ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪದಲ್ಲಿ ಬಂಧಿತರಾಗಿದ್ದ ನವಲಖಾ ಮತ್ತು ತೇಲ್ತುಂಬ್ಡೆಯವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ವಿಸ್ತರಿಸಿದೆ. ಬಾಂಬೆ ಹೈಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಮತ್ತು ಆನಂದ್ ತೇಲ್ತುಂಬ್ಡೆಯವರಿಗೆ ಸುಪ್ರೀಂ ಕೋರ್ಟ್ ಬಂಧನದಿಂದ ರಕ್ಷಣೆಯನ್ನು ಮಾರ್ಚ್ 16 ರವರೆಗೆ ವಿಸ್ತರಿಸಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರ ನ್ಯಾಯಪೀಠವು ಮಾರ್ಚ್ 16 ರಂದು ನವಲಾಖಾ ಮತ್ತು ತೇಲ್ತುಂಬ್ಡೆ ಅವರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಆಲಿಸಲಿದೆ ಎಂದು ಹೇಳಿದೆ.
ಫೆಬ್ರವರಿ 14 ರಂದು ನವಲಖಾ ಮತ್ತು ತೇಲ್ತುಂಬ್ಡೆಯವರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುವು ಮಾಡಲು ಬೇಕಾಗಿ ನಾಲ್ಕು ವಾರಗಳ ಕಾಲ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತ್ತು. ಇವರ ಪರವಾಗಿ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಗ್ವಿ ಇಬ್ಬರಿಗೂ ಹೈಕೋರ್ಟ್ ನೀಡಿದ ರಕ್ಷಣೆ ಮಾರ್ಚ್ 14 ಕ್ಕೆ ಮುಕ್ತಾಯಗೊಳ್ಳಲಿದೆ ಮತ್ತು ಉನ್ನತ ನ್ಯಾಯಾಲಯ ಅದನ್ನು ವಿಸ್ತರಿಸಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ನವಲಖಾ, ತೆಲ್ತುಂಬ್ಡೆ ಮತ್ತು ಇತರ ಆರೋಪಿಗಳಾದ ಸುರೇಂದ್ರ ಗ್ಯಾಡ್ಲಿಂಗ್, ರೋನಾ ವಿಲ್ಸನ್, ಮತ್ತು ಸುಧಾ ಭಾರದ್ವಾಜ್ ಅವರು ಸಿಪಿಐ (ಮಾವೋವಾದಿ) ನಾಯಕರೊಂದಿಗೆ ಮತ್ತು ಕೇಂದ್ರ ಸಮಿತಿ ಸದಸ್ಯರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಹಾಗೂ ಅವರ ನಡುವೆ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ ಪತ್ರಗಳನ್ನು ನ್ಯಾಯಾಲಯವು ಗಮನಿಸಿದೆ.
ಜನವರಿ 1, 2018 ರಂದು ಪುಣೆ ಜಿಲ್ಲೆಯ ಕೋರೆಗಾಂವ್ ಭೀಮಾ ಗ್ರಾಮದಲ್ಲಿ ನಡೆದ ಹಿಂಸಾಚಾರದ ನಂತರ ನವಲಖಾ, ತೇಲ್ತುಂಬ್ಡೆ ಮತ್ತು ಇತರ ಹಲವಾರು ಕಾರ್ಯಕರ್ತರ ಮೇಲೆ ಮಾವೋವಾದಿ ಸಂಪರ್ಕ ಮತ್ತು ಇತರ ಹಲವಾರು ಆರೋಪಗಳ ಮೇಲೆ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.


