ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಜಾತಿ ತಾರತಮ್ಯಕ್ಕೆ ಬಲಿಯಾಗಿ ಇಂದಿಗೆ (17 ಜನವರಿ 2026) 10 ವರ್ಷಗಳಾಗಿದ್ದು, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ರೋಹಿತ್ ಅವರನ್ನು ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.
ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದ ಬಗ್ಗೆ ಉಲ್ಲೇಖಿಸಿರುವ ಅವರು, ಇದರ ವಿರುದ್ದ ಕಠಿಣ ಕಾನೂನು ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ದಲಿತ ಯುವಜನರು ಧ್ವನಿ ಎತ್ತುವಂತೆ ಕರೆ ನೀಡಿದ್ದಾರೆ.
“ರೋಹಿತ್ ವೇಮುಲ ನಿಧನರಾಗಿ ಇಂದಿಗೆ 10 ವರ್ಷಗಳು. ಆದರೆ, “ಈ ದೇಶದಲ್ಲಿ ಕನಸು ಕಾಣಲು ಎಲ್ಲರಿಗೂ ಸಮಾನ ಹಕ್ಕುಗಳಿವೆಯೇ? ಎಂಬ ಅವರ ಪ್ರಶ್ನೆ ಇನ್ನೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ರೋಹಿತ್ ಓದಲು, ಬರೆಯಲು ಬಯಸಿದ್ದರು. ವಿಜ್ಞಾನ, ಸಮಾಜ ಮತ್ತು ಮಾನವೀಯತೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ದೇಶವನ್ನು ಸುಧಾರಿಸಲು ಅವರು ಬಯಸಿದ್ದರು. ಆದರೆ ಈ ವ್ಯವಸ್ಥೆಗೆ ಒಬ್ಬ ದಲಿತ ಮುಂದೆ ಬರುವುದು ಇಷ್ಟವಿರಲಿಲ್ಲ. “ಸಾಂಸ್ಥಿಕ ಜಾತಿವಾದ, ಸಾಮಾಜಿಕ ಬಹಿಷ್ಕಾರ, ದಿನನಿತ್ಯದ ಅವಮಾನ, ‘ಯೋಗ್ಯತೆ’ಯನ್ನು ಕುರಿತು ಮಾತನಾಡುವ ಭಾಷೆ ಮತ್ತು ಅಮಾನವೀಯ ವರ್ತನೆ – ಇದೇ ಆ ವಿಷವಾಗಿದ್ದು, ಒಬ್ಬ ಪ್ರತಿಭಾವಂತ ಯುವಕನನ್ನು ಅವನ ಘನತೆಯನ್ನು ಕಸಿದುಕೊಂಡು, ಅವನನ್ನು ಏಕಾಂಗಿಯನ್ನಾಗಿ ಮಾಡುವ ಹಂತಕ್ಕೆ ತಳ್ಳಿತು” ಎಂದಿದ್ದಾರೆ.
“ಮತ್ತೆ ಇಂದು? ದಲಿತ ಯುವಜನರ ವಾಸ್ತವವೇನಾದರೂ ಬದಲಾಗಿದೆಯೇ? ಕ್ಯಾಂಪಸ್‌ಗಳಲ್ಲಿ ಅದೇ ತಿರಸ್ಕಾರ, ಹಾಸ್ಟೆಲ್‌ಗಳಲ್ಲಿ ಅದೇ ಪ್ರತ್ಯೇಕತೆ, ತರಗತಿಗಳಲ್ಲಿ ಅದೇ ಕೀಳರಿಮೆ, ಮತ್ತೆ ಅದೇ ಹಿಂಸೆ – ಮತ್ತು ಕೆಲವೊಮ್ಮೆ ಅದೇ ಸಾವು. ಏಕೆಂದರೆ ಜಾತಿ ಇಂದಿಗೂ ಈ ದೇಶದ ಅತಿದೊಡ್ಡ ಪ್ರವೇಶ ಪತ್ರವಾಗಿದೆ” ಎಂದು ಹೇಳಿದ್ದಾರೆ.
“ಅದಕ್ಕಾಗಿಯೇ ರೋಹಿತ್ ವೇಮುಲ ಕಾಯ್ದೆಯು ಕೇವಲ ಒಂದು ಘೋಷಣೆಯಲ್ಲ, ಅದೊಂದು ಅಗತ್ಯವಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯ ಅಪರಾಧವಾಗಲು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಯಾವುದೇ ವಿದ್ಯಾರ್ಥಿಯನ್ನು ಅವರ ಜಾತಿಯ ಹೆಸರಿನಲ್ಲಿ ಕುಗ್ಗಿಸುವ, ಮೌನಗೊಳಿಸುವ ಮತ್ತು ಹೊರಗಟ್ಟುವುದನ್ನು ಕೊನೆಗಾಣಿಸಲು ಇದು ಅಗತ್ಯವಾಗಿದೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
“ಈ ಹೋರಾಟ ಕೇವಲ ಸಂಸತ್ತಿನದ್ದಲ್ಲ. ಈ ಹೋರಾಟ ಕ್ಯಾಂಪಸ್‌ಗಳದ್ದು, ಯುವಜನತೆಯದ್ದು, ನಮ್ಮೆಲ್ಲರದ್ದು. ದಲಿತ ಯುವಕರೇ – ಧ್ವನಿ ಎತ್ತಿ, ಸಂಘಟಿತರಾಗಿ, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಿ. ರೋಹಿತ್ ವೇಮುಲ ಕಾಯ್ದೆಯನ್ನು ಕೂಡಲೇ ಜಾರಿಗೆ ತನ್ನಿ ಮತ್ತು ತಾರತಮ್ಯ ವಿರೋಧಿ ಕಾನೂನು ಈಗಲೇ ಬೇಕು ಎಂದು ಒತ್ತಾಯಿಸಿ” ಎಂದು ಕರೆ ನೀಡಿದ್ದಾರೆ.
“ಕರ್ನಾಟಕ ಮತ್ತು ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳು ಈ ಕಾನೂನನ್ನು ಆದಷ್ಟು ಬೇಗ ಜಾರಿಗೆ ತರುವ ಪ್ರಕ್ರಿಯೆಯಲ್ಲಿವೆ. ನ್ಯಾಯಯುತವಾದ, ಮಾನವೀಯ ಮತ್ತು ಸಮಾನತೆಯ ಭಾರತವನ್ನು ನಾವು ಬಯಸುತ್ತೇವೆ – ಅಲ್ಲಿ ಯಾವುದೇ ದಲಿತ ವಿದ್ಯಾರ್ಥಿ ತನ್ನ ಕನಸುಗಳಿಗಾಗಿ ಪ್ರಾಣ ತೆರಬೇಕಾದ ಪರಿಸ್ಥಿತಿ ಬರಬಾರದು. ರೋಹಿತ್, ನಿನ್ನ ಹೋರಾಟ ನಮ್ಮ ಜವಾಬ್ದಾರಿ” ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.


