ದೆಹಲಿ ಮೆಟ್ರೋ ಸೇರಿದಂತೆ ದೇಶದಾದ್ಯಂತದ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಗೆ ಮೊದಲ ಮಹಿಳಾ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ನೀನಾ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಿಐಎಸ್ಎಫ್‌ನ ವಿಶೇಷ ಡಿಜಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಜಸ್ಥಾನ ಕೇಡರ್, 1989 ಬ್ಯಾಚ್ ಐಪಿಎಸ್ ಅಧಿಕಾರಿ ನೀನಾ ಸಿಂಗ್, ಕೇಂದ್ರೀಯ ಪಡೆಯಲ್ಲಿ ಡೈರೆಕ್ಟರ್ ಜನರಲ್ ಹುದ್ದೆಗೆ ಏರಿದ ಮೊದಲ ಮಹಿಳೆಯಾಗಿದ್ದಾರೆ. ಅವರು 2021 ರಿಂದ ಸಿಐಎಸ್ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ವರ್ಷ ಜುಲೈ 31 ರಂದು ನಿವೃತ್ತರಾಗುವವರೆಗೆ ತಮ್ಮ ಅಧಿಕಾರ ಚಲಾಯಿಸಲಿದ್ದಾರೆ.
ಬಿಹಾರ ಮೂಲದ ನೀನಾ ಸಿಂಗ್ ಅವರು ಪಾಟ್ನಾ ಮಹಿಳಾ ಕಾಲೇಜು ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಓದಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ.
ರಾಜಸ್ಥಾನದಲ್ಲಿ ಉನ್ನತ ಪೊಲೀಸ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿದ್ದು, ರಾಜ್ಯ ಪೊಲೀಸ್ ಪಡೆಯಲ್ಲಿ ಆರು ಹಿರಿಯ ಅಧಿಕಾರಿಗಳು ಮಹಾ ನಿರ್ದೇಶಕರ ಶ್ರೇಣಿಯಲ್ಲಿದ್ದಾರೆ.
Smt Nina Singh, IPS (RJ: 89) assumed the charge of DG #CISF engraving a historic milestone as the first woman to helm this esteemed position. Her visionary leadership will usher this multi-skilled and multi -dimensional force to greater heights.@PMOIndia@HMOIndia pic.twitter.com/gQVfoYo0So
— CISF (@CISFHQrs) December 29, 2023
2000ರಲ್ಲಿ ಅವರು ರಾಜಸ್ಥಾನ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದರು. ಆಯೋಗದ ಸದಸ್ಯರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಬೇಕು ಎಂಬ ಕಾರಣಕ್ಕೆ ನೇರವಾಗಿ ಜಿಲ್ಲಾ ಕೇಂದ್ರಗಳಿಗೆ ತೆರಳುವ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು.
ಅವರು ನೊಬೆಲ್ ಪ್ರಶಸ್ತಿ ವಿಜೇತರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಫ್ಲೋ ಅವರೊಂದಿಗೆ ಸೇರಿ ಎರಡು ಸಂಶೋಧನಾ ಪ್ರಬಂಧಗಳಿಗೆ ಸಹ-ಲೇಖಕರಾಗಿ ಕೆಲಸ ಮಾಡಿದ್ದಾರೆ. 2013-2018ರ ಅವಧಿಯಲ್ಲಿ ಅವರು ಸಿಬಿಐನ ಜಂಟಿ ನಿರ್ದೇಶಕರಾಗಿದ್ದಾಗ, ಶೀನಾ ಬೋರಾ ಹತ್ಯೆ ಪ್ರಕರಣ ಮತ್ತು ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದಂತಹ ಹೈ ಪ್ರೊಫೈಲ್ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ. 2020 ರಲ್ಲಿ ಅವರು ವೃತ್ತಿಪರ ಶ್ರೇಷ್ಠತೆಗಾಗಿ ‘ಅತಿ ಉತ್ಕೃಷ್ಟ ಸೇವಾ ಪದಕ’ವನ್ನು ಪಡೆದಿದ್ದಾರೆ.
ಅವರ ಪತಿ ರೋಹಿತ್ ಕುಮಾರ್ ಸಿಂಗ್ ಅವರು ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿದ್ದು (ಐಎಎಸ್), ಪ್ರಸ್ತುತ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸಿಐಎಸ್ಎಫ್ ದೆಹಲಿ ಮೆಟ್ರೋ, ನಾಗರಿಕ ವಿಮಾನ ನಿಲ್ದಾಣಗಳು ಮತ್ತು ಏರೋಸ್ಪೇಸ್, ನ್ಯೂಕ್ಲಿಯರ್ ಘಟಕಗಳಂತಹ ಅತಿಸೂಕ್ಷ್ಮ ಸಂಸ್ಥೆಗಳಿಗೆ ಭದ್ರತೆ ಒದಗಿಸುತ್ತಿದೆ. 1.76 ಲಕ್ಷ ಬಲಶಾಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ಹೊಂದಿದೆ.
ಇದನ್ನೂ ಓದಿ; ಗಣರಾಜ್ಯೋತ್ಸವದಂದು ದೇಶದ 500 ಜಿಲ್ಲೆಗಳಲ್ಲಿ ರೈತರಿಂದ ಟ್ರ್ಯಾಕ್ಟರ್ ಪರೇಡ್


