Homeಮುಖಪುಟಬೆಲ್ ಹುಕ್ಸ್ ಅವರ ’ಬದಲಾಗುವ ಇಚ್ಛೆ’ ಕನ್ನಡ ಅನುವಾದದಿಂದ ಪ್ರಕಟಣಾಪೂರ್ವ ಅಧ್ಯಾಯ

ಬೆಲ್ ಹುಕ್ಸ್ ಅವರ ’ಬದಲಾಗುವ ಇಚ್ಛೆ’ ಕನ್ನಡ ಅನುವಾದದಿಂದ ಪ್ರಕಟಣಾಪೂರ್ವ ಅಧ್ಯಾಯ

- Advertisement -
- Advertisement -

ಹುಡುಗರು ಮತ್ತು ಪುರುಷರಿಗೆ, ಪಿತೃಪ್ರಧಾನತೆಯ ಚಿಂತನೆ ಮತ್ತು ರೂಢಿಗಳನ್ನು ನಿರಂತರವಾಗಿ ಉಪದೇಶಿಸುತ್ತಾ, ಅಲ್ಲಿನ ನಿಯಮಗಳನ್ನು ಕ್ರಮಬದ್ಧವಾಗಿ ಕಲಿಸುವ ಕೆಲಸವನ್ನು ಸಮೂಹ ಮಾಧ್ಯಮಗಳು, ಸಂತೋಷವಾಗಿ ಮೈಮೇಲೆ ಎಳೆದುಕೊಂಡಿರುತ್ತವೆ. ಸ್ತ್ರೀವಾದಿಗಳು, ಈ ಪಿತೃಪ್ರಧಾನತೆಗೆ ಸವಾಲೆಸೆಯುತ್ತೇವೆ ಮತ್ತು ಅದನ್ನು ಬದಲಿಸುತ್ತೇವೆ ಎಂದುಕೊಂಡರು; ಆದರೆ ಅವರ ಈ ಪ್ರಯತ್ನಗಳು ಪುರುಷರ ಮೇಲೆ ಬೀರಿದ ಪ್ರಭಾವ ತೀರಾ ಕಡಿಮೆಯೇ. ಹೀಗೇಕಾಯಿತು ಎಂಬ ಪ್ರಶ್ನೆಗೆ ಇರುವ ಹಲವು ಕಾರಣಗಳಲ್ಲಿ, ಸ್ತ್ರೀವಾದಿಗಳು ತಮ್ಮ ಈ ಎಲ್ಲ ಚಿಂತನೆಗಳನ್ನೂ ಅಭಿವ್ಯಕ್ತಿಸಿದ್ದು ಪುಸ್ತಕಗಳಲ್ಲಿ ಮಾತ್ರವೇ ಎಂಬುದು ತುಂಬಾ ಮುಖ್ಯವಾದ ಕಾರಣ, ಸಾಮಾನ್ಯವಾಗಿ ಪುರುಷರು ಸ್ತ್ರೀವಾದೀ ಪುಸ್ತಕಗಳನ್ನು ಕೊಳ್ಳಲು ಅಥವಾ ಓದಲು ಹೋಗುತ್ತಿರಲೇಇಲ್ಲ. ಆದರೂ, ಬಿಳಿಯ ಮಹಿಳೆಯರು ಸ್ತ್ರೀವಾದೀ ಚಳವಳಿಯ ಮುಂದಾಳುಗಳಾಗಿದ್ದ ಸಮಯದಲ್ಲಿ, ಅಂದರೆ ಸುಮಾರು ಅರವತ್ತರ ದಶಕದ ಕೊನೆ ಮತ್ತು ಎಪ್ಪತ್ತರ ದಶಕದ ಆರಂಭದಲ್ಲಿ, ಎಷ್ಟೋ ಪುರುಷ ಬರಹಗಾರರು, ವಿನಾಶಕಾರೀ ಪುರುಷತ್ವದ ವಿಷಯವನ್ನು ಪ್ರಸ್ತಾಪಿಸಿ, ಪಿತೃಪ್ರಧಾನತೆಯನ್ನು ಟೀಕಿಸಿ ಪುಸ್ತಕಗಳನ್ನು ಬರೆದರು ನಿಜ. The Male Machine, Menʼs Liberation, The Liberated Man, The Limits of Masculinity, For Men against Sexism, Being a Man, and White Hero, Black Beast ಮುಂತಾದ ಕೃತಿಗಳು ಸ್ಥಿರಮಾದರೀ ಲೈಂಗಿಕ ಪಾತ್ರಗಳಿಗೆ, ಇರುವ ’ಪುರುಷ ನಿಷ್ಕ್ರಿಯ ಒಪ್ಪಿಗೆ’ಯನ್ನು ಕುರಿತು, ಹಲವು ಪ್ರಶ್ನೆಗಳನ್ನು ಎತ್ತಿದವು ಎಂಬುದೂ ಹೌದು.

ಆದರೆ, ಈ ಪುಸ್ತಕಗಳಾಗಲೀ ಅಥವಾ ಅವುಗಳ ಬಗ್ಗೆ ನಡೆದ ಚರ್ಚೆಗಳೇ ಆಗಲೀ, ಪುರುಷ ಪ್ರಜ್ಞೆಯ ಮೇಲೆ ಯಾವ ಬಗೆ ಪ್ರಭಾವವನ್ನೂ ಬೀರಲಿಲ್ಲ. ’ಹೆಣ್ಣುತನ’ವನ್ನು ಕೇಂದ್ರವಾಗಿಸಿಕೊಂಡ ಸ್ತ್ರೀವಾದೀ ಪುಸ್ತಕಗಳು ಹೀಗಲ್ಲ; ಅವು ಹೆಂಗಸರ ಪ್ರಜ್ಞೆಯನ್ನು ಸಾಕಷ್ಟು ಗಾಢವಾಗಿಯೇ ಪ್ರಭಾವಿಸಿವೆ. ಏಕೆಂದರೆ, ’ಗಂಡುತನ’ವನ್ನು ಕೇಂದ್ರವಾಗಿಸಿಕೊಂಡೇ ಬರೆದರೂ, ಇವನ್ನು ಬರೆದ ಬಿಳಿಯ ಗಂಡು ಲೇಖಕರು, ಪುರುಷತ್ವ ಎಂಬ ಚಿಂತನೆಯನ್ನು ಮರುರೂಪಿಸಲು ಹೋಗಲಿಲ್ಲ; ಅದಕ್ಕೆ ಬದಲು ಅವರು, ಸ್ತ್ರೀವಾದೀ ಪ್ರಭಾವಕ್ಕೆ ಮುಂಚೆ, ಜಾಗ್ರತರಲ್ಲದ ಹೆಂಗಸರು ಹೊಂದಿರುತ್ತಿದ್ದ ವರ್ತನಾ ಮಾದರಿಗಳನ್ನು ಹೋಲುವ ವರ್ತನಾ ಮಾದರಿಗಳನ್ನೇ ಕಲಿಯಲು, ಪುರುಷರಿಗೆ ಸಲಹೆ ನೀಡಿದರು. ಜೊತೆಗೆ, ಪುರುಷರು ಅನುಭವಿಸುತ್ತಿರುವ ತಮ್ಮ ಪುರುಷತ್ವದ ಬಗೆಗಿನ ಬಿಕ್ಕಟ್ಟುಗಳಿಗೆ, ಆರ್ಥಿಕ ವಲಯದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಅವುಗಳಿಂದಾಗಿ ಮಹಿಳೆಯರಿಗೆ ದೊರೆಯುತ್ತಿರುವ ಉತ್ತಮ ಸ್ಥಾನಮಾನಗಳೇ ಕಾರಣ ಎಂದು ಕೂಡಾ ಈ ಲೇಖಕರು ಹೇಳಿದರು.

ಆಧುನಿಕವಾಗಿ ಮುಂದುವರಿದ ಬಂಡವಾಳಶಾಹೀ ಸಮಾಜದಲ್ಲಿ, ಪುರುಷನ ಪುರುಷತ್ವದ ಪ್ರಾಬಲ್ಯ ಎಂಬುದಕ್ಕೆ, ಕುಟುಂಬಕ್ಕೆ ’ಆರ್ಥಿಕ ಅನುಕೂಲವನ್ನು ಒದಗಿಸುವ ಸಾಮರ್ಥ್ಯ’ ಎಂಬ ಅರ್ಥವೇ ಮೊದಲು ಇದ್ದದ್ದು, ಆದರೆ, ಅವನು ಮಾತ್ರವೇ ಇದ್ದ, ಈ ದುಡಿಮೆಯ ವಲಯಕ್ಕೆ ಹೆಚ್ಚುಹೆಚ್ಚು ಮಹಿಳೆಯರು ಕೂಡಾ ಬರತೊಡಗಿದ ಮೇಲೆ, ’ಪುರುಷತ್ವ ಎಂದರೆ, ಕುಟುಂಬಕ್ಕೆ ತಂದು ಹಾಕುವ ಸಾಮರ್ಥ್ಯ’ ಎಂಬ ಮೊದಲಿನ ಅರ್ಥ ಮಹತ್ವವನ್ನು ಕಳೆದುಕೊಂಡಿತು. ದುಡಿಮೆಯ ವಲಯದ ಮಟ್ಟಿಗಾದರೂ ಲಿಂಗತ್ವ ಸಮಾನತೆ ಎಂಬುದು ಕಾಣಲಾರಂಭಿಸಿತು. ಸ್ತ್ರೀವಾದವು ಮಹಿಳೆಯರಿಗೆ, ನಿಮ್ಮದೇ ಬಗೆಯಲ್ಲಿ ನೀವು ಕೂಡಾ ಆರ್ಥಿಕ ಹೊಣೆಯನ್ನು ಹೊರುವುದು ಸರಿ ಎಂದು ಕಲಿಸಿದವು; ಹೆಚ್ಚಿನ ಪುರುಷರಿಗೆ ಇದರಿಂದ ಸಂತೋಷವೇ ಆಯಿತು. ಆಗ ಪುರುಷರು ಅಗತ್ಯಗಳನ್ನು ಪೂರೈಸುವ ಪಾತ್ರ ತಮಗೆ ಇಷ್ಟವೇನಲ್ಲ ಎಂಬ ಸತ್ಯವನ್ನು ಹೇಳುವ ಧೈರ್ಯ ಮಾಡಿದರು ಎಂಬುದು ಒಂದು ವಿಶೇಷ.

ಆದರೆ, ಸ್ತ್ರೀವಾದೀ ಚಳವಳಿಯು, ಲೈಂಗಿಕ ಕ್ರಾಂತಿ ಎಂದು ಹೊರಟಾಗ, ಪುರುಷರ ಇನ್ನೊಂದು ಸಮಸ್ಯೆ ಕಾಣಿಸಿತು. ಈವರೆಗೂ, ’ಲೈಂಗಿಕ ಕ್ರಿಯೆಗೆ ಮುಂದಾಗುವುದು ಮತ್ತು ಆ ಕ್ರಿಯೆಯಲ್ಲಿ ತೊಡಗುವುದು ಏನಿದ್ದರೂ ಗಂಡಸಿನ ಕೆಲಸ’ ಎಂಬ ಅಭಿಪ್ರಾಯವೇ ಇದ್ದದ್ದು; ಈಗ ನೋಡಿದರೆ, ಸ್ತ್ರೀವಾದವು ಈ ಅಭಿಪ್ರಾಯವನ್ನೇ ಬುಡಮೇಲು ಮಾಡಲು ಹೊರಟಿತ್ತು. ಅಂದರೆ, ಪುರುಷತ್ವಕ್ಕೆ ಇದ್ದ ಇನ್ನೊಂದು ಪ್ರಮುಖ ಅರ್ಥವೇ ಕಳೆದುಹೋಗುವಂತಿತ್ತು. ಆದರೆ, ಹೀಗೇನೂ ಆಗಲಿಲ್ಲ ಎಂಬುದೇ ವಾಸ್ತವ.

ಸ್ತ್ರೀವಾದವು ಹೇಳಿದ ’ಲಿಂಗತ್ವ ಸಮಾನತೆ’ ಎಂಬುದು, ದುಡಿಮೆಯ ವಲಯದಲ್ಲಿ ಕೆಲವು ಬದಲಾವಣೆಗಳನ್ನು ತಂದಿತು ಎಂಬುದು ನಿಜ. ಅದರಿಂದಾಗಿ, ಲಿಂಗತ್ವ ಪಾತ್ರಗಳು ಕೂಡಾ ಅಷ್ಟಿಷ್ಟು ನವೀಕರಣಗೊಂಡವು ಎಂಬುದೂ ನಿಜ. ಅದರಲ್ಲೂ ಮಹಿಳೆಯರ ಪಾಲಿನ ಪಾತ್ರಗಳು ಹೆಚ್ಚು ಮರುರೂಪ ಪಡೆದವು. ಇದೇನೇ ಇದ್ದರೂ, ಲೈಂಗಿಕ ಸ್ಥಿರಮಾದರೀ ಪಾತ್ರಗಳ ವಿಚಾರದಲ್ಲಿ ಪುರುಷತ್ವಕ್ಕೆ ಇದ್ದ ಮಹತ್ವವು ಮಾತ್ರ ಮೊದಲಿನಷ್ಟೇ ಸ್ಥಿರವಾಗಿ ಉಳಿದುಕೊಂಡಿತ್ತು. ಪುರುಷತ್ವ ಎಂಬುದಕ್ಕೆ, ಪಿತೃಪ್ರಧಾನತೆಯು ಕಲ್ಪಿಸಿದ್ದ ಮಹತ್ವಕ್ಕೆ ವಾಸ್ತವದ ಆಧಾರವೇನೂ ಇರಲಿಲ್ಲ ಎಂಬುದೇನೋ ಹೌದು; ಪುರುಷತ್ವವು ಎದುರಿಸುವ ಎಲ್ಲ ಬಿಕ್ಕಟ್ಟುಗಳಿಗೂ ಇದೇ ಕಾರಣ ಎಂಬುದೂ ಹೌದು. ಆದರೆ, ಸಾಂಸ್ಥೀಕರಣಗೊಂಡ ಇಂಥಾ ಸಾಮಾಜಿಕ ಕ್ರಮವನ್ನು ಪ್ರಶ್ನಿಸಿ ಸವಾಲೆಸೆಯಲು, ಸ್ತ್ರೀವಾದೀ ಚಳವಳಿಯು ನಡೆಸಿದ ಪ್ರಯತ್ನವು ಕೂಡಾ ಅಷ್ಟೇ ಆಧಾರರಹಿತವಾಗಿತ್ತು; ಲೈಂಗಿಕತಾವಾದೀ ಆಲೋಚನೆಗಳಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನವನ್ನೇ ಮಾಡದೆ, ಒಂದೇ ಏಟಿಗೆ ಲೈಂಗಿಕ ವಲಯದಲ್ಲಿ ಲಿಂಗತ್ವ ಸಮಾನತೆ ಎಂಬ ಮಾತಿಗೆ ಅದು ಹಾರಿತ್ತು.

ಲೈಂಗಿಕ ವಲಯದಲ್ಲಿ ಲಿಂಗತ್ವ ಸಮಾನತೆ ಎಂಬುದು ಸಾಧ್ಯವಾಗಲಿಲ್ಲ ಎಂದರೂ, ಪುರುಷರು ಈಗ ಅನುಭವಿಸುತ್ತಿರುವ ಪುರುಷತ್ವದ ಬಿಕ್ಕಟ್ಟುಗಳು ಇದ್ದೇಇದ್ದವು. ಈ ಬಿಕ್ಕಟ್ಟುಗಳನ್ನು ಮರೆಯಲು ಅವರು ಪಿತೃಪ್ರಧಾನತೆಯ ಚಿಂತನೆಯ ಗ್ರಹಿಕೆಗಳಿಗೆ ಜೋತುಬೀಳಲೇಬೇಕಿತ್ತು; ಸದ್ಯಕ್ಕೆ ಸುರಕ್ಷೆ ಮತ್ತು ಸುಭದ್ರತೆಗಳ ಭಾವಕ್ಕೆ ಇದ್ದ ದಾರಿ ಇದೊಂದೇ ಆಗಿತ್ತು. ಈ ಕ್ಷಣಿಕ ದಾರಿ ಕಷ್ಟಕರ ಎನಿಸಿದರೆ, ಅವರಿಗೆ ಇನ್ನೊಂದು ದಾರಿಯೇನೋ ಇತ್ತು. ಇದಕ್ಕಾಗಿ ಅವರು, ಪುರುಷತ್ವವನ್ನು ಮರುರೂಪಿಸಲು, ಸ್ತ್ರೀವಾದೀ ಚಿಂತನೆ ಮತ್ತು ಹೋರಾಟಗಳು ನಡೆಸುತ್ತಿರುವ ಪ್ರಯತ್ನಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡು ಸಹಕರಿಸಬೇಕಿತ್ತು. ಆದರೆ, ಹೀಗೆ ಈ ದಾರಿಯನ್ನು ಆಯ್ಕೆ ಮಾಡಲು ಪುರುಷರು ತಯಾರಿರಲಿಲ್ಲ; ಅವರ ಈ ನಿರ್ಧಾರವನ್ನು ಸಮೂಹ ಮಾಧ್ಯಮಗಳು ಬಲವಾಗಿ ಸಮರ್ಥಿಸಿ ಅವರ ಬೆನ್ನಿಗೆ ನಿಂತವು. ಪುರುಷರು ಎಂದೂ ಕೂಡಾ ಪೂರ್ಣ ತೃಪ್ತಿಯನ್ನು ಕೊಡದೆ ಹೋದ ಪುರುಷತ್ವದ ಬಗೆಗಿನ ಹಳೆಯ ತೊಲೆಗೇ ನೇತುಬಿದ್ದರು. ಲಿಂಗತ್ವ ಸಮಾನತೆಯ ಮಾತು ಹೆಚ್ಚುಹೆಚ್ಚು ಕೇಳಿಸಿದಂತೆಲ್ಲಾ, ಅವರಲ್ಲಿ ಮೊದಲೇ ಇದ್ದ, ದಬ್ಬಾಳಿಕೆ ಮತ್ತು ನಿಯಂತ್ರಣ ಎಂಬ ದೈಹಿಕ, ಹಾಗೂ ಮಾನಸಿಕ ಭಯೋತ್ಪಾದನೆಯ ವರ್ತನೆಗಳೂ ದುಪ್ಪಟ್ಟಾದವು. ಆದರೆ, ಅವರ ಈ ಪಿತೃಪ್ರಧಾನತೆಯ ಆಟಕ್ಕೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಅವಕಾಶಗಳಂತೂ ಸಿಗುತ್ತಿರಲಿಲ್ಲ. ಎಷ್ಟೋ ವೇಳೆ ಅವರು ಮಹಿಳೆಯರೇ ಮೇಲಧಿಕಾರಿಗಳಾಗಿರುವ ಸ್ಥಾನಗಳಲ್ಲಿ ಕೆಲಸ ಮಾಡಬೇಕಾಗುತ್ತಿತ್ತು. ಖಾಸಗಿ ವಲಯವು ಮಾತ್ರವೇ, ಪಿತೃಪ್ರಧಾನತೆಯ ದಬ್ಬಾಳಿಕೆಯ ವರ್ತನೆಗಳನ್ನು ತೋರಲು ಅವರಿಗೆ ಉಳಿದಿದ್ದ ಅವಕಾಶ.

ಇದರ ಪರಿಣಾಮವೆಂದರೆ, ದುಡಿಮೆಯ ವಲಯದಲ್ಲಿ ಸ್ತ್ರೀವಾದೀ ಬದಲಾವಣೆಗಳು ಸಾಧ್ಯವಾಗಿದ್ದರೂ, ಮಹಿಳೆಯರು ಮತ್ತು ಮಕ್ಕಳ ಮೇಲೆ ಪುರುಷರು ನಡೆಸುವ ಹಿಂಸೆ, ದೌರ್ಜನ್ಯಗಳ ಪ್ರಕರಣಗಳು ಮಿತಿಯೇ ಇಲ್ಲದೆ ಏರುತ್ತಾ ಹೋದವು. ಸಮೂಹ ಮಾಧ್ಯಮಗಳು, ವಿಶೇಷವಾಗಿ ಟೀವಿ ಶೋಗಳು, ಪುರುಷ ದೌರ್ಜನ್ಯಗಳನ್ನೇ ಕೇಂದ್ರವಾಗಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿದವು; ಆದರೆ, ಪಿತೃಪ್ರಧಾನತೆಯನ್ನು ಕೊನೆಗೊಳಿಸದೆ, ಈ ಸಮಸ್ಯೆ ಬಗೆಯಹರಿಯುವುದಿಲ್ಲ ಎಂಬ ಮಾತನ್ನು ಅವು ನೆಪಮಾತ್ರಕ್ಕಾದರೂ ಪ್ರಸ್ತಾಪಿಸಲೇ ಇಲ್ಲ. ಮಹಿಳೆಯರ ಮೇಲಿನ ದಬ್ಬಾಳಿಕೆ ಎಂಬುದು ಸಾಮೂಹಿಕ ಮನರಂಜನೆಯ ಒಂದು ಹೊಸ ಮಾದರಿಯೇ ಆಗಿಬಿಟ್ಟಿತು. ಪುರುಷರು, ಇತರ ಪುರುಷರೊಂದಿಗೆ ಹೊಂದಿರುತ್ತಿದ್ದ ಸಾಮಾಜಿಕ ಸಂಬಂಧಗಳಲ್ಲೂ ಅಷ್ಟೇ; ತಮ್ಮ ದಬ್ಬಾಳಿಕೆಯ ಪ್ರದರ್ಶನವನ್ನು ಮಾಡಿ ತೋರಿಸಬೇಕಾದ ಒತ್ತಾಯಗಳು ಮೊದಲಿಗಿಂತಲೂ ಹೆಚ್ಚಾದವು. ಕಪ್ಪು ಪುರುಷರಲ್ಲಿ, ಒಬ್ಬ ಕಪ್ಪು ಪುರುಷ ಇನ್ನೊಬ್ಬ ಕಪ್ಪು ಪುರುಷನ ನರಹತ್ಯೆ ಮಾಡುವುದು ಹೆಚ್ಚಾಯಿತು; ಹದಿನಾರರಿಂದ ನಲವತ್ತೈದು ವಯಸ್ಸಿನ ಕಪ್ಪು ಪುರುಷರ ಹೆಚ್ಚಿನ ಸಾವುಗಳಿಗೆ ಇದೇ ಮುಖ್ಯ ಕಾರಣ ಎನ್ನುವಂತೆ ಆಯಿತು.

ಟೀವಿ ಲೋಕವು, ಮಕ್ಕಳನ್ನೇ ಗುರಿಯಾಗಿ ಇರಿಸಿಕೊಂಡು, ಲೈಂಗಿಕತಾವಾದೀ ಮಿಥ್‌ಗಳನ್ನು ವೈಭವೀಕರಿಸಿ ತೋರಿಸುವುದನ್ನು ನಿಲ್ಲಿಸಲೇ ಇಲ್ಲ. (ಒಂದು ಉದಾಹರಣೆ, The Incredible Hulk ಎಂಬ ಶೋ.) ಯಾವುದೇ ಜನಪ್ರಿಯ ಮಕ್ಕಳ ಶೋಗಳಿಗೆ, ಪುರುಷತ್ವದ ಬಗೆಗಿನ ಒಂದು ಉಪಪಠ್ಯವು ಇದ್ದೇಇರುವುದು ಕಡ್ಡಾಯ ಎಂಬಂತೆ ಮುಂದುವರಿಯಿತು. ಇಂಥಾ ಶೋಗಳು ಎಲ್ಲ ವರ್ಗ, ಜಾತಿ, ಜನಾಂಗಗಳ ಹಿನ್ನೆಲೆಯ ಹುಡುಗರಿಗೂ ತುಂಬಾ ಇಷ್ಟವಾಗುತ್ತವೆ. ಯಾವುದೇ ಬಗೆಯ ಬಿಕ್ಕಟ್ಟುಗಳು ಬಂದರೂ, ಗಂಡಸು ಎನಿಸಿದವನು, ಕ್ರೂರವೂ, ಪೈಶಾಚಿಕವೂ ಆದ ತನ್ನ ದೈಹಿಕ ಬಲವನ್ನು ಪ್ರಯೋಗಿಸದೆ ಇದ್ದರೆ ತಪ್ಪದು ಎಂಬ ಅಭಿಪ್ರಾಯವನ್ನು ಹರಡುವಲ್ಲಿ ಈ ಶೋಗಳು ಸಫಲವೇ ಆದವು. ಇಂಥಾ ಹುಡುಗರನ್ನು ಮಾತಿಗೆ ಎಳೆದ ಒಬ್ಬ ಸಮಾಜ ಶಾಸ್ತ್ರಜ್ಞ, “ಆ ನಾಯಕನಿಗೆ ಇರುವ ಶಕ್ತಿ ನಿಮಗೂ ಇದ್ದರೆ ಏನು ಮಾಡುತ್ತೀರಿ” ಎಂದು ಕೇಳಿದನಂತೆ, ಅದಕ್ಕೆ ಹುಡುಗರು, “ನಮ್ಮ ಅಮ್ಮಂದಿರನ್ನು ಹೊಸಕಿ ಹಾಕುತ್ತಿದ್ದೆವು” ಎಂದರಂತೆ. ಇಂಥಾ ಕಥಾನಾಯಕರನ್ನೇ ಹೋಲುವ ಆಟಿಕೆಗಳೂ ಬೇಕಾದಷ್ಟು ಬಂದು ಮಕ್ಕಳ ಮಧ್ಯೆ ಜನಪ್ರಿಯವೆನಿಸಿದವು. ಇಂಥವೇ ವೀಡಿಯೋ ಗೇಮ್‌ಗಳೂ ಬಂದು, ಮಕ್ಕಳಿಗೆ, ಸದಾಕಾಲವೂ ದೌರ್ಜನ್ಯದ ವರ್ತನೆಗಳನ್ನು ಅಭ್ಯಾಸ ಮಾಡಿಸುತ್ತವೆ.

ಮಕ್ಕಳಿಗಾಗಿ ಬರೆದ ಪುಸ್ತಕಗಳು ಕೂಡಾ, ಈ ಶೋಗಳ ನಾಯಕರನ್ನೇ ಹೋಲುವ ನಾಯಕರನ್ನು ಸೃಷ್ಟಿಸಿ ಜನಪ್ರಿಯವಾದವು. ಒಂದು ಉದಾಹರಣೆ, Barbara Ehrenreich ಬರೆದ The Hearts of Men: American Dreams and the Flight from Commitment ಎಂಬುದು. ಇಲ್ಲಿನ ನಾಯಕ ಯಾವಾಗಲೂ ಒಂದೆಡೆ ನಿಲ್ಲದೆ ಓಡುವವನು. ಯಾರೊಂದಿಗೇ ಆದರೂ ಆಪ್ತತೆಯನ್ನು ಬೆಳೆಸಿಕೊಳ್ಳುವ ವ್ಯವಧಾನವೇ ಇಲ್ಲದವನು. ವಿಜ್ಞಾನ ಕ್ಷೇತ್ರದವನು ಎಂದಮೇಲೆ, ವೈಚಾರಿಕತೆಯ ಸಾಕಾರಮೂರ್ತಿ ಎಂದುಕೊಳ್ಳಬೇಕು. ಅವನಿಗೆ ಕೋಪ ಬಂದರೆ, ಅವನು ಬೇರೆಯೇ ಬಣ್ಣದ ಒಂದು ಪ್ರಾಣಿಯಾಗಿ ಬದಲಾಗಿಬಿಡುತ್ತಾನೆ; ಈ ಅವತಾರದಲ್ಲಿ ಅವನು, ದೌರ್ಜನ್ಯದ ಎಲ್ಲ ವರ್ತನೆಗಳನ್ನೂ ತೋರುತ್ತಾನೆ. ಈ ದೌರ್ಜನ್ಯಗಳನ್ನು ತೋರಿಸಿದ್ದು ಮುಗಿಯಿತು ಎಂದರೆ, ಅವನು ಮತ್ತೆ ತನ್ನ ಮೊದಲಿನ ಬಿಳಿಯ-ಪುರುಷ ವೈಚಾರಿಕ ವ್ಯಕ್ತಿತ್ವಕ್ಕೆ ಬದಲಾಗಿಬಿಡುತ್ತಾನೆ. ಪ್ರಾಣಿಯ ಅವತಾರದಲ್ಲಿ ತಾನು ಏನು ಮಾಡಿದೆ ಎಂಬುದರ ನೆನಪು ಅವನಿಗೆ ಇರುವುದಿಲ್ಲ; ಅಂದಮೇಲೆ, ಅವನು ಅದರ ಹೊಣೆಯನ್ನೂ ಹೊರುವುದಿಲ್ಲ. ಮಕ್ಕಳಿಗಾಗಿ ತಯಾರಾದ ಈ ಕಥಾನಾಯಕನು ಕೂಡಾ, ವಯಸ್ಕರಿಗಾಗಿ ತಯಾರಾಗುವ ಜನಪ್ರಿಯ ಕಥಾನಾಯಕನ ಹಾಗೆಯೇ ವರ್ತಿಸುತ್ತಾನೆ. ಇವನು ಕೂಡಾ, ತನ್ನ ಸ್ನೇಹಿತರು, ಕುಟುಂಬ ಎಂಬ ಯಾವುದರೊಂದಿಗೂ, ಭಾವನಾತ್ಮಕ ಬಾಂಧವ್ಯಗಳನ್ನು ಬೆಳೆಸಿ ಉಳಿಸಿಕೊಳ್ಳಲಾರ. ಯಾರೊಂದಿಗೂ ಬೆರೆಯದೆಯೇ, ಯಾರನ್ನೂ ಹಚ್ಚಿಕೊಳ್ಳದೆಯೇ ಇದ್ದುಬಿಡುತ್ತಾನೆ. ಅವನು ಯಾರನ್ನೂ ಪ್ರೀತಿಸಲಾರ. X ಜನರೇಷನ್, ಅಥವಾ Beat ಜನರೇಷನ್ ಪುರುಷರಂತೆಯೇ, ಇವನು ಕೂಡಾ ಪಿತೃಪ್ರಧಾನತೆಯ ಪುರುಷನ ಉತ್ಕೃಷ್ಟ ಮಾದರಿಯೇ ಆಗಿದ್ದಾನೆ. (X gen ಎಂದು ಕರೆದುಕೊಳ್ಳುವವರು, ನಮಗೆ ನಮ್ಮದೇ ಸ್ವಂತದ ಒಂದು ಶೈಲಿ ಇರುತ್ತದೆ ಎನ್ನುತ್ತಾರೆ; Beat gen ಎಂದು ಕರೆದುಕೊಳ್ಳುವವರು, ನಾವು ರೂಢಿಗತ ಮೌಲ್ಯ ನಿರೂಪಣೆಗಳನ್ನು ತಿರಸ್ಕರಿಸುತ್ತೇವೆ ಎನ್ನುತ್ತಾರೆ.) ಅವನೊಳಗೇ ಅವಿತಿರುವ ಈ ಕಾಡುಪ್ರಾಣಿಯು, ಅವನನ್ನು ಒಂಟಿಯಾಗಿ, ಬೇಕುಬೇಕೆಂದ ಕಡೆ ಸುತ್ತುತ್ತಾ, ಯಾವಾಗಲೂ ತೇಲಾಡುತ್ತಾ ಇದ್ದುಬಿಡಲು ಪ್ರೇರೇಪಿಸುತ್ತದೆ.

ಮಕ್ಳಳ ಪುಸ್ತಕಗಳಲ್ಲಿ ಬರುವ ಈ ನಾಯಕರು, ಲೈಂಗಿಕತಾವಾದ ಮತ್ತು ಜನಾಂಗೀಯವಾದಗಳನ್ನು ಹುದುಗಿಸಿಕೊಂಡೇ ತಿರುಗುತ್ತಾರೆ. ಸಾಮಾನ್ಯವಾಗಿ, ಶಾಂತ ಗುಣದವನೂ, ವಿವೇಚನೆ ಉಳ್ಳವನೂ, ವಿಚಾರವಂತನೂ ಎಂಬಂತೆ ಕಾಣುವ ಬಿಳಿಯ ಪುರುಷ ವಿಜ್ಞಾನಿಯು, ಮನಸ್ಸು ತಿರುಗಿದಾಗಲೆಲ್ಲಾ, ಬಣ್ಣದ ಕಾಡುಪ್ರಾಣಿಯಾಗಿ ಬದಲಾಗಿಬಿಡುತ್ತಾನೆ. ಹೀಗೆ ಬೇಕೆಂದಾಗ ಬದಲಾಗಿಬಿಡುವ ತನ್ನ ಈ ಬುದ್ಧಿವಂತಿಕೆಯನ್ನು ಕಾಣುತ್ತಾ, ಅವನು ಕೆಲವೊಮ್ಮೆ ಸುಸ್ತಾಗುತ್ತಾನೆ. ಆಗ ಅವನು ಇದನ್ನು ಸರಿಪಡಿಸುವ ಔಷಧಿಗಾಗಿ ಹುಡುಕಲು ಆರಂಭಿಸುತ್ತಾನೆ; ತನ್ನೊಳಗಿನ ಕಾಡುಪ್ರಾಣಿಯಿಂದ ಬಿಡಿಸಿಕೊಳ್ಳುವ ಪ್ರಯತ್ನ. ಜನಾಂಗೀಯವಾದಕ್ಕೂ ಮತ್ತು ಬಿಳಿಯ ನಾಯಕ ಹಾಗೂ ಕಪ್ಪು ಕಾಡುಪ್ರಾಣಿಗಳ ಪುರುಷತ್ವ ಎಂಬ ಕಲ್ಪನೆಗೂ ಇರುವ ಸಂಬಂಧವನ್ನು ಕುರಿತು, ಅಮೆರಿಕದ ತೀವ್ರವಾದೀ ಚಳವಳಿಗಾರ, ಲೇಖಕ ಹಾಗೂ ವಿಮರ್ಶಕ Paul Hoch: “ಪುರುಷತ್ವ ಮತ್ತು ಜನಾಂಗೀಯ (ಮತ್ತು ಜಾತಿ, ವರ್ಗ ಇತ್ಯಾದಿಗಳೂ ಸೇರಿದಂತೆ) ದಬ್ಬಾಳಿಕೆಗೂ, ಪಾಶ್ಚಾತ್ಯ ಚಿಂತನೆಯಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಪುರುಷತ್ವದ ಕಲ್ಪನೆಗೂ ತುಂಬಾ ಹತ್ತಿರದ ಸಂಬಂಧ ಇದೆ. ಪುರಾಣ ಹಾಗೂ ದಂತಕತೆಗಳಲ್ಲಿ ಇರುವ ಅಭಿಪ್ರಾಯದಂತೆ, ಪುರುಷತ್ವದ ಅತ್ಯುನ್ನತ ಹಂತದಲ್ಲಿ ಪುರುಷನು- ಬಿಳಿಯ ನಾಯಕನು- ತನ್ನ ಗಂಡಸುತನವನ್ನು ಸಾಧಿಸುತ್ತಾನೆ; ಇದೇ ’ಕಪ್ಪು ಕಾಡುಪ್ರಾಣಿ’ಯ ಮೇಲಿನ ಮೊತ್ತಮೊದಲ ಗೆಲುವು ಕೂಡಾ ಹೌದು; ಅಥವಾ ’ಅನ್ಯ’ ನರಭಕ್ಷಕ ಕಾಡುಪ್ರಾಣಿಗಳ ಮೇಲಿನ ಗೆಲುವು. ಒಂದರ್ಥದಲ್ಲಿ ಗಾಢವಾದ ಬಣ್ಣಗಳ ಎಲ್ಲದರ ಮೇಲಿನ ಗೆಲುವು. ’ಅನ್ಯ’ ಕಾಡುಪ್ರಾಣಿಗಳು ಎಂಬುದರಲ್ಲಿ, ಬಿಳಿಯರಲ್ಲದ ಎಲ್ಲ ಜನಾಂಗಗಳವರೂ, ದೇಶಗಳವರೂ, ಸಾಮಾಜಿಕ ಜಾತಿಗಳವರೂ ಸೇರುತ್ತಾರೆ” ಎಂದು ಹೇಳುತ್ತಾನೆ. (ಇವು ಅವನ ‘Exploitation of Sports by the Power Elite’ ಎಂಬ ತನ್ನ ಕೃತಿಯಲ್ಲಿ ಬರುವ ಮಾತುಗಳು; ಈ ಕೃತಿಯು, ಕ್ರೀಡೆಯನ್ನು ಕುರಿತ ಐತಿಹಾಸಿಕವೂ, ಲೌಕಿಕವೂ ಆದ ವಿಶ್ಲೇಷಣೆಯೇ ಆಗಿದೆ ಎಂದು ಸ್ವತಃ ಅವನೇ ವಿವರಿಸುತ್ತಾನೆ.)

ಇತ್ತೀಚೆಗೆ ಬರುತ್ತಿರುವ Men in Black, Independence Day, Matrixನಂತಹ ಸಿನೆಮಾಗಳು, ಕಾಲ್ಪನಿಕ ಎಂಬ ಹೆಸರಿನಲ್ಲಿ, ಗಾಢಬಣ್ಣ ಮತ್ತು ಬಿಳಿಯ ಬಣ್ಣಗಳನ್ನೇ ಜನಾಂಗೀಯಗೊಳಿಸಿ, ನಿರೂಪಣೆಗಳನ್ನು ಕಟ್ಟುತ್ತಾ, ’ಬಿಳಿಯ ಪುರುಷತ್ವ’ದ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತವೆ. ಆದರೆ, ಬಿಳಿಯ-ಶ್ರೇಷ್ಠತೆಯ ನೀತಿನಿಯಮಗಳನ್ನೇ ರೂಪಿಸುವ ನಮ್ಮ ಆಡಳಿತಗಳು, ನಮ್ಮ ಪಾಲಿನ ’ಅನ್ಯ’ವೇ ಆಗಿ, ಬಿಳಿಯ-ಪುರುಷ ದೌರ್ಜನ್ಯದ ದಬ್ಬಾಳಿಕೆಗಳ ಪ್ರತೀಕಗಳೇ ಆಗಿವೆ ಎಂಬುದನ್ನು ವಾಸ್ತವದ ನಮ್ಮ ಬದುಕುಗಳಲ್ಲಿ, ನೋಡುತ್ತಿದ್ದೇವೆ. ಯಾವ ಮೇರೆಯೂ ಇಲ್ಲದೆ ನಡೆಯುವ ಈ ದೌರ್ಜನ್ಯಗಳು ಜಗತ್ತನ್ನೇ ಗಾಢವಾದ ಕತ್ತಲಲ್ಲಿ ಮುಳುಗಿಸುತ್ತಿವೆ. ಇದಕ್ಕೆ ಗಲ್ಫ್ ಯುದ್ಧ, ಮತ್ತು ಇತ್ತೀಚೆಗೆ ಇರಾಕ್ ಮೇಲೆ ನಡೆಸಲಾದ ಯುದ್ಧಗಳು ಪ್ರಬಲ ಸಾಕ್ಷಿಗಳಾಗಿವೆ. ಅತ್ಯಾಚಾರ, ಭಯೋತ್ಪಾದನೆ ಹಾಗೂ ಕೊಲೆಗಡುಕ ಗುಣದ ಈ ಭಯಾನಕ ಸ್ವರೂಪದ ಬಿಳಿಯ ಪುರುಷತ್ವವು ಜಗತ್ತಿನ ಪಾಲಿಗೆ ನಿಜವಾದ ಅಂಧಕಾರವೇ ಹೊರತು ಕಪ್ಪು ಅಥವಾ ಗಾಢ ಬಣ್ಣದ ಜನರೆಲ್ಲರೂ ಕತ್ತಲಕೂಪಗಳೇನೂ ಅಲ್ಲ. ಆದರೆ, ಪಿತೃಪ್ರಧಾನತೆಯ ಬಿಳಿಯ ಪುರುಷರು, ತಮ್ಮಲ್ಲಿರುವ ಸ್ತ್ರೀ-ದ್ವೇಷೀ ಗುಣಗಳು ಮತ್ತು ತಾವು ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸುವ ದೌರ್ಜನ್ಯಗಳು ಯಾರ ಗಮನಕ್ಕೂ ಬಾರದಂತೆ ಮಾಡುವಲ್ಲಿ ಸಮರ್ಥರೇ ಆಗಿದ್ದಾರೆ.

ಇದನ್ನೂ ಓದಿ: ಮಂಪರು: ಸ್ತ್ರೀಸಂವೇದನೆ ಹಾಗೂ ಮೈಮನಗಳ ಉಭಯ ಸಂಕಟ

ಸಂಗೀತ ಎಂಬುದು ಇಂದು ಒಂದು ದೊಡ್ಡ ಉದ್ಯಮವೇ ಆಗಿದೆ. ಈ ಸಂಗೀತ ಉದ್ಯಮದಲ್ಲಿ Gangsta rap ಬಹು ಜನಪ್ರಿಯವಾಗಿ ಬೆಳೆಯುತ್ತಿದೆ. (ಗ್ಯಾಂಗ್ಸ್‌ಟಾ ರ್‍ಯಾಪ್ ಶೈಲಿಯಲ್ಲಿ ಬಳಸುವ ಸಾಹಿತ್ಯವು, ದೌರ್ಜನ್ಯ ಮತ್ತು ಬೀಡಾಡಿ ಹುಡುಗರ ಗುಂಪಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇರುವುದೇ ಹೆಚ್ಚು.) ಈ ಶೈಲಿಯನ್ನು ಮುಂಚೂಣಿಗೆ ತರುತ್ತಿರುವವರು ಬಿಳಿಯ ಪುರುಷರೇ. ಜನಪ್ರಿಯವಾಗುತ್ತಿರುವ ಈ ಶೈಲಿಯು, ಪಿತೃಪ್ರಧಾನತೆ ಮತ್ತು ಅದರ ಮುಖ್ಯ ಆಶಯವೇ ಆದ ಹೆಣ್ಣು-ದ್ವೇಷಗಳನ್ನು ಸಾರ್ವಜನಿಕ ವಲಯದಲ್ಲಿ ಪ್ರಚಾರ ಮಾಡುವ ದೊಡ್ಡ ದನಿಯೇ ಆಗಿ ವರ್ತಿಸುತ್ತಿದೆ. ಹೀಗಿದ್ದರೂ ಈ ಉದ್ಯಮವು ಕಪ್ಪು ತರುಣ ಪುರುಷರ ಧ್ವನಿಗೆ, ಹೆಚ್ಚು ಅವಕಾಶಗಳನ್ನು ನೀಡಿತು ಎಂಬುದು ನಿಜ. (ಮೊದಮೊದಲು, ತಳವರ್ಗದ ಕಪ್ಪು ತರುಣರೇ ಇಲ್ಲಿಗೆ ಬರುತ್ತಿದ್ದುದು.) ಈ ಶೈಲಿಯನ್ನು ಜನಪ್ರಿಯಗೊಳಿಸುವ ಮೂಲಕ, ಆಡಳಿತ ವರ್ಗದ ಬಿಳಿಯ ಪುರುಷರು, ಎರಡೆರಡು ಪ್ರಯೋಜನಗಳನ್ನು ಒಟ್ಟಿಗೇ ಪಡೆಯುತ್ತಿದ್ದರು. ಇತ್ತ ಪಿತೃಪ್ರಧಾನತೆಯ ಪುರುಷತ್ವದ ಬಲೆಯಲ್ಲಿ (ಹಣ, ಅಧಿಕಾರ, ಲೈಂಗಿಕ ಚಟುವಟಿಕೆ) ಉಳಿಯುವುದನ್ನೇ ಇಷ್ಟಪಡುವ ಗ್ರಾಹಕರನ್ನು ಆಕರ್ಷಿಸಿ ಶೋಷಿಸಬಹುದಿತ್ತು; ಮತ್ತು ಅದೇ ವೇಳೆಗೆ, ಸ್ತ್ರೀವಾದೀ ವಿರೋಧೀ ಸಂದೇಶಗಳನ್ನು ಕಳಿಸುವ ಮೂಲಕ, ಬಿಳಿಯ ತರುಣ ಪುರುಷರಿಗೆ ಇಷ್ಟವಾಗುವಂತೆ, ಪಿತೃಪ್ರಧಾನತೆಯ ಪಾಠಗಳನ್ನು ಹೊಸ ವಿನ್ಯಾಸದಲ್ಲಿ ನಿರೂಪಿಸಬಹುದಿತ್ತು.

ನಮ್ಮ ಸರ್ಕಾರವನ್ನು ನಿಯಂತ್ರಿಸುವ ಸಾಂಪ್ರದಾಯಿಕ ಬಿಳಿಯ ಪುರುಷರು, ಯಾರೋ ಕೆಲವು ಕಪ್ಪು ಪುರುಷರನ್ನು ಬಳಸಿ, ಉದಾಹರಣೆಗೆ, Colin Powell- ಅಮೆರಿಕದ ಜನತೆಗೆ, ಯುದ್ಧವನ್ನು ಸಮರ್ಥಿಸಿ ಹೇಳುವ, ಬೈಬಲ್‌ನ ಭಾಗಗಳನ್ನು, ಉಪದೇಶಿಸುತ್ತಾರೆ. (ಕಪ್ಪು ಪುರುಷನನ್ನು ಬಳಸುವ ಮೂಲಕ, ಗಾಢಬಣ್ಣದ ’ಅನ್ಯ’ವೇ ನಮಗಿರುವ ಮುಖ್ಯ ಬೆದರಿಕೆ; ಸಾಹಸಿಯಾದ, ಅಮೆರಿಕದ ಬಿಳಿಯ ಪುರುಷನು ಇದನ್ನು ನಾಶಪಡಿಸಬೇಕು ಎಂಬ ಸಂದೇಶವನ್ನು ಸ್ಥಿರಪಡಿಸಲಾಗುತ್ತದೆ.) ಸಮೂಹ ಮಾಧ್ಯಮಗಳು, ಕಪ್ಪು ಪುರುಷರನ್ನು ರಾಕ್ಷಸರೋ ಎಂಬಂತೆ ಪ್ರಸ್ತುತಪಡಿಸುತ್ತವೆ; ಈ ಮೂಲಕ ಅದು, ಕಪ್ಪು ಪುರುಷರು ಮಾತ್ರವೇ, ಪಿತೃಪ್ರಧಾನತೆಯ ಪುರುಷತ್ವದ ಹೆಸರಿನಲ್ಲಿ, ಕ್ರೌರ್ಯವನ್ನು ಮೆರೆಯುತ್ತಾರೆ ಎಂದು ಸ್ಥಾಪಿಸಿಬಿಡುತ್ತದೆ; ಮತ್ತು ಬಿಳಿಯ ಪುರುಷರು ಮತ್ತು ಅವರ ಸಹವರ್ತಿ ಮಹಿಳಾ-ದ್ವೇಷಿಗಳು ಮೆರೆಯುವ ಕ್ರೌರ್ಯದ ಕಡೆ ಯಾರ ಗಮನವೂ ಹರಿಯದಂತೆ ಮಾಡುತ್ತದೆ.

ಪಿತೃಪ್ರಧಾನತೆಯ ಬಿಳಿಯ ಪುರುಷರು ಸ್ತ್ರೀವಾದದ ವಿರುದ್ಧ ಸದಾಕಾಲವೂ ಕತ್ತಿ ಮಸೆಯುತ್ತಲೇ ಇರುತ್ತಾರೆ. ಅವರ ಪರವಾಗಿ ಕೆಲಸ ಮಾಡುವ ಸಮೂಹ ಮಾಧ್ಯಮಗಳು, ಅಸಹಜ ಪ್ರವೃತ್ತಿಯ, ವಿಕೃತ ಸ್ವಭಾವದ ಕೆಲವು ಪುರುಷರು ಮಾತ್ರವೇ ಮಹಿಳಾ-ದ್ವೇಷಿಗಳಾಗಿದ್ದು, ಅಂಥವರು ಹಿಂಸೆಗಳಲ್ಲಿ ತೊಡಗುತ್ತಾರೆ ಎಂದು ನಿರಂತರವಾಗಿ ಚಿತ್ರಿಸಿ ತೋರಿಸುತ್ತವೆ. ಒಟ್ಟಿನಲ್ಲಿ, ಪಿತೃಪ್ರಧಾನತೆಯ ಬಿಳಿಯ ಪುರುಷರು, ಪಿತೃಪ್ರಧಾನತೆಯ ದೌರ್ಜನ್ಯ ಎಂಬುದು ತಮ್ಮಲ್ಲಿ ಇಲ್ಲವೇ ಇಲ್ಲ ಎಂದು ನಿರೂಪಿಸಲು, ಏನು ಬೇಕಾದರೂ ಮಾಡುತ್ತಾರೆ.

ಅಮೆರಿಕದ ಒಂದು ಟೀವಿ ಚಾನಲ್, PBS (Public Broadcasting Service) ನಿರ್ಮಿಸಿರುವ Hillside Strangler ಎಂಬ ಒಂದು ಸಾಕ್ಷ್ಯಚಿತ್ರವು ಇದಕ್ಕೆ ಒಂದು ಉದಾಹರಣೆಯಂತೆ ಇದೆ. ಒಬ್ಬ ಹೆಂಗಸು ಮತ್ತು ಇಬ್ಬರು ಹುಡುಗಿಯರನ್ನು ಕೊಲೆಮಾಡಿರುವ, ಒಬ್ಬ ಸರಣಿ ಕೊಲೆಗಾರ ಬಿಳಿಯ ಪುರುಷನೊಂದಿಗೆ, ಮನೋಚಿಕಿತ್ಸಕರು ಮಾತಾಡುತ್ತಿರುವುದನ್ನು ವೀಕ್ಷಕರು ನೋಡಬಹುದು. ಕತೆಯನ್ನು ಹಲವು ಭಾಗಗಳಾಗಿ ವಿಂಗಡಿಸಿ ಹೇಳಲಾಗಿದೆ. ಪ್ರತಿಯೊಂದು ಭಾಗವೂ ತೀರಾ ನಾಟಕೀಯವಾಗಿ, ಕುತೂಹಲಕರವಾಗಿ ಸಾಗುತ್ತದೆ. ಈ ಆರೋಪಿಯು, ಒಬ್ಬ ಸುಂದರ ಅಮೆರಿಕನ್ ಬಿಳಿಯ ಹುಡುಗ ಎಂಬುದು, ನೋಡುಗರಿಗೆ ತಿಳಿಯುತ್ತದೆ. (ಚಿತ್ರದ ನಿರೂಪಕನು, ಆರೋಪಿಯ ಹುಡುಗುತನದ ಗುಣಗಳನ್ನೇ ಪದೇಪದೇ ಪ್ರಸ್ತಾಪಿಸುತ್ತಾನೆ; ಇದನ್ನು ಒತ್ತಿ ಹೇಳಲೆಂದೇ, ಇಲ್ಲಿ ನಾನು ’ಹುಡುಗ’ ಎಂಬ ಪದವನ್ನು ಬಳಸಿದ್ದೇನೆ.) ಆರೋಪಿಗೆ ಬ್ಲಾಂಡ್ ಕೂದಲಿನ ಸುಂದರಳಾದ, ಹೆಂಡತಿ ಇದ್ದಾಳೆ ಮತ್ತು ಇನ್ನೂ ಹಸುಗೂಸಾದ ಮಗನಿದ್ದಾನೆ. ಈ ಆರೋಪಿಯು, ಖಳನಾಯಕನಂತೆ, ಕೊಲೆಗಾರನಂತೆ ಕಾಣುವುದೇ ಇಲ್ಲ ಎಂದು ವೀಕ್ಷಕರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಅಲ್ಲದೆ, ಅವನು ಮೈಮುರಿದು ದುಡಿಯುವ ಸ್ವಭಾವದವನು, ಎಲ್ಲರ ಮೆಚ್ಚುಗೆಗೂ ಪಾತ್ರನಾದವನು ಇತ್ಯಾದಿ ಎಂದು ನಮಗೆ ತಿಳಿಸಲಾಗುತ್ತದೆ. ಇವೆಲ್ಲಾ ಗುಣಗಳೂ ಇದ್ದದ್ದರಿಂದಲೇ, ಪತ್ತೇದಾರರಿಗೂ, ಮತ್ತು ಪೊಲೀಸರಿಗೂ (ಅವರೆಲ್ಲರೂ ಬಿಳಿಯ ಪುರುಷರೇ) ಅವನನ್ನು ಬಂಧಿಸಲು ಮನಸ್ಸೇ ಆಗಿರಲಿಲ್ಲ. ಅವರಿಗಂತೂ ಅವನನ್ನು ಶಂಕಿತನೆಂದು ಕಲ್ಪಿಸಿಕೊಳ್ಳಲು ಸಾಧ್ಯವೇ ಆಗಿರಲಿಲ್ಲ. ಆದರೆ ಬಂಧನವಾಗುವುದು ತಪ್ಪಲಿಲ್ಲ. ಆಗಲೂ ಕೂಡಾ ಈ ಪ್ರಕರಣದಲ್ಲಿ, ಬಿಳಿಯ-ಪುರುಷ ಮನೋರೋಗ ತಜ್ಞರನ್ನು ಕರೆಸಲಾಯಿತು. ಶುದ್ಧ ಅಮೆರಿಕನ್ ಬಿಳಿಯ ಪುರುಷನು, ಹೆಂಗಸರ ಮೇಲೆ ಇಂಥಾ ದೌರ್ಜನ್ಯದ ಅಪರಾಧವನ್ನು ಮಾಡಿರುವುದು ಸಾಧ್ಯವೇ ಇಲ್ಲದ ಮಾತು; ಹಾಗೂ ಇವನ ಪ್ರಕರಣ ನಿಜವೇ ಆಗಿದ್ದರೆ, ಅವನು ಬುದ್ಧಿ ಸ್ಥಿಮಿತ ಇಲ್ಲದ ಹುಚ್ಚನೇ ಹೌದು ಎಂಬುದಕ್ಕೆ ಸಾಕ್ಷಿಯನ್ನಾದರೂ ಒದಗಿಸಲು, ಈ ತಜ್ಞರನ್ನು ಕರೆಸಿದ್ದಂತೆ ತೋರುತ್ತದೆ.

ಇಷ್ಟೆಲ್ಲಾ ಆದರೂ, ಮನೋರೋಗ ತಜ್ಞರಾಗಿ ಬಂದಿದ್ದವರಲ್ಲಿ ಒಬ್ಬ ಚಾಣಾಕ್ಷ ತಜ್ಞ, ಈ ಆರೋಪಿಯು ನಿಜವಾಗಿಯೂ ಕೊಲೆಗಾರನೇ ಆಗಿದ್ದು, ಶಿಕ್ಷೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹುಚ್ಚನಂತೆ ನಟಿಸುತ್ತಿದ್ದನಷ್ಟೇ ಎಂಬುದನ್ನು ಕಂಡುಹಿಡಿದುಬಿಡುತ್ತಾನೆ. ಈ ಆರೋಪಿಯು ತಾನು ಕೊಲೆ ಮಾಡುವುದಕ್ಕೂ ಮುಂಚಿತವಾಗಿ, ಹುಚ್ಚನಂತೆ ಕಾಣುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲೆಂದೇ, ಮನೋವಿಜ್ಞಾನವನ್ನು ಅಭ್ಯಾಸ ಮಾಡಿರುತ್ತಾನೆ. ಮನೋಚಿಕಿತ್ಸಕನು ಇವನ ಮುಖವಾಡವನ್ನೇನೋ ಕಳಚಿ ತೋರಿಸಿದ. ಹಿಲ್ ಸೈಡ್ ಸ್ಟ್ರಾಂಗ್ಲರ್ (ಅಂದರೆ ಆರೋಪಿಯು) “ಹೆಣ್ಣು ಎಂದರೆ ನನಗೆ ಕಾಲಕಸ; ಅವಳನ್ನು ನಿಮಿಷದಲ್ಲಿ ಹೊಸಕಿ ಕೊಲ್ಲುವೆ” ಎನ್ನುತ್ತಾನೆ. ಕೊನೆಗೊಮ್ಮೆ ವಿಚಾರಣೆ ಮುಗಿಸುತ್ತಾ, ಬಿಳಿಯ ಪುರುಷ ನ್ಯಾಯಾಧೀಶನು, “ಆರೋಪಿಯು ಸ್ತ್ರೀ-ದ್ವೇಷಿಯೇ ಆಗಿದ್ದು, ಈಗ ಒಬ್ಬ ಮಹಿಳೆಯನ್ನು ಕೊಂದಿದ್ದಾನೆ,” ಎಂದು ನೋಡುಗರಿಗೆ ಹೇಳುತ್ತಾನೆ. ಆದರೂ, ನಿರೂಪಕನು, ಈ ಸ್ತ್ರೀ-ದ್ವೇಷವು ಪಿತೃಪ್ರಧಾನತೆ ಅಥವಾ ಲೈಂಗಿಕತಾವಾದ ಅಥವಾ ಪುರುಷ ದಬ್ಬಾಳಿಕೆಗಳಿಗೆ ಸಂಬಂಧಿಸಿದ ಒಂದು ಸಮಸ್ಯೆಯೇ ಆಗಿದೆ ಎಂಬುದನ್ನು ಪ್ರಸ್ತಾಪಿಸುವುದೇ ಇಲ್ಲ. ಅದಕ್ಕೆ ಬದಲು ನಮಗೆ ’ಅಪರಾಧಿಯ ತಾಯಿಯು, ಇವನನ್ನು ಹೊಡೆದು, ಬಡಿದೂ ವಿಪರೀತವಾಗಿ ಶಿಕ್ಷಿಸುತ್ತಿದ್ದಳು; ಅವಳು, ಜೂಜುಕೋರನೂ ಕ್ರೂರಿಯೂ ಹಿಂಸಾಪ್ರವೃತ್ತಿಯವನೂ ಆದ ತನ್ನ ಗಂಡನ ಮೇಲಿನ ಕೋಪವನ್ನು, ಈ ಮಗನ ಮೇಲೆ ತೀರಿಸಿಕೊಳ್ಳುತ್ತಿದ್ದಳು’ ಎಂಬ ಬೇರೆಯೇ ಒಂದು ಕತೆಯನ್ನು ಜೋಡಿಸಿ ಹೇಳುತ್ತಾನೆ. ಅಂತೂ ಅವನ ವಿಶ್ಲೇಷಣೆಯು, ಪುರುಷನು ಮಹಿಳೆಯ ಮೇಲೆ ನಡೆಸಿದ ದೌರ್ಜನ್ಯಕ್ಕೆ ಪ್ರತಿಯಾಗಿ ಒಬ್ಬ ಮಹಿಳೆಯನ್ನೇ ದೂಷಿಸುತ್ತದೆ. ಪುರುಷನು ಮಾಡಿದ ಎಲ್ಲ ಕೆಟ್ಟ ಕೆಲಸಗಳೂ “ಅವಳೇ ಮಾಡಿಸಿದ್ದು” ಎಂದರೆ ಮುಗಿಯಿತು. ಅವನು ಅತ್ಯಂತ ಚಾಣಾಕ್ಷತೆಯಿಂದ ತಂತ್ರಗಳನ್ನು ಹೂಡಿ ಅಸಮಾನತೆಗಳನ್ನು ಆಚರಿಸಿದ್ದು ಅಥವಾ ಒಳ್ಳೆಯವನಂತೆ ನಟಿಸುತ್ತಾ ಎಷ್ಟೋ ಮಹಿಳೆಯರಿಗೆ ಮತ್ತು ಇತರರಿಗೂ ಮೋಸ ಮಾಡಿದ್ದು, ಉದಾರವಾದೀ ಪಿತೃಪ್ರಧಾನ ಪುರುಷನ ವೇಷ ತೊಟ್ಟಿದ್ದುಎ॒ಲ್ಲವನ್ನೂ ಇಂಥಾ ’ವೈಚಾರಿಕ’ ನಿರೂಪಣೆಗಳು ಮುಚ್ಚಿಡುತ್ತವೆ.

ಸ್ತ್ರೀವಾದೀ ಚಳವಳಿಗಳು ಆರಂಭಗೊಂಡ ನಂತರದಲ್ಲಿ, ನಿಗೂಢ ಕಾದಂಬರಿಗಳ ಪ್ರಕಾರವು, ಸ್ತ್ರೀವಾದೀ ವಿಷಯಗಳನ್ನು ಹೆಚ್ಚುಹೆಚ್ಚಾಗಿ ಬಳಸತೊಡಗಿತು. ಸ್ತ್ರೀ-ದ್ವೇಷಿಗಳಾದ ಪುರುಷ ಖಳನಾಯಕರನ್ನು ಚಿತ್ರಿಸುವ ನೆಪದಲ್ಲಿ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಚಟುವಟಿಕೆಗಳುಎಲ್ಲವನ್ನೂ ಈ ಕಾದಂಬರಿಗಳು, ಢಾಳಾಗಿ ತುಂಬಿಸುತ್ತವೆ; ಆದರೆ, ಪಿತೃಪ್ರಧಾನತೆಯ ಈ ದೌರ್ಜನ್ಯ ಮಾದರಿಯು ಇರುವುದು ಅಗತ್ಯ ಎಂದೇ ಎತ್ತಿಹಿಡಿಯುತ್ತವೆ. ವಾಸ್ತವದ ಜಗತ್ತಿನಲ್ಲಿ, ನಡೆಯುವ ಹಿಂಸಾತ್ಮಕ ಅಪರಾಧಗಳಲ್ಲಿ, ಪ್ರತಿಶತ ತೊಂಬತ್ತು ಭಾಗದಷ್ಟು ಪ್ರಕರಣಗಳು, ಪುರುಷರಿಂದಲೇ ನಡೆಯುತ್ತವೆ; ಹಾಗಾಗಿ ಜನಪ್ರಿಯ ಸಂಸ್ಕೃತಿಯು ಪೌರುಷದ ನಕಾರಾತ್ಮಕ ಮತ್ತು ಸಕಾರಾತ್ಮಕ- ಎರಡೂ ಮಾದರಿಗಳನ್ನು ತೋರಿಸುತ್ತದೆ. ಮಹಿಳಾ ದ್ವೇಷಿಗಳಾದ ದಬ್ಬಾಳಿಕೆಯ ಪುರುಷರನ್ನು, ಏಕಾಂಗಿಗಳು ಎಂದು ಚಿತ್ರಿಸಲಾಗುತ್ತದೆ. ಸಾಮಾನ್ಯವಾಗಿ ಇವರ ಹಿನ್ನೆಲೆಯಾಗಿ, ಚಿಕ್ಕಂದಿನಲ್ಲಿ ಇವರು ಯಾರಿಂದಲೋ- ವಿಶೇಷವಾಗಿ, ಹೆಂಗಸರಿಂದಲೇ- ಹಿಂಸೆ ನೋವುಗಳನ್ನು ಅನುಭವಿಸಿದವರು ಮತ್ತು ಅದರಿಂದಾಗಿಯೇ ಸಮಾಜಕ್ಕೆ ಸಹಜವಾಗಿ ಹೊಂದಿಕೊಳ್ಳಲಾಗದೆ ಕಷ್ಟ ಪಡುವವರು ಎಂಬ ಕತೆಯು ಇರುತ್ತದೆ. ವ್ಯಂಗ್ಯದ ಮಾತೆಂದರೆ, ಈ “ಕೆಟ್ಟ” ಗಂಡಸರ ಲಕ್ಷಣಗಳೂ, ಇವರನ್ನು ಸದೆಬಡಿದು ಕೊಂದುಹಾಕುವ “ಒಳ್ಳೆಯ” ಗಂಡಸರ ಲಕ್ಷಣಗಳೂ ಒಂದೇ ಬಗೆಯದಾಗಿರುತ್ತವೆ. “ಕೆಟ್ಟ”ವರೋ ಅಥವಾ “ಒಳ್ಳೆಯ”ಯವರೋ, ಈ ಪುರುಷರಿಬ್ಬರೂ, ಇರುವುದೊಂದು ಕಾಣುವುದೊಂದು ಎಂಬಂತೆ ನಕಲಿ ರೂಪಗಳನ್ನು ಧರಿಸುತ್ತಾರೆ. ಇತರರು ಅವರ ಬಗ್ಗೆ ಕಲ್ಪಿಸಬಹುದಾದ ಎಲ್ಲಾ ಚಹರೆಗಳಿಗೂ ವಿರುದ್ಧವೆನಿಸುವ ಲಕ್ಷಣಗಳನ್ನೇ ಪ್ರದರ್ಶಿಸುತ್ತಾ, ಎಲ್ಲರನ್ನೂ ಯಾಮಾರಿಸುತ್ತಾರೆ. ಆ ಮೂಲಕ ಅವರು ಯಾರೊಂದಿಗೂ ತಮ್ಮನ್ನು ತಾವು ಗುರುತಿಸಿಕೊಳ್ಳುವುದೂ ಇಲ್ಲ; ಅಥವಾ ಭಾವನಾತ್ಮಕವಾಗಿ ಯಾರೊಂದಿಗೂ ಬೆರೆಯುವುದೂ ಇಲ್ಲ.

ಇಂದಿನ ಸಿನೆಮಾಗಳಲ್ಲಿ, ಸೂಕ್ಷ್ಮ ಸಂವೇದನೆಯ ಪುರುಷನನ್ನು, ಅವನೊಳಗೆ ಹಿಂಸಾತ್ಮಕ ಪ್ರವೃತ್ತಿಗಳು ಇರುತ್ತವೆ ಎಂಬಂತೆಯೇ ತೋರಿಸಲಾಗುತ್ತದೆ. Good Will Hunting ಎಂಬ ಸಿನೆಮಾದ ಕತೆ, ಈ ಮಾದರಿಯ ಒಂದು ಉದಾಹರಣೆ: ವಿಲ್ ಎಂಬ ಒಬ್ಬ ಬಡ ತರುಣ ಪುರುಷನು, ಚಿಕ್ಕಂದಿನಲ್ಲಿ ತನ್ನ ಮೇಲೆ ನಡೆದ ಹಿಂಸಾತ್ಮಕ ದಾಳಿಗಳಿಗೆ ಸಿಲುಕಿದ್ದ ಅನುಭವದಿಂದ ಕುಗ್ಗಿಹೋಗಿದ್ದು, ಈಗಲೂ ಈ ಕುಗ್ಗಿದ ಮನಸ್ಥಿತಿಯಿಂದ ಹೊರಬರಲಾರದೆ, ಕಷ್ಟ ಪಡುತ್ತಿರುತ್ತಾನೆ. ಇದರಿಂದ ಪಾರಾಗಿ ಸ್ವಸ್ಥನಾಗಲು, ಚಿತ್ರಕತೆಯು ಒಂದು ದಾರಿಯನ್ನು ತೋರಿಸುತ್ತದೆ. ಇದನ್ನು ಅನುಸರಿಸುವ ಅವನು ತನ್ನೊಳಗಿನ ಸಂಘರ್ಷಗಳಿಗೆ ಮುಖಾಮುಖಿಯಾಗಿ, ತನ್ನ ಗಂಡಸುತನದ ಭಾವವನ್ನು ಮರುಸ್ಥಾಪನೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಅವನ ಸಮಸ್ಯೆ ಮುಗಿಯುತ್ತದೆ. ಯಾವುದಾದರೂ ಕಾರಣದಲ್ಲಿ- ಉದಾಹರಣೆಗೆ, ಸ್ತ್ರೀವಾದೀ ಚಿಂತನೆಗಳ ಪ್ರಭಾವದಲ್ಲಿ- ಪುರುಷನು ತನ್ನ ಪುರುಷತ್ವದ ಮಾತನ್ನು ಮರೆತರೆ, ಅದನ್ನು ಅವನಿಗೆ ಮತ್ತೆ ನೆನಪಿಗೆ ತರಿಸಲು ಪಿತೃಪ್ರಧಾನ ಸಂಸ್ಕೃತಿಯಲ್ಲಿ ಬಳಸಲಾಗುವ ಒಂದು ವಿಧಾನವನ್ನು, ಈ ಚಿತ್ರಕತೆಯು ಹೊಂದಿದೆ ಅಷ್ಟೇ.

ಟೆರೇನ್ಸ್ ರಿಯಲ್ ಈ ಸಿನೆಮಾವನ್ನು ಕುರಿತು ಬರೆಯುತ್ತಾನೆ: ವಿಲ್ ಹಂಟಿಂಗ್ (ವಿಲ್ ನಡೆಸಿದ ಬೇಟೆ) ಕತೆಯು, ಎಲ್ಲರೊಂದಿಗೂ ಸಂಪರ್ಕ ಕಳೆದುಕೊಳ್ಳುವ ಪುರುಷನು, ತನ್ನದೇ ಹೃದಯದಿಂದ ಕೂಡಾ ದೂರವಾಗುತ್ತಾನೆ ಎಂದೇ ತೋರಿಸುತ್ತದೆ. ಆಪ್ತತೆಯು ಲೆಕ್ಕವಿಲ್ಲದಷ್ಟು ಅಪಕ್ವ ಭಾವಗಳನ್ನೂ ಸೃಷ್ಟಿಸುತ್ತದೆ. ಆಪ್ತತೆಯನ್ನು ಉಳಿಸಿಕೊಳ್ಳಬೇಕು ಎಂದರೆ, ಈ ಅಪಕ್ವ ಭಾವಗಳೊಂದಿಗೆ ಕೂಡಾ, ಮಾತಾಡುತ್ತಾ ಸಾಗುವುದು ಅಗತ್ಯವೇ ಆಗುತ್ತದೆ. ಆದರೆ, ಗಂಡುಹುಡುಗರಿಗೆ ಸಿಗುವ ಪಿತೃಪ್ರಧಾನತೆಯ ತರಬೇತಿಯು, ಇದಕ್ಕೆಲ್ಲಾ ಅವಕಾಶವನ್ನು ಕೊಡುವುದೇ ಇಲ್ಲ. ಭಾವಗಳ ಸಂಪರ್ಕವನ್ನು ಕಳೆದುಕೊಂಡದ್ದರಿಂದ ಎಷ್ಟೇ ನೋವಾದರೂ, ಅದನ್ನು ತಾಳಿಕೊಳ್ಳಬೇಕು, ನಮ್ಮ ಒಳಗೇ ಹುಟ್ಟುವ ಭಾವನೆಗಳಿಗೆ ತಡೆ ಹಾಕಿ ನಿಲ್ಲಿಸಬೇಕು ಎಂದು ಕಡ್ಡಾಯ ಮಾಡಿ ಕಲಿಸುತ್ತದೆ. ಹುಡುಗರಿಗೆ ಸಿಗುವ ಈ ತರಬೇತಿಯು, ಸ್ವಾನುಭೂತಿ ಮತ್ತು ಪರಾನುಭೂತಿ ಎಂಬ ವಲಯಗಳನ್ನೇ ಕಡೆಗಣಿಸುತ್ತದೆ; ಅವನ್ನು ಕುರಿತು ಅರಿಯುವ ಪ್ರಯತ್ನಗಳನ್ನು ತಡೆಯುತ್ತದೆ. ಇವೆಲ್ಲಾ ಹೆಂಗಸರಿಗೆ ಮೀಸಲಾದ ವಲಯಗಳು ಎಂದೂ ಕಲಿಸುತ್ತದೆ. ಈ ಕತೆಯ ವಿಲ್ ಅನುಭವಿಸುವ ನೋವಿನ ಮೂಲದ ಬಗೆಗೆ ಅವನಲ್ಲಿ ಹುಟ್ಟಿತು ಎನ್ನಲಾದ ಅನಿಸಿಕೆಯಾಗಲೀ, ಮತ್ತು ಅದರಿಂದ ತಪ್ಪಿಸಿಕೊಳ್ಳಬೇಕು ಎಂದರೆ, ತನಗೆ ತುಂಬಾ ಇಷ್ಟವಾದ ಎಲ್ಲರಿಂದಲೂ ದೂರ ಓಡಿಬಿಡಬೇಕು ಎಂದು ಅವನಿಗೆ ತೋರಿತು ಎಂದು ಹೇಳಲಾದ ಪರಿಹಾರವಾಗಲೀ, ಸ್ವತಃ ಅವನಲ್ಲಿ ಹುಟ್ಟಿದ ಭಾವನೆಗಳಲ್ಲ. ಬದಲಿಗೆ, ಅವು ಪಿತೃಪ್ರಧಾನತೆಯ ಪ್ರಾಣವೇ ಆದ, ಪುರುಷತ್ವ ಎಂಬ ಮಿಥ್‌ನ ಒಂದು ಸಂಕೇತಭಾಷೆಯು ಅವನಿಗೆ ರವಾನಿಸುವ ಸಂದೇಶವೇ ಆಗಿರುತ್ತದೆ. ಈ ಮಿಥ್‌ನ ಸಂಕೇತ ಭಾಷೆಯನ್ನು ತರಬೇತಿಯಲ್ಲಿ, ಎಲ್ಲಾ ಹುಡುಗರಿಗೂ ಚೆನ್ನಾಗಿ ಕಲಿಸಲಾಗುತ್ತದೆ.

ಪಿತೃಪ್ರಧಾನತೆಯ ಈ ಸಂಕೇತ ಭಾಷೆಯು, ತಲೆಮಾರಿನಿಂದ ತಲೆಮಾರಿಗೆ ರವಾನೆಯಾಗುತ್ತದೆ. ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡ Monsterʼs Ball ಇಂಥಾ ಒಂದು ಕತೆಯಿರುವ ಒಂದು ಸಿನೆಮಾ, ಈ ಸಿನೆಮಾ ಪಿತೃಪ್ರಧಾನತೆಯ ಕರಾಳ ಮುಖವನ್ನು ತುಂಬಾ ಪ್ರಭಾವಶಾಲಿಯಾಗಿ ಅನಾವರಣಗೊಳಿಸುತ್ತದೆ. ಈ ಸಿನೆಮಾ ಮೂರು ತಲೆಮಾರುಗಳ ಪುರುಷರನ್ನು ತೋರಿಸುತ್ತದೆ. ಪಿತೃಪ್ರಧಾನತೆಯ ಪುರುಷತ್ವ/ಗಂಡಸುತನದ ಮಾದರಿಯನ್ನು ಕೂಡಿಸಿಕೊಳ್ಳಲು, ಬಿಳಿಯ ಪುರುಷರು, ತಮ್ಮ ಭಾವನೆಗಳೊಂದಿಗಿನ ಸಂಪರ್ಕವನ್ನೇ ಕಳೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ ಎಂಬ ಪಿತೃಪ್ರಧಾನತೆಯ ಆಶಯಗಳನ್ನು ಹೇಳುವುದರೊಂದಿಗೆ ಈ ಸಿನೆಮಾದ ಕತೆ ಶುರುವಾಗುತ್ತದೆ. ಮೊದಲ ತಲೆಮಾರಿನ ಹಿರಿಯ, ಎಲ್ಲರನ್ನೂ ಆಳಬೇಕು ಎನ್ನುವ ಪಿತೃಪ್ರಧಾನ ಪುರುಷ. ಇವನು ಕಷ್ಟದ ಬದುಕು, ಕುಡಿತ, ಧೂಮಪಾನ ಇತ್ಯಾದಿಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಎರಡನೆಯ ತಲೆಮಾರಿನ ಮಗ, ಅಪ್ಪನಿಗೆ ವಿಧೇಯನಾದ ಪಿತೃಪ್ರಧಾನ ಪುರುಷ. ಇವನದು ಜೈಲಿನ ವಾರ್ಡನ್ ಕೆಲಸ. ಮೂರನೆಯ ತಲೆಮಾರಿನ ಮೊಮ್ಮಗ ಕೂಡಾ ಎರಡು ತಲೆಮಾರುಗಳ ಹಿರಿಯ ಪುರುಷರ ಹೆಜ್ಜೆಯ ಜಾಡನ್ನೇ ಹಿಡಿದವನು.

ಸಿನೆಮಾದ ಮೊದಲ ತಲೆಮಾರಿನ ಹಿರಿಯ ಪುರುಷ, ತನ್ನ ಮಗನನ್ನು ಬೈಯ್ಯುವ ಸಂದರ್ಭ ಬಂದಾಗಲೆಲ್ಲಾ, “ನಿನ್ನ ಅಮ್ಮ ಮಲದ ಗುಂಡಿಯೇನೋ?” ಎನ್ನುತ್ತಾನೆ. ಅವಮಾನಿಸುವುದು ನಿಯಂತ್ರಣವನ್ನು ಸಾಧಿಸುವ ಒಂದು ಮುಖ್ಯ ಸಾಧನ ಎನಿಸುತ್ತದೆ. ಹಿರಿಯ ಅಪ್ಪ ಒಬ್ಬ ಜನಾಂಗೀಯವಾದೀ, ಸ್ತ್ರೀ-ದ್ವೇಷೀ ಪುರುಷ. ಅವನ ಮಗನಾದವನೂ ಇವನನ್ನೇ ಅನುಕರಿಸುವ ಪುರುಷ. ಮೂರನೆಯ ತಲೆಮಾರಿನ ಮೊಮ್ಮಗನೂ ಹೀಗೆಯೇ ಇದ್ದದ್ದು. ಆದರೆ ಅವನು ಒಂದು ಹಂತದಲ್ಲಿ, ದುರ್ಬಲನಾದಂತೆ ಆಗುತ್ತಾನೆ. ಏಕೆಂದರೆ, ಅವನು ಈಗ ಜನಾಂಗೀಯವಾದವನ್ನು ವಿರೋಧಿಸುತ್ತಾನೆ ಮತ್ತು ತನ್ನ ಭಾವನೆಗಳನ್ನು ಗುರುತಿಸಿಕೊಳ್ಳುತ್ತಾನೆ; ಈಗ ಅವನು ತನ್ನ ಅಪ್ಪನ ವಿರುದ್ಧ ತಿರುಗಿಬೀಳುತ್ತಾನೆ. ಈ ಹುಡುಗ ತನ್ನ ಅಪ್ಪನನ್ನು ಕುರಿತು ’ನನ್ನನ್ನು ನೀನು ಏಕೆ ಪ್ರೀತಿಸುವುದಿಲ್ಲ’ ಎಂದು ಪ್ರಶ್ನಿಸುತ್ತಲೇ, ತನ್ನ ಬಾಯೊಳಗೆ ತಾನೇ ಪಿಸ್ತೂಲನ್ನಿಟ್ಟು ಗುಂಡು ಹಾರಿಸಿಕೊಂಡುಬಿಡುತ್ತಾನೆ. ಮೊಮ್ಮಗನ ಆತ್ಮಹತ್ಯೆಯು, ಪಿತೃಪ್ರಧಾನತೆಯ ವರ್ತುಲವನ್ನು ಬೇಧಿಸುತ್ತದೆ; ಮತ್ತು ಅವನ ಅಪ್ಪ ಪರಿವರ್ತನೆಗೊಳ್ಳುತ್ತಾನೆ. ಈಗ ಅವನು ತಾನು ಈ ಹಿಂದೆ ದ್ವೇಷಿಸುತ್ತಿದ್ದ ಕಪ್ಪು ಜನರೊಂದಿಗೆ ಬೆರೆಯುತ್ತಾ ವಿಮುಕ್ತಿಯನ್ನು ಗಳಿಸುತ್ತಾನೆ. ಬಿಳಿಯ-ಪುರುಷ ಪಿತೃಪ್ರಧಾನತೆಯ ಆಡಳಿತವನ್ನು ನಿರಾಕರಿಸಿದರೆ ಮಾತ್ರವೇ, ಪರಿವರ್ತನೆಯ ಹಾದಿಯು ಸುಗಮವಾಗುತ್ತದೆ ಎಂಬ ಸಂದೇಶವನ್ನು ಈ ಸಿನೆಮಾ ಕೊಡುತ್ತದೆ. ಇಷ್ಟಾದರೂ, ಈ ಸಿನೆಮಾ ಕೂಡಾ, ಪಿತೃಪ್ರಧಾನತೆಯನ್ನು ಪ್ರತಿರೋಧಿಸುವ ಪುರುಷರ ಪರಿವರ್ತನೆಯ ಮಾದರಿಯನ್ನು, ಆ ಪುರುಷರು ಈಗಲೂ ಪಿತೃಪ್ರಧಾನತೆಯವರೇ ಆದರೂ, ದಬ್ಬಾಳಿಕೆಯ ಮಾದರಿಗೆ ಬದಲಾಗಿ ಉದಾರವಾದೀ ಒಳ್ಳೆಯ ಪುರುಷರಾದರು ಎಂಬ ಮಿತಿಯೊಳಗೆ ಉಳಿಸಿಬಿಡುತ್ತದೆ.

ಇಂದು ಹೊರಬರುತ್ತಿರುವ, ಎಷ್ಟೋ ಪುಸ್ತಕಗಳೂ, ಸಿನೆಮಾಗಳು ಪಿತೃಪ್ರಧಾನತೆಯ ಕರಾಳ ಮುಖವನ್ನು ಬಿಚ್ಚಿ ತೋರಿಸುತ್ತವೆ ಎಂಬುದೇನೋ ಹೌದು. ಆದರೆ, ಅವು ಬದಲಾವಣೆಗೆ ಅಗತ್ಯವಾದ ಯಾವ ದಿಕ್ಕನ್ನೂ ತೋರಿಸದೆಯೇ ಉಳಿದುಬಿಡುತ್ತವೆ. ಹಾಗಾಗಿ, ಇವು ತಮ್ಮ ಕೊನೆಯ ಮಾತಾಗಿ, ಪುರುಷರು ತಮ್ಮ ಉಳಿವಿಗಾಗಿ, ಪಿತೃಪ್ರಧಾನತೆಯ ಕೆಲವು ಕುರುಹುಗಳನ್ನಾದರೂ ಕಾಪಾಡಿಕೊಳ್ಳುವುದು ಅನಿವಾರ್ಯವೇ ಆಗುತ್ತದೆ; ಮತ್ತು ಹೀಗೆ ಮಾಡದ ಪುರುಷನು ನಾಶವೇ ಆಗುತ್ತಾನೆ ಎಂಬ ಸಂದೇಶವನ್ನೇ ರವಾನಿಸುತ್ತವೆ. ಮಾನ್‌ಸ್ಟರ್ಸ್ ಬಾಲ್ ಸಿನೆಮಾದ ಗಂಡಸೂ ಅಷ್ಟೇ; ಈಗ ಅವನು ಬದಲಾಗಿದ್ದಾನೆ, ಮಾನವೀಯ ಗುಣವೂ ಇದೆ, ಭಾವನೆಗಳಿವೆ, ಜನಾಂಗೀಯ ವಿರೋಧಿಯಾಗಿಲ್ಲ ಎಂಬುದೂ ಹೌದು, ಜೊತೆಯ ಜೀವಿಗಳನ್ನು ವಸ್ತುಗಳೋ ಎಂಬಂತೆ ಕಾಣುವ ಪಿತೃಪ್ರಧಾನತೆಯ ಮಾದರಿಯನ್ನು ಮೀರಿ ಆ ಜೀವಿಗಳೊಂದಿಗೆ ಆಪ್ತತೆಯನ್ನು ಪ್ರಾಮಾಣಿಕವಾಗಿ ಬೆಳೆಸಿಕೊಂಡಿದ್ದಾನೆ. ಆದರೆ ಇದೆಲ್ಲಾ ಪರಿವರ್ತನೆಗಳಿಂದಾಗಿ ಅವನು ಈಗ ಸ್ವತಃ ತಾನೇ ಸಂತ್ರಸ್ತನಾಗಿ ಉಳಿದುಬಿಟ್ಟಿದ್ದಾನೆ. ಈ ಸಂಕಟದಿಂದಾಗಿ, ಅವನು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ. ಸಿನೆಮಾದ ಇಂಥಾ ಸಂದೇಶವನ್ನು ಪಡೆದ ಯಾವ ಪುರುಷನೂ, ವ್ಯವಸ್ಥೆಯನ್ನು ಬದಲಿಸುವ ಮನಸ್ಸು ಮಾಡಲಾರ.

Igby Goes Down ಎಂಬ ಇನ್ನೊಂದು ಸಿನೆಮಾ. ಈ ಕತೆಯಲ್ಲಿ ಬರುವ ಅಪ್ಪ ತನ್ನ ಭಾವನೆಗಳನ್ನು ಗುರುತಿಸಿಕೊಳ್ಳುತ್ತಾನೆ. ಇವನು Schizophrenia (ಛಿದ್ರಮನಸ್ಕತೆ ಎಂಬುದು ಒಂದು ಮನೋರೋಗ) ಕಾಯಿಲೆಯವನು. ಇವನ ಮಗನೇ ಇಗ್ಬಿ. ಪಿತೃಪ್ರಧಾನತೆಯ ಈ ಹೊಣೆಯನ್ನು ಹೊರಲಾರೆ ಎಂದು ಅಪ್ಪ ತನ್ನ ಮಗನೊಂದಿಗೆ ಹೇಳಿಕೊಂಡರೆ, ಆ ಮಗನಿಗೆ ಅಪ್ಪನ ಈ ಭಾವನೆಗಳು ಅರ್ಥವಾಗುವುದೇ ಇಲ್ಲ. ಮಗನಿಗೆ ಅಮ್ಮನನ್ನು ಕಂಡರೆ ದ್ವೇಷ. ಇದರ ಪರಿಣಾಮವಾಗಿ ಅವನು ತನ್ನ ಸುತ್ತಲೂ ಕಾಣುವ ಕ್ರೌರ್ಯವನ್ನೇ ತಾನೂ ಆವಾಹಿಸಿಕೊಳ್ಳುತ್ತಾನೆ. ಈ ಹಿಂಸೆಯ ಹಾದಿಯನ್ನು ಬಿಡಲು ಅವನು ಪ್ರಯತ್ನ ಮಾಡುತ್ತಾನೆ; ಇದರ ಪರಿಣಾಮವಾಗಿ ಪಲಾಯನವಾದಿ ಆಗುತ್ತಾನೆ. ಎಂದೂ ಕೂಡಾ ತನ್ನ ಕೈಗೆಟುಕದೆಯೇ ಉಳಿಯುವ ’ತನ್ನತನ’ವನ್ನು ಅರಸಿ ಓಡುತ್ತಲೇ ಇರುವ ಪುರುಷನಾಗುತ್ತಾನೆ. ಕೆಲವಾದರೂ ಸಿನೆಮಾಗಳು, ಪಿತೃಪ್ರಧಾನತೆಯ ವಿರುದ್ಧ ದನಿ ಎತ್ತುವ ಪ್ರಯತ್ನಗಳನ್ನು ನಡೆಸಿವೆ ಎಂಬುದು ನಿಜವಾದರೂ, ಕೊನೆಗೆ ಅವು ಕೂಡಾ, ಪುರುಷರು ತಮ್ಮೊಳಗೆ ಹುದುಗಿ ಕುಳಿತಿರುವ ಕ್ರೂರ ಮೃಗದಿಂದ ತಪ್ಪಿಸಿಕೊಳ್ಳಲಾರರು ಎಂದೇ ಹೇಳುತ್ತವೆ. ಅದರಿಂದ ತಪ್ಪಿಸಿಕೊಂಡಂತೆ ನಟಿಸಬಹುದು ಅಷ್ಟೇ. ಹಾಗೆ ವೇಷ ಹಾಕಬಹುದು; ಆದರೆ, ತಮ್ಮ ಪ್ರಜ್ಞಾವಲಯವನ್ನು ಬಿಗಿಬಂಧನದಲ್ಲಿ ಇರಿಸಿರುವ ಪಿತೃಪ್ರಧಾನತೆಯ ಹಿಡಿತವನ್ನು ಸಡಿಲಗೊಳಿಸುವುದು ಅವರಿಂದ ಆಗದು ಎಂಬ ಸಂದೇಶವನ್ನೇ ಉಳಿಸುತ್ತವೆ.

ಈಗ ನಮಗೆ ಉಳಿದಿರುವುದು ಒಂದೇ ದಾರಿ. ನಾವೀಗ ಹೊಸತೇ ಆದ ಒಂದು ಜನಪ್ರಿಯ ಸಂಸ್ಕೃತಿಯನ್ನು ಹುಟ್ಟುಹಾಕಬೇಕು. ಈ ಸಂಸ್ಕೃತಿಯು, ಪುರುಷರ ಗಂಡಸುತನವನ್ನು ಒಪ್ಪಿಕೊಂಡು ಸಂಭ್ರಮಿಸುತ್ತದೆ; ಆದರೆ, ಯಾವುದೇ ಕಾರಣಕ್ಕೂ, ಪಿತೃಪ್ರಧಾನತೆಯನ್ನು ಎತ್ತಿಹಿಡಿಯಬಾರದು. ಹೀಗೆ ಮಾಡದಿದ್ದರೆ, ತಮ್ಮ ಅಸ್ತಿತ್ವದ ಸ್ವರೂಪವನ್ನು ಕುರಿತು ಪುರುಷ ಸಮುದಾಯಗಳು ಈಗ ಹೊಂದಿರುವ ಆಲೋಚನೆಗಳಲ್ಲಿ, ಯಾವುದೇ ಬದಲಾವಣೆಗಳೂ ಬರಲಾರವು ಎಂಬುದು ಖಚಿತ. ಗುಡ್ ವಿಲ್‌ಗೆ, ಪ್ರೀತಿಯನ್ನು ಅರಿತುಕೊಳ್ಳುವ ಅವಕಾಶ ದೊರೆತಾಗ, ಅವನು ಅದರಿಂದ ಯಾವುದೇ ಕಾರಣಕ್ಕೂ ವಿಮುಖನಾಗದೆ, ಆ ಕೂಡಲೇ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಹಿಂದೆ ಆಗಿದ್ದ ಯಾವುದೋ ಅನುಭವಗಳನ್ನು ಮನಸ್ಸಿನಲ್ಲಿ ಉಳಿಸಿಕೊಂಡು, ತಾನು ಬೆಲೆ ಇಲ್ಲದವನು ಎಂಬ ಭಾವ, ಅವಮಾನಕ್ಕೆ ಒಳಗಾದೆನೆಂಬ ಭಾವಗಳನ್ನು ಅಲ್ಲಲ್ಲಿಗೇ ಬಿಟ್ಟುಹಾಕುವುದನ್ನು ಕಲಿಯಬೇಕು. ಸಾವಿನ ಬದಲು ಬದುಕನ್ನು ಆಯ್ಕೆ ಮಾಡಬೇಕು. ಬದುಕಬೇಕು, ಜೀವಿಸಬೇಕು ಎಂಬ ಈ ಆಯ್ಕೆಯೇ, ಅವನನ್ನು ಪಿತೃಪ್ರಧಾನತೆಯ ಮಾದರಿಯನ್ನು ಛಿದ್ರಗೊಳಿಸಿ, ಅದರ ಹಿಡಿತದಿಂದ ಅವನ ಆತ್ಮವನ್ನು ಬಿಡುಗಡೆಗೊಳಿಸುತ್ತದೆ. ಅವನ ಮೂಲಗುಣವಾದ ಒಳ್ಳೆಯತನವನ್ನು ಕಾಣಿಸುವ, ಅವನ ಈ ಹೊಸ ಜಾಗೃತಿಯನ್ನು, ಅವನ ಈ ವಿಮುಕ್ತ ಸ್ಥಿತಿಯನ್ನು ನೋಡುಗರಾದ ನಾವು ಸಂಭ್ರಮಿಸುತ್ತೇವೆ. ಅವನ ಈ ಚೇತರಿಕೆಯು ನಮ್ಮಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ.

ಪುರುಷರಿಗೆ ಹೊಸ ಸಾಧ್ಯತೆಗಳನ್ನು ತೋರಿಸಿ, ಅವನ್ನು ಬಳಸಿಕೊಳ್ಳುವುದನ್ನು ಕಲಿಸಲು ಸಮೂಹ ಮಾಧ್ಯಮಗಳು ಪ್ರಭಾವಶಾಲೀ ವಾಹಕಗಳು. ಜಾಗೃತ ಪುರುಷರು ಈ ಅವಕಾಶಗಳನ್ನು ಸಾರ್ವಜನಿಕ ವೇದಿಕೆಯಾಗಿ ಬಳಸಿಕೊಂಡು, ತಮ್ಮ ಧ್ವನಿಗಳನ್ನು ಎಲ್ಲರಿಗೂ ತಲುಪಿಸಬೇಕು; ಮತ್ತು ಆ ಮೂಲಕವೇ ಪ್ರಗತಿಪರ ಜನಪ್ರಿಯ ಸಂಸ್ಕೃತಿಯನ್ನು ಹುಟ್ಟುಹಾಕಬೇಕು. ಈ ಸಂಸ್ಕೃತಿಯು, ಎಲ್ಲರೊಂದಿಗೆ ಸಂಪರ್ಕಗಳನ್ನು ಸಾಧಿಸುವುದು ಹೇಗೆ, ಸಂವಹನ ಮಾಡುವುದು ಹೇಗೆ, ಪ್ರೀತಿಸುವುದು ಹೇಗೆ ಎಂಬ ಹಲವು ಸಂಗತಿಗಳನ್ನು ಪುರುಷರಿಗೆ ಕಲಿಸುತ್ತದೆ.

ಕನ್ನಡಕ್ಕೆ: ಎಚ್ ಎಸ್ ಶ್ರೀಮತಿ
(ಬೆಲ್ ಹುಕ್ಸ್ ಅವರ ’ದ ವಿಲ್ ಟು ಚೇಂಜ್’ ಪುಸ್ತಕದ ಅನುವಾದವನ್ನು ಜೀರುಂಡೆ ಪುಸ್ತಕ ಜನವರಿ 2024ರಲ್ಲಿ ಪ್ರಕಟಿಸಲಿದೆ.)

ಬೆಲ್ ಹುಕ್ಸ್

ಬೆಲ್ ಹುಕ್ಸ್ 
ಅಮೆರಿಕನ್ ಬರಹಗಾರ್ತಿ ಮತ್ತು ಸ್ತ್ರೀವಾದಿ ಚಿಂತಕಿ; ’ಫೆಮಿನಿಸಂ ಇಸ್ ಫಾರ್ ಎವೆರಿಬಡಿ’, ’ಟಾಕಿಂಗ್ ಬ್ಯಾಕ್: ಥಿಂಕಿಂಗ್ ಫೆಮಿನಿಸ್ಟ್, ಥಿಂಕಿಂಗ್ ಬ್ಲಾಕ್, ’ಆಲ್ ಅಬೌಟ್ ಲವ್ ಇವರ ಕೃತಿಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಿಡಿಪಿ

ತುರ್ತುಪರಿಸ್ಥಿತಿಯನ್ನು ಇಂದಿರಾ ಗಾಂಧಿ ತಪ್ಪು ಎಂದು ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು: ಪಿ. ಚಿದಂಬರಂ

0
ತುರ್ತು ಪರಿಸ್ಥಿತಿ ಕಹಿ ನೆನಪಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ನೇತೃತ್ವದ ಕೇಂದ್ರವು ಜೂನ್ 25 (ಗುರುವಾರ) ಆಚರಿಸುವುದಾಗಿ ಘೋಷಿಸಿದ ನಂತರ, ತಮ್ಮ ನಿರ್ಧಾರ ತಪ್ಪು ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ...