ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದನಂತರ ಸಸಿಕಾಂತ್ ಅವರು ಇನ್ನಷ್ಟು ಬಿಜಿಯಾಗಿದ್ದಾರೆ. ನಮ್ಮ ದೇಶದ ಪ್ರಜಾಪ್ರಭುತ್ವದ ಉಳಿವಿಗೆ ಹೋರಾಡುತ್ತಿರುವ ಅವರು ನಮ್ಮ ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಸಂದರ್ಶನ ನಡೆಸಿದವರು: ರಾಜಶೇಖರ್ ಅಕ್ಕಿ
ಪ್ರ – ರಾಜೀನಾಮೆ ನಿರ್ಧಾರದ ಬಗ್ಗೆ ಈಗ ಏನನ್ನಿಸುತ್ತಿದೆ? ಹಳೆಯ ನಿಲುವು ಸರಿಯಿತ್ತು ಎಂತಲೇ ಅನ್ನಿಸುತ್ತದೆಯಾ?
ಸಸಿಕಾಂತ್ – ಹೌದು, ಖಂಡಿತವಾಗಿಯೂ ಸರಿ ಅನ್ಸುತ್ತೆ. ಈಗ ನಾವು ನಮ್ಮ ದೇಶದ ಒಂದು ವಿಶಿಷ್ಟ ಸಮಯದಲ್ಲಿ ಹಾದು ಹೋಗುತ್ತಿದ್ದೇವೆ. ಹಾಗಾಗಿ ಇದರಲ್ಲಿ ನನ್ನ ಪಾತ್ರ ಏನು ಎಂದು ಯೋಚಿಸಿ, ಈ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಮಾಡುವ ಕೆಲಸವೇ ನನ್ನ ಅಜೆಂಡಾ ಎಂದು ತೀರ್ಮಾನಿಸಿದೆ. ನಿರ್ದಿಷ್ಟವಾಗಿ ಹೇಗೆ ಮಾಡುತ್ತೀನಿ, ಒಬ್ಬ ವ್ಯಕ್ತಿಯಾಗಿ ಏನು ಮಾಡಬಹುದು ಎನ್ನುವ ಪ್ರಶ್ನೆ ಇದ್ದರೂ, ಈ ದೇಶದ ಪರಿಕಲ್ಪನೆಯ ಬಗ್ಗೆ ತಿಳಿದುಕೊಂಡವರು ನನಗೆ ಬೆಂಬಲ ಸೂಚಿಸಿದ್ದಾರೆ. ಗ್ರಾಸ್‍ರೂಟ್ ಮಟ್ಟದಲ್ಲಿ ಕೆಲಸ ಮಾಡುವುದು ನನ್ನ ಸದ್ಯದ ಗುರಿಯಾಗಿದೆ. ಈ ವ್ಯವಸ್ಥೆಯ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುವವರ ಜೊತೆಗೆ ಕೈಜೋಡಿಸುತ್ತೇನೆ. ಈ ಕೆಲಸವನ್ನು ಸರ್ವೀಸ್‍ನಲ್ಲಿ ಇದ್ದು ಮಾಡಲು ಆಗುತ್ತಿದ್ದಿಲ್ಲ. ಹಾಗಾಗಿ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ.
ಪ್ರ – ರಾಜೀನಾಮೆಗೆ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು?
ಸ – ನನ್ನ ಕುಟುಂಬದವರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಸರ್ವೀಸ್‍ಗೆ ಬರುವುದಕ್ಕಿಂತ ಮುಂಚೆಯೂ ನಾವೆಲ್ಲರೂ ಚಳವಳಿಯಲ್ಲಿ ಭಾಗಿಯಾಗುತ್ತಿದ್ದೇವೆ. ನನ್ನ ಪತ್ನಿ ಮತ್ತು ನಾನು ಕಾಲೇಜು ದಿನಗಳಿಂದ ಜೊತೆಗಿದ್ದೇವೆ. ಒಂದರ್ಥದಲ್ಲಿ ಅವಳೇ ನನ್ನನ್ನು ಕೆಲಸ ಬಿಡುವಂತೆ ಒತ್ತಾಯ ಮಾಡಿದಳು.
ಪ್ರ – ನಿಮ್ಮ ರೀತಿ ಆಲೋಚನೆ ಮಾಡುತ್ತಿರುವ ಐಎಎಸ್/ಐಪಿಎಸ್ ಅಧಿಕಾರಿಗಳು ಕೆಲವರಷ್ಟೇನಾ, ಬಹಳ ಜನ ಇದ್ದಾರಾ?
ಸ – ಬಹಳ ಜನ ಇದ್ದಾರೆ. ಏಕೆಂದರೆ ಸರ್ವೀಸ್‍ನಲ್ಲಿ ಇದ್ದವರು ನಮ್ಮ ಸಂವಿಧಾನದ ಮೇಲೆ ಆಣೆ ಮಾಡಿರುತ್ತೀವಿ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತಂದರೆ ಅದನ್ನು ಗಮನಿಸುವ ಮೊದಲಿಗರು ನಾವಾಗಿರುತ್ತೇವೆ. ಈ ಕಾರಣದಿಂದ ನಮ್ಮಲ್ಲಿ ಅನೇಕರಿಗೆ ಅಸಮಾಧಾನ ಇದ್ದದ್ದು ನನಗೆ ಕಂಡುಬಂದಿದೆ. ಸೇವಾನಿಯಮಗಳ ಕಾರಣದಿಂದ ಅವರುಗಳು ಬಹಿರಂಗವಾಗಿ ಮಾತನಾಡದಿದ್ದರೂ ಈಗ ಏನಾಗುತ್ತಿದೆ, ಇದು ಅತ್ಯಂತ ಗಂಭೀರ ಬೆಳವಣಿಗೆ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ.
ಪ್ರ – ರಾಜೀನಾಮೆ ನಂತರ ನಿಮ್ಮ ಕಾರ್ಯಕ್ಷೇತ್ರವನ್ನಾಗಿ ಕರ್ನಾಟಕವನ್ನೇ ಆರಿಸಿಕೊಂಡಂತಿದೆ. ಇದಕ್ಕೇನಾದರೂ ವಿಶೇಷ ಕಾರಣಗಳಿವೆಯಾ ಅಥವಾ ಕರ್ನಾಟಕ ಮಾತ್ರ ನಿಮ್ಮ ಕಾರ್ಯಕ್ಷೇತ್ರ ಅಲ್ಲವಾ?
ಸ – ಹಾಗೇನೂ ಇಲ್ಲ. ನಾನು ಭಾರತಾದ್ಯಂತ ಅಲೆದಾಡುತ್ತಿದ್ದೇನೆ. ನಾನು ಯಾವ ವಲಯದಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ನಿರ್ಧರಿಸಿದ್ದೇನೆ. ಹೆಚ್ಚಿನ ಎಕ್ಸಪೋಷರ್ ಇರದ ತಳಮಟ್ಟದಲ್ಲಿ ಕೆಲಸ ಮಾಡುವೆ. ಕರ್ನಾಟಕ ನನ್ನ ಹೋಮ್‍ಟೌನ್ ಆಗಿದೆ. ಹಾಗಾಗಿ ಇಲ್ಲಿ ಹೆಚ್ಚು ಜನರನ್ನು ಭೇಟಿಯಾಗುತ್ತಿದ್ದೇನೆ.
ಪ್ರ – ‘ಸಾರ್ವಜನಿಕ ಅಭಿಪ್ರಾಯ – ಪಬ್ಲಿಕ್ ಒಪೀನಿಯನ್’ ಮೂಡಿಸಲು ಗಮನ ಕೊಡಬೇಕು ಎಂದು ನೀವು ಪದೇ ಪದೇ ಹೇಳುತ್ತಿದ್ದೀರಿ. ಇದರ ಅರ್ಥವೇನು?
ಸ – ಸರಳ ವಿಷಯ ಹೇಳುವೆ. ಏನೇ ಹೇಳಿದರೂ ಇದು ಒಂದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ. ಇವರ ಐಡಿಯಾಲಜಿ ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿದೆ. ಹಾಗೂ ನಮ್ಮ ದೇಶದ ಮೂಲ ಪರಿಕಲ್ಪನೆಗೆ ವಿರುದ್ಧವಾಗಿದೆ. ಭಾರತೀಯತೆಗೆ ವಿರುದ್ಧವಾಗಿದೆ. ಇದರಿಂದ ಮುಕ್ತಿ ಪಡೆಯಬೇಕೆಂದರೆ ಈ ಐಡಿಯಾಲಜಿಯವರು ಆಡಳಿತದಲ್ಲಿ ಇರಬಾರದು. ಅದನ್ನು ನಾವು ಪ್ರಜಾಸತ್ತಾತ್ಮಕ ರೀತಿಯಲ್ಲೇ ಮಾಡಬೇಕಿದೆ. ಅಂದರೆ ಚುನಾವಣಾ ರಾಜಕೀಯ. ಅವರನ್ನು ಗೆಲ್ಲಿಸಿದ ಜನರಿಂದಲೇ ಸೋಲಿಸಬೇಕು. ಅದಕ್ಕಿರುವ ಬಂಡವಾಳ? ಈ ಸರಕಾರದ ಮೇಲಿರುವ ಸಾರ್ವಜನಿಕ ಅಭಿಪ್ರಾಯ. 2014 ಮತ್ತು 2019ರಲ್ಲಿ ಇವರಿಂದ ಏನೋ ಒಳ್ಳೇದಾಗುತ್ತೆ ಅಥವಾ ಇತರರಿಂದ ಒಳ್ಳೇದಾಗಲ್ಲ ಎನ್ನುವ ಅಭಿಪ್ರಾಯವನ್ನು ಮೂಡಿಸಲಾಯಿತು. ಇವರಿಂದ ಒಳ್ಳೇದಾಗುತ್ತೆ ಮತ್ತು ಇತರರಿಂದ ಬೇರೇನೋ ಕೆಟ್ಟದಾಗುತ್ತೆ ಎನ್ನುವ ಭಯವನ್ನು ಮೂಡಿಸುವುದೂ ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಕೆಲಸವೇ. ಅವರ ಪ್ರೊಪಗಾಂಡಾದಿಂದ ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಲಾಗಿದೆ. 1947ರಿಂದ 2014ರ ತನಕ ಈ ಪ್ರೊಪಗಾಂಡಾಕ್ಕೆ ಈ ದೇಶ ಪ್ರತಿರೋಧ ತೋರಿತು. ಒಂದರ್ಥದಲ್ಲಿ 2011ರಲ್ಲಿ ಮೋದಿ ಶಾ ಮುಂಚೂಣಿಗೆ ಬಂದನಂತರ ಈ ಪ್ರೊಪಗಾಂಡ ಶುರುವಾಯಿತು ಹಾಗೂ ಈ ಪ್ರೊಪಗಾಂಡಾದ ಬಲೆಗೆ ಅನೇಕರು ಬಿದ್ದಿದ್ದಾರೆ. ಹಾಗಾಗಿ ಸಾರ್ವಜನಿಕ ಅಭಿಪ್ರಾಯದ ಆಧಾರದ ಮೇಲೆಯೇ ಚುನಾವಣಾ ರಾಜಕೀಯ ನಡೆಯಲಿದೆ.
ಈಗ ಜನಕ್ಕೆ ಅರಿವು ಮೂಡಿಸಬೇಕಿದೆ. ಈ ಪ್ರೊಪಗಾಂಡಾದ ಹಿಂದಿರುವ ಷಡ್ಯಂತ್ರವನ್ನು ಬಹಿರಂಗಪಡಿಸಬೇಕಿದೆ. ಉದಾಹರಣೆಗೆ ನೋಟು ರದ್ದತಿ ತೆಗೆದುಕೊಳ್ಳಿ. ಜಾರಿಗೆ ತಂದ ಮೊದಲ ದಿನಗಳಲ್ಲಿ ಬಹುತೇಕರು ಆ ಕ್ರಮವನ್ನು ಬೆಂಬಲಿಸಿದರು. ಆದರೆ ಈಗ ಸತ್ಯ ಹೊರಬಿದ್ದಿದೆ. ಅದರಿಂದ ಅವರು ಹೇಳಿಕೊಂಡ ಯಾವ ಲಾಭಗಳೂ ಆಗಲಿಲ್ಲ. ಆದರೆ ಅದೇ ಬೆಂಬಲ ಪೌರತ್ವ ತಿದ್ದುಪಡಿ ಕಾಯ್ದೆಯ ವಿಷಯದಲ್ಲಿ ಕಾಣುತ್ತಿಲ್ಲ. ಅವರುಗಳು ಸುಲಭವಾಗಿ ಈ ಕ್ರಮವನ್ನೂ ಒಂದು ಒಳ್ಳೆಯ ಕ್ರಮ, ನುಸುಳುಕೋರರನ್ನು ಹೊರದಬ್ಬಲು ಮಾಡುತ್ತಿರುವ ಕ್ರಮ ಎಂದು ಮನವರಿಕೆ ಮಾಡಬೇಕಾಗಿತ್ತು. ಆದರೆ ಜನ ಸುಲಭವಾಗಿ ನಂಬುತ್ತಿಲ್ಲ. ಆ ಕಾರಣಕ್ಕಾಗಿಯೆ ಇಂದು ಆದಂತಹ ಬೃಹತ್ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ. ಸತ್ಯ ಎಲ್ಲರಿಗೂ ತಿಳಿಯುತ್ತಿರುವುದರಿಂದ ಈ ಪ್ರತಿಕ್ರಿಯೆ ಕಾಣಿಸುತ್ತಿದೆ. ಹಾಗಾಗಿ ಶಿಕ್ಷಿತ ಜನರ ಜವಾಬ್ದಾರಿ ಏನೆಂದರೆ, ಇಂತಹ ಪ್ರೊಪಗಾಂಡಾಗಳ ಹಿಂದೆ ಇರುವ ವಾಸ್ತವವನ್ನು ಎಲ್ಲರೆದುರಿಗೆ ಇಡುವುದು. ಹಾಗಾಗಿ ಇದೊಂದು ಚಳವಳಿಯಾಗಿ ರೂಪುಗೊಂಡಿದೆ.
ಇಂದು ಮುಖ್ಯವಾಹಿನಿ ಮಾಧ್ಯಮ ನಮ್ಮ ಕೈಯಲ್ಲಿ ಇಲ್ಲ; ಹಿಂದೆ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಕೆಲಸ ಅತ್ಯಂತ ಬದ್ಧತೆಯುಳ್ಳ ಪತ್ರಕರ್ತರಿಂದ ಆಗುತ್ತಿತ್ತು. ಈಗ ಆ ಕೆಲಸ ಜನರೇ ಮಾಡಬೇಕಿದೆ.
ಪ್ರ- ತಮಿಳುನಾಡು ಮಿಕ್ಕ ರಾಜ್ಯಗಳಿಗಿಂತ ಭಿನ್ನವಾಗಿರಲು ಕಾರಣಗಳೇನು?
ಸ – ತಮಿಳುನಾಡಿಗೆ ಒಂದು ವಿಭಿನ್ನ ಇತಿಹಾಸವಿದೆ. ಅದನ್ನು 60, 70 ಮತ್ತು 80ರ ದಶಕದಲ್ಲಿ ಒಂದು ಅತ್ಯಂತ ಗಟ್ಟಿಯಾದ ಸಾಮಾಜಿಕ ಚಳವಳಿಯು ಮುನ್ನಡೆಸಿತ್ತು. ಅದನ್ನು ಸೆಲ್ಫ್ ರೆಸ್ಪೆಕ್ಟ್ ಮೂವ್‍ಮೆಂಟ್. (ಆತ್ಮಗೌರವದ ಚಳವಳಿ) ಎಂದು ಕರೆಯಲಾಗಿತ್ತು. ಅದನ್ನು ಪ್ರಾರಂಭಿಸಿದವರು ಪೆರಿಯಾರ್. ಆಗ ವಿಚಾರವಾದಿ ಚಿಂತನೆ ಮುಂಚೂಣಿಗೆ ಬಂತು. ತಮಿಳುನಾಡಿನ ಜನರು ಈ ಪುರೋಹಿತಶಾಹಿ ಷಡ್ಯಂತ್ರವನ್ನು ತಿರಸ್ಕರಿಸಿದರು. ಕರ್ನಾಟಕದಲ್ಲಿ ನಾವು ಒಳ್ಳೆಯ ಜನರು. ಆದರೆ ಸಂಪ್ರದಾಯಸ್ಥ ಗುಣ ಇನ್ನೂ ಇದೆ. ಹೌದು ತಮಿಳುನಾಡಿನಲ್ಲಿ ಹೀರೋ ವರ್ಷಿಪ್ ಇದೆ. ಆದರೆ ಅವರನ್ನೂ ಕಾನೂನಾತ್ಮಕ ಚೌಕಟ್ಟಿನಲ್ಲಿಯೇ ನೋಡುತ್ತಾರೆಯೇ ಹೊರತು ಅವರ ಜಾತಿ ಅಥವಾ ಮತದ ಆಧಾರದ ಮೇಲೆ ಅಲ್ಲ.
ಕರ್ನಾಟಕದಲ್ಲಿಯೂ ಇನ್ನೊಂದು ವಿಚಾರವಾದಿ ಆಂದೋಲನ ಹುಟ್ಟುಹಾಕಬೇಕಿದೆ. ಬಸವಣ್ಣ ಅತಿ ದೊಡ್ಡ ವಿಚಾರವಾದಿ. ಈಗ ಇನ್ನೊಂದು ಬೇಕಿದೆ.
ಪ್ರ- ಎನ್‍ಆರ್‍ಸಿ-ಸಿಎಎ ವಿಚಾರದಲ್ಲಿ ಅಸ್ಸಾಂನ ಅನುಭವ ಏನು ಹೇಳುತ್ತದೆ?
ಸ – ಅಸ್ಸಾಮಿನಲ್ಲಿ ಆದ ಪೌರತ್ವ ನೋಂದಣಿಯಲ್ಲಿ 19 ಲಕ್ಷ ಜನರನ್ನು ಹೊರಗಿನಿಂದ ಬಂದವರು ಎಂದು ಹೇಳಲಾಗಿದೆ. ಅದರಲ್ಲಿ ಸುಮಾರು ಐದು ಲಕ್ಷ ಮುಸ್ಲಿಮರಿದ್ದರೆ ಮಿಕ್ಕವರು ಮುಸ್ಲಿಮೇತರರು. ಅವರೂ ಸಹ ಅಧಿಕಾರಿಗಳ ಹತ್ತಿರ ತಾವು ಭಾರತೀಯ ನಾಗರಿಕರು ಎಂದು ತೋರಿಸುವ ದಾಖಲೆಗಳನ್ನು, ಅಫಿಡವಿಟ್‍ಗಳನ್ನು ಸಲ್ಲಿಸಿದ್ದಾರೆ. ಈ ಕಾನೂನು ಬಂದನಂತರ ಅವರೀಗ ತಾವು ಭಾರತೀಯರಲ್ಲ; ಧಾರ್ಮಿಕ ಕಿರುಕುಳದಿಂದ ಈ ದೇಶಕ್ಕೆ ಬಂದವರು ಎಂದು ಹೇಳಿ, ಆ ಪ್ರಕಾರ ಅಫಿಡವಿಟ್ ಮಾಡಿಸಬೇಕಾಗಿದೆ. ಈ ಮುಂಚೆ ಸುಳ್ಳು ಹೇಳಿದರು ಎಂದು ಅವರ ಮೇಲೆ ಫೋರ್ಜರಿ ಪ್ರಕರಣ ಹಾಕಬಹುದು. ಹಾಗಾಗಿ ಈ ಕಾನೂನನ್ನು ಯಾರಿಗೆ ಮಾಡಿದ್ದಾರೆ, ಏತಕ್ಕಾಗಿ ಮಾಡಿದ್ದಾರೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಆದರೆ ಒಂದು ಸಮುದಾಯಕ್ಕೆ ಬೆದರಿಕೆಯ ಸಂದೇಶವನ್ನಂತೂ ಕಳಿಸುತ್ತದೆ.
ಪ್ರ – ಇಂದಿನ ರಾಜಕೀಯ ನೋಡಿದರೆ ನಿಮಗೆ ಹೋಪ್ (ಭರವಸೆ) ಕಾಣಿಸುತ್ತಿದೆಯಾ?
ಸ – ಖಂಡಿತವಾಗಿಯೂ ಕಾಣುತ್ತಿದೆ. ನಾವು (ನಮ್ಮ ಸಮಯದ) ಇತಿಹಾಸದ ಅತ್ಯಂತ ಇಂಟರೆಸ್ಟಿಂಗ್ ಸಮಯದಲ್ಲಿದ್ದೇವೆ. ಜನರು ಹೇಳುತ್ತಾರೆ ನಮ್ಮ ದೇಶದಲ್ಲಿ ಗೊಂದಲ/ಅವ್ಯವಸ್ಥೆ (chaos) ಇದೆ ಎಂದು ಹೇಳುತ್ತಾರೆ.
ಈ chaos ನಮ್ಮನ್ನು ಉಳಿಸುತ್ತೆ ಎಂದು ನಾನು ಹೇಳಬಯಸುತ್ತೇನೆ. ನಮ್ಮ chaos ನಲ್ಲೂ ಒಂದು ರೀತಿಯ ಸೌಂದರ್ಯವಿದೆ, ಒಂದು ರೀತಿಯ ವ್ಯವಸ್ಥೆ ಇದೆ. ಇರಲಿ, ನಾನು ಏಕೆ ಆಶಾದಾಯಕವಾಗಿದ್ದೇನೆ ಎಂದರೆ, ಈ ಸರ್ವಾಧಿಕಾರಿ ವ್ಯವಸ್ಥೆ; ಇತಿಹಾಸವನ್ನು ನೋಡಿದರೆ ಗೊತ್ತಾಗುತ್ತೆ. ಇಂತಹ ಸರ್ವಾಧಿಕಾರಿ ವ್ಯವಸ್ಥೆ ನಮ್ಮಂತಹ ವಿವಿಧತೆ, ಭಿನ್ನತೆ ಇರುವಂತಹ ಸಮಾಜದಲ್ಲಿ ಒಂದು ದಶಕಕ್ಕಿಂತ ಹೆಚ್ಚು ನಿಲ್ಲಲು ಸಾಧ್ಯವಾಗುವುದಿಲ್ಲ ಹಾಗೂ ಕಳೆದ ಐದು ವರ್ಷಗಳಲ್ಲಿ ಅಧಿಕಾರದಲ್ಲಿರುವ ಇವರು ತಮ್ಮನ್ನು ತಾವು ಮೂರ್ಖರಿಂದ ಸುತ್ತುವರೆಸಿಕೊಂಡಿದ್ದಾರೆ. ಇವರಿಗೆ ಜಟಿಲ ವಿಷಯಗಳನ್ನು ನಿಭಾಯಿಸಲು ಆಗುವುದಿಲ್ಲ; ಉದಾಹರಣೆಗೆ ಆರ್ಥಿಕತೆ.
ಇವರಿಗೆ ತಿಳಿಯುವುದೂ ಇಲ್ಲ ಹಾಗೂ ತಮ್ಮ ದರ್ಪದ ಕಾರಣದಿಂದ ಬೇರೆಯವರ ಮಾತನ್ನು ಕೇಳಲು ತಯ್ಯಾರಿಲ್ಲ. ಹಾಗಾಗಿ ಕುಸಿದ ಆರ್ಥಿಕತೆಯ ಪರಿಣಾಮ ಎಲ್ಲರಿಗೂ ತಟ್ಟಲಿದೆ. ಅದು ಧರ್ಮ ನೋಡುವುದಿಲ್ಲ. ಹಾಗಾಗಿ ಇವರ ಜನಪ್ರಿಯತೆ ಕುಸಿಯುವುದು ಖಚಿತವಾಗಿದೆ.
(ಸಸಿಕಾಂತ್ ಅವರೊಂದಿಗೆ ಇನ್ನೂ ಅನೇಕ ವಿಷಯಗಳ ಬಗ್ಗೆ ಚರ್ಚಿಸುವುದಿದ್ದರೂ, ಸಮಯದ ಅಭಾವದಿಂದ ಆಗಲಿಲ್ಲ)


