ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಅರ್ಹ ಅಭ್ಯರ್ಥಿಗಳನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರವಿಡಲು ಉದ್ದೇಶಪೂರ್ವಕವಾಗಿ ‘ಅರ್ಹರಲ್ಲ’ ಎಂದು ಘೋಷಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಸದಸ್ಯರೊಂದಿಗೆ ಇತ್ತೀಚೆಗೆ ನಡೆಸಿದ ಸಂವಾದದ ವಿಡಿಯೋವನ್ನು ರಾಹುಲ್ ಗಾಂಧಿ ಮಂಗಳವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮೇಲಿನ ಹೇಳಿಕೆ ನೀಡಿರುವುದು ನೋಡಬಹುದು.
‘ಅರ್ಹರಲ್ಲ’ ಎಂಬುದು ಈಗ ಹೊಸ ಮನುವಾದ. ಎಸ್‌ಸಿ, ಎಸ್‌ಟಿ, ಒಬಿಸಿಯ ಅರ್ಹ ಅಭ್ಯರ್ಥಿಗಳನ್ನು ಉದ್ದೇಶಪೂರ್ವಕವಾಗಿ ‘ಅರ್ಹರಲ್ಲ’ ಎಂದು ಘೋಷಿಸಲಾಗುತ್ತಿದೆ. ಈ ಮೂಲಕ ಅವರನ್ನು ಶಿಕ್ಷಣ ಮತ್ತು ನಾಯಕತ್ವದಿಂದ ದೂರವಿಡಲಾಗುತ್ತಿದೆ” ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
‘ಮನುವಾದ’ ಎಂಬುದು ಮನುಸ್ಮೃತಿಯಿಂದ ಆಳಲ್ಪಡುವ ನೀತಿಯಾಗಿದೆ. ಶಿಕ್ಷಣವು ಸಮಾನತೆಗೆ ದೊಡ್ಡ ಅಸ್ತ್ರವಾಗಿದೆ ಎಂದು ಡಾ. ಬಿ.ಆರ್ ಅಂಬೇಡ್ಕರ್ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ಈ ಶಕ್ತಿಯನ್ನು ಬುಡಮೇಲು ಮಾಡುತ್ತಿವೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಮೋದಿ ಸರ್ಕಾರ ಈ ಅಸ್ತ್ರವನ್ನು ಮೊಂಡಾಗಿಸುವಲ್ಲಿ ನಿರತವಾಗಿದೆ” ಎಂದಿದ್ದಾರೆ.
‘Not Found Suitable’ अब नया मनुवाद है।
SC/ST/OBC के योग्य उम्मीदवारों को जानबूझकर ‘अयोग्य’ ठहराया जा रहा है – ताकि वे शिक्षा और नेतृत्व से दूर रहें।
बाबासाहेब ने कहा था: शिक्षा बराबरी के लिए सबसे बड़ा हथियार है। लेकिन मोदी सरकार उस हथियार को कुंद करने में जुटी है।
दिल्ली… pic.twitter.com/JfPe1xxQdm
— Rahul Gandhi (@RahulGandhi) May 27, 2025
‘ಅರ್ಹರಲ್ಲ’ (Not Found Suitable-NFS) ಎಂದು ಹೇಳಿಕೊಂಡು ದೆಹಲಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಮತ್ತು ಸಹಾಯಕ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ. 30ಕ್ಕಿಂತ ಹೆಚ್ಚು ಖಾಲಿ ಇಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಇದಕ್ಕೆ ಹೊರತಾಗಿಲ್ಲ. ಎಲ್ಲೆಡೆ ಒಂದೇ ರೀತಿಯ ಪಿತೂರಿ ನಡೆಯುತ್ತಿದೆ. ‘ಅರ್ಹರಲ್ಲ’ ಎಂಬುವುದು ಸಂವಿಧಾನದ ಮೇಲಿನ ದಾಳಿಯಾಗಿದೆ. ಸಾಮಾಜಿಕ ನ್ಯಾಯಕ್ಕೆ ಮಾಡುವ ದ್ರೋಹವಾಗಿದೆ ಎಂದಿದ್ದಾರೆ.
ಮೀಸಲಾತಿ ಪಡೆಯುವುದು ಹಕ್ಕು, ಗೌರವ ಮತ್ತು ಭಾಗವಹಿಸುವಿಕೆಗಾಗಿ ಹೋರಾಡುವ ವಿಷಯ ಎಂದಿರುವ ರಾಹುಲ್ ಗಾಂಧಿ, “ನಾನು ಡಿಯುಎಸ್‌ಯು ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆ. ನಾವೆಲ್ಲರೂ ಒಟ್ಟಾಗಿ ಬಿಜೆಪಿ/ಆರೆಸ್ಸೆಸ್‌ನ ಪ್ರತಿಯೊಂದು ಮೀಸಲಾತಿ ವಿರೋಧಿ ಕ್ರಮಕ್ಕೂ ಸಂವಿಧಾನದ ಶಕ್ತಿಯೊಂದಿಗೆ ಉತ್ತರಿಸುತ್ತೇವೆ” ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ‘ಹಿಂದುತ್ವ’ ಯೋಜನೆಯ ಅಡಿಪಾಯ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಇತಿಹಾಸವನ್ನು ಅಳಿಸುವುದು ಎಂದು ರಾಹುಲ್ ಗಾಂಧಿಯವರು ವಿದ್ಯಾರ್ಥಿಗಳಿಗೆ ಹೇಳುವುದನ್ನು ನೋಡಬಹುದು.
“ಶೇಕಡಾ 90ರಷ್ಟು ಜನರ ಇತಿಹಾಸ ನಮ್ಮ ಪುಸ್ತಕಗಳಲ್ಲಿ ಏಕಿಲ್ಲ? ಕೇವಲ 10ರಷ್ಟು ಜನರ ಇತಿಹಾಸ ಮಾತ್ರ ಏಕೆ ಇದೆ? ಉದಾಹರಣೆಗೆ: ನಮ್ಮ ಇತಿಹಾಸ ಪುಸ್ತಕಗಳಲ್ಲಿ 3,000 ವರ್ಷಗಳಿಂದ ದಲಿತರನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ, ಗೌರವಿಸಲಾಗಿಲ್ಲ, ನಮ್ಮ ಸಮಾಜದಲ್ಲಿ ಅವರಿಗೆ ಯಾವುದೇ ಸ್ಥಾನಮಾನ ನೀಡಲಾಗಿಲ್ಲ ಎಂದು ಏಕೆ ಬರೆದಿಲ್ಲ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಮೇ 22ರಂದು ದೆಹಲಿ ವಿಶ್ವ ವಿದ್ಯಾಲಯವು ತನ್ನ ಉತ್ತರ ಕ್ಯಾಂಪಸ್‌ಗೆ ರಾಹುಲ್ ಗಾಂಧಿಯವರ ಅಘೋಷಿತ ಭೇಟಿಯನ್ನು ಆಕ್ಷೇಪಿಸಿತ್ತು. ಇದು ಸಾಂಸ್ಥಿಕ ಶಿಷ್ಟಾಚಾರದ ಉಲ್ಲಂಘನೆ ಮತ್ತು ವಿದ್ಯಾರ್ಥಿ ಆಡಳಿತ ಕಾರ್ಯಾಚರಣೆಗಳಿಗೆ ಅಡ್ಡಿ ಎಂದಿತ್ತು.
ಈ ರೀತಿ ಯಾವುದೇ ಮುನ್ಸೂಚನೆ ನೀಡದೆ ರಾಹುಲ್ ಗಾಂಧಿ ಭೇಟಿ ನೀಡಿರುವುದು ಎರಡನೆ ಬಾರಿಯಾಗಿದೆ ಎಂದು ವಿವಿಯ ಪ್ರಾಕ್ಟರ್ ಕಚೇರಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು.
ರಾಹುಲ್ ಗಾಂಧಿಯವರು ವಿವಿಯ ಉತ್ತರ ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು.
ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಬೆಂಬಲಿತ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರ ಕಚೇರಿಯಲ್ಲಿ ರಾಹುಲ್ ಗಾಂಧಿ ಸಭೆ ನಡೆಸಿದ್ದರು.
ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೋ ಪ್ರಕರಣ: ದೆಹಲಿ ಪೊಲೀಸರಿಂದ ಮುಕ್ತಾಯ ವರದಿ; ಅಂಗೀಕರಿಸಿದ ಕೋರ್ಟ್


