ನರ್ಮದಾ ಜಿಲ್ಲೆಯ 121 ಗ್ರಾಮಗಳನ್ನು “ಪರಿಸರ ಸೂಕ್ಷ್ಮ ವಲಯ” ಎಂದು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದಿದ್ದ ಗುಜರಾತ್‌ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ಮನ್ಸುಖ್ ವಾಸವ್ ಮಂಗಳವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಸರ್ದಾರ್ ಪಟೇಲ್‌ರ ಏಕತಾ ಪ್ರತಿಮೆಯ ಸುತ್ತಲಿನ 121 ಗ್ರಾಮಗಳ ರೈತರು ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ಆದಿವಾಸಿ ನಾಯಕರೂ ಆಗಿರುವ ಮನ್ಸುಖ್ ಎರಡು ದಿನಗಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದರು.
ಇದನ್ನೂ ಓದಿ:ಬಿಜೆಪಿ ನಾಯಕರನ್ನೇ ‘ಆಪರೇಷನ್’ ಮಾಡಲಿರುವ ಎನ್‌ಸಿಪಿ: ಮಹಾ ಡಿಸಿಎಂ ಅಜಿತ್ ಪವಾರ್
ತಮ್ಮ ರಾಜೀನಾಮೆ ಪತ್ರವನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್ ಅವರಿಗೆ ನೀಡಿದ್ದಾರೆ. ಪತ್ರದಲ್ಲಿ, ಮುಂಬರುವ ಬಜೆಟ್ ಅಧಿವೇಶನದ ವೇಳೆ ತಮ್ಮ ಸಂಸದ ಸ್ಥಾನಕ್ಕೆ ಕೂಡಾ ರಾಜೀನಾಮೆ ನೀಡುವುದಾಗಿ ಅವರು ಹೇಳಿದ್ದಾರೆ. ಪತ್ರದಲ್ಲಿ, “ನಾನು ನಿಭಾಯಿಸಬಲ್ಲದ್ದಕ್ಕಿಂತ ಹೆಚ್ಚಿನದನ್ನು ಬಿಜೆಪಿ ನನಗೆ ನೀಡಿದೆ. ಇದಕ್ಕಾಗಿ ನಾನು ಪಕ್ಷ ಮತ್ತು ಪಕ್ಷದ ಕೇಂದ್ರದ ಮುಖಂಡರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಪಕ್ಷಕ್ಕೆ ನಾನು ನಿಷ್ಠನಾಗಿದ್ದೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.
“ಅಂತಿಮವಾಗಿ, ನಾನು ಮನುಷ್ಯನಾಗಿದ್ದು, ತಪ್ಪುಗಳು ತಿಳಿಯದೆ ನಡೆಯುತ್ತವೆ. ನನ್ನ ತಪ್ಪು ಪಕ್ಷಕ್ಕೆ ಹಾನಿಯಾಗದಂತೆ ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕಾಗಿ ಪಕ್ಷವು ನನ್ನನ್ನು ಕ್ಷಮಿಸುತ್ತದೆ. ಬಜೆಟ್ ಅಧಿವೇಶನದಲ್ಲಿ ನಾನು ಸ್ಪೀಕರ್ ಅವರನ್ನು ಖುದ್ದಾಗಿ ಭೇಟಿಯಾಗಿ, ನನ್ನ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಈಗಾಗಲೇ ಶೂಲ್ಪನೇಶ್ವರ್ ವನ್ಯಜೀವಿ ಧಾಮದ ಸುತ್ತಲಿನ ಪ್ರದೇಶವನ್ನು “ಪರಿಸರ ಸೂಕ್ಷ್ಮ ವಲಯ” ಎಂದು ಘೋಷಿಸುವ ಅಂತಿಮ ಅಧಿಸೂಚನೆಯ ಕುರಿತಂತೆ ನರ್ಮದಾ ಜಿಲ್ಲೆಯ ಆದಿವಾಸಿಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಧಿಸೂಚನೆಯ ನೆಪದಲ್ಲಿ ಅಧಿಕಾರಿಗಳು ಆದಿವಾಸಿಗಳ ಖಾಸಗಿ ಜಮೀನುಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದೆ.
ಇದನ್ನೂ ಓದಿ: ತಮಿಳುನಾಡು: ಕಮಲ್ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಜೆಪಿ ಸೇರ್ಪಡೆ!


