ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ರಾಜ್ಯ ಕಾಂಗ್ರೆಸ್ ಯಡವಟ್ಟೊಂದನ್ನು ಮಾಡಿಕೊಂಡಿದ್ದು, ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ನಲ್ಲಿ ಗಾಂಧಿ ಕೊಲೆ ಆರೋಪಿ ವಿ.ಡಿ.ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್ ಅಳವಡಿಸಿ ವಿವಾದಕ್ಕೆ ಸಿಲುಕಿದೆ.
ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದಲ್ಲಿ ವಿ.ಡಿ. ಸಾವರ್ಕರ್ ಇರುವ ಫ್ಲೆಕ್ಸ್ ಒಂದನ್ನು ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಫೋಟೋ ಸಹಿತ ಹಾಕಲಾಗಿದೆ. ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ವಿರೋಧಿಯಾದ ಸಾವರ್ಕರ್ ಫೋಟೋ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಫ್ಲೆಕ್ಸ್ ಕಿತ್ತೆಸೆದ ಕಾರ್ಯಕರ್ತರು
ಭಾರತ್ ಜೋಡೋ ಯಾತ್ರೆಯಲ್ಲಿ ವಿ.ಡಿ. ಸಾವರ್ಕರ್ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಜನ ಫೋಟೋ ಕ್ಲಿಕ್ಕಿಸಿಕೊಳ್ಳಲು ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಅನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ.
ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್‌ನಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಫ್ಲೆಕ್ಸ್ ಪ್ರಕಟಿಸಿರುವ ಎನ್.ಎ. ಹ್ಯಾರಿಸ್ ಅವರ ಫೋಟೋ ಸಹಿತ ಹೆಸರೂ ಇದೆ.
ಫ್ಲೆಕ್ಸ್ ಹಾಕಲು ಗುತ್ತಿಗೆ ಪಡೆದವರು ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಯಾತ್ರೆಯುದ್ದಕ್ಕೂ ಹಾಕಿದ್ದಾರೆ. ಅದೇ ರೀತಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಅಂತರ್ಜಾಲದಲ್ಲಿ ಹುಡುಕಿ ಫ್ಲೆಕ್ಸ್ ಮುದ್ರಿಸಿದ್ದಾರೆ. ಹಾಗಾಗಿ ಈ ಯಡವಟ್ಟು ಸಂಭವಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಕೆಲವರು ಇದು ಕಾಂಗ್ರೆಸ್ ಪಕ್ಷದ ವಿರೋಧಿಗಳ ಕೈವಾಡವೂ ಇರಬಹುದು ಎಂದು ಶಂಕಿಸಿದ್ದಾರೆ.
ಕೇರಳದಲ್ಲೂ ಕಾಣಿಸಿಕೊಂಡಿತ್ತು ಸಾವರ್ಕರ್ ಚಿತ್ರ
ಕೇರಳದ ನೆಡುಂಬಸ್ಸೆರಿ ಬಳಿಯ ಅಥಣಿಯಲ್ಲಿ ಯಾತ್ರೆಯ ಪ್ರಚಾರಕ್ಕಾಗಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಗಾಂಧಿ ಕೊಲೆ ಆರೋಪಿಯ ಚಿತ್ರ ಸೆಪ್ಟೆಂಬರ್ 21 ರಂದು ಕಾಣಿಸಿಕೊಂಡಿತ್ತು. ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಇದರ ನಂತರ ಎಚ್ಚೆತ್ತ ಪಕ್ಷದ ಕಾರ್ಯಕರ್ತರು ಆ ಚಿತ್ರಕ್ಕೆ ಮಹಾತ್ಮ ಗಾಂಧಿಯ ಚಿತ್ರವನ್ನು ಅಂಟಿಸಿ ಅದನ್ನು ಮರೆಮಾಚಿದ್ದರು.
ಈ ನಡುವೆ ಪಕ್ಷವೂ ಸ್ಥಳೀಯ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯನ್ನು ಘಟನೆಗೆ ಹೊಣೆಯನ್ನಾಗಿಸಿ ಅಮಾನತು ಮಾಡಿತ್ತು. “ಪಕ್ಷದ ಸ್ಥಳೀಯ ಕಾರ್ಯಕರ್ತರೊಬ್ಬರು ಈ ಫ್ಲೆಕ್ಸ್ ಕಟ್ಟಿದ್ದಾರೆ. ಅವರು ಸ್ವಾತಂತ್ಯ್ರ ಹೋರಾಟಗಾರರ ಚಿತ್ರಗಳನ್ನು ಮುದ್ರಿಸಿ ಕೊಡುವಂತೆ ಫ್ಲೆಕ್ಸ್ ಮುದ್ರಣ ಮಾರಾಟಗಾರರನ್ನು ಕೇಳಿದ್ದರು. ಅದನ್ನು ಮುದ್ರಿಸುವಾಗ ಈ ಚಿತ್ರವೂ ಪ್ರಮಾದದಿಂದಾಗಿ ಮುದ್ರಣಗೊಂಡಿದೆ. ಸಮಸ್ಯೆ ಗಮನಕ್ಕೆ ಬಂದ ಕೂಡಲೇ ತೆಗೆಸಲು ಸೂಚನೆ ನೀಡಲಾಗಿದೆ” ಎಂದು ಕಾಂಗ್ರೆಸ್ ಮುಖಂಡರು ಸಮಜಾಯಿಷಿ ನೀಡಿದ್ದರು.
ಇದನ್ನೂ ಓದಿ: ಭಾರತ್ ಜೋಡೋ ಬ್ಯಾನರ್‌ನಲ್ಲಿ ಮಹಾತ್ಮ ಗಾಂಧಿ ಕೊಲೆ ಆರೋಪಿ ಸಾವರ್ಕರ್ ಚಿತ್ರ; ಸ್ಥಳೀಯ ನಾಯಕನ ಅಮಾನತು ಮಾಡಿದ ಕಾಂಗ್ರೆಸ್