Homeಕರ್ನಾಟಕಬ್ಯಾಂಕಿಂಗ್ ನೇಮಕಾತಿ: ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದು ಎಂಬುದು ಒಂದು ಗೆಲುವು... ಆದರೆ

ಬ್ಯಾಂಕಿಂಗ್ ನೇಮಕಾತಿ: ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದು ಎಂಬುದು ಒಂದು ಗೆಲುವು… ಆದರೆ

- Advertisement -
- Advertisement -

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಬಹಳಷ್ಟು ಬದಲಾವಣೆಗಳು ಬಂದ ಕಾರಣ ಸಾಕಷ್ಟು ಗೊಂದಲಗಳುಂಟಾಗಿವೆ. ಇದರ ಕುರಿತು ಸಾಕಷ್ಟು ಹೋರಾಟಗಳು ಸಹ ನಡೆದಿವೆ. ಪ್ರಬಲ ಒತ್ತಾಯದ ಕಾರಣಕ್ಕಾಗಿ ನಿನ್ನೆ ಕೇಂದ್ರ ಸರ್ಕಾರ ‘ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ’ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ 13 ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದೆ. ಕೆಲವರ್ಷಗಳಿಂದ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಬಹುದಿತ್ತು. ಈ ಎಲ್ಲಾ ಗೊಂದಲ ಗೋಜಲುಗಳ ಕುರಿತು ‘ಗ್ರಾಹಕ ಸೇವೆಯಲ್ಲಿ ಕನ್ನಡಕ್ಕಾಗಿ, ಸಮಾನ ಭಾಷಾ ನೀತಿಗಾಗಿ, ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್’ ರವರು ಸವಿವರವಾಗಿ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ನಾವು ಕೇಳುತ್ತಿರುವ ಒಂದು ದೊಡ್ಡ ದೂರೆಂದರೆ ಬ್ಯಾಂಕುಗಳ ಸಿಬ್ಬಂದಿಗಳು ಕನ್ನಡ ಮಾತನ್ನಾಡುತ್ತಿಲ್ಲ. ಕನ್ನಡ ಬಾರದ ಸಿಬ್ಬಂದಿಗಳಿಂದ ಬ್ಯಾಂಕುಗಳು ತುಂಬಿ ತುಳುಕುತ್ತಿವೆ. ಇದರಿಂದಾಗಿ ನಮ್ಮ ಜನರಿಗೆ, ಅದರಲ್ಲೂ ವಿಶೇಷವಾಗಿ ನಮ್ಮ ಹಳ್ಳಿಗಾಡಿನ ಜನರಿಗೆ ತೊಡಕುಂಟಾಗುತ್ತಿದೆ ಎನ್ನುವುದು. ಇದರೊಟ್ಟಿಗೆ ಬ್ಯಾಂಕುಗಳ ಸೇವೆಗಳು ಕನ್ನಡದಲ್ಲಿರದೆ ಗ್ರಾಹಕರಿಗೆ ತೀವ್ರವಾದ ತೊಡಕುಂಟಾಗುತ್ತಿದೆ ಎನ್ನುವುದು. ಇಲ್ಲಿ ಬ್ಯಾಂಕಿನ ಆಡಳಿತ ಮಂಡಲಿಗಳಿಗೆ ಸಂಬಂಧಿಸಿದಂತೆ ಅರ್ಜಿ ನಮೂನೆಗಳು ಇತ್ಯಾದಿಗಳು ಇರುವುದನ್ನು ಬಿಟ್ಟರೆ, ಕನ್ನಡ ಬಾರದ ಬ್ಯಾಂಕಿನ ಸಿಬ್ಬಂದಿಗಳನ್ನು ನಮ್ಮೂರಿನ ಬ್ಯಾಂಕುಗಳಲ್ಲಿ ಹೇಗೆ ತಾನೇ ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ಕಾಡುತ್ತದೆ. ಈ ತೊಡಕು ಬರಿಯ ರಾಷ್ಟ್ರೀಕೃತ ಬ್ಯಾಂಕುಗಳಿಗಷ್ಟೇ ಸೀಮಿತವಾಗಿಲ್ಲದೆ ಗ್ರಾಮೀಣ ಬ್ಯಾಂಕುಗಳಲ್ಲೂ ಕಾಡುತ್ತಿರುವುದನ್ನು ಕಾಣಬಹುದು. ತೀರಾ ಇತ್ತೀಚಿಗೆ ಮಂಡ್ಯದ ಹತ್ತಿರದ ಕೆ.ಎಂ ದೊಡ್ಡಿಯ ಬ್ಯಾಂಕೊಂದರಲ್ಲಿ ಕನ್ನಡ ಬಾರದ ಸಿಬ್ಬಂದಿ, ಗ್ರಾಹಕರಿಗೆ ಹಿಂದೀ ಕಲಿತು ಬಂದು ವ್ಯವಹರಿಸುವಂತೆ ತಾಕೀತು ಮಾಡಿದ್ದ ಘಟನೆಯನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವೆನ್ನಿಸುತ್ತದೆ. ಯಾಕಾಗಿ ಹಳ್ಳಿ ಹಳ್ಳಿಗಳ ಬ್ಯಾಂಕುಗಳಲ್ಲೂ ಈ ರೀತಿ ಪರಭಾಷಿಕರು ತುಂಬಿತುಳುಕುತ್ತಿದ್ದಾರೆ ಎನ್ನುವುದನ್ನು ನೋಡುತ್ತಾ ಹೋದರೆ ಬ್ಯಾಂಕಿಂಗ್ ನೇಮಕಾತಿಯೆನ್ನುವ ಮೋಸದ ಪರೀಕ್ಷೆಯ ವಿರಾಟ್ ದರ್ಶನವಾಗುತ್ತದೆ.

ಬ್ಯಾಂಕಿಂಗ್ ನೇಮಕಾತಿ ಪ್ರಕ್ರಿಯೆ: 1969ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಗುತ್ತಿದ್ದಂತೆಯೇ ಹುಟ್ಟಿಕೊಂಡ ಸಂಸ್ಥೆ “NIBM” (ರಾಷ್ಟ್ರೀಯ ಬ್ಯಾಂಕುಗಳ ನಿರ್ವಹಣಾ ಸಂಸ್ಥೆ”. ಇದರ ಅಂಗವಾಗಿ ಬ್ಯಾಂಕುಗಳ ನೇಮಕಾತಿಗಾಗಿ ಸಾಮೂಹಿಕ ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಾಗಿ ಹುಟ್ಟಿದ್ದು “PSS” (ಸಿಬ್ಬಂದಿ ಆಯ್ಕೆ ಮಂಡಲಿ). ಈ ಸಂಸ್ಥೆಯೇ ಮುಂದೆ 1984ರಲ್ಲಿ “IBPS” (ಬ್ಯಾಂಕುಗಳ ಸಿಬ್ಬಂದಿ ಆಯ್ಕೆ ಸಂಸ್ಥೆ) ಎಂದಾಯಿತು. ಈ ಸಂಸ್ಥೆಯೇ ಇದುವರೆಗೆ ಭಾರತದಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿ ನೇಮಕಾತಿಯ ಆಯ್ಕೆ ಪರೀಕ್ಷೆಗಳನ್ನು ನಡೆಸುವುದು. ಕೆಲವರ್ಷಗಳ ಹಿಂದೆ ಈ ಸಂಸ್ಥೆಯು ತಾನೇ ನೇಮಕ ಮಾಡುವ ಪ್ರಕ್ರಿಯೆಯನ್ನು ಕೈಬಿಟ್ಟು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ, ಅಂಕಗಳನ್ನು ಘೋಷಿಸುವ ಕೆಲಸಕ್ಕೆ ಸೀಮಿತಗೊಳಿಸಿಕೊಂಡಿತು. ಅಂದರೆ ಪ್ರತಿಬಾರಿ IBPS ದೇಶದಾದ್ಯಂತ ಬ್ಯಾಂಕಿಂಗ್ ಪರೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡುತ್ತದೆ. ಇದು ಎರಡು ಹಂತದಲ್ಲಿ ನಡೆಯಲಿದ್ದು “ಮೊದಲ ಹಂತದ ಬರಹ”ದ(Prilims) ಪರೀಕ್ಷೆಯನ್ನು ಪಾಸಾದವರು ಎರದನೇ ಹಂತದ “ಮುಖ್ಯ ಬರಹ ಪರೀಕ್ಷೆ” (Mains)ಯನ್ನು ಬರೆಯಬೇಕಾಗುತ್ತದೆ. ಪ್ರತಿ ಪರೀಕ್ಷೆಯಲ್ಲಿಯೂ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡಲಾಗಿರುತ್ತದೆ. ಪ್ರತಿಯೊಂದು ಬ್ಯಾಂಕೂ ತನಗೆ ಎಷ್ಟು ಸಿಬ್ಬಂದಿಯ ಅಗತ್ಯವಿದೆಯೋ ಅಷ್ಟನ್ನು ಈ ಅಂಕಗಳ ಆಧಾರದ ಮೇಲೆ ಆರಿಸಿಕೊಳ್ಳುತ್ತದೆ. ಸ್ಥಳೀಯ ಭಾಷೆಯ ಜ್ಞಾನವನ್ನು ಒಂದು ಹೆಚ್ಚುವರಿ ಅಂಶವಾಗಿ ಪರಿಗಣಿಸಲಾಗುತ್ತದೆ. ನಂತರ ಅಭ್ಯರ್ಥಿಗಳಿಗೆ ಸಂದರ್ಶನ ಮಾಡಿ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತದೆ. ಹೀಗೆ ಸಂದರ್ಶನ ಮಾಡುವಾಗ ಸ್ಥಳೀಯ ಭಾಷೆಯ ಜ್ಞಾನವನ್ನೂ ಪರೀಕ್ಷಿಸಬೇಕಿದ್ದರೂ ಹಾಗೆ ಮಾಡಲೇಬೇಕೆಂಬ ಕಟ್ಟಳೆಯೇನೂ ಇದ್ದಂತಿಲ್ಲ. ಬ್ಯಾಂಕಿಂಗ್ ಪರೀಕ್ಷೆಗಳು ನಡೆಯುವ ಬಗೆಯನ್ನು ತುಸು ಆಳವಾಗಿ ನೋಡಿದರೆ ಹೇಗೆ ಇದು ತಾರತಮ್ಯದಿಂದ ಕೂಡಿದ್ದು ಅನ್ಯಾಯದ ಪರೀಕ್ಷೆಯಾಗಿದೆ ಎನ್ನುವುದು ಅರ್ಥವಾಗುತ್ತದೆ.

ಗ್ರಾಮೀಣ ಬ್ಯಾಂಕುಗಳ ಇತಿಹಾಸ ಮತ್ತು ನೇಮಕಾತಿ: 1975ರಲ್ಲಿ ರೂಪುಗೊಂಡದ್ದು “ರೀಜನಲ್ ರೂರಲ್ ಬ್ಯಾಂಕಿಂಗ್ (ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್)” (RRB) ವ್ಯವಸ್ಥೆ. ಈ ಬ್ಯಾಂಕುಗಳ ಮೂಲ ಉದ್ದೇಶವೇ ಸಣ್ಣ ಹಣಕಾಸಿನ, ಸ್ಥಳೀಯ ಸೊಗಡಿನ, ಬಡವರ ಪರವಾದ ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು ಇದರನ್ವಯ ಭಾರತದಲ್ಲಿ ಒಟ್ಟು 56 ಗ್ರಾಮೀಣ ಬ್ಯಾಂಕುಗಳಿದ್ದು ಕರ್ನಾಟಕದಲ್ಲಿ 3 ಬ್ಯಾಂಕುಗಳಿವೆ. ಇವುಗಳಲ್ಲಿ ಕೇಂದ್ರಸರ್ಕಾರ 50%, ಪ್ರೋತ್ಸಾಹಕ ಬ್ಯಾಂಕು 35%, ರಾಜ್ಯಸರ್ಕಾರ 15% ಪಾಲುದಾರಿಕೆ ಹೊಂದಿರುತ್ತವೆ. ಕರ್ನಾಟಕದಲ್ಲಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕು, ಕಾವೇರಿ ಗ್ರಾಮೀಣ ಬ್ಯಾಂಕು ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳಿವೆ. ರಾಜ್ಯದಾದ್ಯಂತ ಇವುಗಳ ಒಟ್ಟು ಸಂಖ್ಯೆ 1184 (2010ರಲ್ಲಿ) ಇದ್ದು ಅಂದಾಜು 8000 ಸಾವಿರ ಸಿಬ್ಬಂದಿಗಳನ್ನು ಹೊಂದಿವೆ. ಇವುಗಳ ಶಾಖೆಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು ಇಲ್ಲಿ ಅನೇಕ ಉದ್ಯೋಗಾವಕಾಶಗಳು ಇವೆ. 1998~2000ದ ವರೆಗೆ ಈ ಬ್ಯಾಂಕುಗಳ ನೇಮಕಾತಿ ನೇರವಾಗಿ ನಡೆಯುತ್ತಿದ್ದದ್ದು ನಂತರ ಇವುಗಳೂ ಕೂಡಾ ರಾಷ್ಟ್ರೀಕೃತ ಬ್ಯಾಂಕುಗಳಂತೆಯೇ IBPS ಆಯ್ಕೆ ವಿಧಾನಕ್ಕೆ ಒಳಗಾದವು. ಇದರ ಪರಿಣಾಮವಾಗಿ ಹಂತ ಹಂತವಾಗಿ ಸ್ಥಳೀಯರು ಬ್ಯಾಂಕುಗಳಲ್ಲಿ ನೌಕರಿ ಪಡೆಯುವುವ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು.ಇದಕ್ಕೆ ಕೂಡಾ ಭಾರತ ಸರ್ಕಾರದ ಹುಳುಕಿನ ಭಾಷಾನೀತಿಯೇ ಕಾರಣವಾಗಿದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದೇ ದಿಟವಾಗಿರುವುದಾಗಿದೆ.

ಗ್ರಾಮೀಣ ಬ್ಯಾಂಕುಗಳ ನೇಮಕಾತಿಯ ನಿಯಮಗಳ ಮಾರಕ ತಿದ್ದುಪಡಿಗಳು:

RRB ಅಂದರೇನೇ ರೀಜನಲ್ ರೂರಲ್ ಬ್ಯಾಂಕಿಂಗ್ – ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ. ಇಲ್ಲಿನ ಬ್ಯಾಂಕುಗಳ ಕಾರ್ಯವ್ಯಾಪ್ತಿ ಸುಮಾರು ಹತ್ತು ಜಿಲ್ಲೆಗಳಿಗಷ್ಟೇ ಸೀಮಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಬ್ಯಾಂಕುಗಳ ಶಾಖೆಗಳು ಗಣನೀಯವಾಗಿ ಹೆಚ್ಚುತ್ತಿದ್ದು ಕರ್ನಾಟಕದಲ್ಲಿ ಪ್ರತಿವರ್ಷ ಸುಮಾರು 1000 ಹುದ್ದೆಗಳು ಸೃಷ್ಟಿಯಾಗುತ್ತಿವೆ. ಕರ್ನಾಟಕದಲ್ಲಿನ ಮೂರು ಗ್ರಾಮೀಣ ಬ್ಯಾಂಕುಗಳಲ್ಲಿನ ಆಫಿಸರ್ ದರ್ಜೆಯ ಹುದ್ದೆಗಳುಆಯಾ ಬ್ಯಾಂಕುಗಳೇ ನೇಮಕಾತಿ ಮಾಡುತ್ತಿದ್ದಷ್ಟು ಕಾಲವೂ ನಮ್ಮ ನಾಡಿನ ಅಭ್ಯರ್ಥಿಗಳಿಗೇ ಸಿಗುತ್ತಿತ್ತು. ನೇಮಕಾತಿಯನ್ನು IBPSಗೆ ಒಪ್ಪಿಸಿದ ಶುರುವಿನಲ್ಲೂ ಇದಕ್ಕೆ ಧಕ್ಕೆಯೇನೂ ಬಂದಿರಲಿಲ್ಲ. ಯಾಕೆಂದರೆ ನೇಮಕಾತಿ ನಿಯಮ ಹಾಗಿತ್ತು. 2012ರವರೆಗೆ ನೇಮಕಾತಿಯ ನಿಯಮದಲ್ಲಿ ಹೀಗೆ ಬರೆದಿತ್ತು.

ಅಂದರೆ ಕನ್ನಡದಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದು ಕನ್ನಡವನ್ನು ಮೆಟ್ರಿಕ್ಯುಲೇಶನ್/ ಎಸ್ಸೆಸ್ಸೆಲ್ಸಿ/ ಹತ್ತನೇ ತರಗತಿಗಳ ಹಂತದಲ್ಲಿ ಒಂದು ನುಡಿಯಾಗಿ ಕಡ್ಡಾಯವಾಗಿ ಓದಿರಲೇಬೇಕು ಎನ್ನುವುದು ಆ ನಿಯಮವಾಗಿದ್ದರಿಂದಾಗಿ ಈ ಕೆಲಸಗಳೆಲ್ಲಾ ಕರ್ನಾಟಕದವರಿಗೇ ಸಿಗುತ್ತಿತ್ತು. ರಾಜ್ಯಗಳ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು.

ಮುಂದೆ 2013ರಲ್ಲಿ ಇದನ್ನು ಓದಿರಲೇಬೇಕು ಎನ್ನುವುದರಿಂದ ಓದಿರಬೇಕು ಎನ್ನುವುದಕ್ಕೆ ಬದಲಾಯಿಸಲಾಯ್ತು. Must ಎನ್ನುವುದು Should ಎಂಬುದಾಗಿ ಬದಲಾಯಿತು.

2014ರಲ್ಲಿ ಇದನ್ನು ಮತ್ತಷ್ಟು ಜಾಣತನದಿಂದ ಬದಲಿಸಿ ಆನ್ ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ಮೆಟ್ರಿಕ್ಯುಲೇಶನ್/ ಎಸ್ಸೆಸ್ಸೆಲ್ಸಿ/ ಹತ್ತನೇ ತರಗತಿಗಳಲ್ಲಿ ಸ್ಥಳೀಯ ಭಾಷೆಯನ್ನು ಓದಿರುವ ಬಗ್ಗೆ ನಮೂದಿಸಬೇಕು ಎನ್ನಲಾಯಿತು. ಇದು ಮುಂದೆ ರಾಜ್ಯಗಳನ್ನು ಆರಿಸಿಕೊಳ್ಳುವಾಗ ಆಯಾ ನುಡಿಗಳ ರಾಜ್ಯಗಳನ್ನು ಆರಿಸಿಕೊಳ್ಳಲು ಸಹಕಾರಿ ಎನ್ನಲಾಯಿತು.

2015ರಲ್ಲಿ ಮುಖ್ಯವಾಗಿ ರಾಜ್ಯಗಳ ಮಟ್ಟದಲ್ಲಿ ಖಾಲಿ ಇರುವ ಹುದ್ದೆಗಳಿಗನುಗುಣವಾಗಿ ಕಟ್ ಆಫ್ ಆಗುತ್ತಿದ್ದ ಏರ್ಪಾಟನ್ನು ರಾಷ್ಟ್ರಮಟ್ಟದಲ್ಲಿ ಕಟ್ ಆಫ್ ಎಂದು ಬದಲಿಸಲಾಯಿತು. ಇದರ ಜೊತೆಯಲ್ಲಿಯೇ ಅಭ್ಯರ್ಥಿಗಳು ತಮಗೆ ಯಾವ ಪ್ರಾದೇಶಿಕ ಭಾಷೆಯ ಅರಿವಿದೆಯೋ ಆಯಾ ಪ್ರದೇಶದ ಗ್ರಾಮೀಣ ಬ್ಯಾಂಕುಗಳನ್ನೇ ಆರಿಸಿಕೊಳ್ಳಬೇಕೆಂದು ಸೂಚಿಸಲಾಯ್ತು. ಮೊದಲಿಗೆ ಕಡ್ಡಾಯವಾಗಿ ಇದ್ದದ್ದು ಈಗ ಅಭ್ಯರ್ಥಿಗಳ ಇಷ್ಟದ ಆಯ್ಕೆಯ ಹಂತಕ್ಕೆ ಬಂದು ನಿಂತಿತು.

2016ರಲ್ಲಿ ಈ ನಿಯಮಕ್ಕೆ ಸ್ಪಷ್ಟವಾದ ಬದಲಾವಣೆ ಮಾಡಿ ಸ್ಥಳೀಯ ಭಾಷೆ ಬಾರದವರು ನೇಮಕವಾದರೆ ಅಂಥವರು ಆರು ತಿಂಗಳೊಳಗಾಗಿ ಸ್ಥಳೀಯ ಭಾಷೆಯನ್ನು ಕಲಿಯಬೇಕು ಮತ್ತು ಅಷ್ಟರಲ್ಲಿ ಕಲಿಯದಿದ್ದರೆ ಅದನ್ನು ಇನ್ನಾರು ತಿಂಗಳಷ್ಟು ಕಾಲ ವಿಸ್ತರಿಸಬಹುದು ಎಂದು ಬರೆಯಲಾಯಿತು. ಇದರೊಂದಿಗೆ ಸ್ಪಷ್ಟವಾಗಿ ನಮ್ಮ ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿ ನಮ್ಮ ನಾಡಿನ ಅಭ್ಯರ್ಥಿಗಳಿಗಷ್ಟೇ ಕೆಲಸ ಸಿಗುತ್ತಿದ್ದ ಅವಕಾಶವನ್ನು ಸಾಂವಿಧಾನಿಕವಾಗಿ ಹೊಡೆದುಹಾಕಲಾಯ್ತು. ಇದರಿಂದಾಗಿ ನಮ್ಮ ನಾಡಿನ ಮಕ್ಕಳು ನಮ್ಮ ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿನ ಕೆಲಸಗಳಿಗಾಗಿ ಇಡೀ ಭಾರತದ ಉಳಿದೆಲ್ಲರ ಜೊತೆ ಸ್ಪರ್ಧಿಸಲೇಬೇಕಾದ ಅನಿವಾರ್ಯತೆ ಹುಟ್ಟುಹಾಕಲಾಯ್ತು. ಇದು ಅಭ್ಯರ್ಥಿ ನೇಮಕಾತಿಯಲ್ಲಷ್ಟೇ ಆದ ತೊಡಕಲ್ಲ. ಹೀಗೆ ನೇಮಕವಾದವರು ಕನ್ನಡ ಕಲಿಯುವವರೆಗೆ ನಮ್ಮ ಗ್ರಾಮೀಣ ಬ್ಯಾಂಕುಗಳ ಗ್ರಾಹಕರು ತೊಂದರೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆರು ತಿಂಗಳಲ್ಲಿ ಅವರು ನಮ್ಮ ಭಾಷೆ ಕಲಿಯುತ್ತಾರೋ, ನಮ್ಮ ನಾಡಿನವರೇ ಅವರ ಭಾಷೆ ಕಲಿಯಬೇಕೋ ದೇವರೇ ಬಲ್ಲ!

ಅಸಮಾನತೆಯ ಮೋಸದ ಸ್ಪರ್ಧೆ: ನಮ್ಮ ನಾಡಿನ ಅಭ್ಯರ್ಥಿಗಳು ಉಳಿದೆಲ್ಲ ಭಾರತೀಯ ಅಭ್ಯರ್ಥಿಗಳ ಸ್ಪರ್ಧಿಸಬೇಕು ಎನ್ನುವುದೇ ಅಸಹಜವಾದ ಅನ್ಯಾಯದ ನಡೆ. ಹೋಗಲಿ, ಅದನ್ನು ಒಪ್ಪಿದರೂ ಆ ಸ್ಪರ್ಧೆ ನ್ಯಾಯವಾಗಿ ನಡೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಗ್ರಾಮೀಣ ಬ್ಯಾಂಕುಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಎರಡು ಹಂತದ ಬರವಣಿಗೆ ಪರೀಕ್ಷೆಗಳಿರುತ್ತವೆ. ಮೊದಲ ಹಂತದ ಪರೀಕ್ಷೆಯಲ್ಲಿ ಒಂದು ಅಂಕದ 80 ಪ್ರಶ್ನೆಗಳೀರುತ್ತವೆ. ಈ ಪರೀಕ್ಷೆಗಳು ಇಂಗ್ಲೀಶ್/ ಹಿಂದೀ ಭಾಷೆಯಲ್ಲಿರುತ್ತವೆ.

ಮುಂದುವರೆದ ಮುಖ್ಯ ಬರಹದ ಪ್ರಶ್ನೆಪತ್ರಿಕೆಯಲ್ಲಿ 200 ಅಂಕಗಳಿಗೆ ಪ್ರಶ್ನೆಗಳಿರುತ್ತವೆ. ಇದರಲ್ಲಿ ನಲವತ್ತು ಅಂಕದ ಇಂಗ್ಲೀಶ್ ಪತ್ರಿಕೆಯನ್ನೊಂದನ್ನು ಹೊರತು ಪಡಿಸಿದರೆ ಉಳಿದ 160 ಅಂಕಗಳಿಗೆ ಪರೀಕ್ಷೆ ಇಂಗ್ಲೀಶ್ ಮತ್ತು ಹಿಂದೀ ಭಾಷೆಗಳಲ್ಲಿ ನಡೆಯುತ್ತದೆ.

ಕನ್ನಡ ನಾಡಿನ ಹಳ್ಳಿಗಾಡಿನ ಬ್ಯಾಂಕುಗಳ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳು ಹಿಂದೀ/ ಇಂಗ್ಲೀಶ್ ಭಾಷೆಗಳಲ್ಲಿ ಮಾತ್ರಾ ನಡೆಯುತ್ತದೆ. ಒಬ್ಬ ಹಿಂದೀ ತಾಯ್ನುಡಿಯ ಅಭ್ಯರ್ಥಿ ತನ್ನ ತಾಯ್ನುಡಿಯಲ್ಲಿ ಈ ಪರೀಕ್ಷೆಗಳನ್ನು ಎದುರಿಸುತ್ತಾನೆ ಮತ್ತು ಕನ್ನಡಿಗನೊಬ್ಬ ಇಂಗ್ಲೀಶ್/ ಹಿಂದೀ ಭಾಷೆಗಳೆಂಬ ತನ್ನ ತಾಯ್ನುಡಿಯಲ್ಲದ ಭಾಷೆಗಳಲ್ಲಿ ಮಾತ್ರಾ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಇದನ್ನು ಯಾವ ಅರ್ಥದಲ್ಲಿ ಸಮಾನ ಮಾನದಂಡದ ಪರೀಕ್ಷೆ ಎನ್ನಲು ಸಾಧ್ಯ!

ಇದೀಗ ಕರ್ನಾಟಕದ ಎಲ್ಲಾ ಪಕ್ಷದ ಜನಪ್ರತಿನಿಧಿಗಳು ಗ್ರಾಮೀಣ ಬ್ಯಾಂಕಿನ IBPS ಪರೀಕ್ಷೆಯಲ್ಲಿ ಆಗುತ್ತಿರುವ ಅನ್ಯಾಯದ ವಿಚಾರವಾಗಿ ದನಿಯೆತ್ತುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರಕಾರ IBPS ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾರತೀಯ ಭಾಷೆಯಲ್ಲಿ ನೀಡುವುದಾಗಿ ಹೇಳಿದೆ. ಇದರಿಂದ ಗ್ರಾಮೀಣ ಬ್ಯಾಂಕ್ ಪರೀಕ್ಷೆಯ ವಿಚಾರದಲ್ಲಿ ಸಣ್ಣ ಗೆಲುವು ಸಿಕ್ಕಂತಾಗಿದೆ.

ಆದರೆ 2014 ರಂತೆ ನಿಯಮ ಜಾರಿಯಾದಲ್ಲಿ ಮಾತ್ರ ಅಂದರೆ ಕರ್ನಾಟಕದಲ್ಲಿ ಪರೀಕ್ಷೆ ಬರೆಯಲು ಕನ್ನಡವನ್ನು ಒಂದು ವಿಷಯವಾಗಿ 10 ನೇ ತರಗತಿಯಲ್ಲಿ ಓದಿದವರಿಗೆ ಮಾತ್ರ ಎಂಬ ನಿಯಮವನ್ನು ಜಾರಿಗೆ ತಂದಾಗ ಕನ್ನಡಿಗರಿಗೆ ಗ್ರಾಮೀಣ ಬ್ಯಾಂಕಿನಲ್ಲಿ ಕೆಲಸ ಸಿಗಲು ಮತ್ತು ಕನ್ನಡದ ಗ್ರಾಹಕನಿಗೆ ಕನ್ನಡದಲ್ಲಿ ಸೇವೆ ಸಿಗಲು ಸಹಕಾರಿಯಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...