ನಟರಾದ ದರ್ಶನ್, ಪವಿತ್ರಾಗೌಡ ಸೇರಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ಏಳು ಮಂದಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಜ.24) ನೋಟಿಸ್ ಜಾರಿ ಮಾಡಿದ್ದು, ಜಾಮೀನು ರದ್ದತಿಗೆ ನಿರಾಕರಿಸಿದೆ ಎಂದು ವರದಿಯಾಗಿದೆ.
ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹದೇವನ್ ಅವರ ವಿಭಾಗೀಯ ಪೀಠ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು “ರೇಣುಕಾಸ್ವಾಮಿ ಕೊಲೆಯು ಆಘಾತಕಾರಿ ಪ್ರಕರಣವಾಗಿದ್ದು, ಹೈಕೋರ್ಟ್ ಇಡೀ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ. ದರ್ಶನ್‌ಗೆ ಪವಿತ್ರಾಗೌಡ ಗೆಳತಿ ಎಂಬ ಕಾರಣಕ್ಕಾಗಿ..” ಎಂದು ವಾದ ಮಂಡಿಸಿದ್ದಾರೆ.
ಆಗ ನ್ಯಾ. ಪರ್ದಿವಾಲಾ ಅವರು “ಜಾಮೀನು ರದ್ದುಪಡಿಸಬೇಕು ಎಂದು ಕೇಳುತ್ತಿದ್ದೀರಾ?” ಎಂದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಲೂಥ್ರಾ ಅವರು “ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ. ಹೈಕೋರ್ಟ್ ಯಾವುದನ್ನೂ ಪರಿಗಣಿಸಿಲ್ಲ. ಪ್ರಕರಣದಲ್ಲಿನ ಸಹ ಆರೋಪಿಗಳು ಹೈಕೋರ್ಟ್‌ನ ಈ ತೀರ್ಮಾನಗಳನ್ನು ಆಧಾರವಾಗಿಸಿಕೊಂಡು ಜಾಮೀನು ಪಡೆಯಲು ಅನುಮತಿಸಬಾರದು. ಹೈಕೋರ್ಟ್‌ನ ತೀರ್ಮಾನಗಳು ಸಮಸ್ಯಾತ್ಮಕವಾಗಿದೆ” ಎಂದಿದ್ದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಮೇಲ್ಮನವಿ ವಿಚಾರಣೆಗೂ ಮುನ್ನ ಮಾತನಾಡಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ್, “ನಾವು ನಮ್ಮ ಕೆಲಸ ಮಾಡಿದ್ದೇವೆ. ಪೊಲೀಸರು ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಸಂಬಂಧಿತ ದಾಖಲೆಗಳು ಮತ್ತು ಸಾಮಗ್ರಿಗಳನ್ನು ಸಲ್ಲಿಸಿದ್ದಾರೆ. ಪೊಲೀಸರ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಏನಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ನಂತರ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.
ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಾಧೀಶರಾದ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರು ಆರೋಪಿಗಳ ಬಂಧನಕ್ಕೆ ನಿರ್ದಿಷ್ಟ ಆಧಾರಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ್ದರು. ಪ್ರಬೀರ್ ಪುರ್ಕಾಯಸ್ಥ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ, ಆರೋಪಿಗಳ ಬಂಧನದ ಆಧಾರಗಳು ಮತ್ತು ಕಾರಣಗಳ ನಡುವಿನ ವ್ಯತ್ಯಾಸವನ್ನು ಒತ್ತಿ ಹೇಳಿದ್ದರು.
ಹೈಕೋರ್ಟ್ ಜಾಮೀನು ಆದೇಶವನ್ನು ಪ್ರಶ್ನಿಸಿ ಜನವರಿ 6 ರಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಆರಂಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ದರ್ಶನ್ ಅವರಿಗೆ ಹೈಕೋರ್ಟ್ ಮಧ್ಯಂತರ ವೈದ್ಯಕೀಯ ಜಾಮೀನು ನೀಡಿತ್ತು. ನಂತರ ಅದನ್ನು ನಿಯಮಿತ (ರೆಗ್ಯುಲರ್) ಜಾಮೀನು ಆಗಿ ಪರಿವರ್ತಿಸಿತ್ತು.
ಇದನ್ನೂ ಓದಿ : ಬೆಳಗಾವಿ| ಗ್ರಾಮ ತೊರೆಯುವಂತೆ ದಲಿತ ವ್ಯಕ್ತಿ ಕುಟುಂಬಕ್ಕೆ ಒತ್ತಡ ಹಾಕಿದ ಸವರ್ಣೀಯರು


