ಶನಿವಾರ ಬೆಳಿಗ್ಗೆ ತಾಲಿಬಾನಿಗಳು ಅಪಹರಿಸಿದ್ದ ಸುಮಾರು 150 ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡಲಾಗಿದ್ದು, ಈಗ ಅವರು ಕಾಬೂಲ್ ವಿಮಾನ ನಿಲ್ದಾಣದ ಒಳಗೆ ಇದ್ದಾರೆ ಎಂದು ಮೂಲಗಳನ್ನು ಉಲ್ಲಖಸಿ ಎನ್‌ಡಿಟಿವಿ ವರದಿ ಮಾಡಿದೆ. ಅವರನ್ನು ಶೀಘ್ರವೇ ಏರ್‌ಲಿಫ್ಟ್ ಮೂಲಕ ಅಫ್ಘಾನಿಸ್ತಾನದಿಂದ ಹೊರಲಾಗುವುದು ಎಂದು ಅದು ಹೇಳಿದೆ.
ದೇಶದಿಂದ ಸ್ಥಳಾಂತರಗೊಳ್ಳಲು ವಿಮಾನಗಳಿಗಾಗಿ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದ ಭಾರತೀಯ ನಾಗರಿಕರನ್ನು, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದು ಪ್ರಯಾಣ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ತಿಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್!
ಈ ಮೊದಲು, ಕಾಬೂಲ್‌ನ ಕೆಲವು ಸುದ್ದಿವಾಹಿನಿಗಳು ತಾಲಿಬಾನಿಗಳು ಭಾರತೀಯರು ಸೇರಿದಂತೆ 150 ಜನರನ್ನು ಅಪಹರಿಸಿರುವುದಾಗಿ ಹೇಳಿಕೊಂಡಿದ್ದವು. ಆದರೆ ಈ ಪ್ರತಿಪಾದನೆಯನ್ನು ತಾಲಿಬಾನ್ ವಕ್ತಾರ ತಿರಸ್ಕರಿಸಿದ್ದಾರೆ ಎಂದು ದಿ ನ್ಯೂಯಾರ್ಕ್ ಟೈಮ್ಸ್‌ನ ಕಾಬೂಲ್ ಮೂಲದ ವರದಿಗಾರ ಹೇಳಿದ್ದಾರೆ.
ವಾಯುಪಡೆಯ ವಿಮಾನವು ಕಾಬೂಲ್‌ನಿಂದ ಸುಮಾರು 85 ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದ ಕೆಲವು ಗಂಟೆಗಳ ನಂತರ ತಾಲಿಬಾನ್‌ಗಳು ಭಾರತೀಯ ನಾಗರಿಕರನ್ನು ಅಪಹರಿಸಿದೆ ಎಂದು ವರದಿಯಾಗಿತ್ತು. 85 ಜನರು ಭಾರತೀಯರನ್ನು ಒಳಗೊಂಡ ವಾಯುಪಡೆಯ ವಿಮಾನವು ತಜಕಿಸ್ತಾನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಎರಡನೇ ವಿಮಾನವು ಭಾರತದಲ್ಲಿ ತಯಾರಾಗಿ ನಿಂತಿದೆ ಎಂದು ಎನ್‌ಡಿಟಿವಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಭಾರತವು ತನ್ನ ಎಲ್ಲಾ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ. ಆದರೆ ಅಂದಾಜು 1,000 ನಾಗರಿಕರು ಅಫ್ಘಾನಿಸ್ತಾನದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ. ಅವರು ಇರುವ ಸ್ಥಳ ಮತ್ತು ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ.
ಇದನ್ನೂ ಓದಿ: RSS ತಾಲಿಬಾನ್‌ನಂತೆ ಆಡಳಿತ ನಡೆಸಲು ಬಯಸುತ್ತದೆ: ನಟ ಚೇತನ್


