ಬಹುಶಃ ಫೆಬ್ರವರಿ ಎರಡನೇ ವಾರ ಇರಬೇಕು. CAA, NRC ವಿರೋಧಿ ಸಮಾವೇಶದ ಹಿನ್ನಲೆಯಲ್ಲಿ ಮಹೇಂದ್ರ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದರು. ಸಾಲೆತ್ತೂರು ಗ್ರಾಮದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಮಹೇಂದ್ರ ಬೇರೆ ಕೆಲಸ ಇಲ್ಲದೆ ಪಿಲಿಕುಳ ಸಮೀಪದ ರೆಸಾರ್ಟ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬಿಡುವಾಗಿದ್ದ ಅವರು, ಸಂಜೆ ಸಾಧ್ಯವಾದರೆ ಭೇಟಿಯಾಗುವಂತೆ ನನಗೆ ಕರೆ ಮಾಡಿದರು. ಒಂದಿಷ್ಟು ಹರಟೆಯ ನಂತರ ಕಾರಿನಲ್ಲಿ ಅವರನ್ನು ವಿಮಾನ ನಿಲ್ದಾಣ ತಲುಪಿಸಲು ವಾಮಂಜೂರು ದಾರಿಯಾಗಿ ಹೊರಟೆವು. ಡಿವೈಎಫ್‌ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜೊತೆಗಿದ್ದರು. ನಿಸರ್ಗ ಧಾಮದ ಬಳಿ ತಲುಪುವಾಗ, ಹೈಸ್ಕೂಲು ಶಿಕ್ಷಣ ಪಡೆಯುವಾಗ ವಾಮಂಜೂರು ಚರ್ಚ್ ಸಮೀಪದ ಹಾಸ್ಟೆಲ್‌ನಲ್ಲಿ ವಾಸ ಇದ್ದದ್ದು, (ಬಹುಶಃ ಕ್ರೈಸ್ತರಿಗೆ ಸೇರಿದ), ಈಗ ನಿಸರ್ಗಧಾಮ ಇರುವ ಪ್ರದೇಶದ ಕಾಡು ಮೇಡು ಅಲೆದಾಡಿದ್ದನ್ನೆಲ್ಲ ನೆನಪು ಮಾಡಿಕೊಂಡರು.
ಅಲ್ಲಿಂದ ಮುಂದೆ ವಾಮಂಜೂರು ಮುಖ್ಯರಸ್ತೆಯಲ್ಲಿ ಸಾಗುತ್ತಿರುವಾಗ ಚರ್ಚ್ ಎದುರಾಯಿತು. ತಕ್ಷಣ ಸಂತೋಷ್‌ಗೆ ಕಾರನ್ನು ನಿಲ್ಲಿಸಲು ಹೇಳಿ, “ಚರ್ಚ್ಗೆ ಭೇಟಿ ನೀಡೋಣವೆ?” ಎಂದು ನನ್ನಲ್ಲಿ ಕೇಳಿದರು. ನಾನು ತಮಾಷೆಯಾಗಿ “ಪಾಪ ನಿವೇದನೆ” ಮಾಡಲಿಕ್ಕುಂಟಾ ಎಂದು ಕೇಳಿದೆ. ಮಹೇಂದ್ರ ನುಸು ನಕ್ಕರು. ಕಾರು ಚರ್ಚ್ ಆವರಣ ಪ್ರವೇಶಿಸಿತು. ನಾವು ಕಾರಿನಿಂದ ಇಳಿಯುತ್ತಲೇ ಮಹೇಂದ್ರರ ಗುರುತು ಹಿಡಿದ ಕೆಲವು ಕ್ರೈಸ್ತರು ನಮ್ಮನ್ನು ಸ್ವಾಗತಿಸಿದರು. ಅಲ್ಲೇ ಸಮೀಪ ವಾಕ್ ಮಾಡುತ್ತಿದ್ದ ಚರ್ಚ್‌ನ ಫಾದರ್ ವಿಷಯ ತಿಳಿದು ನಮ್ಮನ್ನು ಕರೆಸಿಕೊಂಡರು. ಮಹೇಂದ್ರ ಬಾಲ್ಯದಲ್ಲಿ ಚರ್ಚ್ ಸಮೀಪದ ಹಾಸ್ಟೆಲ್‌ನಲ್ಲಿ ವಾಸವಿದ್ದದ್ದು, ಪ್ರತಿ ವಾರ ಚರ್ಚ್‌ಗೆ ಭೇಟಿ ನೀಡುತ್ತಿದ್ದದ್ದು, ಹೀಗೆ ನೆನಪಿನ ಬುತ್ತಿ ಬಿಚ್ಚಿಟ್ಟರು. ಇದನ್ನೆಲ್ಲ ಒಂದಷ್ಟು ಅಚ್ಚರಿಯಿಂದಲೇ ಫಾದರ್ ಹಾಗೂ ಜೊತೆಗಾರರು ಕೇಳಿಸಿಕೊಂಡರು.

ಚರ್ಚ್ ದಾಳಿ ವಿಚಾರವೂ ಪ್ರಸ್ತಾಪವಾಯಿತು. ಆ ಸಂದರ್ಭ ಚರ್ಚ್ ಆವರಣದೊಳಗಡೆ ನುಗ್ಗಿದ ಪೊಲೀಸರು ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ್ದು, ರಕ್ತ ಸುರಿಯುವಂತೆ ಹಲ್ಲೆ ನಡಸಿದ್ದನ್ನೆಲ್ಲ ಒಂದಿಬ್ಬರು ಕ್ರೈಸ್ತರು ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ನಾನು ಮಹೇಂದ್ರರ ಮುಖವನ್ನೇ ಗಮನಿಸುತ್ತಿದ್ದೆ. ಫಾದರ್ ಚರ್ಚ್ ಒಳಗಡೆ ನಮ್ಮನ್ನು ಕರೆದೊಯ್ದರು. ಅಲ್ಲಿಯ ಪ್ರಶಾಂತ ವಾತಾವರಣದಲ್ಲಿ ಏಸುವಿನ ಪ್ರತಿಮೆಯ ಮುಂದೆ ಒಂದಿಷ್ಟು ಹೊತ್ತು ಕಳೆದೆವು. ನಮ್ಮ ಧ್ವನಿ ಯೂಟ್ಯೂಬ್ ನಲ್ಲಿ ಕೋಮುವಾದ, ಪ್ರಚಲಿತ ವಿದ್ಯಾಮಾನಗಳ ಕುರಿತು ಮಹೇಂದ್ರರ ಮಾತುಗಳನ್ನು ತಾವೆಲ್ಲ ತಪ್ಪದೇ ವೀಕ್ಷಿಸುತ್ತಿರುವುದಾಗಿ ಅಲ್ಲಿದ್ದವರು ತಿಳಿಸಿದರು. ಕೊನೆಗೆ ಚರ್ಚ್ ಮುಂಭಾಗ ಗ್ರೂಪ್ ಪೋಟೊ ತೆಗೆದು ಫಾದರ್ ಹಾಗೂ ಸಂಗಾತಿಗಳು ನಮ್ಮನ್ನು ಬೀಳ್ಕೊಟ್ಟರು. ಕ್ರೈಸ್ತರು ಚರ್ಚ್ ದಾಳಿಯ ಕಹಿ ಮರೆತು ಹೊಸ ಮಹೇಂದ್ರರನ್ನು ಸ್ವೀಕರಿಸತೊಡಗಿದ್ದಾರೆ ಎಂದು ನನಗೆ ಅನಿಸಿತು.

ಹಾಗೇ ಕಾರು ವಿಮಾನ ನಿಲ್ದಾಣದ ಕಡೆ ಚಲಿಸುತ್ತಾ, ಟೀ ಕುಡಿಯಲು ಮರವೂರು ಮಸೀದಿಗೆ ತಾಗಿ ಕೊಂಡಿರುವ ರಸ್ತೆ ಬದಿಯ ಹೊಟೇಲ್ ಮುಂಭಾಗ ನಿಂತಿತು. ಟೀ ಕುಡಿಯುತ್ತಿರುವಾಗ ಮಹೇಂದ್ರರನ್ನು ಗಮನಿಸಿದ ಅಲ್ಲಿದ್ದ ಮುಸ್ಲಿಂ ಹುಡುಗರು ಬಂದು ಖುಷಿಯಿಂದ ಮಾತಾಡಿಸಿದರು. ಸೆಲ್ಫಿ ಹೊಡೆದುಕೊಂಡರು. ಮಹೇಂದ್ರರ ಜನಪ್ರಿಯತೆ ಕಂಡು ನನಗೇ ಒಂದಿಷ್ಟು ಅಚ್ಚರಿಯಾಯಿತು. ಹಾಗೇ ಮಾತಾಡುತ್ತಾ ಮಹೇಂದ್ರ “ನೋಡಿ ಮುನೀರ್, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಶೂದ್ರ, ಹಿಂದುಳಿದ ಜಾತಿಯ ಹುಡುಗರಿಂದ ನನಗೆ ಫೋನ್ ಕರೆಗಳು ಬರುತ್ತಾ ಇರುತ್ತವೆ. ಎನ್‌ಆರ್‌ಸಿ ಪ್ರತಿಭಟನೆಗಳಿರಲಿ, ಬೇರೆ ಕಾರ್ಯಕ್ರಮಗಳಿರಲಿ ನಾನು ಆ ಕಡೆಯ ಜಿಲ್ಲೆಗಳಿಗೆ ಪ್ರವಾಸ ಹೋದಾಗಲೆಲ್ಲ ನನ್ನನ್ನು ಗುಂಪಾಗಿ ಬಂದು ಭೇಟಿಯಾಗುತ್ತಾರೆ, ಸೆಲ್ಫಿ ಹೊಡೆಸಿಕೊಳ್ಳುತ್ತಾರೆ. ನನ್ನ ನಿಲುವುಗಳನ್ನು ಬೆಂಬಲಿಸುತ್ತಾರೆ. ಆದರೆ ನಿಮ್ಮ ಜಿಲ್ಲೆಯಲ್ಲಿ ಮಾತ್ರ ಒಬ್ಬನೂ ಆ ರೀತಿ (ಎಡಪಂಥೀಯ ಕಾರ್ಯಕರ್ತರನ್ನು ಹೊರತು ಪಡಿಸಿ) ನನ್ನನ್ನು ಬಂದು ಮಾತಾಡಿಸುವುದಿಲ್ಲವಲ್ಲ! ನನ್ನನ್ನು ಕಂಡರೆ ಗುಸು ಗುಸು ಮಾತಾಡಿ ಚದುರಿ ಹೋಗುತ್ತಾರೆ. ಮುಸ್ಲಿಂ ಯುವಕರಷ್ಟೇ ಮುತ್ತಿಕೊಳ್ಳುತ್ತಾರೆ” ಎಂದು ನಗುತ್ತಲೇ ಹೇಳಿದರು. ಆ ನಗುವಿನ ಮರೆಯಲ್ಲಿ ನೋವಿತ್ತು. ನಾನು ಅವರ ಮುಖವನ್ನೇ ದಿಟ್ಟಿಸಿ, ಇದು ನೀವೇ ಕಷ್ಟಪಟ್ಟು ಗಲ್ಲಿ ತಿರುಗಿ ಬಿತ್ತಿದ ಬೀಜವಲ್ಲವೆ? ಎಂದು ಕಿಚಾಯಿಸಿದೆ.
ವಾರದ ಹಿಂದೆ ಮಹೇಂದ್ರ ಫೋನ್ ಮಾಡಿ ಕುಡುಬಿ ಸಮುದಾಯದ ಕುರಿತು ವಿಚಾರಿಸಿದರು. “ಮುನೀರ್, ಕುಡುಬಿಗಳು ರಾಜಕೀಯವಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲವಲ್ಲ. ಅವರಿಗೆ ಯಾವ ಸ್ಥಾನಮಾನಗಳೂ, ಚುನಾವಣಾ ಟಿಕೆಟ್‌ಗಳು ಸಿಗುತ್ತಿಲ್ಲ ಅಲ್ಲವೆ? ಕೃಷಿಯನ್ನೇ ನಂಬಿ ಬದುಕುವ ಆ ಬುಡಕಟ್ಟಿನ ಈಗಿನ ಸ್ಥಿತಿ ಏನು” ಎಂದು ಕೇಳಿದರು. ಯಾಕೆ ಕೊರೋನ ಗಲಾಟೆ ನಡುವೆ ಕುಡುಬಿಗಳನ್ನು ದಿಢೀರ್ ಅಂತ ನೆನಪಿಸಿಕೊಂಡಿದ್ದೀರಿ ಎಂದು ನಾನು ತಮಾಷಯಾಗಿಯೆ ಮರು ಪ್ರಶ್ನಿಸಿದೆ. “ಏನಿಲ್ಲ, ನನ್ನ ಬದುಕಿನ ಅನುಭವಗಳನ್ನು ದಾಖಲಿಸುತ್ತಿದ್ದೇನೆ. ಬಿಡುಗಡೆ ಯಾವಾಗ ಅಂತ ಗೊತ್ತಿಲ್ಲ. ಅನುಕೂಲ ಸಂದರ್ಭ ನಿರ್ಮಾಣಗೊಂಡಾಗ ಮಾಡುವುದು. ಮುಖ್ಯವಾಗಿ ನನ್ನ ಬಾಲ್ಯದ ದಿನಗಳನ್ನು ಬರೆಯುತ್ತಿದ್ದೇನೆ. ನನ್ನ ಬಾಲ್ಯ ನೀವು ಭಾವಿಸಿದಂತೆ ಇರಲಿಲ್ಲ ಕಣ್ರೀ, ಕಡು ಕಷ್ಟದ ಬದುಕು. ನಿಮ್ಮ ಮೂಡಬಿದ್ರೆಯ ಹತ್ತಿರ ಬೇಕರಿಯೊಂದರಲ್ಲಿ ಜೀತದವನಂತೆ ಒಂದೂವರೆ ವರ್ಷ ದುಡಿದಿದ್ದೇನೆ. ಆಗ ಸುತ್ತ ಮುತ್ತ ಕುಡುಬಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಇದ್ದರು. ಭೂಮಿ, ಶ್ರಮ ಎರಡನ್ನೇ ನಂಬಿ ಬದುಕುತ್ತಿದ್ದ ಅವರು ತುಂಬಾ ಮುಗ್ದರು. ಬಜರಂಗದಳದ ನಾಯಕತ್ವ ವಹಿಸಿದ್ದಾಗಲೂ ಅಲ್ಲೆಲ್ಲ ಓಡಾಡಿದ್ದೆ. ಆ ಸಮುದಾಯದಿಂದ ಒಬ್ಬ ಯುವಕನೂ ನಮ್ಮ ಸಂಘಟನೆಯ ತೆಕ್ಕೆಗೆ ಸಿಕ್ಕಿರಲಿಲ್ಲ. ಈಗ ಹೇಗಿದ್ದಾರೆ ಎಂಬ ಕುತೂಹಲ. ನೆನಪುಗಳನ್ನು ದಾಖಲಿಸುವಾಗ ಮಾಹಿತಿ ಬೇಕಲ್ಲ” ಅಂದರು.
2018 ಜನನುಡಿಯಲ್ಲಿ ಮಹೇಂದ್ರ ಭಾಗವಹಿಸುವವರಗೆ ನನ್ನ ಅವರ ಒಡನಾಟ ಅಷ್ಟೇನು ಆಪ್ತವಾಗಿರಲಿಲ್ಲ. ಅದಕ್ಕಿಂತ ಐದಾರು ತಿಂಗಳು ಹಿಂದೆಯಷ್ಟೆ ಅವರ ಕುರಿತಾದ ಸಂದೇಹಗಳನ್ನು ಬಗೆಹರಿಸಿಕೊಂಡಿದ್ದೆ. ಜನನುಡಿಯ “ಹೊರಳು ನೋಟ” ಗೋಷ್ಟಿ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತು. ಸಾಮಾಜಿಕ ಜಾಲತಾಣದಲ್ಲಿ ತಿಂಗಳುಗಳ ಕಾಲ ಅದು ಚರ್ಚೆಯಲ್ಲಿತ್ತು. ಸಂಘ ತೊರೆದು ಬಂದ ಸಂಗಾತಿಗಳಾದ ಸುಧೀರ್ ಕುಮಾರ್ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ಜೊತೆ ಮಹೇಂದ್ರ ಆ ಗೋಷ್ಟಿಯಲ್ಲಿ ಭಾಗವಹಿಸಿದ್ದರು. ಜನನುಡಿಯ ಆಹ್ವಾನ ಪತ್ರಿಕೆ ಬಿಡುಗಡೆ ಆಗುತ್ತಲೆ “ಹೊರಳು ನೋಟ” ಎಲ್ಲರ ಗಮನ ಸೆಳೆಯತೊಡಗಿತ್ತು. ಮಹೇಂದ್ರ ಕುತೂಹಲ, ಆಕರ್ಷಣೆಯ ಕೇಂದ್ರ ಆಗಿದ್ದರು. ಗೋಷ್ಟಿಯ ಸಂದರ್ಭ ಕಿಕ್ಕಿರಿದ ಜನ. ಯೂಟ್ಯೂಬ್, ಫೇಸ್‌ಬುಕ್ ಲೈವ್‌ಗಳಲ್ಲೂ ಜನರ ದೃಷ್ಟಿ ಈ ಕಡೆಗೇ ಇತ್ತು. ಒಬ್ಬರಿಗಿಂತ ಒಬ್ಬರು ಮನ ಬಿಚ್ಚಿ ಮಾತಾಡಿದ್ದರು. ಆ ಕಾರ್ಯಕ್ರಮ ಮೂರೂ ಜನರ ಮೇಲಿದ್ದ ಸಂದೇಹವನ್ನು ಬಹುತೇಕ ಬಗೆಹರಿಸಿತು. ಕ್ರೈಸ್ತರು, ಮುಸಲ್ಮಾನರು ಮಹೇಂದ್ರ ಮತ್ತವರ ಸಂಗಾತಿಗಳ ಹೃದಯದ ಮಾತು, ಮನಪರಿವರ್ತನೆಯನ್ನು ಪ್ರಾಮಾಣಿಕ ಎಂದು ಸ್ವೀಕರಿಸಿದರು.

ಜನನುಡಿಯ “ಹೊರಳು ನೋಟ”ದ ನಂತರ ನನ್ನ ಅವರ ಒಡನಾಟ ಹೆಚ್ಚಾಯಿತು. ಸಂಬಂಧ ಆಪ್ತವಾಯಿತು. 2019 ಜನವರಿಯಲ್ಲಿ ಗುಡಿಬಂಡೆಯ ಎಲ್ಲೋಡಿನಲ್ಲಿ ನಡೆದ ಡಿವೈಎಫ್‌ಐ ರಾಜ್ಯ ಮಟ್ಟದ ಶಿಬಿರದಲ್ಲಿ ಒಂದು ಗೋಷ್ಟಿಯನ್ನು ಮಹೇಂದ್ರ ನಡೆಸಿಕೊಟ್ಟರು. ಮಂಗಳೂರು ನಗರ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಎಡಪಕ್ಷಗಳು ಸಾಂಪ್ರದಾಯಿಕತೆ ತೊರೆದು ಮುನ್ನಡೆಯಬೇಕು, ಕೆಲಸಗಳನ್ನು ಮಾರ್ಕೆಟ್ ಮಾಡುವುದನ್ನು ಕಲಿಯಬೇಕು ಎಂದು ವಾದಿಸುತ್ತಿದ್ದರು. ವಾರಕ್ಕೆ ಒಂದೆರಡು ಭಾರಿ ಪೋನ್ ಸಂಪರ್ಕದಲ್ಲಿ ಕೋಮುವಾದ, ಮುಸ್ಲಿಂ ಸಮುದಾಯದ ಬಿಕ್ಕಟ್ಟು ಬೆಳವಣಿಗೆಗಳನ್ನು ಚರ್ಚಿಸುತ್ತಿದ್ದರು. ಮುಸ್ಲಿಮರ ಸಭೆಗಳಿಗಿಂತ ಹಿಂದುಳಿದ ಜಾತಿಗಳ ಯುವಕರನ್ನು ಉದ್ದೇಶಿಸಿ ಮಾತಾಡುವುದನ್ನು ಆದ್ಯತೆಯಾಗಿ ಪರಿಗಣಿಸಿದ್ದರು. “ನಾವು ಮನ ಪರಿವರ್ತನೆ ಮಾಡಬೇಕಿರುವುದು ಆರ್‌ಎಸ್‌ಎಸ್‌ನ ಜಾಲದಲ್ಲಿ ಸಿಲುಕಿರುವ ಶೂದ್ರ ಯವಕರನ್ನು. ಆ ಅವಕಾಶಗಳನ್ನು ಒಂದು ಸಾಸಿವೆಯಷ್ಟೂ ಕಳೆದುಕೊಳ್ಳಬಾರದು. ಮುಸ್ಲಿಮರು ಜಾತ್ಯಾತೀತ ಪಕ್ಷ, ಶಕ್ತಿಗಳೊಂದಿಗೆ ಇರುವುದು ಅನಿವಾರ್ಯ, ಇರುತ್ತಾರೆ” ಎಂದು ಹೇಳುತ್ತಿದ್ದರು.
ಎನ್‌ಆರ್‌ಸಿ, ಸಿಎಎ ವಿರೋಧಿ ಸಭೆಗಳು ಮುಸ್ಲಿಂ ಕೇಂದ್ರೀಕೃತವಾಗಿ ನಡೆಯುತ್ತಿರುವುದು, ಭಾವುಕ ಭಾಷಣಗಳು ಆ ವೇದಿಕೆಗಳಲ್ಲಿ ಅಬ್ಬರಿಸುವುದು ಅವರಲ್ಲಿ ಆತಂಕ ಉಂಟು ಮಾಡುತ್ತಿತ್ತು. ಅದನ್ನು ಬಹಿರಂಗವಾಗಿಯೇ ಹೇಳುತ್ತಿದ್ದರು. ಇದು ಸಂಘಪರಿವಾರದ ಉದ್ದೇಶವನ್ನು ಸುಲಭಗೊಳಿಸುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಮುಸ್ಲಿಂ ಯುವಕರನ್ನು ಕುಳ್ಳಿರಿಸಿ ಮಾರ್ಗದರ್ಶನ ಮಾಡುತ್ತಿದ್ದರು. ವೇದಿಕೆಯಲ್ಲಾಗಲಿ, ಖಾಸಗಿ ಮಾತುಕತೆಗಳಲ್ಲಾಗಲಿ, ಮುಸ್ಲಿಮರನ್ನು ಓಲೈಸುವ ಮಾತುಗಳನ್ನು ಆಡುತ್ತಿರಲಿಲ್ಲ. ಮುಸ್ಲಿಂ ಸಮುದಾಯದ ಒಳಗಡೆಯಲ್ಲಿ ನಕಾರಾತ್ಮಕ ಶಕ್ತಿಗಳು ಬೆಳೆಯಲು ಅವಕಾಶ ನೀಡದಂತೆ ಎಚ್ಚರಿಸುತ್ತಿದ್ದರು. ಮುಸ್ಲಿಂ ಕೋಮುವಾದ ಸಂಘದ ಕೋಮುವಾದಕ್ಕೆ ಉತ್ತರ ಅಲ್ಲ, ಪೂರಕ ಎಂದು ದೃಢವಾಗಿ ಪ್ರತಿಪಾದಿಸುತ್ತಿದ್ದರು. ಸಂಘದ ಆಟಾಟೋಪಗಳಿಗೆ ಅವರದೇ ದಾಟಿಯಲ್ಲಿ ಉತ್ತರಿಸಲು ಹೋಗಿ ಖೆಡ್ಡಾದಲ್ಲಿ ಬೀಳಬೇಡಿ ಎಂದು ವಿನಂತಿಸುತ್ತಿದ್ದರು. ಸಂಘವನ್ನು ಎದುರಿಸುವ ಜವಾಬ್ದಾರಿಯನ್ನು ಜಾತ್ಯಾತೀತ ಶಕ್ತಿಗಳಿಗೆ ಬಿಟ್ಟು ಬಿಡಿ ಎಂದು ಹೇಳುತ್ತಿದ್ದರು. ಕೋಮುವಾದದ ವಿರುದ್ದದ ಹೋರಾಟದಲ್ಲಿ ತೀರಾ ಪ್ರಾಯೋಗಿಕ ಆಗಿದ್ದರು. ಬಹುಶಃ ಸಂಘದ ಜತೆಗಿನ ದಶಕಗಳ ಒಡನಾಟ ಅವರಿಗೆ ಆ ಪಾಠ ಕಲಿಸಿರಬಹುದು.
“ಮಹೇಂದ್ರನಿಗೆ ಮುಸ್ಲಿಮರು, ಕಾಂಗ್ರೆಸ್ ಪಕ್ಷದವರು ಫಂಡಿಂಗ್ ಮಾಡುತ್ತಾರೆ” ಎಂಬ ಬಲಪಂಥೀಯರು ನಿರಾಧಾರ ಆರೋಪ ಮಾಡುತ್ತಿದ್ದರು. ಆ ಕುರಿತು ನನ್ನೊಂದಿಗೆ ಒಂದೆರಡು ಬಾರಿ ಚರ್ಚಿಸಿದ್ದರು. “ಕಾಂಗ್ರೆಸ್‌ನವರು ಕೆಲವೆಡೆ ನನ್ನನ್ನು ಭಾಷಣಕ್ಕೆ ಕರೆದದ್ದು ಬಿಟ್ಟರೆ ಪಕ್ಷದ ಕಡೆಯಿಂದ ಒಂದು ನಯಾ ಪೈಸೆ ಸಹಾಯವೂ ಆಗಿಲ್ಲ. ಅಲ್ಲಿ ಕೆಲವು ಗೆಳೆಯರಿದ್ದಾರೆ ಹೌದು. ಪಕ್ಷವಾಗಿ ಕಾಂಗ್ರೆಸ್ ನಮ್ಮ ಹೋರಾಟದ ಲಾಭ ಪಡೆಯುತ್ತದೆ. ನಮ್ಮ ಬೆನ್ನಿಗೆ ಯಾವತ್ತೂ ನಿಂತಿಲ್ಲ. ಬೆನ್ನು ತಟ್ಟಿಲ್ಲ. ಕಷ್ಟ ಪಡುವುದು ನಾವು, ಲಾಭ ಪಡೆಯುವುದು ಕಾಂಗ್ರೆಸ್ಸು” ಅಂತ ವಿನೋದವಾಗಿ ಹೇಳುತ್ತಿದ್ದರು. ಇನ್ನು ಮುಸ್ಲಿಮರು ಫಂಡಿAಗ್ ಮಾಡುವ ಕುರಿತಾದ ಅಪಪ್ರಚಾರದ ಕುರಿತು ಮಾತಾಡುತ್ತಿರುವಾಗ, “ಮುನೀರ್, ಮುಸ್ಲಿಮರಲ್ಲಿ ಚಾನಲ್ ಹುಟ್ಟು ಹಾಕುವ ಚರ್ಚೆ ನಡೆಯುತ್ತಿದೆ. ಕೆಲವರು ನೀವೂ ಅದರ ಭಾಗ ಆಗಬೇಕು ಅಂತ ಹೇಳುತ್ತಿದ್ದಾರೆ. ಅಂತಹ ಆಲೋಚನೆ ನನಗಿಲ್ಲ. ನನ್ನ “ನಮ್ಮ ಧ್ವನಿ” ಯೂಟ್ಯೂಬ್ ಚಾನಲ್ ಇಷ್ಟು ಮನೆ ಮಾತಾಗಿರುವಾಗ, ಮುಸ್ಲಿಮರ ನಡುವೆ ತುಂಬಾ ಗಮನ ಸೆಳೆದಿರುವಾಗ ಯಾವೊಬ್ಬ ಮುಸ್ಲಿಂ ಶ್ರೀಮಂತನೂ ನನಗೆ ಒಂದು ಕರೆ ಮಾಡಿ ಮೆಚ್ಚುಗೆ ಸೂಚಿಸಿಲ್ಲ. ಮೊನ್ನೆ ಯು.ಟಿ ಖಾದರ್ ಜೊತೆ ಮಾತಾಡುತ್ತಾ ಇರುವಾಗ ಈ ವಿಷಯ ನಡುವೆ ಪ್ರಸ್ತಾಪ ಆಯಿತು. ಖಾದರ್ ಅದಕ್ಕೆ ‘ಮುಸ್ಲಿಂ ಶ್ರೀಮಂತರ ಗಮನಕ್ಕೆ ನಮ್ಮ ಧ್ವನಿ ಬರದೇ ಹೋಗಿರಬಹುದು ಎಂದರು, ಸಾಮಾನ್ಯ ಮುಸ್ಲಿಮರು, ಕಷ್ಟ ಪಟ್ಟು ದುಡಿದು ಬದುಕು ಕಟ್ಟಿಕೊಳ್ಳುತ್ತಿರುವ ಮುಸ್ಲಿಂ ಯುವಕರಷ್ಟೇ ಸದಾ ಮಾತಾಡಿ ಕೃತಜ್ಞತೆ ಹೇಳುತ್ತಿರುತ್ತಾರೆ, ಅವರ ಪ್ರೀತಿ ದೊಡ್ಡದು” ಎಂದು ಹೇಳಿದರು. “ನಾನು ಕಾರ್ಯಕ್ರಮ, ನಮ್ಮ ಧ್ವನಿಗಾಗಿ ಯಾರಲ್ಲೂ ಕೈಚಾಚಲಾರೆ. ನನ್ನ ದುಡಿಮೆಯಿಂದಲೇ ಇಷ್ಟರವರಗೆ ಅದನ್ನು ಸರಿದೂಗಿಸುತ್ತಿದ್ದೇನೆ. ಹೆಚ್ಚೆಂದರೆ ನಮ್ಮ ಧ್ವನಿಯ ಹುಡುಗರು ತಮ್ಮ ಕೈಲಾದ ಸಣ್ಣ ಸಣ್ಣ ದೇಣಿಗೆ ನೀಡುತ್ತಾರೆ, ನಡೆಯುತ್ತದೆ” ಎಂದರು. ದಲಿತ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಪ್ರಯಾಣ ವೆಚ್ಚವನ್ನೂ ನಿರೀಕ್ಷಿಸುತ್ತಿರಲಿಲ್ಲ.

‘ನಮ್ಮ ಧ್ವನಿ’ ಸಂಘಟನೆಯನ್ನು ಪ್ರಬಲವಾಗಿ ಕಟ್ಟಬೇಕು ಎಂಬ ಪಣತೊಟ್ಟಿದ್ದರು. “ಸಂಘ ತೊರೆದವರು ಮೂಲೆಗುಂಪು” ಎಂಬ ಮಾತು ಸುಳ್ಳಾಗಿಸಬೇಕು ಎಂಬ ಹಠ ಅವರಲ್ಲಿತ್ತು. ಕಾಂಗ್ರೆಸ್ ಮುಂತಾದ ಪಕ್ಷ ಸೇರುವ ಆಸಕ್ತಿ ಅವರಿಗಿರಲಿಲ್ಲ. “ಯಾರದೋ ಶ್ರಮದಲ್ಲಿ ನಾನ್ಯಾಕೆ ಪಾಲು ಪಡೆಯಲಿ? ನನ್ನದೇ ಶ್ರಮದಿಂದ ಹೊಸತನ್ನು ಕಟ್ಟುತ್ತೇನೆ, ಸಮಾಜ ಪರಿವರ್ತನೆಯ ಮೂಲಕ ಬೆಳೆಯುತ್ತೇನೆ” ಎಂಬ ಯೋಚನೆ ಅವರಲ್ಲಿತ್ತು. ಅದಕ್ಕಾಗಿ ಹತ್ತಾರು ಮಾಸ್ಟರ್‌ಪ್ಲಾನ್‌ಗಳನ್ನು ಹಾಕಿಕೊಂಡಿದ್ದರು. ಇನ್ನು ಒಂದೆರಡು ದಶಕ ಅವರಿಗೆ ಸಿಕ್ಕಿದ್ದರೆ ಅದನ್ನು ಬಹುಷ ಸಾಧಿಸುತ್ತಿದ್ದರು. ಅಂತಹ ನಾಯಕತ್ವ ಗುಣ, ಚರಿಷ್ಮಾ ಅವರಲ್ಲಿತ್ತು. ಎಲ್ಲಾ ಜನಪರ ಶಕ್ತಿಗಳನ್ನು ಒಂದು ವೇದಿಕೆಗೆ ತರುವ, ಅದಕ್ಕೆ ಮುಂಚಿತವಾಗಿ ನಮ್ಮ ಧ್ವನಿಯನ್ನು ಒಂದು ಶಕ್ತಿಯಾಗಿಸುವ ನೀಲ ನಕಾಶೆಯೊಂದು ಅವರ ತಲೆಯಲ್ಲಿ ಟಿಸಿಲೊಡೆಯುತ್ತಿತ್ತು. ಜೊತೆಗೆ ಪ್ರಗತಿಪರ ವ್ಯಕ್ತಿ, ಗುಂಪುಗಳೊಳಗಿನ ಜಗಳಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರ ವಹಿಸಿದ್ದರು.
ಈಗ ಅದೆಲ್ಲವನ್ನು ತೊರೆದು ನಿರ್ಗಮಿಸಿದ್ದಾರೆ. ಅವರ ಕನಸುಗಳಿಗೆ ತಡೆ ಬಿದ್ದಿದೆ. ಸಂಘ ತೊರೆದು ವಿರುದ್ದ ದಿಕ್ಕಿಗೆ ನಡೆದ ಮೇಲೆ ಮೊದಲಿಗಿಂತ ಹಲವು ಪಟ್ಟು ಹೆಚ್ಚು ಜನಪ್ರಿಯತೆ ಅವರಿಗೆ ಸಿಕ್ಕಿತ್ತು. ಅದು ನಿಜಕ್ಕೂ ದೊಡ್ಡ ಸಾಧನೆ. ಮಹೇಂದ್ರರ ಮಾತುಗಳಲ್ಲಿ ಸಂಘ ತುಟಿ ಬಿಚ್ಚದಂತೆ, ಉತ್ತರ ನೀಡದಂತೆ, ಚಡಪಡಿಸುವಂತೆ ಮಾಡುವ ಸಾಮರ್ಥ್ಯ ಇತ್ತು. ಅದು ನಿಜಕ್ಕೂ ದೊಡ್ಡ ಸಾಧನೆ. ಅವರ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪದೆ ಪದೆ ಎದ್ದು ಬಂದು ಬಲಪಂಥೀಯ ಶಕ್ತಿಗಳನ್ನು ಕಾಡಲಿದೆ, ಕೆಣಕಲಿದೆ. ಸಾವು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಆದರೆ ಹೀಗೆ ಅರ್ಧ ದಾರಿಯಲ್ಲಿ ಅನಿರೀಕ್ಷಿತ ನಿರ್ಗಮನವನ್ನು ಅವರಿದ್ದ ಕ್ಷೇತ್ರ ಅರಗಿಸಿಕೊಳ್ಳುವುದು ಕಷ್ಟ. ಲಾಕ್‌ಡೌನ್ ನಿಯಮಗಳು ವಿದಾಯ ಭೇಟಿಗೂ ಅವಕಾಶ ನೀಡಲಿಲ್ಲ. ಮಹೇಂದ್ರ ಬಹುಕಾಲ ಕರ್ನಾಟಕದ ಕೋಮುವಾದಿ ವಿರೋಧಿ ಸಂಘರ್ಷ ಚಳವಳಿಯಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳುತ್ತಾರೆ. ನನ್ನಲ್ಲಿ ಅವರ ಗೆಳತನದ ನೆನಪು ಕೊನೆಯವರೆಗೂ ಉಳಿದಿರುತ್ತದೆ.


