“ಒಂದಂತೂ ಸತ್ಯ. ರಾಜಕೀಯ ವ್ಯಭಿಚಾರ ಮಾಡುತ್ತಿರುವುದು ಮಾತ್ರ ಸಾ. ರಾ ಮಹೇಶ್” ಸಾ. ರಾ ಮಹೇಶ್ ಒಂದು ಕೊಚ್ಚೆಗುಂಡಿ ಇದ್ದಂತೆ. ಅದಕ್ಕೆ ಕಲ್ಲು ಎಸೆದರೆ ಕೊಳಚೆ ನಮ್ಮ ಮೇಲೆ ಹಾರುತ್ತದೆ. ಸಾ.ರಾ ಮಹೇಶ್ ಗುಳ್ಳೆ ನರಿ ಎಂದೆಲ್ಲಾ ಬಾಯಿಗೆ ಬಂದಾಗೆ ಬೈಯ್ಯುತ್ತಿದ್ದ ಎಚ್. ವಿಶ್ವನಾಥ್ ರವರು ಮಾತು ಬದಲಿಸಿದ್ದಾರೆ. ಇದ್ದಕ್ಕಿದ್ದಹಾಗೆಯೇ ನಾವಿಬ್ಬರೂ ಒಂದೇ ಊರಿನವರು, ನಮ್ಮಲ್ಲೇಕ ದ್ವೇಷ ಮತ್ಸರ ಎಂದು ನೈಸ್ ಹೊಡೆಯಲು ಶುರು ಮಾಡಿದ್ದಾರೆ.
“ರಾಜಕೀಯವಾಗಿ ಮೂಲೆಗುಂಪಾಗಿ ಆಸ್ಪತ್ರೆಗೆ ಸೇರಿದ್ದವರನ್ನು ಕರೆತಂದು ನಮ್ಮ ಪಕ್ಷದಲ್ಲಿ ಅಧಿಕಾರ ನೀಡಿದ್ದೆವು. ಆದರೆ ಕೊನೆಗೆ ಅವರು ನಮ್ಮ ಪಕ್ಷದಲ್ಲಿದ್ದುಕೊಂಡೇ ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕಿದರು. ಅವರನ್ನು ಕರೆತಂದದ್ದು ನಮ್ಮ ತಪ್ಪು. ದೇವೇಗೌಡರ ಕುಟುಂಬಕ್ಕೆ ಮೋಸ ಮಾಡಿದವರು ಯಾರೂ ಅಷ್ಟು ಸುಲಭವಾಗಿ ಉದ್ಧಾರವಾಗುವುದಿಲ್ಲ” ಎಂದಿದ್ದಲ್ಲದೇ ಅವರು ಎಚ್.ವಿಶ್ವನಾಥ್ ಅಲ್ಲ ಹುಚ್ಚ ವಿಶ್ವನಾಥ್ ಆಗಿದ್ದಾರೆ, ಬಿಜೆಪಿಯವರೆ ಅವರಿಗೆ ಚಿಕಿತ್ಸೆ ಕೊಡಿಸಿ ಎಂದು ಸಾ ರಾ ಮಹೇಶ್ ಕೂಡ ಛೇಡಿಸಿದ್ದರು.
ಹೌದು ಕಳೆದ ಮೂರು ತಿಂಗಳಿನಿಂದಲೂ ಪರಸ್ಪರ ಕೆಟ್ಟ ಬೈಗುಳಗಳಿಂದ ಚರ್ಚೆಯಲ್ಲಿದ್ದ ಇವರಿಬ್ಬರಲ್ಲಿ ಈಗ ಎಚ್.ವಿಶ್ವನಾಥ್ ರವರೆ ರಾಜಿಗೆ ಮುಂದಾಗಿದ್ದಾರೆ.
ಎಚ್ ವಿಶ್ವನಾಥ್ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಕ್ಕೆ ಸಾ.ರಾ ಮಹೇಶ್ ಮೇಲಿನ ದ್ವೇಷವೂ ಒಂದು ಪ್ರಮುಖ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲದೇ ಮೂರು ದಿನಗಳ ಹಿಂದೆ ತಾನೇ “ನೀನು ಯಾರ ಮನೆಯಲ್ಲಿ ತಟ್ಟೆ ಲೋಟ ತೊಳೆಯುತ್ತಿದ್ದೆ ಎಂಬುದು, ನೀನು ಬ್ಲೂ ಫಿಲ್ಮ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದು ಎಲ್ಲವೂ ನನಗೆ ಗೊತ್ತಿದೆ” ಎಂದೆಲ್ಲಾ ಆರ್ಭಟಿಸಿದ್ದ ಎಚ್.ವಿಶ್ವನಾಥ್ ರವರು ಇಂದು ಸಾ.ರಾ.ಮಹೇಶ್ ಕೊಟ್ಟ ಏಟಿಗೆ ಥಂಡು ಹೊಡೆದುಹೋಗಿದ್ದಾರೆ.
ಇದಕ್ಕೆ ಸಾ.ರಾ.ಮಹೇಶ್ ಕೊಟ್ಟ ಉತ್ತರವಿದೆಯೆಲ್ಲಾ ಅದು ಎಚ್.ವಿಶ್ವನಾಥ್ ರವರಿಗೆ ತಟ್ಟಬೇಕಾದ ಜಾಗಕ್ಕೆ ಸರಿಯಾಗಿ ಮುಟ್ಟಿದೆ. ಅವರೇಳಿದ್ದು ಇಷ್ಟೇ. ನಾನು ಬ್ಲೂ ಫಿಲ್ಮ್ ಮಾಡಲು ಹೋಗಿದ್ದರೆ ಅದರ ಹೀರೋ ಎಚ್.ವಿಶ್ವನಾಥ್‌ರವರೆ ಹೊರತು ಮತ್ಯಾರು ಅಲ್ಲ. ಅವರು ಹೀರೊ ಬ್ಲೂ ಬಾಯ್ ಆಗಿದ್ದಾರೆ. ಹಿರೋಇನ್ ಯಾರೆಂಬುದು ಸಹ ಗೊತ್ತಿದೆ. ಅವರಿಗೆ ಬೇಸಿಗೆಗೆ ಒಂದು, ಮಳೆಗಾಲಕ್ಕೆ ಒಂದು ಮತ್ತು ಚಳಿಗಾಲಕ್ಕೆ ಒಂದು ಮನೆಯಿತ್ತು. ಅದರ ವಿಡಿಯೋ ನನ್ನ ಬಳಿ ಇದೆ. ಇದು ಸುಳ್ಳೆಂದು ವಿಶ್ವನಾಥ್ ರವರು ಬಂದು ಪ್ರಮಾಣ ಮಾಡಲಿ ಎಂದು ಸಾ.ರಾ ಮಹೇಶ್ ಅಖಾಡಕ್ಕೆ ಕರೆದಿದ್ದರು. ಅಷ್ಟು ಮಾತ್ರವಲ್ಲ ಮೈಸೂರಿನ ಪತ್ರಿಕಾಗೋಷ್ಟಿಯಲ್ಲಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು.
ಈ ಏಟಿಗೆ ಎಚ್.ವಿಶ್ವನಾಥ್ ಸುಸ್ತಾಗಿದ್ದಾರೆ. ನಂತರ ಅವರು ನೀವು ಬೆಳೆಯುತ್ತಿರುವ ರಾಜಕಾರಣಿ ನಾನು ನಿವೃತ್ತಿಯ ಅಂಚಿನಲ್ಲಿದ್ದೇನೆ, ನಾವಿಬ್ಬರೂ ಒಂದೇ ಊರಿನವರು ಎಂದೆಲ್ಲಾ ತೇಪೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೂ ಮುಂದುವರೆದೆ ನಾವಿಬ್ಬರೂ ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆಯುವುದು ಬೇಡ ಎಂದಿದ್ದಾರೆ. ಅಲ್ಲಿಗೆ ಅವರು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಂತಾಗಿದೆ ಎಂಬುದು ಹಲವರ ವಾದವಾಗಿದೆ.
ಯಾವಾಗ ಸಾ.ರಾ ಮಹೇಶ್ ಆಡಿಯೋ ಬಿಡುಗಡೆ ಮಾಡಿ, ಚಾಮುಂಡಿ ಬೆಟ್ಟಕ್ಕೆ ದೇವರ ಮುಂದೆ ಆಣೆ ಮಾಡಲು ಕರೆದರೊ ಅಲ್ಲಿಗೆ ವಿಶ್ವನಾಥ್ ರವರ ಜಂಘಾಬಲವೇ ಉಡುಗಿಹೋಗಿದೆ. ಬ್ಲೂ ಫಿಲ್ಮ್ ವಿಚಾರ ತೆಗೆದು ಇಂಗು ತಿಂದ ಮಂಗನಂತಾಗಿದ್ದಾರೆ. ಅಲ್ಲಿಯವರೆಗೂ ಕೇವಲ ಎದುರೇಟನ್ನಷ್ಟೇ ನೀಡುತ್ತಿದ್ದ ಸಾ ರಾ ಮಹೇಶ್ ಕೊನೆಗೆ ಸರಿಯಾದ ಬಾಂಬ್ ಇಟ್ಟಿದ್ದಾರೆ. ಅಲ್ಲಿಗೆ ಎಚ್.ವಿಶ್ವನಾಥ್‌ಗೆ ಬೇರೆ ದಾರಿ ಕಾಣದಾಗಿದೆ.
ಹಾಗಾಗಿ ಉಳಿದ ದಾರಿಯೆಂದರೆ ಶರಣಾಗುವುದಾಗಿದೆ. ಹಾಗಾಗಿಯೇ ಅವರು ಗಾಜಿನ ಮನೆಯಲ್ಲಿದ್ದೇವೆ ಎಂಬ ವಾಕ್ಯ ಬಳಸಿದ್ದಾರೆ. ನೀವಿನ್ನು ರಾಜಕೀಯದಲ್ಲಿ ಬೆಳೆಯಬೇಕಾಗಿರುವವರು ಎಂದು ಹೇಳಿದ್ದಾರೆ. ತನ್ನ ಬಂಡವಾಳ ಬಯಲಾದರೆ ಇಷ್ಟು ದಿನ ಇಟ್ಟುಕೊಂಡಿದ್ದ ಸಂತನ ಮುಖವಾಡ ಬಯಲಾಗುತ್ತದೆ ಎಂಬ ಭಯದಿಂದ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಮೂರು ತಿಂಗಳಿನಿಂದ ದಿನಕ್ಕೊಬ್ಬರಂತೆ ಪತ್ರಿಕಾಗೋಷ್ಠಿ ನಡೆಸಿ ಸಾಕಷ್ಟು ಮನರಂಜನೆಯನ್ನು, ಪತ್ರಕರ್ತರಿಗೆ ಸುದ್ದಿಯನ್ನು ಕೊಡುತ್ತಿದ್ದ ಇವರಿಬ್ಬರ ವಾದ-ವಿವಾದ ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದು ನೋಡಬೇಕಿದೆ.
ಸಾರ್ವಜನಿಕವಾಗಿ ಜನರು ನಮ್ಮನ್ನು ಗಮನಿಸುತ್ತಿದ್ದಾರೆ, ನಾವು ಹೀಗೆ ಮಾಡುವುದು ಸರಿಯಲ್ಲ ಎಂದು ನನಗೆ ಅನಿಸಿದೆ, ನನ್ನಿಂದಲೇ ಎಲ್ಲೋ ತಪ್ಪಾಗಿದೆ ಎಂದು ವಿಶ್ವನಾಥ್ ಹೇಳಿದಾಗ ’ಮುತ್ಸದ್ದಿಯ ಮಾತುಗಳು’ ಎಂದು ಜನರಿಗೆ ಅನಿಸುತ್ತಿಲ್ಲ. ಸಾ.ರಾ.ಮಹೇಶ್ ಸತ್ಯವಂತ ಎಂದೂ ಯಾರಿಗೂ ಅನಿಸಿರಲಿಲ್ಲ. ಆದರೆ, ಈ ಬೆಳವಣಿಗೆಯಿಂದ ಮಹೇಶ್ ವಿಶ್ವನಾಥ್ ಬಗ್ಗೆ ಹೇಳುತ್ತಿರುವುದರಲ್ಲಿ ಏನೋ ಸತ್ಯ ಇರಬೇಕು ಎನಿಸಿದೆ.
ಕರ್ನಾಟಕದಲ್ಲಿ ಮುತ್ಸದ್ದಿ ರಾಜಕಾರಣಿ ಎಂಬಂತೆ ವರ್ತಿಸುತ್ತಿದ್ದ ವಿಶ್ವನಾಥ್ ಅವರು ಇಂತಹ ದುರಂತ ತಲುಪಿದ್ದು ಸಮಕಾಲೀನ ರಾಜಕಾರಣದ ವಿಪರ್ಯಾಸದ ಸಂಗತಿಗಳಲ್ಲೊಂದು.


