನಾಂಗಗಳ ಮೇಲೆ ಉದ್ಭವವಾಗುವ ತಿರಸ್ಕಾರದ ಬಗ್ಗೆ ನಿಮ್ಮ ನಿಲುವನ್ನು ದಾಖಲಿಸಿದ್ದೀರಿ. ವಂಶವಾಹಿ/ಆನುವಂಶಿಕ ಶಾಸ್ತ್ರ ವಿಚಾರದಲ್ಲಿ ತೊಡಗಿರುವ ವಿಜ್ಞಾನಿಯ ಮಟ್ಟಿಗಂತೂ ಇದು ಗಮನಾರ್ಹ ಪೀಠಿಕೆ ಎಂದು ನಾನು ಭಾವಿಸಿದ್ದೇನೆ. ಯಾಕೆಂದರೆ ನೀವು ತೊಡಗಿಸಿಕೊಂಡಿರುವ ವಿಜ್ಞಾನವನ್ನು ಸೂಕ್ತವಲ್ಲದ ತಪ್ಪು ದಾರಿಯಲ್ಲಿ ಬಳಕೆಯಾದರೆ ಜನಾಂಗೀಯ ಹತ್ಯೆಗೆ  ಕಾರಣವಾದೀತು. ಈಗ ನನ್ನ ಮೊದಲ ಪ್ರಶ್ನೆ.

ನಿಮ್ಮ ಕೃತಿಯು ಹಲವು ಖಂಡಗಳ, ಅದರಲ್ಲೂ ಭಾರತ ಮತ್ತು ಪೂರ್ವ ಏಷ್ಯಾಗಳ  ಅಗಾಧ ಕಾಲಾವಧಿಯ ಚರಿತ್ರೆ ಮತ್ತು ಪೂರ್ವ ಚರಿತ್ರೆಯ (ಪ್ರಾಗೈತಿಹಾಸಿಕ) ಸ್ಥಿತಿಯನ್ನು ಒಳಗೊಂಡಿದೆ. ಈ ಉಪಖಂಡದ ಮೊದಲ ನಿವಾಸಿಗಳು ನಿಮ್ಮ ಅಭಿಪ್ರಾಯದಂತೆ, ಆಫ್ರಿಕಾದಿಂದ ಬಂದು ಅಂಡಮಾನದಲ್ಲಿ ನೆಲೆಗೊಂಡರು. ಅಲ್ಲಿಂದ ಅವರು ಈಗ ದಕ್ಷಿಣ ಭಾರತ ಎಂದು ಕರೆಯುವ ಪ್ರದೇಶದಲ್ಲಿ ಚದುರಿ ಹೋದರು. ಅಲ್ಲಿಂದ ಉತ್ತರಕ್ಕೆ ಚಲಿಸಿದರು. ಈ ಚಲನೆಯೊಂದಿಗೆ ಅವರ ಭಾಷೆಯೂ ವಲಸೆ ಹೋಯಿತು.

ನೀವು ಹಲವು ಬಾರಿ ಸೂಚಿಸಿರುವಂತೆ, ದಕ್ಷಿಣದಲ್ಲಿದ್ದವರು ಮತ್ತು ಸಿಂಧೂ ಕಣಿವೆ ನಾಗರಿಕತೆಗೆ ಇರುವ ಕೊಂಡಿ ನಿಜಕ್ಕೂ ಅನ್ವೇಷಿಸಬೇಕಾದ ವಿಷಯ. ಅಂಥಾ ಒಂದು ಕೊಂಡಿ ಇತ್ತೇ ಎಂಬುದನ್ನು ಅಂತಿಮವಾಗಿ ನಿರ್ಣಯಿಸಲಾಗಿಲ್ಲ. ಇನ್ನೂ ವಾಖ್ಯಾನಿಸಲಾಗದ ಸಿಂಧೂ ಲಿಪಿ ಬಗ್ಗೆ ಓದುತ್ತಿದ್ದೆ. ಅದನ್ನು   ‘ಓದಲಾಗಿದೆ’ ಎಂಬ ಹಲವಾರು ಹೇಳಿಕೆಗಳ ಹೊರತಾಗಿಯೂ ಅದು ಇನ್ನೂ ಒಗಟಾಗೇ ಉಳಿದಿದೆ.  ಈ ಪೂರ್ವ ದ್ರಾವಿಡರು  ಸಿಂಧು ಕಣಿವೆಗೆ ಚಲಿಸಿ ಅಲ್ಲಿಂದ ಮತ್ತೆ ಹಿಂದೆ ತಳ್ಳಲ್ಪಟ್ಟ ಸಾಧ್ಯತೆ ಬಗ್ಗೆ, ಅದರ ಹೆಚ್ಚಿನ ಸಾಧ್ಯತೆ ನಿಮ್ಮ ಅನಿಸಿಕೆ ಏನು? ಭಾರತೀಯ ಚರಿತ್ರೆಕಾರರರಿಗೆ ಇನ್ನೂ ಒಗಟಾಗೇ ಉಳಿದಿರುವ ಈ ಕೆಲವು ಕ್ಷೇತ್ರಗಳ ಬಗ್ಗೆ ನಿಮ್ಮ ವಿಜ್ಞಾನ ಏನು ಹೇಳುತ್ತೆ?

ಪ್ರೊ. ಡೇವಿಡ್ ರೈಶ್:  ನಿಮ್ಮ ಜೊತೆ ಸಂವಾದ ನಡೆಸುತ್ತಿರುವ ಈ ಅವಕಾಶಕ್ಕೆ ಧನ್ಯವಾದ. ನನ್ನ ಕೃತಿ ಬಗ್ಗೆ ನೀವು ಹೇಳಿರುವ ಮಾತುಗಳಿಗೂ ಆಭಾರಿ. ಭಾರತದಲ್ಲಿ ಕೆಲವರನ್ನು ಈ ಕೃತಿ ತಲುಪಿದೆ ಎಂಬುದು ನನಗೆ ಸಂತೋಷ ತಂದಿದೆ. ನೀವು ಎತ್ತಿರುವ ಪ್ರಶ್ನೆಗಳ ಮೊದಲ ಭಾಗದ ಬಗ್ಗೆ  ಸ್ಥೂಲವಾಗಿ ಉತ್ತರಿಸಿ  ಉತ್ತರಾರ್ಧದ ಪ್ರಶ್ನೆಯ ಮೇಲೆ ಲಕ್ಷ್ಯ ಕೇಂದ್ರೀಕರಿಸಲು ನೋಡುವೆ.

ನಿಮ್ಮ ಪ್ರಶ್ನೆಯ ಪೂರ್ವಾರ್ಧ, ಭಾರತದ ಮೊದಲ ಮಾನವನ ಬಗ್ಗೆ. 20 ಲಕ್ಷ ವರ್ಷಗಳ ಮೊದಲು ಯುರೇಷ್ಯಾದಲ್ಲಿ ಯಾವ ಮಾನವರೂ ಇರಲಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ನಮ್ಮ  ವಂಶವಾಹಿಯ ಗುರುತಾದ “ಹೋಮೋ” ಮೊದಲಿಗೆ  ಪೂರ್ವ ಚರಿತ್ರೆಯ ಮಾನವಶಾಸ್ತ್ರದ (ಪ್ಯಾಲಿಯೋ ಆಂಥ್ರಪೊಲಾಜಿಕಲ್) ಆಫ್ರಿಕಾದ ದಾಖಲೆಗಳಲ್ಲಿ ಕಾಣಿಸುತ್ತಾನೆ. ಎರಡು ಮಿಲಿಯ ವರ್ಷಗಳ ತರುವಾಯ ಈ ಮಾನವರ ಗುಂಪು ಆಫ್ರಿಕಾದಿಂದ ಹೊರಗೆ ಹರಡಿ ಯುರೇಷ್ಯಾ ತಲುಪಿತು.  ಕಾಕಸಸ್ ಮತ್ತು ಇಂಡೋನೇಷ್ಯಾದ ಜಾಗಗಳಲ್ಲಿ ದೊರಕಿರುವ ಮೊದಲ ಅಸ್ತಿಪಂಜರಗಳ ಉಳಿಕೆಗಳು ಅದನ್ನು ಸೂಚಿಸುತ್ತವೆ. ತದನಂತರ ಈ  ಜನಾಂಗ ಯುರೇಷ್ಯಾದುದ್ದಕ್ಕೂ ಮತ್ತು ಭಾರತಕ್ಕೂ ಹರಡಿತು.

ಆದರೆ ಭಾರತದ ಆಧುನಿಕ ಮಾನವರ ಪೂರ್ವಜರು ಇಲ್ಲಿ ಬಂದು ಚದುರಿದ್ದು ಕೇವಲ 50 ಸಾವಿರ ವರ್ಷಗಳ ಮೊದಲು. ನಂತರ ದೇಹರಚನೆಯಲ್ಲಿ ಆಧುನಿಕರಾಗಿದ್ದವರ (ಅಂದರೆ ನಮ್ಮ ಹಾಗೇ ಕಾಣುತ್ತಿದ್ದ ಇಂದ್ರಿಯಾವಯವಗಳನ್ನು ಮತ್ತು ಲಕ್ಷಣಗಳನ್ನು ಹೊಂದಿ ಸಂಪೂರ್ಣ ಆಧುನಿಕವಾಗಿ ಕಾಣುತ್ತಿದ್ದವರ) ದೊಡ್ಡ ಪ್ರಮಾಣದ ಹರಡುವಿಕೆ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಮತ್ತೆ ಈ ವಲಸೆಯೂ ಆಪ್ರಿಕದಿಂದಲೇ; ಯುರೇಷ್ಯಾ, ಯುರೋಪ್, ಪೂರ್ವ ಏಷ್ಯಾಗಳಲ್ಲಿ ಆಗಲೇ ನೆಲೆಯೂರಿದ್ದ ಮಾನವರನ್ನು ಈ ಮಂದಿ ಸ್ಥಳಾಂತರಗೊಳಿಸಿದರು. ಆದರೆ ದಕ್ಷಿಣ ಏಷ್ಯಾ ಮತ್ತು ಯುರೇಷ್ಯಾಗಳಲ್ಲಿ ಆಗಾಗಲೇ ನೆಲೆಯೂರಿದ್ದ ಪ್ರಾಚೀನ ನಿವಾಸಿಗಳೊಂದಿಗೆ ಅಷ್ಟಿಷ್ಟು ಮಿಶ್ರವಾಗಿದ್ದೂ ಇದೆ.

ಈ ಆಧುನಿಕ ಮಂದಿಗೆ ನಮ್ಮ ರೀತಿಯದೇ ಅಸ್ತಿ ಪಂಜರಗಳಿದ್ದವು. ಯುರೇಷ್ಯಾ ಮತ್ತು ಭಾರತದಲ್ಲಿ ನೆಲೆಗೊಳ್ಳುವ ಪ್ರಕ್ರಿಯೆ ಸುಮಾರು 50 ಸಾವಿರ ವರ್ಷಗಳ ಹಿಂದೆ ಆರಂಭವಾಗಿರಬಹುದು. ಈ ಆಧುನಿಕ ಮಾನವರು ಆಫ್ರಿಕಾದಿಂದ ಮೊದಲು ಎಲ್ಲಿಗೆ ಬಂದರು? ಅವರು ಹರಡಿ ಹೋದ ಹಾದಿ ಯಾವುದು ಎಂಬುದು ನಮಗೆ ಗೊತ್ತಿಲ್ಲ. ಯುರೇಷ್ಯಾದ ವಿವಿಧ ಭಾಗಗಳ ಮೂಲ ಮಾನವರ ವಂಶಜರು ಸುಮಾರಾಗಿ ಇನ್ನೂ ಬೆರೆಯದ ರೂಪದಲ್ಲಿ, ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾಗಳಲ್ಲಿದ್ದಂತೆ, ಇಂದಿನ ಅಂಡಮಾನ್ ದ್ವೀಪಗಳಲ್ಲಿಯೂ ಕಾಣಬಹುದು. ಆ ಕಾಲದಿಂದ ಸತತವಾಗಿ ಅಂಡಮಾನ್ ದ್ವೀಪಗಳಲ್ಲಿ ಇವರು ನೆಲೆಸಿದರೋ, ಅಥವಾ ಈ ದ್ವೀಪಗಳ ಮೊದಲ ನಿವಾಸಿಗಳೋ ಎಂಬುದು ಸ್ಪಷ್ಟವಿಲ್ಲ. ಹೆಚ್ಚಿನಂಶ, ಅಂಡಮಾನಿನ ಪೂರ್ವಜರು ಆಗ್ನೇಯ ಏಷ್ಯಾ ಅಥವಾ ದಕ್ಷಿಣ ಏಷ್ಯಾದ ಕೇಂದ್ರ ಭೂಭಾಗದಲ್ಲಿ ಜೀವಿಸಿದ್ದರು. ಆರಂಭ ಕಾಲದಲ್ಲೇ ಅಂಡಮಾನ್ ದ್ವೀಪಗಳಿಗೆ ಬಂದಿರುವ ಸಾಧ್ಯತೆಯ ಬದಲು ದಕ್ಷಿಣ ಏಷ್ಯಾದ ಕೇಂದ್ರ ಭೂಭಾಗದಲ್ಲೇ ನೆಲೆಸಿ ಅಲ್ಲಿಂದ ವಲಸೆ ಬಂದಿರಬಹುದು. ಏಕೆಂದರೆ ಈ ಕೇಂದ್ರ ಭಾಗ ವಿಸ್ತಾರವಾದ ಮತ್ತು ಸಂಪದ್ಭರಿತವಾದ ಪರಿಸರವನ್ನು ಹೊಂದಿತ್ತು. ಈ ಕೇಂದ್ರ ಭೂಭಾಗಗಳಲ್ಲಿ ನಿಖರವಾಗಿ ಯಾವ ಪ್ರದೇಶದಿಂದ ವಲಸೆ ಬಂದರು  ಎಂಬುದು ಅಸ್ಪಷ್ಟ. ಈ ಭಾಗ ಭಾರತ ಉಪಖಂಡ ಮಾತ್ರ ಆಗಿರಲಾರದು, ಪ್ರಾಯಶಃ ಇಂಡೋನೇಷ್ಯಾದ ಕೆಲವು ಭಾಗ, ಉದಾ: ಸುಮಾತ್ರಾ ಅಥವಾ ಮ್ಯಾನ್ಮಾರ್.

ಆದರೆ ನಿಮ್ಮ ಪ್ರಶ್ನೆ ದಕ್ಷಿಣ ಏಷ್ಯಾದ ವರ್ತಮಾನದ ಜನಸಂಖ್ಯಾ ಸಂರಚನೆ ರೂಪುಗೊಂಡಿದ್ದರ ಬಗ್ಗೆ ಇದೆ. ದಕ್ಷಿಣ ಏಷ್ಯಾ ಭೂಮಿಯ ಮೇಲಿನ ವೈವಿಧ್ಯತೆಯ ವಿಶಿಷ್ಟ ತಾಣ. ಮಾನವನ ವೈವಿಧ್ಯತೆಯನ್ನು ಸೂಚಿಸುವ ಸಾವಿರಾರು ಭಾಷೆಗಳಿವೆ.  ಅಪಾರ ವಂಶವಾಹಿ ವೈವಿಧ್ಯತೆಗಳೂ ಇವೆ. ಭಾರತದ ವೈವಿಧ್ಯಮಯ ಜನರ ವಂಶವಾಹಿ ವಿವರಗಳನ್ನು ಗಮನಿಸಿದಾಗ ಕಂಡು ಬರುವ ಒಂದು ಸಂಗತಿಯೆಂದರೆ, ಬಹುಪಾಲು ಗುಂಪುಗಳು (ಎಲ್ಲಾ ಗುಂಪುಗಳೂ ಎನ್ನಲಾರೆ) ಇಂಡೋ-ಯುರೋಪಿಯನ್ ಮತ್ತು ದ್ರಾವಿಡ ಭಾಷೆಗಳನ್ನು ಆಡುತ್ತಾರೆ.

ಭಾರತದಲ್ಲಿ ಎರಡು ಅತಿ ದೊಡ್ಡ ಭಾಷಾ ಕುಟುಂಬಗಳಿವೆ. ಇವೆರಡೂ, ಪ್ರತ್ಯೇಕವಾದ ಎರಡು ವಿಭಿನ್ನ  ಜನಸಂಖ್ಯಾ ಗುಂಪುಗಳ ಪೂರ್ವಜರ ಭಿನ್ನ ಪ್ರಮಾಣದ ಅಂಶಗಳನ್ನು,  ಭಿನ್ನ ಪ್ರಮಾಣದ ವಂಶಾವಳಿಯನ್ನು ಹೊಂದಿವೆ ಎಂದು ಆನುವಂಶಿಕತೆಯಿಂದ ಗುರುತಿಸಲಾಗಿದೆ. ಇವು ಯುರೋಪಿಯನ್ನರು ಮತ್ತು ಪೂರ್ವ ಏಷ್ಯನ್ನರಷ್ಟೇ ಪರಸ್ಪರ ಭಿನ್ನ. ಸಂಪೂರ್ಣ ಬೇರೆ ಬೇರೆಯಾದ ಎರಡು ವಂಶಮೂಲಗಳ ಬೇರೆ ಬೇರೆ ಪ್ರಮಾಣದ ಅಂಶಗಳನ್ನು ಮೈಗೂಡಿಸಿಕೊಂಡಿವೆ ಎಂಬುದು ಕಳೆದ 11 ವರ್ಷಗಳಲ್ಲಿ ನಮಗೆ ಗೊತ್ತಾಗಿದೆ.

ಹೈದರಾಬಾದಿನ ಸೆಲ್ಯುಲರ್ ಮತ್ತು ಮಾಲೆಕ್ಯುಲರ್ ಬಯಾಲಜಿ ಕೇಂದ್ರದ ಕೆ. ತಂಗರಾಜ್ ಅವರೊಂದಿಗಿನ ನಮ್ಮ ಸಹಯೋಗದ ಸಂಶೋಧನೆಯ ಮೂಲಕ ಇದು ಗೊತ್ತಾಗಿದೆ. ಇಂಡೋ- ಯುರೋಪಿಯನ್ ಮತ್ತು ದ್ರಾವಿಡ ಭಾಷೆಗಳನ್ನಾಡುವ ಆದರೆ ಆಸ್ಟ್ರೋ-ಏಷ್ಯಾಟಿಕ್ ಮತ್ತು ಬರ್ಮೀಸ್ ಭಾಷೆಗಳ ವಿಶಿಷ್ಟ ಪೂರ್ವಜ ಚರಿತ್ರೆಗೆ ಅನ್ವಯಿಸದ ದಕ್ಷಿಣ ಏಷ್ಯಾದ ವಿಭಿನ್ನವಾದ ಎಲ್ಲ ಪೂರ್ವ ಜನರ ವಂಶಾವಳಿಗಳ ಮೂಲವನ್ನು ಹಂತ ಹಂತವಾಗಿ ಅರ್ಥ ಮಾಡಿಕೊಳ್ಳಲು ಕಳೆದ ದಶಕದಲ್ಲಿ ಪ್ರಯತ್ನಿಸಿದೆವು. ನಮ್ಮ ಬಹುತೇಕ ಕೆಲಸ ಈ ವಿಭಿನ್ನ ಸ್ತರಗಳ ಬಗ್ಗೆ ಕೇಂದ್ರೀಕೃತವಾಗಿದೆ.  ಈ ಗುಂಪುಗಳ ಮೂಲದ ಬಗ್ಗೆ  ಕಳೆದ ಒಂದು ದಶಕದಲ್ಲಿ ಏನು ಅರಿತಿದ್ದೇವೆ ಎಂಬುದನ್ನು ನಿಮಗೆ ಹೇಳಲು ಸಂತೋಷವಾಗ್ತಿದೆ.

ಜಿ.ಎನ್. ದೇವಿ:  ಹೈದರಾಬಾದಿನಲ್ಲಿ ಆ ಹತ್ತು ಸಾವಿರ ಸ್ಯಾಂಪಲ್‌ಗಳನ್ನು ಅಧ್ಯಯನ ಮಾಡಿದ ಮೇಲೆ, ಮತ್ತೆ ಮಾದರಿ ಸಂಗ್ರಹ  ನಡೆಯುತ್ತಿದೆಯಾ? ಅವುಗಳನ್ನು ಮತ್ತೆ ವಿಶ್ಲೇಷಿಸುವ ಕೆಲಸ ನಡೆಯುತ್ತಿರುವುದರ ಬಗ್ಗೆ ನಿಮಗೆ ಮಾಹಿತಿ ಇದೆಯೇ?

ಪಿಡಿಆರ್: ಹೈದರಾಬಾದಿನಲ್ಲಿ ಈ ಯೋಜನೆ ಮುನ್ನಡೆಯುತ್ತಿದೆ. ಕಳೆದ ದಶಕದಲ್ಲಿ ಈ ಸಂಗ್ರಹ ಕಾರ್ಯ ತೀವ್ರವಾಗಿತ್ತು. ಸಿ.ಸಿ.ಎಂ.ಬಿ. (ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಬಯಾಲಜಿ) ಮೂಲಕ ಭಾರತ ಸರಕಾರವು ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸ್ನಾತಕೋತ್ತರ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳು ಭಾರತದ ವಿವಿಧ ಹಳ್ಳಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಭಾರತ ಉಪಖಂಡದ ಜನಾಂಗೀಯ ವೈವಿಧ್ಯತೆಯ ಪಟ್ಟಿ ಮಾಡಲು ಯತ್ನಿಸುತ್ತಿದ್ದರು.  ನನಗೆ ನೆನಪಿದ್ದ ಹಾಗೆ ಸುಮಾರು 500 ಸಮುದಾಯಗಳ 18 ಸಾವಿರ ಮಾದರಿಗಳಿದ್ದವು. ಭಾರತದಲ್ಲಿ ಕನಿಷ್ಠ 4,500 ದಾಖಲಾಗಿರುವ ಜನಾಂಗೀಯ ಸಮುದಾಯಗಳಿವೆ. ನೀವು ಹೇಗೆ ಲೆಕ್ಕ ಹಾಕುತ್ತೀರಿ ಅನ್ನೋದರ ಮೇಲೆ, ಮಾದರಿ ಸಂಗ್ರಹಿಸಿದ ಸಮುದಾಯಗಳಿಗಿಂತ ಸಂಗ್ರಹಿಸದ ಸಮುದಾಯಗಳೇ ಹತ್ತು ಪಟ್ಟು  ಜಾಸ್ತಿ ಇವೆ.

ಪಿಡಿಆರ್: ಮಾದರಿ ಸಂಗ್ರಹಗಳು ಒಂದು ತುಣುಕಷ್ಟೇ. ಈ ಸಂಗ್ರಹ ವಿಸ್ಮಯಕಾರಿ ವೈವಿಧ್ಯತೆ ಹೊಂದಿರುವ ಈ ದೇಶದ ಸಮುದಾಯಗಳ ಶೇ. 10ರಷ್ಟು ಇರಬಹುದು. ಆದರೆ ಈ ಸಂಗ್ರಹ ಜಾರಿಯಲ್ಲಿದೆ. ಮೊದಲಿನಂತೆ ಈಗ ಅನುದಾನ ಇಲ್ಲ. ಆದ್ದರಿಂದ ಸಂಗ್ರಹ ಮೊದಲಿನಷ್ಟು ಚುರುಕಾಗಿ ನಡೆಯುತ್ತಿಲ್ಲ. ಆದರೆ ಇದು ಬಹುಮುಖ್ಯ ಯೋಜನೆ ಎಂದು ನನಗೆ ಅನ್ನಿಸುತ್ತೆ. ಭಾರತದ ಆರೋಗ್ಯ ವ್ಯವಸ್ಥೆಗೂ ಇದು ಮುಖ್ಯ.  ಪ್ರತಿಯೊಬ್ಬನೂ ಒಂದಲ್ಲ ಒಂದು ಈ ಸಮುದಾಯದ ಗುಂಪುಗಳಿಗೆ ಸೇರಿದವನೇ. ಜಗತ್ತಿನ ಉಳಿದ ಸಮುದಾಯಗಳಂತೆ ಇಲ್ಲಿನ ಪ್ರತೀ ಸಮುದಾಯ  ತನ್ನದೇ ಆದ ವಂಶವಾಹಿ ದೌರ್ಬಲ್ಯಗಳ ಕಾರಣಕ್ಕೆ  ರೋಗರುಜಿನಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಈ ಅಪಾಯಕ್ಕೆ ತುತ್ತಾಗುವುದನ್ನು ಅಧ್ಯಯನ ಮಾಡಲು. ಪ್ರತಿ ಸಮುದಾಯವನ್ನೂ  ಅದರ ಅನನ್ಯತೆ ಮತ್ತು ಆರೋಗ್ಯದ ಕಾರಣಕ್ಕೆ ಹೀಗೆ ಅಧ್ಯಯನ ಮಾಡಬೇಕಿದೆ.

ಜಿ.ಎನ್.ದೇವಿ:  ಈ  ವಂಶಾವಳಿಯ/ ಆನುವಂಶಿಕತೆಯ ಆಕರ ಕೋಶ  ಸಂಶೋಧನೆಯಲ್ಲಿ ಶುದ್ಧಕೋಶಗಳ  (Stem cell research) ಅಧ್ಯಯನ ಮುಖ್ಯ. ಆರೋಗ್ಯ ಕ್ಷೇತ್ರಕ್ಕೆ ಇದು ಮುಖ್ಯ. ಕೆಲವು ಸ್ಥಳೀಯ ಸಮುದಾಯಗಳು ಈ ಬಗ್ಗೆ ಆತಂಕಿತವಾಗಿವೆ. ಏನೆಂದರೆ ಅವರಿಗೆ ಈ ಸಂಶೋಧನೆ ಬಗ್ಗೆ ನೈತಿಕ ಪ್ರಶ್ನೆಗಳಿವೆ. ನಾನು ಆ ಪ್ರಶ್ನೆಗಳನ್ನು ಈಗ ತರುತ್ತಿಲ್ಲ; ಯಾಕೆಂದರೆ  ವಿಜ್ಞಾನದಲ್ಲಿ  ತಲೆ ಎತ್ತುವ ಈ ನೈತಿಕ ಪ್ರಶ್ನೆಗಳ ಬಗ್ಗೆ  ನಿಮಗೇ ಹೆಚ್ಚು ಅರಿವಿದೆ.  ಇರಲಿ, ವಲಸೆ ಸಾಧ್ಯತೆ ಬಗ್ಗೆ ಒಂದು ಪ್ರಶ್ನೆ ಕೇಳಬೇಕೆಂದಿರುವೆ.

ವಲಸೆ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ಇತರ ವಿಜ್ಞಾನಶಾಖೆಗಳು  ನಿಮ್ಮ ಅಂತಿಮ ತೀರ್ಮಾನ ಗಟ್ಟಿ ಮಾಡಲು ಸಹಾಯ ಮಾಡುತ್ತವಾ? ಇಲ್ಲಾ ಅವು ಸಂಪೂರ್ಣವಾಗಿ ವಂಶವಾಹಿ (ಜಿನೋಮಿಕ್) ಅಂಶಗಳು  ಮತ್ತು ಪ್ರಾಚೀನತೆಯ ಕಾಲನಿರ್ಣಯದ ಮೇಲೆ ಮಾತ್ರ ನಿಂತಿವೆಯೇ?  ನಿಮ್ಮ ದೃಷ್ಟಿಕೋನದ ಪ್ರಕಾರ  ನೀವು   ಪ್ರಾಕ್ತನಶಾಸ್ತ್ರ ಇತ್ತೀಚೆಗಿನ ಚರಿತ್ರೆಗೆ ಸಂಬಂಧಿಸಿದ್ದು ಅಂದಿರಿ.  ಎರಡೋ ಮೂರು ನಿರ್ದಿಷ್ಟ ವಲಸೆ  ಕುರಿತಂತೆ ಹಲವು ದೃಷ್ಟಿಕೋನಗಳ ಬಗ್ಗೆ ಸ್ಪಷ್ಟತೆಯೇ ಇಲ್ಲದ ಕಾರಣ ಭಾರತದಲ್ಲಿ ಚರಿತ್ರೆ ಮತ್ತು ಚರಿತ್ರಾಶಾಸ್ತ್ರದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲ.

ಒಂದು- ದಕ್ಷಿಣಕ್ಕೆ ಉತ್ತರದ ವಲಸೆ: ಅದು ತನ್ನೊಂದಿಗೆ ತಂದ ಭಾಷೆ, ಮಹಾ ಕಾವ್ಯ, ಸಂಸ್ಕೃತಿ, ಮಿಥ್‌ಗಳು, ದೇವರು ಮತ್ತು ಆಹಾರ ಸಂಸ್ಕೃತಿ.  ಅದು ಜರುಗಿದೆ ಎನ್ನುವುದು ಸ್ಪಷ್ಟ. ಈಗ ನಮಗಿರುವುದು ಮಿಶ್ರ ಮಿಥ್‌ಗಳು. ವಲಸೆ ಕುರಿತಾದ ಯಾವುದೇ ಥಿಯರಿಯನ್ನೂ ಕಟ್ಟಲು ಇವು ಪುರಾವೆಗಳೇ ಅಲ್ಲ.  ಆದರೆ ನೀವು  ನಿಮ್ಮ ಕೃತಿಯಲ್ಲಿ ಚರ್ಚಿಸಿರುವ  ಪ್ರಾಚೀನ ವಲಸೆಗಳಲ್ಲಿ ನಾವೆಗಳ ಉಪಯೋಗವನ್ನು ಪರಿಗಣಿಸಬೇಕು. ಕನಿಷ್ಠ ಯಾವುದೊ ರೀತಿಯ ಸಾಗರ ಪಯಣ, ಅದರಲ್ಲೂ ದಕ್ಷಿಣ ಭಾರತದಿಂದ ಸುಮೇರಿಯನ್ ನಾಗರಿಕತೆಯ ವರೆಗೂ.

6-7 ಸಹಸ್ರಮಾನಗಳ ಮೊದಲು ಅಂಥಾ ಸಾಗಣೆ ವಾಹನಗಳಿದ್ದವೇ? ನೀವು ಸಾಮಾನ್ಯವಾಗಿ ಭೌತಿಕ ಸಂಸ್ಕೃತಿ. ಸಾಗರ ಅಧ್ಯಯನ ಅಥವಾ ಕೃಷಿಯಂಥಾ ಅಧ್ಯಯನಗಳ ಸಾಕ್ಷ್ಯಗಳನ್ನು ಪೂರಕ ಪುರಾವೆಗಳಾಗಿ ಬಳಸುತ್ತೀರಾ? ಉದಾಹರಣೆಗೆ: ಭಾರತಕ್ಕೆ ಎರಡು ವಿಧದ ಕೃಷಿವಿಧಾನದ ಹಿನ್ನೆಲೆ ಇದೆ. ಒಂದು ಗೋಧಿ ಆಧಾರಿತ. ಇನ್ನೊಂದು ಅಕ್ಕಿ ಆಧಾರಿತ. ನಾವು ಎರಡು ಕೃಷಿ ಋತುಗಳನ್ನು ಅನುಸರಿಸುತ್ತೇವೆ.  ನಿಮ್ಮ ತೀರ್ಮಾನಗಳನ್ನು ನಿರ್ಧರಿಸುವಾಗ ಈ ಅಂಶಗಳನ್ನೆಲ್ಲಾ ಉಪಯೋಗಿಸುತ್ತೀರಾ?

ಪಿಡಿಆರ್: ಖಂಡಿತಾ! ಶೋಧದ ಹಲವು ಕ್ಷೇತ್ರಗಳಿವೆ.  ತೀರಾ ಹಿಂದಿನ ಕಾಲದ ಬಗ್ಗೆ ನಮಗೆ ಸೀಮಿತ ಮಾಹಿತಿ ಇದೆ. ನಮ್ಮ ಬರೆವಣಿಗೆಗಳೆಲ್ಲಾ ಹೆಚ್ಚೆಂದರೆ 3500 ವರ್ಷಗಳ ಇತಿಹಾಸವನ್ನು ಹಿಡಿಯಬಹುದು, ಅದೂ ಮೌಖಿಕ ಪರಂಪರೆಯಲ್ಲಿ, ಜಗತ್ತಿನ ಯಾವ ಕಡೆಯಲ್ಲೂ ಅದು ನಾಲ್ಕು ಸಾವಿರ ವರ್ಷಕ್ಕಿಂತ ಮೀರಿಲ್ಲ. ಬರೆವಣಿಗೆ ಆರಂಭದಲ್ಲೇ ಇದ್ದ ಪ್ರದೇಶಗಳಲ್ಲಿ 5000 ವರ್ಷದ್ದು ಇರಬಹುದಾದ್ದರಿಂದ ಕಾಲದ ಬಹು ಹಿಂದಿನ ಚರಿತ್ರೆಯ ಬಗ್ಗೆ  ಬರೆವಣಿಗೆಯಲ್ಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ಬರೆವಣಿಗೆಯೇ ಮಾಹಿತಿಯ ಬಲು ಶ್ರೀಮಂತ ಆಕರ. ಪ್ರಾಯಶಃ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುವ ಪುರಾಣಶಾಸ್ತ್ರದಲ್ಲಿನ (Mythology) ಮಾಹಿತಿಯನ್ನು ಕೂಡ ನಾವು ಬಳಸಬಹುದು.

ಜನರು ಮಾತಾಡುವ ಭಾಷೆಗಳನ್ನು ನೋಡಿ,  ಈ ಭಾಷೆಗಳೆಲ್ಲಾ ಒಂದಕ್ಕೊಂದು ಸಂಬಂಧ ಇರುವಂಥವು. ಅವುಗಳ ಪ್ರಾಚೀನ ಶಬ್ದ ಭಂಡಾರವನ್ನು ಮರು ಸೃಷ್ಟಿ ಮಾಡಬಹುದು. ಹೀಗೆ ಪ್ರಪಂಚದ ವಿವಿದ ಭಾಗಗಳಲ್ಲಿ ಮಾತಾಡುವ ಭಾಷೆಗಳ ನಡುವೆ ಇರುವ ಸಂಬಂಧವನ್ನು ಅನಾವರಣಗೊಳಿಸಬಹುದು. ಜೋಡಿ ಭಾಷೆಗಳಿದ್ದಾಗ, ವರ್ತಮಾನದ ಮಂದಿಯ ಜನಾಂಗಿಕ ಮತ್ತು ಮಾನವಶಾಸ್ತ್ರೀಯ (Ethnographic) ಅಧ್ಯಯನಗಳ ಮೂಲಕ ಭಾಷೆ ಹೇಗೆ ಹರಡುತ್ತೆ ಅನ್ನುವುದನ್ನು ತಿಳಿಯಬಹುದು. ಜನರ  ದೊಡ್ಡ ಪ್ರಮಾಣದ ಚಲನೆಯ ಮೂಲಕ, ಅದರಲ್ಲೂ ಮಹಿಳೆಯರ ಮೂಲಕ ಇದು ಹರಡುತ್ತದೆ.  ಜನರು ಭಾಷೆಗಳನ್ನು ಹಂಚಿಕೊಳ್ಳುತ್ತಾರೆ ಎಂಬುದು ಜನರ ಚಲನೆಯ ಬಗ್ಗೆ ಇರುವ ಸೂಚಿಗಳು.

ಜೊತೆಗೆ ಪ್ರಾಕ್ತನಶಾಸ್ತ್ರ ಸಂಶೋಧನೆಯ ಪುರಾವೆ. ಜನರು ಬಿಟ್ಟು ಹೋಗುವ ಭೌತಿಕ ಸಂಸ್ಕೃತಿಯ ಉಳಿಕೆಗಳು, ಅವರು ಕಟ್ಟುವ ಕಟ್ಟಡಗಳ ವಿಧಗಳು, ಉಪಕರಣಗಳ ಸ್ವರೂಪಗಳು, ಕಲ್ಲಿನ ಸ್ವರೂಪಗಳು,  ತಯಾರಿಸುವ ಇಟ್ಟಿಗೆಯ ವಿಧಗಳು, ಜನರು ತಯಾರಿಸುತ್ತಿದ್ದ ಆಭರಣಗಳ ವಿಧಗಳು,  ಅವರು ತಿನ್ನುತ್ತಿದ್ದ ಆಹಾರ ಹೀಗೆ. ಆಹಾರದ ಉಳಿಕೆಗಳಿಂದ ಜನರು ಯಾವ ರೀತಿಯ ಆಹಾರ ತಿನ್ನುತ್ತಿದ್ದರು, ಎಲ್ಲಿ ತಿನ್ನುತ್ತಿದ್ದರು, ಯಾರು ಎಂಥಾದ್ದನ್ನು ತಿನ್ನುತ್ತಿರಲಿಲ್ಲ- ಇಂಥಾದ್ದರ ಮಾಹಿತಿಯ  ಮೂಲಕ ಜನರ  ನಡುವೆ ಇದ್ದ ಸಂಬಂಧಗಳನ್ನು ನೇರವಾಗಿ ಅಳೆಯಬಹುದು.

ಭೂತಕಾಲದ ಬಗ್ಗೆ ಇರುವ ಆಸಕ್ತಿ  ಎಂದರೆ ಅದೊಂದೇ ಕುತೂಹಲದಾಯಕ ಅಲ್ಲ ಎಂಬುದು. ಭೂತಕಾಲ ಬಹಳ ಪ್ರಮುಖ ಉಪಯುಕ್ತ ವಸ್ತು ಆಗಿರದೇ ಇರಬಹುದು ಆದರೆ, ಅದು ಗಮನಿಸಬೇಕಾದ ವಸ್ತು-ಸ್ಥಿತಿ. ಅದೇನೆಂದರೆ, ಒಂದು ಮನುಷ್ಯನ ಅಸ್ತಿಪಂಜರ ದೊರಕಬಹುದೇ? ಅದರಿಂದ ವಂಶವಾಹಿಯನ್ನು ಪಡೆಯಬಹುದೇ? ಹೀಗೆ, ಇದು ಕಳೆದ ದಶಕದಲ್ಲಿ ಸಾಧ್ಯವಾಗಿದೆ. ಆಗಿ ಹೋದ ಎರಡು ಯುಗಗಳ ಮತ್ತು ಸ್ಥಳಗಳ ನಡುವೆ ಇರುವ ವ್ಯಕ್ತಿಗಳು ನಿಕಟ  ಸಂಬಂಧ ಹೊಂದಿದ್ದವರೇ ಅಥವಾ ಬೇರೆ ಬೇರೆಯೇ ಎಂಬ ಪ್ರಶ್ನೆ ಕೇಳಬಹುದು.

ಭಿನ್ನ ಕಾಲಘಟ್ಟಗಳ  ಮನುಷ್ಯರ ಅಸ್ತಿಪಂಜರದ ಪಳೆಯುಳಿಕೆಗಳನ್ನು ನಾವು ಪಡೆದರೆ; ಉದಾ: ಹತ್ತು ಸಾವಿರ ವರ್ಷ, ಏಳು ಸಾವಿರ ವರ್ಷ, ಹಿಂದಿನ, ನಾಲ್ಕು ಸಾವಿರ, ಮತ್ತು, ೨ ಸಾವಿರ ವರ್ಷ ಹಿಂದಿನ ಹೀಗೆ.. ಅವನ್ನು ವರ್ತಮಾನದ ಜನರ ವಂಶವಾಹಿಯ ಜೊತೆ ತುಲನೆ ಮಾಡಿದರೆ, ಒಂದು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು  ಹತ್ತು ಸಾವಿರ ವರ್ಷಗಳ ಹಿಂದೆ ಇದ್ದ  ಪೂರ್ವಜರ ವಂಶಾವಳಿಯಿಂದ  ಇಳಿದು ಬಂದರೋ, ಅಥವಾ ಅತಿರಿಕ್ತ ಚಲನೆ, ವಲಸೆ ಇತ್ತೋ?  ಈ ಭೌಗೋಳಿಕ ಪ್ರದೇಶದಿಂದ ಹೊರಗೆ ಇದ್ದವರ ಕೊಡುಗೆ ಇತ್ತೇ? ಈ ಅಂಶಗಳನ್ನೆಲ್ಲಾ ಪರಿಗಣಿಸಬಹುದು.

ಕಳೆದೊಂದು ದಶಕದಲ್ಲಿ ಭಾರತದಲ್ಲಷ್ಟೇ ಅಲ್ಲದೇ, ವಿಶ್ವದಾದ್ಯಂತ ಪ್ರಾಕ್ತನ ಸ್ಥಳಗಳಿಂದ ಡಿ.ಎನ್.ಎ.ಗಳನ್ನು ಸಂಗ್ರಹಿಸುವುದು ಸಾಧ್ಯವಾಗಿದೆ. ಪ್ರಾಕ್ತನ  ವಿಜ್ಞಾನಿಗಳು ಇದನ್ನು ಆದ್ಯಂತ ಅಭ್ಯಸಿಸಿ, ದಾಖಲಿಸಿ ಅದರೊಂದಿಗೆ ಜೊತೆಗೂಡಿದ್ದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗೇ ಈ ದಾಖಲೆಯನ್ನಿಟ್ಟುಕೊಂಡು ಅದೇ ಪ್ರದೇಶದ ಪ್ರಾಕ್ತನ ಸ್ಥಳದ ಪುರಾವೆಗಳಿಗೂ, ಅಲ್ಲಿ ಇಂದಿರುವ ಜನರಿಗೂ ಇರುವ ಸಂಬಂಧ ಏನು ಎಂಬುದನ್ನು ಮನಗಂಡಿದ್ದಾರೆ.

ಹಲವು ಪ್ರಕರಣಗಳಲ್ಲಿ ಇದನ್ನು ನೀವು ನೋಡಬಹುದು- ಈ ವಂಶವಾಹಿ ಮಾಹಿತಿಗಳಿಂದ ನಾವೇನು ಕಲಿಯುತ್ತಿದ್ದೇವೆ, ಎಂಬುದನ್ನು- ಯಾವುದೇ ಸ್ಥಳದಲ್ಲೂ  ಯಾವುದೇ ಬಾಹ್ಯ ಸಂಬಂಧವಿಲ್ಲದೇ, ಮಿಶ್ರಣವಿಲ್ಲದೇ ನೇರವಾಗಿ ಮೂಲದಿಂದ ಇಳಿದ ಜನರೇ ಇಲ್ಲ ಎಂದು ನಮಗೆ ಈಗ ಗೊತ್ತಾಗಿದೆ. (ಅಂದರೆ ಹತ್ತು ಸಾವಿರ ವರ್ಷ ಮೊದಲು ಅಲ್ಲಿ ಬದುಕುತ್ತಿದ್ದವರಿಂದಲೇ ನೇರವಾಗಿ). ಬೃಹತ್ ಮಾಹಿತಿ ಇರುವ ಯುರೋಪಿನಲ್ಲಿ  ಇದು ನಮಗೆ ಚೆನ್ನಾಗಿ ಗೊತ್ತಾಗಿದೆ.

ಉದಾ:  ಬ್ರಿಟನ್ನಿನಲ್ಲಿ ಹತ್ತು ಸಾವಿರ ವರ್ಷ ಹಿಂದೆ ಬದುಕಿದ ಪೂರ್ವಜರ ಯಾವ ವಂಶವಾಹಿಯ ಅಂಶವನ್ನೂ ಈಗಿರುವ ಬ್ರಿಟನ್ನಿನ ಜನರು ಪಡೆದಿಲ್ಲ. ಕಳೆದ ಹಿಮಯುಗದಲ್ಲಿ ಬದುಕಿದ್ದ ಬ್ರಿಟನ್ನಿನ ಜನರ ಅಂದರೆ ಸುಮಾರು 10 ಸಾವಿರ ವರ್ಷ ಹಿಂದೆ ಬದುಕಿದ್ದವರ ಡಿ.ಎನ್.ಎ. ನಮಗೆ ದೊರೆತಿದೆ. ಇವರ ವಂಶವಾಹಿಯಿಂದ ಅವರ ಕಣ್ಣಿನ ಬಣ್ಣ, ಅವರ ಚರ್ಮದ ಬಣ್ಣವನ್ನೂ ನಾವು ಹೇಳಬಹುದು. ಅವರಿಗೆ ಪ್ರಾಯಶಃ ನೀಲಿಕಣ್ಣುಗಳಿದ್ದವು, ಸಬ್ ಸಹಾರಾದ ಆಫ್ರಿಕಾದ ಜನರಷ್ಟೇ ಕಡುಚರ್ಮದ ಬಣ್ಣ ಹೊಂದಿದ್ದರು.

ಆದರೆ ಸುಮಾರು ಆರು ಸಾವಿರ ವರ್ಷದ ಹಿಂದೆ  ಮುಖ್ಯ ಖಂಡದಿಂದ ದೊಡ್ಡ ಪ್ರಮಾಣದ ಜನರ ವಲಸೆ ಆರಂಭವಾಯಿತು. ಅವರು ಕೃಷಿಯನ್ನೂ ಜೊತೆಗೆ ತಂದರು. ಇದರಿಂದ ಅಲ್ಲಿನ ಸುಮಾರು ಶೇ. 99 ರಷ್ಟು ನಿವಾಸಿಗಳ ಸ್ಥಾನಾಂತರವಾಗಿತ್ತು. ಬ್ರಿಟಿಶ್ ಜನಸಂಖ್ಯೆ ರೈತರಿಂದ ಕೂಡಿದ್ದಾಯ್ತು. ಮತ್ತೆ ಸುಮಾರು 4,500 ವರ್ಷ ಹಿಂದೆ ಶೇ. 90 ರಷ್ಟು ಪ್ರಮಾಣದ ಇನ್ನೊಂದು ಸ್ಥಾನಾಂತರವಾಯಿತು. ಆದ್ದರಿಂದ ಬ್ರಿಟಿಶರು  ತಾವು ಬ್ರಿಟನ್ನಿನಲ್ಲೇ ಬದುಕಿದ್ದವರ  ವಂಶವೆಂದು ಹೇಳಿಕೊಳ್ಳುವುದು ಕಷ್ಟ.

ಅದಕ್ಕೆ ಬದಲಾಗಿ ಬಹುದೊಡ್ಡ ಪ್ರಮಾಣದ ಮಥನ ನಡೆದಿತ್ತು. ಭಾರತದ ವಿಚಾರದಲ್ಲೂ ಅಷ್ಟೇ. ಯಾವುದೇ ಒಂದು ಜಾಗದಲ್ಲಿ ವಾಸಿಸುವ ಮಂದಿ ಅಖಂಡ ಪೂರ್ವಜ ಸಂಬಂಧ ಹೊಂದಿರಹುದು, ಪ್ರಾಯಶಃ ಬ್ರಿಟನ್ನಿಗಿಂತ ಜಾಸ್ತಿ, ಆದರೆ ಯಾವನೇ ಒಬ್ಬನ ವಂಶವಾಹಿ ಬಳುವಳಿ ಆತ ವಾಸಿಸುವ 500-1000 ಕಿಮೀ ವಲಯದಲ್ಲಿ ಈಗ ವಾಸಿಸುತ್ತಿರುವ ಜನರಿಂದಂತೂ ಬಂದಿಲ್ಲ.

ಇಂದು ನಾವೆಲ್ಲ  ಮಾನವನ ಬಳುವಳಿಯ ಸರಪಳಿಯಲ್ಲಿ ಸಂಕರಗೊಂಡೇ ಬಂದಿದ್ದೇವೆ. ಹತ್ತು ಹಲವು ಮೂಲಗಳಿಂದ ನಾವು  ಪಡಕೊಂಡಿದ್ದೇವೆ. ಭಾರತದಲ್ಲಿ ಕಳೆದೊಂದು ದಶಕದ ಸಂಶೋಧನೆಯಲ್ಲಿ ಅರಿತಿದ್ದೇನೆಂದರೆ, ಇಂದು ನಾವು ಈ ಹಂತ ಹಂತದ ವಂಶ ಮೂಲದ ಬಗ್ಗೆ  ಸಾಕಷ್ಟು ಅರಿತಿದ್ದೇವೆ. ಭಾರತದಲ್ಲಿನ ಎರಡು ಗುಂಪುಗಳ ಬಗ್ಗೆ ಹೇಳಿದೆ. ಅವು ಯುರೋಪಿಯನ್ನರು ಮತ್ತು ಪೂರ್ವ ಏಷ್ಯನ್ನರು ಹೇಗೆ ಭಿನ್ನವೋ ಅಷ್ಟೇ ಭಿನ್ನ. ಜನಸಂಖ್ಯೆಯ  ಮುಖಾಮುಖಿ ಮತ್ತು ಸಂಕರ – ಹರಪ್ಪ ನಾಗರಿಕತೆಯ ಅವಧಿಯಲ್ಲಿ, ಅದರ ಮೊದಲು ಅಥವಾ ನಂತರ ಅಂದರೆ 4000 ವರ್ಷಗಳ ತರುವಾಯ ಜರುಗಿತು ಎಂಬುದೀಗ ನಮಗೆ ಗೊತ್ತು. ಈ  ಸಂಕರ ಶುರುವಾಗಿದ್ದುಆಗ. 

(ಮುಂದುವರೆಯುತ್ತದೆ)

ಮೂಲ: ಜಿ. ಎನ್‌. ದೇವಿ

ಅನುವಾದ: ಕೆ. ಪಿ. ಸುರೇಶ್ 

(ಅನುವಾದಕರಾದ ಕೆ ಪಿ ಸುರೇಶ್, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರಾಗಿದ್ದಾರೆ. ವಿಜ್ಞಾನಗಳ ಜೊತೆಗೆ ನಿಕಟ ಸಂಬಧ ಇಟ್ಟುಕೊಂಡಿರುವವರು. ಪತ್ರಿಕೆಗಳಿಗೆ ನಿಯತವಾಗಿ ಲೇಖನಗಳನ್ನು ಬರೆಯವ ಸುರೇಶ್, ಜಿ. ಎನ್. ದೇವಿಯವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...