Homeಮುಖಪುಟಮೋದಿ, ಅಮಿತ್ ಶಾ ಕುರಿತು ಕಟುಟೀಕೆಯೇ ಸಂಜೀವ್ ಭಟ್ ಜೀವಾವಧಿ ಶಿಕ್ಷೆಗೆ ಕಾರಣವೆ?

ಮೋದಿ, ಅಮಿತ್ ಶಾ ಕುರಿತು ಕಟುಟೀಕೆಯೇ ಸಂಜೀವ್ ಭಟ್ ಜೀವಾವಧಿ ಶಿಕ್ಷೆಗೆ ಕಾರಣವೆ?

ಶ್ವೇತಾ ಭಟ್ ಅವರ ಕಾರಿಗೆ ನಂಬರ್ ಪ್ಲೇಟ್ ರಹಿತ ಲಾರಿಯೊಂದನ್ನು ಗುದ್ದಿಸಿ ಅವರನ್ನು ಕೊಲ್ಲುವ ಯತ್ನ ನಡೆಸಲಾಯಿತು ಎಂದೂ ವರದಿಯಾಗಿತ್ತು.

- Advertisement -
- Advertisement -

| ಶ್ರೀನಿವಾಸ ಕಾರ್ಕಳ |

1989ರ ಕಸ್ಟಡಿ ಸಾವು ಪ್ರಕರಣದಲ್ಲಿ ಗುಜರಾತಿನ ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್ ನಗರ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಕುರಿತು ಕಸ್ಟಡಿ ಸಾವಿಗೆ ಜೀವಾವಧಿ ಶಿಕ್ಷೆಯೇ? ಅದು ಮೋದಿಯ ವಿರುದ್ಧ ಸಾಕ್ಷಿ ನುಡಿದಿದ್ದ ವ್ಯಕ್ತಿಗೆ? ಇದರಲ್ಲಿ ರಾಜಕೀಯವಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಜೀವ್ ಭಟ್ ಮತ್ತು ಮೋದಿ ನಡುವೆ ಇದ್ದ ವೈಮನಸ್ಸನ್ನು ಕುರಿತು ಶ್ರೀನಿವಾಸ ಕಾರ್ಕಳ ರವರು ಮೇ 1 ರಂದು ಬರೆದಿದ್ದ ಲೇಖನವನ್ನು ಮರುಪ್ರಕಟಿಸುತ್ತಿದ್ದೇವೆ.

“ಶತ್ರುಗಳ ಮನೆಗೇ ನುಗ್ಗಿ ಅವರನ್ನು ಕೊಲ್ಲುವುದು ನನ್ನ ಜಾಯಮಾನ” ಎಂದು ನರೇಂದ್ರ ಮೋದಿಯವರು ಆಗಾಗ ಹೇಳುತ್ತಿರುತ್ತಾರೆ. ಅವರ ಈ ಮಾತು ಬರೇ ಬೊಗಳೆಯಲ್ಲ. ಪಾಕಿಸ್ತಾನದ ವಿಷಯದಲ್ಲಿ ಅವರ ಈ “ಶತ್ರುಗಳ ಮನೆಗೇ ನುಗ್ಗಿ ಹೊಡೆದುಹಾಕುವ” ಕಾರ್ಯಾಚರಣೆಗಳು ಚರ್ಚಾರ್ಹವಿರಬಹುದು, ಕೆಲವೊಮ್ಮೆ ಹಾಸ್ಯಾಸ್ಪದವೂ ಇರಬಹುದು. ಆದರೆ ತಮ್ಮ ವಿರೋಧಿಗಳ ವಿಷಯದಲ್ಲಿ ಅವರು ನಡೆದುಕೊಂಡ ರೀತಿಯ ಮಟ್ಟಿಗೆ ಅವರ ಈ ಮಾತು ಸತ್ಯಕ್ಕೆ ತುಂಬ ಹತ್ತಿರವಿರುವಂಥದ್ದು. ಗುಜರಾತ್ ನರಮೇಧದ ಬಳಿಕದ ವಿದ್ಯಮಾನಗಳನ್ನು ಪರಾಂಬರಿಸಿ ನೋಡಿದರೆ ಹಳೆಯ ದ್ವೇಷ ಮುಂದುವರಿಸುತ್ತಾ ಮೋದಿ ಮತ್ತು ಶಾ ಜೋಡಿ ತಮ್ಮ ವಿರೋಧಿಗಳನ್ನು ಮಟ್ಟಹಾಕಲು ಮಾಡಿದ ಅವಿರತ ಯತ್ನಗಳ ಅಸಂಖ್ಯ ಉದಾಹರಣೆಗಳನ್ನು ನೋಡಬಹುದು (ಗುಜರಾತ್ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಹತ್ಯೆ ಮತ್ತು ಜಸ್ಟಿಸ್ ಲೋಯಾ ನಿಗೂಢ ಸಾವು ಈಗಲೂ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಗುಮಾನಿಯ ಬೆರಳುಗಳು ನಿರ್ದಿಷ್ಟ ಇಬ್ಬರು ವ್ಯಕ್ತಿಗಳತ್ತಲೇ ತಿರುಗಿರುವುದು ಅಚ್ಚರಿಯ ಸಂಗತಿಯೇನಲ್ಲ).

ರಾಜಕೀಯದಲ್ಲಿ ಶತ್ರುತ್ವ ತುಂಬ ಸಹಜ. ಆದರೆ ಮುತ್ಸದ್ದಿಗಳೆನಿಸಿದ ಹೆಚ್ಚಿನ ರಾಜಕಾರಣಿಗಳು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಂಡು ಅವೆಲ್ಲವನ್ನೂ ಮರೆತು ಮುಂದುವರಿಯುವುದಿದೆ. ಆದರೆ ಗುಜರಾತ್‍ನ ಈ ಜೋಡಿ ಹಾಗಲ್ಲ. ಅವರು ತಮ್ಮ ಶತ್ರುಗಳನ್ನು ಎಂದೂ ಮರೆಯುವುದಿಲ್ಲ, ಆ ಶತ್ರುಗಳನ್ನು ಹಣ್ಣುಗಾಯಿ, ನೀರುಗಾಯಿ ಮಾಡದೆ ಅವರು ವಿರಮಿಸುವವರೂ ಅಲ್ಲ.

2002ರ ಗುಜರಾತ್ ನರಮೇಧ ನಡೆದಾಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಸದರಿ ನರಮೇಧವನ್ನು ಸ್ವತಃ ಮೋದಿಯವರು ನಡೆಸಿದರು ಎಂದು ಅವರ ವಿರೋಧಿಗಳೂ ಆಪಾದಿಸುವುದಿಲ್ಲ. ಆದರೆ ಮುಖ್ಯಮಂತ್ರಿಯಾಗಿದ್ದ ಅವರಿಗೆ ಆ ನರಮೇಧವನ್ನು ತಡೆಯುವ ಹೊಣೆಗಾರಿಕೆಯಿತ್ತು. ಆ ಹೊಣೆಗಾರಿಕೆಯನ್ನು ಅವರು ನಿಭಾಯಿಸುವಲ್ಲಿ ವಿಫಲರಾದರು. ನರಮೇಧವನ್ನು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ತಡೆಯಲು ಕನಿಷ್ಠ ಯತ್ನವನ್ನೂ ಮಾಡದಿರುವುದು ಎಂದರೆ ಒಂದರ್ಥದಲ್ಲಿ ಆ ಅಪರಾಧದಲ್ಲಿ ಭಾಗಿಯಾದುದಕ್ಕೆ ಸಮ.

ಒಂದೆಡೆಯಲ್ಲಿ ನರಮೇಧ ತಡೆಯಲು ಪರಿಣಾಮಕಾರಿಯಾಗಿ ಯತ್ನಿಸಲಿಲ್ಲ, ಇನ್ನೊಂದೆಡೆಯಲ್ಲಿ ನರಮೇಧದ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಆಗುವಂತೆಯೂ ನೋಡಿಕೊಳ್ಳಲಿಲ್ಲ. ನ್ಯಾಯ ಒದಗಿಸಬೇಕಾದ ಪ್ರಭುತ್ವವೇ ಅನ್ಯಾಯ ಎಸಗುತ್ತದೆ ಎಂಬುದು ಅರಿವಾಗುತ್ತಲೇ ತೀಸ್ತಾ ಸೆಟಲ್ವಾಡ್‍ರಂತಹ ಮಾನವತಾವಾದಿ ಹೋರಾಟಗಾರರು ದೊಡ್ಡ ರಿಸ್ಕ್ ತೆಗೆದುಕೊಂಡು ರಂಗಕ್ಕಿಳಿದರು, ಕೋರ್ಟ್ ಮೆಟ್ಟಲು ಹತ್ತಿದರು. ಗುಜರಾತಿನ ಪ್ರಕರಣಗಳನ್ನು ಸುಪ್ರೀಂ ಕೋರ್ಟು ಗಂಭೀರವಾಗಿ ಪರಿಗಣಿಸುವಂತೆ, ಕೆಲವೊಂದು ಪ್ರಕರಣಗಳಲ್ಲಿ ನ್ಯಾಯನೀಡುವಂತೆ ಮಾಡಲು ತೀಸ್ತಾರ ಈ ಯತ್ನ ಕಾರಣವಾಗಿತ್ತು. “ಗುಜರಾತ್ ಹೊತ್ತಿ ಉರಿಯುತ್ತಿದ್ದಾಗ ಆಧುನಿಕ ದಿನಗಳ ನೀರೋ ಬೇರೆಡೆಗೆ ನೋಡುತ್ತ ಕುಳಿತಿದ್ದ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸುವಂತಾಯಿತು.

ಇದೇ ಕಾರಣಕ್ಕೆ ಮೋದಿಯವರ ಕೆಂಗಣ್ಣಿಗೆ ಗುರಿಯಾದರು ತೀಸ್ತಾ. ತೀಸ್ತಾರ ದುರದೃಷ್ಟಕ್ಕೆ ಮೋದಿಯರು ಮುಂದೆ ದೇಶದ ಪ್ರಧಾನಿಯೇ ಆದರು. ಆ ಬಳಿಕವೂ ತೀಸ್ತಾರನ್ನು ಮರೆಯದ ಮೋದಿಯವರು ಆಕೆಯನ್ನು ಜೈಲಿಗೆ ತಳ್ಳಲು ನಡೆಸಿದ ಯತ್ನ ಒಂದೆರಡು ಬಾರಿಯದಲ್ಲ. ತೀಸ್ತಾರ ಎನ್‍ಜಿಒ ಸಂಪೂರ್ಣ ನಿಷ್ಕ್ರಿಯವಾಗುವಂತೆ ಮಾಡಲಾಯಿತು. ಮಾತ್ರವಲ್ಲ, ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿರದಿದ್ದರೆ ಕಳೆದ ಐದು ವರ್ಷಗಳಿಂದಲೂ ಅವರು ಜೈಲಿನಲ್ಲಿರಬೇಕಾಗಿತ್ತು.

ಗುಜರಾತ್ ಗಲಭೆಯ ವಿಷಯಕ್ಕೆ ಬಂದಾಗ ತೀಸ್ತಾ ಸೆಟಲ್‍ವಾಡರ ಸಾಲಿನಲ್ಲಿಯೇ ಕೇಳಿಬರುವ ಇನ್ನೊಂದು ಹೆಸರು ಸಂಜೀವ ಭಟ್. ಗುಜರಾತಿನ  ಪೊಲೀಸ್ ಅಧಿಕಾರಿಯಾಗಿದ್ದ ಭಟ್ ಅವರು ಸದರಿ ಗಲಭೆಯಲ್ಲಿ ಮೋದಿಯವರ ಪಾತ್ರವನ್ನು ಬೆಟ್ಟು ಮಾಡಿದವರು; ಮೋದಿಯವರ ವಿರುದ್ಧ ಸಾಕ್ಷ್ಯ ನುಡಿದವರು. “ತಮ್ಮ ಆಕ್ರೋಶವನ್ನು ಹೊರಹಾಕಲು ಹಿಂದೂಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗಲಭೆಯ ಸಮಯದ ಅಧಿಕಾರಿಗಳ ಸಭೆಯೊಂದರಲ್ಲಿ ಮೋದಿಯವರು ಹೇಳಿದ್ದರು, ನಾನೂ ಆ ಸಭೆಯಲ್ಲಿದ್ದೆ” ಎಂದು ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿ ಮೋದಿಯವರ ಶತ್ರುತ್ವ ಕಟ್ಟಿಕೊಂಡವರು. ಆ ಸಭೆಯಲ್ಲಿ ಸಂಜೀವ್ ಭಟ್ ಇದ್ದರೇ, ಮೋದಿ ಹಾಗೆ ಹೇಳಿದ್ದರೇ ಎಂಬುದೆಲ್ಲ ಸಾಬೀತಾಗಿಲ್ಲ, ಮಾತ್ರವಲ್ಲ ಅದು ಅನೇಕ ಅನುಮಾನಗಳಿಗೂ ಕಾರಣವಾಗಿದೆ.

ಆದರೆ ಸಂಜೀವ್ ಭಟ್ ತಮ್ಮ ವಿರುದ್ದ ಮಾತನಾಡಿದ್ದನ್ನು ಮೋದಿಯವರು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ನೇತೃತ್ವದ ಗುಜರಾತ್ ಸರಕಾರ ಭಟ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿತು. ಅವರನ್ನು ಕೆಲಸದಿಂದ ಅಮಾನತು ಮಾಡಲಾಯಿತು, ಅವರ ಮೇಲಿನ ಹಳೆಯ ಕೇಸುಗಳನ್ನು ಮತ್ತೆ ತೆರೆಯಲಾಯಿತು. ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಯಿತು. ಅವರ ಮನೆಯ ಒಂದು ಭಾಗವನ್ನು ಕೆಡವಲಾಯಿತು. ಮೋದಿಯವರು ದೇಶದ ಪ್ರಧಾನಿಯಾದ ಬಳಿಕವಂತೂ ಭಟ್ ಅವರ ಮೇಲಿನ ಪ್ರತೀಕಾರ ಕ್ರಮಗಳು ಇನ್ನೂ ಹೆಚ್ಚಾದವು. ಅವರನ್ನು ಕೆಲಸದಿಂದಲೇ ವಜಾ ಮಾಡಲಾಯಿತು.

ಆದರೆ ಯಾವುದಕ್ಕೂ ಎದೆಗುಂದದ ಸಂಜೀವ ಭಟ್ ತಮ್ಮ ದಿಟ್ಟ ಮತ್ತು ಮೊನಚು ಮಾತುಗಳ ಮೂಲಕ ಮೋದಿಯವರ ನಡೆನುಡಿಗಳನ್ನು ಗೇಲಿ ಮಾಡುವ ಕೆಲಸ ಮುಂದುವರಿಸುತ್ತಲೇ ಹೋದರು. ಟ್ವಿಟರ್ ಮತ್ತು ಫೇಸ್‍ಬುಕ್‍ನಂತಹ ಸೋಶಿಯಲ್ ಮೀಡಿಯಾದಲ್ಲಿನ ಮೋದಿ ವಿರೋಧಿ ಬರೆಹಗಳ ಕಾರಣ ಅವರಿಗೆ ಲಕ್ಷಾಂತರ ಅಭಿಮಾನಿಗಳೂ ಹುಟ್ಟಿಕೊಂಡರು. ಆದರೆ ಸಂಜೀವ ಭಟ್ಟರಿಗೊಂದು ಪಾಠ ಕಲಿಸಲು ಹೊಂಚು ಹಾಕುತ್ತಲೇ ಇದ್ದ ಫ್ಯಾಸಿಸ್ಟ್ ಸರಕಾರದ ಏಜನ್ಸಿಗಳು ಕೊನೆಗೂ 23 ವರ್ಷಗಳ ಹಿಂದಿನ ಕೇಸೊಂದರಲ್ಲಿ ಅವರನ್ನು ಸೆಪ್ಟಂಬರ್ 5, 2018 ರಂದು ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾದವು.

ಅಚ್ಚರಿಯ ಮತ್ತು ಆಘಾತಕಾರಿ ಅಂಶವೆಂದರೆ ನ್ಯಾಯಾಲಯ ಕೂಡಾ ಸಂಜೀವ್ ಭಟ್ ಅವರ ನೆರವಿಗೆ ಬರಲಿಲ್ಲ. ಸಂಜೀವ ಭಟ್ಟರನ್ನು ಭೇಟಿಯಾಗಲು ಅವರ ಪತ್ನಿ ಶ್ವೇತಾ ಭಟ್ಟರಿಗೂ ಸರಿಯಾಗಿ ಅವಕಾಶವನ್ನೂ ಕೊಡಲಿಲ್ಲ. ಅವರನ್ನು ಎಲ್ಲಿಟ್ಟಿದ್ದಾರೆ ಎಂಬುದೂ ಸರಿಯಾಗಿ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ವೇತಾ ಭಟ್ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದರೂ ಅವರಿಗೆ ನ್ಯಾಯ ದೊರಕಲಿಲ್ಲ. ಈ ನಡುವೆ ಶ್ವೇತಾ ಭಟ್ ಅವರ ಕಾರಿಗೆ ನಂಬರ್ ಪ್ಲೇಟ್ ರಹಿತ ಲಾರಿಯೊಂದನ್ನು ಗುದ್ದಿಸಿ ಅವರನ್ನು ಕೊಲ್ಲುವ ಯತ್ನ ನಡೆಸಲಾಯಿತು ಎಂದೂ ವರದಿಯಾಗಿತ್ತು.

ಸಂಜೀವ್ ಭಟ್‍ರನ್ನು ಬಂಧಿಸಿ ಸರಿ ಸುಮಾರು 10 ತಿಂಗಳುಗಳಾದವು. ಬಲಾಢ್ಯ ರಾಜಕಾರಣಿಯೊಬ್ಬರನ್ನು ಎದುರು ಹಾಕಿಕೊಂಡದ್ದಕ್ಕೆ ಪ್ರತೀಕಾರ ಕ್ರಮವಾಗಿಯೇ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದ್ದಲ್ಲದೇ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂಬ ಆರೋಪ ಜೋರಾಗಿಯೇ ಕೇಳಿಬಂದಿದೆ. ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ, ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ, ನ್ಯಾಯಾಂಗದ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಒಂದು ವಿದ್ಯಮಾನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...