ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಆಡಳಿತಾತ್ಮಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ನಡುವಿನ ರಾಜಕೀಯ ಸಂಘರ್ಷ ಹೊಸ ತಿರುವು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ, ಪಿಂಚಣಿ ಇಲಾಖೆಗೆ ವರ್ಗಾವಣೆ ಗೊಂಡಿದ್ದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್ ಬಂದೋಪಾದ್ಯಾಯ್ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅದೇ ಸಮಯಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರು ಅವರನ್ನು ತಮ್ಮ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಆದೇಶದಂತೆ ಇಂದು ಬೆಳಗ್ಗೆ 10 ಗಂಟೆಯ ಒಳಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಸೇವೆಯಿಂದ ಬಿಡುಗಡೆಗೊಂಡು ಕೇಂದ್ರ ಸರ್ಕಾರದ ಸೇವೆಗೆ ವರದಿ ಮಾಡಿಕೊಳ್ಳಬೇಕಿದ್ದ ಅಲಪಾನ್ ಬಂದೋಪಾದ್ಯಾಯ್ ತಮ್ಮ ಉದ್ಯೋಗದಿಂದಲೇ ನಿವೃತ್ತಿಗೊಂಡಿದ್ದಾರೆ. ಜೊತೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂದೋಪಾದ್ಯಾಯ ಅವರನ್ನು ತಮ್ಮ ಮಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ವರ್ಗಾವಣೆ ಆದೇಶಕ್ಕೆ ತಿರುಗೇಟು ನೀಡಲು ಮುಂದಾದ ಮಮತಾ ಬ್ಯಾನರ್ಜಿ ತನ್ನ ಮುಖ್ಯ ಕಾರ್ಯದರ್ಶಿಯಾಗಿದ್ದ ಬಂದೋಪಾದ್ಯಾಯ ಅವರನ್ನು ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ. ಆ ಮೂಲಕ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರೊಂದಿಗೆ ಮತ್ತೊಂದು ಸುತ್ತಿನ ರಾಜಕೀಯ ಸಂಘರ್ಷಕ್ಕೆ ಮುಂದಾಗಿದ್ದಾರೆ.
ಪಶ್ಚಿಮ ಬಂಗಾಳದ ಈ ರಾಜಕೀಯ ಹೈಡ್ರಾಮಾ ಹಿರಿಯ ಐಎಎಸ್ ಅಧಿಕಾರಿ ಬಂದೋಪಾದ್ಯಾಯ ಅವರನ್ನು ರಕ್ಷಿಸುವಂತೆ ಕಾಣುತ್ತಿಲ್ಲ. ಕೇಂದ್ರ ಸರ್ಕಾರ ತನ್ನ ಆದೇಶಕ್ಕೆ ವಿರುದ್ಧ ನಡೆದ ಬಂದೋಪಾದ್ಯಾಯ ಅವರ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಬಂದೋಪಾದ್ಯಾಯ ಅವರ ವಿರುದ್ಧ ಕೇಂದ್ರ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿದೆ ಎನ್ನಲಾಗಿದೆ.
ಅಲಪಾನ್ ಬಂದೋಪಾದ್ಯಾಯ್ ಅವರ ಸ್ಥಾನಕ್ಕೆ ಹೆ.ಕೆ. ದ್ವಿವೇದಿಯವರು ಪಶ್ಚಿಮ ಬಂಗಾಳದ ನೂತನ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿಯ ವರ್ಗಾವಣೆ ಆದೇಶವನ್ನು ಹಿಂಪಡೆಯಬೇಕು ಎಂದು ಮಮತಾ ಬ್ಯಾನರ್ಜಿ ಕೇಂದ್ರಕ್ಕೆ 5 ಪುಟಗಳ ಪತ್ರವನ್ನು ಬರೆದಿದ್ದರು. ಇಂದು ಕೇಂದ್ರ ಸರ್ಕಾರ ವರ್ಗಾವಣೆ ಆದೇಶವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪತ್ರಕ್ಕೆ ಉತ್ತರಿಸಿದೆ.
ಕೇಂದ್ರ ಸರ್ಕಾರ ವರ್ಗಾವಣೆ ಆದೇಶವನ್ನು ಹಿಂಪಡೆಯಲು ನಿರಾಕರಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ನಿವೃತ್ತಿಗೊಳಿಸಿ ಅವರ ಜಾಗಕ್ಕೆ ಹೊಸ ಕಾರ್ಯದರ್ಶಿಯನ್ನು ನೇಮಕ ಮಾಡಿದೆ. ಜೊತೆಗೆ ಹಿಂದಿನ ಮುಖ್ಯಕಾರ್ಯದರ್ಶಿಯನ್ನು ಸರ್ಕಾರದ ಮುಖ್ಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ. ಆ ಮೂಲಕ ತಮ್ಮ ಪರವಾಗಿರುವ ಅಧಿಕಾರಿಯನ್ನು ರಕ್ಷಿಸುವ ಪ್ರಯತ್ನವನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ.
ಈ ಎಲ್ಲ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿ ಮೋದಿಯವರ ಮೇಲೆ ಆರೋಪದ ಸುರಿಮಳೆಯನ್ನು ಮುಂದುವರೆಸಿದ್ದಾರೆ.
ಇದೊಂದು ರಾಜಕೀಯ ದಾಳಿ. ನಾನು ಇದುವರೆಗೆ ಇಂತಹ ಹೃದಯವಿಲ್ಲದ ಪ್ರಧಾನ ಮಂತ್ರಿಯನ್ನು ನೋಡಿರಲಿಲ್ಲ. ಮುಖ್ಯಮಂತ್ರಿಯ ಮೇಲೆ ದಾಳಿ ನಡೆಸಲು ಪ್ರಧಾನಿ ಮೋದಿ ಬಯಸುತ್ತಾರೆ. ಆ ಕಾರಣದಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಯ ಮೇಲೆ ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಚರ್ಚೆಯನ್ನು ನಡೆಸಲು ಸಿದ್ಧವಿಲ್ಲ. ಯಾಕೆಂದರೆ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಯಾಕೆಂದರೆ ಪ್ರಧಾನಿಯವರು ಮಮತಾ ಬ್ಯಾನರ್ಜಿಯನ್ನು ದ್ವೇಷಿಸುತ್ತಾರೆ ಎನ್ನುವ ಮೂಲಕ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರ ಮೇಲಿನ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಕೇಂದ್ರ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಲಿ. ಅಲಪಾನ್ ಬಂದೋಪಾದ್ಯಾಯ್ ಅವರ ಸೇವಾವಧಿ ಮುಗಿದಿದೆ. ಅವರು ಕೇಂದ್ರದ ಸೇವೆಗೆ ಇನ್ನು ಲಭ್ಯರಿಲ್ಲ. ಚಂಡಮಾರುತ ಮತ್ತು ಕೊರೋನಾ ಸಾಂಕ್ರಾಮಿಕದಿಂದ ನಲುಗಿ ಹೋಗಿರುವ ಪಶ್ಚಿಮ ಬಂಗಾಳಕ್ಕೆ ಬಂದೋಪಾದ್ಯಾಯ್ ಅವರ ಸೇವೆಯ ಅವಶ್ಯಕತೆಯಿದೆ. ಅವರು ಸರ್ಕಾರದೊಟ್ಟಿಗೆ ಇನ್ನು ಮುಂದೆ ಕೆಲಸ ಮಾಡುತ್ತಾರೆ. ಬಡವರು ಮತ್ತು ಸಂಕಷ್ಟದಲ್ಲಿರುವ ದೇಶದ, ರಾಜ್ಯದ ಜನರ ಪರವಾಗಿನ ತಮ್ಮ ಕೆಲಸವನ್ನು ಬಂದೋಪಾದ್ಯಾಯ್ ಅವರು ಮುಂದುವರೆಸಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ತಮ್ಮ ನಡುವಿನ ರಾಜಕೀಯ ಸಂಘರ್ಷ ಇನ್ನು ಮುಗಿದಿಲ್ಲವೆನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಕತ್ತರಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್ ಬಂದೋಪಾದ್ಯಾಯ್


