ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರಿಂದ ಅಪಹರಣಕ್ಕೊಳಗಾಗಿದ್ದಾರೆ ಎನ್ನಲಾದ ಸಂತ್ರಸ್ತೆ ಮಹಿಳೆ ವಿಡಿಯೋವೊಂದನ್ನು ವೈರಲ್ ಮಾಡಿದ್ದು, ರೇವಣ್ಣ ಕುಟುಂಬ ನನ್ನನ್ನು ಇಚ್ಛೆಗೆ ವಿರುದ್ಧವಾಗಿ ಇಟ್ಟುಕೊಂಡಿಲ್ಲ, ನನಗೆ ಯಾವುದೇ ತೊಂದರೆ ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಹೆಚ್ ಡಿ ರೇವಣ್ಣ ಅವರ ಸಹಾಯಕರ ನಿವಾಸದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಮಹಿಳೆಯನ್ನು ರಕ್ಷಿಸಿದ ಒಂದು ವಾರದ ನಂತರ ವೀಡಿಯೊ ವೈರಲ್ ಆಗಿದೆ. ರೇವಣ್ಣ ಮತ್ತು ಇತರರು ತಾಯಿಯನ್ನು ಅಪಹರಿಸಿದ್ದಾರೆ ಎಂದು ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ರೇವಣ್ಣ ಮತ್ತು ಸತೀಶ್ ಬಾಬಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ.
2 ನಿಮಿಷ 32 ಸೆಕೆಂಡ್ ಇರುವ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದು, ನನ್ನನ್ನು ಯಾರೂ ಅಪಹರಣ ಮಾಡಿಲ್ಲ, ನಾನಾಗಿ ಮನೆಯಿಂದ ಬಂದಿದ್ದೇನೆ. ಭವಾನಿ, ರೇವಣ್ಣ, ಪ್ರಜ್ವಲ್ ಮತ್ತು ಬಾಬಣ್ಣರಿಂದ ಯಾವುದೇ ತೊಂದರೆ ಆಗಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ ನಮ್ಮ ಊರಿನವರು ಏನೇನೋ ಮಾತನಾಡಿದ್ದನ್ನು ಕೇಳಿ ಬೇಸರವಾಗಿತ್ತು. ಹೀಗಾಗಿ 4 ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ, 2 ದಿನಗಳ ಬಳಿಕ ನಾನೇ ಬರುತ್ತೇನೆ ಎಂದು ಉಲ್ಲೇಖಿಸಿದ್ದು, ಗಾಬರಿ ಪಡಬೇಡಿ ಏನೂ ತೊಂದರೆ ಆಗಿಲ್ಲ, ಚನ್ನಾಗಿ ಇದ್ದೇನೆ ವಾಪಸ್ ಬರುತ್ತೇನೆ. ಯಾರೂ ಏನೆ ಅಂದರು ತಲೆಗೆ ಹಾಕಿಕೊಳ್ಳಬೇಡಿ. ಅವರಿಂದ ನಮಗೆ ತೊಂದರೆ ಆಗಿಲ್ಲ. ಮೊಬೈಲ್‍ಗೂ ನಮಗೂ ಸಂಬಂಧವಿಲ್ಲ. ನಾಲ್ಕು ದಿನ ನೆಂಟರ ಮನೆಗೆ ಹೋಗಿದ್ದೆ, ಈ ಬಗ್ಗೆ ಎಲ್ಲಿ ಬೇಕಾದರೂ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಮಹಿಳೆ ಅಪಹರಣ ಪ್ರಕರಣದ ಇನ್ನೋರ್ವ ಆರೋಪಿ ಸತೀಶ್ ಬಾಬಣ್ಣನ ಹೆಸರನ್ನೂ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ, ಅವರು ನನಗೆ ಯಾವುದೇ ತೊಂದರೆ ಮಾಡಿಲ್ಲ. ಅವರು ನನ್ನನ್ನು ಚೆನ್ನಾಗಿ ನೋಡಿಕೊಂಡರು ಮತ್ತು ನನ್ನನ್ನು ಹಿಂದಕ್ಕೆ ಕಳುಹಿಸಿದರು. ಅವರು ನನಗೆ ಯಾವುದೇ ಸಮಸ್ಯೆಗಳನ್ನು ಉಂಟುಮಾಡಿಲ್ಲ. ನನ್ನ ಮಗ ಆತಂಕಗೊಂಡು ದೂರು ನೀಡಿದ್ದಾರೆ. ಯಾರೂ ನನ್ನನ್ನು ಅಪಹರಿಸಿಲ್ಲ. ನಾನು ನನ್ನ ಸ್ವಂತ ಇಚ್ಛೆಯಿಂದ ಹೋಗಿದ್ದೇನೆ ಮತ್ತು ಹಿಂತಿರುಗುತ್ತೇನೆ ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಏಪ್ರಿಲ್ 26ರಂದು ಸಾರ್ವಜನಿಕವಾಗಿ ಸೋರಿಕೆಯಾದ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಈ ಮಹಿಳೆಯ ವಿಡಿಯೋ ಕೂಡ ಸೇರಿದೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಮಹಿಳೆಯನ್ನು ಅಪಹರಿಸಿರುವ ಆರೋಪ ಕೇಳಿ ಬಂದಿತ್ತು.
ಇದನ್ನು ಓದಿ: 96 ಲೋಕಸಭಾ ಕ್ಷೇತ್ರಗಳಲ್ಲಿ 4ನೇ ಹಂತದ ಮತದಾನ ಆರಂಭ: ಆಂಧ್ರ, ಒಡಿಶಾ ವಿಧಾನಸಭೆಗೂ ಮತದಾನ


