ಮೈಸೂರು ನಗರದ ಮಹಾರಾಣಿಯವರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು (ಎನ್‌‌ಟಿಎಂಎಸ್‌‌) ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ. ಕಳೆದ ಹತ್ತು ವರ್ಷಗಳಿಂದ ಐತಿಹಾಸಿಕ ಶಾಲೆ ಉಳಿವಿಗಾಗಿ ಶ್ರಮಿಸುತ್ತಿದ್ದ ಹೋರಾಟಗಾರರು ಕಂಬನಿ ಮಿಡಿದಿದ್ದಾರೆ.

ಸ್ವಾಮಿ ವಿವೇಕಾನಂದರ ಮೈಸೂರಿಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಜಾಗದಲ್ಲಿ ತಂಗಿದ್ದರೆಂಬ ಕಾರಣದಿಂದ ಶಾಲೆಯ ಜಾಗವನ್ನು ಸರ್ಕಾರ ರಾಮಕೃಷ್ಣ ಆಶ್ರಮಕ್ಕೆ ನೀಡಿತ್ತು. ಶಾಲೆಯ ಜಾಗವನ್ನು ಆಶ್ರಮಕ್ಕೆ ನೀಡಬಾರದೆಂದು ಆಗ್ರಹಿಸಿ ಸುಮಾರು ಹತ್ತು ವರ್ಷಗಳಿಂದಲೂ ಹೋರಾಟ ನಡೆಯುತ್ತಿತ್ತು.

ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಕಳೆದ ಹಲವು ತಿಂಗಳಿಂದ ಹೋರಾಟವನ್ನು ತೀವ್ರಗೊಳಿಸಲಾಗಿತ್ತು. ಆದರೆ ಯಾವುದೇ ಫಲ ಕೊಡಲಿಲ್ಲ. ರಾಮಕೃಷ್ಣ ಆಶ್ರಮಕ್ಕೆ ಜಾಗವನ್ನು ಹಸ್ತಾಂತರಿಸುವುದಕ್ಕಾಗಿ ಕಳೆದ ಗುರುವಾರ ತರಗತಿಗಳನ್ನು ಶಾಲೆಯ ಎದುರಿಗೆ ಇರುವ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಗೆ ಸ್ಥಳಾಂತರಿಸಲಾಗಿತ್ತು. ಶಾಲೆಯ ಪೀಠೋಪಕರಣಗಳನ್ನು ಖಾಲಿ ಮಾಡಲಾಗಿತ್ತು.

ಮಹಾರಾಣಿ ಕೆಂಪನಂಜಮಣ್ಣಿಯವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತೆರೆದ ಈ ಶಾಲೆಗೆ ಐತಿಹಾಸಿಕ ಮಹತ್ವವಿದೆ. ಸ್ವಾಮಿ ವಿವೇಕಾನಂದರ ಆಶಯದಂತೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಆ ಮೂಲಕ ಸ್ವಾಮೀಜಿಯವರ ಆಶಯ ಈಡೇರಿಸಬೇಕು. ಆಶ್ರಮ ಪಟ್ಟು ಬಿಡಬೇಕು ಎಂದು ಒತ್ತಾಯಿಸಲಾಗಿತ್ತು. ಶಾಲೆಯನ್ನು ಉಳಿಸಿಕೊಂಡೇ ಸ್ಮಾರಕ ನಿರ್ಮಿಸುವ ಚರ್ಚೆಗಳಾಗುತ್ತಿದ್ದವು. ಆದರೆ ಸಂಧಾನಕ್ಕೂ ಮುನ್ನವೇ ಶಾಲೆ ನೆಲಕ್ಕುರಳಿದೆ. ಐತಿಹಾಸಿಕ ಮಹತ್ವವುಳ್ಳ ಕನ್ನಡ ಶಾಲೆ, ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಮಹತ್ವದ ಪಾತ್ರವಹಿಸಿದ್ದ ಶಾಲೆ ಇತಿಹಾಸದ ಪುಟ ಸೇರಿದೆ.

ಸೋಮವಾರ ರಾತ್ರಿ 11.30ರ ವೇಳೆಗೆ ಶಾಲೆಯನ್ನು ಧ್ವಂಸ ಮಾಡುವ ಪ್ರಕ್ರಿಯೆಗಳು ಆರಂಭವಾದವು. ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಎನ್‌ಟಿಎಂಎಸ್‌ ಉಳಿಸಿ ಹೋರಾಟ ಸಮಿತಿಯ ಮುಖಂಡರು ಶಾಲೆಯನ್ನು ಉರುಳಿಸದಂತೆ ತಡೆಯಲು ಯತ್ನಿಸಿದರು. ಆದರೆ ನಗರದ ದೇವರಾಜ ಠಾಣೆಯ ಪೊಲೀಸರು ಹೋರಾಟಗಾರರನ್ನು ಬಂಧಿಸಿದರು.

2013ರಲ್ಲಿ ಎನ್‌ಟಿಎಂ ಶಾಲೆಯನ್ನು ಸರ್ಕಾರ ರಾಮಕೃಷ್ಣ ಆಶ್ರಮಕ್ಕೆ ನೀಡಿ ಆದೇಶ ಹೊರಡಿಸಿದ್ದರೂ ಹಸ್ತಾಂತರ ಪ್ರಕ್ರಿಯೆ ನಡೆದಿರಲಿಲ್ಲ. ಕಳೆದ ಗುರುವಾರ ಶಾಲೆಯ ತರಗತಿಗಳನ್ನು ಸ್ಥಳಾಂತರಿಸಿ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು ಆಶ್ರಮಕ್ಕೆ ಶಾಲೆಯನ್ನು ನೀಡಿದ್ದರು. ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ಜಿಲ್ಲಾಧಿಕಾರಿ ಕ್ರಮ ವಹಿಸಿದ್ದರು.

ಶಾಲೆಯ ಧ್ವಂಸ ಕಾರ್ಯಾಚರಣೆಯ ವೇಳೆ ದಾಖಲೆಗಳನ್ನು ತೋರಿಸುವಂತೆ ಹೋರಾಟಗಾರರು ಒತ್ತಾಯಿಸಿದರು. ಪೊಲೀಸರು ತೋರಿಸಿದ ದಾಖಲೆ ಒಪ್ಪದ ಹೋರಾಟಗಾರರು ಸೂಕ್ತ ದಾಖಲೆಗಾಗಿ ಒತ್ತಾಯಿಸಿದರು.  ಪೊಲೀಸರು ಅವಕಾಶ ನೀಡಲಿಲ್ಲ. ಜೆಸಿಬಿಗಳು ಶಾಲೆಯ ಬಳಿ ಬಂದಾಗ ಹೋರಾಟಗಾರರು ಅಡ್ಡಡ್ಡಲಾಗಿ ಮಲಗಿ ಪ್ರತಿಭಟಿಸಿದರು. ಸಿಎಆರ್‌ ಮೈದಾನಕ್ಕೆ ಹೋರಾಟಗಾರರು ಕರೆದೊಯ್ದು, ಬಳಿಕ ಶಾಲೆಯನ್ನು ಉರುಳಿಸಲಾಯಿತು.

ದೇವರಾಜ ಠಾಣೆ ಸೇರಿದಂತೆ ವಿವಿಧ ಠಾಣೆಗಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಎಂ.ಎನ್‌.ಶಶಿಧರ್‌ ಸೇರಿದಂತೆ ವಿವಿಧ ಅಧಿಕಾರಿಗಳು ತೆರವು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು. “ಶಾಲೆಯ ಜಾಗವನ್ನು ಆಶ್ರಮಕ್ಕೆ ನೀಡಲಾಗಿದೆ. ಇದೀಗ ಖಾಸಗೀ ಜಾಗ. ಅದನ್ನು ಅವರು ಯಾವಾಗ ಬೇಕಾದರೂ ಬಳಸಿಕೊಳ್ಳಬಹುದು. ಜಾಗಕ್ಕೆ ಸೂಕ್ತ ಭದ್ರತೆ ಕಲ್ಪಿಸಿದ್ದೇವೆ. ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಿದರೆ ಮತ್ತಷ್ಟು ಭದ್ರತೆ ನೀಡುತ್ತೇವೆ” ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಹೇಳಿದ್ದಾರೆ.

ಸಂಧಾನಕ್ಕೂ ಮುನ್ನ ನೆಲಸಮ

ಶಾಲೆಯನ್ನೂ ಉಳಿಸಿ ವಿವೇಕಾ ಸ್ಮರಕವನ್ನೂ ನಿರ್ಮಿಸುವ ಸಂಬಂಧ ಸಂಧಾನ ಪ್ರಕ್ರಿಯೆಗಳು ನಡೆಯುತ್ತಿದ್ದವು. ಶಾಲೆಯನ್ನು ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಹಿರಿಯ ರಾಜಕಾರಣಿ, ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಶಾಲೆ ಉಳಿಸಿ ಹೋರಾಟ ಸಮಿತಿ ಮಾತುಕತೆ ನಡೆಸಿತ್ತು.

ಹಿರಿಯ ಸಾಹಿತಿ ದೇವನೂರ ಮಹಾದೇವ, ಹೋರಾಟ ಸಮಿತಿ ಅಧ್ಯಕ್ಷ ಪ.ಮಲ್ಲೇಶ್‌, ರೈತ ಸಂಘದ ಅಧ್ಯಕ್ಷ  ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಹೋರಾಟಗಾರರು ಶ್ರೀನಿವಾಸಪ್ರಸಾದ್ ಅವರನ್ನು ಭೇಟಿಯಾಗಿ ಸಮಸ್ಯೆಯನ್ನು ಬಿಚ್ಚಿಟ್ಟಿದ್ದರು.

ಶಾಲೆಯೂ ಉಳಿಯಬೇಕು, ಸ್ಮಾರಕ ನಿರ್ಮಿಸಬೇಕು ಎನ್ನುವ ಕುರಿತು ಸಂಧಾನ ಕಳೆದ ವರ್ಷವೇ ನಡೆದಿತ್ತು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಮ್ಮುಖದಲ್ಲೂ ಒಂದು ಸಭೆ ನಡೆದರೆ, ಆಶ್ರಮದ ಪರವಾಗಿ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಸಂಧಾನ ಸೂತ್ರದಂತೆ ಚರ್ಚೆ ನಡೆಸುವುದಾಗಿ ಹೇಳಿದ್ದರು. ಈಗ ಅದು ಬಿಟ್ಟು ಶಾಲೆ ಸ್ಥಳಾಂತರ ಮಾಡುವ ಪ್ರಕ್ರಿಯೆ ಏಕಾಏಕಿ ನಡೆದಿತ್ತು. ಈ ಕುರಿತು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸುವಂತೆ ಪ್ರಸಾದ್ ಅವರಲ್ಲಿ ಹಿರಿಯ ಹೋರಾಟಗಾರರು ಕೋರಿದ್ದರು. ಆದರೆ ಸಂಧಾನಕ್ಕೂ ಮುನ್ನ ಶಾಲೆಯನ್ನು ನೆಲಸಮ ಮಾಡಲಾಗಿದೆ.


ಇದನ್ನೂ ಓದಿರಿ: ಮೈಸೂರು: ‘ಹಿಜಾಬ್‌‌’ ವಿವಾದದ ನಡುವೆ ಮುಚ್ಚಿಹೋದ ಶತಮಾನದ ಹೆಣ್ಣು ಮಕ್ಕಳ ಶಾಲೆ!

LEAVE A REPLY

Please enter your comment!
Please enter your name here