ಜಮ್ಮು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆಗಳ ಫಲಿತಾಂಶ ನಾಳೆ(ಅ.8) ಪ್ರಕಟಗೊಳ್ಳಲಿದೆ. ಅದಕ್ಕೂ ಮುನ್ನ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಐವರು ಸದಸ್ಯರನ್ನು ನಾಮನಿರ್ದೇನ ಮಾಡಲು ಮುಂದಾಗಿರುವುದು ವಿರೋಧಕ್ಕೆ ಕಾರಣವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯರಾಗಿ ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡಲಿರುವ ಐವರು ಕೇಂದ್ರಾಡಳಿತ ಪ್ರದೇಶದಲ್ಲಿ ಮುಂದಿನ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಸಲಹೆಯನ್ನು ಆಧರಿಸಿ ಐವರು ಸದಸ್ಯರನ್ನು ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುವರು. ಈ ಸದಸ್ಯರು ನೂತನ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಲಿದ್ದಾರೆ.
ಆಗಸ್ಟ್ 2019ರಲ್ಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಯಿತು.
ಜಮ್ಮು ಮತ್ತು ಕಾಶ್ಮೀರ ಪುನರ್‌ರಚನಾ ಕಾಯ್ದೆ-2019ರ, ಸೆಕ್ಷನ್ 14 ಉಪ ನಿಯಮ (30)ರ ಅನ್ವಯ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನಂಟ್ ಗವರ್ನರ್ ಅವರು ಇಬ್ಬರನ್ನು ನಾಮನಿರ್ದೇಶನ ಮಾಡಬಹುದು. ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತಾವು ಭಾವಿಸಿದಲ್ಲಿ ಈ ಮೂಲಕ ಆ ಕೊರತೆ ತುಂಬಬಹುದು ಎಂದಿದೆ. ಈ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರಲಾಗಿದೆ.
ತಿದ್ದುಪಡಿ ಬಳಿಕ, 15ಎ ಉಪ ನಿಯಮದ ಅನುಸಾರ, ಲೆಫ್ಟಿನಂಟ್ ಗವರ್ನರ್ ಅವರು ಇಬ್ಬರಿಗಿಂತಲೂ ಹೆಚ್ಚು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗದು. ಇಬ್ಬರಲ್ಲಿ ಒಬ್ಬರು ಕಾಶ್ಮೀರಿ ವಲಸಿಗ ಸಮುದಾಯಕ್ಕೆ ಸೇರಿದ ಮಹಿಳೆ ಆಗಿರಬೇಕು. ಉಪ ನಿಯಮ 15ಬಿ ಅನುಸಾರ ಪಾಕ್ ಆಕ್ರಮಿತ ಕಾಶ್ಮೀರ ಭಾಗದಿಂದ ವಲಸೆ ಬಂದಿರುವ ವ್ಯಕ್ತಿಯೊಬ್ಬರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಬಹುದು.
ರಾಜ್ಯಪಾಲರು ಈಗ ನಾಮನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿರುವ ಐವರು ಸದಸ್ಯರಿಗೂ ಚುನಾಯಿತ ಸದಸ್ಯರಿಗೆ ಇರುವಂತೆಯೇ ಮತದಾನದ ಹಕ್ಕು ಇರುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ಲೆಫ್ಟಿನೆಂಟ್ ಗವರ್ನರ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಇದು, ‘ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು’ ಎಂದು ಟೀಕಿಸಿದೆ.
ನಾಮನಿರ್ದೇಶನ ಮಾಡುವ ನಿರ್ಧಾರವು ಮತಎಣಿಕೆಗೆ ಮೊದಲೇ ಜನಾದೇಶವನ್ನು ತಿರುಚುವ ಕೇಂದ್ರ ಸರ್ಕಾರದ ಯತ್ನವಾಗಿದೆ ಎಂದು ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಎಂದು ಟೀಕಿಸಿದ್ದಾರೆ.
ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯ ಬಲ 90 ಆಗಿದೆ. ಐವರ ನಾಮ ನಿರ್ದೇಶನಗೊಂಡಲ್ಲಿ ಸದಸ್ಯ ಬಲ 95ಕ್ಕೆ ಏರಲಿದೆ. ಸರ್ಕಾರ ರಚನೆಗೆ 48 ಸದಸ್ಯರ ಸರಳ ಬಹುಮತ ಅಗತ್ಯವಾಗಿರಲಿದೆ.
ಇದನ್ನೂ ಓದಿ : ಸಾಮಾಜಿಕ ಮಾಧ್ಯಮದಲ್ಲಿ ಭವಿಶ್ ಅಗರ್ವಾಲ್-ಕುನಾಲ್ ಕಮ್ರಾ ಜಟಾಪಟಿ; ಶೇ.8 ರಷ್ಟು ಕುಸಿತ ಕಂಡ ಓಲಾ ಎಲೆಕ್ಟ್ರಿಕ್ ಷೇರು


