ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸುದೀರ್ಘ ಸಮಯದಿಂದ ಬಾಕಿಯಿದ್ದ ಎಂಟು ಮಸೂದೆಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಂಬಂಧಿಸಿದ ಸಚಿವರನ್ನು ಭೇಟಿಯಾಗುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚನೆ ನೀಡಿದೆ.
ರಾಜ್ಯಪಾಲರ ಕಚೇರಿಯ ಪರವಾಗಿ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಸಲ್ಲಿಸಿದ ಮನವಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಗಮನಿಸಿತು. ರಾಜ್ಯಪಾಲರು ಎಂಟು ಮಸೂದೆಗಳ ಪೈಕಿ ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದು, ಒಂದನ್ನು ಅಂಗೀಕರಿಸಿದ್ದರು.
ಹಾಗಾಗಿ, ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿದ್ದ ಮನವಿಯನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರೊಂದಿಗೆ ಮಸೂದೆಗೆ ಕುರಿತು ಚರ್ಚಿಸಲಿದ್ದಾರೆ ಎಂದು ಪೀಠ ತಿಳಿಸಿದೆ.
ರಾಜ್ಯದಲ್ಲಿ ಸ್ವಲ್ಪ ರಾಜಕೀಯ ಜಾಣತನವು ಮೇಲುಗೈ ಸಾಧಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಇಲ್ಲದಿದ್ದರೆ, ಕಾನೂನನ್ನು ರೂಪಿಸಲು ಮತ್ತು ಸಂವಿಧಾನದ ಅಡಿಯಲ್ಲಿ ಕರ್ತವ್ಯವನ್ನು ನಿರ್ವಹಿಸಲು ನಾವಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್, ರಾಷ್ಟ್ರಪತಿಗಳ ಒಪ್ಪಿಗೆಗೆ ಮಸೂದೆಗಳನ್ನು ಯಾವಾಗ ಕಾಯ್ದಿರಿಸಬಹುದು ಎಂಬುದಕ್ಕೆ ನ್ಯಾಯಾಲಯವು ನಿರ್ದೇಶನ ನೀಡುವ ಸಮಯ ಬಂದಿದೆ. ಮಸೂದೆಗಳನ್ನು ತಡೆಹಿಡಿದು ರಾಜ್ಯಪಾಲರು ಆಡಳಿತಕ್ಕೆ ಅಡ್ಡಪಡಿಸಲು ನಾವು ಅನುಮತಿಸುವುದಿಲ್ಲ ಎಂದಿದ್ದಾರೆ.
ರಾಜ್ಯಪಾಲರು ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಂಡಿರುವುದರಿಂದ ಪ್ರಕರಣವನ್ನು ವಿಲೇವಾರಿ ಮಾಡಲು ಆರಂಭದಲ್ಲಿ ನ್ಯಾಯಪೀಠ ಮುಂದಾಗಿತ್ತು. ಆದರೆ, ಈ ವಿಷಯದ ಕುರಿತು ಮಾರ್ಗಸೂಚಿಗಳನ್ನು ಸೂಚಿಸುವ ಸಲುವಾಗಿ ಪ್ರಕರಣವನ್ನು ಬಾಕಿ ಇರಿಸಲು ನಿರ್ಧರಿಸಿದೆ.
ಇದನ್ನೂ ಓದಿ: ವಿವಾದಾತ್ಮಕ ಪೋಸ್ಟ್: ರಾಜೀವ್ ಚಂದ್ರಶೇಖರ್ ವಿರುದ್ಧ ಬಲವಂತದ ಕ್ರಮ ಬೇಡ; ಹೈಕೋರ್ಟ್


