Homeಮುಖಪುಟಪ್ರತಿಕ್ರಿಯೆ; ಕೊಲ್ವ ಮುನ್ನ ಸೊಲ್ಲಡಗಿಸುವ ಹುನ್ನಾರ

ಪ್ರತಿಕ್ರಿಯೆ; ಕೊಲ್ವ ಮುನ್ನ ಸೊಲ್ಲಡಗಿಸುವ ಹುನ್ನಾರ

- Advertisement -
- Advertisement -

‘ಕೊಲ್ವ ಮುನ್ನ ಸೊಲ್ಲಡಗಿಸು’ ಇದೊಂದು ಕನ್ನಡದ ನಾಣ್ಣುಡಿ. ಕೊಬ್ಬಿದ ಹಂದಿಯನ್ನು ಹಬ್ಬಕ್ಕೆ ಕೊಯ್ಯುವಾಗ ಅದು ಕುಯ್ಯೊ ಎಂದು ಊರು ಕೇರಿ ಹಾರಿಹೋಗುವಂತೆ ಕಿರುಚುತ್ತದೆ. ಅದರ ದಪ್ಪ ಕತ್ತು ಕತ್ತರಿಸುವುದು ತಡವಾಗುತ್ತದೆಂದು ಚೂರಿಯಿಂದ ಕುತ್ತಿಗೆ ಇರಿದು ನೆತ್ತರು ಹರಿಸಿ ಸೊಲ್ಲಡಗಿಸಿ, ಅನಂತರ ನಿಧಾನವಾಗಿ ಕೊಯ್ಯುತ್ತಿದ್ದರು-ನಮ್ಮ ಹಳ್ಳಿಯಲ್ಲಿ. ’ಕೊಲ್ವ ಮುನ್ನ ಸೊಲ್ಲಡಗಿಸುವುದು’ ಎಂದರೆ ಇದು. ಒಂದು ನುಡಿಯನ್ನಾಡುವ ಒಂದು ಜನಾಂಗವನ್ನು ಕೊಲ್ಲುವ ಮುನ್ನ ಅವರ ಸೊಲ್ಲ (Mother Tongue) ಅಡಗಿಸಬೇಕು. ಒಂದು ಭಾಷೆ-ಸೊಲ್ಲು-ನುಡಿ ಜೀವಂತ ಇದೆ ಎಂದರೆ ಅದನ್ನಾಡುವ ಸಮೂಹ ಜೀವಂತ ಇದೆ ಎಂದರ್ಥ. ಇದು ಜೀವಾತ್ಮ ಸಂಬಂಧ. ಆದ್ದರಿಂದ ಒಂದು ಜನಾಂಗವನ್ನು ನಾಶಮಾಡುವುದೆಂದರೆ ಮೊದಲು ಅವರಾಡುವ ’ಮಾತನ್ನು ಮನ್ನ’ ಮಾಡಬೇಕು-ನಾಶಗೊಳಿಸಬೇಕು. ’ಮಾತು’ ಮರೆತ ಜನಾಂಗ ಬದುಕಿದ್ದರೂ ಸತ್ತಂತೆ ತಾನೆ? ಭಾಷೆ ಎಂದರೆ ನಮ್ಮ ಸಂಸ್ಕೃತಿಯ ಅಭಿವ್ಯಕ್ತಿ. ಅದನ್ನು ಮರೆತೆವೆಂದರೆ ನಮ್ಮ ’ಅಸ್ಮಿತೆ’ಯನ್ನೇ (Identity) ಮರೆತಂತೆ. ಒಮ್ಮೆ ಮಾತು ’ವಿಸ್ಮೃತಿ’ಗೆ ಹೋಯಿತೆಂದರೆ ಅದನ್ನಾಡುವ ಜನ ಗೆದ್ದವರ ಗುಲಾಮರು. ಗುಲಾಮರಾಗುವ ಜನ ಅನುಗಾಲ ಬದುಕಿದರೇನು ಬಂತು? ಸರಪಣಿಯಲ್ಲಿ ಕಟ್ಟಿಸಿಕೊಂಡ ನಾಯಿಗೆ ಸ್ವಾತಂತ್ರ್ಯ ಉಂಟೆ?

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ

ಎಂದು ರಾಷ್ಟ್ರಕವಿ ಕುವೆಂಪು 1935ರಲ್ಲೇ ಎಚ್ಚರಿಸಿದರು. ಆದರೆ ಇವತ್ತಿಗೂ ಕನ್ನಡಿಗರು ಎಚ್ಚರಗೊಳ್ಳಲಾಗಿಲ್ಲ. ಇಂಗ್ಲಿಷ್ ಹಿಂದಿ ಸಂಸ್ಕೃತದ ಹೊರೆ ಇಳಿಯಲಿಲ್ಲ. ’ಕರ್ನಾಟಕ ಎಂಬುದೇನು ಬರಿಯ ಹೆಸರೆ ಮಣ್ಣಿಗೆ?’ ಎಂದು ಕೇಳಲಾಗಿಲ್ಲ! ಸ್ವಾತಂತ್ರ್ಯವೂ ಬಂತು; ಸ್ವರಾಜ್ಯವೂ ಆಯಿತು; ಭಾಷಾವಾರು ಪ್ರಾಂತ್ಯಗಳೂ ಆದುವು.
ಒಂದೊಂದು ಭಾಷೆಯೂ ಒಂದೊಂದು ರಾಷ್ಟ್ರೀಯತೆ. ಆದರೆ ಕೂಡು ರಾಷ್ಟ್ರಗಳಿಗೆ ಸಲ್ಲಬೇಕಾದ ’ಸಮಬಾಳು ಸಮಪಾಲು’ ದಕ್ಕಲಿಲ್ಲ. ಉತ್ತರದವರದೇ ಪಾರುಪತ್ಯ. ’ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ?’ ಎಂದು ಕವಿವರ ಕೇಳಿದರು. ಆದರೂ ನಮ್ಮವರೆ ಈಗ ಹದಹಾಕಿ ತಿವಿಯುತ್ತಲೇ ಇದ್ದಾರೆ- ಮತ್ತೆಮತ್ತೆ! ಕೇಳುವರಾರು?

ಕುವೆಂಪು

ಇಷ್ಟೆಲ್ಲಾ ಪ್ರಸ್ತಾಪಿಸಿದ ಕಾರಣ ಇಷ್ಟೆ. ಇದೇ ಮಾರ್ಚ್ 30, 2022ರ ನ್ಯಾಯಪಥ ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ಡಾ.ಎಂ.ರವಿಯವರ ’ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?’ ಎಂಬ ಲೇಖನವನ್ನು ಓದಿದ್ದು. ಇವತ್ತು ಕನ್ನಡ ಕಲಿಕೆ, ಪ್ರಶ್ನೆ ಪತ್ರಿಕೆ ಮೊದಲುಗೊಂಡು ಯಾವ ಮಟ್ಟದಲ್ಲಿದೆ? ಕಲಿತರೂ ಉದ್ಯೋಗ ಸಿಗುತ್ತದೆಯೆ? ಯಾಕಿಂತ ದುರ್ಗತಿ ಬಂದಿದೆ? ಇದಕ್ಕೆಲ್ಲಾ ಕಾರಣರು ಯಾರು? ಇಂದಿನ ವ್ಯವಸ್ಥೆಗೆ ಕನ್ನಡದ ಬಗ್ಗೆ ಯಾಕೀ ಅಸಡ್ಡೆ? ಇವುಗಳೆಲ್ಲ ಕನ್ನಡ ಅಸ್ಮಿತೆಯ, ಅಸ್ತಿತ್ವದ, ಅನ್ನದ ಪ್ರಶ್ನೆಗಳಲ್ಲವೆ? ಎಂದು ರವಿ ಮೊನಚು ಭಾಷೆಯಲ್ಲಿ ತಿವಿದು ಕೇಳುತ್ತಿದ್ದಾರೆ-ಘೇಂಡಾಮೃಗದ ದಪ್ಪ ಚರ್ಮಕ್ಕೂ ಚುರುಕು ಮುಟ್ಟುವಂತೆ. ಆದರೆ ಈ ಕನ್ನಡದ ಕಂದನ ದನಿ ವಿಧಾನಸೌಧ, ಪಾರ್ಲಿಮೆಂಟ್ ಭವನಕ್ಕೆ ಮುಟ್ಟೀತೆ? ಖಾಸಗಿ ಶಾಲಾ ಕಾಲೇಜು ಸಂಘಸಂಸ್ಥೆಗಳಿಗೆ ಕೇಳುವುದೇ? ಪೋಷಕರಿಗೆ ಮುಟ್ಟುವುದೇ? ಇಲ್ಲ.

ಐ.ಪಿ.ಎಸ್; ಕೆ.ಎ.ಎಸ್ ಪರೀಕ್ಷೆಗಳಲ್ಲಿ ಕನ್ನಡವನ್ನು ಕೈಬಿಡಲಾಗಿದೆ. ಕೇಂದ್ರ ರೈಲ್ವೆ, ಅಂಚೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಮಾತಾಡುವವರು ಕಣ್ಮರೆಯಾಗುತ್ತಿದ್ದಾರೆ. ಎಲ್ಲವೂ ಹಿಂದಿಯದೇ ಮೇಲುಗೈ! ಒಂದು ಜನಾಂಗ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ. ಒಂದು ಜಿ.ಎಸ್.ಟಿ ಮುಂತಾಗಿ ಹೇಳುತ್ತಾ ಉಳಿದಂತೆ ಎಲ್ಲವನ್ನು ಮೂಲೆಗೆ ತಳ್ಳಲಾಗುತ್ತಿದೆ. ಹಿಂದೆಯೇತರ ಪ್ರಾದೇಶಿಕ ಭಾಷೆಗಳು ನೂಕಿದಾಕಡೆ ಬಿದ್ದು ಸೊರಗಬೇಕಾಗಿದೆ. ಶಾಸಕರು, ಸಂಸದರು ಪಕ್ಷಸಿದ್ಧಾಂತ, ಸ್ವಧರ್ಮ, ಸ್ವಜಾತಿ, ಕಡೆಗೆ ಕಾಂಚನವೆಂಬ ಮೃಗದ ಬೆನ್ನು ಹತ್ತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇತ್ತ ಮತದಾರ ಪ್ರಭುಗಳು ಚುನಾವಣೆ ಬರುತ್ತವೆ ಹೋಗುತ್ತವೆ, ಯಾವ ಪಕ್ಷ ಆಳಿದರೇನು? ನಾವು ಗೈಯ್ಯುವುದು ತಪ್ಪೀತೆ? ಎಂಬ ಕರ್ಮ ಸಿದ್ಧಾಂತ ನಂಬಿ ದುಡಿಯುತ್ತಿದ್ದಾರೆ. ಆದರೂ ನಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಸಾಕು ಉದ್ಧಾರ ಆಗುವರೆಂಬ ಭ್ರಮೆಯಿಂದ ಕೂಲಿನಾಲಿ ಮಾಡಿ ಹೊಟ್ಟೆಬಟ್ಟೆ ಕಟ್ಟಿ ಹಣ ಕೂಡಿಸಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ಮಕ್ಕಳು ಇಂಗ್ಲಿಷ್ ಹಿಂದಿ ವ್ಯಾಕರಣ ನಿಯಮಗಳನ್ನು ಕಲಿಯುವುದರಲ್ಲಿಯೇ ಅವರ ಶಾಲಾ ಜೀವನ ಮುಗಿಯುತ್ತದೆ. ಅಷ್ಟರಲ್ಲಿ ಅವರ ಸೃಜನಶೀಲ ಪ್ರತಿಭೆ ಮುರುಟಿ ಹೋಗುತ್ತದೆ. ಮಾತೃಭಾಷೆ ಮರೆತು ಹೋಗುತ್ತದೆ; ತಾಯಿನುಡಿ ತೊದಲುತ್ತದೆ!

ತಾಯಿನುಡಿಯ ಬಗ್ಗೆ ನ್ಯಾಯದ ತಕ್ಕಡಿಯಂತೂ ಮ್ಯಾನೇಜ್ ಮೆಂಟ್ ಶಾಲೆಗಳ ಕಡೆಗೆ ವಾಲುತ್ತದೆ. ಸರ್ಕಾರಿ ಶಾಲೆಗಳ ಕಲಿಕಾಮಟ್ಟ, ಮೂಲಸೌಕರ್ಯ ಖಾಸಗೀ ಶಾಲೆಗಳ ಮಟ್ಟದಲ್ಲಿದ್ದೂ ಯಾಕೆ ನೀವು ಮಕ್ಕಳನ್ನು ಗೋಳಾಡಿಸುತ್ತೀರಿ ಎಂದು ಬಿಡಿಸಿ ಹೇಳುವುದಿಲ್ಲ. ಮತ್ತು ನ್ಯಾಯಾಲಯಗಳಲ್ಲೂ ಕನ್ನಡ ಮಾಧ್ಯಮ ಜಾರಿಗೆ ಬಂದಿಲ್ಲ. ಯಥಾ ರಾಜ ತಥಾ ಪ್ರಜೆ. ಅಷ್ಟೇ ಅಲ್ಲ ನ್ಯಾಯಾಲಯಗಳೂ ಸಹ-ಕನ್ನಡದಲ್ಲಿ ತೀರ್ಪು ನೀಡುತ್ತಿಲ್ಲ. ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ’ವಿಶ್ವಗುರು’ ಎಂದು ತನ್ನ ಬೆನ್ನನ್ನು ತಾನೆ ತಟ್ಟಿಕೊಳ್ಳುತ್ತಿರುವ ಭಾರತವು ’ಇದು ಬಹುಭಾಷಾ ಸಂಸ್ಕೃತಿಗಳ ಕೂಟ ರಾಷ್ಟ್ರ ವ್ಯವಸ್ಥೆ’ ಎಂಬ ಸಂವಿಧಾನದ ಮಾತನ್ನೇ ಮರೆತು ವರ್ತಿಸುತ್ತಿದೆ. ನಮ್ಮ ಕವಿ ಸರ್ವಜ್ಞ ’ಮಾತನೆ ಉಣಕೊಟ್ಟು, ಮಾತನೆ ಉಡಕೊಟ್ಟು, ಮಾತಿನ ಮುತ್ತ ಸುರಿಸಿ ಹೋದಾತನೇ ಜಾಣ’ ಎಂದ ಮಾತು ನಿಜವಾಗುತ್ತಿದೆ.

ಹಿಂದೆ ವಸಾಹತು ಸಾಮ್ರಾಜ್ಯಶಾಹಿ ವಿಸ್ತರಣವಾದಿಗಳು ಆಫ್ರಿಕಾ, ಇಂಡಿಯಾ ಮುಂತಾದ ತಮ್ಮ ವಸಾಹತು ರಾಷ್ಟ್ರಗಳನ್ನು ವಶಪಡಿಸಿಕೊಳ್ಳುವ ಕಾಲಕ್ಕೆ, ಇಲ್ಲಿಯ ನೈಸರ್ಗಿಕ ಸಂಪತ್ತನ್ನೂ ಮಾನವ ಬಲವನ್ನೂ ಕೊಳ್ಳೆ ಹೊಡೆಯುವುದಕ್ಕಾಗಿ ಎರಡು ಬಗೆಯ ಕಾರ್ಯಾಚರಣೆಯನ್ನು ಕೈಗೊಂಡರು; ಒಂದು ತಮ್ಮ ಮತಧರ್ಮವೇ ಸರ್ವಶ್ರೇಷ್ಠ ಎಂಬ ಪ್ರಚಾರ; ಇನ್ನೊಂದು ತಮಗೆ ಬೇಕಾದ ಯೋಧರನ್ನು ಹಾಗೂ ಗುಮಾಸ್ತರನ್ನು ತಯಾರು ಮಾಡಿಕೊಳ್ಳುವುದಾಗಿ ದೇಶೀಯರಿಗೆ ಇಂಗ್ಲಿಷ್ ಕಲಿಸುವಿಕೆ. ಇದರ ಪರಿಣಾಮ ಏನಾಯಿತು? ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಹೋದವು. ನಮ್ಮ ಶೂದ್ರ, ರೈತ, ದಲಿತರ ಮಕ್ಕಳು ಬಂದೂಕು ಹಿಡಿದು ಸ್ವದೇಶಿ ಚಳವಳಿಯ ನೇತಾರರತ್ತಲೇ ಗುರಿಯಿಟ್ಟರು. ಇಂಗ್ಲಿಷ್ ಕಲಿತ ಬಿಳಿಕಾಲರ್ ಗುಮಾಸ್ತರು ದುಭಾಷಿಗಳೂ ದಲ್ಲಾಳಿಗಳೂ ಆಗಿ ಸಂಪತ್ತುಗಳಿಸಿ ನಮ್ಮವರ ಶೋಷಣೆಗೇ ನೆರವಾದರು.

ಪ್ರಸ್ತುತ ರಾಜಕಾರಣಿಗಳು ಇದೇ ಮಾರ್ಗ ಹಿಡಿದು, ಸ್ವಧರ್ಮ, ಸ್ವಜಾತೀಯ ದೇವರು ಧರ್ಮಕ್ಕೆ ಸಂಬಂಧಿಸಿದ ಮೂಢನಂಬಿಕೆಗಳಿಗೆ ಒತ್ತುಕೊಟ್ಟು ಬಿತ್ತಿಬೆಳೆದು ಓಟು ಗಿಟ್ಟಿಸಿ ಗೆಲ್ಲುತ್ತಾರೆ. ಆಮೇಲೆ ಗೆದ್ದ ಏಣಿಯನ್ನು ಒದ್ದು ಮೇಲೇರುತ್ತಾರೆ. ಹಿಂದೆ ನೋಡಿದರೆ ಸಾವು ನೋವಿನ ಬದುಕು ಹಾಗೇ ಬಿದ್ದಿದೆ! ಈಗ ಇದನ್ನೆಲ್ಲ ರಿಪೀಟ್ ಮಾಡಿ ಪ್ರಯೋಜನ ಇಲ್ಲ. ಸತ್ತಂತಿಹರನು ಬಡಿದೆಚ್ಚರಿಸುವ ಡಿಂಡಿಮ ಎಲ್ಲಿ ಹೋಯಿತು? ಒಡಕು ದನಿ ಬರುತ್ತಿದೆಯಲ್ಲ ಏನು ಮಾಡಬೇಕು? ಕನ್ನಡಿಗರೂ ಉಳಿಯಬೇಕು; ಕನ್ನಡವೂ ಉಳಿಯಬೇಕು.

ಏನು ಮಾಡಬೇಕು ಎಂಬುದನ್ನು ಕುವೆಂಪು 1965ರಲ್ಲಿ ’ರಾಷ್ಟ್ರಕವಿ ಪ್ರಶಸ್ತಿ’ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ: “ಮಹನೀಯರೆ, ಕೊನೆಯದಾಗಿ ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು; ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು. ವಿವರಕ್ಕಾಗಲಿ ವಾದಕ್ಕಾಗಲಿ ಜಿಜ್ಞಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವೂ ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೆ ನನ್ನ ಸದ್ಯಃಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರೂ ನೂರಾರು ಸ್ವದೇಶೀಯ ಮತ್ತು ವಿದೇಶೀಯ ವಿದ್ಯಾತಜ್ಞರೂ ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ. ಹೊತ್ತಗೆಗಳನ್ನೆ ಪ್ರಕಟಿಸಿಯೂ ಇದ್ದಾರೆ. ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷ ವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಾಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿ ಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆಗಳ ಮೊತ್ತವೆ ಆದರೂ ಆಗಬಹುದೇನೊ!

ಇಂಗ್ಲಿಷ್ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಚಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯರೋಗಿಯಂತಿರಬೇಕಾಗುತ್ತದೆ.”

ಇಂದಿಗೂ ಪರಿಸ್ಥಿತಿ ಕುವೆಂಪು ಹೇಳಿದ ಹಾಗೇ ಇದೆ. ವಿದ್ಯಾರ್ಥಿಗಳ, ರೈತರ, ದಲಿತರ, ಮಹಿಳೆಯರ, ಮಕ್ಕಳ ದನಿ ಕೇಳುವರೇ ಇಲ್ಲ. ಧರೆಯೆದ್ದು ಉರಿದರೆ ಆರಿಸುವವರಾರು? 1812ರಲ್ಲಿ ಸಾಮ್ರಾಜ್ಯಶಾಹಿ ನೆಪೋಲಿಯನ್ ತನ್ನ ಹನ್ನೆರಡು ಲಕ್ಷದಷ್ಟು ಸೈನ್ಯ ಸಮೇತ ದಂಡೆತ್ತಿ ಬಂದು ಮಾಸ್ಕೋ ನಗರದ ಬಾಗಿಲಿಗೆ ನಿಲ್ಲಿಸುತ್ತಾನೆ. ಆಗ ಏನಾಯಿತು? ಅದುವರೆಗೆ ಫ್ರೆಂಚ್ ಭಾಷೆ, ಫ್ರೆಂಚ್ ಸಂಸ್ಕೃತಿಯನ್ನೇ ಅನುಕರಿಸುತ್ತಾ ಅದೇ ಭ್ರಮೆಯಲ್ಲಿ ತಮ್ಮ ಅಸ್ಮಿತೆಯನ್ನೇ ಮರೆತು ಅದೇ ನಾಗರಿಕತೆ ಎಂದು ಮೈಮರೆತು ಹೋಗಿದ್ದ ರಷ್ಯಾದ ಎಲೈಟ್ ಜನ ಒಮ್ಮೆಗೆ ಸಿಡಿಲು ಬಡಿದಂತಾಗಿ ಎಚ್ಚರಗೊಂಡರಂತೆ. ಆದಿಮ ರಷ್ಯಾದ ವೃದ್ಧ ಸಿಂಹ ಒಮ್ಮೆಗೆ ಎದ್ದು ಮೈಮುರಿದು ಬಾಯ್ದೆರೆದು ಆಕಳಿಸಿ ಘರ್ಜಿಸುತ್ತಾ ಫ್ರೆಂಚ್ ಯೋಧರನ್ನು ಬೆನ್ನಟ್ಟಿ ಹೋಗಿ ಹಿಮ್ಮೆಟಿಸಿ ತನ್ನ ದೇಶ-ಭಾಷೆ ಸಂಸ್ಕೃತಿಯನ್ನು ಜತನ ಮಾಡಿತು ಎಂದು ಮಹರ್ಷಿ ಟಾಲ್‌ಸ್ಟಾಯ್ ತಮ್ಮ ‘War and Peace’ ಎಂಬ ಬೃಹತ್
ಕಾದಂಬರಿಯಲ್ಲಿ ಕಾಣಿಸುತ್ತಾರೆ. ಪ್ರಸ್ತುತ ಕನ್ನಡದ ’ಸೊಲು’ ಕನ್ನಡಿಗರ ಅಸ್ಮಿತೆ ಉಳಿಯಬೇಕಾದರೆ ಸಂವಿಧಾನಾತ್ಮಕ ರೀತಿಯಲ್ಲೇ ಸಮಸ್ತ ಕನ್ನಡಿಗರು ಪ್ರತಿಭಟಿಸಿ ದಂಗೆಯೇಳಬೇಕು. ಯಾಕೆಂದರೆ ಆತ್ಮಾಭಿಮಾನ ಸವೋತ್ಕೃಷ್ಟ!

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others


ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಶ್ರೀಯುತ ಪ್ರೊ.ಶಿವರಾಮಯ್ಯನವ ರ ಲೇಖನ ಸಂದರ್ಬೋಚಿತವಾಗಿದ್ದು, ನಾವೆಲ್ಲರೂ ಕೂಡ ಆತ್ಮ ವಿಮರ್ಶೇಯ ಜೊತೆಗೆ ಮುಂದಿನ ದಿನಗಳಲ್ಲಿ ಭಾಷಾ ಉಳಿವು ಮತ್ತು ಕನ್ನಡಜನ ಉಳಿವಿನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

  2. ಇದೊಂದು ಅತ್ಯುತ್ತಮ ಸಕಾಲಿಕ ಲೇಖನವಾಗಿದ್ದು, ಇದನ್ನು ಡಾಬಸ್ ಪೇಟೆ ವಾಯ್ಸ್ ಕನ್ನಡ ಮಾಸ ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ನೀಡಬೇಕಾಗಿ ವಿನಂತಿ.

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...