ರಷಿಯಾದ ಡಿಮಿಟ್ರಿ ಮೆಂಡಲೀವ್ ಅವರು ರೂಪಿಸಿಕೊಟ್ಟು ನೂರೈವತ್ತು ವರ್ಷಗಳ ಆಚರಣೆಯ ಸಮಯದಲ್ಲಿ ಈ ಪ್ರಯೋಗದಲ್ಲಿ ನೂರೈವತ್ತು ವಿದ್ಯಾರ್ಥಿಗಳು ಪಾಲುಗೊಂಡಿದ್ದು ಕಾಕತಾಳೀಯ. ಕನಿಷ್ಠ ನೂರು ಮಕ್ಕಳಾದರೂ ಭಾಗವಹಿಸಲಿ ಎಂದುಕೊಂಡದ್ದಕ್ಕೆ ಪ್ರತ್ಯುತ್ತರವಾಗಿ ನೂರೈವತ್ತು ಆಗಿದ್ದು ವಿಶೇಷವಾಗಿತ್ತು.
ನಾನು ಹತ್ತು ವರ್ಷದವನಾಗಿದ್ದಾಗಿನ ಘಟನೆಯೊಂದು ಸದಾ ಎಚ್ಚರದಲ್ಲಿರಿಸಿ ವಿಜ್ಞಾನದ ಪ್ರೀತಿಗೆ ಹಚ್ಚಿದೆ. ಐದನೆಯ ತರಗತಿಗೆ ಹೊಸದಾಗಿ ನೇಮಕವಾಗಿದ್ದ ವಿಜ್ಞಾನದ ಮೇಸ್ಟ್ರು, ಮೊದಲ ದಿನವೇ ಪಾಠಕ್ಕೂ ಮೊದಲು ಒಂದು ಪ್ರಯೋಗವನ್ನು ಮಾಡಿಸಿದ್ದರು. ಅವರು ತರಗತಿಯೊಳಗೆ ಬರುವಾಗ ಕೈಯಲ್ಲೊಂದು ಗಾಜಿನ ಬೀಕರನ್ನು ಹಿಡಿದುಕೊಂಡೇ ಬಂದಿದ್ದರು. ದಿನವೂ ಮೇಷ್ಟ್ರ ಕೈಯಲ್ಲಿ ಕೇವಲ ಪುಸ್ತಕ ಮತ್ತು ಸೀಮೆಸುಣ್ಣವನ್ನು ಮಾತ್ರವೇ ನೋಡಿದ್ದ ನಮಗೆ ಆ ನೋಟ ಹೊಸತು. ನಮ್ಮೆಲ್ಲರ ಪುಟ್ಟಪುಟ್ಟ ಕಣ್ಣುಗಳನ್ನು ಆದಷ್ಟೂ ಅಗಲವಾಗಿಸಿ ಬೆರಗಾಗಿ ನೋಡಿದ್ದ ನೆನಪು ಅಚ್ಚಳಿಯದೆ ಉಳಿದಿದೆ.
ಗಾಜಿನ ಬೀಕರನ್ನು ಮೇಜಿನ ಮೇಲಿಟ್ಟು, ಇಬ್ಬರು ಹುಡುಗರನ್ನು ಕಳುಹಿಸಿ ಶಾಲಾ ಕೈತೋಟದಲ್ಲಿ ಬೆಳೆದ ಕರ್ಣಕುಂಡಲ ಸಸ್ಯಗಳನ್ನು ತರಿಸಿದರು. ಸಸ್ಯಗಳು ನೀರನ್ನು ಬೇರಿನಿಂದಲೇ ಹೀರುತ್ತವೆ ಎಂಬುದನ್ನು ಪುಟ್ಟ ಮಕ್ಕಳಾದ ನಮಗೆ ಪ್ರಾಯೋಗಿಕವಾಗಿ ತೋರಿಸಲು ಆರಂಭಿಸಿದರು. ಗಾಜಿನ ಬೀಕರಿನಲ್ಲಿ ಮುಕ್ಕಾಲು ಭಾಗ ನೀರನ್ನು ತುಂಬಿ, ತಮ್ಮ ಜೇಬಿನಿಂದ ಪೆನ್ನನ್ನು ತೆಗೆದು ಅದರಲ್ಲಿನ ನಾಲ್ಕೈದು ಹನಿ ಕೆಂಪು ಇಂಕನ್ನು ನೀರಿಗೆ ಬೆರೆಸಿ ನೀರನ್ನು ಕೆಂಪಾಗಿಸಿದರು. ಹುಡುಗರಿಂದ ಕಿತ್ತು ತರಿಸಿದ್ದ ಎಳೆಯ ಕರ್ಣಕುಂಡಲ ಸಸ್ಯಗಳನ್ನು ಕೆಂಪಾದ ನೀರಿನಲ್ಲಿ ಬೇರುಗಳು ಮುಳುಗುವಂತೆ ಇಳಿಬಿಟ್ಟರು. ಸಸಿಗಳಿರುವ ಬೀಕರನ್ನು ಶಾಲಾ ಕೊಠಡಿಯಾಚೆ ಬಿಸಿಲಿನಲ್ಲಿ ಇರಿಸಿದರು. ಮುಂದೆ ಪಾಠವನ್ನು ಆರಂಭಿಸಿ ಅದರ ವಿವರಣೆಯನ್ನು ಮುಂದುವರೆಸಿದರು. ಎಳೆಯ ಕರ್ಣಕುಂಡಲ ಸಸ್ಯಗಳ ಕಾಂಡಗಳು ಬಿಳಿಯ ಬಣ್ಣದಾಗಿದ್ದು ಅರೆಪಾರದರ್ಶಕವಾಗಿರುತ್ತವೆ. ನೀರು ಹೀರಿದ್ದನ್ನು ಕಾಂಡಗಳ ಮೂಲಕ ಕಾಣಬಹುದು. ಅವರ ಪೀರಿಯಡ್ಡಿನ ಕೊನೆಯ ವೇಳೆಯಲ್ಲಿ ಬೀಕರನ್ನು ಒಳಗೆ ತಂದು ಸಸಿಗಳ ಕಾಂಡಗಳು ಕೆಂಪೇರಿರುವುದನ್ನು ತೋರಿಸಿದ್ದರು. ವಿಜ್ಞಾನ ಕಲಿಕೆಯ ಸರಳ ಪ್ರಾಯೋಗಿಕ ಅನುಭವ ಅದಾಗಿತ್ತು. ಇದೆಲ್ಲಾ ನಡೆದದ್ದು ಸುಮಾರು 40ಕ್ಕೂ ಹೆಚ್ಚು ವರ್ಷಗಳ ಹಿಂದೆ.
ನಂತರದ ನಾಲ್ಕು ದಶಕಗಳಲ್ಲಿ ವಿಜ್ಞಾನ ಊಹಿಸಲಾರದಷ್ಟು ಮುಂದೆ ಹೋಗಿದೆ. ತಿಳಿವಳಿಕೆಗಳೆಲ್ಲಾ ನಂಬಲಾರದಷ್ಟು ಬದಲಾಗಿವೆ. ಹಚ್ಚ ಹೊಸ ಒಳನೋಟಗಳನ್ನು ನೀಡಿವೆ. ಮಾನವ ಕುಲದ ಜೀವನವೂ ಸಹ ವಿಜ್ಞಾನದ ಲಾಭಗಳನ್ನು ಬಳಸುತ್ತಲೇ ಬೌದ್ಧಿಕವಾಗಿ ಸಾಕಷ್ಟು ಪ್ರಬುದ್ಧವಾಗಿಯೂ, ಲೌಕಿಕವಾಗಿ ಅನಂತ ಅನುಕೂಲಗಳನ್ನೂ ರೂಪಿಸಿಕೊಂಡಿದೆ. ಇಂದು ಜಗತ್ತು ಸಾಮಾನ್ಯ ತಿಳಿವಳಿಕೆಯಲ್ಲಿಯೂ ಏನಾದರೂ ತೊಂದರೆಗಳಿಗೆ ವಿಜ್ಞಾನವನ್ನು ಅವಲಂಬಿಸುವ ಅನಿವಾರ್ಯಗಳನ್ನು ಬಯಸುವಂತೆಯೂ ಆಗಿದೆ. ಇದರ ಸಾಧ್ಯತೆಗಳ ಬಗೆಗೇನೂ ಹೇಳದೆ ಒಟ್ಟಾರೆ ಅನುಕೂಲಗಳಿಂದ ಸಮಾಜವು ವಿಜ್ಞಾನವನ್ನು ಬಳಸುವಲ್ಲಿ ಕಾತರವಾಗಿದೆ. ಆ ಕಾರಣದಿಂದ ವಿಜ್ಞಾನದ ತಿಳಿವಳಿಕೆಯನ್ನು ಜಾಣತನದ ಭಾಗವಾಗಿಸುವಲ್ಲಿ ನಾವೆಷ್ಟು ಮುಂದೆ ಹೋಗಿದ್ದೇವೆ. ಅಂತಹ ಪ್ರಯತ್ನಗಳನ್ನು ಉದ್ದೇಶಪೂರ್ವಕವಾಗಿ ಆದರೂ ಮಾಡಿದ್ದೇವೆ ಎಂಬ ಆಲೋಚನೆಗಳನ್ನು ಮಾಡಿದರೆ ತೀರಾ ನೀರಸವಾದ ಸಂದರ್ಭವನ್ನು ಕಾಣುತ್ತೇವೆ. ಇದನ್ನು ಪ್ರಾಯೋಗಿಕವಾಗಿ ಅರಿಯುವ ಒಂದು ಪ್ರಯತ್ನದ ಅನುರಣನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದೇ ವಿಜ್ಞಾನವನ್ನು ನಮ್ಮದಾಗಿಸದ ಸಂಕಟವಾಗಿ ಕಾಡುತ್ತಿರುವ ನೋವೂ ಆಗಿದೆ. ಕೊನೆಯಲ್ಲಿ ಈ ನಮ್ಮದಾಗಿಸುವುದು ಅನ್ನುವ ವಿವೇಚನೆಯ ಸಣ್ಣ ಆಶಯವನ್ನೂ ಹೇಳಲಿದ್ದೇನೆ.
ಈ 2019ನೆಯ ವರ್ಷವು ರಸಾಯನವಿಜ್ಞಾನದ ಮಹತ್ವದ ಮೈಲುಗಲ್ಲಾದ ಇಡೀ ಬ್ರಹ್ಮಾಂಡದ ಸಂರಚನೆಯನ್ನು ಸಾಧ್ಯಮಾಡಿರುವ ಎಲ್ಲಾ ಮೂಲವಸ್ತುಗಳ ಆವರ್ತನೆಯ ವರ್ಗೀಕರಣದ ಮೂಲಪಟ್ಟಿಯ ಆವಿಷ್ಕಾರದ ನೂರೈವತ್ತನೆಯ ವರ್ಷ. ಇದನ್ನು ಈಗಾಗಲೇ ಇದೇ ಅಂಕಣದಲ್ಲಿ ಓದಿರುತ್ತೀರಿ. ಈ ರಸಾಯನಿಕ ಸಂಗತಿಗಳ ಮೂಲ ಸಂಕೇತಗಳ ವರ್ಗೀಕರಣ ಮತ್ತು ಒಟ್ಟೂ ವಿವರಗಳ ಪಟ್ಟಿಯಾದ್ದರಿಂದ ಒಂದರ್ಥದಲ್ಲಿ ಇದರ ತಿಳಿವಳಿಕೆಯು ಕನಿಷ್ಠ ಪಕ್ಷ ಭೂಮಿಯ ಮೇಲಿನ ಎಲ್ಲಾ ವಸ್ತು ಪ್ರಪಂಚದ ಸಂಬಂಧಗಳನ್ನು ಒದಗಿಸುವ ಮೂಲಸರಕು. ಹಾಗಾಗಿ ವಿಜ್ಞಾನವನ್ನೇ ಬೆನ್ನುಹತ್ತಿ ಜೀವನವನ್ನು ಕಟ್ಟಿಕೊಳ್ಳುವ ನಿರ್ಧಾರವನ್ನು ಕಲಿಕೆಯಾಗಿಸುವ ಮೊದಲ ಮೆಟ್ಟಿಲಾದ ಪ್ರಿಯೂನಿವರ್ಸಿಟಿ ವಿದ್ಯಾರ್ಥಿಗಳನ್ನು ಒಳಗೊಂಡು ಪ್ರಸ್ತುತ ಅಧ್ಯಯನವನ್ನು ಮಾಡಿದೆ. ಅದರ ವಿವರಗಳಿಂದ ಅನುಭವಕ್ಕೆ ಬಂದ ಸಂಕಟಗಳು ಇಲ್ಲಿವೆ. ಇವುಗಳೇನು ಹತ್ತಾರು ಮಕ್ಕಳನ್ನು ಕಂಡು ಮಾತನಾಡಿಸಿ ಹೆಕ್ಕಿದ ಸಂಗತಿಗಳಲ್ಲ. ನೂರೈವತ್ತು ವಿದ್ಯಾರ್ಥಿಗಳನ್ನು ಸಂಘಟಿಸಿ ನಿರ್ವಹಿಸಿದ ಪ್ರಯೋಗ.
ರಷಿಯಾದ ಡಿಮಿಟ್ರಿ ಮೆಂಡಲೀವ್ ಅವರು ರೂಪಿಸಿಕೊಟ್ಟು ನೂರೈವತ್ತು ವರ್ಷಗಳ ಆಚರಣೆಯ ಸಮಯದಲ್ಲಿ ಈ ಪ್ರಯೋಗದಲ್ಲಿ ನೂರೈವತ್ತು ವಿದ್ಯಾರ್ಥಿಗಳು ಪಾಲುಗೊಂಡಿದ್ದು ಕಾಕತಾಳೀಯ. ಕನಿಷ್ಠ ನೂರು ಮಕ್ಕಳಾದರೂ ಭಾಗವಹಿಸಲಿ ಎಂದುಕೊಂಡದ್ದಕ್ಕೆ ಪ್ರತ್ಯುತ್ತರವಾಗಿ ನೂರೈವತ್ತು ಆಗಿದ್ದು ವಿಶೇಷವಾಗಿತ್ತು. ಈ ನೂರೈವತ್ತು ಮಕ್ಕಳೂ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಪ್ರಥಮ ಪಿಯೂಸಿಯಲ್ಲಿದ್ದವರು. ಈಗಾಗಲೇ ಸರಿ ಸುಮಾರು ಆರು ತಿಂಗಳ ಕಲಿಕೆಯನ್ನು ಮುಗಿಸಿದ ಮಕ್ಕಳು. ಹಾಗಾಗಿ ವಿಜ್ಞಾನದ ಆಯ್ಕೆಯ ಕಾರಣಕ್ಕಾಗಿ ಅವರೆಲ್ಲ ಇತರೇ ವಿದ್ಯಾರ್ಥಿಗಳಿಗಿಂತ ಭಿನ್ನವಾದ ಆಸೆ, ಕನಸುಗಳನ್ನು ಹೊಂದಿದ್ದರು. ಅವರ ಆಯ್ಕೆ, ಅವರದ್ದೇ ಆಗಿರಬಹುದು ಅಥವಾ ಪೋಷಕರ ಆಸಕ್ತಿಯ ಜೊತೆಗೆ ಒತ್ತಾಯಗಳನ್ನೂ ಒಳಗೊಂಡಿರಬಹುದು. ಏಕೆಂದರೆ ವಿಜ್ಞಾನದ ಜನಪ್ರಿಯತೆಯು ಅದರ ಲಾಭಗಳಿಂದ ಮಾತ್ರವೇ ಪ್ರಿಯವಾಗಿರುವುದರಿಂದ ಆಸಕ್ತಿ ಮತ್ತು ಒತ್ತಾಯಗಳನ್ನು ಒರೆಹಚ್ಚಿ ನೋಡಬೇಕಾಗುತ್ತದೆ. ಇಷ್ಟಾದರೂ ವಿಜ್ಞಾನ ಕಲಿಕೆಯನ್ನು ಪಿಯೂಸಿಯಲ್ಲಿ ಈಗಾಗಲೇ ಆರು ತಿಂಗಳ ಕಾಲ ಮುಗಿಸಿ ಇನ್ನೇನು ವರ್ಷಾಂತ್ಯದ ಪರೀಕ್ಷೆಗಳತ್ತ ಆಲೋಚನೆಯಲ್ಲಿ ಇರುವುದರಿಂದ ಅವರ ಆಶಯ ಮತ್ತು ಗುರಿಗಳು ಮುಖ್ಯವಾಗಿರುತ್ತವೆ. ಜೊತೆಗೆ ವಿಜ್ಞಾನದ ಮಕ್ಕಳಿಗೂ ಇಂಜಿನಿಯರೋ ಅಥವಾ ಡಾಕ್ಟರೋ ಆಗುವ ಹಂಬಲವನ್ನು ವೈಯಕ್ತಿಕವಾಗಿ ಮತ್ತು ಪೋಷಕರ ಆಸೆಯಲ್ಲಿ ಹೊಂದಿರುವುದು ಸಹಜ. ಆದ್ದರಿಂದ ನೂರೈವತ್ತು ಮಕ್ಕಳು ನೂರೈವತ್ತು ಬಗೆಯ ಮನಸ್ಸುಗಳನ್ನು ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸಿ ಒಳ್ಳೆಯ ಅವಕಾಶವನ್ನು ಒದಗಿಸಿದ್ದರು.
ಇವರೆಲ್ಲರಿಗೂ ಮೆಂಡಲೀವ್ ಅವರ ಮೂಲವಸ್ತುಗಳ ಆಧಾರಿತಪಟ್ಟಿಯ ವಿಕಾಸದ ವಿವರಣೆಗಳನ್ನು ಪಾಠ ಮಾಡಿ ಕಡೆಯಲ್ಲಿ ಒಂದು ಓಪನ್ ಕ್ವಿಜ್, -ಅದೂ ಅವರ ಬಿಡುವಿನ ವೇಳೆಯಲ್ಲಿ ಪ್ರಶ್ನೆಪತ್ರಿಕೆಯನ್ನು ತೆರೆದ ಪುಸ್ತಕದ ಮಾದರಿಯಲ್ಲಿ ಉತ್ತರಿಸುವಂತೆ ನಡೆಸಲಾಗಿತ್ತು. ಆ ಮಕ್ಕಳೆಲ್ಲಾ ಕೇವಲ 40 ಪ್ರಶ್ನೆಗಳಿಗೆ ಆ ಪತ್ರಿಕೆಯಲ್ಲೇ ಕೊಟ್ಟ ಉತ್ತರಗಳನ್ನು ಆಯ್ದು ಬರೆಯಬೇಕಿತ್ತು. ಪರೀಕ್ಷೆಗಳೂ ಕಲಿಸಬೇಕು ಎನ್ನುವ ಆಶಯದಲ್ಲಿ ಉತ್ತರವನ್ನು ಬರೆಯಲೆಂದಾದರೂ ಪ್ರಶ್ನೆಯನ್ನು ಓದಿ, ಉತ್ತರಗಳನ್ನು ಹುಡುಕಿ ಬರೆದರೆ ಸಾಕು. ಪ್ರಶ್ನೆಗಳೂ ಸಹ ಅವರು ಹೈಸ್ಕೂಲಿನಿಂದ ಕಲಿತ ಹಾಗೂ ಅದಕ್ಕಾಗಿ ನಡೆಸಲಾದ ಪಾಠಗಳಲ್ಲಿ ಚರ್ಚಿಸಿದ ಸಂಗತಿಗಳೇ ಆಗಿದ್ದವು. ಕೆಲವಕ್ಕೆ ಹಲವು ಉತ್ತರಗಳಿರುವ, ಕೆಲವು ಉತ್ತರಗಳು ಒಂದೇ ಆಗಿರುವಂತಹ ಉಪಾಯಗಳನ್ನು ಮಾತ್ರ ಸಣ್ಣ ಜಾಣತನವನ್ನು ಬಳಸಿ ಆಯೋಜಿಸಿತ್ತು. ರಸಾಯನಿಕ ಮೂಲವಸ್ತುಗಳ ತೀರಾ ಪ್ರಾಥಮಿಕ ಸಂಗತಿಗಳು ಯಾವುದೇ ವಿಜ್ಞಾನದ ವಿದ್ಯಾರ್ಥಿಯು ತಿಳಿದುಕೊಳ್ಳಲೇಬೇಕಾದ ಪ್ರಶ್ನೋತ್ತರಗಳವು. ರಸಾಯನಿಕ ಸಂಗತಿಗಳ ಜಾಗರೂಕತೆ ಏಕೆಂದರೆ ಇಡೀ ವಿಜ್ಞಾನವನ್ನು ಅರ್ಥಪೂರ್ಣವಾಗಿ ಸಂಬಂಧಗಳ ನಿರ್ಮಿಸುವ ಸೂತ್ರಗಳು ಅಡಗಿರುವುದೇ ಮೂಲವಸ್ತುಗಳ ಪ್ರಾಥಮಿಕ ಸಂಗತಿಗಳಲ್ಲಿ. ಹಾಗಾಗಿ ಅವುಗಳನ್ನು ವಿವರಿಸಿ ಜಾಗರೂಕವಾಗಿ ಒಪ್ಪಮಾಡಿ ವರ್ಗೀಕರಿಸಿದ್ದ ಮೆಂಡಲೀವ್ ಅವರಿಗೆ ಒಂದು ಗೌರವ ಸಮರ್ಪಣೆಯ ಹಿತದಲ್ಲಿ ಈ ಪ್ರಯೋಗ ನಡೆಸಲಾಗಿತ್ತು.
ಪ್ರಶ್ನೆಗಳೇನು? ಉತ್ತರಗಳಾವುವು? ಇವನ್ನೆಲ್ಲಾ ಬದಿಗಿಟ್ಟು ನೂರೈವತ್ತು ಮನಸ್ಸುಗಳ ಪ್ರಾತಿನಿಧಿಕತೆಯನ್ನು ವಿಶ್ಲೇಷಿಸಿದಾಗ ತೀರಾ ಆಘಾತಕಾರಿ ಸಂಗತಿಗಳು ಎದುರಾದವು. ಅರ್ಧಕಿಂತ ಹೆಚ್ಚು ಮಕ್ಕಳಿಗೆ ವಿಜ್ಞಾನದ ಕನಸುಗಳೇ ಇರಲಿಲ್ಲ. ತೀರಾ ಪ್ರಾಥಮಿಕ ಸಂಗತಿಗಳ ಬೆರಗಿನ ತಿಳಿವಳಿಕೆಯೇ ಅವರದ್ದಾಗಿರಲಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿಯೇ ಇದ್ದ ಉತ್ತರಗಳನ್ನೂ ನೋಡಿ ಬರೆಯುವ ಪ್ರೀತಿಯಲ್ಲೂ ಕೊರತೆಯು ಕಾಣುತ್ತಿತ್ತು. ಮನೆಗೆ ಪ್ರಶ್ನೆಪತ್ರಿಕೆಗಳನ್ನು ತೆಗೆದುಕೊಂಡು ಹೋಗಿ ನಾಲ್ಕು ದಿನಗಳಲ್ಲಿ 40 ಪ್ರಶ್ನೆಗಳನ್ನು ಆಯ್ದು ತುಂಬುವ ಉತ್ಸಾಹದಲ್ಲೂ ಕೊರತೆಯಿತ್ತು. ಒಂದು ಮಗುವಾದರೂ 40ಕ್ಕೆ 40 ಪ್ರಶ್ನೆಗಳಿಗೆ ಸರಿ ಉತ್ತರ ಹುಡುಕಿರಲಿಲ್ಲ. ಅವರುಗಳಿಗೆ ಅದೇ ವಿಜ್ಞಾನವನ್ನು ಕಲಿಸುವ ಶಿಕ್ಷಕರು ಎಲ್ಲರೂ ಗೂಗಲ್ನಲ್ಲಿ ಹುಡುಕಿ 100 ಪ್ರತಿಶತ ಉತ್ತರಿಸುತ್ತಾರೆಂಬ ಜಿಜ್ಞಾಸೆಯಲ್ಲಿ ಇದ್ದರು. ಒಂದು ಮಗುವೂ ಅವರ ನಿರೀಕ್ಷೆಗೆ ಬರದಿದ್ದುದು ತೀರಾ ವಿಷಾದನಿಯ. ಕಾಲುಭಾಗ ಮಕ್ಕಳು ತಮ್ಮದೇ ತಿಳಿವಳಿಕೆಯಲ್ಲಿ ಒಂದಷ್ಟು ಪ್ರೀತಿ ಉತ್ಸಾಹ ತೋರಿದ್ದರೂ ಸಹ ಅವರದ್ದೇ ಸ್ವಾತಂತ್ರ್ಯಕ್ಕೆ ಬಿಟ್ಟ ಕಾರಣಕ್ಕೆ ಅವರೂ ಕನಿಷ್ಠ ನಾಲ್ಕರಿಂದ ಎಂಟು ತಪ್ಪುಗಳನ್ನು ಮಾಡಿದ್ದರು. ಅಂದರೆ ಪ್ರತಿಶತ 75 – 90 ಮಾತ್ರ ಸರಿ ಉತ್ತರಗಳು. ಇವರಲ್ಲಿ 90 ಪ್ರತಿಶತ ಗಳಿಕೆಯವರು ನಾಲ್ಕಾರು ಮಾತ್ರ! ಪರೀಕ್ಷೆಯನ್ನು ನಡೆಸಿದ ಮಾದರಿಗೆ ಕನಿಷ್ಟ ಅರ್ಧದಷ್ಟು ಮಕ್ಕಳಾದರೂ 90ರಷ್ಟು ಸರಿ ಉತ್ತರಗಳನ್ನು ಬರೆಯಬೇಕಿತ್ತು.
ಇದೆಲ್ಲಾ ಇರಲಿ. ಈಗ ನೋಡೋಣ. ತೀರಾ ಸರಳವಾದ ಪ್ರಾಥಮಿಕ ಸಂಗತಿಗಳೂ ನಮ್ಮದಾಗಿಸದ ವಿಜ್ಞಾನ ಕಲಿಕೆಯು ನಮ್ಮದಾಗಿರುವ ಸಂಕಟವನ್ನು ನನ್ನ ಮುಂದಿಟ್ಟ ಮಕ್ಕಳನ್ನು ಪಾಲ್ಗೊಂಡ ಕಾರಣಕ್ಕಾಗಿ ಅಭಿನಂದಿಸೋಣ. ಆದರೆ ಅವರ ಪ್ರಾಥಮಿಕ ತಿಳಿವಳಿಕೆಗಳು ವಿಜ್ಞಾನದ ಆಶಯಗಳನ್ನು ಒಳಗೊಂಡಿರದ ಬಗೆಗೆ ಹೇಗೆ ವಿವರಿಸುವುದು. ಇವರಲ್ಲಿ ಪ್ರತಿಶತ ಹತ್ತರಿಂದ ಹದಿನೈದು ಮಕ್ಕಳಾದರೂ ಇಂಜನಿಯರೋ ಡಾಕ್ಟರೋ ಆಗುತ್ತಾರೆ. ಇಲ್ಲವೆ ಅರ್ಧದಷ್ಟಾದರೂ ವಿಜ್ಞಾನವನ್ನು ಮುಂದುವರೆಸುತ್ತಾರೆ. ಇವರೆಲ್ಲರಿಗೂ ವಿಜ್ಞಾನವು ಪರಕೀಯವಾಗಿದೆಯಾ ಅನ್ನುವ ಅನುಮಾನ ಬರುತ್ತದೆ. ಹೌದು ನಾವು ವಿಜ್ಞಾನವನ್ನು ಅರ್ಥಪೂರ್ಣ ಸಂಬಂಧಗಳ ಮೂಲಕ ಕಲಿಸುತ್ತಲೇ ಇಲ್ಲ. ನೋಡಿ ಬೆರಗಾಗಿ ನಮ್ಮದಾಗಿಸುವ ಬಗೆಯನ್ನು ಅನುಶೋಧಿಸುವ ಕುರಿತು ಆಲೋಚಿಸಿಯೇ ಇಲ್ಲ. ರಾಮಾಯಣ-ಮಹಾಭಾರತದ ಕಥನಗಳನ್ನು ನಾವು ಮರೆಯುತ್ತೇಯೇ? ಮತ್ತೆ ಮತ್ತೆ ಅವುಗಳನ್ನು ಪುನರಾವರ್ತಿಸಿ ಅನುರಣಿಸುವುದಿಲ್ಲವೇ? ಹಾಗಿದ್ದಾಗ ವಿಜ್ಞಾನವು ಇನ್ನೂ ಇಂತಹ ಮಾದರಿ ಕಲಿಕೆಗಳನ್ನು ಅನುಸರಿಸಬಹುದಲ್ಲವೇ? ಮಕ್ಕಳಂತೂ ದಿನವೂ ಕನಸುಗಳನ್ನು ಮನೆಯಲ್ಲಿ, ಶಾಲೆಯಲ್ಲಿ ಹರಹುತ್ತಾರೆ. ಅವುಗಳ ಮೇಲೆ ಕಾಲಿಡುವ ಪೋಷಕರೂ ಮತ್ತು ಶಿಕ್ಷಕರೂ ಜಾಗರೂಕರಾಗಿ ಪಾದಗಳನ್ನಿಡಬೇಕಿದೆ.


