ಲಖಿಂಪುರ್ ರೈತರ ಹತ್ಯಾಕಾಂಡದ ವರದಿಯನ್ನು ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಬುಧವಾರ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದು, ಪ್ರಧಾನ ಆರೋಪಿಯಾಗಿ ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಪ್ರಧಾನ ಆರೋಪಿಯಾಗಿದ್ದಾನೆ.
ಸುಪ್ರೀಂಕೋರ್ಟ್ ಸರ್ಕಾರಕ್ಕೆ, “ವರದಿಯನ್ನು ಪಡೆಯುವುದಕ್ಕಾಗಿ ನಾವು ನಿನ್ನೆ ರಾತ್ರಿ 1 ಗಂಟೆಯವರೆಗೆ ಕಾಯುತ್ತಿದ್ದೆವು. ಕೊನೆಯ ಘಳಿಗೆಯಲ್ಲಿ ಸಲ್ಲಿಸಿದರೆ ಅದನ್ನು ನಾವು ಓದುವುದಾದರೂ ಹೇಗೆ? ಕನಿಷ್ಠ ಒಂದು ದಿನ ಮೊದಲು ವರದಿ ಸಲ್ಲಿಸಿ” ಎಂದು ಸುಪ್ರೀಂಕೋರ್ಟ್ ಹೇಳಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಅಮರೀಂದರ್ ಸಿಂಗ್ ಹೊಸ ಪಕ್ಷ: ರೈತ ಹೋರಾಟ ಬಗೆಹರಿದರೆ ಬಿಜೆಪಿ ಜೊತೆ ಮೈತ್ರಿ!
“ನೀವು 44 ಸಾಕ್ಷಿಗಳ ಪೈಕಿ ಕೇವಲ 4 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದ್ದೀರಿ, ಯಾಕೆ ಉಳಿದವರದ್ದು ದಾಖಲಿಸಿಲ್ಲ? ಎಷ್ಟು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಮತ್ತು ಎಷ್ಟು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ? ಪೊಲೀಸರು ಅವರನ್ನು ಪ್ರಶ್ನಿಸದ ಹೊರತು ನಾವು ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಿಲ್ಲ” ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಅಕ್ಟೋಬರ್ 8 ರಂದು ಎಂಟು ಜನರ “ಕ್ರೂರ” ಹತ್ಯೆಯಲ್ಲಿ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.
ಘಟನೆಯ ಕುರಿತು ಸಿಬಿಐ ಒಳಗೊಂಡಂತೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ಕೋರಿ ಇಬ್ಬರು ವಕೀಲರು ಸಿಜೆಐಗೆ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಒಕ್ಕೂಟ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ಮಾಡುತ್ತಿದ್ದ ಗುಂಪು, ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸಿ ವಾಪಾಸಾಗುತ್ತಿದ್ದಾಗ, ಲಖಿಂಪುರ್ ಖೇರಿಯಲ್ಲಿ ನಾಲ್ಕು ರೈತರ ಮೇಲೆ ಕಾರನ್ನು ಹರಿಸಲಾಗಿತ್ತು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಅ.26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್


