Homeಕರ್ನಾಟಕಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?

ಕರ್ನಾಟಕದಲ್ಲಿ ಕನ್ನಡಕ್ಕೆ ಭವಿಷ್ಯವಿದೆಯೇ?

- Advertisement -
- Advertisement -

ಕರ್ನಾಟಕದಲ್ಲಿ ಕನ್ನಡಾಭಿಮಾನ ಉಕ್ಕಿ, ಧುಮ್ಮಿಕ್ಕುವುದು ನವೆಂಬರ್ ತಿಂಗಳಲ್ಲಿ! ಆಗಾಗ ರಾಜಕೀಯ ಕೃಪಾಶೀವಾರ್ದಲ್ಲಿ ರಾಜ್ಯವನ್ನೇ ಬಂದ್ ಮಾಡಿಸುವ ನದಿನೀರಿನ ಗಲಾಟೆಗಳಲ್ಲಿ! ಗಡಿ ರಾಜ್ಯಗಳೊಂದಿಗೆ ಭಾಷಾ ಸಂಘರ್ಷಗಳಲ್ಲಿ ಇನ್ನೂ ಹೆಚ್ಚಾಗುತ್ತದೆ. ಒಮ್ಮೊಮ್ಮೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಕೆಯ ಪ್ರಶ್ನೆ ಉದ್ಭವಿಸಿದಾಗ ಕೂಗು ಅನುರಣಿಸುತ್ತದೆ. ಕೆಲವು ಬಾರಿ ಹೊರರಾಜ್ಯದವರು ಕನ್ನಡ ನೆಲದಲ್ಲಿ ತಮ್ಮ ಭಾಷೆಗಳನ್ನಾಡಿದಾಗ, ಅವರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನವು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸಲ್ಪಡುತ್ತದೆ! ’ಕೊತ್ತಿಮಿರಿ ಸೊಪ್ಪು’ ಎಂದಾಗ ನಾಡಿನುದ್ದಗಲಕ್ಕೂ ಕನ್ನಡ ಬಳಕೆಯ ಬಗ್ಗೆ ವ್ಯಾಪಕ ಟೀಕೆಗಳು, ಕುಹಕಗಳು ಕೇಕೆಹಾಕುತ್ತವೆ. ಅದೇ ತಂತಮ್ಮ ನೆಚ್ಚಿನ ರಾಜಕೀಯ ನಾಯಕರು ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಮೊದಲಾದ ಸಮಾರಂಭಗಳಲ್ಲಿ ಬಿಗಿಯುವ ಭಾಷಣಗಳಲ್ಲಿ ಎಷ್ಟೆಲ್ಲಾ ಉಚ್ಚಾರ ದೋಷಗಳಾದರು ಅವುಗಳು ’ಕೊತ್ತಿಮಿರಿ ಸೊಪ್ಪ’ನ್ನು ಮೀರಿಸಲಾರವು! ಇಂತಹ ಕೆಲವು ವಿಷಯಗಳಿಗೆ ನಮ್ಮ ಎದೆ ಕುಣಿದಾಡುತ್ತದೆ. ಕಿವಿಗಳು ನಿಮಿರುತ್ತವೆ. ವಾಸ್ತವದಲ್ಲಿ ನಮ್ಮ ಮೌನದಿಂದಾಗಿ ಕರ್ನಾಟಕದಲ್ಲಿಯೇ ಕನ್ನಡದ ಅವಸಾನಕ್ಕೆ ಕಾರಣೀಭೂತರಾಗುತ್ತಿದ್ದೇವೆ ಎಂಬುದನ್ನು ಹೇಳಬೇಕಿಲ್ಲ.

ಇತ್ತೀಚಿನ ದಿನಗಳಲ್ಲಿ ಸರ್ಕಾರಕ್ಕೆ ಕನ್ನಡದ ಭಾಷೆ, ಕನ್ನಡ ವಿಶ್ವವಿದ್ಯಾಲಯಗಳಿಂಗಿತಲೂ ಸಂಸ್ಕೃತ ಭಾಷೆ, ಸಂಸ್ಕೃತ ವಿಶ್ವವಿದ್ಯಾಲಯಗಳೇ ಮುಖ್ಯವಾಗುತ್ತಿವೆ. ಜನಪ್ರತಿನಿಧಿಗಳು ಸಂಸ್ಕೃತ ವಿಶ್ವವಿದ್ಯಾಲಯ ಇರುವ ಕಡೆ ಇಡೀ ವಿಶ್ವವೇ ನೋಡುತ್ತದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತದಲ್ಲಿ ಪ್ರಾಚೀನ ಭಾಷೆಗಳಲ್ಲಿಯೇ ಒಂದಾದ ತಮ್ಮ ಮಾತೃಭಾಷೆಗಿಂತ, ಮೃತಭಾಷೆಯ ಮೇಲಿನ ವ್ಯಾಮೋಹಕ್ಕೆ ಬಿದ್ದು, ಜನರ ಹಣದಿಂದ ಹೆಣವನ್ನು ಸಿಂಗಾರ ಮಾಡುತ್ತಿದ್ದಾರೆ. ಮುಂದೊಂದು ದಿನ ಕನ್ನಡದ ಬದಲಿಗೆ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಯಲೇಬೇಕೆಂದರೂ ಕಲಿಯಲು ಸಿದ್ಧರಾಗಬೇಕು. ದೈವಭಾಷೆಯನ್ನಾಡುವವರ ಪ್ರಭಾವಕ್ಕೆ ಸರ್ಕಾರ ಮಣಿಯದೇ ಇರುತ್ತದೆಯೇ? ದೈವವಾಣಿಯ ಪ್ರತೀಕವಾಗಿ ಘೋಷಣೆ ಬಂದರೆ ಪ್ರಸಾದವೆಂದು ಸ್ವೀಕರಿಸಬೇಕು. ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ಕೆಲಸವಾಗುತ್ತಿದೆ. ಪ್ರಶ್ನೆಯೆಂದರೆ ಭಗವದ್ಗೀತೆಯ ಭಾಗವನ್ನು ಕನ್ನಡದಲ್ಲಿ ಕಲಿಸುತ್ತಾರೋ ಅಥವಾ ಸಂಸ್ಕೃತದಲ್ಲಿಯೋ ಕಾಯಬೇಕು. ವಿಶ್ವದ ಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಮೂಲಕ ಕನ್ನಡವನ್ನು ವಿಶ್ವಕ್ಕೆ ವಿಸ್ತರಿಸುವ ನೈತಿಕ ಜವಾಬ್ದಾರಿಯನ್ನು ಮರೆತಿದ್ದಾರೆ.

ಯಾವುದೇ ಲಾಭಾಪೇಕ್ಷೆಯಿಲ್ಲದೆ ಕನ್ನಡ ಬಳಸುತ್ತಿರುವವರು ಸಾಮಾನ್ಯ ಜನರು ಮಾತ್ರ. ಸರ್ಕಾರಕ್ಕೆ ’ಮಿನಿ ವಿಧಾನಸೌಧ’ದ ಹೆಸರನ್ನು ಕನ್ನಡೀಕರಿಸುವುದೇ ಮಹತ್ವದ ಕೈಂಕರ್ಯವಾಗಿದೆ. ಸರ್ಕಾರದ ಕನ್ನಡ ಅಧಿಸೂಚನೆಗಳನ್ನು ಗಮನಿಸಿದರೆ ’ಸರ್ಕಾರಿ ಕನ್ನಡ ಭಾಷೆ’ಯ ಅಧ್ವಾನಗಳು ನಮಗೆ ತಿಳಿಯುತ್ತವೆ. ಮೊದಲಿಗೆ ಇಂಗ್ಲಿಷಿನಲ್ಲಿ ಸಿದ್ಧಪಡಿಸಿದ ಅಧಿಸೂಚನೆಗಳನ್ನು ಗಣಕೀಕೃತಗೊಳಿಸಿ, ಕೃತಕವಾಗಿ ತರ್ಜುಮೆಗೊಳಿಸಿ ಕೈಗಿಡಲಾಗುತ್ತಿದೆ. ಹೀಗಾಗಿ ಕನ್ನಡ ಭಾಷೆ ಜನಪ್ರತಿನಿಧಿಗಳು ಮಾತಾಡುವ ಭಾಷೆಯಾಗಿದೆಯೇ ಹೊರತು; ಆಡಳಿತ ವ್ಯವಸ್ಥೆಯ ಭಾಷೆಯಾಗಿಲ್ಲ. ಇದನ್ನೆ ಅನುಸರಿಸುವ ನೇಮಕಾತಿ, ಪರೀಕ್ಷಾ ಪ್ರಾಧಿಕಾರಗಳು ಕನ್ನಡ ಐಚ್ಛಿಕ ಪ್ರಶ್ನೆಪತ್ರಿಕೆಯ ಮುಖಪುಟದಲ್ಲಿ “ಕನ್ನಡದಲ್ಲಿ ಮುದ್ರಿತವಾಗಿರುವ ಪ್ರಶ್ನೆಗಳ ಬಗ್ಗೆ ಏನಾದರೂ ಸಂದೇಹವಿದ್ದಲ್ಲಿ ಇಂಗ್ಲಿಷ್ ಆವೃತ್ತಿಯ ಪ್ರಶ್ನೆ ಪತ್ರಿಕೆಯನ್ನು ನೋಡಬಹುದು. ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದು” ಎಂಬ ಸೂಚನೆ ಕೊಡುವಷ್ಟು ಬೌದ್ಧಿಕತೆಯನ್ನು ಕಾಯ್ದುಕೊಂಡಿವೆ. ಇದೇ ಅಲ್ಲವೇ ರಾಜ್ಯಭಾಷೆಗಿರುವ ಗೌರವ?

ಕನ್ನಡಕ್ಕಾಗಿ ಮಿಡಿಯುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು, ಇಂದು ನಾನಾ ಸೌಲಭ್ಯಕ್ಕಾಗಿ ತುಡಿಯುತ್ತಿದೆ. ಪರಿಷತ್ತು ಕನ್ನಡದ ಪರವಾಗಿ ಮಾತಾಡುವ ಧ್ವನಿಯನ್ನೇ ಕಳೆದುಕೊಂಡು, ಕೇವಲ ಸಮ್ಮೇಳನವನ್ನು ನಡೆಸಲು ಇರುವ ಸರ್ಕಾರಿ ಪ್ರಾಯೋಜಿತ ಸಂಸ್ಥೆಯಂತಾಗಿದೆ. ಸದಸ್ಯತ್ವ, ಸದಸ್ಯರಿಗೆ ಪರೀಕ್ಷೆ, ಚುನಾವಣಾ ಬೈಲಾ ಇವುಗಳ ತಿದ್ದುಪಡಿಯಲ್ಲೇ ಚುರುಕಾಗಿದೆ. ಕನ್ನಡದ ಹೆಸರಿನಲ್ಲಿರುವ ಇನ್ನುಳಿದ ಸಂಸ್ಥೆಗಳು ಅತೃಪ್ತ ಶಾಸಕರಿಗಾಗಿಯೇ ಇರುವ ನಿಗಮಮಂಡಳಿಗಳಾಗಿವೆ!

ಕೇಂದ್ರ ಸರ್ಕಾರದ ಬಹುತೇಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶವೇ ಇಲ್ಲ! ಕೇಂದ್ರ ಲೋಕಸೇವಾ ಆಯೋಗದ ಮುಖ್ಯಪರೀಕ್ಷೆಯಲ್ಲಿ ಕನ್ನಡ ಆಯ್ಕೆ ಮಾಡಿಕೊಂಡರೆ ಮಾತ್ರ ಬರೆಯಬಹುದಾಗಿದೆ. ಜನಪ್ರತಿನಿಧಿಗಳು ಭಾಷೆ-ಜನ-ನೆಲಕ್ಕಾಗಿ ಆಯ್ಕೆಯಾಗದೇ, ಧರ್ಮ, ಜಾತಿ, ಸಿದ್ಧಾಂತಗಳಿಂದ ಆಯ್ಕೆಯಾಗುತ್ತಿದ್ದಾರೆ. ಆದ್ದರಿಂದ ಲೋಕಸಭೆಯಲ್ಲಿ ತಮ್ಮ ನುಡಿಯಲ್ಲಿ ಮಾತನಾಡುವುದಕ್ಕೂ ಮುಜುಗರಪಟ್ಟು, ಅದ್ಭುತವಾಗಿ ಬೇರೆ ಭಾಷೆಗಳನ್ನಾಡಿ ಟ್ರೋಲ್‌ಗೆ ಒಳಗಾಗಿದ್ದಾರೆ. ತಮಿಳುನಾಡಿನ ಸಂಸದರು ’ಆತ್ಮನಿರ್ಭರ್’ ಎನ್ನುವ ಪದ ಕಠಿಣವೆಂದು ಹೇಳಲು ತೋರುವ ಧೈರ್ಯ ನಮಗೆಲ್ಲಿ ಬರಬೇಕು? ಅಯ್ಯೋ ತಮಿಳಿಗರಿಗೆ ಪದಗಳನ್ನೇ ಉಚ್ಛರಿಸಲು ಬರುವುದಿಲ್ಲವೆಂದು ಮೂಗುಮುರಿಯುತ್ತೇವೆ. ’ಏಕೀ ಮಿನಿಟ್’ ಅಂಥ ಕೇಳುತ್ತಲೇ ಹಿಂದಿಯಲ್ಲೇ ಮಾತನ್ನು ಮುಂದುವರಿಸುವುದೇ ಒಳಿತು!

ಕರ್ನಾಟಕದಲ್ಲಿ ಕನ್ನಡ ವಿದ್ಯಾರ್ಥಿಗಳು, ಸಾಹಿತಿಗಳು, ವಿಶ್ವವಿದ್ಯಾಲಯಗಳು ಮೌನವಾಗಿದ್ದಕ್ಕೆ ಕೆ.ಎ.ಎಸ್. ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ತೆಗೆದುಹಾಕಲಾಯಿತು. ಕೆಲವರನ್ನು ಹೊರತುಪಡಿಸಿ, ಹಲವರು ನಂತರದಲ್ಲೂ ಚಕಾರವೆತ್ತಲಿಲ್ಲ. ಮುಂದೊಂದು ದಿನ ಕನ್ನಡ ಕಲಿಸುವವರಿಗೂ ಕನ್ನಡ ಪರೀಕ್ಷೆ ಬೇಡ ಅಂದರೂ ಆಶ್ಚರ್ಯಪಡಬೇಕಿಲ್ಲ! ಹಾಗಾಗಿಯೇ ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಕೆಲವು ಮೇಷ್ಟ್ರುಗಳು ’ಸ್ವಚ್ಛ ಕನ್ನಡ’ದ ಅಭಿಯಾನದಲ್ಲಿ ಭಾಗವಹಿಸಿ, ಪೆನ್ನು, ಪುಸ್ತಕಗಳನ್ನು ಮರೆತಿದ್ದಾರೆ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕನ್ನಡ ಪಿಯುಸಿ ಉಪನ್ಯಾಸಕರ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪರೀಕ್ಷೆ ನಡೆಸಿದ ಆದಿಕಾಲದಿಂದಲೂ ನಾವು ಸರಿ ಉತ್ತರಕ್ಕಾಗಿ, ಲೋಪವಿಲ್ಲದಂತೆ ಕನ್ನಡ ಬಳಸಲು ಹೋರಾಡಬೇಕಾದ ಕೆಟ್ಟಸ್ಥಿತಿಯಿದೆ. ಸಾಹಿತಿಗಳ, ಕನ್ನಡಪರ ಮನಸ್ಸುಗಳ ಬೆಂಬಲವನ್ನು ಪಡೆಯಲು ಪರದಾಡಬೇಕಾಗಿದೆ. ಈ ನಾಡಿನಲ್ಲಿ ಕನ್ನಡವನ್ನು ಓದಿ, ಕನಸುಗಳನ್ನು ಕಟ್ಟಿಕೊಂಡವರನ್ನು ಹಂತಹಂತವಾಗಿ ಅಲಕ್ಷಿಸಲಾಗುತ್ತಿದೆ. 2022ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿಯೂ ಈ ಸಮಸ್ಯೆ ಉದ್ಭವಿಸಿದೆ. ಇದರ ಬಗ್ಗೆ ಕೆಲವು ಅಭ್ಯರ್ಥಿಗಳು, ಈ ಥರದ ಘಟನೆಗಳಿಗಾಗಿಯೇ ಸ್ಪಂದಿಸುವ ಒಂದಿಬ್ಬರು ಕನ್ನಡ ವಿದ್ವಾಂಸರು ಮಾತ್ರ ಧ್ವನಿಗೂಡಿಸುತ್ತಿದ್ದಾರೆ. ತಮ್ಮ ಗಮನಕ್ಕೆ ಬರುವವರೆಗೂ ಕನ್ನಡಕ್ಕಾಗಿಯೇ ಇರುವ ಸಂಘಸಂಸ್ಥೆಗಳು ನಿರ್ಲಿಪ್ತವಾಗಿರುತ್ತವೆ. ನಂತರ ಇವುಗಳು ಪತ್ರದ ಮುಖೇನ ಸಣ್ಣದಾಗಿ ಗುನುಗಿದರೂ ವ್ಯವಸ್ಥೆ ಕ್ಯಾರೆ ಎನ್ನುವುದಿಲ್ಲ. ಇದಕ್ಕೆ ದೊಡ್ಡ ನಿದರ್ಶನವೇ 2021ರ ಎನ್‌ಇಟಿ ಪರೀಕ್ಷೆಯಲ್ಲಿಯೂ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು! ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಏನೆಲ್ಲಾ ಪ್ರಯತ್ನ ಮಾಡಿದರೂ ಕೊನೆಗೂ ಅದು ಮರೀಚಿಕೆಯಾಯಿತು! ಕನ್ನಡಕ್ಕೆ ಯಾಕೀ ಶಿಕ್ಷೆ! ಕನ್ನಡ ಓದಿದ್ದೆ ತಪ್ಪಾಗಿದೆ. ಕೆಪಿಎಸ್‌ಸಿಯು ಕೂಡ ಎಫ್‌ಡಿಎ ಪರೀಕ್ಷೆಯಲ್ಲಿ ಹತ್ತಕ್ಕೂ ಹೆಚ್ಚು ಕನ್ನಡ ಪ್ರಶ್ನೆಗಳಿಗೆ ಗ್ರೇಸ್ ಅಂಕಗಳನ್ನು ಕೊಟ್ಟಿತು. ಪರೀಕ್ಷೆಗಳನ್ನು ಸಿದ್ಧಪಡಿಸುವವರ ಬೌದ್ಧಿಕ ದಾರಿದ್ರ್ಯ, ಪರೀಕ್ಷೆಗಳನ್ನು ನಡೆಸುವ ಪ್ರಾಧಿಕಾರಗಳ ಅಸಡ್ಡೆಗಳಿಗೆ ಕೊನೆಯೆಂತು?

2021-22ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿಗಳು) ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಖಾಲಿ ಇರುವ 15000 ಶಿಕ್ಷಕರ ಹುದ್ದೆಗಳಲ್ಲಿ ಆಂಗ್ಲಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜಕ್ಕೆ ಇಂತಿಷ್ಟು ಹುದ್ದೆಗಳೆಂದು ಜಿಲ್ಲಾವಾರು ವಿಭಾಗಿಸಲಾಗಿದೆ. ಇದು ಸಂತಸದ ವಿಷಯ. ಆದರೆ ಕನ್ನಡ ಭಾಷಾ ವಿಷಯವನ್ನು ಓದಿದವರು ಕರ್ನಾಟಕದಲ್ಲಿ ಇಲ್ಲವೆ? ಪದವಿಯಲ್ಲಿ ಐಚ್ಛಿಕ ಕನ್ನಡವನ್ನು ಅಭ್ಯಸಿಸಿ ಬಿ.ಇಡಿ. ಮುಗಿಸಿ, ಟಿ.ಇ.ಟಿ.ಯ ಅರ್ಹತೆ ಪಡೆದುಕೊಂಡಿರುವ ಕನ್ನಡ ಶಿಕ್ಷಕರಾಗಬೇಕೆಂಬ ಕನಸು ಕಂಡ ನಿರುದ್ಯೋಗಿಗಳ ಪಾಡೇನು? 2019ರ ಅವಧಿಯಲ್ಲಿ ತುಂಬಿಕೊಂಡ ಶಿಕ್ಷಕರ ಹುದ್ದೆಗಳಲ್ಲಿಯೂ ಕನ್ನಡ ಭಾಷಾ ಶಿಕ್ಷಕರನ್ನು ನೇಮಿಸಿಕೊಂಡಿಲ್ಲ. 2022ರಲ್ಲಿ ಬಿಟ್ಟಿರುವ ಅಧಿಸೂಚನೆಯಲ್ಲಿಯೂ ಕೂಡಾ ಭಾಷಾ ಶಿಕ್ಷಕರನ್ನು ಕಡೆಗಾಣಿಸಲಾಗಿದೆ. ವ್ಯವಸ್ಥೆಗೆ ಕನ್ನಡದ ಬಗ್ಗೆ ಯಾಕೀ ಅಸಡ್ಡೆ? ಇವುಗಳೆಲ್ಲ ಕನ್ನಡ ಅಸ್ಮಿತೆಯ, ಅಸ್ತಿತ್ವದ, ಅನ್ನದ ಪ್ರಶ್ನೆಗಳಲ್ಲವೆ?

ಡಾ. ರವಿ ಎಂ

ಡಾ. ರವಿ ಎಂ
ಶಿವಮೊಗ್ಗದ ಸಿದ್ಲಿಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಅಧ್ಯಯನಕ್ಕೆ ಪಿಎಚ್.ಡಿ. ಪದವಿ. ’ಪರ್ಯಾಯ’, ’ಪಿ. ಲಂಕೇಶ್, ’ಶಾಸನ ಓದು’ ಪ್ರಕಟಿತ ಕೃತಿಗಳು. ಹಳಗನ್ನಡ ಸಾಹಿತ್ಯ ರವಿಯವರ ಆಸಕ್ತಿ ಕ್ಷೇತ್ರವಾಗಿದೆ.


ಇದನ್ನೂ ಓದಿ: ಕೋಮು ಗಲಭೆಗಳಿಂದ ಭಾರತದಲ್ಲಿ ಸ್ಥಳಾಂತರಗೊಂಡವರ ಕೆಲವು ಫೈಲ್ಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...