ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಎಸ್ ಪುಟ್ಟಸ್ವಾಮಿ (98) ಅವರು ಸೋಮವಾರ (ಅ.28) ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ನ್ಯಾಯಮೂರ್ತಿ ಪುಟ್ಟಸ್ವಾಮಿ ಅವರು ಆಧಾರ್ ಯೋಜನೆಯನ್ನು ಪ್ರಶ್ನಿಸಿದ ಮೊದಲ ವ್ಯಕ್ತಿ ಎಂದೇ ಪ್ರಸಿದ್ಧರು. ಆಧಾರ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ 2012ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ರಕ್ಷಿಸಿರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ಆಧಾರ್ ಯೋಜನೆಯನ್ನು ಅದು ಎತ್ತಿ ಹಿಡಿದಿತ್ತು.
ಖಾಸಗಿತನದ ಹಕ್ಕು ಮೂಲಭೂತ ಹಕ್ಕಲ್ಲ, ಸಂವಿಧಾನ ಖಾಸಗಿತನದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಾದವನ್ನು ಬದಿಗೆ ಸರಿಸಿ 9 ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ವೈಯಕ್ತಿಕ ನೆಲೆಯಲ್ಲಿ ಹೆಚ್ಚಿನ ಮಾಹಿತಿ ಅಗೆಯುವುದು ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದಿತ್ತು. ಸಂತಾನೋತ್ಪತ್ತಿ ಹಕ್ಕು, ದಯಾಮರಣ, ಬಹುತ್ವ ಹೀಗೆ ಹಲವು ಅಂಶಗಳಿಗೆ ಸಂಬಂಧಿಸಿದಂತೆ ಈ ತೀರ್ಪು ಮಹತ್ವದ್ದಾಗಿದೆ.
ವಕೀಲರಾಗಿ 1952ರಲ್ಲಿ ನೋಂದಾಯಿಸಿಕೊಂಡ ಪುಟ್ಟಸ್ವಾಮಿ ಅವರು, ನವೆಂಬರ್ 1977ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹೈಕೋರ್ಟ್‌ನಲ್ಲಿ1986ರವರೆಗೆ ಸೇವೆ ಸಲ್ಲಿಸಿದ್ದ ಅವರು, ನಿವೃತ್ತಿ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಪೀಠದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸೌಜನ್ಯ : ಬಾರ್ & ಬೆಂಚ್
ಇದನ್ನೂ ಓದಿ : ಮುಡಾ ಪ್ರಕರಣ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಆರಂಭಿಸಿದ ಇಡಿ


