ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ವಿದ್ಯಾರ್ಥಿನಿಯರಲ್ಲಿ ಶೌಚಾಲಯ ಶುಚಿಗೊಳಿಸಿದ ಆರೋಪದಲ್ಲಿ ತಿರುಪ್ಪೂರ್ ಜಿಲ್ಲೆಯ ಧಾರಾಪುರಂ ತಾಲ್ಲೂಕಿನ ಸರ್ಕಾರಿ ಮಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಅಮಾನತು ಮಾಡಲಾಗಿದೆ.
ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅರುಂತಥಿಯಾರ್ ಸಮುದಾಯದ ಇಬ್ಬರು ವಿದ್ಯಾರ್ಥಿನಿಯರಲ್ಲಿ ಮುಖ್ಯೋಪಾಧ್ಯಾಯಿನಿ ಇಳಮತಿ ಈಶ್ವರಿ ಅವರು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಹೇಳಿದ್ದರು. ಈ ಕುರಿತ ವಿಡಿಯೋ ವೈರಲ್ ಆಗಿದೆ. ಅಂಬೇಡ್ಕರ್ ಪಡಿಪ್ಪಗಂ(ಗ್ರಂಥಾಲಯ)ದ ಪಾಲಕರೊಬ್ಬರು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾದ ವೀಡಿಯೊದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಮುಖ್ಯ ಶಿಕ್ಷಕಿ ಇಳಮತಿ ಈಶ್ವರಿ ಇದೇ ತಿಂಗಳು ನಿವೃತ್ತಿಯಾಗಲಿದ್ದರು, ಅವರು ಕೂಡ ಪರಿಶಿಷ್ಟ ಜಾತಿಗೆ ಸೇರಿದ ಪೆರಿಯಾರ್ ಸಮುದಾಯಕ್ಕೆ ಸೇರಿದವರಾಗಿದ್ದರು. ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಶಿಕ್ಷಕಿ, ಬಾಹ್ಯ ವ್ಯಕ್ತಿಗಳು ತನ್ನ ವಿರುದ್ಧ ಆರೋಪ ಮಾಡಲು ಇಬ್ಬರು ಬಾಲಕಿಯರನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ಮುಖ್ಯ ಶಿಕ್ಷಕಿ ಇಳಮತಿ ಈಶ್ವರಿ ಅವರನ್ನು ಅಮಾನತುಗೊಳಿಸಿದೆ. ಆದರೆ ವಿದ್ಯಾರ್ಥಿಗಳ ಪೋಷಕರು ಮತ್ತು ಶಾಲೆಯ ಇತರ ಸಿಬ್ಬಂದಿಗಳು ಮುಖ್ಯೋಪಾಧ್ಯಾಯಿನಿಯ ಪರ ನಿಂತಿದ್ದಾರೆ ಎಂದು ಅಧಿಕಾರಿಗಳು ವಿಚಾರಣೆಯ ವೇಳೆ ತಿಳಿದುಕೊಂಡಿದ್ದಾರೆ. ಮುಖ್ಯೋಪಾಧ್ಯಾಯಿನಿಯನ್ನು ಗುರಿಯಾಗಿಸುವ ಪ್ರಯತ್ನದ ಭಾಗವಾಗಿ ಆರೋಪವನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿಗಳ ಪೋಷಕರು ಮತ್ತು ಇತರ ಸಿಬ್ಬಂದಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ಈ ಮೊದಲು ವಿದ್ಯಾರ್ಥಿಗಳ ಕೈಯ್ಯಲ್ಲಿ ಶೌಚಾಲಯ ಸ್ವಚ್ಛತೆ ಮಾಡಿಸಿರುವ ಘಟನೆ ಭಾರೀ ಸದ್ದು ಮಾಡಿದ್ದವು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಕುರಿತು ಪೋಟೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿಸಿದ ಪ್ರಕರಣ ನಡೆದಿತ್ತು. ಇದಾದ ಬಳಿಕ ರಾಜ್ಯ ಸರಕಾರ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.


