ಬಿಲ್ಕಿಸ್ ಬಾನು ಅತ್ಯಾಚಾರಿಗಳ ಶರಣಾಗತಿಗೆ ಸಮಯ ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಜನವರಿ 8ರಂದು ನೀಡಿದ ಆದೇಶದಂತೆ ಜೈಲಿಗೆ ಮರಳಲು ಸೂಚಿಸಿದೆ.
ಒಟ್ಟು 11 ಅಪರಾಧಿಗಳ ಪೈಕಿ ಮೂವರು ವೈಯುಕ್ತಿಕ ಕಾರಣಗಳನ್ನು ನೀಡಿ ಶರಣಾಗತಿಯ ಅವಧಿ ವಿಸ್ತರಿಸುವಂತೆ ಕೋರಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಎರಡು ವಾರಗಳಲ್ಲಿ ಜೈಲಿಗೆ ಮರಳುವಂತೆ ಜನವರಿ 8ರಂದು ನೀಡಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದೆ.
Supreme Court dismisses the applications filed by convicts in Bilkis Bano case seeking extension of time to surrender before jail authorities.
The time to surrender by the convicts is expiring on January 21. pic.twitter.com/9KbqgWIALu
— ANI (@ANI) January 19, 2024
ಒಟ್ಟು 11 ಅತ್ಯಾಚಾರಿಗಳ ಪೈಕಿ ಪ್ರಮುಖರಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನ್ ಮತ್ತು ಮಿತೇಶ್ ಚಿಮನ್ಲಾಲ್ ಭಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅತ್ಯಾಚಾರಿ ಗೋವಿಂದಭಾಯಿ ನಾಯ್ ತಮ್ಮ ಅನಾರೋಗ್ಯ ಮತ್ತು ಮನೆಯ ಜವಾಬ್ದಾರಿಗಳನ್ನು ಉಲ್ಲೇಖಿಸಿ ಸಮಯ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದ. “ನನ್ನ 88 ವರ್ಷದ ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಹೆತ್ತವರನ್ನು ನೋಡಿಕೊಳ್ಳಲು ನನ್ನನ್ನು ಬಿಟ್ಟು ಬೇರೆ ಯಾರು ಇಲ್ಲ”ಎಂದು ಆತ ತನ್ನ ಅರ್ಜಿಯಲ್ಲಿ ಹೇಳಿದ್ದ.
ಅಲ್ಲದೆ, ಇತ್ತೀಚೆಗೆ ಆಂಜಿಯೋಗ್ರಫಿಗೆ ಒಳಗಾಗಿದ್ದೇನೆ. ಮೂಲವ್ಯಾಧಿ ಚಿಕಿತ್ಸೆಗಾಗಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಳ್ಳಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ. 55 ವರ್ಷ ವಯಸ್ಸಿನವನಾದ ನಾನು ಆಸ್ತಮಾದಿಂದ ಬಳಲುತ್ತಿದ್ದು, ಆರೋಗ್ಯ ಮಟ್ಟ ನಿಜವಾಗಿಯೂ ಕಳಪೆಯಾಗಿದೆ ಎಂದು ಹೇಳಿಕೊಂಡಿದ್ದ.
ಮತ್ತೊಬ್ಬ ಅತ್ಯಾಚಾರಿ ರಮೇಶ್ ರೂಪಾಭಾಯ್ ಚಂದನ್, ತನ್ನ ಮಗನಿಗೆ ಮದುವೆಯಿದೆ, ಹಾಗಾಗಿ ಆರು ವಾರಗಳ ಕಾಲಾವಕಾಶ ನೀಡುವಂತೆ ಕೋರಿದ್ದ. ಇನ್ನೋರ್ವ ಅತ್ಯಾಚಾರಿ ಮಿತೇಶ್ ಚಿಮನ್ಲಾಲ್ ಭಟ್, ತನ್ನ ಚಳಿಗಾಲದ ಕೃಷಿ ಉತ್ಪನ್ನಗಳು ಕೊಯ್ಲಿಗೆ ಸಿದ್ಧವಾಗಿವೆ. ಅದರ ಪ್ರಕ್ರಿಯೆ ಪೂರ್ಣಗೊಳಿಸಲು ಆರು ವಾರಗಳ ಕಾಲವಕಾಶ ಕೋರಿದ್ದ. ಕೊಯ್ಲು ಕೆಲಸ ಮುಗಿದ ಬಳಿ ಶರಣಾಗುವುದಾಗಿ ತಿಳಿಸಿದ್ದ.
ಸುಪ್ರೀಂ ಕೋರ್ಟ್ ಆದೇಶದಂತೆ ಅಪರಾಧಿಗಳಿಗೆ ಶರಣಾಗಲು ಜನವರಿ 21 ಕೊನೆಯ ದಿನಾಂಕವಾಗಿದೆ. ಸುಪ್ರೀಂ ಕೋರ್ಟ್ ಸಮಯ ವಿಸ್ತರಿಸಲು ನಿರಾಕರಿಸಿರುವ ಹಿನ್ನೆಲೆ, ವಿಳಂಬ ಮಾಡದೆ ಎಲ್ಲಾ ಅಪರಾಧಿಗಳು ಜೈಲಿಗೆ ಮರಳಬೇಕಿದೆ.
ಒಟ್ಟು 11 ಮಂದಿ 2002ರ ಗುಜರಾತ್ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಕೊಲೆಯ ಅಪರಾಧಿಗಳಾಗಿದ್ದಾರೆ.
ಅಪರಾಧಿಗಳು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ, 2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರ ಸನ್ನಡೆಯ ನೆಪ ಹೇಳಿ ಬಿಡುಗಡೆ ಮಾಡಿತ್ತು. ಇದರ ವಿರುದ್ದ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಜನವರಿ 8, 2024ರಂದು ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಎರಡು ವಾರಗಳಲ್ಲಿ ಜೈಲಿಗೆ ಮರುಳುವಂತೆ ಅಪರಾಧಿಗಳಿಗೆ ಸೂಚಿಸಿದೆ.
ಇದನ್ನೂ ಓದಿ : ರಾಮಮಂದಿರ ಪ್ರಾಣಪ್ರತಿಷ್ಠಾನ: ಮೋದಿ, ಯೋಗಿಗೆ ನಿರ್ಬಂಧ ವಿಧಿಸುವಂತೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ


