Homeಅಂಕಣಗಳುಗೌರಿ ಕಾರ್ನರ್: ಇಡೀ ಮಾನವ ಕುಲಕ್ಕೆ ಜನ್ಮ ನೀಡಿದ ಸ್ತ್ರೀ

ಗೌರಿ ಕಾರ್ನರ್: ಇಡೀ ಮಾನವ ಕುಲಕ್ಕೆ ಜನ್ಮ ನೀಡಿದ ಸ್ತ್ರೀ

ಸಾಮಾನ್ಯವಾಗಿ ‘ಕುಟುಂಬ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಪುರುಷ ಎಂದು ನಂಬಲಾಗಿದೆ. ಆದರೆ ಅದು ತಪ್ಪು. ವಾಸ್ತವವಾಗಿ ಗಂಡು ಮಕ್ಕಳು ದೊಡ್ಡವರಾದ ಮೇಲೆ ಅವರು ಬೇಟೆಗೆ ಹೋಗುತ್ತಿದ್ದಾಗ ಮಕ್ಕಳು ಮತ್ತು ತನ್ನ ಕುಲದ ಇತರರನ್ನು ನೋಡಿಕೊಳ್ಳುತ್ತಿದ್ದದ್ದು ಮಹಿಳೆ. ಆದ್ದರಿಂದ ‘ಕುಟುಂಬ’ ಮತ್ತು ಅದರ ಲಾಲನೆಪಾಲನೆಯ ಜವಾಬ್ದಾರಿಯನ್ನು ಹೊತ್ತದ್ದು ಮಹಿಳೆ.

- Advertisement -
- Advertisement -

ಸಾಮಾನ್ಯವಾಗಿ ಇತಿಹಾಸಕಾರರು ಮಾನವಕುಲದ ಮೂಲ ಇರುವುದು ಆಹಾರಕ್ಕಾಗಿ ಬೇಟೆಯಾಡುತ್ತಿದ್ದ, ಅದಕ್ಕೆಂದು ಸಲಕರಣೆಗಳನ್ನು ತಯಾರಿಸಿದ ಪುರುಷನಲ್ಲಿ ಎಂದು ವಾದಿಸುತ್ತಾರೆ. ಆದರೆ ವಾಸ್ತವವಾಗಿ ಮಾನವಕುಲದ ಕತೆ ಪ್ರಾರಂಭವಾಗುವುದು ಪುರುಷನಿಂದಲ್ಲ, ಬದಲಾಗಿ ಮಹಿಳೆಯಿಂದ. ಯಾಕೆಂದರೆ ಆಕೆಯೇ ಆದಿಕಾಲದಿಂದ ಇವತ್ತಿನ ತನಕ ತನ್ನ ದೇಹದಲ್ಲಿ ಮಾನವನ ಮೂಲ ಮಾತೃಕೆಯನ್ನು ಹೊತ್ತುಬಂದಿರುವುದು. ಮಾತ್ರವಲ್ಲ, ಆಕೆ ವಿಕಾಸದ ಪ್ರಕ್ರಿಯೆಯಲ್ಲಿ ತನ್ನ ದೇಹದೊಳಗೆ ಮಾಡಿಕೊಂಡ ಬದಲಾವಣೆಯಿಂದಾಗಿಯೇ ಮಾನವವಂಶ ಬೆಳೆಯುವಂತೆ ಮಾಡಿದಳು. ಅಷ್ಟೇ ಮುಖ್ಯವಾಗಿ ಮಹಿಳೆಯಲ್ಲಿ ಬೆಳೆದ ಮಾತೃತ್ವ ಗುಣವೇ ಮನುಷ್ಯರಲ್ಲಿ ಸಂವಹನ ಕಲೆ ಮತ್ತು ಸಾವಯವ ಗುಣ ಮೂಡಿ ನಾಗರಿಕತೆ ಬೆಳೆಯಲು ಕಾರಣವಾಯಿತು ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೂ ಇದು ಸತ್ಯ.

ಈಗ ವಿಜ್ಞಾನಿಗಳು ಕೂಡ “ಮಹಿಳೆಯೇ ಮಾನವಕುಲದ ಬಲಶಾಲಿ ಮೂಲ ಲಿಂಗ. ಪುರುಷ ಹೆಚ್ಚೆಂದರೆ ಅನುಬಂಧ” ಎಂದು ಒಪ್ಪಿಕೊಳ್ಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಮನುಷ್ಯರ ಜೀವಕೋಶದ ರಚನೆಯಲ್ಲಿ ಮಹಿಳೆಯ ‘ಎಕ್ಸ್’ ಕ್ರೋಮಸೋಮ್ ಪ್ರಧಾನವಾಗಿರುವುದು. ಹೆಣ್ಣುಮಕ್ಕಳು ಹುಟ್ಟುವಾಗ ಅವರು ಮತ್ತೊಂದು ‘ಎಕ್ಸ್’ ಕ್ರೋಮಸೋಮ್‌ಅನ್ನು ಪಡೆಯುತ್ತಾರೆ. ಆದರೆ ಗಂಡು ಮಕ್ಕಳು ಹುಟ್ಟುವಾಗ ಅವರು ಬೇರೆಯದೇ ಆದ ‘ವೈ’ ಕ್ರೋಮಸೋಮ್ ಅನ್ನು ಪಡೆಯುತ್ತಾರೆ. ವಿಜ್ಞಾನಿಗಳು ‘ವೈ’ ಕ್ರೋಮಸೋಮ್‌ಅನ್ನು ‘ಎಕ್ಸ್’ ಕ್ರೋಮಸೋಮಿನ ಅಂಗವಿಕಲ ರೂಪ ಎಂದೂ, ಅದನ್ನು ‘ಜೆನೆಟಿಕ್ ಎರರ್’ ಎಂದೂ ಕರೆಯುತ್ತಾರೆ! ಮಹಿಳೆಯ ದೇಹದಲ್ಲಿರುವ ಅಂಡಾಣು ಪುರುಷನ ದೇಹದಿಂದ ಬರುವ ಶುಕ್ರಕ್ಕಿಂತ ನೂರಾರು ಪಟ್ಟು ದೊಡ್ಡದಾಗಿದ್ದು ಹುಟ್ಟುವ ಮಗುವಿಗೆ ಕೊಡಬೇಕಾದ ಎಲ್ಲಾ ಪ್ರಧಾನ ಜೆನೆಟಿಕ್ ಸಂದೇಶಗಳನ್ನು ರವಾನಿಸುತ್ತದೆ. ಈ ಎಲ್ಲ ಕಾರಣಗಳಿಗೆ ಇತಿಹಾಸಕಾರರು “ಸ್ತ್ರೀತ್ವವೇ ಮಾದರಿ. ಮನುಕುಲಕ್ಕೆ ಆಕೆಯೇ ಮೂಲ” ಎನ್ನುತ್ತಾರೆ.

ಇತ್ತೀಚೆಗೆ ನಡೆದಿರುವ ಹಲವಾರು ಸಂಶೋಧನೆಗಳ ಪ್ರಕಾರ ಜಗತ್ತಿನ ಮನುಷ್ಯರೆಲ್ಲರ ಮೂಲವೂ ಓರ್ವ ಮಹಿಳೆಯೇ. ಖ್ಯಾತ ಬರ್ಕ್ಲಿ, ಕ್ಯಾಲಿಫೋರ್ನಿಯಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಗಳು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪ್ರತ್ಯೇಕವಾಗಿ ನಡೆಸಿದ ಸಂಶೋಧನೆಗಳು ಮಾನವ ಕುಲದ ಡಿಎನ್‌ಎನಿಂದ ‘ಫಿಂಗರ್ ಪ್ರಿಂಟ’ನ್ನು ಪಡೆದು ಅದನ್ನು ಪರೀಕ್ಷಿಸಿದಾಗ ಗೊತ್ತಾಗಿದ್ದು ಏನೆಂದರೆ ಎಲ್ಲರಲ್ಲೂ – ಅವರು ಯಾವುದೇ ದೇಶ, ಪ್ರಾಂತ್ಯ, ಬಣ್ಣ, ಬುಡಕಟ್ಟು ಇತ್ಯಾದಿಗೆ ಸೇರಿದವರಾಗಿದ್ದರೂ – ಇರುವುದು ಒಂದೇ ‘ಫಿಂಗರ್ ಪ್ರಿಂಟ್’ ಎಂಬುದು. ಆ ‘ಫಿಂಗರ್ ಪ್ರಿಂಟ್’ ಸಹಸ್ರಾರು ವರ್ಷಗಳಿಂದ ಬದಲಾಗದೆ ಹಾಗೆಯೇ ಉಳಿದು ಬಂದಿದೆಯಲ್ಲದೆ ಅದು ಮೂಲತಃ ಮಹಿಳೆಯಿಂದಲೇ ಬಂದಿದೆ. ಆ ಮಹಿಳೆ 3,00,000 ವರ್ಷಗಳ ಹಿಂದೆ ಆಫ್ರಿಕಾದಲ್ಲಿದ್ದಳು ಎಂದೂ, ಆನಂತರ ಆಕೆಯಿಂದ ಹುಟ್ಟಿದ ಜನ ಜಗತ್ತಿನಾದ್ಯಂತ ಹರಡಿಹೋದರು ಎಂದೂ ಈ ಸಂಶೋಧನೆಗಳು ಸ್ಪಷ್ಟಪಡಿಸಿವೆ.

ಸುಮಾರು 5,00,000 ವರ್ಷಗಳ ಹಿಂದೆ ಆದ್ಯರೂಪದ ಮಾನವವಂಶ ತನ್ನ ಹಿಂಗಾಲುಗಳ ಮೇಲೆ ನಿಂತಾಗಿನಿಂದ ಮಾನವ ಜಾತಿಯ ಬೆಳವಣಿಗೆಯಲ್ಲಿ ಮಹಿಳೆಯು ಪುರುಷನಿಗಿಂತ ಪ್ರಮುಖ ಪಾತ್ರ ವಹಿಸಿದ್ದಾಳೆ. ಅದರಲ್ಲಿ ಮುಖ್ಯವಾದದ್ದು ಆಕೆಯ ದೇಹದಲ್ಲಾದ ಒಂದು ಮುಖ್ಯ ಬದಲಾವಣೆ. ಮನುಷ್ಯನಂತೆ ಉನ್ನತ ಶ್ರೇಣಿಯ ಸಸ್ತನಿಗಳಾದ ಚಿಂಪಾಂಜಿ, ಗೊರಿಲ್ಲಾ ಮತ್ತು ಒರಾಂಗ್‌ಉಟಾನ್‌ಗಳ (ನರವಾನರ) ಮಹಿಳೆಯರಲ್ಲಿ ಬೆದೆ ಬರುವುದು ಅಪರೂಪಕ್ಕೆ. ಆ ಕಾರಣಕ್ಕೆ ಅವು ಐದಾರು ವರ್ಷಗಳಲ್ಲಿ ಒಂದು ಮರಿಗೆ ಜನ್ಮ ನೀಡುತ್ತವೆ. ಆದ್ದರಿಂದಲೇ ಅವು ಈಗ ಜಗತ್ತಿನಾದ್ಯಂತ ಕಡಿಮೆ ಸಂಖ್ಯೆಯಲ್ಲಿದ್ದು ಸಂರಕ್ಷಿಸಲ್ಪಟ್ಟಿವೆ. ಆದರೆ ಅದೇ ಸಸ್ತನಿ ಜಾತಿಗೆ ಸೇರಿದ ಮಾನವ ಮಹಿಳೆಯ ದೇಹದಲ್ಲಿ ತಿಂಗಳಿಗೊಮ್ಮೆ ಋತುಚಕ್ರ ಸಂಭವಿಸುತ್ತದೆ. ಇದರ ಅರ್ಥ ಆಕೆ ಗೊರಿಲ್ಲಾಗಳಂತೆ ಐದು ವರ್ಷಕ್ಕೊಮ್ಮೆ ಹಡೆಯುವ ಬದಲು ಪ್ರತಿ ತಿಂಗಳೂ ಗರ್ಭ ಧರಿಸುವ ಅವಕಾಶವನ್ನು ಪಡೆದಳು. ಈ ಒಂದು ಬದಲಾವಣೆಯಿಂದಾಗಿ ಆಕೆ ಹೆಚ್ಚೆಚ್ಚು ಮಕ್ಕಳನ್ನು ಹಡೆದು ಮಾನವ ಕುಲ ನಾಶವಾಗದಂತೆ ನೋಡಿಕೊಂಡಳು. ಇದರರ್ಥ ಬೇಟೆಯಾಡುತ್ತಿದ್ದ ಪುರುಷನಿಗಿಂತಲೂ ಋತುಮತಿಯಾಗುವ ಮೂಲಕ ಮಹಿಳೆ ಮಾನವ ಕುಲವನ್ನು ಉದ್ಧಾರ ಮಾಡಿದಳು ಎಂಬುದು ವಿಜ್ಞಾನಿಗಳ ತರ್ಕ.

ಇದರೊಂದಿಗೆ ಆಕೆ ಪುರುಷನ ದೇಹದಲ್ಲೂ ಒಂದು ಮುಖ್ಯ ಬದಲಾವಣೆಗೆ ಕಾರಣಳಾದಳು. ಕಿಂಗ್‌ಕಾಂಗ್ ತರಹದ ಬೃಹತ್ ಗಾತ್ರದ ಪುರುಷ ಗೊರಿಲ್ಲಾಗಳ ಜನನಾಂಗ ಚಿಕ್ಕದಾಗಿರುತ್ತದೆ. ಅದಕ್ಕೆ ಹೋಲಿಸಿದರೆ ಮಾನವ ಪುರುಷನ ಜನನಾಂಗ ದೊಡ್ಡದು. ಅದು ಹೇಗೆ ಸಾಧ್ಯವಾಯಿತು ಎಂಬುದು ಕುತೂಹಲಕಾರಿಯಾಗಿದೆ. ಹೋಮಿನಿಡ್ ಮಹಿಳೆ ತನ್ನ ಹಿಂಗಾಲುಗಳ ಮೇಲೆ ನಡೆಯಲು ಪ್ರಾರಂಭಿಸಿದಾಗ ಆಕೆಯ ಯೋನಿಯು ಮುಂದಿನ ಭಾಗಕ್ಕೆ ಬಂದಿತಲ್ಲದೆ ಕೆಳದಿಕ್ಕಿನತ್ತ ಸರಿಯಿತು. ಜೊತೆಗೆ ಆಕೆಯ ಗರ್ಭಕೋಶವೂ ಆಕೆಯ ದೇಹದಲ್ಲಿ ಆಳಕ್ಕೆ ಹೋಯಿತು. ಬಾಯಿಗೆಟುಕದ ಎಲೆಗಳಿಗಾಗಿ ಹೇಗೆ ಜಿರಾಫೆಯ ಕತ್ತು ಬೆಳೆಯುತ್ತಾ ಹೋಯಿತೋ ಅದೇ ತತ್ವವನ್ನಾಧರಿಸಿ ಮಹಿಳೆಯ ಗರ್ಭಕೋಶಕ್ಕೆ ಹತ್ತಿರವಾಗಲು ಪುರುಷನ ಜನನಾಂಗವೂ ಬೆಳೆಯಿತು!

ದಿನಗಳನ್ನು ಲೆಕ್ಕಹಾಕುವುದನ್ನು ಮೊದಲು ಕಲಿತದ್ದೂ ಮಹಿಳೆಯೇ. ಹೇಗೆ ಎನ್ನುತ್ತೀರಾ? ಎಲ್ಲರಿಗೂ ಗೊತ್ತಿರುವಂತೆ ಪ್ರಾಚೀನಕಾಲದಲ್ಲಿ ಹಲವಾರು ಸಮುದಾಯಗಳು ಬಳಸುತ್ತಿದ್ದದ್ದು ಲೂನಾರ್ ಕ್ಯಾಲೆಂಡರ್‌ಅನ್ನು. ಅದಕ್ಕೆ ಕಾರಣ ಚಂದ್ರನ ಚಲನವಲನಕ್ಕೂ, ಪ್ರತಿ ತಿಂಗಳು ಮಹಿಳೆಯ ದೇಹದಲ್ಲಾಗುತ್ತಿದ್ದ ಬದಲಾವಣೆಗೂ ಇದ್ದ ಸಂಬಂಧ. 28 ದಿನಗಳಿಗೊಮ್ಮೆ ಹೊಸ ಚಂದ್ರ ಉದಯಿಸುವಂತೆ ಸಾಮಾನ್ಯವಾಗಿ ಅಷ್ಟೇ ದಿನಗಳಲ್ಲಿ ಮಹಿಳೆಗೆ ರಕ್ತಸ್ರಾವವಾಗುತಿತ್ತು! ತನ್ನ ದೇಹದ ಕ್ಯಾಲೆಂಡರ್ ಮತ್ತು ಪ್ರಕೃತಿಯ ಕ್ಯಾಲೆಂಡರ್ ನಡುವಿನ ಸಂಬಂಧವನ್ನು ಗುರುತಿಸಿ ದಿನಗಳನ್ನು ಲೆಕ್ಕ ಹಾಕಲಾರಂಭಿಸಿದ್ದು ಮಹಿಳೆಯಲ್ಲದೆ ಇನ್ಯಾರು?!

ಆಧುನಿಕ ಮಾನವನಾಗಿ ರೂಪಗೊಳ್ಳುವ ಮುನ್ನ ಮಾನವಕುಲ ಇನ್ನೂ ಹೋಮಿನಿಡ್ ಆಗಿದ್ದಾಗಿನಿಂದಲೂ – ಅಂದರೆ ಸುಮಾರು 5,00,000 ವರ್ಷಗಳ ಹಿಂದೆ – ತನ್ನವರನ್ನು ಘೋಷಿಸುತ್ತಿದ್ದದ್ದು ಮಹಿಳೆಯೇ ಹೊರತು ಪುರುಷನಲ್ಲ ಎಂಬುದೂ ಸಾಬೀತಾಗಿದೆ. ಆಹಾರಕ್ಕಾಗಿ ಬೇಟೆ ಆಡುವುದರಿಂದ ಹಿಡಿದು ತನ್ನ ವಂಶದ ಉಳಿವಿನ, ಬೆಳವಣಿಗೆಯ ಪ್ರತಿ ಹಂತದಲ್ಲೂ ಆಕೆಯ ಕೊಡುಗೆ ಇದ್ದೇ ಇದೆ. ಆದಿಕಾಲದ ಪಳೆಯುಳಿಕೆಯನ್ನು ಅಧ್ಯಯನ ಮಾಡಿರುವವರ ಪ್ರಕಾರ ಆಗಿನ ಹೋಮಿನಿಡ್ ಮಹಿಳೆಯರು ಇಪ್ಪತ್ತು ವರ್ಷ ವಯಸ್ಸಾಗುವ ಹೊತ್ತಿಗೆ ಸಾವನ್ನಪ್ಪುತ್ತಿದ್ದರು. ಕೆಲವೇ ಕೆಲವರು ಮಾತ್ರ ಮೂವತ್ತನ್ನು ತಲುಪುತ್ತಿದ್ದರು. ಅಪರೂಪಕ್ಕೆ ಕೆಲವರು ನಲವತ್ತನ್ನು ದಾಟುತ್ತಿದ್ದರು. ಆಗಿನ ಕಾಲದ ಮಹಿಳೆಯರು ಅಲ್ಪಾಯುಷಿಗಳಾಗಿದ್ದರೂ ಬದುಕನ್ನು ಸಾಗಿಸಲು ಹಲವಾರು ಕಲೆಗಳನ್ನು ಮೈಗೂಡಿಸಿಕೊಂಡಿದ್ದರು. ಅವುಗಳಲ್ಲಿ ಆಹಾರ ಸಂಗ್ರಹಣೆ, ಮಕ್ಕಳ ಪೋಷಣೆ, ಪ್ರಾಣಿಗಳ ಚರ್ಮದಿಂದ ಬಟ್ಟೆ ಇತ್ಯಾದಿಗಳನ್ನು ರೂಪಿಸುವುದು, ಕುಂಬಾರಿಕೆ, ಅಡುಗೆ, ಪ್ರಕೃತಿಯಲ್ಲಿ ಸಿಗುವ ಹುಲ್ಲು ಇತ್ಯಾದಿಗಳಿಂದ ಬುಟ್ಟಿಗಳನ್ನು ಸೃಷ್ಟಿಸುವುದು, ಹಲ್ಲು ಮತ್ತು ಮೂಳೆಗಳಿಂದ ಮಣಿ ಮತ್ತು ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ಆಶ್ರಯತಾಣಗಳನ್ನು ಕಟ್ಟುವುದು, ಔಷಧ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳನ್ನು ಪತ್ತೆ ಮಾಡುವುದು, ಪ್ರಾಣಿಗಳ ಚರ್ಮವನ್ನು ಬೇರ್ಪಡಿಸುವ, ಗೆಣಸುಗಳ ಸಿಪ್ಪೆಯನ್ನು ಸುಲಿಯುವ ಇತ್ಯಾದಿ ಸಲಕರಣೆಗಳನ್ನೂ ಮಹಿಳೆಯರೇ ಮಾಡುತ್ತಿದ್ದರು.

ಆದಿಕಾಲದಲ್ಲೂ ಆಹಾರಕ್ಕಾಗಿ ಮಹಿಳೆಯರು ಪುರುಷರನ್ನು ಸಂಪೂರ್ಣವಾಗಿ ಅವಲಂಬಿಸಿರಲಿಲ್ಲ. ಯಾಕೆಂದರೆ ಆತ ಬೇಟೆಗೆಂದು ಹೋದಾಗ ಆಹಾರ ಸಿಗುತ್ತಿದ್ದದ್ದು ಅಪರೂಪಕ್ಕೆ ಮಾತ್ರ. ಈಗಲೂ ಹಲವಾರು ಬುಡಕಟ್ಟುಗಳ ಪುರುಷರು ಬೇಟೆಯಾಡುತ್ತಿದ್ದು ಅವರು ಮನೆಗೆ ಮಾಂಸ ತರುವುದು ಒಮ್ಮೊಮ್ಮೆ ಮಾತ್ರ. ಅಂತಹ ಸಮುದಾಯಗಳು ಇವತ್ತಿಗೂ ಇದ್ದರೆ ಅದಕ್ಕೆ ಕಾರಣ ಆ ಸಮುದಾಯಗಳ ಮಹಿಳೆಯರು ಸಂಗ್ರಹಿಸುವ ಆಹಾರ. ಮಾತ್ರವಲ್ಲ, ಯಾವ ಹಣ್ಣು, ಯಾವ ಸೊಪ್ಪು ತಿನ್ನಲು ಯೋಗ್ಯ, ಯಾವ ಬೀಜವನ್ನು ಕಾಪಾಡಿಟ್ಟುಕೊಳ್ಳಬೇಕು, ಯಾವುದಕ್ಕೆ ಔಷಧಿಯ ಗುಣ ಇದೆ ಎಂಬ ಅರಿವು ಇರುವುದೂ ಆ ಸಮುದಾಯಗಳ ಮಹಿಳೆಯರಲ್ಲೇ. ಆದಿಕಾಲದ ಮಹಿಳೆಯೂ ಇವರಿಗಿಂತ ಭಿನ್ನವಾಗಿರಲಿಲ್ಲ. ಹಾಗೆ ಸಿಕ್ಕ ಆಹಾರವನ್ನು ಹದ ಮಾಡುವ, ಸುಲಿಯುವ ಸಲಕರಣೆಗಳನ್ನು ಕಂಡುಹಿಡಿದದ್ದೂ ಮಹಿಳೆಯೇ. ಅಂದರೆ ಕೃಷಿಯನ್ನು ಮೊದಲು ಅಭ್ಯಸಿಸಿದ್ದು ಮಹಿಳೆಯೇ.

ಸಾಮಾನ್ಯವಾಗಿ ‘ಕುಟುಂಬ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಪುರುಷ ಎಂದು ನಂಬಲಾಗಿದೆ. ಆದರೆ ಅದು ತಪ್ಪು. ವಾಸ್ತವವಾಗಿ ಗಂಡು ಮಕ್ಕಳು ದೊಡ್ಡವರಾದ ಮೇಲೆ ಅವರು ಬೇಟೆಗೆ ಹೋಗುತ್ತಿದ್ದಾಗ ಮಕ್ಕಳು ಮತ್ತು ತನ್ನ ಕುಲದ ಇತರರನ್ನು ನೋಡಿಕೊಳ್ಳುತ್ತಿದ್ದದ್ದು ಮಹಿಳೆ. ಆದ್ದರಿಂದ ‘ಕುಟುಂಬ’ ಮತ್ತು ಅದರ ಲಾಲನೆಪಾಲನೆಯ ಜವಾಬ್ದಾರಿಯನ್ನು ಹೊತ್ತದ್ದು ಮಹಿಳೆ. ಈಗಲೂ ಹೆಚ್ಚಿನ ಬುಡಕಟ್ಟು ಸಮುದಾಯಗಳಲ್ಲಿ ಮಹಿಳೆಯೇ ಕುಟುಂಬದ ಮುಖ್ಯಸ್ಥೆ ಆಗಿರುವುದು ಆ ಪದ್ಧತಿಯ ಮುಂದುವರಿಕೆ ಎಂದು ನಂಬಲಾಗಿದೆ.

ಈಗಿನ ಆಧುನಿಕ ಕಾಲದಲ್ಲಿ ಮಹಿಳೆಯರ ಮೇಲೆ ಹಲವಾರು ತರಹದ ಶೋಷಣೆ ನಡೆಯುತ್ತಿದೆ. ಮಹಿಳೆ ಎಂದರೆ ಅಬಲೆ, ಸಮಾನ ಸ್ಥಾನಮಾನಕ್ಕೆ ಅರ್ಹಳಲ್ಲ, ತನ್ನ ಜೀವಮಾನವಿಡೀ ಪುರುಷನನ್ನು ಅವಲಂಬಿಸುವವಳು ಎಂಬ ಕಲ್ಪನೆ ಈಗಲೂ ಇದೆ. ಇಂತಹ ಧೋರಣೆಯಿಂದಾಗಿಯೇ ಆಕೆಯ ಮೇಲೆ ದೈಹಿಕ ದಾಳಿ, ಅತ್ಯಾಚಾರ ಇತ್ಯಾದಿಗಳು ನಡೆಯುತ್ತಿರುತ್ತವೆ. ಆದರೆ ಪ್ರಾಚೀನ ಕಾಲದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿತ್ತು! ಆದಿಮಾನವನಾಗಿದ್ದ ಕಾಲದಲ್ಲಿ ಬದುಕಿ ಬಾಳುವುದೇ ಕಷ್ಟವಾಗಿದ್ದರಿಂದ ಆಹಾರ ಸಂಗ್ರಹಣೆಯಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ, ಗಿಡಮೂಲಿಕೆಗಳ ಶಕ್ತಿ ಗೊತ್ತಿದ್ದ ಮಹಿಳೆಗೆ ಮರ್ಯಾದೆ ಕೊಡಲಾಗುತ್ತಿತ್ತು. ಈ ಗುಣವನ್ನು ಈಗಲೂ ಬುಡಕಟ್ಟು ಸಮುದಾಯಗಳಲ್ಲಿ ಕಾಣಬಹುದಾಗಿದೆ. ಅಂತಹ ಸಮುದಾಯಗಳಲ್ಲಿ ಮಹಿಳೆಯರ ಮೇಲೆ ಪುರುಷರು ಹಕ್ಕು ಚಲಾಯಿಸುವಂತಿಲ್ಲ. ಆಕೆಯ ಶ್ರಮದ ಫಲವನ್ನು ಕಿತ್ತುಕೊಳ್ಳುವಂತಿಲ್ಲ. ಆಕೆಯ ಚಲನವಲನಗಳ ಮೇಲೆ ನಿಯಂತ್ರಣಗಳನ್ನು ಹೇರುವಂತಿಲ್ಲ. ಆಕೆಯ ಕನ್ಯತ್ವ, ಶೀಲ ಇತ್ಯಾದಿಗಳ ಮಾತು ಬಿಡಿ ಆಕೆಯ ದೇಹದ ಮೇಲೆ ಪುರುಷ ತನ್ನ ಅಧಿಪತ್ಯವನ್ನು ಸಾರುವಂತಿಲ್ಲ. ಇದು ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಇದ್ದ ಸ್ವಾತಂತ್ರ್ಯ ಮತ್ತು ಗೌರವ.

ಶಿಲಾಯುಗದಲ್ಲೂ ಮಹಿಳೆಯರು ಹಲವಾರು ಸಮುದಾಯಗಳಲ್ಲಿ ನಾಯಕಿಯರಾಗಿ, ಕತೆಗಾರರಾಗಿ, ವೈದ್ಯರಾಗಿ, ನ್ಯಾಯ ಕೊಡುವವರಾಗಿ ವಿವಿಧ ಪಾತ್ರಗಳನ್ನು ವಹಿಸುತ್ತಿದ್ದರು ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸುತ್ತಿವೆ. ಮುಖ್ಯವಾಗಿ ಇವೆಲ್ಲವುಗಳೊಂದಿಗೆ ಆಕೆ ತನಗಿದ್ದ ಇನ್ನೊಂದು ಶಕ್ತಿಯನ್ನೂ ಚಲಾಯಿಸುತ್ತಿದ್ದಳು. ಅದು ಮಕ್ಕಳನ್ನು ಹಡೆಯುವ ಮತ್ತು ಆ ಮೂಲಕ ತನ್ನ ಸಮುದಾಯವನ್ನು ಮುನ್ನಡೆಸುವ ಶಕ್ತಿ!

ಇಂತಹ ಹಲವಾರು ಕುತೂಹಲಕಾರಿ ಅಂಶಗಳನ್ನು, ಒಳನೋಟಗಳನ್ನು, ಸಂಶೋಧನೆಗಳ ಮಾಹಿತಿಯನ್ನು ಹೊಂದಿರುವ, ರೋಸಲಿಂಡ್ ಮೈಲ್ಸ್ ಎಂಬಾಕೆ ಬರೆದಿರುವ ‘ಹೂ ಕುಕ್ಡ್ ದಿ ಲಾಸ್ಟ್ ಸಪ್ಪರ್’ ಎಂಬ ಪುಸ್ತಕವನ್ನು ಮೊನ್ನೆ ಮಿತ್ರ ಸಂವರ್ತ ಸಾಹಿಲ್ ಈಮೇಲ್ ಮಾಡಿದರು. ಮಹಿಳೆಯರ ಇತಿಹಾಸವನ್ನು ಚಿತ್ರಿಸಿರುವ ಈ ಪುಸ್ತಕದ ಮೊದಲನೆ ಚಾಪ್ಟರ್‌ನಲ್ಲಿರುವ ಹಲವು ವಿಷಯಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಎಲ್ಲ ಮಹಿಳೆಯರ ಪರವಾಗಿ ಇಂತಹ ಅದ್ಭುತ ಪುಸ್ತಕವನ್ನು ಬರೆದಿರುವ ರೋಸಲಿಂಡ್ ಮೈಲ್ಸ್ ಅವರಿಗೆ ಒಂದು ದೊಡ್ಡ ಥಾಂಕ್ಯೂ!

(ಜುಲೈ 10, 2013ರಂದು ಗೌರಿಯವರು ಬರೆದಿದ್ದ ಕಂಡಹಾಗೆ ಅಂಕಣದ ಆಯ್ದ ಭಾಗ ಇದು. ಕಂಡಹಾಗೆ ಸಂಗ್ರಹ-4ನ್ನು ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿದೆ)


ಇದನ್ನೂ ಓದಿ: ಗೌರಿ ಕಾರ್ನರ್; ಅಪ್ಪ: ‘ನಾನು ಚಿಕ್ಕವಳಾಗಿದ್ದಾಗ ಅಪ್ಪನನ್ನು ‘owl’ ಎಂದು ಕರೆಯುತ್ತಿದ್ದೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...