ಪ್ಪತ್ತನೆಯ ಶತಮಾನದ ಅದಿಭಾಗದಿಂದ ಹಿಡಿದು ಇತ್ತೀಚಿನವರೆಗೆ ವಿಶ್ವದಲ್ಲಿ ಸಾವಿರಾರು ಆವಿಷ್ಕಾರಗಳಾಗಿವೆ. ಇಂದು ಮಧ್ಯವಯಸ್ಸಿನಲ್ಲಿರುವವರು ಅದೃಷ್ಟಶಾಲಿಗಳೆಂದು ಹೇಳಬಹುದು!
ಚಿಮಣಿ ದೀಪಗಳಿದ್ದ ಮನೆಗಳಿಗೆ ವಿದ್ಯುತ್ ದೀಪಗಳು ಬಂದಿವೆ. ಟೆಂಟು ಬಂದರೆ ಮಾತ್ರ ನೋಡಲು ಸಾಧ್ಯವಾಗುತ್ತಿದ್ಧ ಸಿನಿಮಾ ಮನೆಯಲ್ಲೇ ಕುಳಿತು ನೋಡಬಹುದು. ಸಿನಿಮಾ, ಧಾರಾವಾಹಿಗಳೇ ಜೀವನ ಎಂದು ತಿಳಿದುಕೊಂಡವರೂ ನಮ್ಮ ನಡುವೆ ಇದ್ದಾರೆ.
ಸಂಪರ್ಕದ ಕೊಂಡಿಯಾಗಿದ್ದ ಅಂಚೆ ಇಂದು ಇತಿಹಾಸವಾಗುತ್ತಿದೆ. ಯಾರಾದರೂ ಸತ್ತರೆ ದೂರದ ಊರುಗಳಲ್ಲಿ ಇರುವ ಬಂಧುಗಳಿಗೆ “ಮದರ್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯೆಟ್ಲಿ” ಎಂದು ‘ವಯರ್’ ಕಳಿಸುತ್ತಿದ್ದ- ಅಂದರೆ ಟೆಲಿಗ್ರಾಂ ಕಳಿಸುತ್ತಿದ್ದ ಕಾಲದಿಂದ ವಯರ್ ಇಲ್ಲದೇ ಹೆಣದ ಫೋಟೊ ತೆಗೆದು ಲೈವಾಗಿ ಸಂಬಂಧಿಕರಿಗೆ ತಿಳಿಸುವ ಯುಗವನ್ನು ಮುಟ್ಟಿದ್ದೇವೆ! ಕಂಪ್ಯೂಟರ್ ಬಂದಿದೆ! ಕ್ಯಾಷ್‍ಲೆಸ್ ಆಗಿದ್ದೇವೆ! ವಿಜ್ಞಾನದ ಆವಿಷ್ಕಾರಗಳ ಫಲವನ್ನು ಉಣ್ಣುತ್ತಾ ಬಂದಿದ್ದೇವೆ. ಮೂಷಿಕ, ಗರುಡ, ಸಿಂಹ, ನಂದಿ ವಾಹನರಾಗಿದ್ದ ನಾವು- ಬೈಕ್, ಸ್ಕೂಟರ್, ಕಾರು, ಬಸ್ಸು, ರೈಲು ವಿಮಾನ ವಾಹನರಾಗಿದ್ದೇವೆ! ಚಪ್ಪಡೆ ಭೂಮಿಯನ್ನು ದುಂಡಗೆ ಮಾಡಿದ್ದೇವೆ! ಸಾಮೂಹಿಕ ವಿನಾಶದ ಅಸ್ತ್ರಗಳನ್ನು ದಾಸ್ತಾನು ಇಟ್ಟಿದ್ದೇವೆ! … ವಿಷಗಳನ್ನು, ವಿಷಯಗಳನ್ನು ಉತ್ಪಾದಿಸುತ್ತಿದ್ದೇವೆ!
ಬರೆಯುತ್ತಾ ಹೋದರೆ ಸಾವಿರಾರಿವೆ! ನಮ್ಮ ಸುತ್ತಲೂ ಬೇಕೆಂದೋ ಬೇಡವೆಂದೋ ರಾಶಿಬಿದ್ದಿರುವ ಸಲಕರಣೆಗಳು ತಂತ್ರಜ್ಞಾನಗಳನ್ನು ಒಮ್ಮೆ ನೋಡಿದರೆ, ಇದನ್ನು ಕಂಡುಹಿಡಿದವರ ನೆನಪಾದರೂ ನಮಗಿದೆಯೆ?
ಅದರೆ, ನಮಗೆ ಕೋಟ್ಯಾಂತರ ದೇವರು, ದೈವಗಳ, ಅಂತರ, ಬೆಂತರ, ಕುಲೆ, ಪಿಶಾಚಿಗಳ ನೆನಪಿದೆ! ಯಾಕೆಂದರೆ ನಮಗೆ ಭಯವಿದೆ! ಅದನ್ನೇ ನಾವು ನಂಬಿಕೆ ಎಂದು ಕರೆಯುತ್ತೇವೆ!
ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಸಾವಿರದ ಒಂದು, ಹನ್ನೊಂದು ಸಾವಿರದ ಒಂದು… ಹೀಗೆ ಜ್ಯೋತಿಷ್ಯ ಮತ್ತು ಪೂಜಾ ಕ್ಷೇತ್ರಗಳಲ್ಲಿ ಅವಿಷ್ಕಾರಗಳಾಗಿವೆ! ಹಿಂದೆ ಮನೆಯ ಒಂದು ಕೋಣೆಯೊಳಗಿನ ಅಥವಾ ಗೋಡೆಗಂಟಿದ ಹಲವಾರು ದೇವರುಗಳಿಗೆ ಊದುಬತ್ತಿ ಹಚ್ಚಿ, ಕೈಮುಗಿದು ಬೇಡಿಕೊಂಡರೆ ಸಾಕಿತ್ತು. ಹೆಚ್ಚು ಭಯವಾದರೆ ಮುಡಿಪು ಇಟ್ಟರೆ ಸಾಕಿತ್ತು! ಅದರೆ, ಈ ಕೋಮುವಾದಿ ವಿಷ ಧರ್ಮದಲ್ಲಿ ಇರಲಿಲ್ಲ! ಈಗ ಹೇಗೆ ಧರ್ಮವನ್ನು ಕೋಮುವಾದಿ ಬಿಸಿನೆಸ್ ಮಾಡುವಲ್ಲಿ ಎಷ್ಟೆಲ್ಲಾ ಅವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ನೀವೇ ನೋಡಬಹುದು.
ಮಗುವಿಗೆ ಹೆಸರು ಇಡುವುದರಿಂದ ಹಿಡಿದು, ಹುಟ್ಟಿದ ಜಾತಕ, ತಗಲಿಕೊಂಡಿರುವ ರೋಗಗಳು, ಪೂರ್ವಜಾತ ದೋಷಗಳು, ನಕ್ಷತ್ರಗಳು, ಅವುಗಳ ಫಲಗಳು, ಯಮಗಂಡ, ರಾಹುಗಂಡ, ಕೇತುಗಂಡ, ನಾಗದೋಷ, ಶನಿಪ್ರಭಾವ ಮತ್ತು ಶಾಪ, ಹಿರಿಯರ ಶಾಪ, ಅಶಾಂತಿ… ಮತ್ತದಕ್ಕೆ ಪರಿಹಾರಗಳು! ಎಲ್ಲವಕ್ಕೂ ಮಹಾ ಸಂಶೋಧನೆಗಳು ಅಗಿವೆ- ವಿಜ್ಞಾನವನ್ನು ನಾಚಿಸುವಷ್ಟು! ನೀವೇ ಯೋಚಿಸಿದರೆ ಲೆಕ್ಕ ಹಾಕಬಹುದು! ಆದರೂ ಮುಂದಕ್ಕೆ ಎಲ್ಲಾ ಸಂಶೋಧನೆಗಳನ್ನೂ ಸಂಶೋಧಕರನ್ನು ವಿವರವಾಗಿ ನೋಡಿ! ಸಂಶೋಧನೆಯ ವಿವರಗಳು ಅನಂತವಾಗಿವೆ!
ಇಂದು ಬೆಳಗಾಗುತ್ತ ಎದ್ದಾಗ ನಾವು ನೋಡುವುದೇನು?! ಟಿವಿ, ಇಂಟರ್ನೆಟ್! ವಿಜ್ಞಾನದ ಉತ್ಪತ್ತಿಗಳಲ್ಲಿ ರಾರಾಜಿಸುವುದೇನು ಬ್ರಹ್ಮಾಂಡ ಜ್ಯೋತಿಷ್ಯದ ಮಹಾನ್ ಆವಿಷ್ಕಾರಗಳು! ಆ ಮಹಾನ್ ಸಂಶೋಧನೆಗಳು!
ಮಗು ಹುಟ್ಟಿದಾಗ ಏನು ಮಾಡಬೇಕು? ಬಾಲ ಕರ್ಮಗಳೇನು? ಜಾತದೋಷಗಳೇನು? ಭವಿಷ್ಯ ಏನು? ಗಂಡಗಳೇನು? ದೋಷಗಳೇನು? ಪರಿಹಾರಗಳೇನು?
ಹಾವು ಸತ್ತರೆ ಏನು ಮಾಡಬೇಕು? ಎಷ್ಟು ಜನ ಬ್ರಾಹ್ಮಣರಿಗೆ ಊಟ ಹಾಕಬೇಕು? ಗೋದಾನ, ಭೂದಾನ, ಸುವರ್ಣ ದಾನ ಇತ್ಯಾದಿಗಳ ಪುಣ್ಯ ಫಲವೇನು? ಗೋವು, ಸುವರ್ಣ ಇಲ್ಲದಿದ್ದಲ್ಲಿ ಪರಿಹಾರವೇನು? ಇಂಟರ್‍ನೆಟ್‍ನಿಂದ ಹೇಗೆ ಪೂಜೆ ಮಾಡಿಸಬಹುದು? ಪ್ರಸಾದ ಪಡೆಯಬಹುದು? ಇವೆಲ್ಲವುಗಳ ಬಗ್ಗೆ ಸಾವಿರಾರು ಸಂಶೋಧನೆಗಳು ಲಭ್ಯವಿವೆ! ಪೇಟೆಂಟ್ ಮಾಡಿಕೊಂಡಿರುವ ವಿಜ್ಞಾನಿಗಳೂ ಲಭ್ಯವಿದ್ದಾರೆ! ಅವರನ್ನೆಲ್ಲಾ ಮುಂದಿನ ವಾರ ಭೇಟಿಯಾಗೋಣ!
– ನಿಖಿಲ್ ಕೋಲ್ಪೆ


