ಬಿಜೆಪಿಯ ಆಕ್ಷೇಪಾರ್ಹ ಜಾಹೀರಾತು ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಕಾಂಗ್ರೆಸ್ ಪಕ್ಷವು, “ಒಂದೇ ವಾರದಲ್ಲಿ ಎರಡೆರೆಡು ಭಾರಿ ಪತ್ರಿಕೆಗಳಲ್ಲಿ ಮುಖಪುಟದ ಜಾಹೀರಾತು ನೀಡುತ್ತಿರುವ ಬಿಜೆಪಿಯ ಹತಾಶೆ ಹಿಮಾಲಯದೆತ್ತರಕ್ಕೆ ಏರಿದೆ, ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ” ಎಂದು ವ್ಯಂಗ್ಯವಾಡಿದೆ.
ತಮ್ಮ ಹತಾಶೆ, ಸೋಲು, ನೋವುಗಳನ್ನು ಜಾಹೀರಾತು ನೀಡಿ ವ್ಯಕ್ತಪಡಿಸುವ ಏಕೈಕ ರಾಜಕೀಯ ಪಕ್ಷ ಬಿಜೆಪಿಯಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ತಮ್ಮ ಹತಾಶೆ, ಸೋಲು, ನೋವುಗಳನ್ನು ಜಾಹಿರಾತು ನೀಡಿ ವ್ಯಕ್ತಪಡಿಸುವ ಏಕೈಕ ರಾಜಕೀಯ ಪಕ್ಷ @BJP4Karnataka!
ಒಂದೇ ವಾರದಲ್ಲಿ ಎರಡೆರೆಡು ಭಾರಿ ಪತ್ರಿಕೆಗಳಲ್ಲಿ ಮುಖಪುಟದ ಜಾಹಿರಾತು ನೀಡುತ್ತಿರುವ ಬಿಜೆಪಿಯ ಹತಾಶೆ ಹಿಮಾಲಯದೆತ್ತರಕ್ಕೆ ಏರಿದೆ,
ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ಬಾಕಿ!#BharatJodoYatra— Karnataka Congress (@INCKarnataka) October 6, 2022
‘ಮುಂಬೈ ಮೇಲೆ ಉಗ್ರರು ಎರಗಿದ್ದಾಗ ಮಜಾ ಮಾಡುತ್ತಿದ್ದ ರಾಹುಲ್ ಗಾಂಧಿ’ ಎಂಬ ತಲೆ ಬರಹ ಸೇರಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಟಿಪ್ಪು ಜಯಂತಿ ಮತ್ತು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕುರಿತು ನಿಂದಿಸಿ ಸುದ್ದಿಯಂತೆ ಕಾಣುವ ಜಾಹೀರಾತನ್ನು ಬಿಜೆಪಿ ಪಕ್ಷವು ಹೊಸದಿಗಂತ, ವಿಶ್ವವಾಣಿ, ಕನ್ನಡ ಪ್ರಭ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ನೀಡಿದೆ.
ಇದು ಬಿಜೆಪಿ ಪಕ್ಷದ ಕೀಳು ಮಟ್ಟದ ರಾಜಕೀಯ, ಭಾರತ ಐಕ್ಯತಾ ಯಾತ್ರೆಯ ಯಶಸ್ಸು ಸಹಿಸಲಾಗದೆ ಹತಾಶೆಗೆ ಬಿದ್ದು ಇಂತಹ ಜಾಹೀರಾತು ನೀಡಿದೆ ಎಂದು ಹಲವರು ಕಿಡಿಕಾರಿದ್ದಾರೆ. ಅಲ್ಲದೆ ಇಂತಹ ಪತ್ರಿಕಾ ನೀತಿಗೆ ಹೊರತಾದ ಜಾಹೀರಾತು ಪ್ರಕಟಿಸಿದ ಆ ನಾಲ್ಕು ಪತ್ರಿಕೆಗಳ ವಿರುದ್ಧ ಹರಿಹಾಯ್ದಿದ್ದಾರೆ.
ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, “ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿ ಸರ್ಕಾರ ವಿಚಲಿತಗೊಂಡಿದೆ. ಸೋನಿಯಾ ಗಾಂಧಿ ಭಾಗವಹಿಸಿದ ನಂತರ ತುಂಬಾ ಹೆದರಿದ್ದಾರೆ. ಹಾಗಾಗಿ ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ಕೊಡುವ ಮಟ್ಟಕ್ಕೆ ಇಳಿದಿದ್ದಾರೆ” ಎಂದಿದ್ದಾರೆ.
ಜಂಟಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾತ್ರೆ ಹತ್ತಿಕ್ಕಲು ರಾಹುಲ್ ಗಾಂಧಿ ಅವರ ಸಿಬ್ಬಂದಿ, ಪತ್ರಕರ್ತ ಮಿತ್ರರ ಮೇಲೆ ಕೆಲವರು ಹಲ್ಲೆ ಮಾಡಿದ್ದಾರೆ. ಕೆಲವೊಮ್ಮೆ ಪೋಸ್ಟರ್ ಕಿತ್ತುಹಾಕಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಾರೆ. ಅವರ ಈ ಕುತಂತ್ರದಿಂದ ರಾಹುಲ್ ಗಾಂಧಿ ಅವರನ್ನಾಗಲಿ, ಭಾರತ ಐಕ್ಯತಾ ಯಾತ್ರೆಯನ್ನಾಗಲಿ ತಡೆಯಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ; ಭಾರತ ಐಕ್ಯತಾ ಯಾತ್ರೆ ವಿರುದ್ಧ ಆಕ್ಷೇಪಾರ್ಹ ಸುದ್ದಿ ರೂಪದ ಜಾಹೀರಾತು ನೀಡಿದ ಬಿಜೆಪಿ: ತೀವ್ರ ಖಂಡನೆ