Homeಕರ್ನಾಟಕಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

ಸೇವ್ ಉತ್ತರ ಕನ್ನಡ: ನೋ ಎನ್ನುತ್ತಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಸರ್ಕಾರ

- Advertisement -
- Advertisement -

ಮಳೆಗೆ ಉತ್ತರಕನ್ನಡ ಒದ್ದೆಮುದ್ದೆಯಾಗಿ ಒದ್ದಾಡುತ್ತಿದೆ! ಬದುಕು ಅಕ್ಷರಶಃ ಮುಳುಗಿದೆ. ಜಿಲ್ಲೆಯ ಒಟ್ಟು ಹನ್ನೆರಡೂ ತಾಲ್ಲೂಕಿನಲ್ಲಿ ಎಲ್ಲಿ ನಿಂತು ನೋಡಿದರೂ ನೀರೇ ನೀರು!! ಆಗಸ್ಟ್ 1ರಿಂದ 7ರ ತನಕ ಬರೋಬ್ಬರಿ 571 ಮಿಮೀ ಮಳೆ ದೋ ಎಂದು ಒಂದೇಸಮನೆ ಜಡಿದು ಸಾವಿರಾರು ಕುಟುಂಬಗಳನ್ನು ಬೀದಿ ಪಾಲಾಗಿಸಿದೆ. ಗದ್ದೆ-ತೋಟ, ಮನೆ, ರಸ್ತೆ, ಶಾಲೆ, ವಿದ್ಯುತ್ ಸಂಪರ್ಕ…… ಎಲ್ಲವೂ ನೆರೆಯಲ್ಲಿ ಕದಡಿಹೋಗಿದೆ. ಜಿಲ್ಲೆಯ ಜೀವವಾಹಿನಿಗಳು ಎನಿಸಿದ್ದ ಕಾಳಿ, ಗಂಗಾವಳಿ, ಬೇಡ್ತಿ, ಶರಾವತಿ, ಅಘನಾಶಿನಿ, ವರಧಾಮ ಶಾಲ್ಮಲಾ, ಪಾಂಡ್ರಿ, ಚೌಥನಿ, ವೆಂಕಟಾಪುರ ನದಿಗಳು ಉಕ್ಕುಕ್ಕಿ ಹರಿದು ಅಮಾಯಕರ ಜೀವ-ಜೀವನ ಆಪೋಷನ ಪಡೆದಿದೆ!!!

ಸದಾ ಮಳೆಯಿಲ್ಲದೆ ಬರದಲ್ಲಿ ಬಸವಳಿಯುತ್ತಿದ್ದ ಮುಂಡಗೋಡ ಮತ್ತು ಹಳಿಯಾಳ ತಾಲ್ಲೂಕುಗಳೂ ಈ ಯಮ ಮಳೆಗೆ ಕೊಚ್ಚಿಹೋಗಿವೆ. ಸರ್ಕಾರಿ ಲೆಕ್ಕಾಚಾರ ಏನೇ ಇರಲಿ, ನೆರೆಹಾವಳಿಯಿಂದ ಹತ್ತಿರತ್ತಿರ ಎರಡು ನೂರು ಗ್ರಾಮಗಳು ಮುಳುಗಡೆ ಆಗಿವೆ. 24 ಸೇತುವೆಗಳು ಪ್ರವಾಹದಲ್ಲಿ ಕಣ್ಮರೆಯಾಗಿದ್ದವು. ಅಷ್ಟೇ ಪ್ರಮಾಣದ ರಸ್ತೆಗಳು ಚಿಂದಿ ಎದ್ದುಹೋಗಿವೆ. 2,000ದಷ್ಟು ಮನೆಗಳು ಜಲಯಜ್ಞಕ್ಕೆ ಹವಿಸ್ಸಾಗಿವೆ. ಕಣ್ಮರೆಯಾದ ಜನ-ಜಾನುವಾರುಗಳ ಲೆಕ್ಕ ಇನ್ನೂ ಸರಿಯಾಗಿ ಸಿಗುತ್ತಿಲ್ಲ. ಸಾವಿರಾರು ಕುಟುಂಬಗಳ ಕಮ್ಮಿಯೆಂದರೂ 10,000 ಮಂದಿ ತಾತ್ಕಾಲಿಕ ಕ್ಷೇಮ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹತ್ತಿರತ್ತಿರ ನೂರು ಪರಿಹಾರ ಕೇಂದ್ರಗಳನ್ನು ಜಿಲ್ಲಾಡಳಿತ ತೆರೆದಿದೆ.

ರಾಜ್ಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿದು ಅಥವಾ ರಸ್ತೆಗಳೇ ಬಿರುಕುಬಿಟ್ಟು, ಸೇತುವೆಗಳು ಜಖಮ್ ಆಗಿ ನೂರಾರು ಹಳ್ಳಿಗಳು ನಡುಗಡ್ಡೆಗಳಂತಾಗಿವೆ. ದೇವಿಮನೆ, ಅರಬೈಲ್, ಕೋಗಾರ, ಬಡಳ, ವಡ್ಡಿ, ಶೇವಕಾರ ಘಟ್ಟ ಪ್ರದೇಶದಲ್ಲಿ ಸಂಚಾರ ಅಪಾಯಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಸಾಲಾಗಿ ಮುರಿದು ಬಿದ್ದಿವೆ; ಮೊಬೈಲ್ ಟವರ್‍ಗಳು ಸ್ಥಗಿತಗೊಂಡಿವೆ. ಹಳ್ಳಿ-ಹಳ್ಳಿಗಳು ವಿದ್ಯುತ್ ದೀಪ ಬೆಳಗದೆ ಗಾಡಾಂಧಕಾರದಲ್ಲಿ ಮುಳುಗಿವೆ. ಇದೆಲ್ಲ ಸರಿ ಮಾಡಲು ಜಿಲ್ಲಾಡಳಿತಕ್ಕೆ ತಿಂಗಳುಗಳೇ ಬೇಕು! ಜನರ ಪರದಾಟ ಹೇಳತೀರದು.

ಈ ವರದಿ ಸಿದ್ಧವಾಗುತ್ತಿರುವ ಹೊತ್ತಿಗೆ ಮಳೆಯ ಆರ್ಭಟ ನಿಂತಿದೆ. ಎಲ್ಲಾ ನದಿ-ಹೊಳೆಗಳ ನೆರೆ ಇಳಿದಿದೆ. ಜಿಲ್ಲೆಯ ಅಷ್ಟೂ ನದಿ ದಡದ ಹಳ್ಳಗಳಲ್ಲೀಗ ಕಾಣುತ್ತಿರುವುದು ನರಕಸದೃಶ ಪರಿಸ್ಥಿತಿ! ಅಡಿಗಟ್ಟಲೆ ಕೆಸರು, ಉರುಳಿದ ಮನೆ, ಅಂಗಡಿ ಮುಂಗಟ್ಟುಗಳು; ಕೊಚ್ಚಿಹೋದ ಅಡಿಕೆ ತೋಟ, ಭತ್ತದ ಗದ್ದೆ, ಮೂಲಭೂತ ಸೌಕರ್ಯದ ಅವಶೇಷಗಳು. ನಿಧಾನವಾಗಿ ಕ್ಷೇಮ ಕೇಂದ್ರಗಳಿಂದ ಸಂತ್ರಸ್ತರು ಮನೆಗಳತ್ತ ಹೋಗುತ್ತಿದ್ದಾರೆ. ಸಂಗ್ರಹಿಸಿಟ್ಟುಕೊಂಡಿದ್ದ ಅಕ್ಕಿ, ಬೇಳೆ, ಬಟ್ಟೆ, ಮಕ್ಕಳ ಪಾಟಿ ಪುಸ್ತಕ, ನೋಟ್‍ಬುಕ್, ರೇಷನ್ ಕಾರ್ಡು, ಆಧಾರ್ ಕಾರ್ಡು, ಗ್ಯಾಸ್ ಒಲೆ……. ಹೀಗೆ ಎಲ್ಲವೂ ನೀರುಪಾಲಾಗಿವೆ. ಮನೆ ಬಾಗಿಲು ತೆರೆದರೆ ನೆರೆಯಲ್ಲಿ ತೇಲಿಬಂದ ವಿಷಕಾರಿ ಹಾವು-ಸರೀಸೃಪಗಳು ಬುಸುಗುಡುತ್ತಿವೆ. ಸತ್ತ ಪ್ರಾಣಿಗಳ ದುರ್ನಾತ! ಬದುಕು ಮುಂದ್ಹೇಗೆಂಬ ಆತಂಕದಲ್ಲಿ ಜನರು ದಿಕ್ಕೆಟ್ಟು ನಿಂತಿದ್ದಾರೆ.

ಈ ಭೀಭತ್ಸ ನೆರೆಯಿಂದ ಸಂತ್ರಸ್ತರಾದವರಿಗೆ ಜಿಲ್ಲಾಧಿಕಾರಿ ಹರೀಶ್‍ಕುಮಾರ್ ಕೆಪ್ಟನಿಕೆಯ ಜಿಲ್ಲಾಡಳಿತ ಬದ್ಧತೆಯಿಂದ, ಕರ್ತವ್ಯನಿಷ್ಠೆಯಿಂದ ನೆರವಾಗಿದೆ ಎಂಬುದಕ್ಕೆ ಎರಡು ಮಾತೇ ಇಲ್ಲ. ಜಿಲ್ಲಾಡಳಿತ ಸುರಿವ ಅನಾಹುತಕಾರಿ ಮಳೆಯಲ್ಲಿ ಹಗಲಿರುಳೂ ನೊಂದವರಿಗೆ ಸ್ಪಂದಿಸಿದೆ. ಸರ್ಕಾರೇತರ ಸಂಘ-ಸಂಸ್ಥೆಗಳೂ ನೆಲೆ ಕಳಕೊಂಡವರಿಗೆ ಕಳಕಳಿಯಿಂದ ಸಹಾಯ ಮಾಡಿದ್ದಾರೆ. ಆದರೆ ಯಡ್ಡಿ ಮಹಾತ್ಮನ ‘ಏಕವ್ಯಕ್ತಿ’ ಸರ್ಕಾರದಿಂದ ಉತ್ತರ ಕನ್ನಡದ ನೆರೆ ಪೀಡಿತರಿಗೆ ತಕ್ಷಣದ ಪರಿಹಾರ-ಸಾಂತ್ವನ ಯಾವುದೂ ಸಿಗಲಿಲ್ಲ. ನೆರೆ ನೋಡಲು ಬಾಗಲಕೋಟೆ, ಬೆಳಗಾವಿಗೆ ಹೋಗಿದ್ದ ಯಡ್ಡಿಯ ಕಾಪ್ಟರ್ ಉತ್ತರ ಕನ್ನಡದತ್ತ ಹೊರಳಲೇ ಇಲ್ಲ.

ಆಳುವ ಸರ್ಕಾರಗಳಿಗೆ ನಮ್ಮತ್ತ ಯಾಕಿಂಥ ತಾತ್ಸಾರ ಎಂದು ಉತ್ತರ ಕನ್ನಡ ಜಿಲ್ಲೆಯ ಜನ ಕೇಳಿಕೊಳ್ಳಲು ಶುರು ಮಾಡಿದ್ದಾರೆ. ಹಾಗೆ ನೋಡಿದರೆ, ಜಿಲ್ಲೆ ತನ್ನ ಸಿರಿಸಂಪತ್ತನ್ನೆಲ್ಲಾ ರಾಜ್ಯ-ರಾಷ್ಟ್ರದ ಕಲ್ಯಾಣಕ್ಕಾಗಿ ಕೊಡುತ್ತಲೇ ಬಂದಿದೆ. ಇಲ್ಲಾಗಿರುವ ಜಲವಿದ್ಯುತ್ ಯೋಜನೆಯಿರಲಿ, ಕೈಗಾ ಅಣು ಸ್ಥಾವರವಿರಲಿ, ಕುದಂಬ ನೌಕಾನೆಲೆಯಾಗಲಿ ಸ್ಥಳೀಯ ಉದ್ಧಾರಕ್ಕೆ ಬಂದಿದ್ದಲ್ಲ. ಜಿಲ್ಲೆ ಮಾಡಿರುವ ಪ್ರತಿ ತ್ಯಾಗದ ಹಿಂದೆ ರಾಜ್ಯ-ರಾಷ್ಟ್ರದ ಹಿತವೇ ಅಡಗಿದೆ. ಇಲ್ಲಿನ ಮರ-ಮಟ್ಟು, ವನಸ್ವತಿ, ನೀರು, ಮೀನು, ವಿದ್ಯುತ್, ಉಪ್ಪು, ಪ್ರವಾಸಿತಾಣಗಳ ಮೂಲಕ ದೊಡ್ಡ ಮಟ್ಟದ ಆದಾಯ ಗಳಿಸುತ್ತಿರುವ ರಾಜ್ಯ ಸರ್ಕಾರ ಇಷ್ಟೇಕೆ ಕಡೆಗಣಿಸುತ್ತಿದೆ ಉತ್ತರ ಕನ್ನಡವನ್ನು? ಪ್ರವಾಹದಿಂದ ಬದುಕು ಕಳೆದುಕೊಂಡ ಜನರ ನಡುವೆ ಇಂತಹದ್ದೊಂದು ಆಕ್ರೋಶದ ಪ್ರಶ್ನೆ ಹುಲುಸಾಗೇ ಬೆಳೆಯುತ್ತಿದೆ.

ಹೀಗಾಗಿಯೇ ಈಗ ಸಾಮಾಜಿಕ ಜಾಲತಾಣಗಳಲ್ಲಿ “ಸೇವ್ ಉತ್ತರ ಕನ್ನಡ” ಎಂಬ ಕೂಗೆದ್ದಿದೆ. ಜಲಪ್ರಳಯದ ಸಂತ್ರಸ್ತರ ವಾಟ್ಸಪ್ ಗ್ರೂಪ್ ಹುಟ್ಟುಹಾಕಲಾಗಿದೆ. ಜಲಕಂಟಕದ ಚಿತ್ರಣಗಳು ಎಲ್ಲೆಡೆ ಹರಿದಾಡುತ್ತಿವೆ. ಚಲನಚಿತ್ರರಂಗ, ಸಾಹಿತಿಗಳು, ಉದ್ಯೋಗಿಗಳು, ಉದ್ಯಮಿಗಳು ಯಾನದಲ್ಲಿ ಸೇರಿಕೊಂಡಿದ್ದಾರೆ. ನಟ ಉಪೇಂದ್ರ ಐದು ಲಕ್ಷ ಪರಿಹಾರ ಧನ ಕೊಟ್ಟು ತಕ್ಷಣಕ್ಕೆ ಸ್ಪಂದಿಸಿದ್ದಾರೆ. ಯಾಕೆ ಆಳುವವರು ಉತ್ತರ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಾರೆ? ಕೇರಳ-ಕೊಡಗಲ್ಲಿ ಮಳೆ ಪ್ರಳಯ ಆದಾಗ ಧಾವಿಸಿದವರಿಗೇಕೆ ಜಿಲ್ಲೆಯ ಗೋಳು ಕಾಣಿಸುತ್ತಿಲ್ಲ? ಶರಾವತಿ ನೀರು, ಅಘನಾಶಿನಿ ನೀರು ಬೇಕೆನ್ನುವವರು, ಕಾಳಿ, ಶರಾವತಿ ನದಿ ನೀರಿಂದಾದ ವಿದ್ಯುತ್ ಪ್ರಯೋಜನ ಪಡೆಯುತ್ತಿರುವವರಿಗೆಲ್ಲ ಋಣ ತೀರಿಸಬೇಕೆಂಬ ಸಣ್ಣ ಮಾನವೀಯತೆಯೂ ಇಲ್ಲದಾಯಿತಾ? ಈ ಪ್ರಶ್ನೆ ಸೇವ್ ಉತ್ತರ ಕನ್ನಡ ಅಭಿಯಾನವನ್ನು ಕಾಡುತ್ತಿದೆ.

ಆಳುವವರು ಉತ್ತರ ಕನ್ನಡದ ನೆರೆಪೀಡಿತರಿಗೆ ನ್ಯಾಯ ಕೊಡಿಸಿ ಅವರು ಸ್ವಾವಲಂಬನೆಯಿಂದ ಬದುಕಲು ಅವಕಾಶ ಮಾಡಿಕೊಡುತ್ತದೆಂಬ ಯಾವ ಭರವಸೆಯೂ ಇಲ್ಲ. ಈ ಸಂಶಯಕ್ಕೆ ಹಿಂದೆಲ್ಲಾ ನೆರೆಯಿಂದ ನೊಂದವರಿಗೆ ಸರ್ಕಾರಿ ಮಂದಿಯಿಂದಾದ ಅನ್ಯಾಯವೇ ಕಾರಣ. ಈಗ ನೊಂದವರಿಗಾಗಿ ಪರಿಹಾರ ಸಾಮಗ್ರಿ ಎಲ್ಲೆಲ್ಲಿಂದಲೋ ಹರಿದುಬರುತ್ತಿದೆ. ಅವೆಲ್ಲ ಸರಿಯಾಗಿ ಹಂಚಿಕೆಯಾಗುತ್ತವೆಂದು ಹೇಳಲಾಗದು. ಇದು ಹಿಂದಿನ ಅನುಭವ. ಆಧಾರ್, ರೇಷನ್ ಕಾರ್ಡ್‍ನಂಥ ದಾಖಲೆಗಳನ್ನೇ ನೆರೆಯಲ್ಲಿ ಕಳಕೊಂಡವರನ್ನು ಕಳ್ಳರಂತೆ ಅಧಿಕಾರಿಗಳು ನೋಡುವ ಸಾಧ್ಯತೆಯೇ ಹೆಚ್ಚು. ಹಿಂದೆಲ್ಲ ಪ್ರವಾಹ ಪೀಡಿತರಿಗೆ ಪರಿಹಾರದ ಚೆಕ್ ಕೊಡುವಾಗ ಪರ್ಸೆಂಟೇಜ್ ಕೇಳಿದ್ದೂ ಇದೆ. ಸಂತ್ರಸ್ತರೊಂದಿಗೆ ಗೌರವಯುತವಾಗಿ, ಮಾನವೀಯವಾಗಿ ನಡೆದುಕೊಳ್ಳುವ ಪಾಠ ಅಧಿಕಾರಿ ವರ್ಗಕ್ಕೆ ಆಡಳಿತಗಾರರು ಕಲಿಸಬೇಕಾಗಿದೆ. ಪ್ರವಾಹಪೀಡಿತರ ಮನೆ ಮುಳುಗಿರಬಹುದು, ಮಾನ ಮುಳುಗಿಲ್ಲ ಎಂಬ ಎಚ್ಚರಿಕೆ ಅಧಿಕಾರಿ ಗಣಕ್ಕೆ ಇರಬೇಕು!!

ಉತ್ತರ ಕನ್ನಡದಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಾಗಿರುವ ಪ್ರವಾಹ ಪ್ರಕೋಪದ ಗಂಡಾಂತರ ಆಪರೇಷನ್ ಕಮಲದ ಅಡ್ಡ ಪರಿಣಾಮ ಎಂದರೂ ತಪ್ಪಾಗಲಿಕ್ಕಿಲ್ಲ. ಎರಡು ತಿಂಗಳ ಹಿಂದೆಯೇ ಅಧಿಕಾರಿಗಳ ಸಭೆ ಸಡೆಸಿ ಪ್ರವಾಹ, ಅತಿವೃಷ್ಟಿ ಸಮಸ್ಯೆ ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಈ ಅವಧಿಯಲ್ಲಿ ಬಿಜೆಪಿಗರು ಸರ್ಕಾರ ಉರುಳಿಸುವ ಚಟಕ್ಕೆ ಬಿದ್ದರೆ, ಸಿಎಂ ಆಗಿದ್ದ ಕುಮ್ಮಿ ಅಧಿಕಾರ ಉಳಿಸಿಕೊಳ್ಳುವ ತೆವಲಿಗೆ ಬಿದ್ದರು. ಹೀಗಾಗಿ ಅಧಿಕಾರಿಗಳು ಲಂಗು-ಲಗಾಮಿಲ್ಲದೆ ಹಾಯಾಗಿ ಉಳಿದುಬಿಟ್ಟರು. ಇಂಥ ಗತಿಗೇಡಿ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪ್ರವಾಹ ಪ್ರಕೋಪ, ಮಳೆ ಅನಾಹುತದ ಬಗ್ಗೆ ತಲೆಕೆಡಿಸಿಕೊಳ್ಳಲು ಸಾಧ್ಯವಾ?
ಹೀಗಾಗಿ ರಾಜ್ಯ ಮುಳುಗಿದೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ ಸಿಎಂ ಪತ್ನಿ ದೂರಿನ ಮೇರೆಗೆ ಪವನ್ ಖೇರಾ ವಿರುದ್ಧ ಮಾನನಷ್ಟ, ಕ್ರಿಮಿನಲ್ ಪಿತೂರಿ ಆರೋಪದಡಿ ಪ್ರಕರಣ ದಾಖಲು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ನೀಡಿದ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಪವನ್ ಖೇರಾ ವಿರುದ್ಧ ಮಾನನಷ್ಟ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ...

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಪಾಕ್ ಮಧ್ಯಸ್ಥಿಕೆ, ಬೆತ್ತಲಾದ ವಿಶ್ವಗುರು : ಕಾಂಗ್ರೆಸ್

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮಕ್ಕೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರ 'ಅತ್ಯಂತ ವೈಯಕ್ತಿಕ ರಾಜತಾಂತ್ರಿಕತೆಗೆ' ಉಂಟಾದ...

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಸಿಎಂ ನಿಂದನೀಯ ಪದ ಬಳಕೆ; ‘ಸಂಪೂರ್ಣ ನಾಚಿಕೆಗೇಡಿನ ಸಂಗತಿ’ ಎಂದ ಪ್ರಿಯಾಂಕಾ ಗಾಂಧಿ 

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು "ಅವಾಚ್ಯ" ಭಾಷೆ ಬಳಸಿರುವುದು "ಸಂಪೂರ್ಣವಾಗಿ ನಾಚಿಕೆಗೇಡಿನ" ಸಂಗತಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ...

ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಅಮೆರಿಕದ ಪತ್ರಕರ್ತೆ ಬಿಡುಗಡೆ

ಇರಾಕಿನ ರಾಜಧಾನಿ ಬಾಗ್ದಾದ್‌ನಲ್ಲಿ ಒಂದು ವಾರದ ಹಿಂದೆ ಅಪಹರಿಸಲ್ಪಟ್ಟಿದ್ದ ಅಮೆರಿಕದ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ. ಮಾರ್ಚ್ 31ರಂದು ಶೆಲ್ಲಿ...

ಅಸ್ಸಾಂನ ನಾಗಾಂವ್‌ನಲ್ಲಿ ದರೋಡೆ ಶಂಕೆಯ ಮೇಲೆ ಗುಂಪು ದಾಳಿ: ಮೂವರು ಮುಸ್ಲಿಂ ಪುರುಷರು ಸಾವು

ದರೋಡೆಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಡೆದ ಗುಂಪು ದಾಳಿಯಲ್ಲಿ ಮೂವರು ಮುಸ್ಲಿಂ ಪುರುಷರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಸೈಫುಲ್ಲಾ, ಅಜೀಬುರ್ ಅಲಿಯಾಸ್ ಖೈರುಲ್ ಮತ್ತು ಇನಾಮುಲ್...

ಏ.10ರಂದು ಇಸ್ಲಾಮಾಬಾದ್‌ನಲ್ಲಿ ಅಮೆರಿಕ-ಇರಾನ್ ಶಾಂತಿ ಮಾತುಕತೆ : 10 ಷರತ್ತುಗಳನ್ನು ಮುಂದಿಟ್ಟ ಇರಾನ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ ಆಯೋಜಿಸಲಾಗಿದೆ. ಅಮೆರಿಕ ಮತ್ತು ಇರಾನ್ ನಿಯೋಗಗಳ ನಡುವಿನ ಈ ಮಹತ್ವದ ಮಾತುಕತೆಯು 2026ರ ಏಪ್ರಿಲ್ 10ರಂದು (ಶುಕ್ರವಾರ) ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ ಎಂದು ಪಾಕಿಸ್ತಾನದ...

ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ; ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಎರಡು ವಾರಗಳ ಕದನ ವಿರಾಮಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲ ಸೂಚಿಸಿದ್ದಾರೆ. ಆದರೆ, ಈ ಕದನ ವಿರಾಮವು ಕೇವಲ ಇರಾನ್‌ಗೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇರಾನ್ ತಕ್ಷಣವೇ ಹಾರ್ಮುಝ್...

ಹಾರ್ಮುಝ್ ಜಲಸಂಧಿಯ ಮೂಲಕ ಎರಡು ವಾರಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ : ಇರಾನ್ ಭರವಸೆ

ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮದ ಹಿನ್ನೆಲೆ, ಹಾರ್ಮುಝ್ ಜಲಸಂಧಿ  ಮೂಲಕ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಅವಕಾಶ ನೀಡುವುದಾಗಿ ಇರಾನ್ ಭರವಸೆ ನೀಡಿದೆ. ವಿಶ್ವದ ಒಟ್ಟು ಪೆಟ್ರೋಲಿಯಂ ರಫ್ತಿನ...

ಇರಾನ್ ಮೇಲಿನ ದಾಳಿ ಸ್ಥಗಿತ : ಎರಡು ವಾರಗಳ ಕದನ ವಿರಾಮ ಘೋಷಿಸಿದ ಟ್ರಂಪ್

ಇರಾನ್ ಮೇಲೆ ನಡೆಸುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಭಾರತೀಯ ಕಾಲಮಾನ ಏ.8) ಹೇಳಿದ್ದಾರೆ. ಪಾಕಿಸ್ತಾನ...

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...