Homeಮುಖಪುಟಪ್ರತಿಕ್ರಿಯೆ; ಅಳದ ಕಂದನಿಗೆ ಯಾವ ತಾಯಿಯೂ ಹಾಲೂಡಳು!

ಪ್ರತಿಕ್ರಿಯೆ; ಅಳದ ಕಂದನಿಗೆ ಯಾವ ತಾಯಿಯೂ ಹಾಲೂಡಳು!

- Advertisement -
- Advertisement -

’ನ್ಯಾಯಪಥ’ 18 ಮೇ 2022ರ ಸಂಚಿಕೆಯಲ್ಲಿ ಡಾ. ರಮೇಶ.ವಿ ರವರ ’ರಾಷ್ಟ್ರೀಯತೆ ಮತ್ತು ಕನ್ನಡದ ಅಸ್ಮಿತೆ’ (ಇಲ್ಲಿ ಓದಿ) ಎಂಬ ಲೇಖನ ಭಾಷಾ ವಿಜ್ಞಾನದ ನೆಲೆಯಲ್ಲಿ ಒಳ್ಳೆಯ ಬರಹವಾಗಿದೆ. ಇಂಡೋ ಆರ್ಯನ್ ಭಾಷೆಗಳು ಹಾಗು ದ್ರಾವಿಡ ಭಾಷೆಗಳು ಕಾಲಕ್ರಮದಲ್ಲಿ ಹೇಗೆ ಕವಲೊಡೆದು ಬೆಳೆದವು ಎಂಬುದನ್ನು ಸುಪ್ರೀಂಕೋರ್ಟು ಒಳಗೊಂಡಂತೆ ಸದ್ಯ ನಮ್ಮ ರಾಷ್ಟ್ರದ ಹಿಂದಿ ರಾಜಕಾರಣ ದ್ರಾವಿಡ ಭಾಷೆಗಳ ಬುಡಕ್ಕೆ ಬಿಸಿನೀರು ಚೆಲ್ಲುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ, ಸೌಮ್ಯವಾಗಿ ವಿಸ್ತರಿಸಿ, ಬಿಡಿಸಿ ಹೇಳಿದ್ದಾರೆ.

ನಾನೀಗ ರಮೇಶ ಅವರೊಂದಿಗೆ ಕೂಡಿಕೊಂಡು ಕೊಂಚ ಗಟ್ಟಿಯಾಗಿ ಹೇಳಬೇಕಾದ ಮಾತೊಂದಿದೆ. ಅದೇನೆಂದರೆ ಕೂಸು ಅಳದಿದ್ದರೆ ಯಾವ ತಾಯಿಯೂ ಹಾಲೂಡಿಸುವುದಿಲ್ಲವಷ್ಟೆ? ಹಾಗೆ ಯಾವುದೇ ಭಾಷಾ ಸಮುದಾಯವು ಸಹ ಕೂಡುರಾಷ್ಟ್ರದ ರಾಜ್ಯಾಂಗಬದ್ಧ ತನ್ನ ಹಕ್ಕನ್ನು ಚಲಾಯಿಸದಿದ್ದರೆ, ಪಾರ್ಲಿಮೆಂಟಿನಲ್ಲಿ ನಿಂತು ಗಟ್ಟಿಯಾಗಿ ಮಾತನಾಡಿ ಪ್ರಶ್ನಿಸದಿದ್ದರೆ ಇದು ಪ್ರಜಾತಂತ್ರ ಅನ್ನಿಸಿಕೊಳ್ಳುವುದೆ? ಇಲ್ಲ. ಈ ನಿಟ್ಟಿನಲ್ಲಿ ರಾಷ್ಟ್ರಕವಿ ಕುವೆಂಪು ಕಳೆದ ಶತಮಾನದ ಮೂರನೆ ದಶಕದಿಂದ ಬಿಟ್ಟೂಬಿಡದಂತೆ ಒಂದೇಸಮನೆ ’ಕನ್ನಡ ಅಸ್ಮಿತೆ’ಯ ಬಗ್ಗೆ ಕವನ ಬರೆದಿದ್ದಾರೆ; ಭಾಷಣ ಮಾಡಿದ್ದಾರೆ, ಸಂದರ್ಶನದಲ್ಲಿ ಹೇಳಿದ್ದಾರೆ. ಕುವೆಂಪು ಅವರ ವೈಜ್ಞಾನಿಕ ದೃಷ್ಟಿ, ವೈಚಾರಿಕ ತಿಳಿವು, ಒಕ್ಕೂಟರಾಷ್ಟ್ರದ ನಿಲುವು ಅಖಂಡ ಎಂಬುದನ್ನು ಹೆಚ್ಚು ವಿಸ್ತರಿಸಬೇಕಾಗಿಲ್ಲ. 1928ರಲ್ಲಿ ಅವರು ಇನ್ನೂ 24ರ ಹರೆಯದ ಕಾಲೇಜು ವಿದ್ಯಾರ್ಥಿ. ಕನ್ನಡದ ಅಸ್ಮಿತೆಯನ್ನು ಕುರಿತು ಆಗಲೇ ಚಿಂತನಮಂಥನ ನಡೆಸಿದ್ದಾರೆ. ಆಗ ಬರೆದದ್ದು ’ಭಾರತ ಜನನಿಗೆ’ ಎಂಬ ಕವನ. ಅಲ್ಲಿಂದ ಮೊದಲುಗೊಂಡು ’ಜಯಹೇ ಕರ್ನಾಟಕ ಮಾತೆ (1928), ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದರಿರ (1935), ಕಂದ ಕನ್ನಡನಿವನು ಕೈಬಿಡದಿರಮ್ಮಾ (1938), ಮೆಟ್ಟುವ ನೆಲ ಅದು ಕರ್ನಾಟಕ (1949), ಕರ್ನಾಟಕ ಮಂತ್ರದೀಕ್ಷೆ (1949), ಕನ್ನಡ ಡಿಂಡಿಮ(1960), ಸಾಕು ಈ ಬಲಾತ್ಕಾರ(1963), ಬಲಾತ್ಕಾರದ ಭಾಷಾ ತ್ರಿಶೂಲ(1963)’ ಹೀಗೆ ಕುವೆಂಪು ಕನ್ನಡ ತಾಯಿಯ ಸೇವೆಯ ಮಾಡಲು ಜೀವಮಾನ ಪರ್ಯಂತ ಹಾತೊರೆದರು; ಬರೆದರು, ಮಾತಾಡಿ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದರು. ಸಂಸ್ಕೃತ, ಹಿಂದಿ, ಇಂಗ್ಲಿಷ್ ಯಜಮಾನ್ಯದ ’ಕೊಲ್ವಮುನ್ನ ಸೊಲ್ಲಡಗಿಸುವ ಹುನ್ನಾರ’ವನ್ನು ಕಂಡು ಮರುಗಿದರು;

ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ

ಎಂದು ಎಚ್ಚರಿಸಿದರು. ಆದರೆ ಇವತ್ತಿಗೂ ಕನ್ನಡಿಗರು ಎಚ್ಚರಗೊಳ್ಳಲಾಗಿಲ್ಲ. ಇಂಗ್ಲಿಷ್, ಹಿಂದಿ, ಸಂಸ್ಕೃತದ ಹೊರೆ ಕನ್ನಡದ ಮಕ್ಕಳಿಗೆ ತಪ್ಪಿಲ್ಲ. ’ಕರ್ನಾಟಕ ಎಂಬುದು ಬರಿಯ ಹೆಸರೆ ಮಣ್ಣಿಗೆ?’ ಎಂದು ಕೇಳಲಾಗಿಲ್ಲ! ಸ್ವಾತಂತ್ರ್ಯವೂ ಬಂತು; ಸ್ವರಾಜ್ಯವೂ ಆಯಿತು; ಭಾಷಾವಾರು ಪ್ರಾಂತ್ಯಗಳೂ ಉದಯವಾದವು; ’ಉದಯವಾಯಿತು ನಮ್ಮ ಚೆಲುವ ಕನ್ನಡ ನಾಡು’ ಎಂದು ಕವಿಗಳು, ಗಮಕಿಗಳು ಹಾಡಿ ದಣಿದರು. ಆದರೆ ಚೆಲುವ ಕನ್ನಡ ನಾಡು ಎಲ್ಲಿ? ಎಲ್ಲವೂ ಜಾತಿಯಲ್ಲಿ, ಸ್ವಜನಪಕ್ಷಪಾತದಲ್ಲಿ, ಭ್ರಷ್ಟಾಚಾರದಲ್ಲಿ, ಮಂತ್ರಿ ಮಹೋದಯರ ಕುರ್ಚಿ ಹರಾಜಿನಲ್ಲಿ, ಹೈಕಮಾಂಡ್ ಎದುರು ಡೊಗ್ಗು ಸಲಾಮು ಹೊಡೆಯುವಲ್ಲಿ ಕನ್ನಡ, ಕರ್ನಾಟಕ, ಕನ್ನಡಿಗರ ಅಸ್ಮಿತೆಯೇ ಮರೆತು ಹೋಗುತ್ತಿದೆ. ’ಮಾತು ಮರೆತ’ ಜನಾಂಗ ಬದುಕಿದ್ದರೂ ಸತ್ತಂತೆ ತಾನೆ? ’ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ’ ಎಂದು ಸತ್ತಂತಿರುವ ಕನ್ನಡಿಗರನ್ನು ಬಡಿದೆಬ್ಬಿಸುವ ದಾತಾರರೇ ಈಗ ಇಲ್ಲ. ನೆರೆಯ ತಮಿಳರು ನಾಡು-ನುಡಿಯ ’ಅಸ್ಮಿತೆ’ಗೆ ಕುಂದು ಬಂದಾಗಲೆಲ್ಲಾ ದಂಗೆಯೆದ್ದು ದ್ರಾವಿಡತನವನ್ನು ಮೆರೆದಿದ್ದಾರೆ. ಕನ್ನಡಿಗರರಿಗೆ ಆ ಭಾಷಾಭಿಮಾನವಾಗಲೀ, ಸ್ವಾಭಿಮಾನವಾಗಲೀ ಇಲ್ಲ. ಲಾಗಾಯ್ತಿನಿಂದ ಒಬ್ಬ ಮಂತ್ರಿಯನ್ನು ಕೈಬಿಡುವುದಕ್ಕೂ ಇನ್ನೊಬ್ಬರನ್ನು
ಸೇರಿಸಿಕೊಳ್ಳುವುದಕ್ಕೂ ಸಹ ಮುಖ್ಯಮಂತ್ರಿಯವರು ದೆಹಲಿ ದರ್ಬಾರ್‌ಗೆ ಹೋಗಿ ಹೈಕಮಾಂಡಿನ ಬಾಗಿಲು ಕಾಯುವ ಪರಿಸ್ಥಿತಿ ಉದ್ಭವಿಸಿದೆ. ಇದಕ್ಕೆಲ್ಲಾ ಕಾರಣ ಕರ್ನಾಟಕದ ಶಾಸಕರು, ಸಂಸದರು ಮತ್ತು ರಾಜ್ಯಸರ್ಕಾರದ ದೌರ್ಬಲ್ಯ. ಬಗ್ಗಿದಷ್ಟೂ ಉತ್ತರದವರ ಪಾರುಪತ್ಯ ಎದ್ದು ಕಾಣುತ್ತದೆ. ಹಾಗಾದರೆ ಏನು ಮಾಡಬೇಕು?

ಏನು ಮಾಡಬೇಕು ಎಂಬುದನ್ನು ಕುವೆಂಪು 1965ರಲ್ಲೇ ’ರಾಷ್ಟ್ರಕವಿ ಪ್ರಶಸ್ತಿ’ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ: “ಮಹನೀಯರೆ, ಕೊನೆಯದಾಗಿ ಅಧಿಕೃತ ಶಾಸನಕರ್ತರಾದ ನಿಮ್ಮಲ್ಲಿ ಅನಧಿಕೃತ ಶಾಸನಕರ್ತನಾದ ನನ್ನ ಒಂದು ಅಹವಾಲು; ಅದು ಇಂಗ್ಲಿಷ್ ಭಾಷೆಗೂ ಶಿಕ್ಷಣ ಮಾಧ್ಯಮಕ್ಕೂ ಸಂಬಂಧಪಟ್ಟಿದ್ದು. ವಿವರಕ್ಕಾಗಲಿ ವಾದಕ್ಕಾಗಲಿ ಜಿಜ್ಞಾಸೆಗಾಗಲಿ ನಾನೀಗ ಕೈ ಹಾಕುವುದಿಲ್ಲ. ಅದು ತತ್ಸಮಯ ಸಾಧ್ಯವು ಅಲ್ಲ; ಅದಕ್ಕಿಲ್ಲಿ ಕಾಲಾವಕಾಶವೂ ಇಲ್ಲ. ತಮ್ಮ ಗಮನವನ್ನು ಅತ್ತಕಡೆ ಎಳೆದು, ಅದು ತಮ್ಮ ಶೀಘ್ರ ಪರಿಶೀಲನೆಗೂ ಇತ್ಯರ್ಥಕ್ಕೂ ಒಳಗಾಗುವಂತೆ ಮಾಡುವುದೆ ನನ್ನ ಸದ್ಯ ಪ್ರಯತ್ನದ ಮುಖ್ಯ ಉದ್ದೇಶ. ಆ ವಿಚಾರವಾಗಿ ನಮ್ಮ ರಾಷ್ಟ್ರಪಿತನಾದಿಯಾಗಿ ಸಾವಿರಾರು ದೇಶಭಕ್ತರೂ ನೂರಾರು ಸ್ವದೇಶೀಯ ಮತ್ತು ವಿದೇಶೀಯ ವಿದ್ಯಾತಜ್ಞರೂ ಹೇಳಿದ್ದಾರೆ, ಮಾತನಾಡಿದ್ದಾರೆ, ಬರೆದಿದ್ದಾರೆ. ಹೊತ್ತಗೆಗಳನ್ನೆ ಪ್ರಕಟಿಸಿಯೂ ಇದ್ದಾರೆ. ಆದರೆ ನಮ್ಮ ದೇಶದ ಪ್ರಚ್ಛನ್ನ ಶತ್ರುಗಳಾದ ಸ್ವಾರ್ಥಸಾಧಕ ಪಟ್ಟಭದ್ರ ಹಿತಾಸಕ್ತ ಪ್ರತಿಗಾಮಿ ಶಕ್ತಿಗಳು, ಮಕ್ಕಳಿಗೆ ಹಾಲುಣಿಸುವ ನೆವದಿಂದ ಅವರನ್ನು ಕೊಲ್ಲುತ್ತಿದ್ದ ಭಾಗವತ ಪುರಾಣದ ಪೂತನಿಯಂತೆ, ಬಲಾತ್ಕಾರದ ಇಂಗ್ಲಿಷ್ ಭಾಷೆಯಿಂದಲೂ ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷವರ್ಷವೂ ಪರೀಕ್ಷೆಯ ಜಿಲೊಟಿನ್ನಿಗೆ ಕೋಟ್ಯಾಂತರ ಬಾಲಕರ ಮತ್ತು ತರುಣರ ತಲೆಗಳನ್ನು ಬಲಿಕೊಡುತ್ತಿದ್ದಾರೆ. ಆ ನಷ್ಟದ ಪರಿಮಾಣವನ್ನು ಊಹಿಸಲೂ ಸಾಧ್ಯವಿಲ್ಲ. ಬಹುಶಃ ಸರಿಯಾಗಿ ಲೆಕ್ಕ ಹಾಕಿದರೆ, ನಾಲ್ಕಾರು ಪಂಚವಾರ್ಷಿಕ ಯೋಜನೆಗಳ ಮೊತ್ತವೆ ಆದರೂ ಆಗಬಹುದೇನೊ!”

“ಇಂಗ್ಲಿಷ್ ಭಾಷೆ ಬಲಾತ್ಕಾರದ ಸ್ಥಾನದಿಂದ ಐಚ್ಛಿಕ ಸ್ಥಾನಕ್ಕೆ ನಿಯಂತ್ರಣಗೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣ ಮಾಧ್ಯಮ ತೊಲಗಿ ಪ್ರಾದೇಶಿಕ ಭಾಷೆಗೆ ಆ ಸ್ಥಾನ ಲಭಿಸದಿದ್ದರೆ, ನಮ್ಮ ದೇಶ ಹತ್ತೇ ವರ್ಷಗಳಲ್ಲಿ ಸಾಧಿಸಬೇಕಾದುದನ್ನು ಇನ್ನೊಂದು ನೂರು ವರ್ಷಗಳಲ್ಲಿಯೂ ಸಾಧಿಸಲಾರದೆ ನಿತ್ಯ ರೋಗಿಯಂತಿರಬೇಕಾಗುತ್ತದೆ.”

ಇಂದಿಗೂ ಪರಿಸ್ಥಿತಿ ಕುವೆಂಪು ಅಂದು ಹೇಳಿದ ಹಾಗೇ ಇದೆ. ಬದಲಾಗಿರುವುದೇನೆಂದರೆ ಇಂಗ್ಲಿಷಿನ ಸ್ಥಾನಕ್ಕೆ ಹಿಂದಿಯನ್ನು ತರಲಾಗುತ್ತಿದೆ ಅಷ್ಟೇ! ಇದು ವಿದ್ಯಾರ್ಥಿಗಳ, ರೈತರ, ದಲಿತರ ಮಕ್ಕಳ ದನಿಯನ್ನು ಹತ್ತಿಕ್ಕುತ್ತದೆ. ಅಳದ ಕಂದನಿಗೆ ಯಾವ ತಾಯಿಯೂ ಹಾಲೂಡುವುದಿಲ್ಲ! ಮುಖ್ಯ ನಮ್ಮ ಜನಪ್ರತಿನಿಧಿಗಳು ಹೈಕಮಾಂಡ್ ಹೇಳಿದ ಮಾತಿಗೆಲ್ಲಾ ’ಕೌಲೆ ಬಸವಣ್ಣನಂತೆ ತಲೆ ಹಾಕದೆ’ ಲೋಕಸಭೆಯಲ್ಲಿ ವಿಧಾನಸಭೆಯಲ್ಲಿ ಎದ್ದುನಿಂತು ಪ್ರಾದೇಶಿಕ ಭಾಷೆಗಳ ಪರವಾಗಿ ದನಿ ಎತ್ತಬೇಕು. ಬಂಗಾಳಿ, ತಮಿಳು ಮುಂತಾದ ಭಾಷೆಗಳಂತೆ ಕನ್ನಡದ ’ಅಸ್ಮಿತೆ’ಯನ್ನು ನಾವು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಇಲ್ಲವಾದರೆ ಕನ್ನಡ ಭಾಷೆಯೊಂದಿಗೆ ಕನ್ನಡ ಜನಾಂಗವೂ ಕಣ್ಮರೆಯಾಗುವ ಕಾಲ ದೂರವಿಲ್ಲ! ಈ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳ ಜವಾಬ್ದಾರಿ ಎಷ್ಟಿದೆಯೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಪ್ರೊ. ಶಿವರಾಮಯ್ಯ

ಪ್ರೊ. ಶಿವರಾಮಯ್ಯ
ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಶಿವರಾಮಯ್ಯನವರು ತಮ್ಮ ಅಧ್ಯಾಪನ ಮತ್ತು ಸಂಶೋಧನಾ ಕಾರ್ಯಗಳ ಜೊತೆಗೆ ಜನಪರ ಹೋರಾಟಗಳಲ್ಲಿ ಗುರುತಿಸಿಕೊಂಡವರು. ಸ್ವಪ್ನ ಸಂಚಯ (ಕವನ ಸಂಕಲನ), ಉರಿಯ ಉಯಾಲೆ (ವಿಮರ್ಶಾ ಬರಹಗಳ ಸಂಕಲನ), ದನಿ ಇಲ್ಲದವರ ದನಿ, ಪಂಪಭಾರತ ಭಾಗ-1 &2 (ಸಂಪಾದನೆ ಮತ್ತು ಗದ್ಯಾನುವಾದ) ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ರಾಷ್ಟ್ರೀಯ ಭಾಷೆಯ ಕಲ್ಪನೆ ಮತ್ತು ಕನ್ನಡದ ಅಸ್ಮಿತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...