ಮಧ್ಯಪ್ರದೇಶದ ಶಾಸಕ ಸಮಂದರ್ ಪಟೇಲ್ ಅವರು ಬಿಜೆಪಿ ತೊರೆದು ಅದ್ದೂರಿಯಾಗಿ ಕಾಂಗ್ರೆಸ್‌ಗೆ ಮರಳಿ ಸೇರ್ಪಡೆಯಾಗಿದ್ದಾರೆ.
ಶಾಸಕ ಸಮಂದರ್ ಪಟೇಲ್ ಅವರು ಶುಕ್ರವಾರ ತಮ್ಮ ಕ್ಷೇತ್ರ ಜಾವಾದ್‌ನಿಂದ ಭೋಪಾಲ್‌ಗೆ 1,200 ಕಾರುಗಳ ಬೆಂಗಾವಲು ಪಡೆಯೊಂದಿಗೆ ಬಿಜೆಪಿ ಕಚೇರಿಗೆ ತೆರಳಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ರಾಜೀನಾಮೆ ವೇಳೆ ಶಾಸಕ ಸಮಂದರ್ ಪಟೇಲ್ ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿದ್ದಾರೆ. 2020ರಲ್ಲಿ ಸಿಂಧಿಯಾ ಅವರ ಜೊತೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಪಟೇಲ್, ಸಿಂದಿಯಾ ಅವರ ಬಲಗೈ ಬಂಟ ಎಂದು ಹೇಳಲಾಗಿತ್ತು.
2020ರಲ್ಲಿ ಕಮಲಾನಾಥ್ ಸರಕಾರ ಪತನಗೊಳಿಸಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರು ಇದೀಗ ಮರಳಿ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ.ಕಳೆದ ಮೂರು ತಿಂಗಳಲ್ಲಿ ಮೂವರು ಶಾಸಕರು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ಜೂನ್ 14 ರಂದು ಶಿವಪುರಿ ಬಿಜೆಪಿ ನಾಯಕ ಬೈಜನಾಥ್ ಸಿಂಗ್ ಯಾದವ್ ಅವರು ಸಿಂಧಿಯಾ ಅವರೊಂದಿಗೆ ಸಂಬಂಧವನ್ನು ಕಡಿತಗೊಳಿಸಿ ಕಾಂಗ್ರೆಸ್ ಸೇರುವಾಗ 700 ಕಾರುಗಳ ಮೂಲಕ ರ್ಯಾಲಿಯಲ್ಲಿ ತೆರಳಿದ್ದರು.
ನಾನು ಸಿಂಧಿಯಾ ಅವರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೆ. ಆದರೆ ಕೆಲವೇ ದಿನಗಳಲ್ಲಿ ನನಗೆ ಬಿಜೆಪಿಯೊಳಗೆ ಉಸಿರುಗಟ್ಟಿದಂತಾಯಿತು. ಅವರು ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನಿಸಲಿಲ್ಲ ಮತ್ತು ಗೌರವ ಮತ್ತು ಅಧಿಕಾರದ ಸ್ಥಾನವನ್ನು ನೀಡಲಿಲ್ಲ ಎಂದು ಹೇಳಿದ್ದಾರೆ.
ಸಣ್ಣಪುಟ್ಟ ಜಗಳಕ್ಕೆ ನನ್ನ ಬೆಂಬಲಿಗರ ಮೇಲೆ ಅನೇಕ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಆಗ ನಾನು ಬಿಜೆಪಿ ಬಿಟ್ಟು ಹೊರಡಲು ನಿರ್ಧರಿಸಿದೆ ಎಂದು ಪಟೇಲ್ ಹೇಳಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶ: ಮುಸ್ಲಿಂ ದಂಪತಿಯನ್ನು ಹೊಡೆದು ಕೊಲೆ ಮಾಡಿದ ಗುಂಪು


