Homeಅಂತರಾಷ್ಟ್ರೀಯರಿಲಯನ್ಸ್–ಅರಾಮ್ಕೋ ಡೀಲ್ : ಇವರ ಹರಾಮಕೋರ ದಂಧೆಗೆ ಬಲಿಪಶು ಯಾರು ಗೊತ್ತೆ?

ರಿಲಯನ್ಸ್–ಅರಾಮ್ಕೋ ಡೀಲ್ : ಇವರ ಹರಾಮಕೋರ ದಂಧೆಗೆ ಬಲಿಪಶು ಯಾರು ಗೊತ್ತೆ?

- Advertisement -
- Advertisement -

ಆಗಸ್ಟ್ 12ರಂದು ನಡೆದ ರಿಲಯನ್ಸ್ ಹೂಡಿಕೆದಾರರ ವಾರ್ಷಿಕ ಸಭೆಯಲ್ಲಿ ಕಂಪನಿಯ ಚೇರ್ಮನ್ ಮುಖೇಶ್ ಅಂಬಾನಿ ಭಾರತದ ಇತಿಹಾಸದಲ್ಲೇ ಕಂಡುಕೇಳರಿಯದಂತಹ ಘೋಷಣೆಗಳನ್ನು ಹೊರಡಿಸಿದ್ದಾರೆ. ಮರುದಿನ ಎಲ್ಲಾ ಮಾಧ್ಯಮಗಳಲ್ಲೂ ಇದರದೇ ಬಾಜಾಬಜಂತ್ರಿ. ಈ ಘೋಷಣೆಯಲ್ಲಿ ಪ್ರಮುಖವಾಗಿ ಎರಡು ಅಂಶಗಳಿವೆ.

ಮೊದಲನೆಯದು, ಸೌದಿ ಅರಾಮ್ಕೋ ಕಂಪನಿಯು ರಿಲಯನ್ಸ್ ಕಂಪನಿಯ ಪೆಟ್ರೋಕೆಮಿಕಲ್ಸ್ ಮತ್ತು ರಿಫೈನಿಂಗ್ ವ್ಯವಹಾರದ ಶೇಕಡ 20ರಷ್ಟು ಪಾಲನ್ನು ಕೊಂಡುಕೊಳ್ಳಲಿದೆ. ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಕಂಪನಿಯ ಒಟ್ಟು ಮೌಲ್ಯವನ್ನು 75 ಬಿಲಿಯನ್ ಡಾಲರ್‍ಗಳು, ಅರ್ಥಾತ್ 5 ಲಕ್ಷದ 25 ಸಾವಿರ ಕೋಟಿ ರೂಪಾಯಿಗಳೆಂದು ನಿಗದಿಗೊಳಿಸಿರುವುದು ಈ ಡೀಲ್‍ನಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶ. ಇದರಲ್ಲಿ 20% ಅಂದರೆ 1,07,000 ಕೋಟಿಗಳಷ್ಟು ಹಣಕಾಸು ಬಂಡವಾಳ ಮುಖೇಶ್ ಅಂಬಾನಿ ಕೈಸೇರಲಿದೆ. ಇದು ದೇಶದ ಇತಿಹಾಸದಲ್ಲೇ ಅತಿ ದೊಡ್ಡ ವಿದೇಶಿ ಹೂಡಿಕೆ. ಈ ಸುದ್ದಿ ಹೊರಬಿದ್ದಿದ್ದೇ ತಡ, ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಶೇರುಗಳ ಮೌಲ್ಯ ಒಂದೆರಡು ದಿನಗಳಲ್ಲಿ ಸಾವಿರಾರು ಕೋಟಿ ಏರಿಕೆಯಾಯ್ತು. ಅದು ಹಾಗಿರಲಿ.

ಈ ಅರಾಮ್ಕೋ ಕಂಪನಿ ಯಾವುದು? ಅದರ ಪೂರ್ವಾಪರ ಏನು? ರಿಲಯನ್ಸ್ ನಲ್ಲಿ ಭಾರೀ ಹೂಡಿಕೆ ಮಾಡುತ್ತಿರುವುದರ ಹಿಂದಿನ ಗುಟ್ಟೇನು ಎಂಬುದನ್ನು ತಿಳಿಯೋಣ.

ಸೌದಿ-ಅರಾಮ್ಕೊ ಎಂದು ಕರೆಯಲಾಗುವ ಈ ಕಂಪನಿ ಜಗತ್ತಿನ ಅತಿದೊಡ್ಡ ಪೆಟ್ರೋಲಿಯಂ ಉತ್ಪಾದಕ ಮತ್ತು ರಫ್ತುದಾರ. ಹತ್ತಾರು ದೇಶಗಳಲ್ಲಿ ಅವರ ತೈಲ ವ್ಯವಹಾರ ಇದೆ. ಮೊದಲ ಪ್ರಪಂಚ ಯುದ್ಧದ ಕಾಲದಲ್ಲಿ ಅಮೆರಿಕದ ಕಂಪನಿಯೊಂದು ಸೌದಿಯಲ್ಲಿ ಬಂಡವಾಳ ಹೂಡಿ ಆರಂಭಿಸಿದ್ದು. ಇದರ ಮಾಲಿಕತ್ವ ಕ್ರಮೇಣ ಬದಲಾಗಿ ಈಗ ಸಂಪೂರ್ಣ ಸೌದಿ ಸರ್ಕಾರದ ಸುಪರ್ದಿಯಲ್ಲಿದೆ. ಕಂಪನಿಯ ಮೌಲ್ಯ ಹಾಗೂ ಆದಾಯದ ದೃಷ್ಟಿಯಿಂದ ಜಗತ್ತಿನಲ್ಲೇ ನಂ.1 ಕಂಪನಿ ಎಂಬ ಹೆಗ್ಗಳಿಕೆ ಇದರದು. ಕಳೆದ ವರ್ಷದ ಅರಾಮ್ಕೋ ಆದಾಯ 111.1 ಬಿಲಿಯನ್ ಡಾಲರ್‍ಗಳು, ಅಂದರೆ 7,93,000 ಕೋಟಿ ರೂಪಾಯಿಗಳು!

ಅರಾಮ್ಕೋ ಕಂಪನಿಯ ತೈಲ ಉತ್ಪನ್ನದ ನಂಬರ್ 1 ಆಮದುದಾರ ಚೀನಾ. ನಂತರದ ಸ್ಥಾನದಲ್ಲಿ ಅಮೆರಿಕ ಹಾಗೂ ಮೂರನೇ ಸ್ಥಾನದಲ್ಲಿ ಭಾರತವಿದೆ. ನಮಗೆಲ್ಲ ತಿಳಿದಿರುವಂತೆ ಸೌದಿ ಅರೆಬಿಯಾಕ್ಕೆ ಶೇಕಡ 90ಕ್ಕಿಂತಲೂ ಹೆಚ್ಚಿನ ಆದಾಯ ಬರುವುದು ತೈಲೋತ್ಪನ್ನಗಳಿಂದಲೇ. ಪರಿಸರ ಸಂಬಂಧಿ ಸಮಸ್ಯೆಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ದೇಶ ತನ್ನ ತೈಲ ಆಮದನ್ನು ಗಣನೀಯವಾಗಿ ಕಡಿತಗೊಳಿಸುತ್ತಿದೆ. ಚೀನಾ ಕೂಡ ತೈಲ ಆಮದನ್ನು ಕಡಿತಗೊಳಿಸುವ ಯೋಜನೆಯಲ್ಲಿದೆ.

ಬದಲಾಗುತ್ತಿರುವ ಜಾಗತಿಕ ರಾಜಕೀಯ-ಆರ್ಥಿಕ ಸನ್ನಿವೇಶದಲ್ಲಿ ಅಮೆರಿಕ ಮತ್ತು ಸೌದಿಯ ನಡುವಿನ ಸಂಬಂಧ ಅಷ್ಟೇನೂ ಸಕಾರಾತ್ಮಕವಾಗಿಲ್ಲ. ಅಮೆರಿಕದ ಪತ್ರಿಕೆ ವಾಷಿಂಗ್‍ಟನ್ ಪೋಸ್ಟ್ ನ ಪತ್ರಕರ್ತ ಜಮಾಲ್ ಖಷೋಗಿ ಕೊಲೆಯಲ್ಲಿ ಸೌದಿ ಯುವರಾಜನ ಪಾತ್ರವಿದೆ ಎಂಬ ಸುದ್ದಿ ಕಳೆದ ಒಂದು ವರ್ಷದಿಂದಲೂ ನಿರಂತರ ಸದ್ದು ಮಾಡುತ್ತಿದೆ. ಇರಾನ್ – ಅಮೆರಿಕ ಸೆಣೆಸಾಟದಲ್ಲಿ ಅಮೆರಿಕ ಪರವಾಗಿ ನಿಂತಿರುವ ಸೌದಿಯ ಬಗ್ಗೆ ಇರಾನ್‍ಗೆ ಸಹಜವಾಗಿ ಕೆಂಗಣ್ಣು. ಇತ್ತಿಚೆಗೆ ನಡೆದ ಸೌದಿಯ ತೈಲ ಟ್ಯಾಂಕರ್‍ಗಳ ಮೇಲೆ ಡ್ರೋಣ್ ಹೆಲಿಕಾಪ್ಟರ್ ದಾಳಿಯಲ್ಲಿ ಇರಾನ್‍ನ ಕೈವಾಡವಿದೆಯೆಂಬ ಆರೋಪ ದಟ್ಟವಾಗಿದೆ.

ಒಂದುವೇಳೆ ಅಮೆರಿಕದೊಂದಿಗಿನ ಸಂಬಂಧ ಹದಗೆಟ್ಟರೆ ಅಥವ ಜಗತ್ತಿನ ಎರಡನೇ ಅತಿದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ಸೌದಿಯ ಮೇಲೆ ಅಮೆರಿಕದ ಕೆಂಗಣ್ಣು ಬಿದ್ದರೆ ಮುಂದಿನ ದಿನಗಳಲ್ಲಿ ಇರಾನ್‍ಗೆ ಎದುರಾದಂತೆ ಆರ್ಥಿಕ ದಿಗ್ಬಂಧನದಂತಹ ಸನ್ನಿವೇಶ ಎದುರಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಂತಹ ಹಿನ್ನೆಲೆಯಲ್ಲಿ ಸೌದಿ ತನ್ನ ಬಂಡವಾಳವನ್ನು ವಿವಿಧ ಕ್ಷೇತ್ರಗಳಿಗೆ ಹಾಗೂ ಸುರಕ್ಷಿತ ಸ್ಥಳಗಳಿಗೆ ವಿಸ್ತರಿಸುವ ತಂತ್ರವನ್ನು ಅಳವಡಿಸಿಕೊಂಡಿದೆ. ಹೀಗಾಗಿ ಸೌದಿ ಅರೆಬಿಯಾ ತನ್ನ ಕಚ್ಚಾ ತೈಲಕ್ಕೆ ಕಾಯಂ ಮಾರುಕಟ್ಟೆ ಕಂಡುಕೊಳ್ಳುವ ಪ್ರಯತ್ನದಲ್ಲಿತ್ತು. ತನ್ನ ಅವಲಂಬನೆಯಲ್ಲಿ ಸಿಲುಕುವ ದೇಶಗಳಾದರೆ ಅದಕ್ಕೆ ಇನ್ನೂ ಒಳ್ಳೆಯದೇ. ಹೀಗಾಗಿ ಅದರ ದೃಷ್ಟಿ ಭಾರತ ಪಾಕಿಸ್ತಾನಗಳತ್ತ ನೆಟ್ಟಿದೆ.

ಈ ಸೌದಿ ಅರಾಮ್ಕೋ – ರಿಲಯನ್ಸ್ ಡೀಲ್ ರಾತ್ರೋರಾತ್ರಿ ಸಂಭವಿಸಲಿಲ್ಲ. ಈ ನಿಟ್ಟಿನಲ್ಲಿ ಮೋದಿ ಸರ್ಕಾರದ ಐದು ವರ್ಷಗಳ ಎಡೆಬಿಡದ ಪ್ರಯತ್ನವನ್ನು ಯಾರಾದರೂ ಮೆಚ್ಚಲೇಬೇಕು. 2016ರ ಏಪ್ರಿಲ್‍ನಲ್ಲಿ ಪ್ರಧಾನಿ ಮೋದಿ ಎರಡು ದಿನಗಳ ಸೌದಿ ಪ್ರವಾಸ ಮಾಡಿದ ಸಂದರ್ಭದಲ್ಲೇ ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಜಂಟಿ ಪಾಲುದಾರಿಕೆಯ ಮಾತುಕತೆ ಆರಂಭಿಸಿದ್ದರು. 2018ರ ನವೆಂಬರ್‍ನಲ್ಲಿ ಯುವರಾಜ ಸಲ್ಮಾನ್‍ನನ್ನು ಅರ್ಜೆಂಟೈನಾದಲ್ಲಿ ಭೇಟಿಯಾಗಿ ಈ ಮಹಾಶಯರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದ ಸುದ್ದಿಗಳು ವರದಿಯಾಗಿದ್ದವು. ಕಳೆದ ಫೆಬ್ರವರಿ 16 ಮತ್ತು 17ರಂದು ಭಾರತದ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ನೇತೃತ್ವದ ಬ್ಯುಸಿನೆಸ್ ನಿಯೋಗ ಎರಡು ದಿನಗಳ ಅಧಿಕೃತ ಸೌದಿ ಪ್ರವಾಸ ಮಾಡಿತು. ಮರುದಿನವೇ, ಅಂದರೆ ಫೆಬ್ರವರಿ 19 ಮತ್ತು 20ರಂದು ಸೌದಿ ದೊರೆ ಮಹಮದ್ ಬಿನ್ ಸಲ್ಮಾನ್ ಭಾರತಕ್ಕೆ ಭೇಟಿ ನೀಡಿದರು. ಪ್ರಧಾನಿ ಮೋದಿ ಖುದ್ದಾಗಿ ಏರ್‍ಪೋರ್ಟ್‍ಗೆ ಹೋಗಿ ಯುವರಾಜನನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದರು.
ಇಲ್ಲಿಗೆ ಕೇವಲ ಒಂದೂವರೆ ತಿಂಗಳ ಹಿಂದೆಯಷ್ಟೇ ಅಂದರೆ 2019ರ ಜೂನ್ 28ರಂದು ಜಿ-20 ದೇಶಗಳ ಸಭೆಗೆಂದು ಜಪಾನ್‍ಗೆ ಹೋಗಿದ್ದ ಸಂದರ್ಭದಲ್ಲೂ ಮಾನ್ಯ ಮೋದಿಯವರು ಸೌದಿ ಯುವರಾಜರ ಜೊತೆ ಮಾತುಕತೆ ನಡೆಸಿದ್ದರು. ಇನ್ನೊಂದು ವಿಶೇಷ ಪ್ರಸಂಗವನ್ನು ಗಮನಿಸುವುದಾದರೆ, ಕಳೆದ ಮಾರ್ಚ್‍ನಲ್ಲಿ ನಡೆದ ಮುಖೇಶ್ ಅಂಬಾನಿಯ ಮಗ ಆಕಾಶ್ ಅಂಬಾನಿಯ ಮದುವೆ ಸಮಾರಂಭದಲ್ಲಿ ಸೌದಿಯ ಇಂಧನ ಸಚಿವ, ಬಂಡವಾಳ ಹೂಡಿಕಾ ಸಂಸ್ಥೆಯ ಎಂ.ಡಿ ಇಬ್ಬರೂ ಭಾಗವಹಿಸಿದ್ದು ಹಲವರ ಹುಬ್ಬೇರಿಸಿತ್ತು. ಆ ಎಲ್ಲ ಕುತೂಹಲಗಳಿಗೆ ಇದೀಗ ತೆರೆ ಬಿದ್ದಿದೆ. ಇಂತಹ ನಿರಂತರ ಪ್ರಯತ್ನದ ಫಲ ಈಗ ನಮ್ಮ ಕಣ್ಣ ಮುಂದಿದೆ.

ಸೌದಿ ಯುವರಾಜ ಸಲ್ಮಾನ್ ಭಾರತದಲ್ಲಿ ಒಟ್ಟು 100 ಬಿಲಿಯನ್ ಡಾಲರ್‍ಗಳಷ್ಟು ಬಂಡವಾಳವನ್ನು ಹೂಡುವುದಾಗಿ ತನ್ನ ಭಾರತ ಭೇಟಿಯಲ್ಲೇ ಘೋಷಿಸಿದ್ದರು. ಅದರಂತೆ ಬಂಡವಾಳವೇನೋ ಹರಿದುಬರಲು ಶುರುವಾಗಿದೆ. ಆದರೆ ಎಲ್ಲಿಗೆ? ಯಾರ ಹಿತಕ್ಕಾಗಿ? ಇಷ್ಟೆಲ್ಲಾ ರಾಜತಾಂತ್ರಿಕ ಕಸರತ್ತುಗಳು, ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳು ಯಾರ ಹಿತಕ್ಕಾಗಿ ಬಳಕೆಯಾಗುತ್ತಿವೆ? ಈ ದೇಶದ ಜನಸಾಮಾನ್ಯರ ಹಿತಕ್ಕಾಗಿಯೋ? ಅಥವ ಪ್ರಧಾನಿಯವರ ನೆಚ್ಚಿನ ಖಾಸಗಿ ಕುಳಗಳ ಉದ್ಧಾರಕ್ಕಾಗಿಯೋ ಎಂಬುದನ್ನು ಓದುಗರೇ ತೀರ್ಮಾನಿಸಲಿ.

ಹೀಗೆ ತನ್ನ ಬೊಕ್ಕಸಕ್ಕೆ ಬಂದು ಸೇರಿದ ಲಕ್ಷಾಂತರ ಕೋಟಿಗಳನ್ನು ಅಂಬಾನಿ ಹೇಗೆ ವಿನಿಯೋಗಿಸುತ್ತಾನೆಂಬುದು ಮತ್ತೊಂದು ಕುತೂಹಲದ ಸಂಗತಿ. ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಮುಖೇಶ್ ಅಂಬಾನಿ ಈ ವಿಷಯ ಸ್ಪಷ್ಟಪಡಿಸಿದ್ದಾನೆ. ಅವರ ಘೋಷಣೆಯ ಎರಡನೇ ಅಂಶದ ಪ್ರಕಾರ ಟೆಲಿಕಾಂ ಕ್ಷೇತ್ರದಲ್ಲಿರುವ ರಿಲಯನ್ಸ್ ಜಿಯೋ ಕಂಪನಿಯಲ್ಲಿ ಭಾರೀ ಬಂಡವಾಳ ತೊಡಗಿಸಲಾಗುತ್ತದಂತೆ. ಈಗಾಗಲೇ ಜಿಯೋದಲ್ಲಿ ಮೂರುವರೆ ಲಕ್ಷ ಕೋಟಿ ಹೂಡಲಾಗಿದೆಯಂತೆ. ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ ಎರಡು ಲಕ್ಷ ಕೋಟಿ ಬಂಡವಾಳ ಹೂಡುವ ಯೋಜನೆ ರೂಪಿಸಲಾಗಿದೆ.

ಬಡ ಭಾರತದ ದೌರ್ಭಾಗ್ಯ ನೋಡಿ ಹೇಗಿದೆ. ಲಕ್ಷಾಂತರ ಕೋಟಿ ಮೌಲ್ಯದ ಭಾರತದ ತೈಲ ನಿಕ್ಷೇಪಗಳನ್ನು ಅಂಬಾನಿಗಳು ಕೈವಶಮಾಡಿಕೊಂಡ ಹಾದಿಯಲ್ಲಿ ನಾನಾ ಅಕ್ರಮಗಳು, ಷಡ್ಯಂತ್ರಗಳನ್ನು ನಡೆಸಿದ ಆರೋಪಗಳಿವೆ. ಹತ್ತಾರು ದೂರುಗಳಿವೆ. ಈಗ ಅದೇ ತೈಲೋದ್ಯಮದಿಂದ ಗಳಿಸಿದ ಲಕ್ಷಾಂತರ ಕೋಟಿ ಬಂಡವಾಳವನ್ನು ಬಳಸಿ ದೂರಸಂಪರ್ಕ ಕ್ಷೇತ್ರದಲ್ಲಿ ಮಾನೊಪಲಿ ಸಾಧಿಸುವ ಷಡ್ಯಂತ್ರ ಹೆಣೆಯಲಾಗಿದೆ. ಈ ಯೋಜನೆಯ ವಿವರಗಳನ್ನು ನೋಡೋಣ.

ಈ ಸೆಪ್ಟೆಂಬರ್ 5ರಂದು ಜಿಯೋ ಗಿಗಾ ಫೈಬರ್ ಹೆಸರಿನ ಬ್ರಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲಾಗುತ್ತದಂತೆ. ಇದು ಮಾಮೂಲಿ ಬ್ರಾಡ್‍ಬ್ಯಾಂಡ್ ಸರ್ವೀಸ್ ಅಲ್ಲ. ಇದರಲ್ಲಿ ದೂರವಾಣಿ ಸೇವೆ, ಇಂಟರ್‍ನೆಟ್ ಸೇವೆ ಹಾಗೂ ಡಿಜಿಟಲ್ ಟಿವಿ ನೆಟ್‍ವರ್ಕ್ ಸೇವೆ ಕೂಡ ಲಭ್ಯವಿರಲಿದೆಯಂತೆ. ನಿಮ್ಮ ನೆಚ್ಚಿನ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ನೋಡುವ ಸೌಲಭ್ಯವೂ ಇರಲಿದೆ. ಅಷ್ಟು ಮಾತ್ರವಲ್ಲದೆ, ಮತ್ತೊಂದು ‘ಡಿಸ್ರಪ್ಟೀವ್ ಕಾನ್ಸೆಪ್ಟ್’ ಅನ್ನು ಕೂಡ ರಿಲಯನ್ಸ್ ಮಾಲಿಕ ಘೋಷಿಸಿದ್ದಾನೆ. ಹೊಸದಾಗಿ ರಿಲೀಸ್ ಆಗುವ ಸಿನಿಮಾಗಳನ್ನು ಥೇಟರ್‍ಗಳಿಗೆ ಹೋಗದೆ ಮನೆಯಲ್ಲೇ ಕೂತು ವೀಕ್ಷಿಸಬಹುದಂತೆ. ಇದಕ್ಕೆ ‘ಜಿಯೋ ಫಸ್ಟ್ ಡೇ ಫಸ್ಟ್ ಶೋ’ ಅಂತ ಹೆಸರಿಡಲಾಗಿದೆಯಂತೆ.

ಇದೂ ಅಲ್ಲದೆ ಕೆನಡಾ ಮತ್ತು ಅಮೆರಿಕಾ ದೇಶಗಳಿಗೆ ಸ್ಥಿರ ದೂರವಾಣಿಯಿಂದ 500 ರೂಪಾಯಿಗಳ ಮಾಸಿಕ ದರದಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಾಗಲಿದೆಯಂತೆ. ಈ ಅಂತರ್‍ಜಾಲ ಸೇವೆಯ ವೇಗ ಕನಿಷ್ಟ ಸೆಕೆಂಡಿಗೆ 100 ಎಂಬಿಯಿಂದ ಗರಿಷ್ಟ 1000 ಎಂಬಿ ಅಂದರೆ ಸೆಕಂಡಿಗೆ ಒಂದು ಜಿಬಿಯವರೆಗೆ ಇರಲಿದೆಯೆಂದು ಅಂಬಾನಿ ಘೋಷಿಸಿದ್ದಾರೆ. ದರ ಸಮರಕ್ಕೆ ಹೆಸರಾಗಿರುವ ಜಿಯೋ ಈ ಸೇವೆಗಳಿಗೆ ಅತ್ಯಂತ ಸ್ಪರ್ಧಾತ್ಮಕ ದರಗಳನ್ನೇ ಸೂಚಿಸಿದೆ. ತಿಂಗಳಿಗೆ ಕನಿಷ್ಟ 700 ರೂ.ನಿಂದ ಗರಿಷ್ಟ 10,000 ರೂ ವರೆಗೆ ವಿವಿಧ ಪ್ಲಾನ್‍ಗಳು ಇರಲಿವೆಯಂತೆ. ಜಿಯೋ ಫೈಬರ್ ಸೇವೆ ಪಡೆದುಕೊಳ್ಳುವ ಗ್ರಾಹಕರಿಗೆ ವೆಲ್‍ಕಮ್ ಆಫರ್ ಹೆಸರಿನಲ್ಲಿ ಒಂದು ಸೆಟ್‍ಟಾಪ್ ಬಾಕ್ಸ್ ಮತ್ತು ಜಿಯೋ ಎಲ್‍ಇಡಿ ಟಿವಿಗಳನ್ನು ಉಚಿತವಾಗಿ ವಿತರಿಸಲಾಗುತ್ತದಂತೆ.

ಇಷ್ಟೆಲ್ಲಾ ನಡೆಯುತ್ತಿರುವುದು ಇನ್ನೂ 5ಜಿ ತಂತ್ರಜ್ಞಾನ ಸೇವೆ ಆರಂಭ ಆಗದೆ ಇರುವ ಸನ್ನಿವೇಶದಲ್ಲಿ ಎಂಬುದನ್ನು ನಾವು ಮರೆಯಬಾರದು. 5ಜಿ ತಂತ್ರಜ್ಞಾನ ಬಳಸಿಕೊಂಡು ಭಾರತದ ದೂರಸಂಪರ್ಕ ಮತ್ತು ಅಂತರ್ಜಾಲ ಮಾರುಕಟ್ಟೆಯನ್ನು ತನ್ನ ಕೈವಶಮಾಡಿಕೊಳ್ಳಲು ಅಂಬಾನಿ ಸಜ್ಜಾಗಿ ಕೂತಿರುವ ಪರಿಯಿದು.

ಟೆಲಿಕಾಂ ಕ್ಷೇತ್ರ ಈಗಾಗಲೇ ಕೆಲವೇ ಏಕಸ್ವಾಮ್ಯಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ಆರಂಭದಲ್ಲಿ ಒಂದು ಡಜನ್‍ಗೂ ಹೆಚ್ಚು ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿದ್ದವು. ತೀವ್ರ ಪೈಪೋಟಿಯ ಪ್ರಕ್ರಿಯೆಯಲ್ಲಿ ರಿಲಯನ್ಸ್ ಜಿಯೋ, ವೊಡಾಫೋನ್-ಐಡಿಯಾ ಮತ್ತು ಭಾರ್ತಿ ಏರ್ಟೆಲ್ – ಈ ಮೂರು ದೈತ್ಯ ಕಂಪನಿಗಳೇ ಈಗ ಇಡೀ ದೇಶದ ಟೆಲಿಕಾಂ ಕ್ಷೇತ್ರವನ್ನು ಆವರಿಸಿವೆ. ಅದರಲ್ಲೂ ಕೇವಲ ಮೂರು ವರ್ಷಗಳ ಹಿಂದಷ್ಟೇ ರಂಗ ಪ್ರವೇಶಿಸಿದ ಜಿಯೋ ಉಳಿದೆಲ್ಲರನ್ನೂ ಹಿಂದೆ ಹಾಕಿ ನಂ.1 ಸ್ಥಾನಕ್ಕೇರಿದೆ. ಮತ್ತೊಂದು ಕಡೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಅನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿ, ಇದೀಗ ಐಸಿಯುಗೆ ತಳ್ಳಲಾಗಿದೆ. ರಿಲಯನ್ಸ್ ಜಿಯೋಗೆ ಏಕಪಕ್ಷೀಯ ಲಾಭ ಮಾಡಿಕೊಡುತ್ತಿರುವ ಸರ್ಕಾರದ ಕ್ರಮಗಳನ್ನು ವೊಡಾಫೋನ್-ಐಡಿಯಾ ಮತ್ತು ಏರ್ಟೆಲ್ ಕಂಪನಿಗಳು ಬಹಿರಂಗವಾಗಿಯೇ ಪ್ರಶ್ನೆ ಮಾಡಿವೆ. ಸರ್ಕಾರಿ ಸ್ವಾಮ್ಯದ ಬಿಸ್ಸೆನ್ನೆಲ್ ಆಡಳಿತ ಮಂಡಳಿಯಿಂದ ವಿರೋಧ ಬರುತ್ತದೆಂದು ನಿರೀಕ್ಷಿಸುವುದು ಮೂರ್ಖತನ. ಆದರೆ ಅದರ ಕಾರ್ಮಿಕ ಸಂಘಟನೆಗಳು ಸರ್ಕಾರದ ದ್ರೋಹದ ವಿರುದ್ಧ ಹೋರಾಟಕ್ಕಿಳಿದಿವೆ.

135 ಕೋಟಿ ಜನಸಂಖ್ಯೆಯುಳ್ಳ ಭಾರತದಂತಹ ವಿಶಾಲ ದೇಶದ ಮಾರುಕಟ್ಟೆಯನ್ನು ಕೆಲವೇ ಕಂಪನಿಗಳು ನಿಯಂತ್ರಿಸುವುದು ಅಪಾಯಕಾರಿ. ಅದರಲ್ಲೂ ಒಂದೇ ಕಂಪನಿಯ ಹಿಡಿತಕ್ಕೆ ದೂರಸಂಪರ್ಕದಂತ ಕ್ಷೇತ್ರ ಸಿಕ್ಕಿಬೀಳುವುದು ಭವಿಷ್ಯತ್ತಿನಲ್ಲಿ ವಿನಾಶಕಾರಿ ಪರಿಣಾಮ ಬೀರಲಿದೆ. ಆರಂಭದಲ್ಲಿ ಗ್ರಾಹಕರಿಗೆ ಬಹಳ ಆಕರ್ಷಕವಾದ ಸೇವೆಗಳು ಮತ್ತು ಅಗ್ಗದ ದರಗಳು ಸಿಗುತ್ತವೆ ಎಂಬುದೇನೋ ನಿಜ. ಇದು ಮೀನಿಗೆ ಹಾಕುವ ಎರೆಹುಳುವಿನಂತೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ದುಪ್ಪಟ್ಟು ಬೆಲೆಯೇರಿಸಿ ಲೂಟಿ ಹೊಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಹಾಗೆಯೇ ದೂರಸಂಪರ್ಕ ಮತ್ತು ಅಂತರ್‍ಜಾಲ ಸೇವೆಯ ಜಾಲ ಏಕಸ್ವಾಮ್ಯಕ್ಕೆ ಒಳಪಟ್ಟರೆ ನಮ್ಮ ಜೇಬಿಗೆ ಕತ್ತರಿ ಬೀಳುವುದು ಮಾತ್ರವಲ್ಲ; ದೇಶದ ಭದ್ರತೆ, ಪ್ರಜೆಗಳ ಸುರಕ್ಷತೆ, ಖಾಸಗಿತನದ ರಕ್ಷಣೆ ಎಲ್ಲವೂ ಅಂತಿಮವಾಗಿ ಒಬ್ಬ ವ್ಯಕ್ತಿಯ ಕೈಯಲ್ಲಿ ಸಿಲುಕಿ ಬೀಳುತ್ತವೆ. ಪ್ರಜಾತಂತ್ರಕ್ಕೆ ಇದಕ್ಕಿಂತಲೂ ಗಂಡಾಂತರಕಾರಿಯಾದುದು ಬೇರೇನಿರಲು ಸಾಧ್ಯ?

ಅಂಬಾನಿಗೆ ಗಂಟೂ ಸಿಕ್ತು : ಮೋದಿಗೆ ಓಟೂ ಬಿತ್ತು

ಸೌದಿ ಅರಾಮ್ಕೋ ಕಂಪನಿಯ ಹೂಡಿಕೆಯನ್ನು ಭಾರತಕ್ಕೆ ತಂದಿದ್ದು ಮೋದಿ ಸರ್ಕಾರದ ವಿಶೇಷ ಸಾಧನೆ, ರಿಲಯನ್ಸ್ ಕಂಪನಿಯ ವಿಶೇಷ ಸಾಮಥ್ರ್ಯ ಎಂಬಂತೆ ಮಾಧ್ಯಮಗಳು ಹುಯಿಲೆಬ್ಬಿಸಿವೆ. ಇದರ ಹೂರಣವನ್ನು ಅರ್ಥ ಮಾಡಿಕೊಳ್ಳಲು ಇಲ್ಲಿ ಒಂದು ತಮಾಷೆಯ, ಆದರೆ ಅಷ್ಟೇ ನೋವಿನ ಪ್ರಸಂಗವೊಂದನ್ನು ಹೇಳಲೇಬೇಕು.

ಕಳೆದ ಫೆಬ್ರವರಿ 19ರಂದು ಭಾರತಕ್ಕೆ ಭೇಟಿ ಮಾಡಿದ ಸೌದಿ ಯುವರಾಜ ಮಹಮದ್ ಬಿನ್ ಸಲ್ಮಾನ್ ಅದಕ್ಕೂ ಮುಂಚೆ ಫೆಬ್ರವರಿ 17ರಂದೇ ಪಾಕಿಸ್ತಾನಕ್ಕೂ ತನ್ನ ನಿಯೋಗದೊಂದಿಗೆ ಅಧಿಕೃತ ಭೇಟಿ ನೀಡಿದ್ದರು. ಪಾಕಿಸ್ತಾನದ ಬಂದರು ನಗರಿ ಗ್ವಾಡಾರ್‍ನಲ್ಲಿ ಅತ್ಯಾಧುನಿಕ ತೈಲ ಸಂಸ್ಕರಣ ಸ್ಥಾವರವನ್ನು ಸ್ಥಾಪಿಸಲು ಇದೇ ಅರಾಮ್ಕೊ ಮೂಲಕ ಸುಮಾರು 70,000 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಒಪ್ಪಂದಕ್ಕೆ ಸಹಿ ಹಾಕಿದರು. ಇನ್ನಿತರೆ ಯೋಜನೆಗಳಲ್ಲಿ ಮತ್ತೆ 70,000 ಕೋಟಿಗಳನ್ನು ತೊಡಗಿಸುವ ಒಪ್ಪಂದವನ್ನೂ ಮಾಡಿಕೊಂಡರು. “ಪಾಕಿಸ್ತಾನ ನಮ್ಮ ಸೋದರ ದೇಶ, ಪಾಕಿಸ್ತಾನದೊಂದಿಗೆ ನಮ್ಮ ಪಾಲುದಾರಿಕೆ ಅಚಲ. ನಮ್ಮ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ” ಎಂಬ ಭರವಸೆಯನ್ನೂ ನೀಡಿದರು. “ಭಯೋತ್ಪಾದನೆಯನ್ನು ಮಟ್ಟಹಾಕಲು ಪಾಕಿಸ್ತಾನ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ” ಎಂದು ಮುಕ್ತಕಂಠದಿಂದ ಶ್ಲಾಘಿಸಿದರು. ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ಸಂಪ್ರೀತಗೊಂಡು ಯುವರಾಜ ಸಲ್ಮಾನ್‍ಗೆ ನೆನಪಿನ ಕಾಣಿಕೆಯಾಗಿ ಬಂಗಾರದ ಹಿಡಿಕೆಯ ಪಿಸ್ತೂಲನ್ನೂ ಸಮರ್ಪಿಸಿದರು.

ಸೌದಿ ಯುವರಾಜ ಅಲ್ಲಿಂದ ನೇರವಾಗಿ ದೆಹಲಿಗೆ ಹಾರುವ ಕಾರ್ಯಕ್ರಮ ಯೋಜಿತವಾಗಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ಯುವರಾಜ ಇಸ್ಲಾಮಾಬಾದ್‍ನಿಂದ ನೇರವಾಗಿ ಬಂದಿಳಿಯುವುದು ಸುತರಾಂ ಇಷ್ಟವಿರಲಿಲ್ಲ. ಅರೆ ಹೀಗೇಕೆ? ಪ್ರಧಾನಿ ಮೋದಿಯೇ ತನ್ನ ಮಿತ್ರ ನವಾಜ್ ಶರೀಫರ ಬರ್ತ್‍ಡೇ ಪಾರ್ಟಿಗೆ ಹೋಗಿ ಬಂದರಲ್ಲಾ? ಅದರಲ್ಲಿ ತಪ್ಪೇನಿದೆ ?

ರಾಜಕೀಯ ಮಸಲತ್ತುಗಳು ಎಲ್ಲೆಲ್ಲಿ ಅಡಗಿರುತ್ತವೆ ನೋಡಿ. ಫೆಬ್ರವರಿ 14ರಂದು, ಅಂದರೆ ಅಂದಿಗೆ ಕೇವಲ ನಾಲ್ಕು ದಿನಗಳ ಮುಂಚೆಯಷ್ಟೇ ಪುಲ್ವಾಮ ದಾಳಿ ನಡೆದಿತ್ತು. ದೇಶಾದ್ಯಂತ ಲೋಕಸಭಾ ಚುನಾವಣೆಯ ಬಿಸಿ ಬೇರೆ. ಮೋದಿ ಸರ್ಕಾರದ ಚುನಾವಣಾ ಪ್ರಚಾರಕ್ಕೆ ಪುಲ್ವಾಮಾ ವಿಷಯ ಬಿಟ್ಟರೆ ಓಟುಗಳಿಸುವ ಯಾವೊಂದು ವಿಷಯವೂ ಇರಲಿಲ್ಲ. ಹೀಗಾಗಿ ಯುವರಾಜ ಸಲ್ಮಾನ್ ಮತ್ತೆ ರಿಯಾದ್‍ಗೆ ವಾಪಸಾಗಿ, ಮತ್ತೊಮ್ಮೆ ಅಲ್ಲಿಂದ ದೆಹಲಿಗೆ ಹಾರಬೇಕಾಗಿ ಬಂತು.

ತನಗಾದ ಅನಾನುಕೂಲಗಳಿಂದಾಗಿ ಸೌದಿ ರಾಜ ಬೇಸರ ಮಾಡಿಕೊಂಡುಬಿಟ್ಟರೆ!?! ಅದಕ್ಕಾಗಿಯೇ ಸ್ವತಃ ಮೋದಿ ಮಹಾಶಯ ತನಗಿಂತ ಅರ್ಧ ವಯಸ್ಸಿನ (33 ವರ್ಷ) ಯುವರಾಜನನ್ನು ಸ್ವಾಗತಿಸಲು ತಾನೇ ಖುದ್ದಾಗಿ ಏರ್‍ಪೋರ್ಟ್‍ಗೆ ಹೋಗಿದ್ದು. ತನ್ನ ಮಿತ್ರ ಅಂಬಾನಿಗೆ ದೊಡ್ಡ ಗಂಟೂ ಸಿಕ್ತು. ತನಗೆ ಬೇಕಾದ ಓಟೂ ಬಿತ್ತು. ಇದಪ್ಪಾ ವರಸೆ !

ಸೌದಿ ಮತ್ತು ಪಾಕಿಸ್ತಾನದ ಮೈತ್ರಿಯನ್ನು ಅಷ್ಟು ಲಘುವಾಗಿ ಪರಿಗಣಿಸಲಾಗದು. ಈಗಾಗಲೇ ಚೀನಾದ ಬೆಂಬಲ ಪಾಕಿಸ್ತಾನಕ್ಕಿದೆ. ಸೌದಿ ಅರೆಬಿಯಾ ಕೂಡ ಪ್ರಬಲ ಮಿಲಿಟರಿ ಶಕ್ತಿಯನ್ನು ಹೊಂದಿರುವ ದೇಶ. ಅದರ ರಕ್ಷಣಾ ವೆಚ್ಚ ಅಮೆರಿಕ ಹಾಗೂ ಚೀನಾಗಳ ನಂತರದಲ್ಲಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಈ ದೇಶದ ರಕ್ಷಣಾ ವೆಚ್ಚ ಭಾರತ ದೇಶಕ್ಕಿಂತಲೂ ಅಧಿಕ.
ದಿನವಿಡೀ ‘ಪಾಕಿಸ್ತಾನ’ ‘ಪುಲ್ವಾಮ’ ‘ಪ್ರತೀಕಾರ’ ಅಂತ ಬಡಬಡಿಸುತ್ತಿದ್ದ ಮಾಧ್ಯಮಗಳು ಪಾಕಿಸ್ತಾನವನ್ನು ಹೊಗಳಿ, ಧಾರಾಳ ಬಂಡವಾಳ ಹರಿಸಿದ ಸೌದಿ ಯುವರಾಜನನ್ನು ಕನಿಷ್ಟ ಪ್ರಶ್ನೆಯನ್ನೂ ಮಾಡಲಿಲ್ಲ. ಹೋಗಲಿ, ಅಂತರರಾಷ್ಟ್ರೀಯ ಸಮುದಾಯದೆದುರು ಪಾಕಿಸ್ತಾನವನ್ನು ಏಕಾಂಗಿಯಾಗಿಸಿದ್ದೇನೆಂದು ಕೊಚ್ಚಿಕೊಳ್ಳುತ್ತಿರುವ ಮೋದಿಯಾಗಲಿ, ಅವರ ಮಂತ್ರಿಗಳಾಗಲಿ, ಸರ್ಕಾರದ ಅಧಿಕೃತ ವಕ್ತಾರರಾಗಲಿ ಸೌದಿಯ ಇಂತಹ ನಡೆಯ ಬಗ್ಗೆ ತುಟಿಪಿಟಕ್ ಎಂದಿಲ್ಲ. ಬಂಡವಾಳದ ಮಹಿಮೆ ಅಂದ್ರೆ ಇದೇ ಅಲ್ವಾ ಸ್ವಾಮಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...