‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ, ಆ ಹೆಸರಿನ ‘ಟ್ರೇಡ್ ಮಾರ್ಕ್’ ಹಕ್ಕಿಗಾಗಿ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಅರ್ಜಿ ಸಲ್ಲಿಸಿದ ಮೊದಲ ಸಂಸ್ಥೆಯಾಗಿದೆ. ರಿಲಯನ್ಸ್ ಬುಧವಾರ (ಮೇ.7) ಅರ್ಜಿ ಸಲ್ಲಿಸಿದ್ದು, ಆ ಬಳಿಕ 24 ಗಂಟೆಯೊಳಗೆ ಮೂವರು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ನಿವಾಸಿ ಮುಖೇಶ್ ಚೆತ್ರಮ್ ಅಗರವಾಲ್, ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರ್ಹ್ ಮತ್ತು ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಅರ್ಜಿ ಸಲ್ಲಿಸಿದ ಇತರರು.
ಎಲ್ಲಾ ಸಂಸ್ಥೆ ಮತ್ತು ವ್ಯಕ್ತಿಗಳು ಶಿಕ್ಷಣ, ತರಬೇತಿ, ಮನರಂಜನೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಒಳಗೊಂಡಿರುವ ಟ್ರೇಡ್ ಮಾರ್ಕ್ ವರ್ಗ 41ರ ಅಡಿಯಲ್ಲಿ ‘ಸರಕು ಮತ್ತು ಸೇವೆಗಳಿಗೆ, ಅಂದರೆ ವಾಣಿಜ್ಯ ಉದ್ದೇಶಗಳಿಗೆ ‘ಆಪರೇಷನ್ ಸಿಂಧೂರ’ ಹೆಸರಿನ ಹಕ್ಕನ್ನು ಕೋರಿದ್ದಾರೆ.
ನಾಲ್ಕೂ ಅರ್ಜಿಗಳನ್ನು ಮೇ 7, 2025ರ ಬೆಳಿಗ್ಗೆ 10:42ರಿಂದ ಸಂಜೆ 6:27ರ ನಡುವೆ ಸಲ್ಲಿಸಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಮೇ 7ರ ತಡರಾತ್ರಿ 1:05ರಿಂದ 1:30ರ ನಡುವೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಟ್ರೇಡ್ ಮಾರ್ಕ್ ವರ್ಗ 41ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ಶಿಕ್ಷಣ ಮತ್ತು ತರಬೇತಿ ಸೇವೆಗಳು, ಚಲನಚಿತ್ರ ಮತ್ತು ಮಾಧ್ಯಮ ನಿರ್ಮಾಣ, ನೇರ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳು, ಡಿಜಿಟಲ್ ವಿಷಯ ವಿತರಣೆ ಮತ್ತು ಪ್ರಕಟಣೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ‘ಆಪರೇಷನ್ ಸಿಂಧೂರ’ ಹೆಸರಿನ ಹಕ್ಕುಸ್ವಾಮ್ಯ ಕೋರಿದೆ.
ಇದು ‘ಆಪರೇಷನ್ ಸಿಂಧೂರ’ ಹೆಸರು ಶೀಘ್ರದಲ್ಲೇ ಚಲನಚಿತ್ರ, ವೆಬ್ ಸರಣಿ ಅಥವಾ ಸಾಕ್ಷ್ಯಚಿತ್ರ ಬ್ರ್ಯಾಂಡ್ ಆಗಬಹುದು ಎಂಬುವುದನ್ನು ಸೂಚಿಸುತ್ತದೆ.
ಪ್ರತಿಯೊಂದು ಅರ್ಜಿಯಲ್ಲೂ ‘ಆಪರೇಷನ್ ಸಿಂಧೂರ’ ಹೆಸರನ್ನು ‘ಬಳಸಲು ಉದ್ದೇಶಿಸಲಾಗಿದೆ’ ಎಂದು ಹೇಳಲಾಗಿದೆ. ಅಂದರೆ, ಅರ್ಜಿದಾರರು ಇನ್ನೂ ವಾಣಿಜ್ಯಿಕವಾಗಿ ಬ್ರ್ಯಾಂಡ್ ಅನ್ನು ಪ್ರಾರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದಾರೆ ಎಂಬುವುದನ್ನು ಇದು ಸೂಚಿಸುತ್ತದೆ.
ಭಾರತದಲ್ಲಿ, ‘ಆಪರೇಷನ್ ಸಿಂಧೂರ’ ನಂತಹ ಮಿಲಿಟರಿ ಕಾರ್ಯಾಚರಣೆಯ ಹೆಸರುಗಳನ್ನು ಸರ್ಕಾರವು ಬೌದ್ಧಿಕ ಆಸ್ತಿಯಾಗಿ ರಕ್ಷಿಸುವುದಿಲ್ಲ. ರಕ್ಷಣಾ ಸಚಿವಾಲಯವು ಸಾಮಾನ್ಯವಾಗಿ ಈ ಹೆಸರುಗಳನ್ನು ನೋಂದಾಯಿಸುವುದಿಲ್ಲ ಅಥವಾ ವಾಣಿಜ್ಯೀಕರಣಗೊಳಿಸುವುದಿಲ್ಲ ಮತ್ತು ಅವುಗಳನ್ನು ಯಾವುದೇ ವಿಶೇಷ ಶಾಸನಬದ್ಧ ಐಪಿ ಚೌಕಟ್ಟಿನ ಅಡಿಯಲ್ಲಿ ಸುರಕ್ಷಿತಗೊಳಿಸಲಾಗುವುದಿಲ್ಲ. ಹಾಗಾಗಿ, ಸರ್ಕಾರ ಸ್ಪಷ್ಟವಾಗಿ ಮಧ್ಯಪ್ರವೇಶಿಸದ ಹೊರತು, ಅಂತಹ ಹೆಸರುಗಳು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಟ್ರೇಡ್‌ಮಾರ್ಕ್ ಹಕ್ಕುಗಳಿಗೆ ಮುಕ್ತವಾಗಿರುತ್ತವೆ.
ಆದಾಗ್ಯೂ, 1999ರ ಟ್ರೇಡ್ ಮಾರ್ಕ್ಸ್ ಕಾಯ್ದೆಯು ಸಾರ್ವಜನಿಕ ನೀತಿಗೆ ವಿರುದ್ಧವಾದ, ತಪ್ಪುದಾರಿಗೆಳೆಯುವ ಅಥವಾ ಆಕ್ರಮಣಕಾರಿ ಟ್ರೇಡ್‌ಮಾರ್ಕ್‌ಗಳನ್ನು ತಿರಸ್ಕರಿಸಲು ನೋಂದಾವಣೆ ಸಂಸ್ಥೆಗೆ ಅಧಿಕಾರ ನೀಡಿದೆ.
ಸೆಕ್ಷನ್ 9(2) ಮತ್ತು ಸೆಕ್ಷನ್ 11 ರ ಅಡಿಯಲ್ಲಿ, ರಾಷ್ಟ್ರೀಯ ರಕ್ಷಣೆ ವ್ಯವಸ್ಥೆಯೊಂದಿಗೆ ತಪ್ಪು ಸಂಬಂಧವನ್ನು ಕಲ್ಪಿಸುವ ಅಥವಾ ಸಾರ್ವಜನಿಕರ ಭಾವನೆಗೆ ಧಕ್ಕೆ ತರಬಹುದಾದರೆ ಅಂತಹ ಹೆಸರುಗಳ ನೋಂದಣಿಯನ್ನು ನಿರಾಕರಿಸಬಹುದು. ಇದರ ಹೊರತಾಗಿ, ಸರ್ಕಾರ ಅಥವಾ ಇತರ ಪಕ್ಷಕಾರರು ಪ್ರಶ್ನಿಸದ ಹೊರತು ಯಾವುದೇ ಹೆಸರುಗಳ ಬಳಕೆಯ ಹಕ್ಕು ನೋಂದಣಿಗೆ ನಿರ್ಬಂಧವಿಲ್ಲ.
ಭಾರತೀಯ ಟ್ರೇಡ್‌ಮಾರ್ಕ್ ಕಾನೂನು ಮೊದಲ ಅರ್ಜಿ ಸಲ್ಲಿಸಿದವರಿಗೆ ಟ್ರೇಡ್ ಮಾರ್ಕ್ ಹಕ್ಕು ನೀಡುತ್ತದೆ ಎಂದಿಲ್ಲ. ಮೊದಲು ಅರ್ಜಿ ಸಲ್ಲಿಸುವುದು ಮುಖ್ಯವಾದರೂ, ನೋಂದಣಿಗೆ ಇತರ ಅಂಶಗಳೂ ಮುಖ್ಯವಾಗುತ್ತದೆ.
ಗುರುತನ್ನು ಬಳಸುವ ನಿಜವಾದ ಉದ್ದೇಶ, ಈಗಾಗಲೇ ಅಸ್ತಿತ್ವದಲ್ಲಿರುವ ಅಥವಾ ಸ್ಪರ್ಧಾತ್ಮಕ ಗುರುತುಗಳೊಂದಿಗೆ ಗೊಂದಲದ ಸಾಧ್ಯತೆ, ಚಿಹ್ನೆಯ ಶಕ್ತಿ ಮತ್ತು ವಿಶಿಷ್ಟತೆ, ವಿರೋಧದ ಸಮಯದಲ್ಲಿ ಪ್ರಸ್ತುತಪಡಿಸಿದ ಪುರಾವೆಗಳು (ಯಾವುದಾದರೂ ಇದ್ದರೆ) ಈ ಎಲ್ಲವೂ ನೋಂದಣಿ ವೇಳೆ ಪರಿಗಣಿಸುವ ಅಂಶಗಳಾಗಿವೆ.
ಒಂದೇ ಸಮಯದಲ್ಲಿ ಎರಡು ಅಥವಾ ಹೆಚ್ಚಿನ ಒಂದೇ ರೀತಿಯ ಟ್ರೇಡ್‌ಮಾರ್ಕ್‌ಗಳ ಹಕ್ಕು ಕೋರಿ ಅರ್ಜಿ ಸಲ್ಲಿಸಿದರೆ, ನೋಂದಾವಣೆ ಅರ್ಜಿ ಪರಿಶೀಲನೆ ಅಥವಾ ಪ್ರಕಟಣೆಯನ್ನು ಸ್ಥಗಿತಗೊಳಿಸಬಹುದು. ಈ ವಿಷಯವು ವಿವಾದ ಸ್ವರೂಪ ಪಡೆಯಬಹುದು. ಕೆಲವು ಸಂದರ್ಭಗಳಲ್ಲಿ, ಎರಡೂ ಪಕ್ಷಗಳು ಪರಸ್ಪರ ಮಾತುಕತೆ ಮೂಲಕ ಒಂದು ತೀರ್ಮಾನಕ್ಕೆ ಬಂದು ಸಮಸ್ಯೆಯನ್ನು ಇತ್ಯರ್ಥಪಡಿಸಬಹುದು.
ಭಾರತದಲ್ಲಿ ಟ್ರೇಡ್‌ಮಾರ್ಕ್ ನೋಂದಾಯಿಸುವ ಪ್ರಮಾಣಿತ ಪ್ರಕ್ರಿಯೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:
- ಶುಲ್ಕ ಮತ್ತು ವರ್ಗೀಕರಣದೊಂದಿಗೆ ಅರ್ಜಿಯನ್ನು ಸಲ್ಲಿಸುವುದು
- ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯಿಂದ ಅರ್ಜಿ ಪರಿಶೀಲನೆ
- ಟ್ರೇಡ್‌ಮಾರ್ಕ್‌ಗಳ ಜರ್ನಲ್‌ನಲ್ಲಿ 4 ತಿಂಗಳ ಕಾಲ ಪ್ರಕಟಣೆ
- ಮೂರನೇ ವ್ಯಕ್ತಿಗಳಿಂದ ವಿರೋಧ (ಯಾವುದಾದರೂ ಇದ್ದರೆ)
- ನೋಂದಣಿ, ಅವಿರೋಧವಾಗಿ ಆಯ್ಕೆಯಾದರೆ ಅಥವಾ ವಿರೋಧ ಪಕ್ಷವನ್ನು ಗೆದ್ದ ನಂತರ
‘ಆಪರೇಷನ್ ಸಿಂಧೂರ’ ಹಿನ್ನೆಲೆ | ಪಂಜಾಬ್‌ನ ಆರು ಗಡಿ ಜಿಲ್ಲೆಗಳ ಶಾಲೆಗಳು ಬಂದ್



Aparation sindhuri
Aparation sindhuri land mark