Homeಕರೋನಾ ತಲ್ಲಣನೀವು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧದ ತನಿಖೆ ಕುರಿತು ದೆಹಲಿ...

ನೀವು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧದ ತನಿಖೆ ಕುರಿತು ದೆಹಲಿ ಹೈಕೋರ್ಟ್‌

- Advertisement -
- Advertisement -

ಗೌತಮ್‌ ಗಂಭೀರ್‌ ಫೌಂಡೇಶನ್‌ ವತಿಯಿಂದ ದೆಹಲಿಯಲ್ಲಿ ಕೊರೋನಾ ವೈರಸ್‌ ಗೆ ಸಂಬಂಧಿಸಿದ ಔಷಧಿಗಳನ್ನು ಸಂಗ್ರಹಿಸಿದ ಮತ್ತು ವಿತರಿಸಿದ ಪ್ರಕರಣವನ್ನು ದೆಹಲಿ ಹೈಕೋರ್ಟ್‌ ಅತ್ಯಂತ ಗಂಭಿರವಾಗಿ ಪರಿಗಣಿಸಿದೆ. ಸಾವಿರಾರು ಜನರು ಔಷಧಗಳಿಲ್ಲದೇ ಸಾಯುತ್ತಿರುವಾಗ ಇಲ್ಲೊಬ್ಬ ನೂರಾರು ಸಂಖ್ಯೆಯಲ್ಲಿ ಔಷಧಿಯನ್ನು ದಾಸ್ತಾನು ಇರಿಸಿಕೊಂಡಿದ್ಧಾನೆ. ಅವರನ್ನು ಜನರ ಜೀವ ರಕ್ಷಿಸುವ ಹೀರೋ ಗಳೆಂದು ಸರ್ಕಾರ ಮತ್ತು ನೀವು ತಿಳಿದಿರಬಹುದು. ಆದರೆ ನ್ಯಾಯಾಲಯ ವಿಪತ್ತಿನ ಸಂದರ್ಭದಲ್ಲಿ ಕಳ್ಳ ಮಾರ್ಗದಲ್ಲಿ ಹೀರೋಗಳಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಬಯಸುತ್ತದೆ ಎನ್ನುವ ಮೂಲಕ ಕುಂಟುತ್ತ ಸಾಗುತ್ತಿರುವ ಗೌತಮ್‌ ಗಂಭೀರ್‌ ಫೌಂಢೇಶನ್‌ ವಿರುದ್ಧದ ತನಿಖೆಯ ಕುರಿತು ದೆಹಲಿ ಹೈಕೋರ್ಟ್‌ ಪೀಠ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ಗೌತಮ್‌ ಗಂಭೀರ್‌ ಮತ್ತು ಇತರ ಬಿಜೆಪಿ ನಾಯಕರು ಕೊರೋನಾ ಔಷಧಿಗಳನ್ನು ಹಂಚಿದ ಮತ್ತು ಅನುಮತಿಯಿಲ್ಲದೇ ಔಷಧಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ವಿಷಯಕ್ಕೆ ಕಳೆದ ತಿಂಗಳು ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ಪ್ರಕರಣ ದೆಹಲಿ ನ್ಯಾಯಲಯದ ಮುಂದೆ ವಿಚಾರಣೆಗೆ ಬಂದಿದೆ. ವಿಚಾರಣೆ ವೇಲೆ ದೆಹಲಿ ಸರ್ಕಾರದ ಔಷಧ ನಿಯಂತ್ರಕರನ್ನು ದೆಹಲಿ ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನೀವು ನಮಗೆ ಮೋಸಗೊಳಿಸಬೇಕೆಂದು ಬಯಸಿದರೆ ಅದು ಸಾಧ್ಯವಿಲ್ಲ. ನಾವು ನಿಷ್ಕಪಟವಾಗಿದ್ದೇವೆ. ನೀವು ನಿಮ್ಮ ಕೆಲಸ ಮಾಡುವುದು ಉತ್ತಮ. ಇಲ್ಲವಾದಲ್ಲಿ ನ್ಯಾಯಲಯ ತನ್ನದೇ ರೀತಿಯಲ್ಲಿ ನಿಮ್ಮನ್ನು ನಡೆಸಿಕೊಳ್ಳುತ್ತದೆ. ಎಂದು ನ್ಯಾಯಾಲಯವು ಡ್ರಗ್‌ ಕಂಟ್ರೋಲರ್‌ ಗೆ ಕಟು ಶಬ್ಧದಲ್ಲಿ ಎಚ್ಚರಿಕೆಯನ್ನು ನೀಡಿದೆ.

ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಮತ್ತು ಆಮ್‌ ಆದ್ಮಿ ಪಕ್ಷದ ಶಾಸಕ ಪ್ರವೀಣ್‌ ಕುಮಾರ್‌ ಅವರು ಅಕ್ರಮವಾಗಿ ಕೊರೋನಾ ಔಷಧಿಗಳನ್ನು ಸಂಗ್ರಹಿಸಿ, ಅಕ್ರಮವಾಗಿ ಜನರಿಗೆ ಹಂಚಿದ ಪ್ರಕರಣದಲ್ಲಿ ನ್ಯಾಯಾಲಯ ಈ ಮಾತುಗಳನ್ನು ಆಡಿದೆ. ಇಂದು ಪ್ರಕರಣದ ವಿಚಾರಣೆಯನ್ನು ನಡೆಸಿದ ದೆಹಲಿ ಹೈಕೋರ್ಟ್‌ ನ ವಿಭಾಗೀಯ ಪೀಠ ಡ್ರಗ್‌ ಕಂಟ್ರೋಲರ್‌ ಇವೆರಡು ಪ್ರಕರಣದಲ್ಲಿ ನಡೆಸುತ್ತಿರುವ ತನಿಖೆ ಅತ್ಯಂತ ಅಸಮರ್ಪಕ ಮತ್ತು ಅಸಮಾಧಾನಕಾರಿಯಾಗಿದೆ ಎಂದು ಕೆಂಡಾಮಂಡಲವಾಯಿತು.

ಜಸ್ಟಿಸ್‌ ವಿಪಿನ್‌ ಸಂಘಿ ಮತ್ತು ಜಸ್ಟಿಸ್‌ ಜಸ್ಮಿತ್‌ ಸಿಂಗ್‌ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್‌ ವಿಭಾಗೀಯ ಪೀಠ ಅಕ್ರಮ ಔಷಧ ವಿತರಣೆಯ ಪ್ರಕರಣದ ತನಿಖೆಯನ್ನು ವಿಳಂಬ ಮಾಡುತ್ತಿರುವ ಕುರಿತು ದೆಹಲಿ ಸರ್ಕಾರದ ಔಷಧ ನಿಯಂತ್ರಕರ ಮೇಲೆ ವ್ಯಾಪಕವಾಗಿ ಹರಿಹಾಯ್ದಿದೆ.

ನಾವು ನಿಮ್ಮನ್ನು ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಪರವಾಗಿ ಹಾಜರಾಗಲಿ ಎಂದು ಬಯಸುತ್ತಿಲ್ಲ. ನಿಮ್ಮ ತಲೆಬುಡವಿಲ್ಲದ ದುರುದ್ಧೇಶಪೂರಿತ ವಾದವನ್ನು ಒಪ್ಪಲು ನಾವು ಸಿದ್ಧರಿಲ್ಲ. ಇಲ್ಲಿ ವ್ಯಕ್ತಿಯೊಬ್ಬ ಸಾವಿರಾರು ಸಂಖ್ಯೆಯ ಅತ್ಯಂತ ಅಗತ್ಯವಾದ ಔಷಧಿಯನ್ನು ಸಂಗ್ರಹಿಸಿಕೊಂಡು ನಿಂತಿದ್ದಾನೆ. ಯಾವುದೇ ಆಧಾರಗಳಿಲ್ಲದೇ ಈ ವ್ಯಕ್ತಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ಖರೀದಿಸಿ ಸಂಗ್ರಹಿಸಿರುವುದು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣುತ್ತಿದೆ. ಈ ವ್ಯಕ್ತಿಗಳಿಂದ ರಾಜ್ಯದಲ್ಲಿ ಔಷಧಿಗಳ ಸುಗಮ ಪೂರೈಕೆಗೆ ಅಡ್ಡಿಯಾಗಿದೆ ಎಂದು ವಿಭಾಗೀಯ ಪೀಠವು ವಿಚಾರಣೆಯ ವೇಳೆ ದೆಹಲಿ ಸರ್ಕಾರದ ಪರ ವಕೀಲರಿಗೆ ಹೇಳಿದೆ.

ಇನ್ನು ಮುಂದುವರೆದು ದೆಹಲಿ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ದೆಹಲಿ ನ್ಯಾಯಾಲಯ “ನೀವಿಲ್ಲಿ ಡ್ರಗ್‌ ಕಂಟ್ರೋಲರ್‌ ಪರವಾಗಿ ವಾದಿಸಲು ಬಂದಿದ್ದರೆ ಅವರ ಪರವಾಗಿ ವಾದಿಸಿ. ಆದರೆ ರಾಜ್ಯದಲ್ಲಿ ಔಷಧಿಗಳ ಕೊರತೆ ಇಲ್ಲವೆಂದು ಸಬೂಬು ಹೇಳಬೇಡಿ. ಔಷಧಿಗಳ ಕೊರತೆಯಿರುವುದು ನ್ಯಾಯಾಲಯಕ್ಕೆ ತಿಳಿದಿದೆ. ನೀವು ಆಡಳಿತವನ್ನು ಈ ಕುರಿತು ಪ್ರಶ್ನಿಸಬೇಕು. ಒಂದು ವೇಳೆ ಈ ಉತ್ತರ ನಿಮ್ಮಿಂದಲೇ ಬಂದಿರುವುದಾದರೆ ನಾವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಗಿ” ಎಂದು ನ್ಯಾಯಾಲಯವು ಡ್ರಗ್‌ ಕಂಟ್ರೋಲರ್‌ ಪರ ವಕೀಲರ ವಾದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿತು.

ದೆಹಲಿ ಡ್ರಗ್‌ ಕಂಟ್ರೋಲರ್‌ ಸಲ್ಲಿಸಿದ ಸಂಸದ ಗೌತಮ್‌ ಗಂಭೀರ್‌ ಮತ್ತು ಶಾಸಕ ಪ್ರವೀಣ್‌ ಕುಮಾರ್‌ ಅಕ್ರಮ ಔಷಧ ಸಂಗ್ರಹ ಪ್ರಕರಣದ ಇದುವರೆಗಿನ ಬೆಳವಣಿಗೆಯ ವರದಿಯನ್ನು ನ್ಯಾಯಾಲಯವು ತಿರಸ್ಕರಿಸಿತಲ್ಲದೇ ಹೊಸದಾಗಿ ವರದಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಿತು.

ವಿಚಾರಣೆಯ ವೇಳೆ ಡ್ರಗ್‌ ಕಂಟ್ರೋಲರ್‌ ಪರವಾಗಿ ವಾದಿಸಿದ ಆಡಿಷನಲ್‌ ಸ್ಟಾಂಡಿಂಗ್‌ ಕೌನ್ಸೆಲ್‌ ನಂದಿತಾ ರಾವ್‌ ಈ ವ್ಯಕ್ತಿಗಳು ಔಷಧಿಗಳನ್ನು ಒಬ್ಬ ಡೀಲರ್‌ ನಿಂದ ಖರೀದಿಸಿಲ್ಲ. ಡೀಲರ್ ಗಳ ವ್ಯವಹಾರದಲ್ಲಿ ಡ್ರಗ್‌ ಕಂಟ್ರೋಲರ್‌ ಮಧ್ಯ ಪ್ರವೇಶಿಸುವುದಿಲ್ಲ. ಏಪ್ರಿಲ್‌ 22 ರಿಂದ ಏಪ್ರಿಲ್‌ 29 ರ ಅವಧಿಯಲ್ಲಿ ಯಾವುದೇ ರೋಗಿಗಳು ಕೋವಿಡ್‌ ಚಿಕಿತ್ಸಾ ಕ್ಯಾಂಪ್‌ಗಳಿಗೆ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದರು.

ಎಎಎಸ್‌ಸಿ ನಂದಿತಾ ರಾವ್‌ ಅವರ ವರದಿಯನ್ನು ಒಪ್ಪದ ನ್ಯಾಯಾಲಯವು “ಅಷ್ಟು ದೊಡ್ಡ ಪ್ರಮಾಣದಲ್ಲಿ ಔಷಧಗಳು ಹೇಗೆ ವ್ಯಕ್ತಿಗಳಿಗೆ ಸಿಗಲು ಸಾಧ್ಯವಾಯಿತು ? ಔಷಧಿ ವಿತರಕರು ಹೇಗೆ ಯಾವುದೋ ಸಂಘ ಸಂಸ್ಥೆಗಳಿಗೆ ಔಷಧಿಗಳನ್ನು ಮಾರಲು ಹೇಗೆ ಸಾಧ್ಯ? ಔಷಧಿಗಳನ್ನು ಅಕ್ರಮವಾಗಿ ಸಂಗ್ರಹಿಸಿ ವಿತರಿಸಿದ ಸಂಸ್ಥೆಗಳು ಯಾವುದೇ ವೈದ್ಯಕೀಯ ಸಂಘಗಳಲ್ಲ ಅವು ರಾಜಕೀಯ ಸಂಘಟನೆಗಳು ಎಂದು ಜಸ್ಟಿಸ್‌ ವಿಪಿನ್‌ ಸಂಘಿ ಡ್ರಂಗ್‌ ಕಂಟ್ರೋಲರ್‌ ವರದಿಯನ್ನು ಸಾರಾ ಸಗಟಾಗಿ ತಿರಸ್ಕರಿಸಿದರು.

ನೀವು ನಿಯಮಾವಳಿಗಳನ್ನು ಓದುವ ತೊಂದರೆಗಳನ್ನು ತೆಗೆದುಕೊಂಡಂತೆ ಕಾಣುವುದಿಲ್ಲ. ಕೇವಲ ಮಾಧ್ಯಮಗಳ ವರದಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ವಾದಿಸಲು ಬಂದಿದ್ದೀರಿ. ಈ ತನಿಖೆಯ ಬೆಳವಣಿಗೆಯ ವರದಿಗೆ ಇದನ್ನು ಬರೆಯಲಾಗಿರುವ ಕಾಗದದಷ್ಟು ಬೆಲೆಯಿಲ್ಲ. ಈ ಕಸಕ್ಕೆ ಯಾವುದೇ ಕಾನೂನಾತ್ಮಕ ಆಧಾರವಿಲ್ಲ ನ್ಯಾಯಾಲಯ ಇದನ್ನು ತಿರಸ್ಕರಿಸುತ್ತದೆ ಎಂದು ಜಸ್ಟಿಸ್‌ ವಿಪಿನ್‌ ಸಂಘಿ ಡ್ರಗ್‌ ಕಂಟ್ರೋಲರ್‌ ವರದಿಯನ್ನು ತಿರಸ್ಕರಿಸಲು ಮುಂದಾದರು.

ಜೊತೆಗೆ ಔಷಧಗಳನ್ನು ವಿತರಿಸುವ ಮೂಲಕ ಹೀರೋಗಳಾಗಲು ಯತ್ನಿಸುವವರಿಗೆ ನ್ಯಾಯಾಲಯ ಕಠಿಣ ಎಚ್ಚರಿಕೆಯನ್ನು ನೀಡಿತು.

ವಿಚಾರಣೆ ವೇಳೆ ಸರ್ಕಾರದ ನಡೆಯನ್ನು ಖಂಡಿಸಿದ ಜಸ್ಟಿಸ್‌ ವಿ.ಪಿ. ಸಂಘಿಯವರು ವಿಪತ್ತಿನ ಸಂದರ್ಭವನ್ನು ಬಳಸಿಕೊಂಡು ಜನರ ಜೀವರಕ್ಷಿಸುವ ಹೀರೊಗಳಂತೆ ವರ್ತಿಸುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸಿದರೆ ನ್ಯಾಯಾಲಯಕ್ಕೆ ಏನು ಮಾಡಬೇಕೆಂದು ತಿಳಿದಿದೆ. ಆದರೆ ಈ ಜೆಂಟಲ್‌ ಮನ್‌ ಗಳಿಗೆ ಅವರ ತಪ್ಪು ಮನವರಿಕೆಯಾಗಬೇಕಿದೆ. ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಆಲೋಚಿಸಿ. ಯಾವುದು ಒಳ್ಳೆಯದು ಯಾವುದು ಅಪಾಯಕಾರಿ ಎಂಬುದು ನಿಮಗೆ ತಿಳಿದಿರಬೇಕು. ಯಾವಗಲೂ ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ. ಸಾವಿರಾರು ಜನರಿಗೆ ಅಗತ್ಯವಿರುವ ಔಷಧಗಳು ಇವು. ಆದರೆ ಅವರಿಗೆ ಆ ಔಷಧಗಳು ಸಿಗಲಿಲ್ಲ. ಈ ವ್ಯಕ್ತಿ ಸಂಗ್ರಹಿಸಿಟ್ಟುಕೊಂಡ 286 ಪಟ್ಟಿ ಔಷಧಗಳು ಒಬ್ಬ ವ್ಯಕ್ತಿಗೆ ಅಗತ್ಯಕ್ಕಿಂತ ಹೆಚ್ಚು. ನೀವು ಈ ವಿಚಾರದಲ್ಲಿ ನ್ಯಾಯಾಲಯದ ಕಣ್ಣೊರೆಸಲು ಪ್ರಯತ್ನಿಸಿದರೆ ಆ ಪ್ರಯತ್ನವನ್ನು ಬಿಟ್ಟುಬಿಡಿ. ನೀವು ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ. ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸಿದರೆ ನ್ಯಾಯಲಯ ತನ್ನದೇ ಕ್ರಮ ಕೈಗೊಳ್ಳುತ್ತದೆ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡಿ. ಇಲ್ಲವಾದರೆ ನಿಮ್ಮ ಕೆಲಸಬಿಡಿ ಬೇರೆಯಾರಾದರೂ ನಿಮ್ಮ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ದೆಹಲಿ ಹೈಕೋರ್ಟ್‌ ಡ್ರಗ್‌ ಕಂಟ್ರೋಲರ್‌ ಪರ ವಾದಿಸಿದ ಸರ್ಕಾರಿ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ತನಿಖೆಯ ಬೆಳವಣಿಗೆಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಇನ್ನಷ್ಟು ದಿನ ಕಾಲಾವಕಾಶವನ್ನು ಕೇಳಿದ ದೆಹಲಿಯ ಸಹಾಯಕ ಔಷಧ ನಿಯಂತ್ರಕರಿಗೆ ಈ ವಿಷಯವನ್ನು ನೀವು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ನಿಮ್ಮಿಂದ ಇದುವರೆಗೆ ಗೌತಮ್‌ ಗಂಭೀರ್ ಫೌಂಢೇಶನ್‌ ಗೆ ದೊಡ್ಡ ಪ್ರಮಾಣದಲ್ಲಿ ಔಷಧಗಳು ಹೇಗೆ ಪೂರೈಕೆಯಾಯಿತು ಎಂದು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ನೀವು ಅವರನ್ನು ಸಾವಿರಾರು ಜನರ ಜೀವವನ್ನು ರಕ್ಷಿಸಿದ ಹೀರೋಗಳಂತೆ ನೋಡುತ್ತಿದ್ದೀರಿ. ಆ ವ್ಯಕ್ತಿಯ ನೆರವು ಇಲ್ಲದಿದ್ದರೆ ಸಾವಿರಾರು ಜನರು ಔಷಧಗಳಿಲ್ಲದೇ ಸಾಯುತ್ತಿದ್ದರು ಎನ್ನುವುದು ನಿಮ್ಮ ಭಾವನೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿತು.

ಪ್ರಕರಣದ ಅರ್ಜಿದಾರರಾದ ಆಮ್‌ ಆದ್ಮಿ ಪಕ್ಷದ ಶಾಸಕಿ ಪ್ರೀತಿ ತೋಮರ್‌ ಅವರ ಪರ ವಕೀಲರು ಮಂಡಿಸಿದ ವರದಿಯನ್ನು ಸ್ವೀಕರಿಸಿದ ನ್ಯಾಯಾಲಯ ಡ್ರಗ್‌ ಕಂಟ್ರೋಲರ್‌ ವರದಿಯನ್ನು ತಿರಸ್ಕರಿಸಿ ಮುಂದಿನ ಗುರುವಾರದ ಒಳಗೆ ತನಿಖೆಯಲ್ಲಿ ಬೆಳವಣಿಗೆ ಸಾಧಿಸಿ ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರದೊಂದಿಗೆ ಬರಬೇಕು ಎಂದು ಆದೇಶಿಸಿತು. ಜೊತೆಗೆ ಗುರುವಾರಕ್ಕೆ ಪ್ರಕರಣದ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಮುಂದೂಡಿತು.


ಇದನ್ನೂ ಓದಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಕತ್ತರಿಯಲ್ಲಿ‌ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪಾನ್‌ ಬಂದೋಪಾದ್ಯಾಯ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇವಿಎಂ ಜನರ ಮನಸ್ಸಿನಲ್ಲಿ ಅಪನಂಬಿಕೆ ಸೃಷ್ಟಿಸಿದೆ: ಅಖಿಲೇಶ್ ಯಾದವ್

0
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಆಗ್ರಹಿಸಿದ್ದು, ಇವಿಎಂಗಳನ್ನು ನೇರವಾಗಿ ಉಲ್ಲೇಖಿಸದೆ ಈ ಯಂತ್ರಗಳು ಮತ್ತು ಮತದಾನದ ಫಲಿತಾಂಶಗಳು ಜನರ ಮನಸ್ಸಿನಲ್ಲಿ ಅಪನಂಬಿಕೆಯ ಭಾವನೆಯನ್ನು ಮೂಡಿಸಿವೆ...