Homeಮುಖಪುಟಆರ್.ಎಲ್.ಜಾಲಪ್ಪ ಎಂಬ ವಿದ್ಯಮಾನ

ಆರ್.ಎಲ್.ಜಾಲಪ್ಪ ಎಂಬ ವಿದ್ಯಮಾನ

- Advertisement -
- Advertisement -

ಕಳೆದ ವಾರ ತೀರಿಕೊಂಡ ಮಾಜಿ ಸಚಿವರಾದ ಆರ್.ಎಲ್.ಜಾಲಪ್ಪನವರ ಕುರಿತಂತೆ ಯಥಾಪ್ರಕಾರದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ದೊಡ್ಡಬಳ್ಳಾಪುರ ಮತ್ತು ಹೊರಗಿನ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಲೇಖನವೊಂದನ್ನು ಬರೆದು ತಮಗೆ ಕಂಡ, ತಮ್ಮ ಹಿತೈಷಿಯಾಗಿದ್ದ ಜಾಲಪ್ಪನವರ ಕುರಿತು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರನ್ನು ಹತ್ತಿರದಿಂದ ಬಲ್ಲವರು ಮತ್ತು ಆ ಬಲ್ಲವರನ್ನು ಬಲ್ಲವರು ಪರಸ್ಪರ ವಿರೋಧಾಭಾಸದ ಬರಹಗಳನ್ನು ಬರೆದಿದ್ದಾರೆ. ಹೀಗಾಗಿ ಬೇರೆಯದೇ ಒಂದು ದೃಷ್ಟಿಕೋನದಿಂದ ಅವರ ರಾಜಕೀಯ ಹಾಗೂ ಖಾಸಗಿ ಬದುಕನ್ನು ನೋಡುವ ಅಗತ್ಯವಿದೆ.

ಏಕೆಂದರೆ, ಸುಮಾರು 30 ವರ್ಷಗಳ ಕಾಲ ದೊಡ್ಡಬಳ್ಳಾಪುರ ತಾಲೂಕು ಮತ್ತು ನಂತರ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ಪ್ರಭಾವ ಹೊಂದಿದ್ದ ಜಾಲಪ್ಪನವರ ರಾಜಕಾರಣದಲ್ಲಿ, ಕರ್ನಾಟಕದ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದವರು ಅಧ್ಯಯನ ಮಾಡಬೇಕಾದ ಹಲವು ಸಂಗತಿಗಳಿವೆ. ಬಹಳ ತಡವಾಗಿ (50ರ ಆಸುಪಾಸಿನಲ್ಲಿ) ರಾಜಕಾರಣಕ್ಕೆ ಬಂದ ಜಾಲಪ್ಪನವರು ಅಲ್ಲಿಂದಾಚೆಗೆ ಹಲವು ಮೆಟ್ಟಿಲುಗಳನ್ನು ಹತ್ತುತ್ತಾ ಹೋದರು. ಸಹಕಾರೀ ಸಂಸ್ಥೆಯೊಂದರ (ಬಹುಶಃ ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರಾಗಿದ್ದ ಅವರು ದೇವರಾಜ ಅರಸರ ಸಮೀಪವರ್ತಿಯಾಗಿ ರಾಜ್ಯ ರಾಜಕಾರಣದ ಪಡಸಾಲೆಯೊಳಗೆ ಪ್ರವೇಶ ಪಡೆದುಕೊಂಡರು. ಆದರೆ ದೊಡ್ಡಬಳ್ಳಾಪುರದ ಮಟ್ಟಿಗೆ ರಾಮೇಗೌಡರ ನಿಕಟವರ್ತಿ ಅನುಯಾಯಿಯಾಗಿಯೇ ಕಾಂಗ್ರೆಸ್‌ನಲ್ಲಿ ಬೆಳೆಯತೊಡಗಿದ್ದರು. ರಾಮೇಗೌಡರ ನಂತರ ವಿಧಾನಸಭೆ ಸದಸ್ಯರಾದ ಅವರು ಅಲ್ಲಿಂದಾಚೆಗೆ ಲೋಕಸಭಾ ಸದಸ್ಯರಾಗುವವರೆಗೆ ಸತತವಾಗಿ ಗೆದ್ದು ಬಂದರು. ಈ ಹೊತ್ತಿಗೆ ದೊಡ್ಡಬಳ್ಳಾಪುರದಲ್ಲಿ ಜಾಲಪ್ಪನವರನ್ನು ಸೋಲಿಸಬಲ್ಲವರು ಯಾರೂ ಇಲ್ಲ ಎಂಬ ಸ್ಥಿತಿ ಏರ್ಪಟ್ಟಿತ್ತು.

ಹಿಂದುಳಿದ ಈಡಿಗ ಸಮುದಾಯಕ್ಕೆ ಸೇರಿದ್ದ ಜಾಲಪ್ಪನವರಂತೆಯೇ ರಾಜ್ಯದ ಉದ್ದಗಲಕ್ಕೂ ವಿವಿಧ ಹಿಂದುಳಿದ ಸಮುದಾಯಗಳ ಹೊಸ ನಾಯಕರಿಗೆ ಅರಸು ಅವರು ಎಂಎಲ್‌ಎ ಟಿಕೆಟ್ ಕೊಟ್ಟಿದ್ದರು ಅಥವಾ ಎಂಎಲ್‌ಸಿಗಳನ್ನಾಗಿಸಿದ್ದರು. ಆದರೆ ಸ್ವತಃ ಜಾಲಪ್ಪನವರು ತಾವು ಲೋಕಸಭೆಗೆ ಸ್ಪರ್ಧಿಸುವಾಗ, ದೊಡ್ಡಬಳ್ಳಾಪುರಕ್ಕೆ ಎಂಎಲ್‌ಎ ಅಭ್ಯರ್ಥಿಯಾಗಿ ಆಯ್ದುಕೊಳ್ಳಬೇಕಾಗಿ ಬಂದಿದ್ದು ತಮ್ಮ ಬಹುಕಾಲದ
ಒಡನಾಡಿ ಬ್ರಾಹ್ಮಣ ಸಮುದಾಯದ ಆರ್.ಜಿ.ವೆಂಕಟಾಚಲಯ್ಯನವರನ್ನು. ಕೋಲಾರದಲ್ಲಿ ಹಿಂದುಳಿದ ವರ್ಗಗಳ ಟ್ರಸ್ಟ್ ಮುಖಾಂತರ ದೇವರಾಜ ಅರಸು ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದ್ದು, ಅದೇ ಕೋಲಾರದಲ್ಲಿ ಅಹಿಂದ ಸಮಾವೇಶ ಸಂಘಟಿತವಾದಾಗ ಅದರ ಬೆನ್ನಿಗೆ ನಿಂತಿದ್ದು, ಆ ಸಮಾವೇಶವನ್ನು ಉದ್ಘಾಟಿಸಿದ್ದ ಅಂದಿನ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಬೇಕೆಂದು ನಿರಂತರ ಬಯಸಿದ್ದು ಎಲ್ಲವೂ ನಿಜವೇ. ಆದರೆ ಹಿಂದುಳಿದ ವರ್ಗಗಳ ಪರವಾದ ರಾಜಕಾರಣಕ್ಕೆ ಬೇರೊಂದು ತಿರುವನ್ನು ಕೊಡುವುದು ಜಾಲಪ್ಪನವರಿಂದ ಸಾಧ್ಯವಾಗಲಿಲ್ಲ ಎನ್ನುವುದೂ ವಾಸ್ತವ.

ಇದಕ್ಕೆ ಗೃಹ ಸಚಿವರಾಗಿದ್ದಾಗ ನಡೆದ ರಷೀದ್ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದು ಕಾರಣವೆಂದು ಹಲವರು ಭಾವಿಸಿದ್ದಾರೆ. ರಾಜ್ಯ ರಾಜಕಾರಣದ ಮಟ್ಟಿಗೆ ಅದು ಒಂದು ಮಟ್ಟಿಗೆ ನಿಜವಿರಬಹುದಾದರೂ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಾಲಪ್ಪನವರ ಪ್ರಭಾವ ವಿಪರೀತ ಏರುತ್ತಾ ಹೋದದ್ದು ಆ ನಂತರವೇ. ಹಾಗಿದ್ದೂ ಎರಡೂ (ಚಿಕ್ಕಬಳ್ಳಾಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ) ಜಿಲ್ಲೆಗಳಲ್ಲಿ ಇನ್ನೊಬ್ಬ ಹಿಂದುಳಿದ ವರ್ಗದ ಅಥವಾ ಸಣ್ಣಪುಟ್ಟ ಸಮುದಾಯಗಳ ನಾಯಕನನ್ನು ಹುಟ್ಟಿ ಹಾಕಲು ಅವರಿಂದ ಆಗಲಿಲ್ಲ.

ಇದನ್ನು ಜಾಲಪ್ಪನವರ ದೌರ್ಬಲ್ಯ ಎಂಬ ಷರಾ ಬರೆಯುವುದು ಇದರ ಉದ್ದೇಶವಲ್ಲ. ರಾಜ್ಯದಲ್ಲೇ ಅತಿ ಹೆಚ್ಚು ದಲಿತ ಸಮುದಾಯವಿರುವ ಜಿಲ್ಲೆಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯೂ ಒಂದು. ದಲಿತ ಸಂಘರ್ಷ ಸಮಿತಿಯು ಪ್ರಬಲವಾಗಿದ್ದ ಜಿಲ್ಲೆಯದು. ಅಲ್ಲಿ ದಲಿತ ಸಮುದಾಯವನ್ನು ಪೊರೆಯಬಲ್ಲ ರಾಜಕಾರಣವನ್ನು ಹಿಂದುಳಿದ ಸಮುದಾಯದ ನಾಯಕರು ಯಾವ ಪ್ರಮಾಣದಲ್ಲಿ ಮಾಡಬಹುದಾಗಿತ್ತೋ ಅದನ್ನು ಮಾಡುವ ಗೋಜಿಗೆ ಹೋಗಲಿಲ್ಲ. ಹಾಗಾಗಿಯೇ ಮಿಕ್ಕ ಕ್ಷೇತ್ರಗಳಿಗಿಂತ ದೊಡ್ಡಬಳ್ಳಾಪುರದಲ್ಲಿ ಹಿಂದುಳಿದ ಮತ್ತು ದಲಿತ ಸಮುದಾಯದ ಸ್ಥಿತಿಯಾಗಲೀ, ಕ್ಷೇತ್ರದ ತಳಸಮುದಾಯಗಳ ಆರ್ಥಿಕ ಬಲವಾಗಲೀ ವಿಶೇಷವಾದ ರೀತಿಯಲ್ಲಿ ಬದಲಾಗಲು
ಇಂಥದ್ದೇ ಜಾಲಪ್ಪನವರ ಕೊಡುಗೆ ಎಂದು ಎದ್ದು ಕಾಣುವಂಥದ್ದು ಏನೂ ಸಿಕ್ಕುವುದಿಲ್ಲ. ಅಹಿಂದ ಎಂಬ ವಿಶೇಷ ಪರಿಕಲ್ಪನೆಯನ್ನು ಗ್ರಾಮಮಟ್ಟದಲ್ಲಿ ಅಥವಾ ತಾಲೂಕುಮಟ್ಟದಲ್ಲಿ ಎಂಎಲ್‌ಎ ಸೀಟು ಗೆಲ್ಲಲು ಬೇಕಾದ ರೀತಿಯಲ್ಲಿ ಹೊಸ ಸಾಮಾಜಿಕ ಸಮೀಕರಣವನ್ನಾಗಿಸಲು ದೇವರಾಜ ಅರಸರ ನಂತರ ಯಾರಿಗೂ ಸಾಧ್ಯವಾಗಿಲ್ಲ ಎಂಬುದೇ ವಾಸ್ತವ. ಮೊಟ್ಟಮೊದಲ ಅಹಿಂದ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಜಾಲಪ್ಪನವರಿಗೂ ಸಹಾ ಇದು ಅನ್ವಯಿಸುತ್ತದೆ. ಅಥವಾ ಈ ನಾಡಿನ ಬಹುಸಂಖ್ಯಾತರಾಗಿರುವ ಅಹಿಂದ ಸಮುದಾಯಗಳ ನಡುವೆ ಗ್ರಾಮಮಟ್ಟದಲ್ಲಿ, ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಅಥವಾ ರಾಜ್ಯ ರಾಜಕಾರಣದ ಮಟ್ಟದಲ್ಲಿ ಅಂತಹ ಸಾಮಾಜಿಕ ರಾಜಕೀಯ ಬಂಧವೇ ಇಲ್ಲವಾ ಎಂಬ ಪ್ರಶ್ನೆಯೂ ಏಳುತ್ತದೆ.

ಲೋಕಸಭಾ ಕ್ಷೇತ್ರದ ಮಟ್ಟದಲ್ಲಿ ಎಂದು ಹೇಳದಿರುವುದಕ್ಕೆ ಕಾರಣವಿದೆ. ಇದೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಒಕ್ಕಲಿಗರು/ರೆಡ್ಡಿಗಳೇ ಎಂಎಲ್‌ಎಗಳಾಗಿ ಗೆದ್ದು ಬಂದರೂ, ಎಂಪಿ ಕ್ಷೇತ್ರ ಮಾತ್ರ ಸುದೀರ್ಘ ಅವಧಿಗೆ ಒಕ್ಕಲಿಗೇತರರನ್ನೇ ಆಯ್ಕೆ ಮಾಡುತ್ತಿತ್ತು. ಇಂದಿರಾ ಹತ್ಯೆಯ ನಂತರ ಅನುಕಂಪದ ಅಲೆಯಲ್ಲಿ ಸೋತಿದ್ದ ಸ್ವತಃ ಜಾಲಪ್ಪನವರು 1996ರಿಂದ ಪ್ರಾರಂಭವಾಗಿ ಅವರೇ ನಿವೃತ್ತಿಯಾಗುವವರೆಗೆ ನಿರಂತರವಾಗಿ ಇಲ್ಲಿ ಗೆದ್ದು ಬಂದರು. ಅವರ ನಂತರ ಎರಡು ಬಾರಿ ದೂರದಿಂದ ವಲಸೆ ಬಂದಿದ್ದ ವೀರಪ್ಪ ಮೊಯ್ಲಿ ಗೆದ್ದಿದ್ದರು. ಈ ಸಾರಿ ಮಾತ್ರ ಇಡೀ ಕರ್ನಾಟಕದಲ್ಲಿ ಹೇಗೋ ಹಾಗೆ ಇಲ್ಲಿಯೂ ಕಾಂಗ್ರೆಸ್ ಸೋತು, ಬಿಜೆಪಿಯ ಬಚ್ಚೇಗೌಡರು ಗೆದ್ದಿದ್ದಾರೆ.

ಸ್ಥಳೀಯ ಸಾಮಾಜಿಕ, ರಾಜಕೀಯ ಸಮೀಕರಣವನ್ನು ಬದಲಿಸದೇ ಇದ್ದರೂ, ಅಹಿಂದ ಸಮಾವೇಶಕ್ಕೆ ಬೆಂಬಲವಾಗಿ ನಿಂತಿದ್ದು ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲೇಬೇಕೆಂದು ಹಲವು ರೀತಿಯಲ್ಲಿ ಒತ್ತಾಸೆ ನೀಡಿದ್ದ ಜಾಲಪ್ಪನವರಿಗೆ ಬಲಾಢ್ಯ ಜಾತಿಗಳ ರಾಜಕೀಯ ಮೇಲಾಟವನ್ನು ಮೀರಬೇಕೆಂಬ ಆಶಯವಂತೂ ಇತ್ತು. ಆದರೆ, ಇತರ ’ಅಹಿಂದ’ ನಾಯಕರಂತೆಯೇ ದೇವರಾಜ ಅರಸರ ವರಸೆ ಸಾಧ್ಯವಿರಲಿಲ್ಲ. ಬದಲಿಗೆ ಒಕ್ಕಲಿಗ ಪ್ರಾಬಲ್ಯದ ದೊಡ್ಡಬಳ್ಳಾಪುರದಲ್ಲಿ ಮಾತ್ರ ತಾನಿರುವವರೆಗೆ ಪ್ರಭಾವ ಉಳಿಸಿಕೊಂಡಿದ್ದು ಕೆಲವು ವಿಶಿಷ್ಟ ವಿಧಾನಗಳ ಮೂಲಕ.

ಜಾಲಪ್ಪ ಎಂದರೆ ಹಣಬಲ ಹಾಗೂ ತೋಳ್ಬಲದ ಅಸಾಧ್ಯ ಶಕ್ತಿ ಎಂಬ ಭಾವನೆಯನ್ನು ಇಡೀ ವಲಯದಲ್ಲಿ ಮೂಡಿಸಿದ್ದರು. ವಾಸ್ತವವೇನೆಂದರೆ ಅವರು ನೂರಾರು ಕೋಟಿ ಆಸ್ತಿಯನ್ನೇನೂ ಮಾಡಿರಲಿಲ್ಲ ಮತ್ತು ರೌಡಿ ಬಳಗವನ್ನೂ ಸಾಕಿಕೊಂಡಿರಲಿಲ್ಲ. ವಿಪರೀತ ಆಸ್ತಿ ಗುಡ್ಡೆ ಹಾಕಿಕೊಳ್ಳುವುದನ್ನೇ ಗೀಳು ಮಾಡಿಕೊಳ್ಳದೆ, ಇದ್ದಷ್ಟು ಹಣದಿಂದ ಸಿಕ್ಕಾಪಟ್ಟೆ ಖರ್ಚು ಮಾಡುವ, ಕೈಯೆತ್ತಿ ದಾನ ಧರ್ಮ ಮಾಡುವ, ಹಿಂಬಾಲಕರನ್ನು ಸಾಕುವ ಕೆಲಸ ಮಾಡುತ್ತಿದ್ದರು. ಹೀಗಾಗಿ ವಿಪರೀತ ಹಣಬಲ ಇದೆಯೆಂಬಂತೆ ತೋರುತ್ತಿತ್ತು. ಅನಾರೋಗ್ಯದಿಂದ ಕೋಲಾರದ ತನ್ನ ಮೆಡಿಕಲ್ ಕಾಲೇಜಿಗೆ (ಅಲ್ಲಿಯೂ ಸ್ವಂತ ಕುಟುಂಬಕ್ಕೇ ಎಲ್ಲಾ ವಾರಸುದಾರಿಕೆ ಕೊಟ್ಟಿಲ್ಲವೆಂಬುದು ಹೆಚ್ಚಿನವರಿಗೆ ಗೊತ್ತಿಲ್ಲ) ಶಿಫ್ಟ್ ಆಗುವ ಮುನ್ನ ಬೆಂಗಳೂರಿನ ಮನೆಯನ್ನೂ ಮಾರಿಬಿಟ್ಟಿದ್ದು ಕೆಲವರಿಗಷ್ಟೇ ಗೊತ್ತು. ಆದರೆ ಲಕ್ಷಗಟ್ಟಲೆ ಹಣವನ್ನು ಹಿಂಬಾಲಕರಿಗೆ, ಕೇಳಿ ಬಂದವರಿಗೆ ನೀಡುವ, ಚುನಾವಣೆಗೆ ಧಾರಾಳವಾಗಿ ಖರ್ಚು ಮಾಡುವಷ್ಟು ಹಣವಂತೂ ಅವರಲ್ಲಿ ಇತ್ತು.

ಅದೇ ರೀತಿ ಬೀದಿಬೀದಿಯಲ್ಲಿ ಅವರಿವರಿಗೆ ಹೊಡೆಸುವ ರಾಜಕಾರಣವನ್ನೇನೂ ಜಾಲಪ್ಪನವರು ಮಾಡಿರದಿದ್ದರೂ, ಅವರೆಂದರೆ ಎಲ್ಲರೂ ಹೆದರುವ ಹಾಗಂತೂ ನೋಡಿಕೊಂಡಿದ್ದರು. ತಾನೇ ಸ್ವತಃ ಮುನ್ನುಗ್ಗಿ ಕೆಲವೆಡೆ ವಿರೋಧಿಗಳನ್ನು ಎದುರಿಸಿದ್ದು, ಯಾರಿಗೂ ಹೆದರದ ಬಲಾಢ್ಯನೆಂಬಂತೆ ತೋರಿಸಿಕೊಂಡಿದ್ದು ಅದಕ್ಕೆ ಪ್ರಧಾನ ಕಾರಣ. ಜೊತೆಗೆ ಆಂತರ್ಯದಲ್ಲೂ ಎಂದೂ ಯಾರಿಗೂ ಬಗ್ಗಿದ್ದೇ ಆಗಲಿ, ಡೊಗ್ಗು ಸಲಾಮು ಹೊಡೆದಿದ್ದೇ ಆಗಲಿ ಅವರಲ್ಲಿ ಕಾಣಲಿಲ್ಲ. ಇವೆಲ್ಲವೂ ಸೇರಿಕೊಂಡು ನಿಧಾನಕ್ಕೆ ಜಾಲಪ್ಪನವರನ್ನು ಎದುರು ಹಾಕಿಕೊಳ್ಳುವುದು ಸಾಧ್ಯವಿಲ್ಲವೆಂಬಂತಹ ರಾಜಕೀಯ ವಾತಾವರಣವನ್ನು ನಿರ್ಮಿಸಿಬಿಟ್ಟಿದ್ದರು.

ದಕ್ಷ ಆಡಳಿತಗಾರರೂ, ಒಳ್ಳೆಯ ಕೆಲಸ ಮಾಡಬೇಕೆಂಬ ಮನಸ್ಸೂ ಹೊಂದಿದ್ದವರೂ ಆಗಿದ್ದ ಜಾಲಪ್ಪನವರು ಸರ್ಕಾರದ ನೀತಿ ನಿರೂಪಣೆಯಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಯನ್ನು ತರಲು ಮಹತ್ವದ ಕೆಲಸವನ್ನೇನೂ ಮಾಡಲಿಲ್ಲ. ಸಹಕಾರ ಸಚಿವರಾಗಿದ್ದಾಗ ಗೌರಿಬಿದನೂರು ಸಕ್ಕರೆ ಕಾರ್ಖಾನೆಯನ್ನು ಸಹಕಾರೀ ಕ್ಷೇತ್ರದಲ್ಲೇ ಉಳಿಸಿಕೊಳ್ಳುವ ಬದಲು ಖಾಸಗಿಯವರು ತೆಗೆದುಕೊಳ್ಳುವುದೇ ಒಳ್ಳೆಯದು ಎಂದು ತೀರ್ಮಾನಿಸಿಬಿಟ್ಟಿದ್ದರು. ಹಾಗೆಯೇ ಕಂದಾಯ ಸಚಿವರಾಗಿದ್ದಾಗ ಭೂಮಿತಿ ತೆಗೆಯುವ ನಿರ್ಧಾರವನ್ನು ಸಮರ್ಥಿಸಿಕೊಂಡು ಖಡಕ್ಕಾಗಿ ನಿಂತಿದ್ದರು. ಸಾರ್ವಜನಿಕ ಜೀವನದಲ್ಲಿ ತೀರಾ ಆರಂಭದಲ್ಲಿ ಕಮ್ಯುನಿಸ್ಟ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಜಾಲಪ್ಪ ಅಂತಹ ಯಾವ ಸೈದ್ಧಾಂತಿಕ ಒಲವು ನಿಲುವುಗಳನ್ನೇನೂ ಹೊಂದಿರಲಿಲ್ಲ. ಹಾಗೆ ನೋಡಿದರೆ ಸಮಾಜವಾದಿಗಳ ಸಂಘದಲ್ಲಿ ಸಿದ್ದರಾಮಯ್ಯನವರು ಪಡೆದುಕೊಂಡಿರುವ ಖಚಿತ ನಿಲುವುಗಳ ಯಾವ ಭಾಗವೂ ಜಾಲಪ್ಪನವರಲ್ಲಿ ಕಾಣುತ್ತಿರಲಿಲ್ಲ.

ಹಿಂದುಳಿದ ವರ್ಗಗಳ ದೊಡ್ಡ ರಾಜಕಾರಣಿಗಳ ಪೈಕಿ ಜಾಲಪ್ಪನವರ ಜಾತಿಗೆ ಸೇರಿದ್ದ ಬಂಗಾರಪ್ಪನವರಾಗಲೀ, ಜಾಲಪ್ಪನವರ ಪ್ರೀತಿಗೆ ಪಾತ್ರರಾಗಿರುವ ಸಿದ್ದರಾಮಯ್ಯನವರಾಗಲೀ ಹೊಂದಿರುವ ರಾಜ್ಯವ್ಯಾಪಿ ಪ್ರಭಾವ, ಸೈದ್ಧಾಂತಿಕ ನೆಲೆಗಳು ಜಾಲಪ್ಪನವರಿಗೆ ಇರಲಿಲ್ಲ. ಆದರೆ
ಅವರಿಬ್ಬರಲ್ಲೂ ಕಾಣುವ ಒರಟುತನ, ದೇಸಿ ವಿವೇಕ, ಒಂದು ಬಗೆಯ ಫ್ಯೂಡಲ್ ಗುಣಗಳು ಜಾಲಪ್ಪನವರಲ್ಲೂ ಇತ್ತು. ಬಹುಶಃ ಹಾಗಿರದಿದ್ದರೆ ಅವರು ಈ ಮಟ್ಟಿಗಿನ ಯಶಸ್ಸನ್ನೂ ಕಾಣುತ್ತಿರಲಿಲ್ಲವೇನೋ?


ಇದನ್ನೂ ಓದಿ: ನಭೋಮಂಡಲದ ಅನಂತತೆಯ ನಿಗೂಢಗಳನ್ನು ತಿಳಿಯುವ ತವಕಕ್ಕೆ ಕ್ಷಣಗಣನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...