ಕರ್ನಾಟಕದಲ್ಲಿ ಜಾತಿ ಶಕ್ತಿ ಅಪಾಯಕಾರಿಯಾಗಿ ಮತ್ತೊಮ್ಮೆ ಎದ್ದುನಿಂತಿದೆ. ಜಾತಿ-ಉಪಜಾತಿಗಳ ಆಧಾರದಲ್ಲಿ ಮೀಸಲಾತಿ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಕರ್ನಾಟಕದ ಪ್ರಬಲ ಜಾತಿಗಳೆಲ್ಲಾ ಗಟ್ಟಿ ಧ್ವನಿಯಲ್ಲಿ ಮುಂದಿಡುತ್ತಿವೆ. ಇಲ್ಲಿ ಎರಡು ವಿಷಯಗಳಿವೆ. ಒಂದು ಮೀಸಲಾತಿಯದ್ದು. ಇನ್ನೊಂದು ಮೀಸಲಾತಿಯ ನೆಪ ಮುಂದಿರಿಸಿಕೊಂಡು ಕಟ್ಟಲಾಗುತ್ತಿರುವ ರಾಜಕೀಯ ಹಿತಾಸಕ್ತಿಗಳ ವ್ಯೂಹ ರಚನೆಯದ್ದು. ಮೇಲ್ನೋಟಕ್ಕೆ ಮೀಸಲಾತಿಯ ಪ್ರಶ್ನೆ ಜಟಿಲ ಅಂತ ಅನ್ನಿಸಬಹುದು. ಹಾಗೇನಿಲ್ಲ. ಮೀಸಲಾತಿಯ ವಿಚಾರ ಹೆಚ್ಚುಕಡಿಮೆ ಸ್ಪಷ್ಟವಾಗಿಯೇ ಇದೆ. ಇಲ್ಲಿ ನಿಜವಾಗಿ ಜಟಿಲವಾಗಿಯೂ, ನಿಗೂಢವಾಗಿಯೂ, ಅಪಾಯಕಾರಿಯಾಗಿಯೂ ಹೊಂಚು ಹಾಕುತ್ತಿರುವುದು ಮೀಸಲಾತಿಯ ಬೇಡಿಕೆಯ ಹಿಂದಿನ ಸಾಮಾಜಿಕ-ರಾಜಕೀಯ ಹಿತಾಸಕ್ತಿಗಳು. ಅವುಗಳನ್ನು ಬಯಲಿಗೆಳೆಯುವ ಮಾಧ್ಯಮ ಶಕ್ತಿ, ಅವುಗಳಿಗೆ ಮುಖಾಮುಖಿಯಾಗಬೇಕಾಗಿದ್ದ ರಾಜಕೀಯ ಶಕ್ತಿ, ಅವುಗಳನ್ನು ತಟಸ್ಥಗೊಳಿಸಲು ಶ್ರಮಿಸಬೇಕಾಗಿದ್ದ ಆಧ್ಯಾತ್ಮಿಕ ಶಕ್ತಿ ಇತ್ಯಾದಿಗಳೆಲ್ಲವೂ ಕರ್ನಾಟಕದ ಪಾಲಿಗೆ ಹೆಚ್ಚುಕಡಿಮೆ ಸತ್ತೇ ಹೋಗಿವೆ.
ಮೀಸಲಾತಿಯದ್ದು ಅಷ್ಟೇನೂ ಜಟಿಲವಲ್ಲದ ಪ್ರಶ್ನೆ ಅಲ್ಲ ಅಂತ ಮೇಲೆ ಹೇಳಿದ್ದಕ್ಕೆ ಕಾರಣವಿದೆ ಮತ್ತು ಆ ಕಾರಣ ಹೀಗಿದೆ. ಕರ್ನಾಟಕದಲ್ಲೀಗ ಎಲ್ಲಾ ಜಾತಿಗಳಿಗೂ ಮೀಸಲಾತಿ ಇದೆ. ಕರ್ನಾಟಕದಲ್ಲಿ ಮೀಸಲಾತಿಗೆ ಅರ್ಹ ಎನ್ನುವ ಪಟ್ಟಿಯಲ್ಲಿ (ಪರಿಶಿಷ್ಟ ಜಾತಿ/ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳು) ಹೆಚ್ಚುಕಡಿಮೆ ಶೇಕಡಾ ತೊಂಬತ್ತೊಂಬತ್ತರಷ್ಟು ಜಾತಿಗಳು (ಧಾರ್ಮಿಕ ಅಲ್ಪಸಂಖ್ಯಾತರನ್ನೂ ಒಳಗೊಂಡು) ಸೇರಿ ಎಷ್ಟೋ ಸಮಯವಾಗಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯದ ಒಂದು ಸಣ್ಣ ಪ್ರಮಾಣದ ಜಾತಿಗಳಿಗೆ ಈಗ ಕೇಂದ್ರ ಸರಕಾರ ಘೋಷಿಸಿರುವ ಆರ್ಥಿಕ ಹಿಂದುಳಿದಿರುವಿಕೆಯ ಆಧಾರದ ಮೀಸಲಾತಿ ಇದೆ. ಎಂಬಲ್ಲಿಗೆ ಮೀಸಲಾತಿ ಎನ್ನುವುದು ಈಗ ಸರ್ವತ್ರವಾಯಿತು. ಆದ ಕಾರಣ ಈಗ ಯಾವುದೇ ಜಾತಿ ಪಂಗಡದವರು ನಮ್ಮನ್ನು ಮೀಸಲಾತಿಯಿಂದ ಹೊರಗಿಡಲಾಗಿದೆ ಎಂಬ ಬೇಡಿಕೆ ಇಡುವ ಪ್ರಮೇಯವೇ ಇಲ್ಲ.
ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದೂ ಹಲವಾರು ಸ್ವತಂತ್ರ ಜಾತಿಗಳು ಇನ್ನೂ ಅದರಿಂದ ಯಾವುದೇ ಪ್ರಯೋಜನ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ಮೀಸಲಾತಿಯ ಒಳಗೂ ಸ್ಪರ್ಧೆ ಇದೆ. ಆ ಸ್ಪರ್ಧೆಯಲ್ಲಿ ಅವರ ಪಟ್ಟಿಯಲ್ಲಿ ಸೇರಿ ಹೋಗಿರುವ ಇತರ ಬಲಿಷ್ಠ ಜಾತಿಯವರ ಜತೆಗೆ ಸೆಣಸುವ ಸಾಮರ್ಥ್ಯ ಈ ಸಣ್ಣ ಜಾತಿಗಳಲ್ಲಿ ಇಲ್ಲ. ಒಂದುವೇಳೆ ಅಂತಹ ಸಣ್ಣಪುಟ್ಟ ಧ್ವನಿ ಇಲ್ಲದ ಜಾತಿಗಳು ಮೀಸಲಾತಿ ನೀತಿಯಲ್ಲಿ ಬದಲಾವಣೆ ಅಥವಾ ಸುಧಾರಣೆ ಕೇಳಿದರೆ ಅದಕ್ಕೆ ಅರ್ಥ ಇದೆ. ಹಾಗೆ ಮಾಡುವಾಗಲೂ ಅವರ ಬಳಿ ತಮ್ಮ ಜಾತಿಗೆ ಈತನಕ ಮೀಸಲಾತಿಯಿಂದ ಏನು ಸಿಗಬೇಕಿತ್ತೋ ಅದು ಸಿಕ್ಕಿಲ್ಲ ಎನ್ನುವ ನಿಖರವಾದ ಪ್ರತ್ಯಕ್ಷ-ಪ್ರಮಾಣ ಅಂಕಿ-ಅಂಶ ಇರಬೇಕು. ಈಗ ಕರ್ನಾಟಕದಲ್ಲಿ ಮೀಸಲಾತಿಗೆ ಬೇಡಿಕೆ ಇಟ್ಟಿರುವ ಬಹುತೇಕ ಪ್ರಬಲ ಜಾತಿ-ಉಪಜಾತಿಗಳು ಯಾವುದೇ ದೃಷ್ಟಿಯಿಂದ ನೋಡಿದರೂ ಮೀಸಲಾತಿಯಿಂದ ಯಾವ ಪ್ರಯೋಜನವನ್ನು ಪಡೆಯಬೇಕಿತ್ತೋ ಆ ಪ್ರಯೋಜನವನ್ನು ಮೀಸಲಾತಿಯಿಂದಾಗಿ ಅಥವಾ ತಮ್ಮ ಸ್ವಂಥ ಬಲದಿಂದಾಗಿ ಪಡೆಯದವರೂ ಅಲ್ಲ, ಪಡೆಯಲಾಗದವರೂ ಅಲ್ಲ. ಅವರ ಬೇಡಿಕೆಗೆ ಪೂರಕವಾದ ಅಂಕಿ-ಅಂಶಗಳೂ ಇಲ್ಲ. ಹಾಗಿರುವಾಗ ವಿಷಯ ಬಹಳ ಸ್ಪಷ್ಟವಾಗಿದೆ. ಈ ಸಮುದಾಯಗಳು ಮುಂದಿರಿಸಿರುವ ಮೀಸಲಾತಿ ಸಂಬಂಧೀ ಬೇಡಿಕೆಗಳಲ್ಲಿ ಸಾಮಾಜಿಕ ನ್ಯಾಯದ ಪ್ರಶ್ನೆ ಇಲ್ಲ.

ಮೀಸಲಾತಿಯ ವಿಚಾರದಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮೀಸಲಾತಿ ಎಂಬುದು ಬಡತನ ನಿರ್ಮೂಲನಾ ಯೋಜನೆ ಅಲ್ಲ. ಚಾರಿತ್ರಿಕವಾಗಿ ಅವಕಾಶ ವಂಚಿತ ವರ್ಗಗಳಿಗೆ, ಈಗ ಇರುವ ಪ್ರಬಲ ವರ್ಗಗಳೊಂದಿಗೆ ಸ್ಪರ್ಧಿಸಿ ಅಧಿಕಾರ ಮತ್ತು ಅರ್ಥ ವ್ಯವಸ್ಥೆಯಲ್ಲೊಂದಷ್ಟು ಅವಕಾಶ ಪಡೆಯುವುದು ಅಸಾಧ್ಯ. ಅಂತವರಿಗೆ ನೆರವು ಒದಗಿಸಲು ಮೀಸಲಾತಿ ಇರುವುದು. ಬಡತನ ನಿರ್ಮೂಲನ ಯೋಜನೆಗೆ ಆರ್ಥಿಕ ಹಿಂದುಳಿದಿರುವಿಕೆ ಆಧಾರ ಆಗಿರಬೇಕು ಎನ್ನುವುದರಲ್ಲಿ ಅರ್ಥವಿದೆ. ಆದರೆ ಮೀಸಲಾತಿಗೆ ಆರ್ಥಿಕ ಹಿಂದುಳಿದಿರುವಿಕೆ ಒಂದೇ ಮಾನದಂಡವಾಗಬಾರದು. ಇದು ಚರ್ಚಿಸುವ ವಿಷಯವಲ್ಲ. ಇದು ಎಂದೋ ಇತ್ಯರ್ಥವಾದ ಮತ್ತು ನ್ಯಾಯಾಲಯಗಳು ಮತ್ತೆ ಮತ್ತೆ ಒತ್ತಿ ಹೇಳಿದ ವಿಷಯ. ಇದು ಗೊತ್ತಿದ್ದೂ ಶೇ.10 ಮೀಸಲಾತಿಯನ್ನು ಕೇಂದ್ರ ಸರಕಾರ ಆರ್ಥಿಕ ಹಿಂದುಳಿದುರುವಿಕೆಯ ಮಾನದಂಡದ ಮೇಲೆ ನೀಡಿದಾಗ, ದೇಶಕ್ಕೆ ದೇಶವೇ ಮೌನ ವಹಿಸಿದ್ದ ರಾಜಕೀಯದ ಮುಂದುವರಿದ ಭಾಗವಾಗಿ ಈಗಿನ ಮೀಸಲಾತಿ ಚಳವಳಿಯನ್ನೂ ನಾವು ನೋಡಬೇಕಾಗುತ್ತದೆ. ಮೀಸಲಾತಿ ಸಾಮಾಜಿಕ ನ್ಯಾಯದ ಅಸ್ತ್ರವಾಗಿ ಉಳಿಯದೆ, ರಾಜಕೀಯ ತುಷ್ಟೀಕರಣದ ತಂತ್ರವಾಗುತ್ತಿರುವ ಪ್ರಕ್ರಿಯೆಯೊಂದು ದೇಶದಲ್ಲಿ ನಡೆಯುತ್ತಿದೆ. ಅದೀಗ ಕರ್ನಾಟಕದಲ್ಲಿ ತನ್ನದೇ ಆದ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ.
ಈಗ ಮೀಸಲಾತಿ ಹೆಚ್ಚಳ ಅಥವಾ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಲ್ಲಟ – ಇತ್ಯಾದಿಗಳನ್ನು ಕೇಳುತ್ತಿರುವ ಜಾತಿಗಳ ಬೇಡಿಕೆ ಸರಿ ಇದೆಯೇ ಇಲ್ಲವೇ ಅಂತ ನಿರ್ಧರಿಸುವುದಕ್ಕೆ ಇರುವ ಮಾಪನ ಒಂದೇ. ಅದು ಆಯಾ ಜಾತಿಯವರು ಅಧಿಕಾರ ವ್ಯವಸ್ಥೆಯಲ್ಲಿ ಮತ್ತು ಅರ್ಥವ್ಯವಸ್ಥೆಯಲ್ಲಿ ಎಷ್ಟು ಪಾಲು ಪಡೆದಿದ್ದಾರೆ ಎನ್ನುವ ಪ್ರಶ್ನೆ. ಆಯಾ ಜಾತಿಗಳಿಗೆ ಸಂಬಂಧಿಸಿದ ಜನಪ್ರತಿನಿಧಿಗಳು ಎಷ್ಟಿದ್ದಾರೆ, ಮಂತ್ರಿಗಳು ಎಷ್ಟಿದ್ದಾರೆ, ಉನ್ನತ ಸರಕಾರೀ ಸೇವೆಯಲ್ಲಿ ಎಷ್ಟು ಮಂದಿ ಇದ್ದಾರೆ, ಬಹಳ ಉನ್ನತ ಅಂತ ಪರಿಗಣಿಸಲಾಗದೆ ಹೋದರೂ ಆಯಕಟ್ಟಿನ ಸ್ಥಾನದಲ್ಲಿ (ಉದಾಹರಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಇತ್ಯಾದಿ ಹುದ್ದೆಗಳು) ಎಷ್ಟು ಮಂದಿ ಇದ್ದಾರೆ ಎನ್ನುವ ಪ್ರಶ್ನೆ. ಗಣನೀಯ ಸಂಖ್ಯೆಯಲ್ಲಿ ಈ ಎಲ್ಲಾ ಸ್ಥಾನಗಳನ್ನು ಪಡೆದ ಯಾವ ಜಾತಿಗೂ ಮೀಸಲಾತಿ ಹೆಚ್ಚಿಸಿ ಅಂತ ಕೇಳುವ ಹಕ್ಕಿಲ್ಲ. ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಈ ಸ್ಥಾನಗಳ ಸಂಖ್ಯೆಯನ್ನು ಅವರ ಜಾತಿಯವರು ಪಡೆದಿದ್ದಾರೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಾಗುವುದಿಲ್ಲ. ಅದೇ ರೀತಿ ಅರ್ಥವ್ಯವಸ್ಥೆಯಲ್ಲಿ ಇವರ ಸ್ಥಾನವೇನು ಎನ್ನುವುದು ಮುಖ್ಯವಾಗುತ್ತದೆ. ಒಂದುವೇಳೆ ಈ ಜಾತಿಗಳ ಮಂದಿ ಸಾಕಷ್ಟು ಪ್ರಮಾಣದ ಭೂಮಿ ಹೊಂದಿದ್ದಾರೆ, ದೊಡ್ಡ ಕೈಗಾರಿಕೆಗಳ ಒಡೆತನ ಹೊಂದಿದ್ದಾರೆ, ಅಥವಾ ದೊಡ್ಡ ದೊಡ್ಡ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದಾದರೆ ಅಂತವರಿಗೆ ಕೂಡಾ ಮೀಸಲಾತಿಯಲ್ಲಿ ಪಾಲು ಕೇಳುವ ಅಥವಾ ಇರುವ ಪಾಲಿನಲ್ಲಿ ಹೆಚ್ಚಳ ಕೇಳುವ ನೈತಿಕ ಹಕ್ಕು ಇಲ್ಲ.
ಒಂದು ಪ್ರಶ್ನೆ ಬರುತ್ತದೆ. ಆರ್ಥಿಕವಾಗಿ ಬಲಿಷ್ಠರಾಗಿದ್ದು, ಅಧಿಕಾರ ವ್ಯವಸ್ಥೆಯಲ್ಲಿ ಪಾಲು ಇಲ್ಲದಿದ್ದರೆ ಅದು ಅಸಮತೋಲನ ಅಲ್ಲವೇ? ಅಂತಹ ವರ್ಗಗಳು ಅಧಿಕಾರದಲ್ಲಿ ಪ್ರಾತಿನಿಧ್ಯ ಬೇಕು ಎಂದು ಮೀಸಲಾತಿಗಾಗಿ ಬೇಡಿಕೆ ಇಟ್ಟರೆ ತಪ್ಪೇನು ಅಂತ ಅನ್ನಿಸಬಹುದು. ಮೇಲ್ನೋಟಕ್ಕೆ ಸರಿ ಅಂತ ಕಾಣುವ ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಮೊದಲು ಇನ್ನೊಂದು ಅಂಶವನ್ನು ಕಂಡುಕೊಳ್ಳಬೇಕಿದೆ. ಆರ್ಥಿಕವಾಗಿ ಸಬಲವಾಗಿ ಅಧಿಕಾರದಲ್ಲಿ ಪಾಲು ಇಲ್ಲದೆ ಇದ್ದ ಒಂದು ಜಾತಿಯವರು ಮೀಸಲಾತಿ ಕೇಳಿದರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಅವರು ಈಗಾಗಲೇ ಅಧಿಕಾರದಲ್ಲಿ ಪಾಲು ಪಡೆಯದ್ದಕ್ಕೆ ಏನು ಕಾರಣ ಎನ್ನುವ ಪ್ರಶ್ನೆಗೆ ಮೊದಲು ಉತ್ತರಿಸಬೇಕಾಗುತ್ತದೆ. ಹಲವಾರು ಜಾತಿಗಳು ಸ್ವಯಂ ಇಚ್ಛೆಯಿಂದ ಸಂಬಳ ಪಡೆಯುವ ನೌಕರಿಗಳನ್ನು ಬಯಸುವುದಿಲ್ಲ. ಒಂದುವೇಳೆ ಬಯಸಿದ್ದರೆ ಅವರು ಅದನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು.
ಕರಾವಳಿ ಕರ್ನಾಟಕದಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಕೊಂಡ ಒಂದು ಜಾತಿಯವರು ಸರಕಾರೀ ಉದ್ಯೋಗದಲ್ಲಿ ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಹೀಗಾಗಿರುವುದು ತಾರತಮ್ಯದಿಂದಲ್ಲ ಅಥವಾ ಅವರಿಗೆ ಅಂತಹ ಅವಕಾಶಗಳನ್ನು ಪಡೆದುಕೊಳ್ಳಲು ಚಾರಿತ್ರಿಕವಾಗಿ ಸಾಧ್ಯವಿರಲಿಲ್ಲ ಎನ್ನುವ ಕಾರಣಕ್ಕಲ್ಲ. ಭೂಮಾಲಿಕರ ಎಷ್ಟೋ ವರ್ಗಗಳು ಕೂಡಾ ಒಂದು ಕಾಲದಲ್ಲಿ ಸರಕಾರಿ ನೌಕರಿ ಬೇಡ ಎಂದು ತೀರ್ಮಾನಿಸಿದ ಕಾರಣಕ್ಕೆ ಅವನ್ನು ಪಡೆದಿರಲಾರವು. ಆ ಕಾರಣಕ್ಕಾಗಿ ಈಗ ಮೀಸಲಾತಿ ಕೇಳಿದರೆ ಅದನ್ನು ಒಪ್ಪಲಾಗದು. ಈ ತನಕ ಸಾಮಾಜಿಕ ತಾರತಮ್ಯದ ಕಾರಣಕ್ಕೆ ಯಾರು ಅವಕಾಶವಂಚಿತರಾಗಿ ಉಳಿದಿದ್ದಾರೆ ಮತ್ತು ಇಂದಿನ ಪರಿಸ್ಥಿತಿಯಲ್ಲೂ ಕೂಡಾ ಮೀಸಲಾತಿ ಇಲ್ಲದೆಹೋದರೆ ಅವಕಾಶಗಳನ್ನು ಪಡೆದುಕೊಳ್ಳಲು ಯಾರು ಅಶಕ್ತರಾಗಿದ್ದಾರೆ ಅವರು ಮಾತ್ರ ಮೀಸಲಾತಿ ಕೇಳುವುದರಲ್ಲಿ ಅರ್ಥವಿದೆ. ಎಷ್ಟೋ ಜಾತಿಗಳು ಇಂದಿಗೂ ಮೀಸಲಾತಿ ಇಲ್ಲದೆ ಸಾಮಾನ್ಯ ವರ್ಗದಲ್ಲಿ (general category) ಸ್ಪರ್ಧಿಸಿದರೆ ಅವಕಾಶ ಪಡೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮೀಸಲಾತಿ ನೀಡಬೇಕಾಗಿರುವುದು ಅಂತವರಿಗೆ ಮಾತ್ರ.
ಸಾಮಾನ್ಯ ವರ್ಗದಲ್ಲಿ ಈಗ ಆಯ್ಕೆಯಾಗುತ್ತಿರುವ ಅಭ್ಯರ್ಥಿಗಳಲ್ಲಿ ಯಾವ ವರ್ಗದವರು ಎಷ್ಟೆಷ್ಟು ಮಂದಿ ಇದ್ದಾರೆ ಎನ್ನುವುದು ಯಾವ ಯಾವ ಜಾತಿಯವರು ಎಷ್ಟೆಷ್ಟು ಮೀಸಲಾತಿಗೆ ಅರ್ಹರು ಎನ್ನುವುದಕ್ಕೆ ಇನ್ನೊಂದು ಆಧಾರವಾಗಬಹದು. ಎಲ್ಲದಕ್ಕಿಂತಲೂ ಮುಖ್ಯವಾಗಿ, ಒಂದು ಜಾತಿಯಲ್ಲಿ ಒಂದು ಸಾರ್ವಭೌಮ ಸರಕಾರವನ್ನು ನಡುಗಿಸಬಲ್ಲ ಮಠಾಧೀಶರುಗಳು ಇದ್ದಾರೆ ಎಂದಾದರೆ ಅದು ಕೂಡಾ ಆ ಜಾತಿಯ ಪ್ರಾಬಲ್ಯದ ಸಂಕೇತವಾಗುತ್ತದೆ ಮತ್ತು ಆ ಜಾತಿ ಮೀಸಲಾತಿಗೆ ಅರ್ಹವೇ ಎನ್ನುವುದನ್ನು ನಿರ್ಧರಿಸುವ ಒಂದು ಅಂಶವೂ ಆಗುತ್ತದೆ ಮತ್ತು ಆಗಬೇಕು. ಈ ಹಿನ್ನೆಲೆಯಲ್ಲಿ ನೋಡಿದರೆ ಈಗ ಕರ್ನಾಟಕದಲ್ಲಿ ಮೀಸಲಾತಿ ಹೆಚ್ಚಳ ಕೇಳುತ್ತಿರುವ ಯಾವ ವರ್ಗದವರ ಬೇಡಿಕೆಗೂ ಯಾವ ಅರ್ಥವೂ ಕಾಣಿಸುತ್ತಿಲ್ಲ. ಈ ಹೋರಾಟಗಳಿಗೆ ಯಾವುದೇ ರೀತಿಯ ಅಂಕಿ-ಅಂಶ ಆಧಾರಿತ ವಾಸ್ತವದ ಆಧಾರವಿಲ್ಲ.
ಇವರು ಅಧಿಕಾರ ವ್ಯವಸ್ಥೆಯಲ್ಲಿ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಕಬ್ಜೆ ಮಾಡಿಕೊಂಡವರೇ ಆಗಿದ್ದಾರೆ. ಯಾರೋ ಯಾವುದೋ ಜಾತಿಯ ನಾಯಕರಾಗಿ ಹೊರಹೊಮ್ಮಲು, ಯಾರೋ ಯಾವುದೋ ಜಾತಿಯ ಓಟು ಪಡೆದುಕೊಳ್ಳಲು ವಿವಿಧ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಬೇಕು ಎನ್ನುವ ಬೇಡಿಕೆಗಳನ್ನು ಈಗ ಮುಂದಿಡಲಾಗುತ್ತಿದೆ. ಒಂದು ಜಾತಿಯವರು ಇಂತಹ ಬೇಡಿಕೆ ಮುಂದಿಟ್ಟಾಗ ಇನ್ನೊಂದು ಜಾತಿಯವರು ಅದನ್ನು ಕೇಳಲಾರಂಭಿಸುತ್ತಾರೆ. ಅಥವಾ ಪ್ರತಿಭಟಿಸಲಾರಂಭಿಸುತ್ತಾರೆ. ಯಾಕೆಂದರೆ, ಒಂದು ಜಾತಿಯವರ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದಾದರೆ ಇನ್ಯಾರದ್ದೋ ಮೀಸಲಾತಿ ಪ್ರಮಾಣವನ್ನು ಕಡಿಮೆ ಮಾಡಬೇಕಾಗುತ್ತದೆ. ಉದಾಹರಣೆಗೆ ಲಿಂಗಾಯತರು, ಹಿಂದುಳಿದ 2ಎ ಪ್ರವರ್ಗದಲ್ಲಿ ಪಾಲು ಕೇಳುವುದನ್ನು ಆ ಪ್ರವರ್ಗದಲ್ಲಿ ಈಗಾಗಲೇ ಇರುವ ಹಿಂದುಳಿದ ವರ್ಗದವರು ಪ್ರತಿಭಟಿಸಲಾರಂಭಿಸಿದ್ದಾರೆ. ಅಲ್ಲಿಗೆ ಎಲ್ಲವೂ ಗೋಜಲುಗೋಜಲಾಗಿ ಕಾಣಿಸಲಾರಂಭಿಸುತ್ತದೆ.
ಈ ರೀತಿ ಮೀಸಲಾತಿಯ ಕುರಿತು ಒಟ್ಟು ಗೊಂದಲ ನಿರ್ಮಿಸುವ ಉದ್ದೇಶ ಹೊಂದಿದ ಕೆಲ ರಾಜಕೀಯ ಹಿತಾಸಕ್ತಿಗಳೇ ಈಗ ಕಾಣಿಸಿಕೊಂಡಿರುವ ಮೀಸಲಾತಿ ಹೋರಾಟಗಳನ್ನು ಹುಟ್ಟುಹಾಕಿದ್ದಾರೆ ಎನ್ನುವ ಒಂದು ಅಭಿಪ್ರಾಯವಿದೆ. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಸಮಗ್ರವಾಗಿ ಅವಲೋಕಿಸಿದರೆ ಈ ಅಭಿಪ್ರಾಯವನ್ನು ಅಲ್ಲಗಳೆಯಲಾಗದು. ಮೀಸಲಾತಿಯನ್ನು ನೇರವಾಗಿ ವಿರೋಧಿಸಲಾಗದೆ ಅದರ ವಿರುದ್ಧ ಪರೋಕ್ಷವಾಗಿ ಅಭಿಪ್ರಾಯ ರೂಪಿಸುವ ಕೆಲಸವೊಂದು ಬಹಳ ಕಾಲದಿಂದ ನಡೆಯುತ್ತಲೇ ಇತ್ತು. ಇಂಟರ್ನೆಟ್ ಯುಗ ಆರಂಭವಾದ ನಂತರವಂತೂ ತಂತ್ರಜ್ಞಾನ ಅನುವು ಮಾಡಿಕೊಟ್ಟ ಅನಾಮಧೇಯತೆಯನ್ನು ಬಳಸಿಕೊಂಡು ಮೀಸಲಾತಿಯ ಬಗ್ಗೆ ಇನ್ನಿಲ್ಲದ ಅಪಪ್ರಚಾರ ನಡೆಸಲಾಯಿತು. ಅದರಿಂದ ಏನೂ ಪ್ರಯೋಜನ ಇಲ್ಲ ಎಂದು ಅರಿವಾಗುತ್ತಿದ್ದಂತೆ ಈಗ ಹೊಸತೊಂದು ತಂತ್ರಗಾರಿಕೆ ಆರಂಭವಾಗಿದೆ. ಅದು ಹೆಚ್ಚು ಹೆಚ್ಚು ಪ್ರಮಾಣದ ಮೀಸಲಾತಿಯನ್ನು ಎಲ್ಲರೂ ಎಲ್ಲೆಂದರಲ್ಲಿ, ಯಾವ ಆಧಾರವೂ ಇಲ್ಲದೆ ಭಾವನಾತ್ಮಕ ಹಿನ್ನೆಲೆಯಲ್ಲಿ ಕೇಳುವುದು; ಅದರ ಸುತ್ತ ಸಾಮಾನ್ಯ ಜನರನ್ನು ಪ್ರಚೋದಿಸುವುದು. ಹೀಗೆ ಸಂಪೂರ್ಣ ಗೊಂದಲಮಯವಾದ ಒಂದು ಸನ್ನಿವೇಶ ಸೃಷ್ಟಿಸಿ ಮೀಸಲಾತಿಯಲ್ಲಿ ತಮಗೆ ಬೇಕಾದ ಒಂದು ಬದಲಾವಣೆ ತರಲು ವೇದಿಕೆ ಸೃಷ್ಟಿಸುವುದೇ ಈ ಎಲ್ಲ ಹೋರಾಟಗಳನ್ನು ಹುಟ್ಟುಹಾಕಿದವರ ಮೂಲ ಉದ್ದೇಶ ಇದ್ದಂತೆ ಕಾಣಿಸುತ್ತದೆ.
ಮೀಸಲಾತಿಯನ್ನು ತಲೆಬುಡ ಇಲ್ಲದೆ ವಿರೋಧಿಸುವವರು ಒಂದು ವಿಚಾರ ಅರ್ಥಮಾಡಿಕೊಳ್ಳಬೇಕು. ಈ ದೇಶದಲ್ಲಿ ಮೀಸಲಾತಿಯಿಂದಾಗಿ ಅದನ್ನು ಪಡೆದ ವರ್ಗಕ್ಕೆ ಎಷ್ಟು ಲಾಭವಾಯಿತೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ಮೀಸಲಾತಿ ಇದ್ದದ್ದಕ್ಕೆ ನಮ್ಮ ಅಧಿಕಾರವ್ಯವಸ್ಥೆಯಲ್ಲಿ ಇಷ್ಟಾದರೂ ಈ ವರ್ಗಗಳು ಒಳಗೊಳ್ಳುವುದಕ್ಕೆ ಸಾಧ್ಯವಾಗಿದೆ. ಈ ಅಲ್ಪಪ್ರಮಾಣದ ಹಂಚಿಕೆಯಾದರೂ ನಡೆಯದೆ ಹೋಗಿದ್ದರೆ ಅಧಿಕಾರ ವ್ಯವಸ್ಥೆಯಲ್ಲಿ ದೊಡ್ಡದೊಂದು ಅಸಮತೋಲನ-ಅಸಮಾನತೆ ಸೃಷ್ಟಿಯಾಗಿ ಅದು ಹುಟ್ಟುಹಾಕಬಹುದಾಗಿದ್ದ ರೋಷದಿಂದ ಸಮಾಜದಲ್ಲಿ ಭೀಕರ ಸಂಘರ್ಷವೊಂದು ನಡೆದುಹೋಗುತಿತ್ತು. ಭಾರತ ಒಂದು ಸಮಾಜವಾಗಿ-ಒಂದು ದೇಶವಾಗಿ ಇನ್ನೂ ಒಂದಾಗಿರುವಲ್ಲಿ ಮೀಸಲಾತಿಯ ಪಾತ್ರವನ್ನು ಕಡೆಗಣಿಸುವ ತಪ್ಪನ್ನು ಯಾರೂ ಮಾಡಬಾರದು.
ಇಷ್ಟೆಲ್ಲಾ ತಿಳಿದೇ ಸಂವಿಧಾನ ನಿರ್ಮಾತೃಗಳು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿರುವುದು. ಅದನ್ನು ವಿರೋಧಿಸುವುದು ಎಂದರೆ ಸಂವಿಧಾನ ನಿರ್ಮಾತೃಗಳ ಯೋಚನಾ ಶಕ್ತಿಯನ್ನು ಮತ್ತು ಅವರ ನೈತಿಕತೆಯನ್ನು ಪ್ರಶ್ನಿಸಿದ ಹಾಗೆ. ಅದೇ ರೀತಿಯಲ್ಲಿ ಬೇಕಾಬಿಟ್ಟಿಯಾಗಿ ಮೀಸಲಾತಿಯ ಹೆಚ್ಚಳವನ್ನು ಮತ್ತು ವಿವಿಧ ರೀತಿಯ ಮಾರ್ಪಾಡುಗಳನ್ನು ಕೇಳುವವರೂ ಸಂವಿಧಾನ ನಿರ್ಮಾತೃಗಳಿಗೆ ಅಪಚಾರ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಯಾವ ಆಧಾರದಲ್ಲಿ ಮೀಸಲಾತಿ ಸಿಗಬೇಕು ಎಂದು ಹೇಳಲಾಗಿದೆಯೋ, ಅದೇ ಆಧಾರದಲ್ಲಿ ಮಾತ್ರ ಮೀಸಲಾತಿಯನ್ನು ಕೇಳುವುದರಲ್ಲಿ ಮತ್ತು ನೀಡುವುದರಲ್ಲಿ ಅರ್ಥವಿದೆ. ಇನ್ಯಾವುದೇ ಆಧಾರದಲ್ಲಿ ಅದನ್ನು ಕೇಳುವುದು ಮತ್ತು ನೀಡುವುದು ಅಪ್ಪಟ ತುಷ್ಟೀಕರಣ ರಾಜಕೀಯ.
ಕೊನೆಯದಾಗಿ ಇನ್ನೊಂದು ವಿಷಯ. ಜಾತಿ ಇದ್ದ ಕಾರಣಕ್ಕೆ ಮೀಸಲಾತಿ ಬೇಕಾಯಿತು. ಅಂದರೆ ಜಾತಿಯಿಂದಾಗಿ ಮೀಸಲಾತಿ ಬಂತು. ಮೀಸಲಾತಿಯಿಂದಾಗಿ ಜಾತಿ ಮುಂದೊಂದು ದಿನ ಅಪ್ರಸ್ತುತವಾಗಿ ಬಿಡುತ್ತದೆ ಎನ್ನುವುದು ಸಂವಿಧಾನದ ಆಶಾವಾದವಾಗಿತ್ತು. ಆದರೆ ಈಗ ಆಗುತ್ತಿರುವುದೇ ಬೇರೆ. ಈಗ ಮೀಸಲಾತಿ ಜಾತಿಯನ್ನು ಶಾಶ್ವತಗೊಳಿಸುವ ಒಂದು ಅಸ್ತ್ರವಾಗಿಬಿಟ್ಟಿದೆ.. ಜಾತಿಗಳು ತಾವು ಎಂದೆಂದಿಗೂ ತಮ್ಮ ಅನನ್ಯತೆಯನ್ನು ಹಾಗೆ ಉಳಿಸಿಕೊಳ್ಳಲು ಮೀಸಲಾತಿಯ ಆಕರ್ಷಣೆಯು ಪ್ರೇರೇಪಿಸುತ್ತಿರುವಂತೆ ಕಾಣಿಸುತ್ತದೆ.

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


