ಪತ್ರಕರ್ತೆ ರಾಣಾ ಅಯೂಬ್ ಅವರು ಕಾಶ್ಮೀರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ‘ಹಿಂದೂ ರಾಷ್ಟ್ರ’ ಎಂಬ ಸಾಮಾಜಿಕ ಜಾಲತಾಣದ ಖಾತೆಯೊಂದು ‘ಗೌರಿ ಲಂಕೇಶ್’ ಅವರನ್ನು ನೆನಪಿಸಿಕೊಳ್ಳುವಂತೆ ಹೇಳಿ ಜೀವ ಬೆದರಿಕೆನ್ನು ಹಾಕಿದೆ.
ಈ ಬಗ್ಗೆ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬಂದಿರುವ ಹಲವಾರು ಅತ್ಯಾಚಾರ ಮತ್ತು ಸಾವಿನ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಶ್ಮೀರದ ಸೊಪೋರ್ ಪ್ರದೇಶದಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿಯ ನಡುವೆ ಸಿಕ್ಕಿಬಿದ್ದ 65 ವರ್ಷದ ಶ್ರೀನಗರ ನಿವಾಸಿ ಬಶೀರ್ ಅಹ್ಮದ್ ಖಾನ್ ಅವರ ಹತ್ಯೆಯ ವಿರುದ್ಧ ಮಾತನಾಡಿದ ನಂತರ ಈ ಬೆದರಿಕೆಗಳು ಪ್ರಾರಂಭವಾದವು ಎಂದು ಅವರು ಹೇಳಿದ್ದಾರೆ.
ಖಾನ್ ಅವರ ಮೂರು ವರ್ಷದ ಮೊಮ್ಮಗ ಅವರ ಶವದ ಮೇಲೆ ಕುಳಿತಿರುವ ಛಾಯಾಚಿತ್ರ ವೈರಲ್ ಆಗಿದ್ದು, ಈ ಹತ್ಯೆಯು ದೇಶದಾದ್ಯಂತ ಭಾರಿ ವಿವಾದಕ್ಕೆ ಕಾರಣವಾಯಿತು.
“ಕಾಶ್ಮೀರದ ಬಗ್ಗೆ ನಾನು ಮಾತನಾಡಿದಾಗೆಲ್ಲ ವಿವರಿಸಲಾಗದ ದ್ವೇಷ ಕಾರುತ್ತಾರೆ. ಈ ಸಮಯದಲ್ಲಿ ಅವರು ಅದನ್ನು ನಿರ್ದಯವಾಗಿ ಮಾಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಮುಂಚೆ ಅವರು ತಮ್ಮ ಮಾತುಗಳನ್ನು ಹಿಡಿತದಲ್ಲಿಟ್ಟಿದ್ದರು, ನಿರ್ದಿಷ್ಟವಲ್ಲದ ಭಾಷೆಯನ್ನು ಬಳಸುತ್ತಿದ್ದರು, ಆದರೆ ಈಗ ಅವು ನಿರ್ದಿಷ್ಟವಾಗಿರುತ್ತವೆ ಮತ್ತು ಯಾವುದಕ್ಕೂ ಹೆದರುತ್ತಿಲ್ಲ” ಎಂದು ರಾಣಾ ಅಯೂಬ್ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ, “ನನ್ನ ಟೈಮ್‌ಲೈನ್ ಹಾಗೂ ಇನ್‌ಬಾಕ್ಸ್ ಕಾಶ್ಮೀರದ ಬಗ್ಗೆ ಮಾತನಾಡಿದ್ದಕ್ಕಾಗಿ ಕಳೆದ ಎರಡು ದಿನಗಳಿಂದ ಸಾವು ಮತ್ತು ಅತ್ಯಾಚಾರ ಬೆದರಿಕೆಗಳಿಂದ ಮುಳುಗಿದೆ” ಎಂದು ಪ್ರಣಯ್ ಭೌಮಿಕ್ ಎಂಬವರ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳೊಂದಿಗೆ ಟ್ವೀಟ್ ಮಾಡಿದ್ದರು.
ಭೌಮಿಕ್ ಅತ್ಯಂತ ಕೆಟ್ಟ ಭಾಷೆಯನ್ನು ಬಳಸಿದ್ದಲ್ಲದೆ, ‘ಅತ್ಯಾಚಾರ ಬೆದರಿಕೆ’ ಕೂಡ ಹಾಕಿದ್ದಾರೆ ಎಂದು ಆ ಸಂದೇಶಗಳಲ್ಲಿ ಗಮನಿಸಬಹುದು. ಜೊತಗೆ ಕಾಶ್ಮೀರಿ ಮತ್ತು ಮುಸ್ಲಿಮರ ಮೇಲೆ ನಿಂದನೆಗಳನ್ನು ಕೂಡಾ ಮಾಡಿದ್ದಾರೆ.
ಮತ್ತೊಂದು ಸ್ಕ್ರೀನ್‌ಶಾಟ್‌ನಲ್ಲಿ, ‘ಗೌರಿ ಲಂಕೇಶ್’ ಅವರನ್ನು ನೆನಪಿಸಿಕೊಳ್ಳುವಂತೆ ‘ಹಿಂದೂ ರಾಷ್ಟ್ರ’ ಎಂಬ ಖಾತೆಯು ಅಯೂಬ್‌ಗೆ ಎಚ್ಚರಿಕೆ ನೀಡಿದೆ.

“ನನ್ನ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಸಂಪೂರ್ಣವಾಗಿ ದ್ವೇಷ ಮತ್ತು ಬೆದರಿಕೆಗಳಿಂದ ತುಂಬಿದೆ. ಅವರು ನನಗೆ ಗೌರಿ ಲಂಕೇಶ್ ಅವರನ್ನು ನೆನಪಿಸುತ್ತಿದ್ದಾರೆ. ನಾನು ಪ್ರತಿ ಭಾರಿ ಹೇಳಿಕೆ ನೀಡಿದಾಗಲೆಲ್ಲಾ ಹೀಗೆ ಆಗುತ್ತದೆ” ರಾಣಾಅಯೂಬ್ ಹೇಳಿದ್ದಾರೆ.
“ನನಗೆ ನೆನಪಿದೆ ಗೌರಿ ಸಾಯುವ ಮೂರು ದಿನಗಳ ಮೊದಲು, ನನ್ನ ಬಗ್ಗೆ ಸಾಕಷ್ಟು ದ್ವೇಷ ಕಾರುತ್ತಿರುವಾಗ ಗೌರಿ ನನ್ನ ಫೇಸ್‌ಬುಕ್ ಗೋಡೆಯ ಮೇಲೆ, ಏನೂ ಚಿಂತಿಸಬಾರದು ಮತ್ತು ಈ ಜನರು ಏನನ್ನೂ ಮಾಡುವುದಿಲ್ಲ ಎಂದು ಹೇಳಿ ಪೋಸ್ಟ್ ಮಾಡಿದ್ದರು. ಮೂರು ದಿನಗಳ ನಂತರ ಅವರು ಕೊಲ್ಲಲ್ಪಟ್ಟರು, ಆದ್ದರಿಂದ ಆನ್‌ಲೈನ್ ದ್ವೇಷವು ಆಫ್‌ಲೈನ್‌ನಲ್ಲಿ ಹೋಗುತ್ತದೆಯೇ ಎಂಬ ಭಯ ಯಾವಾಗಲೂ ಇರುತ್ತದೆ” ಎಂದು ಅವರು ಹೇಳಿದ್ದಾರೆ.
They are reminding me of Gauri Lankesh pic.twitter.com/QEr57VQlL1
— Rana Ayyub (@RanaAyyub) July 3, 2020
ಈ ಬಗ್ಗೆ ರಾಣಾ ಅಯ್ಯೂಬ್ ಟ್ವೀಟ್ ಮಾಡಿದ ಎರಡು ಗಂಟೆಯೊಳಗೆ ಮುಂಬೈ ಪೊಲೀಸರು ಅವರ ನಿವಾಸಕ್ಕೆ ಭೇಟಿ ನೀಡಿ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆಂದು ಹೇಳಿದ್ದಾರೆ.
ಓದಿ: ಕಾಶ್ಮೀರದ ಈ ಮಗು CRPF ಸೈನಿಕರ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿತೆ?: ಫ್ಯಾಕ್ ಚೆಕ್


