ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಚುನಾವಣಾ ಆಯೋಗ ಪ್ರಾರಂಭಿಸುತ್ತಿದ್ದಂತೆ, ಈ ಕ್ರಮವನ್ನು ಕಾನೂನಾತ್ಮಕವಾಗಿ, ರಾಜಕೀಯವಾಗಿ ಮತ್ತು ಇತರ ಎಲ್ಲಾ ಮಾರ್ಗಗಳ ಮೂಲಕ ವಿರೋಧಿಸುವುದಾಗಿ ಕಾಂಗ್ರೆಸ್ ಭಾನುವಾರ (ಜೂ.29) ಹೇಳಿದೆ.
ಶನಿವಾರ (ಜೂ.28) ಚುನಾವಣಾ ಆಯೋಗವು, ರಾಜ್ಯದ 7.89 ಕೋಟಿ ಮತದಾರರಲ್ಲಿ ಸುಮಾರು 2.93 ಕೋಟಿ ಜನರು ಅಥವಾ ಸುಮಾರು 37% ಮತದಾರರು ತಮ್ಮ ಅರ್ಹತೆಯ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ, ಬಿಹಾರದ ಶೇಕಡ 37ರಷ್ಟು ಮತದಾರರು ಮರು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಲು ಚುನಾವಣಾ ಆಯೋಗ ಅಳವಡಿಸಿಕೊಂಡ ವಿಧಾನವನ್ನು ಪ್ರಶ್ನಿಸಿದ್ದಾರೆ.
“ಶೇ.37ರಷ್ಟು ಮತದಾರರು ದಾಖಲೆಗಳನ್ನು ಸಲ್ಲಿಸಿ ತಮ್ಮ ಮತದಾನದ ಆರ್ಹತೆಯನ್ನು ಖಚಿತಪಡಿಸಿಕೊಳ್ಳುವಂತೆ ಹೇಳಲು ಚುನಾವಣಾ ಆಯೋಗ ಅಳವಡಿಸಿಕೊಂಡ ವಿಧಾನ ಯಾವುದು? ಅವರಿಗೆ ಈ 37 ಶೇಕಡ ಅಂಕಿ ಅಂಶ ಸಿಕ್ಕಿದ್ದು ಎಲ್ಲಿ? ಇದರರ್ಥ ಅವರ ಬಳಿ 2003ರ ಮತದಾರರ ಪಟ್ಟಿ ಮೆಶಿನ್ ರೀಡೇಬಲ್ ಸ್ವರೂಪದಲ್ಲಿದೆ ಎಂದಾಗಿದೆಯೇ? ಇಲ್ಲದಿದ್ದರೆ, ವಿಶ್ಲೇಷಿಸಿ ಅಂಕಿ ಅಂಶವನ್ನು ನೀಡುವುದು ಅಸಾಧ್ಯ. ಕಾಂಗ್ರೆಸ್ ಬಹಳ ದಿನಗಳಿಂದ ಮಹಾರಾಷ್ಟ್ರದ ಮತದಾರರ ಪಟ್ಟಿಯನ್ನು ಕೇಳುತ್ತಿದೆ. ಅವರ ಬಳಿ 2003ರ ಮತದಾರರ ಪಟ್ಟಿ ಇದ್ದರೆ, ಅವರು ನಮಗೆ 2024ರ ಮಹಾರಾಷ್ಟ್ರ ಮತದಾರರ ಪಟ್ಟಿಯನ್ನು ಏಕೆ ತೋರಿಸುತ್ತಿಲ್ಲ?” ಎಂದು ಸಮೀಕ್ಷೆಗಳನ್ನು ಪರಿಶೀಲಿಸುವ ಎಂಟು ಸದಸ್ಯರ ಕಾಂಗ್ರೆಸ್ ಸಮಿತಿಯ ಸದಸ್ಯ ಚಕ್ರವರ್ತಿ ಕೇಳಿದ್ದಾರೆ.
ಮಾರ್ಚ್ 8ರಂದು ಚುನಾವಣಾ ಆಯೋಗವು ಆಧಾರ್ ಬಳಸಿ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಇದು ಪರಿಪೂರ್ಣವಲ್ಲದಿದ್ದರೂ, ಬಿಹಾರದಲ್ಲಿ ತೀವ್ರವಾದ ಮತದಾರರ ಪರಿಷ್ಕರಣೆಗಿಂತ ಹೆಚ್ಚು ಕಾರ್ಯಸಾಧ್ಯವಾದ ಪರ್ಯಾಯ ಪರಿಹಾರವಾಗಿದೆ ಎಂದು ಚಕ್ರವರ್ತಿ ಹೇಳಿದ್ದಾರೆ.
“ಆಧಾರ್ ಪ್ರಸ್ತಾವನೆಯ ಮೂರು ತಿಂಗಳ ನಂತರ ಚುನಾವಣಾ ಆಯೋಗವು ಇದ್ದಕ್ಕಿದ್ದಂತೆ ಎಸ್‌ಐಆರ್ ಘೋಷಿಸಿದ್ದು ಏಕೆ? ಆಧಾರ್ ಪ್ರಸ್ತಾವನೆ ಕೈ ಬಿಟ್ಟಿದ್ದು ಏಕೆ? ಎಂದು ಚಕ್ರವರ್ತಿ ಪ್ರಶ್ನಿಸಿದ್ದಾರೆ.
ಜೂನ್ 24ರಂದು ಚುನಾವಣಾ ಆಯೋಗವು 2003ರ ಪಟ್ಟಿಯಲ್ಲಿಲ್ಲದ, ಪ್ರಸ್ತುತ ಇರುವ ಮತದಾರರು ತಮ್ಮ ಮತ್ತು ತಮ್ಮ ಪೋಷಕರ ಪೌರತ್ವದ ಪುರಾವೆಗಳನ್ನು ಒದಗಿಸಬೇಕೆಂದು ಆದೇಶಿಸಿದೆ. ಇದು ಬಡವರು ಮತ್ತು ತಳವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಮತ್ತು ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕಳವಳ ಉಂಟು ಮಾಡಿದೆ.
“ನಾನು 2024 ಅಥವಾ 2019ರಲ್ಲಿ ಮತದಾರನಾಗಿದ್ದರೆ, ಈಗ ಮತದಾರನಲ್ಲ. ನಾನು ಮರು ನೋಂದಣಿ ಮಾಡಿಕೊಳ್ಳಬೇಕು. ಈಗ, ನಾನು ಮತದಾರನಾಗಿ ನನ್ನ ಸತ್ಯಾಸತ್ಯತೆಯನ್ನು ಸಾಬೀತುಪಡಿಸಬೇಕು. ದಿನಾಂಕ ಮತ್ತು ಜನ್ಮ ಸ್ಥಳವನ್ನು ಸಾಬೀತುಪಡಿಸಬೇಕು ಎಂದು ಅವರು ಹೇಳುತ್ತಿದ್ದಾರೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ನಾನೇಕೆ ತಪ್ಪಿತಸ್ಥನಾಗಬೇಕು?” ಎಂದು ಚಕ್ರವರ್ತಿ ಹೇಳಿದ್ದಾರೆ.
ಮತದಾರರು ಮತ್ತು ಅವರ ಪೋಷಕರ ಜನನ ಪ್ರಮಾಣಪತ್ರಗಳನ್ನು ಒದಗಿಸಲು, ಹುಟ್ಟಿದ ವರ್ಷವನ್ನು ಅವಲಂಬಿಸಿ, ಚುನಾವಣಾ ಆಯೋಗವು ಕಠಿಣ ನಿಯಮಗಳನ್ನು ತಂದಿದೆ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಈಗ ಯಾರ ಬಳಿ ಸರಿಯಾದ ದಾಖಲೆಗಳಿವೆ ಮತ್ತು ಯಾರ ಬಳಿ ಇಲ್ಲ ಎಂಬುದನ್ನು ನಿರ್ದೇಶಿಸುತ್ತಾರೆ. ಹೀಗಾಗಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯಾರು ಮತ ಚಲಾಯಿಸಬೇಕು ಎಂಬುದನ್ನು ಅವರು ನಿರ್ದೇಶಿಸುತ್ತಾರೆ ಎಂದು ಚಕ್ರವರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.
ಜನಾಕ್ರೋಶಕ್ಕೆ ಮಣಿದ ಮಹಾರಾಷ್ಟ್ರ ಸರ್ಕಾರ: ತ್ರಿಭಾಷಾ ನೀತಿ ನಿರ್ಣಯ ರದ್ದು