Homeಕರ್ನಾಟಕರಾಷ್ಟ್ರೀಯ ಭಾಷೆಯ ಕಲ್ಪನೆ ಮತ್ತು ಕನ್ನಡದ ಅಸ್ಮಿತೆ

ರಾಷ್ಟ್ರೀಯ ಭಾಷೆಯ ಕಲ್ಪನೆ ಮತ್ತು ಕನ್ನಡದ ಅಸ್ಮಿತೆ

- Advertisement -
- Advertisement -

ಗ್ರೇಟ್ ಅಂಡಮಾನಿನ ಭಾಷಾ ಕುಟುಂಬಕ್ಕೆ ಸೇರಿದ ಕರಿ ಭಾಷೆಯನ್ನು ಮಾತನಾಡುವ ಕೊನೆಯ ವ್ಯಕ್ತಿ ಲಿಚೊ ಏಪ್ರಿಲ್ 4, 2020ರಂದು ಅಸು ನೀಗಿದರು. ಆ ವ್ಯಕ್ತಿಯ ಸಾವಿನೊಂದಿಗೆ ಕರಿ ಭಾಷೆಯು ಭೂಮಿಯಿಂದ ಅಳಿಸಿಹೋಯಿತು. ಮಾನವನ ವಿಕಾಸದ ನಂತರ ಆಫ್ರಿಕಾದಿಂದ ಅನೇಕ ಅಲೆಗಳಲ್ಲಿ ಮಾನವ ಸಂತತಿ ವಿವಿಧ ಭೂಪ್ರದೇಶಗಳಿಗೆ ವಲಸೆ ಬಂದರು. ಹೀಗೆ ಸುಮಾರು 50 ರಿಂದ 60 ಸಾವಿರ ವರ್ಷಗಳ ಹಿಂದೆಯೆ ಅಂಡಮಾನ್‌ಗೆ ವಲಸೆ ಬಂದು ನೆಲೆಸಿರುವ ಜನಾಂಗವೇ ಅಲ್ಲಿನ ಬುಡಕಟ್ಟು ಜನ ಎನ್ನುತ್ತದೆ ಮಾನವಶಾಸ್ತ್ರದ ವೈಜ್ಞಾನಿಕ ಸಿದ್ಧಾಂತ. ಒಂದು ಜನಾಂಗದ ಭಾಷೆಯ ಸಾವಿನಲ್ಲಿ ಆ ಜನಾಂಗದ ಇತಿಹಾಸ, ಸಂಸ್ಕೃತಿ, ಅಸ್ಮಿತೆ ಮತ್ತು ಪೂರ್ವಜರ ನಡೆ, ನುಡಿ, ನಂಬಿಕೆ, ನೆನಪು ಇಡೀ ಭೂಮಿಯಿಂದ ಅಳಿಸಿಹೋಗುತ್ತದೆ. ಆಧುನಿಕ
ಪ್ರಭುತ್ವಗಳು ಆಡಳಿತದ ಮೂಲಕ ಹೊಸ ಭಾಷೆಗಳನ್ನು ಮೂಲ ಬುಡಕಟ್ಟು ಜನಾಂಗಗಳ ಮೇಲೆ ಹೇರಿದಾಗ ಸಂಭವಿಸುವ ದೊಡ್ಡ ದುರಂತವೇ ಭಾಷೆಯ ಮತ್ತು ಜನಾಂಗದ ಸಾವು. ಹೀಗೆಯೇ ಸ್ಥಳೀಯ ಭಾಷೆಗಳು ಕ್ಷೀಣವಾಗಿ, ನಶಿಸಲು, ಭಾರತದ ಹಲವು ಸರ್ಕಾರಗಳು ಕೇವಲ ಹಿಂದಿಗೆ ಆಡಳಿತ ಭಾಷೆಯಾಗಿ ಒತ್ತು ನೀಡುತ್ತಿರುವುದು ಮತ್ತು ಹಲವು ಜನಾಂಗಕ್ಕೆ ತಮ್ಮ ಮೂಲ ಭಾಷೆಯ ಮೇಲಿನ ಕೇವಲ ಮನೋಭಾವವೇ ಕಾರಣ ಎಂಬುದು ಕರಿ ಭಾಷೆಯ ಅಧ್ಯಯನದಲ್ಲಿ ತೊಡಗಿರುವ ಅನ್ವಿತಾ ಅಬ್ಬಿ ಅವರ ಅಭಿಪ್ರಾಯವು ಹೌದು. ಇವೆಲ್ಲವು ರಾಷ್ಟ್ರೀಯ ಭಾಷೆ ಬಯಸುವ ಹಲವರಿಗೆ ಜೀವಮಾನದ ಪಾಠವಾಗಬೇಕು.

ಹೌದು ಹಿಂದಿ ಹೇರಿಕೆಯ ಮನಸ್ಥಿತಿಗಳ ವಿರುದ್ಧ ಹೋರಾಡಿದ ಹಿರಿಯರ ನೆರಳಿನಲ್ಲಿ ಬದುಕುತ್ತಿರುವ ನಾವು ರಾಷ್ಟ್ರೀಯ ಭಾಷೆಯ ಹೇರಿಕೆಯ ವಿರುದ್ಧ ಸದಾ ಎಚ್ಚರ ವಹಿಸುವ ಅವಶ್ಯಕತೆ ಇದೆ. ಕಾರಣ ಈ ದೇಶದ ಗೃಹ ಮಂತ್ರಿ ಹಿಂದಿ ಭಾಷೆಯ ದಿವಸವನ್ನು ಆಚರಿಸಲು ಸಂದೇಶ ನೀಡುತ್ತಾರೆ. ಕನ್ನಡದ ಚಿತ್ರ ನಟ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬ ಮಾತಿಗೆ ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡುವ ಬಗ್ಗೆ ಒಬ್ಬ ಬಾಲಿವುಡ್ ನಟ ತಪ್ಪುತಪ್ಪಾಗಿ ಪ್ರಶ್ನಿಸುತ್ತಾರೆ. ಉತ್ತರ ಪ್ರದೇಶದ ಸಚಿವ ಸಂಜಯ್ ನಿಷಾದ್ ಹಿಂದಿ ಮಾತನಾಡಲು ಬರದವರು ದೇಶ ಬಿಟ್ಟು ಹೋಗಿ ಎಂಬ ಹೇಳಿಕೆಯನ್ನು ನೀಡುತ್ತಾರೆ. ಇವೆಲ್ಲವು ಹೇರಿಕೆ ಮತ್ತು ತಾರತಮ್ಯದ ಮನಸ್ಥಿತಿಗಳಲ್ಲದೆ ಮತ್ತೇನು?

2010ರಲ್ಲಿ ಗುಜರಾತ್‌ನ ಒಬ್ಬ ವ್ಯಕ್ತಿ ಉಚ್ಚ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ ಎಲ್ಲಾ ದಿನ ನಿತ್ಯಬಳಕೆಯ ಉತ್ಪನ್ನಗಳ ಮೇಲೆ ಹಿಂದಿಯಲ್ಲಿ ವಿವರಗಳನ್ನು ಮುದ್ರಿಸಬೇಕು ಎಂದು ಕೋರುತ್ತಾನೆ. ನ್ಯಾಯಾಲಯವು ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಪ್ರಶ್ನಿಸಿ, ಹಿಂದಿಯು ರಾಷ್ಟ್ರೀಯ ಭಾಷೆ ಅಲ್ಲ ಎಂದು ಆ ಮನವಿಯನ್ನು ತಿರಸ್ಕರಿಸಿದೆ.

ಸಂವಿಧಾನದ ವಿಧಿ 341 (1)ರ ಪ್ರಕಾರ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯದ ಎಲ್ಲಾ ನಡವಳಿಗಳು ಇಂಗ್ಲಿಷಿನಲ್ಲಿರಬೇಕು. ಆಡಳಿತ ಭಾಷೆಯ ಕಾಯ್ದೆ 1963ರ ಭಾಗ 7ರ ಪ್ರಕಾರ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಹಿಂದಿ ಅಥವಾ ಸ್ಥಳೀಯ ಭಾಷೆಗಳಲ್ಲಿಯೂ ಸಹ ಉಚ್ಚ ನ್ಯಾಯಾಲಯಗಳ ತೀರ್ಪುಗಳ ಪ್ರಕ್ರಿಯೆಗಳನ್ನು ರೂಪಿಸಬಹುದು ಎಂಬ ನಿಯಮವನ್ನು ಜಾರಿಗೆ ತರಲಾಯಿತು. ಇದರ ಪ್ರಕಾರ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ಹಿಂದಿಯಲ್ಲಿ ನ್ಯಾಯಾಲಯದ ನಡವಳಿಗಳನ್ನು ರೂಪಿಸಲು ಪ್ರಾರಂಭಿಸಿದವು. ಇದೇ ಮಾದರಿಯಲ್ಲೆ 2012ರಲ್ಲಿ ಹಿಂದಿಯೇತರ ರಾಜ್ಯಗಳಾದ ಛತ್ತೀಸಘಡ್, ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಸ್ಥಳೀಯ ಭಾಷೆಯಲ್ಲಿ ನ್ಯಾಯಾಲಯದ ನಡವಳಿಗಳನ್ನು ರೂಪಿಸಲು ಅನುಮತಿಯನ್ನು ಕೋರಿದಾಗ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿತ್ತು. ಇದು ಭಾಷೆಗಳ ವೈವಿಧ್ಯತೆಯ ಬಗೆಗೆ ಅಸಹಿಷ್ಣುತೆಯೋ, ಅಸಮಾನತೆಯೋ ನ್ಯಾಯಾಂಗವೇ ಬಲ್ಲದು.

ಹಿಂದಿ ಹೇರಿಕೆ ಇವತ್ತಿನ ಪ್ರಶ್ನೆಯೇನಲ್ಲ. 1925ರಲ್ಲೆ ದೇಶದಲ್ಲಿ ಎಲ್ಲಾ ರಾಜ್ಯಗಳ ಜನರ ಸಂವಹನಕ್ಕಾಗಿ ಒಂದು ಭಾಷೆಯನ್ನಾಗಿ ಹಿಂದಿಯನ್ನು ಅಭಿವೃದ್ಧಿಗೊಳಿಸಲು ಗಾಂಧಿ ಮತ್ತು ಕಾಂಗ್ರೆಸ್‌ನವರು ಕಾರ್ಯಗತರಾಗಿದ್ದರು. 1937ರಲ್ಲಿ ದೇಶದ ಶಾಲೆಗಳಲ್ಲಿ ಹಿಂದಿ ಕಲಿಸುವುದರ ಮೂಲಕ ಮೊದಲ ಸಲ ಹಿಂದಿ ಹೇರಿಕೆಯನ್ನು ಮಾಡಲಾಯಿತು. ಇದನ್ನು ವಿರೋಧಿಸಿ ತಮಿಳುನಾಡಿನ ಡಿಎಂಕೆ ಮತ್ತು ಪೆರಿಯಾರ್ ರಾಮಸ್ವಾಮಿ ಅವರ ನೇತೃತ್ವದ ಸ್ವಾಭಿಮಾನಿ ಹೋರಾಟದಲ್ಲಿ ಅನೇಕ ಸಾವುನೋವುಗಳ ಫಲವಾಗಿ ಮದರಾಸ್‌ನ ಬ್ರಿಟಿಷ್ ಗೌವರ್ನರ್ ಲಾರ್ಡ್ ಎರ್ಸಿಕಿನ್ ಹಿಂದಿ ಬೋಧನೆಯನ್ನು ಹಿಂಪಡೆದರು. ಹೀಗೆ ಡಿಎಂಕೆ 1957 ಸೆಪ್ಟಂಬರ್ 21ರಂದೇ ಹಿಂದಿ ವಿರೋಧ ದಿನವನ್ನು ಸಹ ಆಚರಿಸಿತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

1946 ಡಿಸೆಂಬರ್ 10ರಂದು ಉತ್ತರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಪಂಡಿತ್ ರಘುನಾಥ್ ವಿನಾಯಕ್ ದುಲೇಕರ್ ಎಂಬುವರು ಪಾರ್ಲಿಮೆಂಟಿನಲ್ಲಿ ಮಾತನಾಡುವುದು, ಕಾರ್ಯಗಳನ್ನು ರೂಪಿಸುವುದು, ಹಿಂದಿ ಭಾಷೆಯಲ್ಲೆ ನಡೆಯಬೇಕು ಎಂಬ ತಿದ್ದುಪಡಿಯನ್ನು ಪ್ರಸ್ತಾಪಿಸಿದ್ದರು. ಅನೇಕ ಹಿಂದಿಯೇತರರ ಪ್ರತಿರೋಧವನ್ನು ಗಮನಿಸಿ, ತಮ್ಮ ಭಾಷಣದಲ್ಲಿ ’ಹಿಂದಿ ತಿಳಿಯದವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ ಮತ್ತು ಯಾರಿಗೆ ಹಿಂದಿ ಗೊತ್ತಿಲ್ಲ ಅವರು ಸಂವಿಧಾನ ರಚನಾ ಸಭೆಯ ಸದಸ್ಯರಾಗುವುದಕ್ಕೆ ಯೋಗ್ಯರಲ್ಲ, ಹಾಗಾಗಿ ಇಲ್ಲಿಂದ ಎದ್ದು ಹೋಗುವುದೇ ಸೂಕ್ತ’ ಎಂಬ ದಬ್ಬಾಳಿಕೆಯ ಮಾತುಗಳನ್ನಾಡಿದ್ದರು.

ದಕ್ಷಿಣ ರಾಜ್ಯಗಳ ವಿವಿಧ ನಾಯಕರಾದ ಟಿ ಟಿ ಕೃಷ್ಣಮಾಚಾರಿ, ಜಿ ದುರ್ಗಾಬಾಯಿ, ಟಿ ಎ ರಾಮಲಿಂಗಮ್, ಚೆಟ್ಟಿಯಾರ್, ಎನ್ ವಿ ಕೃಷ್ಣಮೂರ್ತಿ (ಮೈಸೂರು) ಮತ್ತು ಸರ್ವೇಪಲ್ಲಿ ರಾಧಾಕೃಷ್ಣನ್‌ರವರು ಸಹ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದರು. ಸತತ 3 ವರ್ಷಗಳ ಚರ್ಚೆಯೊಂದಿಗೆ ಮುನ್ಶಿ ಅಯ್ಯಂಗಾರ್‌ರವರ ಸೂತ್ರದಂತೆ ಭಾರತಕ್ಕೆ ರಾಷ್ಟ್ರೀಯ ಭಾಷೆ ಬೇಡ ಆಡಳಿತ ಭಾಷೆ ಸಾಕು ಎಂಬ ನಿಲುವಿಗೆ ಬರಲಾಯಿತು. ಅದರ ಅನುಸಾರ ಹಿಂದಿ, ಇಂಗ್ಲಿಷ್ ನಮ್ಮ ದೇಶದ ಆಡಳಿತ ಭಾಷೆಗಳಾಗಿವೆ.

ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿಯು ಸಹ ತ್ರಿಭಾಷಾ ಸೂತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಮತ್ತು ಇತರೆ ಭಾಷೆಗಳಿಗೆ ಒತ್ತು ನೀಡಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳವು. ಕೇಂದ್ರ ಹಿಂದಿ ಇಂಗ್ಲಿಷ್‌ನ್ನು ಆಡಳಿತ ಭಾಷೆಗಳಾಗಿ ಘೋಷಿಸಿತ್ತು ಮತ್ತು ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಯಬೇಕಿತ್ತು, ಆದರೆ ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆ, ಅದುವೇ ಪ್ರಥಮ ಹಾಗೂ ಆಡಳಿತ ಭಾಷೆಯಾಗಬೇಕು. ಅದು ಸಾಧ್ಯವಾಗಬೇಕೆಂಬ ಮನವಿಯನ್ನು ಹೊತ್ತು ಸಾಹಿತಿಗಳು, ಚಳವಳಿಕಾರರ ಮುಂದಾಳತ್ವದಲ್ಲಿ  ಡಾ.ರಾಜ್‌ಕುಮಾರ್ ಸೇರಿ ಹಲವು ನಟರು, ನಾಡಿನ ಜನರು ಪ್ರತಿಭಟಿಸಿದರು. ಅದುವೇ ’ಗೋಕಾಕ್ ಚಳವಳಿ’. ನಂತರ ಸರ್ಕಾರವು ಮನವಿಯನ್ನು ಒಪ್ಪಿತು. ವಿ ಕೃ ಗೋಕಾಕ್‌ರ ನೇತೃತ್ವದಲ್ಲಿ ರಚಿತವಾದ ಸಮಿತಿಯು ವರದಿಯನ್ನು ಸಲ್ಲಿಸಿತು ಮತ್ತು ಕನ್ನಡವೇ ಪ್ರಥಮ ಆದ್ಯತೆ ಆಯಿತು.

ಬಿಹಾರಕ್ಕೆ ಬೋಜ್ಪುರಿ, ಛತ್ತೀಸ್‌ಘಡ್‌ಗೆ ಚತೀಸ್‌ಘರಿ ಇರುವ ಹಾಗೆ ಬೇರೆಬೇರೆ ರಾಜ್ಯಗಳಿಗೆ ಬೇರೆಬೇರೆ ಭಾಷೆ ಇರುವುದನ್ನು ಹಿಂದಿಯ ಮುಖವಾಡ ತೊಡಿಸಿ ಮರೆಮಾಚಲಾಗತ್ತದೆ. ಉದಾಹರಣೆಗೆ, ಹಿಂದಿಯ ಹೇರಿಕೆಯನ್ನು ವಿರೋಧಿಸಿ ಬಿಹಾರ್‌ನ ಸ್ಥಳೀಯ ಮೈಥಿಲಿ ಭಾಷೆಯನ್ನು ಉಳಿಸಲು, ಬಳಸಲು ಮತ್ತು ಗುರುತಿಸಲು ಮೈಥಿಲೇಶ್ ಕುಮಾರ್ ಜಾ ದಶಕಗಳಿಂದ ಹೋರಾಟವನ್ನು ಹಮ್ಮಿಕೊಂಡು ಬಂದಿದ್ದಾರೆ.

ಪೆರಿಯಾರ್ ರಾಮಸ್ವಾಮಿ

ಇಂಗ್ಲಿಷ್ ಪೂರ್ವ ಜರ್ಮಾನಿಕ್ ಭಾಷೆಯಾಗಿದ್ದು, ಆಂಗ್ಲೋ ಫ್ರಿಷಿಯನ್ ಭಾಷೆಯಿಂದ ಉಗಮವಾಗಿ ಕ್ರಿ.ಶ. 5ರಿಂದ 7ನೇ ಶತಮಾನಗಳ ನಡುವೆ ಬ್ರಿಟನ್ ತಲುಪಿದೆ, ಹಾಗಾಗಿ ವೈವಿಧ್ಯಮಯ ಭಾಷೆಗಳನ್ನು ಹೊಂದಿರುವ ಬ್ರಿಟನ್ ಏಕಭಾಷೆಯನ್ನು ವೈಭವೀಕರಿಸುವುದಿಲ್ಲ. ಬ್ರಿಟಿಷರು ಇಂಗ್ಲಿಷನ್ನು ರಾಷ್ಟ್ರೀಯ ಆಡಳಿತ ಭಾಷೆ ಮಾಡಿದ್ದಾರೆ, ಕಾರಣ ಐರ್ಲೆಂಡ್, ಸ್ಕಾಟ್‌ಲೆಂಡ್, ವೇಲ್ಸ್ ಇಂಗ್ಲಿಷನ್ನು ಮಾತನಾಡುವ ಬದಲು ಪ್ರಾಂತೀಯ ಭಾಷೆಗಳನ್ನು ಮಾತನಾಡುತ್ತಾರೆ. ಇದೇ ತರಹ ಬ್ರಿಟನ್ ಸುಮಾರು 14 ಸ್ಥಳೀಯ ಭಾಷೆಗಳನ್ನು ಹೊಂದಿದೆ. ಆದುದರಿಂದ ರಾಷ್ಟ್ರೀಯ ಭಾಷೆಯಿಂದಲೆ ದೇಶ ಉದ್ಧಾರ ಎಂಬುದು ಮಹಾ ಸುಳ್ಳು. 4000 ವರ್ಷಗಳ ಹಿಂದೆಯೆ ಸಿಂಧೂ ನಾಗರಿಕತೆಯ ಜನರು ಈಜಿಪ್ಟ್, ಮೆಸಪೊಟೋಮಿಯ ನಾಗರಿಕತೆಗಳ ಜೊತೆ ವ್ಯಾಪಾರ ನಡೆಸಿರುವುದಕ್ಕೆ, ಸಂಸ್ಕೃತಿಯ ಮತ್ತು ಭಾಷೆಯ ವಿನಿಮಯ ಆಗಿರುವುದಕ್ಕೆ ಪುರಾವೆಗಳಿವೆ. ಹಾಗಾಗಿ 21ನೇ ಶತಮಾನದ ಕಂಪ್ಯೂಟರ್ ಯುಗದಲ್ಲಿಯೂ ಸಹ ನಮ್ಮ ನೆರೆಯ ರಾಜ್ಯಗಳೊಂದಿಗೆ ಸಂವಹನ ಸಾಧಿಸಲು ನಮಗೆ ಏಕ ಭಾಷೆಯ ಅವಶ್ಯಕವೆನ್ನುವುದು ಹೇರಿಕೆಯ ಮನೋಭಾವವೆ ಆಗಿದೆ.

ಭಾರತದಲ್ಲಿ 2 ಪ್ರಮುಖ ಭಾಷಾ ಕುಟುಂಬಗಳು ಕಂಡುಬರುತ್ತವೆ. ಉತ್ತರ ಭಾರತದ ಇಂಡೋ ಆರ್ಯನ್ ಭಾಷೆಗಳು ಮತ್ತು ದಕ್ಷಿಣ ಭಾರತದ ದ್ರಾವಿಡನ್ ಭಾಷೆಗಳು. ದ್ರಾವಿಡ ಭಾಷಾ ಕುಟುಂಬದಲ್ಲಿ ಸುಮಾರು 73 ಭಾಷೆಗಳು ಕಂಡುಬರುತ್ತವೆ. ಅನ್ಷುಮಲಿ ಮುಖೋಪಾಧ್ಯಾಯ್ 2020ರಲ್ಲಿ ’ಆನ್ಸೆಶ್ಟ್ರಲ್ ದ್ರಾವಿಡಿಯನ್ ಲಾಂಗ್ವೇಜಸ್ ಇನ್ ಇಂಡಿಯನ್ ಸಿವಿಲೈಸೆಷನ್’ ಎಂಬ ಸಂಶೋಧನಾ ಪ್ರಬಂಧವನ್ನು ಪ್ರತಿಷ್ಠಿತ ಸ್ಪ್ರಿಂಗರ್ ಪತ್ರಿಕೆಯಲ್ಲಿ ಪ್ರಕಟಿಸಿ, ಸಿಂಧೂ ನಾಗರಿಕತೆಯ ಭಾಷಾ ಸಂಸ್ಕೃತಿಯ ಬೇರುಗಳು ಪ್ರೋಟೋ ದ್ರಾವಿಡಿಯನ್ ಭಾಷೆಯಲ್ಲಿದೆ ಎನ್ನುತ್ತಾರೆ. ಅಸ್ಕೋ ಪರ್ಫೋಲ್ ಎಂಬ ತಜ್ಞರ ಸಂಶೋಧನಾ ವರದಿಯ ಪ್ರಕಾರ ಸಿಂಧೂ ನಾಗರಿಕತೆಯಲ್ಲಿ ಉಪಯೋಗಿಸಿರುವ ಚಿಹ್ನೆಗಳು ಪ್ರೋಟೋ ದ್ರಾವಿಡಿಯನ್ ಶೈಲಿಗೆ ಹೊಂದಾಣಿಕೆಯಾಗುತ್ತವೆ. ಆದುದರಿಂದ ಪ್ರೊಟೋ ದ್ರಾವಿಡಿಯನ್ ಈಶಾನ್ಯ (ಸಿಂಧೂ ನಾಗರಕತೆಯ ಬಯಲು) ಭಾರತದಿಂದ ದಕ್ಷಿಣ ಭಾರತಕ್ಕೆ ಚಲಿಸಿದೆ ಎನ್ನುತ್ತಾರೆ ಹಲವು ಭಾಷಾ ತಜ್ಞರು. ಇದಕ್ಕೆ ಪೂರಕವಾಗಿ, ದ್ರಾವಿಡಿಯನ್ ಭಾಷೆಯು ಉತ್ತರ ಭಾರತದ ಬ್ರಹು (ಈಶಾನ್ಯ ಭಾರತ), ಕುಸ್, ಮಾಲ್ಟೋ (ವಾಯುವ್ಯ ಭಾರತ), ಕೊಲಮಿ ಮತ್ತು ಇತರೆ 5 ಭಾಷೆಗಳ (ಮಧ್ಯ ಭಾರತ) ಪ್ರಾಚೀನ ಬುಡಕಟ್ಟು ಜನಾಂಗದ ಜೊತೆ ಮಾತ್ರ ಹೊಂದಾಣಿಕೆ ಹೊಂದಿರುವುದು ಈ ಭಾಷೆಗಳ ಆಳ-ಅಗಲವನ್ನು ಸೂಚಿಸುತ್ತದೆ.

ಅಮೆರಿಕದ ತಳಿಶಾಸ್ತ್ರಜ್ಞ ದೇವಿಡ್ ರೀಷ್‌ರವರು ಭಾರತದೊಂದಿಗೆ ಜಂಟಿಯಾಗಿ ಕೈಗೊಂಡ ಸಂಶೋಧನೆಯಲ್ಲಿ ರಾಖಿಗರಿಯ (ಹರಪ್ಪ) ಉತ್ಖನನದಲ್ಲಿ ದೊರೆತ ಮಾನವನ ಪಳಿಯುಳಿಕೆಗಳ ವಂಶವಾಹಿಗಳನ್ನು (ಡಿಎನ್‌ಎ) ಅಧ್ಯಯನಕ್ಕೆ ಒಳಪಡಿಸಿದ್ದರು. ವಂಶವಾಹಿಗಳು ತಮಿಳುನಾಡಿನ ನೀಲಗಿರಿ ಬುಡಕಟ್ಟು ಜನಾಂಗಕ್ಕೆ (ದಕ್ಷಿಣ ಭಾರತದ ಜನಾಂಗಕ್ಕೆ) ಅತ್ಯಂತ ಸನಿಹ ಹೊಂದಾಣಿಕೆಯನ್ನು ಹೊಂದಿದೆ ಎಂಬುದನ್ನು ತಿಳಿಸಿದರು. ಡೇವಿಡ್ ರೀಷ್‌ರ ಪುಸ್ತಕದಲ್ಲಿ ಉತ್ತರ ಭಾರತದ ಎಲ್ಲಾ ಭಾಷೆಗಳ ಮೂಲ ಸಂಸ್ಕೃತ, ಅದರೆ ಸಂಸ್ಕೃತದ ಮೂಲ ಇಂಡೋ ಇರಾನಿಯನ್ ಭಾಷೆ ಎನ್ನುತ್ತಾರೆ. ಇಂಡೋ ಇರಾನಿಯನ್ ಭಾಷೆಗಳು ಯೂರೋಪ್ ಭಾಷೆಗಳ ಸೋದರತ್ವವನ್ನು ಹೊಂದಿವೆ, ಇವೆಲ್ಲವು ಸೇರಿ ಇಂಡೊ ಯೂರೋಪಿಯನ್ ಭಾಷೆಗಳ ಕುಟುಂಬ ರಚನೆಯಾಯಿತು ಎನ್ನುತ್ತಾರೆ. ಉತ್ತರ ಭಾರತದ ಭಾಷೆಗಳು ಇರಾನ್ ಮತ್ತು ಯೂರೋಪ್ ಭಾಷೆಗಳೊಂದಿಗೆ ಅಧಿಕ ಹೊಂದಾಣಿಕೆಯನ್ನು ಹೊಂದಿದ್ದು, ದ್ರಾವಿಡ ಭಾಷೆಗಳಲ್ಲಿ ದಕ್ಷಿಣ ಏಷಿಯ ಭಾಷೆಗಳೊಂದಿಗೆ ಮಾತ್ರ ಸ್ವಲ್ಪ ಹೊಂದಾಣಿಕೆ ಕಾಣುತ್ತವೆ. ಹಾಗಾಗಿ ದ್ರಾವಿಡ ಭಾಷೆಗಳು ತಮ್ಮದೇ ಸ್ವತಂತ್ರ, ವಿಭಿನ್ನ ರಚನೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವುದು ಹೆಮ್ಮೆಯ ವಿಚಾರ.

ಕೆಲವು ಸಂಶೋಧನೆಗಳ ಪ್ರಕಾರ ಕನ್ನಡ ತುಳು ಭಾಷೆಗಳು ಪ್ರೊಟೋ ದ್ರಾವಿಡಿಯನ್ ಭಾಷಾ ಕುಟುಂಬದಿಂದ ತಮಿಳಿಗಿಂತ ಮೊದಲೆ ಪ್ರತ್ಯೇಕಗೊಂಡವು ಎಂಬ ತರ್ಕವಿದೆ. ಹಳೆಗನ್ನಡದಲ್ಲಿರುವ, ಕನ್ನಡದ ಮೊದಲ ಹಲ್ಮಿಡಿ ಶಾಸನವು ಕ್ರಿ.ಶ 450ರ ಕಾಲಕ್ಕೆ ಸೇರಿರುವುದು ಭಾಷೆಯ ಪ್ರಾಚೀನತೆಯನ್ನು ತಿಳಿಸುತ್ತದೆ. ಬೆಂಜಮಿನ್ ಎಲ್ ರೈಸ್‌ರ ಸಂಶೋಧನೆಯ ಪ್ರಕಾರ ಸುಮಾರು ಕ್ರಿ.ಪೂ. 230ರ ಬ್ರಹ್ಮಗಿರಿಯ ಕಲ್ಲಿನ ಅಶೋಕ ಶಾಸನದಲ್ಲಿ ಕಂಡುಬರುವ ಇಸಿಲ ಎಂಬ ಪದದ ಅರ್ಥ ಕೋಟೆ ಎಂಬುದಾಗಿದ್ದು, ಇದೇ ಕನ್ನಡದ ಮೊದಲ ಪದ ದೊರಕಿರುವುದು ಎಂಬುದು ವಿದ್ವಾಂಸರ ವಾದ. ಇಲ್ಲಿನ ಉತ್ಖನನದಲ್ಲಿ ಸಿಕ್ಕಿರುವ ಅನೇಕ ವಸ್ತುಗಳ ಕಾಲ ಸುಮಾರು ಕ್ರಿ.ಪೂ. 1000ರಿಂದ 200ರ ಕಾಲದವು. ಇವೆಲ್ಲವು ಕನ್ನಡ ನೆಲದಲ್ಲಿ ಪ್ರಾಚೀನ ನಾಗರಿಕತೆ ಇತ್ತು ಎಂಬುದನ್ನು ನಾವು ಮನಗಾಣಬೇಕು.

ಹಿಂದಿ ಪದವು ಶಾಸ್ತ್ರೀಯ ಇರಾನಿಯನ್ ಪರ್ಶಿಯನ್ ಭಾಷೆಯ ಹೆಂಡಿ ಎಂಬ ಪದದಿಂದ ರೂಪುಗೊಂಡಿದೆ ಎಂಬುದು ತಜ್ಞರ ವಾದ. ಹಿಂದಿಯು ಇಂಡೋ ಆರ್ಯನ್ ಭಾಷೆಗೆ ಸೇರಿದೆ, ಇಂಡೋ ಆರ್ಯನ್ ಭಾಷೆ ಇಂಡೊ
ಇರಾನಿಯನ್ ಭಾಷೆಯ ಅಂಗವಾಗಿದೆ, ಇಂಡೋ ಇರಾನಿಯನ್ ಭಾಷೆಯು ಇಂಡೋ ಯೋರೋಪಿಯನ್ ಭಾಷೆಯ ಕುಟುಂಬಕ್ಕೆ ಸೇರಿದೆ. ದ್ರಾವಿಡ ಭಾಷೆಗಳು ಹೆಮ್ಮರವಾಗಿ ನಿಂತಿರುವ ಕಾಲದಲ್ಲಿ ಹಿಂದಿ ಒಂದು ಸಣ್ಣ ಕೂಸಾಗಿತ್ತು. ವಿಷಯ ಏನೇ ಇರಲಿ, ಈ ದೇಶದ ಪ್ರತಿ ಭಾಷೆಯನ್ನು ಗೌರವಿಸುವ ಮನೋಭಾವ ನಮ್ಮದಾಗಿರಬೇಕು.

2011ರ ಸೆನ್ಸಸ್‌ನ ಪ್ರಕಾರ ಹಿಂದಿ ಮಾತನಾಡುವವರ ಸಂಖ್ಯೆ ಶೇ.44 ಆಗಿದೆ ಎಂದು ನಾವು ಸಾಮಾನ್ಯವಾಗಿ ಓದುವ ಅಂಕಿಅಂಶಗಳು. ಆದರೆ, ಭಾರತ ಜನ ಭಾಷಾ ಸಮೀಕ್ಷೆಯ ಮಾಜಿ ಮುಖ್ಯಸ್ಥರು, ಪದ್ಮಶ್ರೀ ಮತ್ತು ಸಾಹಿತ್ಯ ಅಕಾಡೆಮಿ ಪುರಸ್ಕೃತರ ಆದಂತಹ ಜಿ ಎನ್ ದೇವಿ ಅವರ ಪ್ರಕಾರ 2011ರ ಹಿಂದಿ ಭಾಷೆಯ ಅಂಕಿಅಂಶ ಸುಳ್ಳು. ಭಾರತ 780ಕ್ಕೂ ಅಧಿಕ ಭಾಷೆಗಳನ್ನು, 86ಕ್ಕೂ ಅಧಿಕ ಲಿಪಿಗಳನ್ನು ಹೊಂದಿದ್ದು, ಹಿಂದಿ ಶೇ.44 ಜನ ಮಾತನಾಡಲು ಸಾಧ್ಯವಿಲ್ಲ, ಏಕೆಂದರೆ ಸಮೀಕ್ಷೆಯಲ್ಲಿ ಹಿಂದಿ ಭಾಷೆಯೊಳಗೆ ಉತ್ತರ ಭಾರತದ ವಿವಿಧ ರಾಜ್ಯಗಳ ಸುಮಾರು 50 ಸ್ಥಳೀಯ ಭಾಷೆಗಳನ್ನು ಸೇರಿಸಿ ಹಿಂದಿ ಭಾಷೆಯನ್ನು ಮಾತನಾಡುವ ಶೇಕಡಾವಾರನ್ನು ಉನ್ನತೀಕರಿಸಲಾಗಿದೆ ಎಂಬ ಆಘಾತಕಾರಿ ವಿಷಯವನ್ನು 2019ರಲ್ಲಿ ಬಹಿರಂಗಪಡಿಸಿದ್ದಾರೆ.

ತರ್ಕವೇನೇ ಇದ್ದರೂ ಸಹ, ಭಾರತ ಸಂವಿಧಾನದ 343 ವಿಧಿಯ ಪ್ರಕಾರ ದೇಶದ ಆಡಳಿತ ಭಾಷೆ ಹಿಂದಿ, ಲಿಪಿ ದೇವನಾಗರಿ. 1947ರಲ್ಲಿ ಕೇವಲ 15 ವರ್ಷಗಳ ಕಾಲಾವಧಿಗೆ ಮಾತ್ರ ಇಂಗ್ಲಿಷನ್ನು ಆಡಳಿತ ಭಾಷೆಯನ್ನಾಗಿರಿಸಲು ನಿರ್ಧಾರ ಕೈಗೊಳ್ಳಲಾಯಿತಾದರು, ಅನೇಕ ಹಿಂದಿಯೇತರ (ದಕ್ಷಿಣ ರಾಜ್ಯಗಳ) ರಾಜ್ಯಗಳ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ 1963ರ ಆಡಳಿತ ಭಾಷೆಯ ಕಾಯ್ದೆಯ ಮೂಲಕ ಇಂಗ್ಲಿಷನ್ನು ಸಹ ಆಡಳಿತ ಭಾಷೆಯನ್ನಾಗಿ ಮುಂದುವರಿಸಿತು. ಭಾರತ ಸರ್ಕಾರವು ಸಂವಿಧಾನಾತ್ಮಕವಾಗಿ ಗುರುತಿಸಿರುವ 22 ಪ್ರಾಂತೀಯ ಭಾಷೆಗಳಲ್ಲಿ ಹಿಂದಿ ಭಾಷೆಯು ಒಂದು. ಇನ್ನೂ 38ಕ್ಕೂ ಅಧಿಕ ಭಾಷೆಗಳು ಸಂವಿಧಾನದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿವೆ. ಆದುದರಿಂದ ಹಿಂದಿ ಮತ್ತು ಇಂಗ್ಲಿಷ್ ಭಾರತದ ಆಡಳಿತ ಭಾಷೆಗಳೆ ಹೊರತು ರಾಷ್ಟ್ರೀಯ ಭಾಷೆಗಳಲ್ಲ ಎಂಬುದನ್ನು ಅರಿತು ಭಾಷಾ ಹೇರಿಕೆಯಿಂದ ದೂರವಾಗಿ ಭಾಷಾ ಸಾಮರಸ್ಯದಿಂದ ಮುನ್ನಡೆಯೋಣ.

ಡಾ.ರಮೇಶ ವಿ

ಡಾ.ರಮೇಶ ವಿ
ಕಿರಿಯ ಸಂಶೋಧನಾ ಸಹಾಯಕರು ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಬಹುಜನ ಭಾರತ; ಇಂಗ್ಲಿಷ್ ಜೊತೆ ಹಿಂದಿಯೂ ಆಡಳಿತ ಭಾಷೆಯೇ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...