ಅಮೆರಿಕನ್ ಲೇಖಕ ಜೇಮ್ಸ್ ಬಾಲ್ಡ್ವಿನ್ ಅವರ ನೂರನೇ ಜಯಂತಿಯ (2 ಆಗಸ್ಟ್ 2024) ಸಂದರ್ಭದಲ್ಲಿ- ಅವರ ಬರಹವು ಹೇಗೆ ತನ್ನ ಜೀವನ ಮತ್ತು ತನ್ನನ್ನು ತಾನೇ ನೋಡಿಕೊಳ್ಳುವ ರೀತಿಯನ್ನು ಹೇಗೆ ಬದಲಿಸಿತು ಎಂದು ಭಾರತೀಯ ಪತ್ರಕರ್ತೆಯೊಬ್ಬರು ನೆನಪಿಸಿಕೊಂಡಿದ್ದಾರೆ. ದ ಎಮಾನ್ಸಿಪೇಟರ್ ಎಂಬ ವೆಬ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಈ ಬರಹವನ್ನು ಅನುವಾದಿಸಿ ಕ್ರಿಯೆಟಿವ್ ಕಾಮನ್ಸ್ ಅಡಿಯಲ್ಲಿ ಪ್ರಕಟಿಸುತ್ತಿದ್ದೇವೆ.
ನಾನು ಜೇಮ್ಸ್ ಬಾಲ್ಡ್ವಿನ್ ಅವರ ಕೃತಿಯೊಂದನ್ನು ಮೊತ್ತಮೊದಲ ಬಾರಿಗೆ ಓದಿದಾಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ದಿಲ್ಲಿ ಬ್ಯೂರೋದಲ್ಲಿ ನಗರ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದೆ. ಅವರು ಕಪ್ಪು ಜನಾಂಗದವರು ಎಂದು ನನಗೆ ಗೊತ್ತಿರಲಿಲ್ಲ. ಅಥವಾ ಅಮೆರಿಕದಲ್ಲಿ ಕಪ್ಪು ಲೇಖಕರಾಗಿರುವುದರ ಅರ್ಥವೇನು ಎಂದೂ ಗೊತ್ತಿರಲಿಲ್ಲ. ನಾನು ಒಂದು ವಿಚಿತ್ರ ಬಿಲಕ್ಕೆ ಬಿದ್ದಿದ್ದು ಅಲ್ಲಿಂದ ಹೊರಬರಲು ನನಗೆ ಯಾವತ್ತೂ ಸಾಧ್ಯವಿಲ್ಲ ಎಂಬುದೂ ಆಗ ನನ್ನ ಅರಿವಿಗೆ ಬಂದಿರಲಿಲ್ಲ.
“ಗೋ ಟೆಲ್ ಇಟ್ ಆನ್ ದಿ ಮೌಂಟನ್” (ಹೋಗಿ ಪರ್ವತದ ಮೇಲೆ ನಿಂತು ಹೇಳು) ಎಂಬ ಕೃತಿಯು ನನಗೆ ಗೆಳೆಯರೊಬ್ಬರ ಮನೆಯಲ್ಲಿ ಸಿಕ್ಕಿತು. ಅದನ್ನು ನಾನು ಕೈಗೆತ್ತಿಕೊಂಡದ್ದು ಅದು ಚಿಕ್ಕದಾಗಿದೆ ಎಂಬ ಕಾರಣಕ್ಕಾಗಿ ಮಾತ್ರ. ಅದರೊಳಗೆ ಹೊಂದಾಣಿಕೆ ಇಲ್ಲದ ಕುಟುಂಬ ಒಂದರ ಕತೆಯನ್ನು ನಾನು ಬೇಗನೇ ಕಂಡೆ; ದರ್ಪದ, ಯಜಮಾನಿಕೆಯ ತಂದೆ, ಅಸಂತುಷ್ಟ- ಬಂಡುಕೋರ ಮಕ್ಕಳು ಮತ್ತು ಧರ್ಮದ ಪ್ರಾಬಲ್ಯದಿಂದ ಬಾಧಿತವಾದ ಜೀವಗಳು ಮತ್ತು ಸಂಬಂಧಗಳ ಕತೆ ಅದಾಗಿತ್ತು.
ನಾನು ದಶಕಗಳ ಮತ್ತು ಸಾಗರಗಳ ಅಂತರದ ದೂರದಲ್ಲಿ ಹುಟ್ಟಿದ್ದರೂ, ಅದು ನನ್ನನ್ನು ತಟ್ಟಿತು. ನನ್ನ ಹಿಂದೂ ನಿಷ್ಠಾವಂತ ಕುಟುಂಬ ದೇವಾಲಯವನ್ನು ನಮ್ಮ ಜೀವನದ ಕೇಂದ್ರದಲ್ಲಿ ಇಟ್ಟಿತ್ತು ಮತ್ತು ಶಿಕ್ಷೆಯಿಲ್ಲದೆ ಮಕ್ಕಳು ಕೆಟ್ಟುಹೋಗುತ್ತಾರೆ ಎಂದು ನಂಬಿತ್ತು. ಮಕ್ಕಳಿಗೆ ಅವರ ನಿಷ್ಕ್ರಿಯ ಕುಟುಂಬ ಸರಳವಾಗಿ ಅವರ ಕುಟುಂಬವಾಗಿರುತ್ತದೆ. ನೀವಾಗ ’ನಿಂದನೆ’, ’ಹಿಂಸೆ’ ಮತ್ತು ’ಯಾತನೆ’ ಮುಂತಾದ ಪರಿಕಲ್ಪನೆಗಳನ್ನಾಗಲೀ, ಪದಗಳನ್ನಾಗಲೀ ಕಲಿತಿರಲಿಲ್ಲ ಅಥವಾ ಮಕ್ಕಳನ್ನು ಅವುಗಳಿಂದ ರಕ್ಷಿಸಲು ಕಾನೂನುಗಳಿವೆ ಎಂದೂ ತಿಳಿದಿರಲಿಲ್ಲ. ಆಗ, ಒಂದುದಿನ, ನೀವು-ನಿಮ್ಮದು ಮಾತ್ರವೇ ಎಂದು ಊಹಿಸಿದ್ದ ಯಾತನೆಗಳೇ ತುಂಬಿದ ಸಾಹಿತ್ಯದೊಂದಿಗೆ ನೀವು ಮುಖಾಮುಖಿಯಾಗುತ್ತೀರಿ.
ಆದುದರಿಂದಲೇ, ಬಾಲ್ಡ್ವಿನ್ ಅವರ ಸಾಹಿತ್ಯವು ಯಾವತ್ತೂ ನೀವು ಕನ್ನಡಿಯ ಎದುರು ನಿಂತಷ್ಟೇ ಆಪ್ತತೆಯನ್ನು ಉಂಟುಮಾಡುತ್ತದೆ. ಅದು ನನ್ನನ್ನು ಇನ್ನಷ್ಟು ಕುತೂಹಲಿಯನ್ನಾಗಿ ಮಾಡಿತು. ನನಗೆ ಅರ್ಥವಾಗುತ್ತಿದೆ ಎಂಬ ಭಾವನೆಯ ಜೊತೆಗೆ, ಅದು ನನ್ನಲ್ಲಿ ತಳಮಳವನ್ನೂ ಉಂಟುಮಾಡಿತು.
ಮರುದಿನ, ನಮ್ಮ ಸುದ್ದಿಸಂಸ್ಥೆಗೆ ಮರಳಿದ ಮೇಲೆ ನಾನು ಬಾಲ್ಡ್ವಿನ್ ಅವರ ಕುರಿತೇ ಸಂಶೋಧನೆಗೆ ಆರಂಭಿಸಿದೆ- ಬೇಗನೇ ಅವರನ್ನು ಕಂಡುಕೊಂಡೆ ಕೂಡಾ. ಒಬ್ಬ ವಯಸ್ಸಾದ ಮನುಷ್ಯ ನನ್ನನ್ನು ಕಂಪ್ಯೂಟರ್ ಪರದೆಯಿಂದ ನೋಡಿ ಮುಗುಳ್ನಗುತ್ತಿದ್ದರು. ಅವರ ಮುಗುಳ್ನಗು ಅವರ ತುಟಿಗಳಿಂದ ಕಣ್ಣುಗಳಿಗೆ ಹೋಯಿತು. ಅವರ ಸುಕ್ಕುಗಳಲ್ಲಿ ಅವರು ಏನು ಭಾವಿಸುತ್ತಿದ್ದಾರೆ ಎಂಬುದನ್ನು ನಾನು ಆಳವಾಗಿ ಕಂಡೆ. ಅವು ಅವರ ಭಾವನೆಗಳನ್ನು ಶಾಶ್ವತವಾಗಿ ಅವರ ಮುಖದಲ್ಲಿ ಅಚ್ಚೊತ್ತಿದ್ದಂತೆ ಕಂಡಿತು.
ನಾನು ಕೇವಲ ಒಂದು ಪುಸ್ತಕ ಓದಿದ್ದೆ, ಒಂದು ಭಾವಚಿತ್ರ ನೋಡಿದ್ದೆ. ಆಗಲೇ ನನಗೆ ಇನ್ನಷ್ಟು ಬೇಕು ಎಂದು ನಿರ್ಧರಿಸಿದೆ ಮತ್ತು ಬಾಲ್ಡ್ವಿನ್ ಬರೆದಿರುವ ಪ್ರತಿಯೊಂದು ಪದವನ್ನೂ ಓದಬೇಕು ಎಂದು ದೃಢಸಂಕಲ್ಪ ಮಾಡಿದೆ. ನಾನು ಅದನ್ನು ಮಾಡಿ ಮುಗಿಸಿದೆ. ಬಾಲ್ಡ್ವಿನ್ ಅವರ ಕಾದಂಬರಿಗಳ ಮೇಲೆ ನಾನು ಪ್ರೀತಿಗೆ ಸಿಲುಕಿದೆ ಮತ್ತು ಅವರ ಕಾಲ್ಪನಿಕವಲ್ಲದ ಕಥೇತರ ಕೃತಿಗಳು ನನ್ನನ್ನು ಕ್ರಾಂತಿಕಾರಿಯಾಗಿ ಬದಲಿಸಿದವು. ಭಾಗಶಃ ಯಾಕೆಂದರೆ, ಅವರು- ತಾನು ಹುಟ್ಟಿದ ಪ್ರಪಂಚದ ನೈತಿಕ ಕುರೂಪವನ್ನು ನಿರಂತರವಾಗಿ ಎದುರಿಸಿ ಹೋರಾಡಿದ್ದರು.
ನಾಗರಿಕ ಹಕ್ಕುಗಳ ಕುರಿತ ಅವರ ಪ್ರಬಂಧಗಳು, ಕೇವಲ ಒಂದು ದೇಶದ ಚಳವಳಿಯ ಧ್ವನಿಯಾಗಿರಲಿಲ್ಲ. ಅವು ತಮ್ಮ ಬೋಧನೆಯಲ್ಲಿ ವಸಾಹತುಶಾಹಿ ವಿರೋಧಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿಯಾಗಿದ್ದವು- ಅದು ಪ್ಯಾಲೆಸ್ತೀನಿಯರ ಹಕ್ಕುಗಳ ಪರ ವಾದಿಸುವುದಿರಲಿ, ವಿಯೆಟ್ನಾಂ ಯುದ್ಧವನ್ನು ವಿರೋಧಿಸುವುದಿರಲಿ- ಒಮ್ಮೆ ಅವರು ಪ್ರಸಿದ್ಧ ಹೇಳಿಕೆಯಲ್ಲಿ ಬರೆದಿದ್ದಂತೆ: “ಬಾಂಬ್ ಹಾಕಲಾದ ಪ್ರತಿಯೊಂದು ಹಳ್ಳಿಯೂ ನನ್ನ ತವರೂರು” ಎಂಬಂತೆ.
ಬಾಲ್ಡ್ವಿನ್ ಅವರ ಜೀವನದ ಕುರಿತು ಹೆಚ್ಚು ಸಂಶೋಧನೆ ನಡೆಸುತ್ತಿದ್ದಂತೆ, ಅವರ ತಂದೆ- ಅವರ ಕಣ್ಣುಗಳು ಕಪ್ಪೆಗಣ್ಣಿನಂತೆ (ಮೆಳ್ಳೆಗಣ್ಣು) ಇವೆ ಎಂದು ಹೇಳಿ, ಅವರು ಎಷ್ಟೊಂದು ಕುರೂಪಿ ಎಂದು ನಿಂದಿಸಿದ್ದರು ಎಂದೂ ನನಗೆ ತಿಳಿಯಿತು. ಬಾಲ್ಡ್ವಿನ್ ಅವರಿಗೆ ನೋವಾಯಿತು- ಆದರೆ, ತಾಯಿಯ ಕಾರಣದಿಂದ. ಅವರು ತನ್ನ ತಾಯಿಯ ಕಣ್ಣುಗಳನ್ನೇ ಹೊಂದಿದ್ದರು.
ಇದನ್ನೂ ಓದಿ: ಬೆಲ್ ಹುಕ್ಸ್ ಅವರ ’ಬದಲಾಗುವ ಇಚ್ಛೆ’ ಕನ್ನಡ ಅನುವಾದದಿಂದ ಪ್ರಕಟಣಾಪೂರ್ವ ಅಧ್ಯಾಯ
“ನೋಟ್ಸ್ ಆಫ್ ಎ ನೇಟಿವ್ ಸನ್” (ದೇಶೀಯ ಮಗನ ಟಿಪ್ಪಣಿಗಳು) ಕೃತಿಯಲ್ಲಿ, ಜನಾಂಗೀಯವಾದವನ್ನು ಎದುರಿಸಿದ ಮತ್ತು ಕಹಿತನದಿಂದ ಹುಟ್ಟಿದ ಕ್ರೌರ್ಯದಿಂದ ಪ್ರತಿಕ್ರಿಯಿಸುತ್ತಿದ್ದ ತನ್ನ ತಂದೆಯ ಕುರಿತು- ಯಾವುದೇ ಹಿಂಜರಿಕೆಯಿಲ್ಲದ ಮತ್ತು ಪ್ರಾಮಾಣಿಕವಾದ ವಿಮರ್ಶೆಯನ್ನು ಅವರು ಬರೆದಿದ್ದಾರೆ. ಕ್ರಮೇಣವಾಗಿ, ಅವರು ಅನುಭವಿಸಿದ ಆ ಋಣಾತ್ಮಕ ಭಾವನೆಗಳು ಅವರ ಜೀವನವನ್ನು ಮತ್ತು ಮಗನ ಜೊತೆ ಅವರ ಸಂಬಂಧವನ್ನೂ ತಿರುಚಿಹಾಕುತ್ತವೆ. ಕುರೂಪದ ಬಗೆಗಿನ ಸೌಂದರ್ಯಶಾಸ್ತ್ರದಲ್ಲಿನ- ಅದು ಯಾವುದೇ ರೀತಿಯ ಕುರೂಪವಾಗಿರಲಿ- ಕುರಿತು ಹೇಳಿಕೆಯೊಂದರಲ್ಲಿರುವ ಒಂದು ವಿಷಯವೆಂದರೆ, ಅಸ್ತಿತ್ವಕ್ಕೆ ಅನುಗುಣವಾದ ಒಂದು ಸೌಂದರ್ಯದ ಹುಸಿ ಮಾನದಂಡವನ್ನು ಹುಟ್ಟುಹಾಕುತ್ತದೆ.
ಅವರ ತಂದೆಗೆ ವ್ಯತಿರಿಕ್ತವಾಗಿ, ಬಾಲ್ಡ್ವಿನ್ ಪ್ರಪಂಚದ ಕುರೂಪವನ್ನು ತನ್ನ ನೈತಿಕ ಸ್ಪಷ್ಟತೆ ಮತ್ತು ಅವರ ಲೇಖನಿಯಿಂದ ಹೊರಬಿದ್ದು ಅಂಟಿಕೊಂಡ ಸುಂದರ ಸಾಲುಗಳ ಸೌಂದರ್ಯದಿಂದ ಎದುರಿಸುತ್ತಾರೆ.
ವಸಾಹತೋತ್ತರ ಭಾರತದಲ್ಲಿ ಒಬ್ಬಳು ಕಂದು ಹೆಣ್ಣಾಗಿ ಹುಟ್ಟಿದ ನಾನು ಆನುಭವಿಸಿದ ಎಲ್ಲದಕ್ಕೂ ಬಾಲ್ಡ್ವಿನ್ ಅವರ ಪದಗಳ ಮೂಲಕ ಒಂದು ಹೆಸರು ಮತ್ತು ರೂಪ ದೊರೆತಿದೆ. ಕುರೂಪಿ, ದಮನಕಾರಿ ಸಮಾಜಗಳ ಒಂದು ವಿಷಯವೆಂದರೆ, ಅವು ಯಾವತ್ತೂ ವಿಶಿಷ್ಟವಾಗಿ ಇರುವುದಿಲ್ಲ. ಅದರ ಕ್ರೌರ್ಯ, ಅನ್ಯಾಯ, ವೇದನೆ ಮತ್ತು ಅದು ಹೇರುವ ಕಿರುಕುಳ ಇವೆಲ್ಲವೂ ಪ್ರಪಂಚದ ಯಾವ ಮೂಲೆಯಲ್ಲೇ ಆದರೂ, ಒಂದೇ ರೀತಿಯಲ್ಲಿ ಅನುಭವಕ್ಕೆ ಬರುತ್ತವೆ.
ಬಾಲ್ಡ್ವಿನ್ ಅವರ ಕೃತಿಗಳು ಕಪ್ಪು ಅಮೆರಿಕನ್ನರ ಸಿಟ್ಟಿಗೆ ಒಂದು ವೇದಿಕೆಯನ್ನು ಸೃಷ್ಟಿಸಿದ್ದೇ ಅಲ್ಲದೆ, ಅದೇ ರೀತಿಯ ಅನ್ಯಾಯವನ್ನು ಎದುರಿಸಿದ, ಆದರೆ, ಬೇರೆಯೇ ಮಾತುಗಳನ್ನು ಬಳಸಿದ ವಸಾಹತೋತ್ತರ ಓದುಗರ ಅನುಭವಗಳನ್ನೂ ಸೇರಿಸಿಕೊಳ್ಳುವ ಮೂಲಕ ಅವರ ತನಕವೂ ಇಳಿದುಬರುತ್ತದೆ. ಬಾಲ್ಡ್ವಿನ್ ಅವರನ್ನು ಓದುವುದರಿಂದ ನನಗೆ ಜನಾಂಗ, ಲಿಂಗ, ಜಾತಿ ಮತ್ತು ವರ್ಗಗಳು ಪರಸ್ಪರ ಹೇಗೆ ವ್ಯವಹರಿಸುತ್ತವೆ ಮತ್ತು ಎಲ್ಲಿಗೇ ಹೋದರೂ ಅಷ್ಟೇ; ಅವು ಹೇಗೆ ಒಬ್ಬ ವ್ಯಕ್ತಿಯ ಜೊತೆಗೇ ಪ್ರಯಾಣ ಬೆಳೆಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಯಿತು.
ಜಗತ್ತಿನಾದ್ಯಂತ ನಾವಿಂದು ಎದುರಿಸುತ್ತಿರುವ ತೀರಾ ಕುರೂಪದ ವಿದ್ಯಮಾನಗಳ ಸಂದರ್ಭದಲ್ಲಿ, ನಾವು ಹಿಂದೆಂದಿಗಿಂತಲೂ ಹೆಚ್ಚು ವಿಭಜನೆಗೊಂಡಿರುವಾಗ- ಬಾಲ್ಡ್ವಿನ್ ಅವರ ಮುನ್ನೋಟದ ಸಾಹಿತ್ಯವು, ಅವರು ನೋಡಲು ಬದುಕಿರದೇ ಇದ್ದ ಪ್ರಪಂಚಕ್ಕೂ ಕಟುವಾದ ಕನ್ನಡಿ ಹಿಡಿಯುತ್ತದೆ. ಸೌಂದರ್ಯವಿರಲಿ, ಕುರೂಪವಿರಲಿ, ಅವರು ಅದೆಲ್ಲದರ ಕುರಿತು ತನ್ನ ಹಾಸ್ಯಪ್ರಜ್ಞೆಯನ್ನು ಕಳೆದುಕೊಳ್ಳದೆಯೇ ಬರೆದಿದ್ದಾರೆ. “ಓಪನ್ ಲೆಟರ್ ಟು ಬಾರ್ನ್ ಎಗೇನ್” (ಮತ್ತೆ ಹುಟ್ಟಿದವರಿಗೆ ಬಹಿರಂಗ ಪತ್ರ) ಎಂಬ 1979ರಲ್ಲಿ ಬರೆದ ಒಂದು ಪ್ರಬಂಧದಲ್ಲಿ ಅವರು, “ಅಲ್ಲಿ ಖಂಡಿತವಾಗಿ- ಮತ್ತೆ ಹೇಳುತ್ತೇನೆ ಖಂಡಿತವಾಗಿಯೂ- ಪ್ಯಾಲೆಸ್ತೀನಿಯರ ಜೊತೆ ವ್ಯವಹರಿಸದೆ ಯುರೋಪ್ ಅಷ್ಟೊಂದು ಅಹಂಕಾರದಿಂದ ಕರೆಯುವ ಮಧ್ಯಪ್ರಾಚ್ಯದಲ್ಲಿ (Middle East) (ಭಾರತಕ್ಕೆ ಒಂದು ದಾರಿ ಹುಡುಕಲು ದಯನೀಯವಾಗಿ ವಿಫಲವಾದ ಯುರೋಪಿಗೆ ಅದು ಹೇಗಾದರೂ ಗೊತ್ತಿರಲು ಸಾಧ್ಯ?) ಶಾಂತಿಯನ್ನು ಸ್ಥಾಪಿಸುವ ಯಾವುದೇ ಆಶಾವಾದವಿಲ್ಲ.” ಒಂದು ಬರವಣಿಗೆಗೆ ಓದುಗರು ಹೊತ್ತುತರುವ ಊಹೆಗಳ ಹೊರೆಗೆ ಸವಾಲು ಹಾಕುವ ಒಂದು ದಾರಿ ಅವರಲ್ಲಿ ಇತ್ತು.
ದಿಲ್ಲಿಯಲ್ಲಿ ಕುಳಿತು ಅವರನ್ನು ಓದಿದ ನಾನು, ನನ್ನದೇ ದೇಶದ ಕರಾಳತೆ ಮತ್ತು ಶೋಷಣೆಗಳನ್ನು ನೋಡದೇ ಇರಲು ಸಾಧ್ಯವಿಲ್ಲ. 1963ರ, ಬಹುಶಃ ಅವರ ಅತ್ಯಂತ ಪರಿಚಿತ ಕೃತಿಯಾದ “ದಿ ಫಯರ್ ನೆಕ್ಸ್ಟ್ ಟೈಮ್”ನಲ್ಲಿ ಅವರು ಬಿಳಿಯ ಅಮೆರಿಕನ್ನರ ಮಿಥ್ಯೆಗಳ ಕುರಿತು ಬರೆದಿದ್ದಾರೆ:
“… ಅವರ ಪೂರ್ವಜರು ಸ್ವಾತಂತ್ರ್ಯವನ್ನು ಪ್ರೀತಿಸುತ್ತಿದ್ದ ಹಿರಿಯರಾಗಿದ್ದರೆಂದೂ, ಅವರು ಪ್ರಪಂಚವು ಹಿಂದೆಂದೂ ಕಾಣದ ಮಹಾನ್ ದೇಶದಲ್ಲಿ ಹುಟ್ಟಿದ್ದಾರೆ ಎಂದೂ… ಅಮೆರಿಕನ್ನರು ಯುದ್ಧದಲ್ಲಿ ಆಜೇಯರು ಮತ್ತು ಶಾಂತಿಯಲ್ಲಿ ವಿವೇಕಿಗಳು ಎಂದೂ, ಮೆಕ್ಸಿಕನ್ನರು ಹಾಗೂ ಇಂಡಿಯನ್ನರು ಮತ್ತು ತಮ್ಮೆಲ್ಲಾ ನೆರೆಹೊರೆಯವರು ಇಲ್ಲವೇ ತಮಗಿಂತ ಕಳಪೆಯವರನ್ನೂ ಅಮೆರಿಕನ್ನರು ಗೌರವಾರ್ಹವಾಗಿ ನಡೆಸಿಕೊಂಡಿದ್ದಾರೆ ಎಂದೂ, ಅಮೆರಿಕನ್ ಗಂಡಸರು ಅತ್ಯಂತ ನೇರ ಮತ್ತು ಪೌರುಷವಂತರು, ಸ್ತ್ರೀಯರು ಶುದ್ಧ…” (ಎಂದು ನಂಬಿ, ಬಿಂಬಿಸುತ್ತಾರೆ.)
ಇಂದಿನ ಭಾರತದಲ್ಲಿ ಹಿಂದೂ ಭಾರತೀಯರು ಬೇರೆಯವರ ಬೆನ್ನಲ್ಲಿ ಸವಾರಿ ಮಾಡುತ್ತಾ, ಮುಸ್ಲಿಮರ ಮೇಲೆ ಗುಂಪುಹಲ್ಲೆ, ಸಾಮೂಹಿಕ ಅತ್ಯಾಚಾರ ಮಾಡುತ್ತಾ ಇರುವಾಗಲೇ ಸಸ್ಯಾಹಾರ ಮತ್ತು ಗಾಂಧಿಯ ದಯಾಪರ ಪುರಾಣಕ್ಕೆ ಅಂಟಿಕೊಂಡಿದ್ದಾರೆ.
ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಪುರಾಣಗಳನ್ನು ಸೃಷ್ಟಿಸುತ್ತಲೇ, ತನ್ನ ಬೇರುಗಳಲ್ಲೇ ಇರುವ ಜನಾಂಗೀಯವಾದ ಮತ್ತು ಜನಾಂಗೀಯ ಹತ್ಯಾಕಾಂಡಗಳನ್ನು ಕಡೆಗಣಿಸುವ ಅಮೆರಿಕದ ಆಷಾಢಭೂತಿತನವನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಮತ್ತೆಮತ್ತೆ ಎತ್ತಿತೋರಿಸಿದ ಬಾಲ್ಡ್ವಿನ್ ಅವರ ಪ್ರಾಮಾಣಿಕತೆಯು- ದೇಶಗಳು, ಸಂಸ್ಕೃತಿಗಳು ಮತ್ತು ಭಾಷೆಗಳಾದ್ಯಂತ- ವಿಶೇಷವಾಗಿ ಭಾರತದಲ್ಲಿ ಪ್ರತಿಧ್ವನಿಸುತ್ತಿದೆ.
ಇಂದು ಹಿಂದೂ ಶ್ರೇಷ್ಠತೆಯ ರಾಕ್ಷಸೀ ಸಿದ್ಧಾಂತವು, ಬಿಳಿಯ ಶ್ರೇಷ್ಠತೆಯ ಪಾರಮ್ಯದ ರೀತಿಯಲ್ಲಿಯೇ- ನಾವು ಧರ್ಮ, ಜಾತಿ ಅಥವಾ ಜನಾಂಗದ ಕೋಟೆಯೊಳಗೆ ಓಡಿಹೋಗಿ, ನಮ್ಮನ್ನು ನಾವೇ ಬಂಧಿಸಿಕೊಂಡು, ನಮ್ಮ ಪ್ರಪಂಚ ಮತ್ತು ಮನಸ್ಸುಗಳೆರಡನ್ನೂ ಇನ್ನಷ್ಟು ಚಿಕ್ಕದಾಗಿ ಮತ್ತು ಕ್ಷುಲ್ಲಕವನ್ನಾಗಿ ಮಾಡಬೇಕು ಎಂದು ಬಯಸುತ್ತಿದೆ.
ಈ ಕರಾಳ ಗಳಿಗೆಯಲ್ಲಿ ಪ್ರೀತಿ ಮತ್ತು ಕರುಣೆಗಳ ಪರಿವರ್ತನಾತ್ಮಕ ಶಕ್ತಿಯ ಪರವಾಗಿ ವಾದಿಸುವಲ್ಲಿ- ಬಾಲ್ಡ್ವಿನ್ ಅವರ ಸಿಟ್ಟು ಮಾತ್ರವಲ್ಲದೇ, ಅವರ ಮಾತುಗಳು ಹಾಗೂ ದೃಢ ಸಂಕಲ್ಪಗಳು- ನಾವು ಹುಟ್ಟಿರುವ ಪ್ರಪಂಚದ ಕುರೂಪವನ್ನು ಬದಲಾಯಿಸಲು ಹೋರಾಡುತ್ತಿರುವವರ ಜೊತೆಗೆ ನೇರವಾಗಿ ಮಾತನಾಡುತ್ತವೆ. ಅವರ ಕೃತಿಗಳು- ಹುಚ್ಚು ಪ್ರೇಮಿಗಳು ಮತ್ತು ಭ್ರಮಾಧೀನ ಕವಿಗಳ ಕತೆಗಳಿಂದಾಚೆಗೆ ದಾಟಿ, ಸ್ಪಷ್ಟವಾದ ಕಣ್ಣುಗಳಿಂದ ವಾಸ್ತವಿಕತೆಯನ್ನು ನೋಡಲು ನಮಗೆ ನೆರವಾಗುತ್ತವೆ. ಅವು ಬಹಳಷ್ಟು ಆಚೆಗೆ ದಾಟಿ ಹೋಗುತ್ತವೆ. ನಾವು ದೈಹಿಕ ಕುರೂಪವನ್ನು- ನಮ್ಮನ್ನು ಅನ್ಯಾಯಕ್ಕೆ ಕುರುಡಾಗುವಂತೆ ಮಾಡುವಂತಹ ಒಂದು ರೀತಿಯ ನೈತಿಕ ಕುರೂಪದೊಂದಿಗೆ ಸಮೀಕರಿಸಬಾರದು ಎಂದು ಅವು ನನಗೆ ಕಲಿಸುತ್ತವೆ. ಶಕ್ತಿ ಮತ್ತು ಉದ್ದೇಶಗಳನ್ನು ಹೊಂದಲು ಕತೆಗಳು ನಿಜವಾಗಿರಬೇಕಾಗಿಲ್ಲ ಎಂದೂ ನಾನು ಕಲಿತಿದ್ದೇನೆ.
ನನಗೆ ಎದುರಾಗುವ ವಿರೋಧಾಭಾಸಗಳು ಮತ್ತು ಆಷಾಢಭೂತಿತನಕ್ಕೆ ತರ್ಕಬದ್ಧ ಉತ್ತರಕ್ಕಾಗಿ ಹುಡುಕುತ್ತಿರುವಾಗ, ಅವರ ಸ್ವಂತ ವ್ಯಕ್ತಿತ್ವದಂತೆಯೇ, ಅವರ ಮಾತುಗಳು ಸೌಂದರ್ಯದ ವಿಷಯಗಳಾಗಿ ಕಾಣುತ್ತವೆ.
ಕನ್ನಡಕ್ಕೆ: ನಿಖಿಲ್ ಕೋಲ್ಪೆ
(ಈ ಲೇಖನ ಇಂಗ್ಲಿಷ್‌ನಲ್ಲಿ ಮೊದಲು ಇಲ್ಲಿ https://theemancipator.org/2024/08/01/topics/books/reading-baldwin-in-new-delhi/ ’ರೀಡಿಂಗ್ ಬಾಲ್ಡ್ವಿನ್ ಇನ ನ್ಯೂ ಡೆಲ್ಲಿ’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು. ಅದನ್ನು ಅನುವಾದಿಸಿ ಕ್ರಿಯೆಟಿವ್ ಕಾಮನ್ಸ್ ಅಡಿಯಲ್ಲಿ ನಮ್ಮ ಪತ್ರಿಕೆಯಲ್ಲಿ ಮರುಪ್ರಕಟಿಸಿದ್ದೇವೆ.)
ವಿದ್ಯಾ ಕೃಷ್ಣನ್
ವಿದ್ಯಾ ಜಾಗತಿಕ ಆರೋಗ್ಯ ವರದಿಗಾರರಾಗಿದ್ದು, ಭಾರತದಲ್ಲೇ ವಾಸವಾಗಿದ್ದಾರೆ. ಅವರು ’ಫ್ಯಾಂಟಮ್ ಪ್ಲೇಗ್: ಹೌ ಟ್ಯೂಬರ್‌ಕ್ಯುಲೋಸಿಸ್ ಶೇಪ್ಡ್ ಹಿಸ್ಟರಿ’, 2022 ಎಂಬ ಪುಸ್ತಕದ ಲೇಖಕಿ.


