ಇಷ್ಟು ದಿನ ಮೀಸಲಾತಿ ವಿರೋಧಿ ರಾಜಕೀಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದ ಒಂದು ಜಾತಿಯ ಸಮುದಾಯ, ನರೇಂದ್ರ ಮೋದಿ ಸರ್ಕಾರ ತಮಗೆ 10% ಮೀಸಲಾತಿ ಘೋಷಣೆ ಮಾಡಿದ ಮೇಲೆ, ಈಗ ತನ್ನ ಪ್ರಪಗಾಂಡಕ್ಕೆ ಬೀಗ ಜಡಿದಿದೆ. ಇದೇ ಸಮುದಾಯದಿಂದ ಪ್ರೇರಿತರಾಗಿ, ಮೀಸಲಾತಿಯ ಫಲವನ್ನುಣ್ಣುತ್ತಾ ಇದ್ದರೂ, ಕರ್ನಾಟಕದ ಎರಡು ಬಲಿಷ್ಠ ಸಮುದಾಯದ ಕೆಲವು ಜನ ಮೀಸಲಾತಿಯನ್ನು ಲೇವಡಿ ಮಾಡುವುದನ್ನು ಕಲಿತುಕೊಂಡಿದ್ದರು. ಈಗ ಕಳೆದ ಕೆಲವು ದಿನಗಳಿಂದ ಈ ಸಮುದಾಯಗಳ ಕೆಲವು ಮುಖಂಡರು ತಮ್ಮ ಜಾತಿಯ ಜನಕ್ಕೆ ಮೀಸಲಾತಿ ಏರಿಸಿ ಎಂದು ಅಬ್ಬರಿಸುತ್ತಿದ್ದಾರೆ. ಆಧುನಿಕ ಭಾರತ ಮತ್ತು ಕರ್ನಾಟಕದ ಇತಿಹಾಸದುದ್ದಕ್ಕೂ ಶಿಕ್ಷಣ, ಉದ್ಯೋಗ ಮತ್ತು ಸಂಪನ್ಮೂಲಗಳ ಸಿಂಹಪಾಲನ್ನು ಅನುಭವಿಸಿ, ತಮಗೆ ಬೇಕಾದಾಗ ಲೇವಡಿ ಮಾಡುವ ಮತ್ತೆ ಬೇಕಾದಾಗ ಮೀಸಲಾತಿ ಹೆಚ್ಚಿಸುವ ಬೇಡಿಕೆ ಇಡುವ ಈ ಸಮುದಾಯಗಳು ಯಾವುವು ಎಂಬುದನ್ನು ಇಷ್ಟು ಹೊತ್ತಿಗೆ ಊಹಿಸಲು ಕಷ್ಟವೇನಿಲ್ಲ. ಸಮಾನತೆಯ ಕನಸಿನ ಸಾಕಾರಕ್ಕೆ ತೊಡಗಿ, ತಮಗಿಂತಲೂ ದುರ್ಬಲವಾದ ಸಮುದಾಯಗಳ ಏಳಿಗೆಯನ್ನು ಮೊದಲು ಕಂಡು, ಸಾಕಾರಗೊಳಿಸಿ, ಸಮತಟ್ಟಿಗೆ ಎಲ್ಲ ಸಮುದಾಯಗಳನ್ನು ತಂದು ನಂತರ ತಮ್ಮ ಬೇಡಿಕೆಗಳನ್ನು ಮುಂದು ಮಾಡಿದ್ದರೆ ಆ ಮಾತು ಬೇರೆ.

ಇದನ್ನೂ ಓದಿ: ಪ್ರತ್ಯೇಕ ರಾಜ್ಯದ ಕೂಗಿನ ವಿರುದ್ಧ ಗಟ್ಟಿ ದನಿ: ‘ಕರ್ನಾಟಕವೊಂದೇ’ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಇತ್ತೀಚೆಗೆ ಕರ್ನಾಟಕ ಸರ್ಕಾರ ಮರಾಠ ಪ್ರಾಧಿಕಾರ ರಚಿಸಿದ ಬೆನ್ನಲ್ಲಿಯೇ, ಲಿಂಗಾಯತ ಸಮುದಾಯದ ಮುಖಂಡರು ತಮಗೆ ಪ್ರಾಧಿಕಾರ ಬೇಡ, 16% ಮೀಸಲಾತಿ ಕೊಡಿ ಎಂಬ ಬೇಡಿಕೆಯಿಟ್ಟರು. ಇದರ ಬೆನ್ನಲ್ಲಿಯೇ ಒಕ್ಕಲಿಗ ಸಮುದಾಯದ ಒಬ್ಬ ಮಠಾಧೀಶರ ನಾಯಕತ್ವದಲ್ಲಿ ತಮ್ಮ ಜಾತಿಯ ಮೀಸಲಾತಿಯನ್ನು 15%ಕ್ಕೆ ಏರಿಸದಿದ್ದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಡುವುದಾಗಿ ಬೆದರಿಸಿದ್ದರು. ಸದ್ಯಕ್ಕೆ ಈ ಎರಡೂ ಸಮುದಾಯಗಳು ಶಿಕ್ಷಣ ಮತ್ತು ಉದ್ಯೋಗಾವಕಾಶದಲ್ಲಿ 3ಬಿ ಮತ್ತು 3ಎ ವಿಭಾಗದಡಿ 5% ಮತ್ತು 4% ಮೀಸಲಾತಿ ಸೌಲಭ್ಯವನ್ನು ಪಡೆದಿರುವಂತವೇ. ಇದು ಸಾಲದೆಂಬಂತೆ ಕೇಂದ್ರ ಸರ್ಕಾರದ 27% ಮೀಸಲಾತಿಯ ಹಿಂದುಳಿದ ಪಟ್ಟಿಗೆ ಲಿಂಗಾಯತ ಸಮುದಾಯವನ್ನು ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪನವರು ಮುಂದಾಗಿ ಕೊನೆ ಕ್ಷಣದಲ್ಲಿ ಅದು ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ತರುವ ಒತ್ತಡದ ಮುನ್ಸೂಚನೆಯ ಮೇರೆಗೆ ಅದನ್ನು ತಡೆ ಹಿಡಿಯಲಾಯಿತು.

ಇಲ್ಲಿಯವರೆಗೂ ಈ ರಾಜ್ಯದ ರಾಜಕೀಯ ಶಕ್ತಿ ಈ ಎರಡು ಸಮುದಾಯಗಳ ಮೇಲೆ ನಿಂತಿದೆ. ಈ ಸಮುದಾಯದವರು ಒಗ್ಗೂಡಿದರೆ ಒಂದು ಹಿಂದುಳಿದ ಸಮುದಾಯದ ಜನಪ್ರಿಯ ಮುಖ್ಯಮಂತ್ರಿಯನ್ನು ಮರುಆಯ್ಕೆಯಾಗದಂತೆ ತಡೆಯುವಷ್ಟು ಶಕ್ತಿ ಹೊಂದಿದ್ದಾರೆ. ಇನ್ನು ಅಧಿಕಾರಶಾಹಿಯ ಪ್ರಮುಖ ಹುದ್ದೆಗಳಲ್ಲಿ, ಖಾಸಗಿಯ ಬಹುತೇಕ ಉದ್ದಿಮೆಗಳು, ಕಾರ್ಖಾನೆಗಳನ್ನು ಮುನ್ನಡೆಸುವ ಉದ್ಯೋಗಗಳಲ್ಲಿ ಅತಿ ಕಡಿಮೆ ಜನಸಂಖ್ಯೆಯಿರುವ ಬ್ರಾಹ್ಮಣ ಸಮುದಾಯದ್ದೇ ಸಿಂಹಪಾಲಾಗಿದ್ದರೆ ನಂತರದ ಪಾಲನ್ನು ಈ ಎರಡು ಸಮುದಾಯಗಳು ತಮ್ಮದಾಗಿಸಿಕೊಂಡಿವೆ. ಇಷ್ಟೆಲ್ಲಾ ಸಾಮಾಜಿಕ ಬಂಡವಾಳವನ್ನು ಅನುಭವಿಸಿಕೊಂಡು ಬಂದಿರುವ ಈ ಮೂರೂ ಸಮುದಾಯಗಳಿಗೆ ಮೀಸಲಾತಿಯ ಆಶಯ ಇನ್ನೂ ಅರ್ಥವಾಗದೇ ಇರುವುದು ಸ್ವಾತಂತ್ರ್ಯೋತ್ತರ ಭಾರತದ ದುರಂತಮಯ ಇತಿಹಾಸವೇ ಎನ್ನಬಹುದು.

ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಗುಜರಾತಿನ ಪಟೇಲ್ ಸಮುದಾಯ ಕೂಡ ಇದೇ ಜಾಡಿನಲ್ಲಿ ಇರುವಂತಹ ಒಂದು ಸಮುದಾಯ. ಒಂದು ಕಾಲದಲ್ಲಿ ಮೀಸಲಾತಿಯನ್ನು ವಿರೋಧಿಸಿಕೊಂಡು ಬಂದಿದ್ದ ಪಟೇಲ್ ಸಮುದಾಯ ನಂತರದ ವರ್ಷಗಳಲ್ಲಿ ಮೀಸಲಾತಿ ಹೆಚ್ಚಳಕ್ಕೆ ದುಂಬಾಲು ಬಿದ್ದಿತ್ತು. ಹರ್ಯಾಣದ ಜಾಟ್ ಸಮುದಾಯ ಕೂಡ ಭೂಹಿಡುವಳಿಯನ್ನು ಹೆಚ್ಚು ಪ್ರಮಾಣದಲ್ಲಿ ಹೊಂದಿರುವ, ಹೆಚ್ಚು ಸಂಪನ್ಮೂಲಗಳನ್ನು ನಿಯಂತ್ರಿಸುವ ಬಲಾಢ್ಯ ಸಮುದಾಯವಾಗಿದ್ದರೂ ಮೀಸಲಾತಿ ಹೆಚ್ಚಳಕ್ಕೆ ಹಿಂಸಾತ್ಮಕ ಪ್ರತಿಭಟನೆಗೆ ಇಳಿದಿತ್ತು. ಇಂತಹವನ್ನು ಹೆಚ್ಚು ಕಡಿಮೆ ಪ್ರತಿ ರಾಜ್ಯಗಳಲ್ಲೂ ಕಾಣಬಹುದು.

ಉತ್ತರದ ಈ ರಾಜ್ಯಗಳಿಗೆ ಹೋಲಿಸಿದರೆ, ಇಂದು ತಮಗಿಂತಲೂ ನಿರ್ಲಕ್ಷಿತಗೊಂಡ ಸಮುದಾಯಗಳ ಹಿತದ ಬಗ್ಗೆ ಕಿಂಚಿತ್ತೂ ಯೋಚಿಸದೆ ಮೀಸಲಾತಿ ಹೆಚ್ಚಳಕ್ಕೆ ಬೊಬ್ಬಿಡುತ್ತಿರುವ ಲಿಂಗಾಯತ-ಒಕ್ಕಲಿಗ ಸಮುದಾಯಗಳಲ್ಲಿ ಹೆಚ್ಚು ಸುಧಾರಿತ ಯುವಕರಿದ್ದಾರೆ ಎಂಬುದನ್ನು ನಾವು ನಿರೀಕ್ಷಿಸಬಹುದೇ? ಇದು ಈ ಹಳೆಯ ತಾರತಮ್ಯ ಸಮಾಜ ವ್ಯವಸ್ಥೆಯ ರಕ್ಷಕರ ಕೂಗನ್ನು ಸೋಲಿಸಬಲ್ಲದೇ? ಸಮ ಸಮಾಜ ವ್ಯವಸ್ಥೆಗೆ ಬೀಜ ನೆಟ್ಟಿದ್ದ ಬಸವಣ್ಣ, ವಿಶ್ವಮಾನವರಾಗಲು ಕರೆಕೊಟ್ಟ ಕುವೆಂಪು ಅಂತಹ ಮಹನೀಯರ ತತ್ವಗಳು ಇವರನ್ನು ಕಾಯಬಲ್ಲವೇ? ಆಧುನಿಕ ಕರ್ನಾಟಕದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಈ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದ ರಾಜಕೀಯ ನಿಲುವುಗಳನ್ನು ವಿರೋಧಿಸಿದ್ದ ಲಂಕೇಶ್-ತೇಜಸ್ವಿಯಂತಹ ಬರಹಗಾರರ ಬರೆವಣಿಗೆ ವಿವೇಕ ಮೂಡಿಸಬಲ್ಲದೇ?

ಹಿಂದುಳಿದ ಮತ್ತು ದಲಿತ ಸಮುದಾಯದ ಬೆರಳೆಣಿಕೆಯಷ್ಟು ಜನ ತಮಗಿರುವ ಎಲ್ಲಾ ಅಡತಡೆಗಳನ್ನು ದಾಟಿ, ಅವಮಾನ, ತಾರತಮ್ಯಗಳನ್ನು ಮೀರಿ ಶಿಕ್ಷಣವನ್ನು ಪಡೆದುಕೊಳ್ಳುತ್ತಿರುವ, ಒಂದಷ್ಟು ಉದ್ಯೋಗ ಪಡೆದು ಸಬಲೀಕರಣಗೊಳ್ಳುತ್ತಿರುವ, ಸಣ್ಣ ಉದ್ದಿಮೆಗಳನ್ನು ಕಟ್ಟಿ ಬೆಳೆಸಲು ಶಕ್ತಗೊಳ್ಳುತ್ತಿರುವ ಈ ಬದಲಾವಣೆಯ ಪರ್ವದಲ್ಲಿ, ಅರ್ಥಶಾಸ್ತ್ರಜ್ಞ-ಚಿಂತಕ ಜಾನ್ ಡ್ರೀಜ್ ಅವರ ಮಾತುಗಳನ್ನು ಉಪಯೋಗಿಸಿಕೊಂಡು ಹೇಳುವುದಾದರೆ ಮೇಲ್ಜಾತಿಗಳು ಬಂಡಾಯ ಎದ್ದಿವೆ. ಈ ಬಂಡಾಯ ಸಮಾಜದ ವ್ಯವಸ್ಥೆಯನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುವ, ತಾರತಮ್ಯದ ಜಾತಿವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಕ್ರಿಯೆಯಾಗಿದೆ. ವೈದಿಕ ಸಮಾಜ ಸೃಷ್ಟಿಸಿದ್ದ ಶ್ರೇಣೀಕರಣದಲ್ಲಿ, ಅವರನ್ನೇ ಅನುಸರಿಸಿ, ಆದರೆ ಅದನ್ನು ಮೆಟ್ಟಿನಿಲ್ಲುವ ಚಾಕಚಕ್ಯತೆಯನ್ನು ತಾವು ಮಾತ್ರ ಬೆಳೆಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲ್ಮುಖವಾಗಿ ಚಲಿಸಿ, ಹಿಂದುಳಿದ ಸಮುದಾಯಗಳನ್ನು ಹಿಂದಕ್ಕೆ ಉಳಿಸುವ ಬಂಡಾಯ ಇದಾಗಿದೆ. ಇದು ಬಸವಣ್ಣ ಕಟ್ಟಲು ಪ್ರಯತ್ನಿಸಿದ, ಅಂಬೇಡ್ಕರ್ ಅವರು ತಿದ್ದಿ ಸಮಾಜವನ್ನು ಸರಿಪಡಿಸಲು ಪ್ರಯತ್ನಿಸಿದ, ಸಾಂಸ್ಕೃತಿಕವಾಗಿ ಸಮಾಜದಲ್ಲಿ ವಿವೇಕ ಮೂಡಿಸಲು ಪ್ರಯತ್ನಿಸಿದ ಕುವೆಂಪು ಅಂತಹವರ ಕೆಲಸಗಳನ್ನು ಮಣ್ಣುಪಾಲು ಮಾಡಿದಂತೆ.

ಸಂವಿಧಾನದ ಪೀಠಿಕೆಯಲ್ಲಿ ಕೆತ್ತಲ್ಪಟ್ಟಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಮೊದಲು ಸಾಮೂಹಿಕವಾಗಿ ಮೇಲ್ಜಾತಿಗಳ ಈ ಎಲ್ಲಾ ಸಮುದಾಯಗಳು, ಮುಖಂಡರಂತೆ ವರ್ತಿಸುವ ಈ ಸಮುದಾಯಗಳ ರಾಜಕೀಯ ನಾಯಕರು, ಮಠಾಧೀಶರು, ಮತ್ತು ಈ ಸಮುದಾಯದ ಎಲ್ಲ ವ್ಯಕ್ತಿಗಳು ಮೈಗೂಡಿಸಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಂತಹ ದೇಶವನ್ನು ಕಟ್ಟಲು, ತಮ್ಮ ಪೂರ್ವಜರು ಶತಮಾನಗಳಿಂದ ನಿರ್ಮಿಸಿದ್ದ ಈ ಜಾತಿ ಶ್ರೇಣಿಕರಣವನ್ನು ಒಡೆಯಲು, ಸಮಾನತೆಯ ಸಮತಟ್ಟನ್ನು ನಿರ್ಮಿಸಲು ಇಷ್ಟು ದಿನ ಕಸಿದುಕೊಂಡಿದ್ದ ತಮಗಿಂತಲೂ ಹಿಂದುಳಿದ ಸಮುದಾಯಗಳ ಜನರ ಹಕ್ಕುಗಳನ್ನು, ಸವಲತ್ತುಗಳನ್ನು ಸಿಗುವಂತೆ ಮಾಡಿದರೆ ತಮ್ಮ ಶ್ರೇಯೋಭಿವೃದ್ಧಿಯೂ ಅದರ ಜತೆಗೇ ಸಾಗುವುದರಲ್ಲಿ ಸಂಶಯವಿಲ್ಲ.

ಮಠಾಧೀಶರ ಮತ್ತು ತಮ್ಮ ಸಮುದಾಯಗಳ ಸ್ವಾರ್ಥಕ್ಕೆ ಮಾತ್ರ ಇರುವ ರಾಜಕೀಯ ಮುಖಂಡರನ್ನು ಯುವಜನತೆ ತಿರಸ್ಕರಿಸಿ ಹೊಸ ನಾಡಿಗೆ ಹೊಸ ರಾಜಕೀಯ ಭಾಷೆ ಬರೆಯುವಂತಾಗಲಿ. ಅದರಲ್ಲೂ ಈ ಮೂರು ಸಮುದಾಯಗಳಿಗೆ ಸೇರಿದ ಪ್ರಜ್ಞಾವಂತ ಯುವಕರು ಈ ಅನ್ಯಾಯದ ರಾಜಕಾರಣದ ವಿರುದ್ಧ ಮುಂಚೂಣಿಯಲ್ಲಿ ನಿಲ್ಲಬೇಕು. ಅಂತಹ ಸೂಚನೆಯನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತೋರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.


ಇದನ್ನೂ ಓದಿ: ಬಿಜೆಪಿ ವರ್ಸಸ್ ಒಕ್ಕಲಿಗರು ಇದರಲ್ಲಿ ಅಡಗಿರುವ ರಾಜಕೀಯ ಏನು?

LEAVE A REPLY

Please enter your comment!
Please enter your name here