Homeಮುಖಪುಟಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಕತ್ತರಿಯಲ್ಲಿ‌ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್‌ ಬಂದೋಪಾದ್ಯಾಯ್

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಕತ್ತರಿಯಲ್ಲಿ‌ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್‌ ಬಂದೋಪಾದ್ಯಾಯ್

ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ರಾಜಕೀಯ ಪ್ರತಿಷ್ಠೆಯ ಸಂಘರ್ಷದ ಸಂದಿಗ್ದತೆಗೆ ಸಿಲುಕಿದ ಹಿರಿಯ ಐಎಎಸ್‌ ಅಧಿಕಾರಿ ಬಂದೋಪಾದ್ಯಾಯ್..

- Advertisement -
- Advertisement -

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್‌ ಬಂದೋಪಾದ್ಯಾಯ್‌ ಈಗ ಕೇಂದ್ರ ಸರ್ಕಾರ ಮತ್ತು ಮಮತಾ ಬ್ಯಾನರ್ಜಿಯವರ ಪಶ್ಚಿಮ ಬಂಗಾಳ ಸರ್ಕಾರದ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಯಾಸ್‌ ಚಂಡಮಾರುತದ ಸಂದರ್ಭದಲ್ಲಿ ದೇಶದ ಪ್ರಧಾನಿ ಕೊಲ್ಕತ್ತಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಯವರನ್ನು ಕಾಯಿಸಿದ್ದಾರೆ ಎಂದು ಮೋದಿ ಸರ್ಕಾರದ ಕೆಂಗಣ್ಣಿಗೆ ಬಂದೋಪಾದ್ಯಾಯ ಗುರಿಯಾಗಿದ್ದಾರೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಸಾರ್ವಜನಿಕರ ಕುಂದುಕೊರತೆ, ಪಿಂಚಣಿ ಇಲಾಖೆಗೆ ಬಂದೋಪಾದ್ಯಾಯ ಅವರನ್ನು ವರ್ಗಾಯಿಸಿ ಶುಕ್ರವಾರ ಮೇ 28 ರಂದು ಆದೇಶಿಸಿತ್ತು. ಹಾಗೇ ಮೇ 31 ಸೋಮವಾರ ಬೆಳಗ್ಗೆ 10 ಗಂಟೆಯ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ತನ್ನ ಆದೇಶದಲ್ಲಿ ತಿಳಿಸಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ಇಂದು ಅಂದರೆ ಮೇ 31 ರಂದು ಬಂದೋಪಾದ್ಯಾಯ ಕೇಂದ್ರ ಸರ್ಕಾರ ನಿಯೋಜಿಸದ ಕರ್ತವ್ಯಕ್ಕೆ ವರದಿಮಾಡಿಕೊಂಡಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದ್ದು ಅಲಪಾನ್‌ ಬಂದೋಪಾದ್ಯಾಯ ಅವರ ಮೇಲೆ ಕೇಂದ್ರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗುವಂತೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಹತ್ತಿರವಾಗಿರುವ ಉನ್ನತ ಅಧಿಕಾರಿಗಳ ಪ್ರಕಾರ ಅಲಪಾನ್‌ ಬಂದೋಪಾದ್ಯಾಯ ಅವರ ಮೇಲೆ ಕೇಂದ್ರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂದೋಪಾದ್ಯಾಯ ನಡೆಯನ್ನು ವರ್ಗಾವಣೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ. ಕೇಂದ್ರದ ನಡೆ ಅಸಂವಿಧಾನಿಕವಾಗಿದ್ದು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸದೇ ಕೇಂದ್ರ ರಾಜ್ಯ ಸರ್ಕಾರದ ಕರ್ತವ್ಯದಲ್ಲಿರುವ ಐಎಎಸ್‌ ಅಧಿಕಾರಿಯನ್ನು ವರ್ಗಾವಣೆಯನ್ನು ಮಾಡಲು ಕಾನೂನಿಡಿಯಲ್ಲಿ ಅವಕಾಶವಿಲ್ಲ. ಕೇಂದ್ರ ಬೇಕಾದರೆ ರಾಜ್ಯ ಸರ್ಕಾರದ ಕರ್ತವ್ಯದಲ್ಲಿರುವ ಅಧಿಕಾರಿಯನ್ನು ಕೇಂದ್ರ ಸರ್ಕಾರದ ಸೇವೆಗೆ ಮರಳಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿಮಾಡಬಹುದೆಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ಕೇಂದ್ರಕ್ಕೆ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿಯನ್ನು ರಾಜ್ಯ ಸರ್ಕಾರದ ಕರ್ತವ್ಯದಿಂದ ಬಿಡುಗಡೆಗೊಳಿಸುವುದು ಸಾಧ್ಯವಿಲ್ಲವೆಂದು ತಮ್ಮ ಪತ್ರದಲ್ಲಿ ಖಡಾಖಂಡಿತವಾಗಿ ಕೇಂದ್ರ ಸರ್ಕಾರಕ್ಕೆ ಹೇಳಿದ್ದಾರೆ.

ಕೇಂದ್ರದ ವರ್ಗಾವಣೆ ಅದಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿರೋಧ ಈಗ ಮುಖ್ಯಕಾರ್ಯದರ್ಶಿ ಅಲಪಾನ್‌ ಬಂದೋಪಾದ್ಯಾಯ ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಅತ್ತ ರಾಜ್ಯ ಸರ್ಕಾರದ ಸೇವೆಯಲ್ಲಿಯೂ ಉಳಿಯಲಾಗದೇ, ಇತ್ತ ಕೇಂದ್ರದ ಸೇವೆಗೂ ಮರಳಲಾಗದೇ ಬಂದೋಪಾದ್ಯಾಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ರಾಜಕೀಯ ಸಂಘರ್ಷದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮಸ್ಯೆಗೆ ಸಿಲುಕಿರುವುದು ಇತ್ತೀಚಿನ ದಶಕದಲ್ಲಿ ದೇಶದಲ್ಲಿ ಮೊದಲ ನಿದರ್ಶನ ಇದು.

ಅತ್ತ ಮಮತಾ ಬ್ಯಾನರ್ಜಿ ಸರ್ಕಾರ ಕೇಂದ್ರದ ವಿರುದ್ಧ ಇನ್ನೊಂದು ಸುತ್ತಿನ ಕಾನೂನು ಸಮರಕ್ಕೆ ಮುಂದಾಗಿದೆ. ಸರ್ಕಾರದ ಮಂತ್ರಿಗಳನ್ನು ಕೇಂದ್ರದ ತನಿಖಾ ಏಜನ್ಸಿ ಸಿಬಿಐ ಬಂಧಿಸಲು ಮುಂದಾದಾಗ ಕೋರ್ಟ್‌ ಮೆಟ್ಟಿಲೇರಿದ್ದ ಪಶ್ಚಿಮ ಬಂಗಾಳ ಸರ್ಕಾರ ಈಗ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಸಿದ್ಧತೆ ನಡೆಸುತ್ತಿದ್ದು ಈ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತಿರುವ ವಿಷಯ ತಿಳಿದುಬಂದಿದೆ.

ಒಂದು ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಸರ್ಕಾರದ ಮುಖ್ಯಕಾರ್ಯದರ್ಶಿ ವರ್ಗಾವಣೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇ ಆದಲ್ಲಿ ದೇಶದಲ್ಲಿ ಮತ್ತೊಂದು ಸಂವಿಧಾನತ್ಮಕ ಬಿಕ್ಕಟ್ಟು ತಲೆದೋರುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮುಖ್ಯ ಮಂತ್ರಿಯವರ ಮೇಲಿನ ಸಿಟ್ಟನ್ನು ನೋಡಿದರೆ ಕೇಂದ್ರ ತನ್ನ ಆದೇಶವನ್ನು ಹಿಂಪಡೆಯುವ ಯಾವ ಸಾಧ್ಯತೆಯಂತೂ ಕಾಣುತ್ತಿಲ್ಲ. ಜೊತೆಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವರ್ಗಾವಣೆ ವಿಷಯವನ್ನು ತಮ್ಮ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಸ್ವೀಕರಿಸಿದ್ದಾರೆ. ಹೀಗಾಗಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳಕ್ಕೆ‌ ಕಾಲಿರಿಸುವ ಸಾಧ್ಯತೆ ನಿಚ್ಛಳವಾಗಿದೆ ಎಂದು ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗಳನ್ನು ಹತ್ತಿರದಿಂದ ಗಮನಿಸುತ್ತಿರುವ ರಾಜಕೀಯ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.

ಅಲಪಾನ್‌ ಬಂದೋಪಾದ್ಯಾಯ ಇಂದು ಕೇಂದ್ರದ ಸೇವೆಗೆ ತೆರಳದೇ ಕೊಲ್ಕತ್ತಾದ ಪಶ್ಚಿಮ ಬಂಗಾಳ ಸೆಕ್ರೇಟ್ರಿಯೇಟ್‌ನಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ಪಶ್ಚಿಮ ಬಂಗಾಳ ಸರ್ಕಾರ ಸದ್ಯ ಅವರನ್ನು ರಾಜ್ಯ ಸರ್ಕಾರದ ಕರ್ತವ್ಯದಿಂದ ಬಿಡುಗಡೆ ಮಾಡುವುದಿಲ್ಲವೆಂಬುದು ಸ್ಪಷ್ಟವಾಗುತ್ತಿದೆ.

1987 ಬ್ಯಾಚ್‌ ನ ಐಎಎಸ್‌ ಅಧಿಕಾರಿ ಬಂದೋಪಾದ್ಯಾಯ ಅವರ ಸೇವಾವಧಿಯು ಮೇ ವೇಳೆಗೆ ಪೂರ್ಣಗೊಂಡಿದೆ. ಮೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದ ಐಎಎಸ್‌ ಅಧಿಕಾರಿಯ ಸೇವಾವಧಿಯನ್ನು 3 ತಿಂಗಳು ವಿಸ್ತರಿಸುವಂತೆ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರಕ್ಕೆ ಈ ಹಿಂದೆ ಮನವಿ ಮಾಡಿತ್ತು. ಪಶ್ಚಿಮ ಬಂಗಾಳ ಸರ್ಕಾರದ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ ಬಂದೋಪಾದ್ಯಾಯ ಅವರ ಸೇವಾವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಿ ಈ ಹಿಂದೆ ಆದೇಶ ಹೊರಡಿಸಿತ್ತು. ಕಳೆದ ವರ್ಷದ ಅಲ್ಪಾನ್‌ ಚಂಡಮಾರುತದ ನಿರ್ವಹಣೆ ಕೋವಿಡ್‌ ನಿರ್ವಹಣೆಯ ಅನುಭವ ಹೊಂದಿರುವ ಬಂದೋಪಾದ್ಯಾಯ ಅವರನ್ನು ಪಶ್ಚಿಮ ಬಂಗಾಳ ರಾಜ್ಯ ಭೀಕರ ಯಾಸ್‌ ಚಂಡಮಾರುತ ಮತ್ತು ಕೊರೋನಾ ಸಂಕಷ್ಟಕ್ಕೆ ಒಳಗಾದ ಸಂದರ್ಭದಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ರಾಜ್ಯಕ್ಕೆ ಈಗ ಬಂದೋಪಾದ್ಯಯ ಅವರ ಸೇವೆ ಅತ್ಯಂತ ಅಗತ್ಯವಾಗಿದೆ ಎಂದು ಮಮತಾ ಬ್ಯಾನರ್ಜಿಯವರು ಕೇಂದ್ರಕ್ಕೆ 5 ಪುಟಗಳ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ಧಾಳಿ ನಡೆದಾಗ ಕೇಂದ್ರ 3 ಐಪಿಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆಗಲೂ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರದ ಆದೇಶವನ್ನು ತಿರಸ್ಕರಿಸಿತ್ತು ಮತ್ತು ಅಧಿಕಾರಿಗಳನ್ನು ರಾಜ್ಯ ಸರ್ಕಾರದ ಸೇವೆಯಿಂದ ತೆರವುಗೊಳಿಸಲು ನಿರಾಕರಿಸಿತ್ತು.

ಸಂವಿಧಾನ ತಜ್ಞರು ಹೇಳುವ ಪ್ರಕಾರ ಒಮ್ಮೆ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರದ ಅಧಿಕಾರಿಯನ್ನು ರಾಜ್ಯ ಸರ್ಕಾರದ ಸೇವೆಗೆ ನಿಯೋಜಿಸಿದ ಮೇಲೆ ಅಧಿಕಾರಿಯ ವರ್ಗಾವಣೆ ಅಥವಾ ಡೆಪ್ಯುಟೇಷನ್‌ ಮಾಡಲು ಸಾಧ್ಯವಿಲ್ಲ. ಒಂದುವೇಳೆ ವರ್ಗಾವಣೆ ಮಾಡುವುದಾದರೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿ ರಾಜ್ಯ ಸರ್ಕಾರದ ಸಮ್ಮತಿಯ ಮೇರೆಗೆ ಕ್ರಮ ಕೈಗೊಳ್ಳಬಹುದು.

ಒಂದುವೇಳೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಚರ್ಚಿಸದೇ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾದರೆ ರಾಜ್ಯ ಸರ್ಕರಗಳು ಕೇಂದ್ರದ ಆದೇಶವನ್ನು ತಿರಸ್ಕರಿಸಬಹುದಾಗಿದೆ ಮತ್ತು ಕ್ರಮಕ್ಕೆ ನಿರಾಕರಿಸಬಹುದಾಗಿದೆ. ಎಂದು ಸಂವಿಧಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಸರ್ಕಾರದ ಕರ್ತವ್ಯದಲ್ಲಿರುವ ಅಲಪಾನ್‌ ಬಂದೋಪಾದ್ಯಯ ಅವರ ಪ್ರಕರಣದಲ್ಲಿ ಸಮಸ್ಯೆ ಇನ್ನಷ್ಟು ಕಗ್ಗಂಟಾಗಿದೆ. ಕಾರಣ ಬಂದೋಪಾದ್ಯಾಯ ಅವರ ಸೇವಾವಧಿ ಹಿಂದಿನ ತಿಂಗಳೇ ಕೊನೆಗೊಂಡಿರುವುದು. ಈಗ ಕೇಂದ್ರ ಅವರನ್ನು ನಿವೃತ್ತಿಯ ಮೇಲೆ ಕಳುಹಿಸುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗಿನ ಸೂಕ್ತ ಸಮಾಲೋಚನೆಯ ನಂತರ ಬಂದೋಪಾದ್ಯಾಯ ಅವರ ಸೇವಾವಧಿಯನ್ನು ವಿಸ್ತರಿಸಿದೆ. ಈಗ ರಾಜ್ಯ ಸರ್ಕಾರದೊಂದಿಗೆ ಯಾವುದೇ ಪೂರ್ವ ಚರ್ಚೆಯಿಲ್ಲದೇ ಅವರ ಸೇವಾವಧಿಯನ್ನು ಕಡಿತಗೊಳಿಸುವುದಾಗಲಿ ವರ್ಗವಾಣೆಯನ್ನು ಮಾಡಲು ಸಾಧ್ಯವಿಲ್ಲವೆಂದು ಮಮತಾ ಬ್ಯಾನರ್ಜಿ ಸರ್ಕಾರ ಹೇಳುತ್ತಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳ ವರ್ಗಾವಣೆ ವಿಷಯದಲ್ಲಿ ಕೇಂದ್ರ ಸರ್ಕಾರದ ಆದೇಶವೇ ಅಂತಿಮವೇ? ರಾಜ್ಯ ಸರ್ಕಾರದ ಸೇವೆಗೆ ನಿಯುಕ್ತಿಗೊಂಡ ಅಧಿಕಾರಿ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತಾರೆಯೇ? ರಾಜ್ಯ ಸರ್ಕಾರಗಳಿಗೆ ಕೇಂದ್ರದ ಆದೇಶವನ್ನು ನಿರಾಕರಿಸುವ ಅಧಿಕಾರ ಇದೆಯೇ?

ಕೇಂದ್ರ ಸರ್ಕಾರದ ಉದ್ಯೋಗಿಯೊಬ್ಬ ರಾಜ್ಯ ಸರ್ಕಾರದ ಸೇವೆಯಲ್ಲಿ ನಿಯುಕ್ತಿಗೊಂಡಿದ್ದಾಗ ಯಾರಿಂದ ಆದೇಶವನ್ನು ಪಡೆಯಬೇಕು? ಎಂಬ ವಿಚಾರ ಈಗ ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಬಿಕ್ಕಟ್ಟಿನಿಂದ ಮತ್ತೆ ಮುನ್ನೆಲೆಗೆ ಬಂದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಾಂವಿಧಾನಿಕ ಸಂಸ್ಥೆಗಳು. ಭಾರತ ರಾಷ್ಟ್ರಪತಿಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸ್ವತಂತ್ರ ಆಢಳಿತ ವ್ಯವಸ್ಥೆಗಳೆಂದು ಸಂವಿಧಾನ ಹೇಳುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ರಾಜ್ಯದ ವ್ಯಾಪ್ತಿಯಲ್ಲಿ ಮೂಗು ತೂರಿಸಬಾರದು, ರಾಜ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮೂಗು ತೂರಿಸಿ ಎರಡೂ ಆಢಳಿತ ವ್ಯವಸ್ಥೆಗೆ ಅಡಚಣೆಯಾಗ ಬಾರದೆಂದು ಸಂವಿಧಾನದ 7 ನೇ ಶೆಡ್ಯೂಲ್‌ ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟಪಡಿಸಲಾಗಿದೆ. ಭಾರತ ಸಂವಿಧಾನದಲ್ಲೂ ಉತ್ತರ ಸಿಗದ ಕೆಲ ಹೊಸ ಸಮಸ್ಯೆಗಳಿಗೆ ನ್ಯಾಯಾಯಲಯಗಳ ಹಲವು ಆದೇಶಗಳ ಮೂಲಕವೂ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ತಮ್ಮ ತಮ್ಮ ಅಧಿಕಾರ ವ್ಯಾಪ್ತಿಯ ಅರಿವು, ಇತಿಹಾಸ ಅಧಿಕಾರ ವ್ಯಾಪ್ತಿಯನ್ನು ಮೀರಿದರೆ ತಲೆದೋರುವ ಬಿಕ್ಕಟ್ಟುಗಳ ಮಾಹಿತಿ ಕೇಂದ್ರ ಸರ್ಕಾರಕ್ಕಾಗಲೀ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕಾಗಲೀ ಇಲ್ಲವೆಂದಲ್ಲ. ಆದರೆ ತಮ್ಮ ತಮ್ಮ ರಾಜಕೀಯ ಪ್ರತಿಷ್ಠೆಗಳಿಂದಾಗಿ ಸ್ವತ: ತಾವೇ ಇಂತಹ ಬಿಕ್ಕಟ್ಟುಗಳನ್ನು ಸೃಷ್ಟಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯ ಸ್ವತಂತ್ರವಾದ ಎರಡು ಚುನಾಯಿತ ಸರ್ಕಾರಗಳ ಸಂಘರ್ಷದಿಂದ ತೊಂದರೆಗೆ ಒಳಗಾಗುವುದು ಜನತೆ ಮತ್ತು ಅಧಿಕಾರಿ ವರ್ಗ..

ಈಗ ಪಶ್ಚಿಮ ಬಂಗಾಳದಲ್ಲಿ ಮುಖ್ಯ ಕಾರ್ಯದರ್ಶಿಯ ಕೆಳಗೆ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಬಂದೋಪಾದ್ಯಾಯ ಅವರು ನೀಡಿದ ಆದೇಶಗಳು ಮಾನ್ಯವಾಗಿವೆಯೇ ಇಲ್ಲವೇ ಎಂಬ ಗೊಂದಲ ಉಂಟಾಗುತ್ತಿದೆ. ಕೇಂದ್ರ ರಾಜ್ಯಸರ್ಕಾರದ ಸೇವೆಯಿಂದ ಬಂದೋಪಾದ್ಯಾಯ ಅವರನ್ನು ವರ್ಗಾಯಿಸಿದೆ. ರಾಜ್ಯ ಸರ್ಕಾರ ತನ್ನ ಸೇವೆಯಿಂದ ಬಿಡುಗಡೆಗೊಳಿಸಿಲ್ಲ. ಈಗ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿರುವ ಬಂದೋಪಾದ್ಯಾಯ ಅವರ ಆದೇಶಗಳ ಮಾನ್ಯತೆ ಮತ್ತು ಅಮಾನ್ಯತೆಗಳ ಮತ್ತು ಅವರ ಅಧಿಕಾರ ವ್ಯಾಪ್ತಿ ರಾಜ್ಯದ ಇತರ ಅಧಿಕಾರಿಗಳ ಮೇಲೆ ಇದೆಯೇ ಎಂಬುದು ಕೇಳ ಹಂತದ ಅಧಿಕಾರಿಗೆ ಮಾರ್ಪಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ಬಂದಪ್ಪಳಿಸಿದ ಯಾಸ್‌ ಚಂಡಮಾರುತದಿಂದ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಮರೋಪಾದಿಯಲ್ಲಿ ರಾಜ್ಯ ಸರ್ಕಾರ ಪರಿಹಾರ ಕಾರ್ಯಾಚರಣೆಯನ್ನು ಮಾಡಬೇಕಾದ ಸಂದರ್ಭ ಇದು. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮುಖ್ಯ ನಿರ್ಧಾರಗಳನ್ನು ಆದೇಶಗಳನ್ನು ಹೊರಡಿಸುವ ಮುಖ್ಯ ಕಾರ್ಯದರ್ಶಿಯ ಹುದ್ದೆಯಲ್ಲಿರುವವರ ಮಾನ್ಯತೆ, ಸಿಂಧುತ್ವ ಮತ್ತು ಅಧಿಕಾರ ವ್ಯಾಪ್ತಿಯ ಕುರಿತು ಉಂಟಾಗಿರುವ ಗೊಂದಲಗಳು ಚಂಡಮಾರತದಿಂದ ಉಂಟಾದ ಸಮಸ್ಯೆಗಳ ಪರಿಹಾರ ಕಾರ್ಯ ಮತ್ತು ಕೊರೋನಾ ಎರಡನೆಯ ಅಲೆಯ ವಿರುದ್ಧದ ಹೋರಾಟಕ್ಕೆ ತೀವ್ರ ಹಿನ್ನಡೆಯನ್ನುಂಟುಮಾಡಲಿವೆ.

ಪ್ರಧಾನಿ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಬ್ಯಾನರ್ಜಿಯವರು ತಮ್ಮ ವಯಕ್ತಿಕ ಮತ್ತು ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ಈಗ ಉದ್ಭವಿಸಿರುವ ಸಂವಿಧಾನಿಕ ಮತ್ತು ಆಢಳಿತಾತ್ಮಕ ಬಿಕ್ಕಟ್ಟನ್ನು ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಂಡು ಚಂಡಮಾರುತ, ಕೊರೋನಾ ವಿಪತ್ತುಗಳಿಂದ ಸಂಕಷ್ಟಕ್ಕೆ ಒಳಗಾದ ಜನರ ಪರವಾಗಿ ನಿಲ್ಲಬೇಕಿದೆ.

ನಿವೃತ್ತಿಯಂಚಿನಲ್ಲಿರುವ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ ಬಂದೋಪಾದ್ಯಾಯ ಅವರಿಗೆ ಈಗ ಆಗಿರುವ ಕಿರಿಕಿರಿಯ ನಡುವೆ ಇನ್ನೂ ಹೆಚ್ಚು ಅವಮಾನ ಮಾಡದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವಯುತವಾಗಿ ಮತ್ತು ಘನತೆಯಿಂದ ಅವರಿಗೆ ಭಾರತನ ದೇಶದ ಸೇವೆಯಿಂದ ನಿವೃತ್ತರಾಗಲು ಅವಕಾಶ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಇದೊಂದು ಕಹಿ ಘಟನೆಯಾಗಿ ಉಳಿದ ಅಧಿಕಾರಿವರ್ಗವನ್ನು ಭಯದ ನೆರಳಿನಲ್ಲಿ ಕೆಲಸ ಮಾಡುವ ಒತ್ತಡಕ್ಕೆ ದೂಡಲಿದೆ..


ಇದನ್ನೂ ಓದಿ: ಕೇಂದ್ರಕ್ಕೆ ಮುಖ್ಯ ಕಾರ್ಯದರ್ಶಿಯನ್ನು ಕಳುಹಿಸಲ್ಲ: ಮಮತಾ ಬ್ಯಾನರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -