Homeಮನರಂಜನೆಸತ್ಯಜಿತ್ ರೇ (Satyajit Ray) ಅವರ 'ಜನ ಅರಣ್ಯ' : ಚಕ್ರವರ್ತಿ ರಾಘವನ್ ಅವರ 'ಸಿನಿ...

ಸತ್ಯಜಿತ್ ರೇ (Satyajit Ray) ಅವರ ‘ಜನ ಅರಣ್ಯ’ : ಚಕ್ರವರ್ತಿ ರಾಘವನ್ ಅವರ ‘ಸಿನಿ ನೋಟ’ದಲ್ಲಿ

- Advertisement -

//ಚಕ್ರವರ್ತಿ ರಾಘವನ್//

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಚಕ್ರವರ್ತಿ ರಾಘವನ್ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ಕುರಿತು ಗಾಢ ಆಸಕ್ತಿ ಮತ್ತು ಒಳನೋಟಗಳನ್ನು ಹೊಂದಿದ್ದಾರೆ. ಅದರಲ್ಲೂ ತಮ್ಮ ನೆನಪಿನಿಂದ ಕಳೆದ 3 ದಶಕಗಳ ಬೆಳವಣಿಗೆಗಳನ್ನು ಹೆಕ್ಕುತ್ತಾ ವರ್ತಮಾನವನ್ನು ವಿಶ್ಲೇಷಿಸುವುದರಲ್ಲಿ ಎತ್ತಿದ ಕೈ. ಫೇಸ್ ಬುಕ್ ನಲ್ಲಿ ದೀರ್ಘವಾದ ಅವರ ಬರಹಗಳು ಪ್ರಸಿದ್ಧ. ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರ ಹುಟ್ಟಿದ ದಿನದ ಸಂದರ್ಭದಲ್ಲಿ ಅವರ ಪ್ರಸ್ತುತ ಬರಹವನ್ನು ನಾನುಗೌರಿ.ಕಾಂನಲ್ಲಿ ನಿಮಗಾಗಿ.

’ಜನ ಅರಣ್ಯ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಕಾರಿನ ಡಿಕ್ಕಿಯ ಒಳಗೆ ಪಟ್ಟಾಗಿ ಕುಳಿತು ತಾವೇ ಕ್ಯಾಮೆರಾ ಹಿಡಿದಿರುವ ನಿರ್ದೇಶಕ ಸತ್ಯಜಿತ್ ರೇ(Satyajit Ray). ನಾಯಕಿಯ ಪಕ್ಕ ನಿಂತಿರುವವರು, ರೇ ಅವರ ಬಹುತೇಕ ಚಿತ್ರಗಳ ಛಾಯಾಗ್ರಾಹಕ ಸೌಮೇಂದು ರಾಯ್. ಲೈಟ್ ಬಾಯ್ ಯಿಂದ, ಕಲಾ ನಿರ್ದೇಶಕನ ವರೆಗಿನ ಎಲ್ಲಾ ಇಲಾಖೆಗಳಲ್ಲೂ ನಿರ್ಭಿಡೆಯಿಂದ ಒಗ್ಗಿಕೊಳ್ಳುವ ಮನೋಭಾವದ ರೇ, ’ಶ್ರೇಷ್ಟ’, ’ಮಹಾನ್’ ಮುಂತಾದ ಕ್ಲೀಷೆಗಳನ್ನು ಕಳಚಿಕೊಂಡು, ಸೆಟ್ ನಲ್ಲಿ ತಾವೂ ದುಡಿದು ಎಲ್ಲರಿಂದಲೂ ’ಬೆಳೆ’ ತೆಗೆಸುತ್ತಿದ್ದವರು. ತಮ್ಮ ಓರಗೆಯ ರಿತ್ವಿಕ್ ಘಟಕ್, ಮೃಣಾಲ್ ಸೇನ್, ಬಿಮಲ್ ರಾಯ್, ಬುದ್ಧದೇವ್ ದಾಸ್ ಗುಪ್ತ, ಬಸು ಚಟರ್ಜಿ, ಹೃಷಿ ದಾ ಮುಂತಾದವರ ಏಳಿಗೆಯನ್ನು ಪ್ರಜ್ಞಾಪೂರ್ವಕವಾಗಿ ಗಮನಿಸುತ್ತಾ ತಮ್ಮ ಹಾದಿ, ಸ್ಥಾನಗಳನ್ನು ಎಚ್ಚರದಿಂದ ಕಾದುಕೊಂಡರು.

ರಿತ್ವಿಕ್-ರೇ ದ್ವಯರ ಮುಂದೆ ಮೃಣಾಲ್ ಸೇನ್ ಸಪ್ಪೆ ಎನಿಸುವುದು ಸಹಜವಾದರೂ, ಪ್ರತಿಭೆಯಲ್ಲಿ ಅವರೇನೂ ಕಡಿಮೆಇರಲಿಲ್ಲ. ನಿರೂಪಣೆಯಲ್ಲಿನ ತೀವ್ರತೆ, ಸೂಕ್ಷ್ಮಗಳನ್ನು ಕಟ್ಟಿಕೊಡುವ ಕುಸುರಿ, ಸಾಮಾಜಿಕ ವಾಸ್ತವಗಳನ್ನು ಸಿನಿಮಾದ ಭಾಷೆಗೆ ಎಳೆತರುವ ಜಾಣ್ಮೆಗಳಲ್ಲಿ, ರಿತ್ವಿಕ್ ಈ ಎಲ್ಲರಿಗಿಂತ ಮುಂದಿದ್ದರು. ಆದರೆ ರೇ ಅವರಲ್ಲಿದ್ದ sophistication ರಿತ್ವಿಕ್ ರಲ್ಲಿ ಇರಲಿಲ್ಲ. ರೇ ಭಾರತದ ಆಚೆ ತಲೆ ನಿಮಿರಿಸಿ ನೋಡಿದರು. ರಿತ್ವಿಕ್, ಭಾರತದ ವಿಶೇಷವಾಗಿ ಬಂಗಾಳದ ಸಮಾಜವನ್ನು ಸೂಕ್ಷ್ಮದರ್ಶಕದಲ್ಲಿ ನೋಡುತ್ತಾ ಸಾಗಿದರು. ಸಾಗರದಾಚೆಗೆ ಅವರ ದೃಷ್ಟಿ ಹೋಗಲಿಲ್ಲ.

ಅದೇನೇ ಇರಲಿ…ವಿಶ್ವ ಸಿನಿಮಾ ರಂಗ ಭಾರತದತ್ತ ಬೆರಗುಗಣ್ಣಿನಿಂದ, ಈರ್ಷ್ಯೆಯಿಂದ ನೋಡುವಂತೆ ಮಾಡಿದ ರೇ, ಭಾರತೀಯರ ಹೆಮ್ಮೆ. ಫೋಟೋಗ್ರಫಿ-ಪೇಂಟಿಂಗ್ ಮೊದಲಾದ ಹಲವು ಕಲೆಗಳಲ್ಲಿ, ಕಥೆ-ಕಾವ್ಯ-ಪ್ರಬಂಧ ಮೊದಲಾದ ಹಲವು ಸಾಹಿತ್ಯ ಪ್ರಾಕಾರಗಳಲ್ಲಿ ಅಪಾರ ಪರಿಶ್ರಮವಿದ್ದ ರೇ, ಆ ಎಲ್ಲಾ ಪರಿಶ್ರಮಗಳನ್ನೂ ಹೆಪ್ಪುಗಟ್ಟಿಸಿ ಸಿನಿಮಾ ಕೃಷಿ ಮಾಡಿದರು. ೫೦ರ ದಶಕದವರೆಗೂ ಸಿನಿಮಾವನ್ನು ಓದುತ್ತಾ ಬೆಕ್ಕಸಬೆರಗಾಗುತ್ತಿದ್ದ ರೇ , ತಾವೂ ಒಂದುದಿನ ಸಿನಿಮಾ ನಿರ್ದೇಶನ ಮಾಡಿಬಿಡಬೇಕೆಂದು ಸಂಕಲ್ಪಿಸಿಕೊಂಡರು. ಆದರೆ ಧೈರ್ಯವಿರಲಿಲ್ಲ. ೧೯೫೦ರ ಒಂದು ದಿನ, ಆಗಷ್ಟೇ ಬಿಡುಗಡೆಯಾಗಿ ಒಂದು ವರ್ಷವಾಗಿದ್ದ, ವಿಟ್ಟೊರಿಯೊ ಡಿ ಸಿಕಾ ನಿರ್ದೇಶಿಸಿದ ಅವಿಸ್ಮರಣೀಯ ಚಿತ್ರ ’ಬೈಸಿಕಲ್ ಥೀವ್ಸ್’ ನೋಡಿದ ರೇ, ರೋಮಾಂಚನಕ್ಕೊಳಗಾದರು. ತಾವು ಸಿನಿಮಾ ಲೋಕ ಪ್ರವೇಶಿಸಲು ಸಕಲ ತಯಾರಿ ಮಾಡಿಕೊಂಡರು. ಬಹಳಷ್ಟು ಹೊಸಬರನ್ನು ಸೇರಿಸಿಕೊಂಡು ೧೯೫೬ ರಲ್ಲಿ, ಭಾರತೀಯ ಸಿನಿಮಾಗೆ ವಿಶಿಷ್ಟ ಅಸ್ಮಿತೆ ತಂದುಕೊಟ್ಟ ’ಪಥೇರ್ ಪಾಂಚಾಲಿ’ ಮಾಡಿದರು. ಅಲ್ಲಿಂದ ಮುಂದೆ ಭಾರತೀಯ ಸಿನಿಮಾದ ಪಾಲಿಗೆ ಕುರೊಸಾವ, ಬರ್ಗ್ ಮನ್, ಎಲ್ಲವೂ ಆದರು.

ರೇ ಅವರ ಬಗ್ಗೆ ಹೆಚ್ಚು ಬರೆಯುವುದೇನೂ ಇಲ್ಲ. ಅಪೂರ್ ಸಂಸಾರ್, ಅಶೋನಿ ಸಂಕೇತ್ ತರದ ಚಿತ್ರಗಳನ್ನು ಬಹುಶಃ ಇನ್ನ್ಯಾವ ನಿರ್ದೇಶಕರೂ ಮಾಡಲಾರರು. (ರಿತ್ವಿಕ್ ರ ಅಜಾಂತ್ರಿಕ್, ನಾಗರಿಕ್ ಚಿತ್ರಗಳೂ ಸಹಾ). ಅಪೂರ್ ತ್ರಿವಳಿ (ಪಥೇರ್ ಪಾಂಚಾಲಿ, ಅಪರಜಿತೊ, ಅಪೂರ್ ಸಂಸಾರ್)ಅಥವಾ ಅಶೋನಿ ಸಂಕೇತ್ ಮಟ್ಟದಲ್ಲದ ಚಿತ್ರವಾದರೂ ’ಜನ ಅರಣ್ಯ’(’ಮಧ್ಯವರ್ತಿ’ Middlemanಅಥವಾ ಸೇಲ್ಸ್ ಮ್ಯಾನ್)ಕ್ಕೆ ರೇ ದಿಗ್ದರ್ಶಿಸಿದ ಚಿತ್ರಗಳಲ್ಲೇ ಒಂದು ವಿಶಿಷ್ಟ ಸ್ಥಾನವಿದೆ. ೭೦ರ ದಶಕದ ಕಲ್ಕತ್ತೆಯ ಯುವಜನಾಂಗದ ಕೋಟಲೆ, ಗೊಂದಲ, ಅಸಹನೆ,ಅಸಹಾಯಕತೆ, ಕನಸುಗಳು ನನಸಾಗಲಾರವೆಂಬ ವಾಸ್ತವದ ಅರಿವಾದಾಗ ಏರ್ಪಡುವ ಹತಾಶೆಗಳನ್ನು ರೇ ಸಿನಿಮಾದ ಭಾಷೆಯಲ್ಲಿ ಲೀಲಾಜಾಲವಾಗಿ ಹೇಳುವ ಶೈಲಿ ಬೆರಗಾಗಿಸುತ್ತದೆ. ಚಿತ್ರಮಾಧ್ಯಮದ ಮೇಲೆ, ಚಿತ್ರ ವ್ಯಾಕರಣದ ಮೇಲೆ ರೇ ಅವರಿಗಿದ್ದ ಹಿಡಿತಕ್ಕೆ ’ಜನ ಅರಣ್ಯ’ ಮತ್ತೊಂದು ನಿದರ್ಶನವಾಗಿದೆ.

ಚಿತ್ರದ ನಾಯಕ ಸೋಮನಾಥ್ ಬ್ಯಾನರ್ಜಿ ಪದವೀಧರ. ಕೆಳ ಮಧ್ಯಮವರ್ಗದ ಕುಟುಂಬ. ತಂದೆಗೆ ಆರೊಗ್ಯವಿಲ್ಲ. ತಾಯಿ ಮನೆಕೆಲಸಕ್ಕೆ ಸೀಮಿತೆ. ಪ್ರತಿಭಾವಂತನೇನೂ ಅಲ್ಲದ ಸೋಮನಾಥ್ ಮುಕ್ಕರಿದು ಪದವಿ ಮುಗಿಸಿದ್ದಾನೆ. ಆದರೆ ಕನಸುಗಳು ವಿಪರೀತ. ಕಲ್ಕತ್ತೆಯ ಗಲ್ಲಿಗಳಲ್ಲಿ ಹುಡುಕಿದರೂ ಕೆಲಸವಿಲ್ಲ. ಕೆಲಸ ಸಿಗುವವರೆಗೂ ಅನುಭವ ಸಿಗಲಾರದು. ಎಲ್ಲರೂ ಅಪೇಕ್ಷಿಸುವ ಅನುಭವ ಸೋಮನಾಥ್ ಬಳಿ ಇಲ್ಲ. ಸ್ವಂತ ಕೆಲಸ ಮಾಡಲು ಬಂಡವಾಳವಿಲ್ಲ.

ಸೋಮನಾಥ್ ’ಮಧ್ಯವರ್ತಿ’ಯ ಕೆಲಸ ಮಾಡಲು ನಿರ್ಧರಿಸುತ್ತಾನೆ. ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ನಂಬಿಕೆ-ಮೌಲ್ಯಗಳ ಅಧಃಪತನ ಕಾಣುತ್ತಿರುವ ಕಲ್ಕತ್ತೆಯಲ್ಲಿ ಸೋಮನಾಥ್, ಮಧ್ಯವರ್ತಿಯ ಕೆಲಸಮಾಡುವುದೂ ದುಸ್ತರ ಎಂಬುದು ಮನದಟ್ಟಾಗುತ್ತದೆ. ತಾನು ಬೆಳೆದುಬಂದ ಬಗೆ, ತನ್ನ ಸಾತ್ವಿಕ ವೆನಿಸುವ ಸ್ವಭಾವಗಳನ್ನೆಲ್ಲಾ ಪಕ್ಕಕ್ಕಿರಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸೋಮನಾಥ್ ಒಗ್ಗಿಕೊಳ್ಳಲಾರಂಭಿಸುತ್ತಾನೆ. ತನ್ನ ಈ ಮಧ್ಯವರ್ತಿಯ ಉದ್ಯೋಗಪರ್ವದಲ್ಲಿ, ತನ್ನಂತೆಯೇ ಹತಾಶನಾದ ಟ್ಯಾಕ್ಸಿ ಚಾಲಕ ಸುಕುಮಾರ್ ನ ಪರಿಚಯವಾಗುತ್ತದೆ. ಕೆಲವೇ ದಿನಗಳಲ್ಲಿ ಸುಕುಮಾರ್ ಆತ್ಮೀಯನಾಗಿಬಿಡುತ್ತಾನೆ. ಸೋಮನಾಥ್ ಮೌಲ್ಯ-ನೈತಿಕತೆಗಳನ್ನು ಇಷ್ಟಪಡದ ಮಧ್ಯವರ್ತಿಯ ಕಸುಬಿಗೆ ಕ್ರಮೇಣ ಹೊಂದಿಕೊಳ್ಳುತ್ತಾ ಸಾಗುತ್ತಾನೆ. ಸಂಸಾರ ಹೇಗೆಯೋ ನಡೆಯುತ್ತಿದೆ.

ಒಂದು ದಿನ ಸೋಮನಾಥ್ ಗೆ ಧೂರ್ತ ಗಿರಾಕಿಯೊಬ್ಬನ ಪರಿಚಯವಾಗುತ್ತದೆ. ಒಂದು ಒಳ್ಳೆಯ ಕಾಂಟ್ರಾಕ್ಟ್ ಇದೆಯೆಂದೂ ಅದನ್ನು ನಿನಗೆ ಕೊಡಿಸುವ ಇಚ್ಛೆ ಇದೆಯೆಂದೂ ಅವನು ಹೇಳಿದಾಗ ಸೋಮನಾಥ್ ಗೆ ಅಚ್ಚರಿ-ಸಂತೋಷ. ಮಗನಿಗೆ ಏನೋ ಒಳ್ಳೆಯದಾಗುತ್ತಿದೆ ಎಂದು ವೃದ್ಧ ತಂದೆಗೂ ಸಂತೋಷ. ಆದರೆ ಈ ಸಂತೋಷ ಕ್ಷಣಿಕ. ಆ ಗಿರಾಕಿಯೊಬ್ಬ ಹೆಣ್ಣುಬಾಕ. ’ತನಗೊಬ್ಬಳು ವೇಶ್ಯೆಯನ್ನು ಗೊತ್ತುಮಾಡಿಕೊಂಡು ತಾನಿರುವ ಪಂಚತಾರಾ ಹೋಟೇಲಿಗೆ ಕರೆತರಬೇಕು. ಹಾಗಾದರೆ ಕಾಂಟ್ರಾಕ್ಟ್ ತಕ್ಷಣವೇ ನಿನಗೆ’ ಎಂಬ ಕಟ್ಟಳೆಯನ್ನು ಗಿರಾಕಿ ವಿಧಿಸುತ್ತಾನೆ. ಸೋಮನಾಥ್ ಗೆ ತೀವ್ರ ಸಂದಿಗ್ಧ. ಆದರೆ ’ಅನಿವಾರ್ಯತೆ’ ಒಂದು ಭೂತವಾಗಿ ಕಾಡುತ್ತದೆ. ’ತಾನು ಅಂಥವನಲ್ಲ’ ಎಂದಾಗ ಗಿರಾಕಿಯ ತಾತ್ಸಾರದ, ಅಟ್ಟಹಾಸದ ನೋಟ. ಅಲ್ಲದೇ ಆ ’ಒಳ್ಳೆಯ’ ಕಾಂಟ್ರಾಕ್ಟ್ ತನಗಿಲ್ಲ. ಸೋಮನಾಥ್ ವಾಸ್ತವವನ್ನು ಒಪ್ಪುತ್ತಾನೆ. ’ವಿಟ’ ನೊಬ್ಬನನ್ನು ಹಿಡಿಯುತ್ತಾನೆ. ಆ ವಿಟನೋ ಮಹಾ ಬಾಯಿಬಡುಕ. ಕಲ್ಕತ್ತೆಯ ಹಲವು ವೇಶ್ಯೆಯರ ಹೆಸರನ್ನು ಚಟಪಟನೇ ಹೇಳುತ್ತಾ, ’ಆ ಇವಳಿದ್ದಾಳಲ್ಲ….ಅವಳು ಪರವಾಗಿಲ್ವಾ??..ಬಹಳಾ ರೇಟು ಇವಾಗ’ ಎನ್ನುತ್ತಾ ಸೋಮನಾಥ್ ಗೆ ತೀವ್ರ ಇರುಸು-ಮುರುಸು ಉಂಟುಮಾಡುತ್ತಾನೆ. ಕೊನೆಗೆ ವೇಶ್ಯೆಯೊಬ್ಬಳನ್ನು ಸಂಪರ್ಕಿಸುತ್ತಾನೆ. ಅವಳನ್ನು ಮಾತನಾಡಿಸುತ್ತಿದ್ದಾಗ, ಆಕೆ ಡ್ರೈವರ್ ಸುಕುಮಾರ್ ನ ತಂಗಿ ಎಂಬ ಕಹಿಸತ್ಯದ ಅರಿವಾಗಿ ಸೋಮನಾಥ್ ಗೆ ಆಕಾಶ ಕಳಚಿಬಿದ್ದಂತಾಗುತ್ತದೆ. ಮಾತು ಹೊರಡದಾಗುತ್ತದೆ. ಆಕೆಯ ನಿಜ ಹೆಸರು ಕವನ ಅಥವಾ ಕೌನಾ (ಸುಧೇಷ್ಣಾ ದಾಸ್). ಆದರೆ ಕಸುಬಿನಲ್ಲಿ ಆಕೆಗೆ ’ಝೂತಿಕಾ’ (ಬಂಗಾಲೀ ಉಚ್ಛಾರಣೆಯ ’ಜ್ಯೋತಿಕಾ’) ಎಂಬ ಹೆಸರಿದೆ. ತನ್ನ ಕಸುಬು ನಾಮಧೇಯವನ್ನು ಆಕೆ ಪದೇ ಪದೇ ಉಚ್ಛರಿಸುತ್ತಾಳೆ. ಸೋಮನಾಥ್ ಗೆ ತೀವ್ರ ಮುಖಭಂಗದ ಸನ್ನಿವೇಶ. ಒಂದಷ್ಟು ಹಣ ಹೊಂದಿಸಿ ಅವಳ ಮುಂದೆ ಹಿಡಿದು, ’ದಯವಿಟ್ಟು ತೆಗೆದುಕೊ. ಇಲ್ಲಿಂದ ಹೊರಟು ಹೋಗು’ ಎಂದು ಹೇಳುತ್ತಾನೆ. ಆದರೆ ಆಕೆ ಒಪ್ಪಳು. ’ಇದು ನನ್ನ ಕಸುಬು. ನೀನು ಮಧ್ಯವರ್ತಿಯ ಕೆಲಸ ಮಾಡುತ್ತಿದ್ದೀಯಲ್ಲಾ..ಹಾಗೇ..ಸಂಪಾದನೆಯಿಂದ ಬಂದ ಹಣ ಮಾತ್ರ ಮುಟ್ಟುತ್ತೇನೆ. ಭಿಕ್ಷೆ ಕಾಸನ್ನಲ್ಲ. ಯಾಕೆಂದರೆ ನನ್ನ ಹೆಸರು ಝೂತಿಕಾ..’ ಎಂದು ಆವೇಶದಿಂದ ನುಡಿಯುತ್ತಾಳೆ. ಮೂಲತಃ ’ಕವನ’ ಆದ ಆಕೆ ’ಝೂತಿಕಾ’ ಆಗಿದ್ದಕ್ಕೆ ಆಕೆಗೆ ತೀವ್ರ ರೋಷ-ಜಿಗುಪ್ಸೆಗಳಿವೆ. ದಿಜ್ಞ್ಮೂಢನಾದ ಸೋಮನಾಥ್ ಗತ್ಯಂತರವಿಲ್ಲದೇ ಆಕೆಯನ್ನು ಗಿರಾಕಿಯಿದ್ದ ರೂಮಿಗೆ ಕರೆದೊಯ್ಯುತ್ತಾನೆ. ಆಕೆಯನ್ನು ಒಳಗಡೆ ಕರೆಸಿಕೊಂಡ ಗಿರಾಕಿಯಿಂದ ’ಕೆಳಗಡೆ ಇರಿ…ಬರುತ್ತೇನೆ’ ಎಂಬ ಆದೇಶ ಬರುತ್ತದೆ. ಸೋಮನಾಥ್ ಯಾಂತ್ರಿಕವಾಗಿ ಕೆಳಗಿಳಿದು ಬರುತ್ತಾನೆ.

ತಡರಾತ್ರಿ ಭಾರವಾದ ಮುಖದೊಂದಿಗೆ ಸೋಮನಾಥ್ ಮನೆ ತಲುಪುತ್ತಾನೆ. ತಂದೆ-ತಾಯಿ ನಿರೀಕ್ಷೆ ಯಿಂದ ಪ್ರಶ್ನಾರ್ಥಕವಾಗಿ ಮಗನತ್ತ ನೋಡುತ್ತಾರೆ. ಅವರಿಗೆ ಯಾವ ಘಟನೆಗಳೂ, ಹಿನ್ನಲೆಯ ಅರಿವೂ ಇಲ್ಲ. ’ಅಪ್ಪಾ..ಕಾಂಟ್ರಾಕ್ಟ್ ಸಿಕ್ತು’ ಎಂದು ಸೋಮನಾಥ್ ತಲೆತಗ್ಗಿಸಿ ಉದ್ಗರಿಸುತ್ತಾನೆ. ನಡೆದ ಯಾವುದೇ ಘಟನೆಯ ಅರಿವೇ ಇಲ್ಲದ ವೃದ್ಧ ತಂದೆ ’ಸದ್ಯ ಸಿಕ್ತಲ್ಲಪ್ಪ…ನಿರಾಳ ಆಯ್ತೋ ಮಗನೇ’ ಎನ್ನುತ್ತಾ ಬೆರಳಿನಿಂದ ಕಣ್ಣು ಮುಚ್ಚಿಕೊಂಡು ಅನಿರ್ವಚನೀಯ ನೆಮ್ಮದಿ ಅನುಭವಿಸುತ್ತಾನೆ. ಝೂತಿಕಾಳ ಬಗ್ಗೆ ಗಾಢ ವಿಷಾದವೊಂದು ನೋಡುಗನಲ್ಲಿ ಉಳಿಯುತ್ತದೆ.

ಮೌನಕ್ಕೆ ದೂಡಿಬಿಡುವ, ಚಿಂತಾಕ್ರಾಂತರಾಗಿಸಿಬಿಡುವ ನೇರ-ಗಂಭೀರ ಶೈಲಿಯಲ್ಲಿ ಕಥೆ ಹೇಳುವ ಕಲೆ ರೇ ಅವರಿಗೆ ಸಿದ್ಧಿಸಿತ್ತು. ರೇ ಅವರಂತವರಿಗೆ ಹೇಳಿ ಮಾಡಿಸಿದ ತಂತ್ರಜ್ಞ ಸೌಮೇಂದು. ಕಪ್ಪು-ಬಿಳುಪಿನಲ್ಲಿ ನಗರ ಜೀವನದ ಜಂಜಾಟವನ್ನು ಮನಮುಟ್ಟುವಂತೆ ಚಿತ್ರಿಸುವುದು ಸೌಮೇಂದು ಅವರಿಗೆ ರೇ ಹೇಳಿಕೊಟ್ಟ ಪಾಠ. ಕಪ್ಪು-ಬಿಳುಪಿನ ಕ್ಯಾಮೆರಾದಲ್ಲಿ ಈತ ನೆರಳು-ಬೆಳಕಿನ ಜೊತೆ ಆಟವಾಡುವುದು ಕುತೂಹಲ ಉಂಟುಮಾಡುತ್ತದೆ. ಕತ್ತಲೆಯಲ್ಲಿನ ಕಲ್ಕತ್ತೆಯ ’ಕಪ್ಪು ಜೀವನ’ವನ್ನು ಈತ ಕಟ್ಟಿಕೊಡುವ ಪರಿಯೇ ಸೋಜಿಗವುಂಟುಮಾಡುತ್ತದೆ. ತಡರಾತ್ರಿಯೂ ಜನನಿಬಿಡವಾದ ಕಲ್ಕತ್ತೆಯ ರಸ್ತೆಗಳಲ್ಲಿ ನಿಧಾನವಾಗಿ, ಒಮ್ಮೊಮ್ಮೆ ವೇಗವಾಗಿ ಚಲಿಸುವ ಟ್ಯಾಕ್ಸಿ, ಎದುರು ಬರುವ ವಾಹನಗಳ ಪ್ರಖರ ಬೆಳಕು ಟ್ಯಾಕ್ಸಿಯಲ್ಲಿ ಕುಳಿತ ಸೋಮನಾಥ್-ಝೂತಿಕಾರ ಮುಖದ ಮೇಲೆ ಬಿದ್ದೊಡನೆಯೇ ಸ್ಪಷ್ಟವಾಗಿ ಕಾಣುವ ಅವರ ಮುಖಭಾವ, ಟ್ಯಾಕ್ಸಿ ಮುಂದೆ ಹೋದಂತೆ ಮತ್ತೆ ಕಪ್ಪಾಗುವ ಆದರೆ ಕ್ಲೋಸ್-ಅಪ್ ನಲ್ಲೇ ಉಳಿಯುವ ದೃಶ್ಯಗಳು…ಹೋಟೇಲಿನ ಕಾರಿಡಾರ್ ನಲ್ಲಿ ದೀಪಗಳೆಲ್ಲಾ ಆರಿಸಿರುವುದರಿಂದ ಸೋಮನಾಥ್-ಝೂತಿಕಾ ಅರ್ಧ-ಕತ್ತಲೆ, ಅರ್ಧ-ಬೆಳಕಿನಯ ದಾರಿಯಲ್ಲೇ ರೂಮ್ ವರೆಗೂ ಸಾಗುತ್ತಾರೆ. ರೂಮಿನ ಬಾಗಿಲು ತೆರೆದಾಗ ರೂಮ್ ಒಳಗಿನಿಂದ ಬೀಳುವ ಬೆಳಕಿನಿಂದ ಸೋಮನಾಥ್ ನ ದುಗುಡ, ಗೊಂದಲ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಝೂತಿಕಾಳ ನಿರಾಶೆ, ಅಸಹನೆ ಕೂಡಾ. ಝೂತಿಕಾ ರೂಮ್ ಪ್ರವೇಶಿಸುತ್ತಿದಂತೆ ಮುಚ್ಚುವ ಬಾಗಿಲು..ಮತ್ತೆ ಸೋಮನಾಥ್ ಮುಖದಲ್ಲಿ ಸ್ಪಷ್ಟತೆ ಇಲ್ಲ. ಮತ್ತದೇ ಅರ್ಧ ಕತ್ತಲೆಯ ದಾರಿ…ಕತ್ತಲಲ್ಲಿ ಸಾಗಬೇಕಾದ ಅಸ್ಪಷ್ಟ-ಅಸಹಾಯಕ ಬದುಕಿನ ಚಿತ್ರಣವನ್ನು ರೇ-ಸೌಮೇಂದು ಜೋಡಿ ಪ್ರತಿ ಚಿತ್ರದಲ್ಲೂ ವಿಶಿಷ್ಟವಾಗಿ ಕಟ್ಟಿಕೊಟ್ಟರು.

ಜನ ಅರಣ್ಯ ಸಿನೆಮಾವನ್ನು ಯೂಟ್ಯೂಬ್ ನಲ್ಲಿ ನೋಡಲು ಇಲ್ಲಿ ಕ್ಲಿಕ್ಕಿಸಿ

ಸುಬ್ರತೋ ಮಿತ್ರ ಅವರಿಗೆ ಸಹಾಯಕನಾಗಿ ಒಬ್ಬ ’ಟ್ರಾಲೀ ಬಾಯ್’ ಆಗಿ ರೇ ಅವರ ಚಿತ್ರಗಳಿಂದಲೇ ತಮ್ಮ ಸಿನಿಮಾ ಜೀವನ ಆರಂಭಿಸಿದ ಸೌಮೇಂದು, ಹಂತ-ಹಂತವಾಗಿ ರೇ ಚಿತ್ರಗಳ ಅವಿಭಾಜ್ಯ ಅಂಗವಾಗಿಹೋದರು. ನಾಲ್ಕು ರಾಷ್ಟ್ರ ಪ್ರಶಸ್ತಿ ಪಡೆದರು. ಅದರಲ್ಲಿ ಮೂರು ರೇ ಚಿತ್ರಗಳಿಗಾಗಿ. ಪ್ರಸಕ್ತ ಸಿನಿಮಾ-ರೇ ಯುಗದ ನಡುವಿನ ಕೊಂಡಿಯಾಗಿರುವ ಸೌಮೇಂದು ೯೦ರ ಗಡಿಯಲ್ಲಿದ್ದಾರೆ. ರೇ ಯವರ ಬಗ್ಗೆ ಮಾತನಾಡುತ್ತಾ ಭಾವುಕರಾಗಿಬಿಡುವ ಸೌಮೇಂದು, ರೇ ಅವರನ್ನು ’ಮಹಾನ್ ಗುರು’ ಎನ್ನುತ್ತಾರೆ.

ಇದನ್ನೂ ಓದಿ: ಮನುಜಮತ ಸಿನಿಯಾನ – ಸಿನೆಮಾ ಹಬ್ಬ

’ಶತರಂಜ್ ಕೆ ಕಿಲಾರಿ’, ’ಸದ್ಗತಿ’ (ದೆಹಲಿಯ ದೂರದರ್ಶನಕ್ಕಾಗಿ ಮಾಡಿದ ಜಾತಿವ್ಯವಸ್ಥೆಯ ಕ್ರೌರ್ಯವನ್ನು ಅನಾವರಣಗೊಳಿಸುವ ಚಿತ್ರ) ಹೊರತುಪಡಿಸಿದರೆ, ರೇ ಗೆ ಹಿಂದಿಯೇಕೋ ವ್ಯರ್ಜವಾಯಿತು. ಹಿಂದಿ ಚಿತ್ರರಂಗಕ್ಕೆ ಗತ್ತು-ದಿಕ್ಕು ತಂದವರಲ್ಲಿ ಬಂಗಾಳಿಗಳಿಗೆ ಒಂದು ವಿಶಿಷ್ಟ ಸ್ಥಾನವಿದೆ. ’ದೋ ಬಿಘಾ ಜಮೀನ್’ ಮಾಡಿದ ಬಿಮಲ್ ರಾಯ್, ’ಏಕ್ ದಿನ್ ಪ್ರತಿದಿನ್’, ’ಭುವನ್ ಶೋಮ್’ ತರದ ಚಿತ್ರಗಳಿಂದ ಇಡೀ ಭಾರತಕ್ಕೆ ತೆರೆದುಕೊಂಡ ಮೃಣಾಲ್ ಸೇನ್, ಬಂಗಾಳೀ ಕಣ್ಣುಗಳಿಂದ ಭಾರತೀಯ ಮಧ್ಯಮವರ್ಗವನ್ನು ವಿಶ್ಲೇಷಿಸಿದ ಹೃಷಿ ದಾ (ಹೃಷಿಕೇಶ್ ಮುಖರ್ಜೀ)….ಪ್ರಾತಃ ಸ್ಮರಣೀಯರು. ಇವರೆಲ್ಲರೊಡನೆ ರೇ ಅನ್ಯೋನ್ಯವಾಗಿದ್ದರು.

ಸತ್ಯಜಿತ್ ರೇ ಒಂದು ಕಾಲಘಟ್ಟದಲ್ಲಿ ಬಂದುಹೋಗುವ ನಿರ್ದೇಶಕರು. ಆದರೆ ಎಲ್ಲಾ ಕಾಲಘಟ್ಟಕ್ಕೂ ಸಲ್ಲುವ ದೃಶ್ಯಕಾವ್ಯಗಳನ್ನು ಅರ್ಪಿಸಿದ್ದಾರೆ. ತಮ್ಮ ಭಾಷೆ-ಮಣ್ಣಿನ ಬಗ್ಗೆ ಇವರಿಗಿದ್ದ ಶ್ರದ್ಧೆ, ಸಿನಿಮಾ ಬಗ್ಗೆ ಅವರಿಗಿದ್ದ ಉತ್ಕಟ ವ್ಯಾಮೋಹ ಅನನ್ಯ.

ಮೊನ್ನೆ ಮೇ ೨ ಅವರ ಜನ್ಮದಿನ. ಬದುಕ್ಕಿದ್ದರೆ ೯೮ ವರ್ಷ..

***************************************************************

ರಾಜಶೇಖರ್ ಅಕ್ಕಿಯವರ ಸಿನಿಯಾನ ಬರಹಗಳನ್ನು ಓದಲು ಕೆಳಗಿನ ಕೊಂಡಿ ಹಿಡಿದು ಹೋಗಬಹುದು.

ಮನೆ, ಚರ್ಚು ಮತ್ತು ಸಿನೆಮಾ: ಮಾರ್ಕೋ ಬೆಲೂಚಿಯ

 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಂಜಾಬ್‌: ಸಿಎಂ ಅಭ್ಯರ್ಥಿ ಆಯ್ಕೆಗಾಗಿ ಫೋನ್‌ ಕರೆ: ತಾನೇ ತೋಡಿದ ಖೆಡ್ಡಾದೊಳಗೆ ಬೀಳುತ್ತಿದೆಯೇ ಎಎಪಿ?

0
ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸಂಗ್ರೂರ್ ಸಂಸದ ಭಗವಂತ್ ಮಾನ್ ಅವರನ್ನು ಘೋಷಿಸಿದ್ದಾರೆ. ಮಾನ್‌ ಆಯ್ಕೆಗೆ...
Wordpress Social Share Plugin powered by Ultimatelysocial
Shares